ಬರೀ ಪ್ರಶ್ನಾರ್ಥಕಗಳು, ಅಲ್ಪವಿರಾಮಗಳು, ಆಗೊಮ್ಮೆ ಈಗೊಮ್ಮೆ ಉದ್ಗಾರವಾಚಕಗಳು ತು೦ಬಿದ್ದ ಅವನ ಜೀವನದಲ್ಲಿ ಸುಖಾಂತ್ಯವಾಗಿ ಪ್ರೀತಿಗೆ ಪೂರ್ಣವಿರಾಮ ಬಿತ್ತಾ!!!!
ಕೆಳ ಮಧ್ಯಮವರ್ಗದಲ್ಲಿ ಜನಿಸಿದ ಶ್ರೀಕಾಂತನದು ಸಾಧಾರಣ ಮೈಕಟ್ಟು, ನಸುಗೆಂಪು ಬಣ್ಣ, ಕಾಂತಿಯುತವಾದ ಮುಖಚರ್ಯೆ ಯಾರನ್ನೂ ತನ್ನತ್ತ ಆಕರ್ಷಿಸಬಲ್ಲ, ಸದಾ ಹಸನ್ಮುಖಿಯಾಗಿರುವ ಹಾಸ್ಯಯುಕ್ತ ವ್ಯಕ್ತಿತ್ವ, ‘ದೋಸ್ತಿ ವಿತ್ ಸಮ್ ಅಂಡ್ ದುಷ್ಮನಿ ವಿತ್ ನನ್ ‘ ಅನ್ನೊದನ್ನು ಅಕ್ಷರಶಃ ನಂಬಿಕೊಂಡು ಅದರಂತೆ ನಡೆದುಕೊಂಡು ಬಂದಿದ್ದ. ಓದಿನಲ್ಲಿ ಯಾವಾಗಲೂ ಮುಂದಿದ್ದು ಕಾಲೇಜಿನ ಟಾಪ್ 5 ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದ. ಪರಿಸ್ಥಿತಿಯ ಮಡುವಿಗೆ ಸಿಕ್ಕು ಇಂಜಿನೀಯರಿಂಗ್ ಮಾಡಲಾಗದೆ ಬಿ.ಎಸ್.ಸಿ. ಓದುತ್ತಿದ್ದ. ಎಲ್ಲಾ ಮಧ್ಯಮವರ್ಗದ ಕುಟುಂಬದವರ ಕನಸುಗಳಂತೆ ಈತನದೂ ಚೆನ್ನಾಗಿ ಓದಿ ಒಳ್ಳೆ ಕೆಲಸಕ್ಕೆ ಸೇರಿ ನಿಶ್ಚಿಂತ ಜೀವನ ನಡೆಸುವ ಗುರಿ.
ಬಿ.ಎಸ್.ಸಿ. ಮೊದಲನೆಯ ವರ್ಷ ಭೌತಶಾಸ್ತ್ರದ ಪ್ರಯೋಗಾಲಯದ ಬ್ಯಾಚುಗಳ ವಿಂಗಡನೆಯಾಗಿ ಶುಕ್ರವಾರ ಮಧ್ಯಾಹ್ನ ಸುಮಾರು ನಾಲ್ಕು ಗಂಟೆಗಳ ಕಾಲ ಲ್ಯಾಬ್’ನಲ್ಲಿ ಕಳೆಯಬೇಕು. ಆಗಲೇ ಶ್ರೀಕಾಂತನ ಜೀವನದ ನವ್ಯ ಚೈತ್ರ ಕಾಲ ಪ್ರಾರಂಭವಾದದ್ದು…ಇತ್ತ ಮಾಡರ್ನೂ ಅಲ್ಲದ ಅತ್ತ ಸಾ೦ಪ್ರದಾಯಿಕವೂ ಅಲ್ಲದ ಉಡುಗೆಯಲ್ಲಿ ಫಿಸಿಕ್ಸ್ ಲ್ಯಾಬ್ ಗೆ ಕಾಲಿಟ್ಟಳು ಶ್ವೇತಾ… ತೀರಾ ಸೌಂದರ್ಯವಂತೆ ಅಲ್ಲದಿದ್ದರೂ ಒಂದು ಹೆಣ್ಣು ಆಕರ್ಷಕವಾಗಿ ಕಾಣಲು ಇರಬೇಕಾದ ನಯ ನಾಜೂಕುಗಳು ಅವಳಲ್ಲಿದ್ದವು. 11 ಜನ ಹುಡುಗರಿದ್ದ ಬ್ಯಾಚನಲ್ಲಿ ಒಬ್ಬಳೇ ಹುಡುಗಿಯಾದ ಶ್ವೇತಾಗೆ ಶ್ರೀಕಾಂತನ ಪಕ್ಕದಲ್ಲೇ ಸ್ಥಾನ ದೊರಕಿತ್ತು. ಮೊದಲೇ ನಾಚಿಕೆ ಸ್ವಭಾವದವನಾದ ಶ್ರೀಕಾಂತ ನಾಚಿ ನೀರಾಗಿ ಒಳಗೊಳಗೆ ಪುಳಕಿತನಾಗಿದ್ದ. ಮೊದಮೊದಲು ಅಂತಹ ವಿಶೇಷ ಏನೂ ಅನಿಸದಿದ್ದರೂ, ದಿನಗಳುರುಳಿದಂತೆ ಅವನ ಮನಸ್ಸು ಶ್ವೇತಾಳ ಸಾಮೀಪ್ಯವನ್ನು ಬಯಸುತ್ತಿತ್ತು. ಪ್ರತಿ ಶುಕ್ರವಾರಕ್ಕಾಗಿ ಹಾತೊರೆದು ಕಾಯ್ತಾ ಇದ್ದ, ಶುಕ್ರವಾರ ಏನಾದರೂ ರಜಾ ದಿನವಾದರೆ ಜೀವನ ಶೂನ್ಯವಾಗಿ ಗೋಚರಿಸಲಾರಂಭಿಸಿತು. ಹೀಗೆ ಕಾಲಚಕ್ರ ಉರುಳುತ್ತಾ ಮೂರು ವರುಷಗಳು ಗತಿಸಿದ್ದು ತಿಳಿಯಲೇ ಇಲ್ಲ. ಮನಸ್ಸಿನಲ್ಲಿ ಮಂಡಿಗೆ ತಿನ್ನುವ ಅಂತರ್ಮುಖಿಯಾದ ಶ್ರೀಕಾಂತನ ಅಂತರಾಳದ ಮಾತುಗಳು ಎಂದಿಗೂ ತುಟಿಯ ಮೇಲೆ ಬರಲೇ ಇಲ್ಲ. ಶ್ವೇತಾಳ ಹೃದಯದಲ್ಲಿ ಶ್ರೀಕಾಂತನಿಗಾಗಿ ಸ್ಥಾನ ಇತ್ತಾ …????
