X

ಬಾನಾಡಿಗಳ ಲೋಕದಲ್ಲೊಂದು ಬಣ್ಣದ ಚಿತ್ತಾರ – ಪೇ೦ಟೆಡ್ ಸ್ಟಾರ್ಕ್

ಬಣ್ಣ ಬಣ್ಣದ ಬಾನಾಡಿಗಳ ವಿಸ್ಮಯಕಾರಿ ಲೋಕದಲ್ಲಿ ಕೊಕ್ಕರೆ ಕುಟುಂಬಕ್ಕೆ ಸೇರಿದ  ಪೇ೦ಟೆಡ್ ಸ್ಟಾರ್ಕ್-ನ (ಬಣ್ಣದ ಕೊಕ್ಕರೆ), ವರ್ಣಗಳ ಸಂಯೋಜನೆ (ಕಲರ್ ಕಾ೦ಬಿನೇಶನ್) ನಿಜಕ್ಕೂ ಅದ್ಭುತ! ದೇವರು ಯಾವ ರೀತಿಯ ಕುಂಚನ್ನು ಬಳಸಿ ಬಣ್ಣ ಬಳೆದನೋ… ಇಲ್ಲಾ ರವಿವರ್ಮನ ಕುಂಚದಿಂದ ಬಣ್ಣದ ಚಿತ್ತಾರ ಮೂಡಿಸಿದನೋ ತಿಳಿಯದು! ಬೇರಾವ ಕಾರಣವಿಲ್ಲದಿದ್ದರೂ ಬಣ್ಣದ ಕೊಕ್ಕರೆಗಳ ಶಕುಂತಲೆಯನ್ನು ನಾಚಿಸುವ ಸೌಂದರ್ಯ,ಕಂಗಳಿಗಾನಂದ ನೀಡುವ ವರ್ಣರಂಜಿತ ದೃಶ್ಯ, ಸೃಷ್ಟಿಕರ್ತನ ಸೃಷ್ಟಿಗೆ ತಲೆಬಾಗುವಂತೆ ಮಾಡುತ್ತದೆ.  

