X

ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು

ನಮಾಮಿ ನಾರಾಯಣ ಪಾದ ಪಂಕಜಂ

ಕರೋಮಿ ನಾರಾಯಣ ಪಾದ ಪೂಜನಂ

ವದಾಮಿ ನಾರಾಯಣ ನಾಮ ನಿರ್ಮಲಂ ಸದಾ

ಸ್ಮರಾಮಿ ನಾರಾಯಣ ನಾಮಮವ್ಯಯಂ

ಓಂ ಶ್ರೀ ಗುರುಭ್ಯೋ ನಮಃ”

ಮಹಾಭಾರತದಲ್ಲಿ ಶ್ರೀಕೃಷ್ಣನ್ನು ಪ್ರಪಂಚದಲ್ಲಿ ಅಧರ್ಮ ಯಾವಾಗ ಹೆಚ್ಚಾಗುತ್ತೋ, ಅದನ್ನು ಮಟ್ಟ ಹಾಕಿ ಧರ್ಮವನ್ನು ಪುನರ್ಸ್ಥಾಪಿಸಲು ನಾನು ಮತ್ತೆ ಜನ್ಮ ತಾಳುತ್ತೇನೆ ಐತಿಹ್ಯವಿದೆ. ಭಾರತದ ನೆಲದಲ್ಲಿ ಅಶಾಂತಿ, ದೌರ್ಜನ್ಯ, ಮತಾಂತರ ಹೀಗೆ ನಮ್ಮ ಆಚಾರ ಪರಂಪರೆಗೆ ಧಕ್ಕೆಯಾದ ಸಂದರ್ಭದಲ್ಲಿ ಅನೇಕ ಯುಗ ಪುರುಷರು ಜನ್ಮ ತಾಳಿದ್ದಾರೆ. ಹಾಗೆ ಜನಿಸಿದವರಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿಜಿಯವರು. ತಮ್ಮದೇ ಆದ ರೀತಿಯಲ್ಲಿ ದುಷ್ಟ ಪದ್ಧತಿಗಳಿಂದ ಜನತೆಯನ್ನು ಉದ್ಧರಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸಮಾಜದಲ್ಲಿ ಸುಧಾರಣೆ ತರಲು ಯತ್ನಿಸಿ, ನಮ್ಮ ಧರ್ಮ ಸಂಸ್ಕೃತಿಗಳನ್ನು ರಕ್ಷಿಸಿ ಮಹದೋಪಕಾರ ಮಾಡಿದ್ದಾರೆ.

ಕೇರಳ ರಾಜ್ಯದಲ್ಲಿ ಮದನ್ ಆಸನ್ ಮತ್ತು ಕುಟ್ಟಿ ಅಮ್ಮಾಳ್ ಎಂಬ ದಂಪತಿಗಳಿಗೆ ನಾರಾಯಣ ಗುರು ಜನಿಸಿದರು. ಕೇರಳದಲ್ಲಿ ಜಾತಿ, ಮತ ಭೇದಗಳು ನಡುವೆ ಅಸ್ಪ್ರಶ್ಯತೆ ಹೆಚ್ಚಾಗಿದ್ದ ಕಾಲದಲ್ಲಿ ಶ್ರೀ ನಾರಾಯಣ ಗುರು ಅವಾತರಿಸುತ್ತಾರೆ. ನಂತರಾದ ದಿನಗಳಲ್ಲಿ ಸಮಾಜದಲ್ಲಿ ಬೇರುರಿದ್ದ ಅಸ್ಪ್ರಶ್ಯತೆಯಾ ವಿರುದ್ಧ ಹೋರಾಟಕ್ಕೆ ತಮ್ಮ ಜೀವನವನ್ನೆ ಮೀಸಲಿಡುತ್ತಾರೆ.