ಬಿ.ಎಸ್.ಸಿ. ಮುಗಿದ ನಂತರ ಇಬ್ಬರೂ ಬೇರೆ ಬೇರೆ ಕಡೆ ಎಂ.ಎಸ್.ಸಿ. ಮಾಡಿ ಬೇರೆ ಬೇರೆ ಊರುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುತ್ತಾರೆ. ಆಗಲೂ ಶ್ರೀಕಾಂತನ ಹೃದಯ ಶ್ವೇತಾಳಿಗಾಗಿ ಮಿಡಿಯುತ್ತಿತ್ತು , ಅವಳ ನೆನೆದಾಗಲೆಲ್ಲಾ ಎದೆಬಡಿತ ಹೆಚ್ಚಾಗುತ್ತಿತ್ತು ಶ್ವೇತಾಳ ಕುರಿತಾಗಿ ಯೋಚಿಸುತ್ತ ಕೊನೆಗೆ ಅವಳಿಗೊಂದು ಪತ್ರ ಬರೆಯಲು ನಿರ್ಧರಿಸುತ್ತಾನೆ.
“ಆತ್ಮೀಯ ಶ್ವೇತಾ, ನಿನ್ನನ್ನು ಏನೆಂದು ಸಂಬೋಧಿಸಲಿ ಎಂದು ವಿಚಾರ ಮಾಡಿ ತರ್ಕಿಸಿ ಕೊನೆಗೆ ಬೇರೆ ಯಾವ ಬಾಂಧವ್ಯಕ್ಕಲ್ಲದಿದ್ದರೂ ನಿನ್ನೊಂದಿಗೆ ಫಿಸಿಕ್ಸ್ ಲ್ಯಾಬ್’ನಲ್ಲಿ ಸಹಪಾಠಿಯಾಗಿ ಕಳೆದ ಆ ಅಮೂಲ್ಯ ಮೂರು ವರುಷಗಳ ಸ್ನೇಹದಿಂದಾಗಿ ನಾನು ಆ ರೀತಿ ಸಂಬೋಧಿಸುವ ಸಲುಗೆಯನ್ನು ಹೊಂದಿರುವೆ ಮತ್ತು ನನ್ನ ಈ ಭಂಡತನವನ್ನು ನೀನು ಕ್ಷಮಿಸುತ್ತಿ ಎಂದು ಭಾವಿಸಿರುವೆ. ನಿನ್ನ ಆಕರ್ಷಣೆ ಮತ್ತು ಸದಾಕಾಲ ಸಾಮೀಪ್ಯವನ್ನು ಬಯುಸುವ ಈ ನನ್ನ ಮನದ ಬಯಕೆ ಯಾವಾಗ ಪ್ರೇಮವಾಗಿ ತಿರುಗಿತೋ ನಾ ಕಾಣೆ. ಆದರೆ ನಾನು ನಿನ್ನನ್ನು ಮನಸಾ ಪ್ರೀತಿಸುತ್ತಿರುವೆನೆಂಬುದರಲ್ಲಿ ಯಾವುದೇ ಸಂಶಯ ಬೇಡ, ಐ ಲವ್ ಯು ಶ್ವೇತಾ…
ಭೌತಶಾಸ್ತ್ರದ ಪ್ರಯೋಗಾಲಯದಲ್ಲಿನ ನಮ್ಮ ಮೊದಲ ಭೇಟಿ ನಿನಗೆ ನೆನಪಿದೆಯಾ ? ಎಲ್ಲಾ ಕಂಗಳ ನೋಟ ನಿನ್ನ ಮೇಲೆಯೇ ಕೇಂದ್ರೀಕೃತವಾಗಿತ್ತು, ಆಗ ನಿನಗೆ ನನ್ನ ಪಕ್ಕಕ್ಕೆ ಸ್ಥಾನ ದೊರೆಯಿತು. ಇಂಥ ಅದೃಷ್ಟಕ್ಕೆ ಸಹಪಾಠಿಗಳು ನನ್ನನ್ನು ಪಿಸುಮಾತಿನಲ್ಲಿ ಅಭಿನಂದಿಸಿದ್ದರು. ಇದ್ಯಾವುದೂ ನನಗಾಗ ಅರ್ಥವಾಗಿರಲಿಲ್ಲ ಮತ್ತು ಮೊದಲ ನೋಟದಲ್ಲಿ ಪ್ರೀತಿಯೂ ಆಗಿರಲಿಲ್ಲ.ನಮ್ಮಿಬ್ಬರ ಔಪಚಾರಿಕ ಪರಿಚಯ ಕೂಡ ಆಗಿರಲಿಲ್ಲ ಹಾಗೂ ಪ್ರತಿ ಶುಕ್ರವಾರ 5-6 ಗಂಟೆಗಳ ಕಾಲ ಒಟ್ಟಿಗೆ ಇರುತ್ತಿದ್ದರೂ ನನ್ನ ಮನದಲ್ಲಿ ಅಂತಹ ಕೋಲಾಹಲವೇನೂ ಎದ್ದಿರಲಿಲ್ಲ.
