X

ದಾಯಾದಿ ಕಲಹಕ್ಕೆ ದೇಶಾಂತರ ತಿರುಗಿದರೆ ಪ್ರಯೋಜನವೇನು?

1996ರ ಮೇ ಹದಿನಾರನೆಯ ಗುರುವಾರ ದೆಹಲಿಯ ಪಾಲಿಗೆ ಸುಮ್ಮನೆ ಒಲಿದು ಬರಲಿಲ್ಲ ಎಂದು ಇಡೀ ದೇಶಕ್ಕೇ ಗೊತ್ತಿತ್ತು. ದಶಕಗಳ  ಕಾಲ ಹುದುಗಿಟ್ಟ ಸಂತಸ ಕಾರ್ಯಕರ್ತರಲ್ಲಿ ಆ ದಿನ ಗಂಗೋತ್ರಿಯಂತೆ  ಭೋರ್ಗರೆಯುತ್ತಿತ್ತು. ಅಂದು ಬರೇ ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿ ಪಟ್ಟವನ್ನೇರಲಿಲ್ಲ. ಬದಲಾಗಿ ಅನೇಕ ವರ್ಷಗಳಿಂದ ಕಾದು ಕುಳಿತು, ರಾತ್ರಿ ಹಗಲನ್ನು ಒಂದು ಮಾಡಿ ದಣಿದಿದ್ದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ತಾನೇ ಪ್ರಧಾನಿಯಾದಂತೆ ಸಂಭ್ರಮಿಸುತ್ತಿದ್ದ. ಅವನಿಗೆ ವ್ಯಕ್ತಿ ಗೆದ್ದ ಖುಷಿಯಿರಲಿಲ್ಲ. ವಿಚಾರ, ತತ್ವಗಳು ಗೆದ್ದ ರೋಮಾಂಚನವಿತ್ತು. ವರ್ಷಾನುಗಟ್ಟಲೆ ನಡೆದ ದೂರ್ತ ರಾಜಕಾರಣವನ್ನು ನೋಡಿ ರೋಸಿ ಹೋಗಿದ್ದ ಜನರಲ್ಲಿ ಹೊಸ ನಿರೀಕ್ಷೆ ಟಿಸಿಲೊಡೆಯುತ್ತಲಿತ್ತು. ಸ್ವಾರ್ಥ, ಅಪನಂಭಿಕೆ, ಕಪಟತನಗಳನ್ನು ತುಂಬಿಕೊಂಡ ಕೆಸರಿನಿಂದಲೇ ಕಮಲವನ್ನು ತಲೆಯೆತ್ತಿ ನಿಲ್ಲುವಂತೆ ಮಾಡುತ್ತೇನೆಂಬುದಾಗಿಜನರಿಗೆ ಭಾಷೆಯಿತ್ತಿದ್ದ ಅಟಲ್‍ಜೀಗೆ ಜನ ಭೂಮ್ಯಾಕಾಶ ಒಂದಾಗುವಂತೆ ಜಯಘೋಷ ಹಾಕುತ್ತಲೇ ಇದ್ದರು. ಹಾರತುರಾಯಿಗಳ ಸಮ್ಮುಖದಲ್ಲೇ  ಪ್ರಮಾಣ ವಚನವೂ ಜರುಗುತ್ತಿತ್ತು. ಇಷ್ಟೆಲ್ಲ ಸಂಭ್ರಮಗಳ ಮದ್ಯೆ ವಾಜಪೇಯಿ ಮಾತ್ರ ತುಸು ಖಿನ್ನರಾಗೇ ಕುಳಿತಿದ್ದರು. ಅವರನ್ನು ಕಾಡುತ್ತಿದ್ದುದು ಒಂದೇ ಸಂಗತಿ. ಭಾರತೀಯ ಜನತಾ ಪಾರ್ಟಿಯ ಅಷ್ಟೂ ಹೆಜ್ಜೆಗಳನ್ನು  ಹಾದಿ ಮಾಡಿ  ಹೂಂಕರಿಸುತ್ತಿದ್ದ ಲಾಲ್ ಕೃಷ್ಣ ಅಡ್ವಾಣಿ ಸಂಪುಟ ಸೇರದೆ ಗಣ್ಯರ ಸಾಲಲ್ಲಷ್ಟೇ ಕುಳಿತುಕೊಂಡಿದ್ದು!! ಕಾರ್ಯಕ್ರಮ ಮುಗಿದ ತರುವಾಯವೂ ಅಟಲ್‍ಜೀ ಬಹುತೇಕರ ಬಳಿ ಈ ಸಂಗತಿ ಹೇಳುವಾಗ ಗದ್ಗದಿತರಾಗುತ್ತಿದ್ದರು. ಆದರೆ ಅಡ್ವಾಣಿ ಮಾತ್ರ ಬಂಡೆಯಂತೆ ಅಚಲವಾಗಿಯೇ ಉಳಿದರು. ಹವಾಲ ಹಗರಣದಿಂದ ಮುಕ್ತವಾಗುವವರೆಗೆ ಸಂಸತ್ತಿಗೆ ಕಾಲಿಡಲಾರೆನೆಂಬ ಶಪಥಗೈದೇ ಆ ಸಮಾರಂಭದಲ್ಲಿ ಆನಂದ ಭಾಷ್ಪ ತುಂಬಿಕೊಂಡ ಮಹಾನುಭಾವ ಅಡ್ವಾಣಿ.