“ಜಗತ್ತಿನಲ್ಲಿ ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು”

ನಾರಾಯಣ ಗುರು ಸ್ವಾಮಿಯವರು ಪ್ರತಿಪಾಸಿದ ತತ್ವಗಳಲ್ಲಿ ಮುಖ್ಯವಾದ “ಜಗತ್ತಿನಲ್ಲಿ ಒಂದೇ ಜಾತಿ, ಒಂದೇ ಮತ, ಹಾಗೂ ಒಂದೇ ದೇವರು'”. ಸಮಾಜದಲ್ಲಿ ಜಾತಿ – ಜಾತಿಗಳ ಮದ್ಯೆ ಅಸ್ಪ್ರಶ್ಯತೆ ನೆಲೆ ನಿಂತ ಕಾಲದಲ್ಲಿ ನಾರಾಯಣ ಗುರು ಸ್ವಾಮಿಯವರು ದೇಶ ಸೇವೆಯೇ ಈಶ ಸೇವೆಯೆಂದು ನೊಂದ ಜನರ ಸಮಸ್ಯೆಗಳನ್ನು ಪರಿಹರಿಸುತಿದ್ದರು. ಕೇರಳದಲ್ಲಿ ಮೇಲ್ಜಾತಿ , ಕೆಳಜಾತಿ ಅಸ್ಪ್ರಶ್ಯತೆಗಳಿಂದ, ಜಾತಿಗಳ ಮಧ್ಯೆ ಸಮಸ್ಯೆಗಳಿಂದ ಅಲ್ಲಿಯ ಕೆಳಜಾತಿಯ ಜನರ ರೋಸಿ ಹೋಗಿದ್ದರು. ನಾರಾಯಣ ಗುರುಗಳು ಹುಟ್ಟುವ ಕಾಲದಲ್ಲಿ ಜಾತೀಯತೆ ಎಂಬ ಭೂತ ಬಹುದೊಡ್ಡ ಮಟ್ಟದಲ್ಲಿ ಬೆಳೆಯುತ್ತಿತ್ತು. ಗುರು ಸ್ವಾಮಿಯವರು ಕೇರಳದಲ್ಲಿ ಆ ಕಾಲದಲ್ಲಿ ಕೆಳಜಾತಿಯವರು ಎಂದು ಗುರುತಿಸುತ್ತಿದ್ದ ತೀಯಾ( ಈಳವ, ಬಿಲ್ಲವ ) ಸಮಾಜದಲ್ಲಿ ಜನಿಸಿದರು. ಕೆಳಜಾತಿಯಲ್ಲಿ ಜನಿಸಿದ ಜನರು ಮೇಲ್ಜಾತಿಯವರ ತುಳಿತಕ್ಕೆ ನಲುಗಿ ಹೋಗಿದ್ದರು. ದೇವಸ್ಥಾನಗಳಿಗೆ ಪ್ರವೇಶವಿರಲಿಲ್ಲ, ಮೇಲ್ಜಾತಿಯವರು ನಡೆದು ಬರುವ ದಾರಿಯಿಂದ ದೂರವಿರಬೇಕಾಗಿತ್ತು ಹೀಗೆ ಅನೇಕ ಅಸ್ಪ್ರಶ್ಯತೆ ಸಮಾಜದಲ್ಲಿ ನೆಲೆ ನಿಂತಿತ್ತು. ಹೀಗೆ ನೆಲೆ ನಿಂತಿದ್ದ ಅನೇಕ ಸಮಸ್ಯೆಗಳನ್ನು ಗುರು ಸ್ವಾಮಿಯವರು ತೊಡೆದು ಹಾಕಲು ಆಂದೋಲನವನ್ನೇ ಮಾಡಿದರು