ಕಾಲಕ್ರಮೇಣ ನನ್ನ ಜೀವನದ ಒಂದು ಹಂತದಲ್ಲಿ ನಾನು ಶುಕ್ರವಾರಕ್ಕಾಗಿ ಕಾಯತೊಡಗಿದೆ, ಪ್ರತಿದಿನ ಶುಕ್ರವಾರವಾಗಬಾರದೇ ಎಂದು ಹಪಹಪಿಸತೊಡಗಿದೆ… ಶುಕ್ರವಾರ ರಜಾದಿನವಾದಾಗ ಮನದ ತಲ್ಲಣ ಹೆಚ್ಚಾಗಿ,ಎದೆಯಲ್ಲಿ ಕಿಚ್ಚಾಗಿ, ಹೃದಯಕ್ಕೆ ಹುಚ್ಚು ಹಿಡಿದಂತಾಗುತ್ತಿತ್ತು! ಒಂದು ವಿಲಕ್ಷಣ ಭಾವ ಮನದಲ್ಲಿ ಮನೆ ಮಾಡಿ ಮನಸ್ಸು ಭಾರವಾಗುತ್ತಿತ್ತು. ಕೆಲ ವಾರಗಳ ಪರಿಚಯದ ನಂತರ ನೀನು ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದೆ, ನಿನ್ನ ಸುಮಧುರ ಕಂಠದಿಂದ ಬಂದ ಆ ಸಿಹಿ ನುಡಿಗಳು ಇನ್ನೂ ನನ್ನ ಕಿವಿಯಲ್ಲಿ ಮೊಳಗುತ್ತಿವೆ. ಯಾಕೋ ನಿನ್ನೊ೦ದಿಗೆ ಮಾತನಾಡಲು ನನಗೆ ಸಂಕೋಚ, ನಿಜ ಹೇಳಬೇಕೆಂದರೆ ಮಾತನಾಡಲು ವಿಷಯವೇ ಇರಲಿಲ್ಲ ಕೇವಲ ನೀನು ಕೇಳಿದ ಪ್ರಶ್ನೆಗಳಿಗೆ ಹೌದು ಅಥವಾ ಅಲ್ಲಾ ಎನ್ನುವ ಉತ್ತರ ಕೊಡುವಲ್ಲೆ ಸಂತೃಪ್ತನಾಗಿದ್ದೆ. ಇದನ್ನು ಮೀರಿ ಮುನ್ನಡೆಯಲೇ ಇಲ್ಲ, ಹೀಗೆ ಮೂರು ವಸಂತಗಳು ಉರುಳಿದವು, ನಮ್ಮ ಕಾಲೇಜಿನ ಅವಧಿಯೂ ಮುಗಿದು ಅಗಲುವಿಕೆಯ ಸಮಯ ಬಂದಿತು.