ಕೊಕ್ಕರೆಗಳ ಕುಟುಂಬಕ್ಕೆ ಸೇರಿದ (ಪೇಂಟೆಡ್ ಸ್ಟಾರ್ಕ್) ಬಣ್ಣದ ಕೊಕ್ಕರೆಯ ವೈಜ್ಞಾನಿಕ ಹೆಸರು  ಮ್ಯಾಕ್ಟೀರಿಯ ಲ್ಯೂಕೊಸೆಫೇಲಾ. ಈ ಹಕ್ಕಿಯನ್ನು ಸಂಸ್ಕೃತದಲ್ಲಿ ಪಿಂಗಳಾಕ್ಷ, ಕಚಾಕ್ಷ ಅಥವಾ ಚಿತ್ರಿತ ಮಹಾಬಕ ಎಂದೂ, ಹಿಂದಿಯಲ್ಲಿ ಕಠಸಾರಂಗ ಅಥವಾ ಜಂದಿಲ್ ಎಂತಲೂ ಹಾಗೂ ಮರಾಠಿಯಲ್ಲಿ ಚಿತ್ರ ಬಲಾಕ ಅಥವಾ ಚಾಮ್ಡೋಕ ಎಂದೂ ಕರೆಯುತ್ತಾರೆ. ಉದ್ದವಾದ ಕಾಲುಗಳುಳ್ಳ  ಬಣ್ಣದ ಕೊಕ್ಕರೆ ಕಾಣ ಸಿಗುವದು ಭಾರತೀಯ ಉಪಖಂಡದ ಬಯಲು ಪ್ರದೇಶದ ಸಿಹಿ ನೀರಿನ ಜೌಗು ಪ್ರದೇಶಗಳಾದ ಕೆರೆ, ಸರೋವರ, ನದಿಗಳಲ್ಲಿ. ವಯಸ್ಕ ಬಣ್ಣದ ಕೊಕ್ಕರೆಗಳ ವಿಶಿಷ್ಟವಾದ ಗುಲಾಬಿ ಗರಿಗಳಿಂದಲೇ ಇವುಗಳಿಗೆ  ಪೇಂಟೆಡ್ ಸ್ಟಾರ್ಕ್ (ಬಣ್ಣದ ಕೊಕ್ಕರೆ) ಎಂಬ ಹೆಸರು ಬಂದಿದೆ.  ದಟ್ಟ ಹಳದಿ ಬಣ್ಣದ ಕೆಳಕ್ಕೆ ಬಾಗಿದ ಕೆಂಬರಳನ್ನು (ಐಬೀಸ್) ಹೋಲುವ ಕೊಕ್ಕು, ಕೆಂಪು ಅಥವಾ ಕಿತ್ತಳೆ ಬಣ್ಣದ ಬೋಳು ತಲೆ,  ಬೆನ್ನು ಮತ್ತು ಕುಂಡೆಗಳ (ರಂಪ್) ಮೇಲಿನ ಗುಲಾಬಿ ಬಣ್ಣದ ಪ್ರಕಾಶಮಾನವಾದ  ತುದಿಯುಳ್ಳ ಉದ್ದನೆಯ ಗರಿಗಳು, ದೇಹದ ಮಧ್ಯಭಾಗದಲ್ಲಿನ ಕಪ್ಪು ಬಿಳುಪಿನ ಪಟ್ಟಿ (ಬ್ಯಾಂಡ್), ಬಿಳಿ ಬಣ್ಣದ ದೇಹದ ಉಳಿದ ಭಾಗ, ಗುಲಗಂಜಿ ಕಾಳಿನ೦ತಿರುವ ಕಣ್ಣು, ಬಣ್ಣದ ಕೊಕ್ಕರೆಗಳ ಬಣ್ಣ ಬಣ್ಣದ ಲೋಕ ಬಣ್ಣಿಸಲು ಅಸಾಧ್ಯ!  ರೆಕ್ಕೆ ಬಿಚ್ಚಿ ಸು೦ಯ…ಎಂದು ಹಾರುವಾಗಿನ ಬಣ್ಣದ ಕೊಕ್ಕರೆಯ ಫ್ಲೈಟ್ ನೋಡಲು ಮನಮೋಹಕ!