ಭಾಜಪಾ, ಹಾಗೆ ನೋಡಿದರೆ ನಾಯಕ-ಕಾರ್ಯಕರ್ತರ ನಡುವೆ ಕಂದಕ ಸೃಷ್ಟಿಸಿಕೊಂಡ ಪಾರ್ಟಿಯೇ ಅಲ್ಲ. ಅಧಿಕಾರ ಹೋದರೂ ಚಿಂತೆಯಿಲ್ಲ ಅಪನಂಬಿಕೆ, ಸ್ವಾರ್ಥ, ಹಗೆತನಗಳನ್ನು ಹತ್ತಿರ ಸೇರಿಸುವುದಿಲ್ಲ ಎನ್ನುವ ಮೇಲ್ಪಂಕ್ತಿಯೇ ಅಟಲ್ ಅಡ್ವಾಣಿಯವರನ್ನು ಔನತ್ಯಕೇರಿಸಿದುದು.  ಒಂದು ದಿನ ಭೇದವೆನಿಸಲಿಲ್ಲ. ಮನಸ್ಸು ಮುರಿದುಕೊಂಡು ಅನ್ಯ ರ್ಯಾಲಿ ಮಾಡಲಿಲ್ಲ. ವಿದೇಶಕ್ಕೆ ಹಾರಿದಾಗ ಮಸಲತ್ತು ಮಾಡಿ ಗುಂಪು ಕಟ್ಟಿಕೊಳ್ಳಲಿಲ್ಲ. ಜಾತಿ, ಕುಲ ಎಂದು ವಟಗುಟ್ಟಿ ತಿರುಗಿದವರಲ್ಲ, ಅಲ್ಲಿ ಹೋಗಬಾರದು ಇಲ್ಲಿ ಮಾತನಾಡಬಾರದೆಂದು ಗಂಟುಮೋರೆ ಹಾಕಿಕೊಂಡು ಲಘುವಾಗಿ ಬಾಯಿಗೆ ಬಂದಂತೆ ನುಡಿಯಲಿಲ್ಲ. ಹಾಲಿನಲ್ಲಿ ಕರಗುವ ಸಕ್ಕರೆಯಂತೆ ಒಂದಾಗಿ  ಬೀಗಿದವರು ಅಟಲ್-ಅಡ್ವಾಣಿ. ಧ್ಯೇಯದ ದೀಪ ಹೊತ್ತು ಎರಡು ದೇಹ ಒಂದು ಜೀವವಾಗಿ ದೇಶವನ್ನೇ ಸುತ್ತಿದ ಅಪ್ರತಿಮ ಗೆಳೆತನವೊಂದು ಭಾರತದ ರಾಜಕಾರಣದಲ್ಲಿ ಇದ್ದರೆ ಅದು ಅಟಲ್ ಅಡ್ವಾಣಿಯದ್ದು ಮಾತ್ರ. ಮಹಾರಾಷ್ಟ್ರದ ಪತ್ರಿಕೆಯೊಂದು ಬರೆದಿತ್ತು. ಈ ಬಾರಿ ದೇಶದ ಪ್ರಧಾನಿ ಸಿಂದ್ ಭಾಗದವರಾಗುತ್ತಾರೆ ಎಂಬುದಾಗಿ, ಅಡ್ವಾಣಿ ಮಸಾಲೆ ಅರೆಯಬಹುದಿತ್ತು ಆದರೆ ರಾಜಕಾರಣದಲ್ಲಿದ್ದರೂ ಅವರು ಆ ಕೆಲಸ ಮಾಡಲಿಲ್ಲ. ದೇಶ ಮುನ್ನಡೆಸುವ ಛಾತಿ ಅಟಲ್‍ಗೆ ಮಾತ್ರ ಎಂದು ಹೇಳಿ ಎಲ್ಲರನ್ನೂ ತೆಪ್ಪಗಿರುವಂತೆ ಮಾಡಿದರು.