ನಿನ್ನಿಂದ ದೂರವಾದ ನಂತರ ನನಗೆ ಕನ್ನಡ ಚಲನಚಿತ್ರ ಗೀತೆಯೊಂದು ನೆನಪಾಯಿತು ‘ಕ೦ಗಳು ವಂದನೆ ಹೇಳಿವೆ ಹೃದಯವು ತುಂಬಿ ಹಾಡಿದೆ ಆಡದೆ ಉಳಿದಿಹ ಮಾತು ನೂರಿವೆ’. ರಾತ್ರಿಯ ನಿದ್ರೆ ಮರೀಚಿಕೆಯಾಯಿತು, ಪ್ರತಿ ಶುಕ್ರವಾರವಂತೂ ಕನಸಿನಲ್ಲಿ ‘ಶ್ರೀ’ ಎನ್ನುವ ಆ ನಿನ್ನ ಮಧುರ ಪಿಸುಮಾತಿನ ಧ್ವನಿ ನನ್ನ ಕಿವಿಯಲ್ಲಿ ಮೊಳಗಿದಂತಾಗಿ ಶ್ವೇತಾ… ಎಂದು ಕನವರಿಸುತ್ತಿದ್ದೆ. ನೀನು ಇರುವ ಕಾಲೇಜನಲ್ಲಿ ನನ್ನ ಹತ್ತಿರದ ಸಂಬ೦ಧಿಯೊರ್ವನಿಗೆ ಪ್ರವೇಶ ದೊರಕಿಸುವ ಕುರಿತು ನಿನ್ನೊಂದಿಗೆ ಸಂಪರ್ಕಿಸುವ ಮುನ್ನ ಪ್ರೊಫೆಸರ್ ಅನಂದರಾವ್’ರನ್ನು ಭೇಟಿ ಮಾಡಿ ನನಗೊಂದು ಪ್ರಸ್ತಾವಿಕ ಪತ್ರವನ್ನು (ನೋಟ್) ಬರೆದುಕೊಡುವಂತೆ ಕೇಳಿದಾಗ . ‘ಶ್ರೀಕಾಂತ ಯಾರ ಹತ್ತಿರ ಕೆಲಸಕ್ಕೆ ಹೋಗ್ತೀದ್ದೀಯಾ, ಅವಳು ನಿನ್ನನ್ನು ಮನಸ್ಸು ತುಂಬಾ ಪ್ರೀತಿಸ್ತಾಳಪ್ಪಾ.. ಹೋಗಪ್ಪ ಅವಳಿರೋದೇ ನಿನಗಾಗಿ, ನನ್ನ ಅನುಭವಿ ಕಣ್ಣುಗಳು ಸುಳ್ಳು ಹೇಳಲಾರವು’. ಎಂದಿದ್ದರು. ನನ್ನ ಮನಸ್ಸಿನಲ್ಲಿ ಮಿಂಚೊಂದು ಸಂಚಾರವಾಗಿ ಉದ್ವೇಗ ತಡೆದುಕೊಳ್ಳಲಾಗದೆ ಕೈ ಕೈ ಹಿಸುಕುತ್ತಾ ಅತ್ತಿಂದಿತ್ತ ಇತ್ತಿಂದತ್ತ ಹುಚ್ಚನ೦ತೆ ಓಡಾಡಿದ್ದೆ. ಈ ಭರವಸೆಯೊಂದಿಗೆ ನಾನು ನಿನ್ನ ಭೇಟಿಯಾದೆ, ಯಾವುದೇ ಹಮ್ಮು ಬಿಮ್ಮಿಲ್ಲದೇ ತುಂಬಾ ಸಹೃದಯಿಯಾಗಿ ವಿನಯಶೀಲತೆಯಿಂದ ನನ್ನ ಕೆಲಸವನ್ನು ಮಾಡಿಕೊಟ್ಟು ನನಗೆ ನಿನ್ನೊಂದಿಗೆ ಚಹಾ ಕುಡಿಯುವ ಸೌಭಾಗ್ಯವನ್ನು ಕರುಣಿಸಿದೆ, ಅಂದು ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ!
ಅಂದು ನಿನ್ನ ಮನಸ್ಸನ್ನು ಅರಿಯುವ ಮತ್ತು ನನ್ನ ಮನದಾಳದ ಇಂಗಿತವನ್ನು ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೆ. ನನ್ನಲ್ಲಿಯ ಧೈರ್ಯದ ಕೊರತೆಯೋ ಅಥವಾ ನಿನ್ನ ಮೂಡನ್ನು ಅರಿಯುವಲ್ಲಿಯ ವಿಫಲತೆಯೋ ನಾ ಕಾಣೆ, ನನ್ನ ಹೃದಯದ ಗೂಡಿನಲ್ಲಿದ್ದ ಮಾತುಗಳು ಅಧರದವರೆಗಿನ ಅಂತರವನ್ನು ಕ್ರಮಿಸಲಿಲ್ಲ. ಪ್ರಾಯಶಃ ಆ ಕಾಲ ಈಗ ಕೂಡಿ ಬಂದಿದೆ, ನಾನು ನಿನ್ನನ್ನು ಮನಸಾ ಪ್ರೀತಿಸುತ್ತೇನೆ ಮತ್ತು ನನ್ನ ಸಂಪೂರ್ಣ ಜೀವನವನ್ನು ನಿನ್ನೊಂದಿಗೆ ಕಳೆಯಲು ಇಚ್ಛಿಸುತ್ತೇನೆ, ಇದನ್ನು ಪುರಸ್ಕರಿವುದು ಅಥವಾ ತಿರಸ್ಕರಿವುದು ನಿನಗೆ ಬಿಟ್ಟದ್ದು. ಹಾಂ.. ನಾನು ಕೂಡ ಸರಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಮತ್ತು ತಕ್ಕ ಮಟ್ಟಿಗೆ ಜೀವನದಲ್ಲಿ ಸೆಟಲ್ ಅಗಿದ್ದೇನೆ.
ನಿನ್ನ ಉತ್ತರಕ್ಕಾಗಿ ಕಾತುರದಿಂದ ಕಾಯುತ್ತಿರುವ,
ಪ್ರೀತಿಯಿಂದ ಪ್ರೀತಿಗಾಗಿ,
ಶ್ರೀಕಾಂತ.”
ಮುಂದೇನಾಗಬಹುದೆಂಬ ಕುತೂಹಲ, ಕೌತುಕ ತಿಳಿಯುವ ತವಕವಲ್ಲವೇ!! ಈ ಪತ್ರ ಶ್ವೇತಾಳ ಕೈ ಸೇರಿ ಅದನ್ನು ಓದಿದ ನಂತರ ಅವಳು ಕೂಡ ಉತ್ತರವನ್ನು ಬರೆಯಲು ನಿಶ್ಚಯಿಸುತ್ತಾಳೆ.