ಬಣ್ಣದ ಕೊಕ್ಕರೆಗಳು ಆಹಾರಕ್ಕಾಗಿ ಆಳವಿಲ್ಲದ ನೀರಿನಲ್ಲಿ ಹಿಂಡು ಹಿಂಡಾಗಿ  ನದಿ ಮತ್ತು ಸರೋವರದ ಉದ್ದಗಲದಲ್ಲಿ ತಡಕಾಡುತ್ತವೆ.ಒಂಟಿಕಾಲಿನ ಮೇಲೆ ತಪಸ್ಸಿಗೆ ನಿಂತ ಋಷಿಯಂತೆ ಗಂಟೆಗಟ್ಟಲೇ ಮೀನುಗಳ ಬೇಟೆಗಾಗಿ ಕಾಯುತ್ತವೆ.ಅರ್ಧ ತೆರೆದ ಕೊಕ್ಕನ್ನು ನೀರಿನಲ್ಲಿ ಮುಳುಗಿಸಿ ಕಸ ಗೂಡಿಸಿದಂತೆ  ಕ್ಷಿಪ್ರವಾಗಿ ಅಕ್ಕ ಪಕ್ಕದಲ್ಲಿ ಹೊಯ್ದಾಡಿಸಿ ಕೇವಲ ಸ್ಪರ್ಶ ಸಂವೇದನೆಯಿಂದ ಸಣ್ಣ ಮೀನುಗಳನ್ನು ಪಟಪಟನೆ  ಹಿಡಿದು ತಿನ್ನುತ್ತವೆ.  ಆಳವಿಲ್ಲದ ನೀರಿನಲ್ಲಿ ಚಲಿಸುವಾಗ  ತಮ್ಮ ಪಾದಗಳಿಂದ ನೀರನ್ನು ಚದುರಿಸಿ ಅಡಗಿರುವ ಮೀನುಗಳನ್ನು ಹೊರ ಬರುವಂತೆ ಮಾಡುತ್ತವೆ. ಇವುಗಳು ಕೆಲ ಸಾರಿ ಕಪ್ಪೆ ಮತ್ತು ಚಿಕ್ಕ ಹಾವುಗಳನ್ನೂ ಬೇಟೆಯಾಡಿ ಭಕ್ಷಿಸುತ್ತವೆ.  ಬಣ್ಣದ ಕೊಕ್ಕರೆಗಳು ಗುಂಪು ಗುಂಪಾಗಿ ನದಿ ಸರೋವರದಲ್ಲಿರುವ ಗಿಡ ಮರಗಳಲ್ಲಿ,ಬಹುತೇಕವಾಗಿ  ನೀರಿನಲ್ಲಿ  ವಾಸಿಸುವ ಇತರೆ ಪಕ್ಷಿಗಳೊಂದಿಗೆ ಗೂಡು ಕಟ್ಟಿ ಮನೆ ಮಾಡುತ್ತವೆ. ಬಹುತೇಕ ನಿಶ್ಯಬ್ದವಾಗಿರುವ ಬಣ್ಣದ ಕೊಕ್ಕರೆಗಳ ಕೊಕ್ಕಿನಿಂದ ಹೊರಹೊಮ್ಮುವ ಧ್ವನಿ ನೋವಿನಿಂದ ನರಳಾಡುವ ಸಣ್ಣ  ನಾದದಂತೆ ಇದ್ದು  ಗೂಡಿನಲ್ಲಿ ಚು೦ಚುಗಳ (ಬಿಲ್’ಗಳ ಕ್ಲಾಟರಿಂಗ್) ಗುಟುರುವಿಕೆಯು ಧ್ವನಿ ಜೋರಾಗಿರುತ್ತದೆ. ಸಾಮಾನ್ಯವಾಗಿ ನದಿ ಸರೋವರಗಳ ಸುತ್ತ ವಾಸಿಸುವ ಇವುಗಳು ಮಾನ್ಸೂನ್’ನಲ್ಲಿ ನೀರಾವರಿಯ ಕಾಲುವೆಗಳು ಹಾಗೂ ಭತ್ತದ ಗದ್ದೆಗಳಲ್ಲಿಯೂ ಕಂಡು ಬರುತ್ತವೆ. ಬಣ್ಣದ ಕೊಕ್ಕರೆಗಳು ಒಂದೇ ಪ್ರದೇಶದ ರಹವಾಸಿ (ರೆಸಿಡ೦ಟ್) ಹಕ್ಕಿಗಳಾಗಿದ್ದು ಹವಾಮಾನಕ್ಕನುಸಾರವಾಗಿ ಕೆಲ ಚಲನವಲನಗಳನ್ನು ಮಾಡುತ್ತವೆ. ತಾರುಣ್ಯದಲ್ಲಿರುವ ಕೆಲ ಬಣ್ಣದ ಕೊಕ್ಕರೆಗಳು ನೂರಾರು ಕಿಲೋಮೀಟರನಷ್ಟು ಚಲಿಸಿರುವ ಕುರಿತು ಪ್ರಮಾಣಗಳಿವೆ.

