X

ಬೆಳದಿಂಗಳೂಟ ಮಾಡೋಣ ಬಾ!

ಮುಂಜಾನೆ ಕೋಳಿ ಕೂಗುವ ಹೊತ್ತು.  ಪರಿಕಲ್ಪನೆಯ ಹೊತ್ತೊಳಗೆ ಉದಯಿಸುವ ಸೂರ್ಯನ ಹೊಂಗಿರಣಗಳ ತಳುಕು.  ಕಾಂಚಾನದ ಆಮಿಷದ ಆಸೆ ಇಲ್ಲದೆ ತನ್ನಷ್ಟಕ್ಕೇ ತಾನು ದಿನದ ನಡಿಗೆಯ ಮುಂದುವರೆಸುವ ಕಲಿಯುಗದ ಮಹಾ ಪುರುಷ ಇವನೊಬ್ಬನೆ ಇರಬೇಕು.  ಇರಬೇಕೇನು ಇವನೊಬ್ಬನೆ.  ಎಲ್ಲರ ಮನೆಯ ಹೆಬ್ಬಾಗಿಲಿನ ತೋರಣಕೆ ನೇವರಿಸುವನು ತನ್ನೊಳಗಿನ ಪ್ರಭೆಯ ಬೀರಿ.  ತಾರತಮ್ಯ ಇಲ್ಲ.   ಇವನಿಗೆ ಕಾಫೀ ಕಾಯಿಸಿಕೊಡಬೇಕೆನ್ನುವ  ಶರತ್ತು ಮೊದಲೇ ಇಲ್ಲ.  ಎಲ್ಲರ ಮನೆಯ ಸರ್ವಾಂತರ್ಯಾಮಿ.  ಅದು ಕನಕನ ಕಿಂಡಿಯೇ ಆಗಲಿ ತೆರೆದ ಬಾಗಿಲ ತೋರಣದೊಳಗಿನ ಶೃಂಗಾರ ಸೂಸುವ ಆಗಮಕಾಯವೇ ಆಗಲಿ, ಎಲ್ಲೆಂದರಲ್ಲಿ ಜಗಮಗಿಸುವ ಕಿರಣಗಳು ಹೊಂಬಾಳೆಯ ಸಿಗಿದ ಸಂದಿಯನ್ನೂ ಬಿಡದಪ್ಪುವ ಬೆಳ್ಳನೆಯ ಭಾವವುಕ್ಕಿ ಹರಿಸುವನು ಇದ ಕಂಡವರ ಮನದಲ್ಲಿ!

ಜಗಕೆಲ್ಲ ಜಗದೊಡೆಯ ದಿನವೂ ನೀ ಏಳಲೇ ಬೇಕಲ್ಲ,  ನಿದ್ದೆಯ ಮಂಪರು ಹೊಡೆದಟ್ಟಿ ಉಷಾ ಕಾಲವೇ ನಿನಗೆ ಏಳಲು ಕಟ್ಟಿಟ್ಟ ಬುತ್ತಿ. ಯಾರು ಕಾನೂನು ಮಾಡಿದರು ನಿನಗಿದೊಂದು ಕಾಲ?  ಸ್ವಲ್ಪ ಹೊತ್ತು ಮಲಗುವ ಆಸೆ ಚಿಗುರುವುದಿಲ್ಲವೇ ಒಂದೇ ಒಂದು ದಿನ?  ಆಗಲಿ ಮಲಗು ಪರವಾಗಿಲ್ಲ ಯಾವಾಗಲಾದರೂ ನಿನಗೂ ಸುಸ್ತು, ಸಂಕಟ ಆಗುವುದಲ್ಲವೆ?  ಈಗೇನು ನಿನಗೂ ವಾರಕ್ಕೆ ಒಂದು ದಿನ ರಜೆ ಕೊಡಿಸಬೇಕೆ?  ಇಂದ್ರನ ಒಡ್ಡೋಲಗ ನಡೆಯುತ್ತಿದೆಯೋ ಇಲ್ಲವೊ.  ಹೋಗಲಿ ನೀನೆ ಹೋಗಿ ನೋಡು.  ಕಲಿಯುಗದಲ್ಲಿ ಅಷ್ಟು ದೂರ ಬರುವ ಧಮ್ಮು ಯಾರಿಗೂ ಇಲ್ಲ.  ಪಾಪ ನೀನು.  ನನಗೆಷ್ಟು ಸಂಕಟವಾಗುವುದು ಗೊತ್ತಾ?  ಮನುಜರ ಮಜಾ ಮಾಡುವ ಗಮ್ಮತ್ತು ರಜೆ ರಜೆ, ನಿನಗೆ ಮಾತ್ರ ಸಜೆ.  ಯಾರು ಹಾಕಿಬಿಟ್ಟರು ನಿನಗೀ ಬಂಧನದ ಸಂಕೋಲೆ?  ಹೋಗಲಿ ನೀನೇನು ಮಹಾ ಶೂರ.  ಅದಕೆ ಯಾರಿಗೂ ಹತ್ತಿರ ಬರೋದಕ್ಕೂ ಬಿಡದೆ ಒಂಟಿಯಾಗಿ ದೂರ ಬಹುದೂರ ಹೋಗಿ ಇದ್ದದ್ದು.  ನಿನ್ನ ಸುಡುವ ಶಾಖಕ್ಕೆ ಯಾರೂ ಕನಸಲ್ಲೂ ಕೂಡ ಬಯಸುವುದಿಲ್ಲ ನಿನ್ನ ಹತ್ತಿರ ಹರಟೆ ಹೊಡೆಯೋಕೆ.  ಅದಕೆ ನೀನೇ ಸಂಕೋಲೆ ಬಿಡಿಸಿಕೊಂಡು ತಂಪಾಗಿ ಬಾ ಒಮ್ಮೆ.  ನಾ ನಿನ್ನೊಂದಿಗೆ ಕಜ್ಜಾಯದಡಿಗೆ ಮಾಡಿ ಬೆಳದಿಂಗಳ ಊಟ ಮಾಡಬೇಕು.  ಹಾಗೆ ನನ್ನಂತೆ ಕೆಲವರಾದರೂ ಕಾದಿರಬಹುದು.  ಇಲ್ಲ ಎಂದು ಹೇಳಲೇ ಬೇಡ.  ಏಕೆಂದರೆ ಈ ಭೂಮಿಗೆ ಬರುವ ಅಪರೂಪದ ಅತಿಥಿ ನೀನು.  ನಾವೇನು ಇಲ್ಲೇ ಇರು ಎಂದು ಎಂದೂ ಹೇಳೋದೇ ಇಲ್ಲ‌   ಏಕೆಂದರೆ ನಾವೆಲ್ಲ ಬಲು ಸ್ವಾರ್ಥಿಗಳು.  ನೀನು ಬೇಜಾರು ಮಾಡಿಕೊಳ್ಳಬೇಡ.  ಯಾಕೆಂದರೆ ಇಲ್ಲಿಯ ಜನರೆ ಹಾಗೆ.  ನೀ ಉಂಡು ತೇಗುವುದರಲ್ಲೆ ಯೋಚಿಸುವರು ನೀನಲ್ಲವೆ ಬೆಳಗಾಗಿಸುವವನು.  ಕತ್ತಲೆಯ ಸಾಮ್ರಾಜ್ಯ ನೆನಪಿಸುವುದು ಬೇಗ ಕಳಿಸು ಮನೆಗೆ.