ನಾರಾಯಣ ಗುರು ಸ್ವಾಮಿಯವರು ಅಧ್ಯಾತ್ಮ, ಧಾರ್ಮಿಕ ಅರಿವನ್ನು ಅರಸಿಕೊಂಡು ಸತ್ಯ ಅನ್ವೇಷಣೆಗಾಗಿ ಮನೆಯನ್ನು ಬಿಟ್ಟು ಏಕಾಂತದಲ್ಲಿ ತಪಸ್ಸನ್ನು ಮಾಡುತ್ತ ಅನೇಕ ಸ್ಥಳಗಳನ್ನು ಸಂಚರಿಸಿದರು. ಹೀಗೆ ತಮ್ಮ ಅಧ್ಯಾತ್ಮ ಜೀವನದಲ್ಲಿ ಕಲಿತ ಅನೇಕ ವಿಷಯಗಳನ್ನು ಸಮಾಜದ ಮುಂದೆ ಜನರಿಗೆ ಹೇಳಿಕೊಡುತ್ತಿದ್ದರು. ತಮ್ಮ ಜೀವನ ತುಂಬಾ ಸರಳವಾಗಿ ಜೀವಿಸುತ್ತಾ ಸಮಾಜಕ್ಕೆ ಮಾದರಿಯಾಗಿ ಅಸ್ಪ್ರಶ್ಯತೆಯ ವಿರುದ್ಧ ಹಿಂಸಾಚಾರ ರಹಿತ ಚಳುವಳಿಯನ್ನು ಮಾಡಿ ಮನುಕುಲಕ್ಕೆ ಮಾದರಿಯಾಗಿದ್ದಾರೆ.

ದೇವಾಲಯಗಳ ಸ್ಥಾಪನೆ

ಆ ಕಾಲದಲ್ಲಿ ಮೇಲ್ಜಾತಿಯ ತುಳಿತದಿಂದ ದೇವಾಲಯಗಳಿಗೆ ಕೆಳಜಾತಿಯ ಸಮುದಾಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಇದು ಗುರು ಸ್ವಾಮಿಯವರಿಗೆ ಅಸಮಾಧಾನವಿತ್ತು. ಇದರ ಫಲವಾಗಿ 1888ರಲ್ಲಿ ಅರವಿಪುರದಲ್ಲಿ ಮೊದಲ ಲಿಂಗ ಪ್ರತಿಷ್ಠಾಪಿಸಿದರು. ಇದರಿಂದ ಶೋಷಿತ ಜನರಿಗೆ ದೇವಾಲಯದ ಪ್ರವೇಶ ಪಡೆಯುವಂತಾಯಾಯಿತು. ಮತ್ತು ನಂತರ ದಿನಗಳಲ್ಲಿ ಹಲವಾರು ಕಡೆಗಳಲ್ಲಿ ದೇವಾಲಯದ ನಿರ್ಮಾಣವಾಯಿತು. ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದ ಜನರನ್ನು ಸಂಘಟಿಸುವ ಮೂಲಕ ತಮ್ಮ ಜೀವನದ ಧ್ಯೇಯವೆಂದು ತೋರಿಸಿಕೊಟ್ಟರು. 1921ರಲ್ಲಿ ಸಮಾಜದ ಎಲ್ಲಾ ವರ್ಗದವರನ್ನು ಒಂದು ಕಡೆ ಸೇರಿಸಿ ವಿಶ್ರ ಭೋಜನ ಕಾರ್ಯಕ್ರಮವನ್ನು ನಡೆಸಿದರು. ಇದರಿಂದ ವೀರಸಂತನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಕಾಲದಲ್ಲಿ ಜಾತಿಯ ತುಳಿತದಿಂದ ನಲುಗಿದ್ದ ಲಾಭವನ್ನು ಪಡೆಯಲು ಮತಾಂತರ ಮಾಡುವ ಪ್ರಯತ್ನ ನಡೆಯುತಿತ್ತು ಇದನ್ನು ಅರಿತ ನಾರಾಯಣ ಗುರುಗಳು ಜನರಿಗೆ ನಮ್ಮ ಧರ್ಮದ ವಿಷಯವನ್ನು ತಿಳಿಸುತ್ತಿದ್ದರು. ಬದಲಾಗಿ ಮಂತಾಂತರವನ್ನು ಒಪ್ಪಿಕೊಳ್ಳಲಿಲ್ಲ. ಹೀಗೆ ಧರ್ಮ ಜಾಗೃತಿಯ ಜೊತೆಗೆ ಸಮಾಜದ ಸಂಘಟಿಸುವ ಮಹತ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಮಹಾತ್ಮಗಾಂಧಿ, ರವೀಂದ್ರನಾಥ ಠಾಗೋರರು ಮತ್ತು ನಾರಾಯಣ ಗುರುಗಳು ಭೇಟಿ