ಬಣ್ಣದ ಕೊಕ್ಕರೆಗಳ ಸಂತಾನೋತ್ಪತ್ತಿಯ ಋತು  ಮಾನ್ಸೂನ್ ನಂತರ ಚಳಿಗಾಲದಲ್ಲಿ  ಪ್ರಾರಂಭವಾಗಿ ಫೆಬ್ರುವರಿ ತಿಂಗಳಿನವರೆಗೆ ಮುಂದುವರೆಯುತ್ತದೆ. ಬಣ್ಣದ ಕೊಕ್ಕರೆಗಳು ಒಂದು ಬಾರಿಗೆ ಸುಮಾರು ಒಂದರಿಂದ ಐದಾರು ಮೊಟ್ಟೆಗಳನ್ನಿಟ್ಟು, ಒಂದು ತಿಂಗಳ ಕಾಲ ಕಾವು ಕೊಟ್ಟು ನಂತರ ಸುಂದರವಾದ ಪುಟ್ಟ ಮರಿ ಕೊಕ್ಕರೆಗಳು ಮೊಟ್ಟೆಯಿಂದ ಹೊರ ಹೊಮ್ಮುತ್ತವೆ. ಸುಮಾರು ಎರಡು ತಿಂಗಳ ಕಾಲ ಮರಿಗಳಿಗೆ ಚಿಕ್ಕ ಮೀನಿನ ಗುಟುಕು ಕೊಟ್ಟು ಹಾರಡಲು ಸಿದ್ಧಗೊಳಿಸುತ್ತವೆ. ಗೂಡಿನಲ್ಲಿ  ಬಿಸಿಲಿನಿಂದ ಮರಿಗಳನ್ನು ರಕ್ಷಿಸಲು ತಮ್ಮ ರೆಕ್ಕೆಗಳನ್ನು ಹರಡಿ ಮರಿಗಳಿಗೆ ನೆರಳು ನೀಡಿ ಮಾನವನಿಗಿಂತ ಮಿಗಿಲಾಗಿ ತಾಯ್ತನವನ್ನು ತೋರುತ್ತವೆ.

ಬಣ್ಣದ ಕೊಕ್ಕರೆಗಳು ಆಯುಷ್ಯ ಸುಮಾರು 20 ರಿಂದ 30 ವರುಷ. ಒಂದು ಮಧ್ಯಮ ಗಾತ್ರದ ಬಣ್ಣದ ಕೊಕ್ಕರೆ 2 ರಿಂದ 3 ಕೆ.ಜಿ. ತೂಕ ಹೊ೦ದಿದ್ದು,  93 ರಿಂದ 103 ಸೆ.ಮೀ ಎತ್ತರ, 150 ರಿಂದ 160 ಸೆ.ಮೀ ಅಗಲವಾದ  ರೆಕ್ಕೆಗಳನ್ನು ಹೊಂದಿರುತ್ತದೆ. ಗಂಡು ಮತ್ತು ಹೆಣ್ಣು, ಬಣ್ಣದ ಕೊಕ್ಕರೆಗಳು ನೋಡಲು ಒಂದೇ ಥರ ಕಂಡರೂ ಆಕಾರದಲ್ಲಿ ಗಂಡು ದೊಡ್ಡದಾಗಿರುತ್ತದೆ. ಜನವಸತಿಯ  ಹತ್ತಿರದಲ್ಲಿರುವ ಬಣ್ಣದ ಕೊಕ್ಕರೆಗಳ ಕೇಂದ್ರಗಳಾದ ನಮ್ಮ ಕರ್ನಾಟಕದ ಕೊಕ್ಕರೆ ಬೆಳ್ಳೂರು, ಮೈಸೂರಿನ ರ೦ಗನತಿಟ್ಟು, ಅಲಮಟ್ಟಿಯ ಜಲಾಶಯದ ಸುತ್ತ ಮುತ್ತ,ಆಂಧ್ರಪ್ರದೇಶದ ಗುಂಟೂರ್’ನ ಉಪ್ಪಲಪಾಡು, ರಾಜಸ್ಥಾನದ ಘಾನಾ ರಾಷ್ಟ್ರೀಯ ಉದ್ಯಾನ ವನ, ಪ್ರವಾಸಿಗರ ಆಕರ್ಷಣೀಯ ಕೇಂದ್ರಗಳಾಗಿವೆ.