“ಆತ್ಮೀಯ ಶ್ರೀ , ನಿನ್ನೀ ಪ್ರೀತಿಪೂರ್ವಕ ಪ್ರೇಮ ಪತ್ರಕ್ಕೆ ಧನ್ಯವಾದಗಳು, ಇಂತಹದೊಂದು ಪ್ರೇಮ ಪತ್ರವನ್ನು ವರುಷಗಳ ಹಿಂದೆ ಇಲ್ಲದಿದ್ದರೂ ಕೆಲ ತಿ೦ಗಳುಗಳ ಹಿಂದೆಯಾದರೂ ನೀನು ಬರೆಯಬಾರದೇ? ಎಂದು ಅತೀ ಉತ್ಸುಕತೆ ಮತ್ತು ಅಭಿಮಾನದಿಂದ ಹಾತೊರೆದು ಈ ಅಕ್ಷರ ಪ್ರಾರ್ಥನೆಗಾಗಿ ಹಪಹಪಿಸಿ,ಹವಣಿಸಿ ಕಾದಿದ್ದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ಜೀವಮಾನಪೂರ್ತಿಯಾಗಿ ನಿನ್ನ ಪ್ರೇಮ ನಿವೇದನೆಗಾಗಿ ಕಾಯುತ್ತಿದ್ದೆ.
ನಿನ್ನನ್ನು ಇನ್ನೂ ಸಿಹಿಯಾದ ಪೂರ್ವಪ್ರತ್ಯಯಗಳಿಂದ ಸಂಬೋಧಿಸಬೇಕೆಂದಿದ್ದೆ ಆದರೆ ನಿನ್ನ ಉದ್ವೇಗ ಹೆಚ್ಚಿ ಉಬ್ಬಿದಂತಾಗುವೆ ಎಂದು ತಿಳಿದು ನನ್ನ ಭಾವನೆಗಳನ್ನು ನಿಯಂತ್ರಿಸಿಕೊಂಡು ಸರಳವಾದ ಪದಗಳಿಂದ ಸಂಬೋಧಿಸಿದೆ. ಇಲ್ಲವಾದಲ್ಲಿ ನನ್ನ ಶಬ್ದಕೋಶವು ‘ಮೈಡಾರ್ಲಿಂಗ್’ ಶ್ರೀ’, ‘ ನನ್ನ ಪ್ರೀತಿಯ ಶ್ರೀ’ ಹಾಗೂ ಇನ್ನೂ ಏನೇನೋ ಉಪಮೇಯಗಳನ್ನು ಬಳಸಲು ಹುರಿದುಂಬಿಸಿತ್ತು.
ಪ್ರೀತಿಯ ಶ್ರೀ, ಫೀಸಿಕ್ಸ ಲ್ಯಾಬ್’ನಲ್ಲಿ ನಿನ್ನ ಪಕ್ಕಕ್ಕೆ ಸ್ಥಾನ ದೊರೆತ ದಿನವೇ ನಾನು ನಿನಗೆ ಮನಸೊತಿದ್ದೆ, ಅಂದಿನಿಂದ ನನ್ನ ಹೃದಯ ನನ್ನದಾಗಿರದೇ ನಿನ್ನಲ್ಲಿ ಲೀನವಾಗಿತ್ತು. ಕೇವಲ ಪ್ರಯೋಗಾಲಯದಲ್ಲಿ ಅಲ್ಲದೇ ಜೀವನ ಪೂರ್ತಿಯಾಗಿ ನಿನ್ನೊಂದಿಗಿರುವಂತಾಗಲೆಂದು ನಾನು ದೇವರಲ್ಲಿ ಪ್ರತಿನಿತ್ಯ ಪ್ರಾರ್ಥಿಸಿದ್ದೆ. ಕಾಲೇಜಿನ ಮೂರುವರುಷಗಳ ನಿನ್ನ ರಕ್ಷಣಾ ಕವಚ ನನ್ನ ನೈತಿಕ ಸ್ಥೈರ್ಯ ಮತ್ತು ಧೈರ್ಯವನ್ನು ಹೆಚ್ಚಿಸಿತ್ತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆ ಮೂರು ವರುಷಗಳನ್ನು ನನ್ನ ಕಲ್ಪನೆಯಿಂದ ನಿರ್ಮಿತವಾದ ನಿನ್ನ ನೆರಳಲ್ಲಿ ಸುರಕ್ಷಿತ ಮತ್ತು ದಿಟ್ಟವಾಗಿ ಕಳೆದಿದ್ದೆ. ಆ ಸಮಯದಲ್ಲಿ ನೀನು ನನ್ನ ಮೇಲೆ ಮಾಡಿದ ಜೋಕೊಂದನ್ನು ಆಗಾಗ ನಪಿಸಿಕೊಂಡು ನಗುತ್ತಿರುತ್ತೇನೆ, ನನ್ನನ್ನು ಒಂದು ಡಜನ್ ಹೋರಿಗಳ ಮಧ್ಯದಲ್ಲಿ ಒಂದೇ ಹಸು ಎಂದು ಬೇರೆ ಸಹಪಾಠಿಗಳು ಛೇಡಿಸುತ್ತಿದ್ದುದು ನೆನಪಿದೆಯಾ? ಹಾಗಾಗಿ ಈ ಹಸುವಿಗಾಗಿ ಲ್ಯಾಬ್ ಅಸಿಸ್ಟಂಟ್ ಕುಳಿತುಕೊಳ್ಳಲು ಸ್ಟೂಲೊಂದನ್ನು ಕೊಡಮಾಡಿದ್ದ. ಅದನ್ನು ಮೋಜಿಗಾಗಿ ನೀನು ಆಕ್ಷೇಪಿಸಿದ್ದೆ, ನಿನ್ನ ಆಕ್ಷೇಪಣೆ ಗಂಭೀರವಾಗಿರಲಿಲ್ಲೆಂದು ನನಗೆ ತಿಳಿದಿತ್ತು. ನಾನು ಬ್ಯಾಲೆನ್ಸ್ ರೂಮಗೆ ಹೋಗಿಬರುವಷ್ಟರಲ್ಲಿ ಸ್ಟೂಲ್ ಕಾಣೆಯಾಗಿತ್ತು ಆಗ ಕೆಲವರು ಅದು ನಿನ್ನೊಂದಿಗಿದೆ ಎಂದು ಪಿಸುಗುಟ್ಟಿದ್ದರು. ನನ್ನ ಬೆನ್ನ ಹಿಂದೆ ಏನೇ ಗಾಳಿಮಾತುಗಳನ್ನಾಡಿದರೂ ನನ್ನೊಂದಿಗೆ ನೇರವಾಗಿ ಜೋಕ್ ಮಾಡುವ ಧೈರ್ಯ ಯಾರಿಗೂ ಇರಲಿಲ್ಲ. ವಾಸ್ತವವಾಗಿ ನನಗೆ ನಿನ್ನೊಂದಿಗೆ ಮಾತನಾಡುವ ನೆಪ ಬೇಕಿತ್ತು, ಅ೦ಥ ಪ್ರಸ೦ಗ ಈಗ ಒದಗಿ ಬಂದಿತ್ತು. ನಾನು ಸ್ಟೂಲ್ ಹಿಂದಿರುಗಿಸಲು ನಿನ್ನನ್ನು ವಿನ೦ತಿಸಿಕೊಂಡಾಗ ನೀನು ಮುಗುಳ್ನಕ್ಕು ಸನ್ನೆಮಾಡಿ ಟೇಬಲ್’ನ ನನ್ನ ಭಾಗದಕಡೆಗೆ ತೋರಿಸಿದ್ದೆ. ಟೇಬಲ್’ನ ಡ್ರಾವರನ ಕೆಳಗಡೆಯೇ ಸ್ಟೂಲ್ ಇತ್ತು.
ಶ್ರೀ ಡೀಯರ್ ನಾನಾಗಲೇ ನಿನ್ನ ಪ್ರೀತಿಯಲ್ಲಿ ತೇಲಿ ಹೋಗಿದ್ದೆ , ನೀನು ಮಾಡಿದ ಜೋಕ್ ಪ್ರೀತಿಯನ್ನು ವೃದ್ಧಿಸುವ ಕೆಲಸ ಮಾಡಿತ್ತು. ಈ ಜೋಕನ್ನು ನನ್ನ ಅನೇಕ ಸ್ನೇಹಿತೆಯರೊಂದಿಗೆ ಹೇಳಿ ಸಂಭ್ರಮಿಸಿದ್ದೆ. ಆಗಿನಿಂದ ನಮ್ಮ ಪ್ರೇಮದ ಕುರಿತು ಮುಂದುವರೆಯುವ ಅನೇಕ ಪ್ರಯತ್ನಗಳನ್ನು ಮಾಡಿದ್ದೆ ಆದರೆ ಎಂದೂ ಸಭ್ಯತೆಯ ಇತಿಮಿತಿಗಳನ್ನು ಮೀರಲಿಲ್ಲ. ನಿನಗಿದ್ಯಾವುದೂ ಅರ್ಥವೇ ಆಗಲಿಲ್ಲ. ನನ್ನ ಮನದಾಳದ ಆರ್ದ್ರತೆಯನ್ನು ಅರಿತುಕೊಳ್ಳುವಲ್ಲಿ ನೀನು ಅಷ್ಟೊಂದು ಉತ್ಸುಕನಾಗಿರಲಿಲ್ಲ.