ನಿನಗಿದೆಲ್ಲ ಮೊದಲೆ ಗೊತ್ತೇನೊ ಅನಿಸುತ್ತದೆ ಒಮ್ಮೊಮ್ಮೆ.  ಅದಕೆ ಮಿರಿ ಮಿರಿ ಕೆಂಡವಾಗುವೆ  ಸಿಟ್ಟು ಬಂದವರ ಮುಖದ ತರ ಉಫ್ ಎಂದು.  ಯಾಕೆ ನಮ್ಮಂತೆ ಇರುವುದಕ್ಕೆ ಆಗುವುದಿಲ್ಲ ಅಂತನ? ಆಗಲೂ ನೀ ಚಂದಾನೇ! ಕವಿಯ ಮನದೊಳಗೆಲ್ಲ ವರ್ಣನೆಯ ಹೊತ್ತಿಗೆ ಉರಿಸಿ ಒಬ್ಬೊಬ್ಬರಿಗೂ ಒಂದೊಂದು ಪ್ರಶಸ್ತಿ ಕೊಡಿಸುವೆ ಬರೆದ ಕೈಗಳಿಗೆ‌.  ಏನಿದು ನಿನ್ನ ಚಮತ್ಕಾರ?

ನಾನಂತೂ ನೀ ಎದ್ದಾಗಲಿಂದ ನಾನೂ ಎದ್ದು ನಿನ್ನೊಂದಿಗೆ ಹೆಜ್ಜೆ ಇಡುವ ಪ್ರಯತ್ನ ಮಾಡುತ್ತೇನೆ.  ಅದ್ಯಾವ ಮಾಯದಲ್ಲಿ ನೆತ್ತಿಮೇಲೆ ಬಂದುಬಿಡುತ್ತೀಯಾ; ಹೂ ಅರಳೋದೂ ಗೊತ್ತಾಗೋಲ್ಲ ಹಾಗೆ ನೀನೂ ಕೂಡ‌‌‌

ನನ್ನಜ್ಜಿ ಹೇಳುತ್ತಿದ್ದರು ನಿನ್ನ ಚಲನವಲನದಲ್ಲೇ ಗಂಟೆ ಕೂಡಾ ತಿಳಿಯಬಹುದಂತೆ.  ಆಗಿನ ಕಾಲ ಹಾಗಿತ್ತಂತೆ.  ಈಗಂತು ಯಾರು ನಿನ್ನ ನೋಡೋದಿಲ್ಲ. ಎಲ್ಲರ ಕೈನಲ್ಲು ಧಿಮಾಕಿನ ಮೊಬೈಲು.  ನಿನಗೆ ಬೇಜಾರಾಗುತ್ತೇನೊ,ನಿನ್ನ ಕಡೆ ನೋಡೋದಿಲ್ಲ ಅಂತ.  ಹಾಗೇನಿಲ್ಲ ಈಗಲೂ ಇದ್ದಾರೆ, ಕೂಲಿ ನಾಲಿ ಮಾಡವಾಗ ನಿನ್ನ ಕಡೆ ನೋಡುವವರು.

ಬಾ ಸೂರ್ಯ ನಿನ್ನೊಡನೆ ನಾವೆಲ್ಲ ಗೆಳತಿಯರು ಹರಟೆ ಹೊಡೆದು, ಅಕ್ಕಪಕ್ಕದವರೆಲ್ಲ ಸೇರಿ ರುಚಿ ರುಚಿಯಾದ ಅಡಿಗೆ ಮಾಡಿ ಬಡಿಸಬೇಕು.   ಬೆಳದಿಂಗಳ ಊಟ ಮಾಡಿ ಚಂದ್ರನಿಗೂ ಆಸೆ ಹುಟ್ಟಿಸೋಣ ಬಾ.

ಹಾ! ಯೋಗಮಂದಿರದವರೆಲ್ಲರೂ ಆಹ್ವಾನಿಸುತ್ತೇನೆ.  ಅವರೆಲ್ಲರೂ ಅಣಿಯಾಗಿಹರು ನಿನ್ನ ಆಹ್ವಾನಕ್ಕೆ ನೂರೆಂಟು ಸೂರ್ಯ ನಮಸ್ಕಾರ ಹಾಕಲು.

ಇನ್ಯಾಕೆ ತಡ ಬಂದುಬಿಡು‌.

-ಸಂಗೀತಾ ಹೆಗಡೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post