ಎಂತಹಾ ವ್ಯತ್ಯಾಸ. ಇದೇ ದಿಗ್ಗಜರ ಕಾಲದಲ್ಲಿ ಕಣ್ಣು ಬಿಡುತ್ತಿದ್ದ ಕರ್ನಾಟಕದ ನಾಯಕರಿಬ್ಬರೀಗ ಉತ್ತರ ದ್ರುವ ದಕ್ಷಿಣದ್ರುವ ಎಂಬಂತೆ ಕತ್ತಿ ಮಸೆಯುತ್ತಿದ್ದಾರೆ. ಜನಪರ ಹೋರಾಟಗಳೆಲ್ಲ ಎಂದೋ ಹಳ್ಳ ಹಿಡಿದಿವೆ. ತತ್ವ ಸಿದ್ದಾಂತಗಳನ್ನೆಲ್ಲ ಕಂಡ ಕಂಡಲ್ಲಿ ಒಗೆಯಲಾಗಿದೆ. ಯಡಿಯೂರಪ್ಪನವರೂ ಶಿವಮೊಗ್ಗ ಜಿಲ್ಲೆಯವರು, ಈಶ್ವರಪ್ಪನವರೂ ಇದೇ ಭಾಗದವರು. ಇಬ್ಬರ ಧ್ಯೇಯಗಳೂ ಒಂದೇ ಆಗಿತ್ತು, ಆದರೆ ವಿಚಿತ್ರವೆಂದರೆ ತಮ್ಮಲ್ಲಿಯೇ ಇರುವ ಸಾಮಾನ್ಯ ಸಮಸ್ಯೆಯೊಂದನ್ನು ಬಗೆಹರಿಸಲಾಗದವರೀಗ ರಾಜ್ಯ ಸುತ್ತುತ್ತ ಪರಸ್ಪರ ದೋಷಾರೋಪಣೆಯಲ್ಲಿ ಹಗೆತನ ಸಾಧಿಸುವ ಸಲುವಾಗಿ ಮಸಲತ್ತು ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಮನದೊಳಗಿನ ಕಿಚ್ಚು ಮನೆಯ ಸುಡುವುದಲ್ಲದೆ ನೆರೆಮನೆಯ ಸುಡದುಎನ್ನುವ ಸತ್ಯ ಇನ್ನೂ ಇವರಿಗೆ ತಲೆಗೆ ಹೋದಂತಿಲ್ಲ.