ಆದರೆ ನನ್ನ ಪ್ರೇಮ ಪರಿಶುದ್ಧವಾಗಿತ್ತು ಮತ್ತು ನಿನ್ನ ಮುಗ್ಧತೆ ಬಗ್ಗೆ ನನಗೆ ಅರಿವಿತ್ತು. ಕಾಲೇಜಿನ ಮೆಟ್ಟಿಲೇರಿದಾಗಿನಿಂದ ನಾನು ನಿನ್ನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ , ನೀನೆ೦ದಿಗೂ ಗಾಳಿಮಾತುಗಳನ್ನಾಡುವವರ ಗುಂಪಿನೊಂದಿಗೆ ಸೇರಿ ಬೆನ್ನ ಹಿಂದೆ ಉಡಾಫೆಯ ಮಾತುಗಳನ್ನಾಡುತ್ತಿರಲಿಲ್ಲ. ನಿನ್ನನ್ನು ಮಡಿವಂತನೆ೦ದು ತಿಳಿಯದೆ ನಿನ್ನ ಈ ಗುಣವನ್ನು ಸಹಪಾಠಿಗಳೂ ಕೊಂಡಾಡಿ ಗೌರವಿಸುತ್ತಿದ್ದರು. ನನ್ನ ಆಯ್ಕೆಯ ಬಗ್ಗೆ ನನಗೆ ಆತ್ಮವಿಶ್ವಾಸವಿತ್ತು, ಇಂದಿಲ್ಲ ನಾಳೆ ನೀನು ನನ್ನವನಾಗುವೆಯೆಂಬ ಭರವಸೆ ಇತ್ತು, ಇದಕ್ಕಾಗಿ ದೇವರಲ್ಲಿ ಸದಾಕಾಲ ಪ್ರಾರ್ಥಿಸುತ್ತಿದ್ದೆ. ಈಗ ಕುಂತರೆ ನಿಂತರೆ ನಿಂದೆ ಧ್ಯಾನಾ, ಕನಸಲು ಮನಸಲು ಎಲ್ಲೆಲ್ಲೂ ನೀನೆ !!! ನನ್ನ ದಿನಚರಿ ಪ್ರಾರಂಭವಾಗುವದೇ ನಿನ್ನ ಭಾವಚಿತ್ರವನ್ನು ನೋಡುವದರಿಂದ….. ಇಂತಹ ಯಾವುದೇ ಭಾವಚಿತ್ರವನ್ನು ನೀನು ನನಗೆ ಕೊಟ್ಟಿರಲಿಲ್ಲ ಆದರೆ ನನ್ನ ಕಡೆ ಎರಡಿವೆ! ಒಂದು ಕೇವಲ ನಿನ್ನದು ಮತ್ತೊಂದರಲ್ಲಿ ನಾನು ನೀನು ಸ್ವರ್ಗದಲ್ಲಿ ಮಾಡಿದ ಜೋಡಿಯಾಗಿ ಗೋಚರಿಸುತ್ತಿದ್ದೇವೆ. ಈ ಫೋಟೋಗಳನ್ನು ಮತ್ತು ಅವುಗಳಲ್ಲಿ ಅಡಗಿರುವ ನನ್ನ ಭಾವನೆಗಳನ್ನೂ ಮನೆಯವರಿಂದ ಎಂದೂ ಮುಚ್ಚಿಡುವ ಪ್ರಯತ್ನ ಮಾಡಲಿಲ್ಲ. ಮೊದಮೊದಲು ನನ್ನ ತಾಯಿ ವಿರೋಧಿಸಿದರೂ ನನ್ನ ಪರಿಶುದ್ಧ ಪ್ರೇಮ, ಮುಗ್ಧತೆ ಮತ್ತು ನಿನ್ನನ್ನು ವರಿಸುವ ಇಚ್ಛೆ ಕುರಿತು ಮನದಟ್ಟಾದ ನಂತರ ಅವಳಿಗೂ ನನ್ನ ಬಗ್ಗೆ ಸಹಾನುಭೂತಿ ಇದೆ. ಕೆಲ ತಿಂಗಳುಗಳ ಹಿಂದೆಯೇ ಅವಳು ನಿನ್ನನು ಕಂಡು ನಮ್ಮ ಮದುವೆಯ ಕುರಿತು ಮಾತನಾಡುವವಳಿದ್ದಳು ಆದರೆ ನನ್ನ ಪ್ರೀತಿಯ ಮೇಲಿನ ಅಪಾರ ವಿಶ್ವಾಸದಿಂದ ನಾನೇ ಅವಳನ್ನು ತಡೆದು ಸುಮ್ಮನೆ ಕಾಯುವಂತೆ ಹೇಳಿದ್ದೆ.
ನಮ್ಮ ಕಾಲೇಜಿನ ಅವಧಿ ಮುಗಿಯುವ ಮುನ್ನ ಗ್ರೂಪ್ ಫೋಟೋವೊಂದನ್ನು ತೆಗಿಸಿಕೊಂಡದ್ದು ನೆನಪಿದೆಯಾ? ಅದರಲ್ಲಿ ನಾನು ನಿನ್ನ ಹಿಂದೆ ನಿಂತಿದ್ದೆ..ಅದರಿಂದಲೇ ನಮ್ಮಿಬ್ಬರ ಜೋಡಿಯ ಸುಂದರ ಭಾವಚಿತ್ರವೊಂದನ್ನು ಮಾಡಿಸಿದ್ದು! ಹಾಗೆ ನಿನ್ನ ಭಾವಚಿತ್ರವೊಂದು ಕಾಲೇಜಿನಲ್ಲಿ ಪ್ರಕಟಿಸಿದ ಸ್ಮರಣಸಂಚಿಕೆಯ ಸಂಪಾದಕೀಯದಲ್ಲಿ ದೊರಕಿತು. ಈಗ ನನ್ನ ಪ್ರೀತಿಯ ದೊರೆಯ ಭಾವಚಿತ್ರ ಹೇಗೆ ನನ್ನ ಕೈಸೇರಿತೆಂದು ಗೊತ್ತಾಯಿತಲ್ಲವಾ!