ವಿಶೇಷವಾಗಿ ಕೊಕ್ಕರೆ ಬೆಳ್ಳೂರಿನಲ್ಲಿ ಹಳ್ಳಿಯ ಜನನಿಬಿಡ ಪ್ರದೇಶಗಳ ಗಿಡ ಮರಗಳಲ್ಲಿ ಬಣ್ಣದ ಕೊಕ್ಕರೆಗಳು ನೀರು ಹಕ್ಕಿಗಳ (ಸ್ಪಾಟ್ ಬಿಲ್ಡ್ ಪೇಲಿಕನ್) ಜೊತೆ ಸೇರಿ ಗೂಡು ಕಟ್ಟುತ್ತವೆ. ಬಣ್ಣದ ಕೊಕ್ಕರೆಗಳ ಗೂಡುಕಟ್ಟಿ ಸಂಸಾರ ಹೂಡುವ ಈ ಕಾಲದಲ್ಲಿ  ಕೊಕ್ಕರೆ ಬೆಳ್ಳೂರಿನ ಸ್ಥಳೀಯ ನಿವಾಸಿಗಳು ಭದ್ರತೆಯೊದಗಿಸಿ ಬೇಟೆಗಾರರಿಂದ ಬಣ್ಣದ ಹಕ್ಕಿಗಳನ್ನು ರಕ್ಷಿಸಿ ಮಾನವೀಯತೆಯನ್ನು ಮೆರೆಯುತ್ತಾರೆ. ಬಣ್ಣದ ಚಿತ್ತಾರದ ಕೊಕ್ಕರೆಗಳು ಭಾರತದಲ್ಲಿ ಬಹುತೇಕವಾಗಿ ಸುರಕ್ಷಿತವಾಗಿವೆ, ಆದರೆ ಪಾಕಿಸ್ತಾನದಲ್ಲಿ ಸಿಂಧೂ ನದಿಯ ಉದ್ದಕ್ಕೂ ಅಪಾಯವನ್ನು ಎದುರಿಸುತ್ತಿವೆ. ಪಾಕಿಸ್ತಾನ,ಚೀನಾ,  ಥೈಲ್ಯಾಂಡ್,ಲಾವೋಸ್,ವಿಯೆಟ್ನಾಮ್,ಕಾಂಬೋಡಿಯಾ,ಮಲೇಷಿಯಾ ದೇಶಗಳಾದ್ಯಂತ ಬಣ್ಣದ ಕೊಕ್ಕರೆಗಳ ಕುಸಿಯುತ್ತಿರುವ ಸಂಖ್ಯೆಯ ಕಾರಣದಿಂದ ಇವುಗಳನ್ನು ಅಪಾಯದ ಅಂಚಿನಲ್ಲಿರುವ (Near-endangered or near-threatened) ಪಕ್ಷಿ ಪ್ರಭೇದವೆಂದು ವರ್ಗೀಕರಿಸಲಾಗಿದೆ. ಪಾಕಿಸ್ತಾನ ಮತ್ತು ಇನ್ನೂ ಕೆಲ ದೇಶಗಳಲ್ಲಿ ಗೂಡಿನಿಂದ ಮರಿಗಳನ್ನು ಕದ್ದು ವ್ಯಾಪಾರ ಮಾಡುವುದು ಹಾಗೂ ಹಕ್ಕಿಗಳನ್ನು ಬೇಟೆಯಾಡಿ ತಿನ್ನುವುದು ಲಂಗು ಲಗಾಮಿಲ್ಲದೆ ಅವ್ಯಾಹತವಾಗಿ ನಡೆಯುತ್ತಿದೆ. ಕ್ರೂರಿ ಮಾನವನ ಆಸೆಗೆ ಪಾರವೇ ಇಲ್ಲವೇ? ಮೂಕ ಪ್ರಾಣಿ ಪಕ್ಷಿಗಳನ್ನು ಕೊಂದು ಹೊಟ್ಟೆ ತುಂಬಿಸಿಕೊಳ್ಳುವ ಈ ಪ್ರವೃತ್ತಿಗೆ ಕೊನೆ ಎಂದು? ಭಗವಂತನ ಅಗಾಧ ಸೃಷ್ಟಿಯ ಬಣ್ಣದ ಕೊಕ್ಕರೆಗಳ ಸೌಂದರ್ಯವನ್ನು ಸವೆಯುವದನ್ನು ಬಿಟ್ಟು ತಿಂದು ತೇಗುವ ತೀಟೆಯನ್ನು ಬಿಟ್ಟು ವಿಶ್ವ ಮಾನವನಾಗಿ ಬದುಕುವದು ಸಿಂಧುವಲ್ಲವೇ??

Facebook ಕಾಮೆಂಟ್ಸ್

Srinivas N Panchmukhi: ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.
Related Post