ಹೋಗಿ ಹೋಗಿ ಈ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಅನ್ನುವ ಸಂಘಟನೆಯನ್ನು ಪ್ರವರ್ಧಮಾನಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ನಾಡ ರಕ್ಷಣೆಗೆ ತನ್ನ ಜೀವವನ್ನೇ ಮುಡಿಪಿಟ್ಟ ಸಮರ ಸೇನಾನಿಯ ಹೆಸರಿನಲ್ಲಿ ಜಾತೀಯ ಗದ್ದಲ ಎಬ್ಬಿಸುವುದು ಅಕ್ಷಮ್ಯವಲ್ಲದೆ ಮತ್ತೇನು? ಸ್ವಾತಂತ್ರ್ಯ ಹೋರಾಟಗಾರನಿಗೆ ಜಾತಿ ಕುಲ ಗೋತ್ರಗಳ ಪಟ್ಟ ಏತಕ್ಕೆ ಉಪ್ಪು ಹಾಕಿಕೊಂಡು ನೆಕ್ಕುವುದಕ್ಕಾ? ಹಿಂದುಳಿದವರ ಸಂಘಟನೆಗೆ ಹೀಗೊಂದು ಬೃಹನ್ನಾಟಕ ಮಾಡಿದರೆ ನಾಡು ಹೇಗಾದರೂ ಸಹಿಸಲು ಸಾಧ್ಯ. ಭಾಜಪಾ ಜನ್ಮ ತಾಳುವ ಮುನ್ನ ಜನತಾ ಪಕ್ಷಕ್ಕೂ ಸಿದ್ದಾಂತಗಳಿತ್ತು. ಜಯಪ್ರಕಾಶ ನಾರಾಯಣರ ಆದರ್ಶಗಳಿತ್ತು. ಆದರೆ ಚರಣ್‍ಸಿಂಗ್ , ರಾಜ್‍ನಾರಾಯಣ್, ಅವನ್ನೆಲ್ಲ ಹಳ್ಳಹಿಡಿಸಿ ರಾಜಕೀಯ ಡೊಂಬರಾಟದಲ್ಲೇ ಮುಳುಗೆದ್ದರು. ಇನ್ನೊಂದೆಡೆ ಕಾಂಗ್ರೆಸ್, ಇಂದಿರಾ ಕಾಂಗ್ರೆಸ್ ಪಕ್ಷಗಳು ತೋಚಿದಂತೆ ಯಾರ್ಯಾರನ್ನೋ ಗದ್ದುಗೆಗೇರಿಸಿ ರಾತೋರಾತ್ರಿ ಕೆಡವುತ್ತಿದ್ದವು. ಇದೆಲ್ಲದರಿಂದ ರೋಸಿ ಹೋಗಿಯೇ ವಾಜಪೇಯಿ ಅಡ್ವಾಣಿ, ಜೋಷಿಯವರಂತ ದಿಗ್ಗಜರು ಭಾಜಪಾದ ರಚನೆಗೆ ಮುಂದಾದರು. ಹಿರಿಯರ ಪಾಠಗಳನ್ನೆಲ್ಲ ಈ ಮಹೋದಯರು ಗಂಟುಮೂಟೆ ಕಟ್ಟಿ ಅಟ್ಟಕ್ಕೇ ಎಸೆದಿದ್ದಾರೆ. ಇತಿಹಾಸ ಅರಿಯದವ ಇತಿಹಾಸವನ್ನು ನಿರ್ಮಿಸುವ ಉಸಾಬರಿಗೆ ಯಾಕೆ ಇಳಿಯಬೇಕು. ಎಂತಹಾ ಪಕ್ಷಕ್ಕೆ ಎಂತಹಾ ಮುಖಂಡರು ನೆನೆಸಿಕೊಂಡರೆ ಅಯ್ಯೋ ಎನಿಸುತ್ತದೆ.

ವಾಜಪೇಯಿಯವರ ಊಂಚಾಯಿ ಕವನವೊಂದು ಹೀಗಿದೆ.

ಓ ನನ್ನ ಒಡೆಯನೇ

ಪರರನ್ನು ಆಲಂಗಿಸಲಾಗದ

ಎತ್ತರಕ್ಕೆ ನನ್ನ ಏರಿಸದಿರು

ಒರಟುತನದಿಂದ ಮುಕ್ತನನ್ನಾಗಿ ಮಾಡು

ಆ ಕವಿ ಹೃದಯದ ರಾಜಕಾರಣಿ ಆದರ್ಶಗಳನ್ನೇ ಉಸಿರಾಗಿಸಿ ಪಕ್ಷ ಕಟ್ಟಿದರು. ಇಂದು ಪರರನ್ನು ಆಲಂಗಿಸುವುದಿರಲಿ ಕರ್ನಾಟಕದಲ್ಲಿ ಯಡಿಯೂರಪ್ಪ, ಈಶ್ವರಪ್ಪ, ಅನಂತ್‍ಕುಮಾರ್, ಅಶೋಕ್, ಶೆಟ್ಟರ್, ಸದಾನಂದಗೌಡರು ಒಟ್ಟಿಗೆ ಕುಳಿತು ಮಾತನಾಡಿದರೆ ಸಾಕೆನ್ನುವಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಎತ್ತೆತ್ತರಕ್ಕೆ ಎಲ್ಲರಿಗೂ ಏರಬೇಕೆನ್ನುವ ವಾಂಛೆ ಮೇರೆ ಮೀರಿದೆ. ಕಾರ್ಯಕರ್ತರ ಬಗೆಗೆ ಇವರಾರಿಗೂ ಲಕ್ಷ್ಯಗಳೇ ಇಲ್ಲ. ಜನಪರ ಹೋರಾಟಗಳನ್ನೆಲ್ಲ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಆ ಮಹಾನ್ ಸಂಘಟಕ ಒರಟುತನದಿಂದ ನನ್ನನ್ನು ಮುಕ್ತನನ್ನಾಗಿ ಮಾಡೆಂದರೆ ಇವರೆಲ್ಲ ಹೀನಾಮಾನವಾಗಿ ಬೀದಿಯಲ್ಲಿ ಬಯ್ದುಕೊಂಡು ತಿರುಗಾಡುತ್ತಿದ್ದಾರೆ. ಮೈಕು ಸಿಕ್ಕರೆ ಭಾನು ಭುವಿ ಒಂದು ಮಾಡುವವರು ಇನ್ನೂ ಮನಸ್ಸುಗಳನ್ನು ಒಂದು ಮಾಡಿಕೊಂಡು ಕೆಲಸ ಮಾಡುವುದನ್ನೇ ಕಲಿತಿಲ್ಲ. ಒಬ್ಬೊಬ್ಬರದ್ದು ಒಂದೊಂದು ಪಟಾಲಮ್ಮು. ಒಬ್ಬೊಬ್ಬರದ್ದು ಒಂದೊಂದು ವರಸೆ. ಇವರ ಕಲಹದ ಕ್ಷೋಭೆಗೆ ಕಮಲ ಪಾಳಯವೇ ಬೇಸತ್ತು ಕುಳಿತಿದೆ.