ನೀನು ನಮ್ಮ ಮನೆಗೆ ಬಂದಾಗ ನನ್ನ ತಾಯಿ ಅಡುಗೆಮನೆಯಲ್ಲಿ ಚಹಾ ಮಾಡುವಲ್ಲಿ ಬ್ಯುಸಿಯಾಗಿದ್ದಳು. ಆದರೂ ನಿನ್ನದೊಂದು ಇಣುಕುನೋಟ ಅವಳಿಗೆ ದೊರಕಿತ್ತು. ಅವಳು ಕೌತುಕದಿಂದ ನಮ್ಮಿಬ್ಬರ ನಡುವಿನ ಮಾತುಕತೆ ಮತ್ತು ನಿನ್ನ ಮಾತಿನ ಧಾಟಿಯ ಕುರಿತು ವಿಚಾರಿಸಿ ನನ್ನ ಉತ್ತರದಿಂದ ನಿರಾಶಳಾಗಿದ್ದಳು. ಅವಳಿಗೆ ನನ್ನ ಪ್ರೀತಿಯ ಮೇಲೆ ನನಗಿದ್ದ ವಿಶ್ವಾಸದ ಕುರಿತು ಹೇಳಿ ಇಂದಲ್ಲ ನಾಳೆ ನೀನು ನನ್ನನ್ನು ಬಯಸಿ ಸ್ವೀಕರಿಸುತ್ತಿ ಎಂದೂ ಸಮಾಧಾನ ಪಡಿಸಿದ್ದೆ. ನನ್ನ ತಾಯಿ ‘ ಹಾಗೆ ಆಗಲೆಮ್ಮ, ನಿನ್ನ ಈ ಕನಸು ಆದಷ್ಟು ಬೇಗ ನನಸಾಗಲಿ’ ಎಂದೂ ಹರಸಿದ್ದಳು.
‘ಶ್ರೀ’ ಆದಷ್ಟು ಬೇಗ ಬಂದು ನನ್ನ ತಾಯಿಯಲ್ಲಿ ನಿವೇದಿಸಿ ಮಾನಸಿಕವಾಗಿ ನಿನ್ನವಳಾಗಿರುವ ನನ್ನನ್ನು ಔಪಚಾರಿಕವಾಗಿ ವರಿಸು, ನನ್ನ ತಾಯಿಯೂ ನಿನ್ನ ಸ್ವಾಗತಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಅಳಿಯನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿರುವಳು. ನಾನು ನಿನ್ನ ತೋಳಬಂಧನದಲ್ಲಿ ಸಂಭ್ರಮಿಸಲು ಹಾತೊರೆಯುತ್ತಿದ್ದೇನೆ. ನನ್ನ ತುಟಿಗಳ ಮೇಲೆ ನಿನ್ನ ಸಿಹಿ ತುಟಿಗಳ ಮುತ್ತಿನ ಸುರಿಮಳೆಯಲ್ಲಿ ಸ್ವರ್ಗದ ಬಾಗಿಲು ತಟ್ಟುವ ಸಡಗರದ ಕನಸನ್ನು ಕಾಣುತ್ತಿರುವೆ.
ನಿನ್ನ ಪ್ರೇಮಪತ್ರ ಕೈಸೇರಿದ ಮೇಲೆ ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ, ಈ ನಿನ್ನ ಪ್ರೇಮಪತ್ರವನ್ನು ಮುದ್ದಾಡುತ್ತಾ ಆಕಾಶದಲ್ಲಿ ತೇಲಾಡುತ್ತಿದ್ದೇನೆ. ನನ್ನಲ್ಲಿಯ ಬದಲಾವಣೆಗಳು ನನ್ನ ತಾಯಿಯ ಗಮನಕ್ಕೆ ಬಂದಿವೆಯಾದರೂ ನಿನ್ನ ಪ್ರೇಮಪತ್ರದ ಕುರಿತು ನಾನು ಏನನ್ನು ಹೇಳಿಲ್ಲ. ದಯಮಾಡಿ ನೀನೆ ಖುದ್ದಾಗಿ ಬಂದು ನನ್ನ ತಾಯಿಗೆ ಈ ಸಿಹಿ ಸುದ್ದಿಯನ್ನು ತಿಳಿಸು.
ಎಂದೆಂದೂ ನಿನ್ನವಳಾದ,
ಪ್ರೀತಿಯ ಪ್ರೇಯಸಿ
ಶ್ವೇತಾ “
ಶ್ವೇತಾಳ ಉತ್ತರವನ್ನು ಓದಿ ಭಾವುಕನದ ಶ್ರೀಕಾಂತನ ಕಣ್ಣಿಂದ ಆನಂದ ಭಾಷ್ಪಗಳು ಉದುರಿದವು. ತಡಮಾಡದೆ ಶ್ವೇತಾಳ ಊರಿಗೆ ಪ್ರಯಾಣಬೆಳಸಿ ಎಲ್ಲ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ ತನ್ನ ಕನಸಿನ ರಾಣಿಯನ್ನು ಶಾಶ್ವತವಾಗಿ ತನ್ನವಳಾಗಿಸಿಕೊಂಡು ಪರಿಶುದ್ಧ ಪ್ರೇಮಕ್ಕೆ ಪೂರ್ಣವಿರಾಮವಿತ್ತಿದ್ದ.
ಶ್ರೀನಿವಾಸ .ನಾ. ಪಂಚಮುಖಿ
Facebook ಕಾಮೆಂಟ್ಸ್