ಸಮಾಜದಲ್ಲಿನ ಅಸ್ಪ್ರಶ್ಯತೆ ವಿರುದ್ಧ ಗುರುಗಳು ನಡೆಸಿದ ಹೋರಾಟದಿಂದ ಗಾಂಧೀಜಿಯವರು ಪ್ರೇರಿತರಾಗಿದ್ದರು. ಇದರಿಂದ ಗುರುಗಳನ್ನು ಸ್ವತಃ ಭೇಟಿ ಮಾಡುವ ಇಚ್ಛೆಯನ್ನು ಗಾಂಧೀಜಿಯರು ಮಾಡಿದ್ದರು. ಇದಕ್ಕಾಗಿ ಗಾಂಧೀಜಿಯವರ ಮೆಚ್ಚಿನ ಅನುನಾಯಿಯಾಗಿದ್ದ ವಿನೋಬಾ ಭಾವೆಯವರನ್ನು ತಮ್ಮ ಪ್ರತಿನಿಧಿಯಾಗಿ ಶಿವಗಿರಿಗೆ ಕಳುಹಿಸಿದರು. ಗುರುಗಳು ಶಿವಗಿರಿಯಲ್ಲಿ ಮಾಡಿದ ಕಾರ್ಯಗಳನ್ನು ಕಂಡು ಅಚ್ಚರಿಗೊಂಡರು. ಗುರುಗಳ ಕಾರ್ಯಗಳನ್ನು ಗಾಂಧೀಜಿಯವರಿಗೆ ತಿಳಿಸಿದರು ವಿನೋಬಾ ಭಾವೆ, ನಂತರ ಭೇಟಿಯ ದಿನವೂ ನಿಗದಿಯಾಯಿತು. ಇದನ್ನು ಅರಿತ ಸುತ್ತಮುತ್ತಲಿನ ಅನೇಕ ಜನರು ಈ ಅವಿಸ್ಮರಣೀಯ ಕ್ಷಣಗಳನ್ನು ನೋಡಲು ಬಂದರು. ಆ ಭೇಟಿಯಲ್ಲಿ ಅನೇಕ ಚರ್ಚೆಗಳು ನಡೆದವು ಹೀಗೆ ಸಮಾಲೋಚನೆಯ ಸಂದರ್ಭದಲ್ಲಿ “ಒಂದೇ ಮರದ ರೆಂಬೆ, ಎಲೆ ಮತ್ತು ಹಣ್ಣು ಕಾಯಿಗಳಲ್ಲಿ ವ್ಯತ್ಯಾಸವಿರುವಂತೆ, ಜಾತಿಗಳು ಅಸ್ತಿತ್ವದಲ್ಲಿವೆಯಲ್ಲವೇ”, ಹತ್ತಿರದಲ್ಲಿದ್ದ ವೃಕ್ಷವೊಂದನ್ನು ತೋರಿಸುತ್ತಾ ಪ್ರಶ್ನಿಸಿದರು. ಅದಕ್ಕೆ ಪ್ರತಿವಾದ ಮಾಡುವ ಬದಲಿಗೆ, ಅನನ್ಯವಾದ ಜಾಣತನ ಹೊಂದಿದ್ದ ಗುರುಗಳು, “ಆದರೆ, ಅದೇ ಎಲೆಗಳ ಅಥವಾ ಹಣ್ಣಿನ ರಸದ ರುಚಿಯಲ್ಲಿ ವ್ಯತ್ಯಾಸವಿರಿವುದಿಲ್ಲ.” ಎಂದು ಶಾಂತಚಿತ್ತರಾಗಿ ನುಡಿದರು. ಇಂತಹ ವಿಚಾರಗಳಿಂದ ಗಾಂಧೀಜಿಯರು ನಾರಾಯಣ ಗುರು ಸ್ವಾಮಿಯ ಬಗ್ಗೆ ಭಕ್ತಿಯನ್ನು ಹೊಂದಿದ್ದರು.