ಅಟಲ್‍ಜೀ ದೇಶದ ಇತಿಹಾಸ ಕಂಡ ಬಹುದೊಡ್ಡ ರಾಜಕೀಯ ಮುತ್ಸದ್ದಿ. ಕಾಶ್ಮೀರದ ನಾಯಕರ ಸಹಬಾಳ್ವೆ, ಪಾಕಿಸ್ತಾನದೆಡೆಗಿನ ಸ್ನೇಹಹಸ್ತ ಅವರನ್ನು ವಿಶ್ವಮಾನ್ಯ ಮಾಡಿದವು. ಅಷ್ಟೇ ಏಕೆ ಬಂಗಾಳದ ಮಮತಾ, ಬಿಹಾರದ ನಿತೀಶ್, ತಮಿಳುನಾಡಿನ ನಾಯಕಮಣಿಗಳನ್ನೆಲ್ಲ ಸೇರಿಸಿಕೊಂಡು ಅವರು ಸರಕಾರ ನಡೆಸಿದರು. ಆಡಳಿತ ನಡೆಸುವಾಗಲೆಲ್ಲ ತತ್ವ ವಿಚಾರಗಳ ತುದಿ ಮೊದಲು ಗೊತ್ತಿಲ್ಲದ ಪ್ರಾದೇಶಿಕ ಪಕ್ಷಗಳ ವಿಶ್ವಾಸ ಹೇರಳವಾಗಿಯೇ ಸಂಪಾದಿಸಿದರು, ಅವರು ಬಾಜಪಾದಿಂದ ಹೊರತಾದ ವರ್ಚಸ್ವೀ ನಾಯಕರಾಗಬಹುದಿತ್ತು. ಅಡ್ವಾಣಿಯವರನ್ನು ಪಕ್ಕಕ್ಕೆ ಸರಿಸಿ ಒಳಗಿಂದೊಳಗೆ ಕತ್ತಿ ಮಸೆಯಬಹುದಾಗಿತ್ತು ಆದರೆ ಗೆಳೆತನಕ್ಕೆ ಗಟ್ಟಿತನಕ್ಕೆ ಅರ್ಥಕೊಟ್ಟು ನೈತಿಕತೆಗೆ ನಿರೂಪಣೆ ಬರೆದವರು ಅವರು. ಅಂತಹದ್ದನ್ನು ಇವರೆಲ್ಲ ಯೋಚನೆ ಕೂಡ ಮಾಡಲಾರರು. ಅದು ಆ ಮುತ್ಸದ್ದಿಯ ಹೆಗ್ಗಳಿಕೆ. ಆ ಮಾದರಿಗಳೆಲ್ಲ ಕರ್ನಾಟಕದವರಿಗೆ ಯಾರಿಗೂ ಬೇಡವೆಂದರೆ ಅಸ್ತಿತ್ವಕ್ಕೆ ಇರುವ ಬೆಲೆಯಾದರೂ ಏನು? ದ್ವೇಷಗಳನ್ನೇ ಮೈತುಂಬ ತುಂಬಿಕೊಂಡಿರುವವರು ಯಾವ ಎತ್ತರಕ್ಕಾದರೂ ಹೇಗೆ ತಾನೇ ಏರಿಯಾರು?