ಅದೇ ರೀತಿ ವಿಶ್ವಕವಿ ರವೀಂದ್ರನಾಥ ಠಾಗೋರರು, ಶ್ರೀ ನಾರಾಯಣ ಗುರುಗಳನ್ನು ಭೇಟಿಯಾಗಲು ಶಿವಗಿರಿಗೆ ಬಂದಿದ್ದರು. 1922ರ ನವಂಬರ್‍ ತಿಂಗಳು 22ನೇ ತಾರೀಕಿನಂದು ವಿಶ್ವಕವಿ ರವಿಂದ್ರನಾಥ ಠಾಗೋರರು ಶಿವಗಿರಿಗೆ ಪಾದಾರ್ಪಣೆ ಮಾಡಿದರು. ಇಬ್ಬರು ಮಹಾಪುರುಷರ ಸಮ್ಮಿಲನವಾಯಿತು. ಪರಸ್ಪರ ಭೇಟಿಯಿಂದ ಅನೇಕ ಸಮಸ್ಯೆಗಳ ಕುರಿತು ಮಾತನಾಡಿದರು ಮತ್ತು ಗುರುಗಳ ವಿಚಾರಧಾರೆಗಳನ್ನು ಠಾಗೋರರು ಮೆಚ್ಚಿ ಪ್ರಭಾವಿತರಾದರು. ನಂತರ ಠಾಗೋರ್‍ ಅವರು ಗುರುಗಳಿಗೆ ಶಿರಬಾಗಿ ವಂದಿಸಿದರು. ಹೀಗೆ ಅನೇಕ ಮಹಾನ್ ವ್ಯಕ್ತಿಗಳೊಂದಿಗೆ ಗುರುಸ್ವಾಮಿಗಳು ಒಡನಾಟದಲ್ಲಿದ್ದರು.

ಕೇರಳದಲ್ಲಿ ಮೇಲ್ಜಾತಿಯ ಸಮುದಾಯದ ಆಕ್ರಮಣಗಳಿಂದ ಆರ್ಥಿಕ, ರಾಜಕೀಯ, ಸಾಮಾಜಿಕ, ಧಾರ್ಮಿಕ ಪಿಡುಗುಗಳಿಂದ, ಗುಲಾಮಗಿರಿ, ಜಾತಿ ಪದ್ಧತಿ, ಅಸ್ಪೃಶ್ಯತೆ, ಸತಿ ಸಹಗಮನ ಬಾಲ್ಯ ವಿವಾಹ, ಅನಕ್ಷರತೆ ನಲುಗಿದ್ದ ಕಾಲದಲ್ಲಿ ಶ್ರೀ ನಾರಾಯಣ ಗುರು ಸ್ವಾಮಿಯವರ ಸಮಾಜ ಸುಧಾರನೆಯಿಂದ ದುಷ್ಟ ಪದ್ಧತಿಗಳಿಂದ ಜನತೆಯನ್ನು ಉದ್ಧರಿಸಲು ಜೀವನದ ಕೊನೆಯವರೆಗೂ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ. ಅನೇಕಾ ಸುಧಾರಣೆ ತರಲು ಯತ್ನಿಸಿ, ಧರ್ಮ ಸಂಸ್ಕೃತಿಗಳನ್ನು ರಕ್ಷಿಸಿಸುವ ಮಹದೋಪಕಾರ ಮಾಡಿದ್ದಾರೆ. ಇಂತ ಮಹಾತ್ಮರ ಪುಣ್ಯ ಕಾರ್ಯಗಳಿಂದ ನಮ್ಮ ಸಮಾಜ ಇಂದಿಗೂ ಬಲಿಷ್ಠವಾಗಿದೆ. ಇದರಿಂದ ನಾವೆಲ್ಲ ನಾರಾಯಣ ಗುರು ಸ್ವಾಮಿಗಳ ತತ್ವ, ಸಿದ್ದಂತಾ, ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಕೆಲಸವಾಗಬೇಕಾಗಿದೆ.

– ರವಿವರ್ಮ. ಎ

ravivarma.munna@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post