ಮಹದಾಯಿ ಹೋರಾಟವನ್ನು ನಿರ್ವಹಿಸುವ ಛಾತಿಗಳೇ ಇವರಿಗೆ ಗೊತ್ತಿಲ್ಲ. ದೇಶ ವಿರೋಧಿ ಘೋಷಣೆ ಪ್ರಶ್ನೆ ಎದುರಾದಾಗ ವಿಧ್ಯಾರ್ಥಿ ಪರಿಷತ್ ತೋರಿದ ಗಡಸುತನ ಇವರಿಗಿನ್ನೂ ಮನವರಿಕೆ ಆದಂತಿಲ್ಲ. ಕಲ್ಲಪ್ಪ ಹಂಡೀಭಾಗ್, ಗಣಪತಿ ಪ್ರಕರಣ, ಡಿ.ಕೆ ರವಿ ಅವಹೇಳನ, ಬಂಡೆ ಪ್ರಕರಣದುದ್ದಕ್ಕೂ ಉದಾಸೀನ ತೋರಿದವರು ಜಾತೀಯ ಸಮಾವೇಶಕ್ಕೇಕೆ ಈ ಪರಿಯ ಮುತುವರ್ಜಿ ವಹಿಸುತ್ತಿದ್ದಾರೆ? ಶಕ್ತಿಪ್ರದರ್ಶನದ ಹೆಸರಿನಲ್ಲಿ ಏಕೆ ಈ ನಮೂನೆಯಲ್ಲಿ ವ್ಯಕ್ತಿ ಪ್ರದರ್ಶನ ಜರುಗುತ್ತಿದೆ. ಅಷ್ಟಕ್ಕೂ ಜನಪರ ಹೋರಾಟಗಳನ್ನೇ ಬದಿಗಿಟ್ಟವ ಜನನಾಯಕನಾದರೂ ಹೇಗಾಗುತ್ತಾನೆ. ಚಿಂತೆಯೇ ಇಲ್ಲದಿರಲು ಕಾರಣಗಳಿಲ್ಲದಿಲ್ಲ. ಮೋದಿಯ ಅಲೆ, ಜೀವ ಹೋದರೂ ನಿಷ್ಠೆ ಬದಲಾಯಿಸದ ಕಟ್ಟರ್ ಕಾರ್ಯಕರ್ತರು ಎಂದೂ ನಮ್ಮೊಂದಿಗಿರುತ್ತಾರೆಂಬ ಅಚಲ ವಿಶ್ವಾಸ. ಆದರೆ ಇವರಿಗೇನು ಗೊತ್ತು ಇವರ ಡೊಂಬರಾಟದ ಸಿಟ್ಟುಗಳಿಗೆ ನಾಳೆ ಇದೇ ಕಾರ್ಯಕರ್ತ ಮನೆಮನೆಗಳ ಬಾಗಿಲಲ್ಲಿ ನಿಂತು ಉತ್ತರ ಕೊಡಬೇಕೆಂಬುದಾಗಿ!! ಜಾತೀಯತೆ ನಿವಾರಿಸಲು ಹಿರಿಯರೆಲ್ಲ ಅಹರ್ನಿಶಿ ದುಡಿಯುತ್ತಿದ್ದರೆ ಇವರು ಮತ್ತೆ ಓಬೀರಾಯನ ಕಾಲಕ್ಕೇ ಮರಳುತ್ತಿದ್ದಾರೆ. ವಿವೇಕ ಎನ್ನುವುದನ್ನು ಎಲ್ಲಿ ಇವರೆಲ್ಲ ಅಡವಿಟ್ಟಿದ್ದಾರೆ? ಒಂದಾಗಿ ಯೋಚಿಸುವ ಚಾಕಚಕ್ಯತೆ ಇವರಿಗೇಕೆ ಇನ್ನೂ ಸಿದ್ದಿಸಿಲ್ಲ ಎನ್ನುವುದೇ ಕೋಟಿಕೋಟಿ ಪ್ರಶ್ನೆ. ಆತ್ಮಾವಲೋಕನಕ್ಕೆ ಇವರಲ್ಲಿ ಪುರುಸೊತ್ತೇ ಇಲ್ಲ

ಅದೊಂದು ಶ್ಯಾಣೆತನ ಇದ್ದರೆ ದಾಯಾದಿ ಕಲಹ ಬಗೆಹರಿಸಲು ಇವರು ದೇಶಾಂತರ ಸುತ್ತುವ ಪ್ರಮೇಯವಾದರೂ ಎದುರಾಗುತ್ತಿತ್ತೇ? ಎಂತಹಾ ವಿಪರ್ಯಾಸ!!

Shivaprasad Surya

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post