ನಾನು ಈ ರೀತಿ ಹೇಳಿದ್ದೆಲ್ಲಾ ಕೇಳಿ ಲೂಸಿ ತನ್ನ ಆಫೀಸಿನಲ್ಲಿ ಬಹಳೇ ಅಚ್ಚರಿಪಟ್ಟಳು..
“ ವಿಜಯ್, ನನಗನಿಸುವ ಮಟ್ಟಿಗೆ ನಾವು ಮಾಡಿರುವ ಪ್ರಗತಿ ಆಶಾದಾಯಕವಾಗಿಯೇ ಇದೆ..ಮುಂದೇನಾದರೂ ದಾರಿ ಹುಡುಕಿ ರಚನಾ ಸುಮಾರು ೧೬ ವರ್ಷ ತರುಣಿಯಾಗಿದ್ದಾಗ ಯಾವ ಯುವಕನೊಂದಿಗೆ ಸಂಬಂಧ ಬೆಳೆಸಿ ಗರ್ಭಿಣಿಯಾದಳು ತಿಳಿದುಕೊಳ್ಳಬೇಕು..ಅವಳಪ್ಪ ಅಮ್ಮ ಸುಲಭವಾಗಿ ಗರ್ಭಪಾತ ಮಾಡಿಸಿ ಅವರು ಈ ಸಮಸ್ಯೆಯನ್ನು ಆಲ್ಲೇ ಕೊನೆಗೊಳಿಸಬಹುದಾಗಿತ್ತು. ಆದರೂ ಏಕೆ ಆಕೆಗೆ ಗರ್ಭಪಾತ ಮಾಡಿಸದೆ, ಮಗು ಹೆತ್ತು ಕದ್ದು ಮುಚ್ಚಿ ದತ್ತು ಕೊಡುವಂತೆ ಮಾಡಿದರು ಎಂಬುದು ನನಗೆ ಕಾಡುತ್ತಿದೆ..”ಎಂದಳು.
“ ಹೌದು, ಲೂಸಿ, ನಾನು ಯೋಚಿಸಿ ನೋಡಿದೆ,,ಇನ್ನೂ ನಾವು ತಿಳಿದುಕೊಳ್ಳುವುದು, ಬಹಿರಂಗ ಪಡಿಸಬೇಕಾಗಿರುವುದು ಬಹಳವಿದೆ ಎನಿಸುತ್ತಿದೆ..ನನಗೆ ಬಹಳ ಆಯಾಸವಾಗಿದೆ..ನನ್ನ ರೂಮಿನಲ್ಲಿ ಕುಳಿತು ಸ್ವಲ್ಪಹೊತ್ತು ಇದನ್ನೆಲ್ಲಾ ಒಂದು ವರದಿಯಂತೆ ಬರೆದಿಡುತ್ತೇನೆ..ಬರೆಯುತ್ತ ಬರೆಯುತ್ತಾ ಏನಾದರೂ ಜ್ಞಾನೋದಯವಾಗಬಹುದು..ಆದರೆ ನಿನಗೆ ತಕ್ಷಣ ತಿಳಿಸುತ್ತೇನೆ “ ಎಂದೆದ್ದೆ.
ಲೂಸಿ ನನ್ನತ್ತ ಅರ್ಥಗರ್ಭಿತವಾಗಿ ಮುಗುಳ್ನಗುತ್ತಾ, “ಯುರೇಕಾ ಅನ್ನುವಂತೆಯೆ?…ಹಾಗೇನಾದರೂ ನಿಮ್ಮ ಜಾಣ ಬುದ್ದಿಗೆ ಹೊಳೆದರೆ, ನಾಳೆ ಮಧ್ಯಾಹ್ನದ ಊಟದ ಟ್ರೀಟ್ ನನ್ನದು.. ಇಲ್ಲಿ ಹೊಸ ಪಂಜಾಬಿ ಢಾಬಾ ಆಗಿದೆ, ಅಲ್ಲಿಗೆ ಹೋಗೊಣಾ ಎಂದು ಬಹಳ ದಿನದಿಂದ ಯೋಚಿಸುತ್ತಿದ್ದೆ..” ಎಂದು ಅಲ್ಲೇ ನಿಲ್ಲಿಸಿದಳು.
“ಓಕೇ..ನೋಡುವಾ…ಗುಡ್ ನೈಟ್!“ ಎಂದು ಹೊರಗೆ ಬಂದೆ. ನನ್ನ ಜಾಣ ಬುದ್ದಿಗೆ ಎಂದು ಲೂಸಿ ಅಂದಿದ್ದರಲ್ಲಿ ನನಗೇನೂ ಹೆಮ್ಮೆಯಾಗಲೀ ಸತ್ಯವಾಗಲೀ ಕಾಣಿಸಲಿಲ್ಲ. ‘ಪೆದ್ದು ಬುದ್ದಿ ’ಗೆ ಎನ್ನಬಹುದಾಗಿತ್ತೇನೋ!
ಅಂದು ರಾತ್ರಿ ನಾನು ಹೇಳಿದಂತೆ ಆ ವರದಿಯನ್ನು ಬರೆಯುತ್ತಾ ಹೋದೆ..ಅರ್ಥ ಸಿಗದ ಕೊಂಡಿಗಳಿಗೆ ಪ್ರಶ್ನಾರ್ಥಕ ಚಿಹ್ನೆಯಿತ್ತೆ…ಪ್ರಶ್ನೆಗಳನ್ನು ಅಂಡರ್-ಲೈನ್ ಮಾಡಿದೆ.. ಒಮ್ಮೆ ಬರೆದಿದ್ದೆಲ್ಲವನ್ನೂ ಪರಿಶೀಲನೆ ಮಾಡಿದೆ
ಅದರಲ್ಲಿ ನನಗೆ ಎದ್ದು ಕಾಣಿಸಿದ ಪದವೆಂದರೆ: ಜಾನಿ…ಜಾನಿ!
ಬೆಳಿಗ್ಗೆಯೆದ್ದು ಕಾಫಿ ತಿಂಡಿ ಮುಗಿಸಿ ಮತ್ತೆ ಸೂಲಗಿತ್ತಿ ಸುಬ್ಬಮ್ಮನನ್ನು ಭೇಟಿಮಾಡಿ ನೊಡೋಣವೆನ್ನಿಸಿತು ಇನ್ನೇನಾದರೂ ಆಕೆ ಒಗಟಿನಂತೆ ಹೇಳಿಯಾಳೆ?. ಹೇಳಿದರೂ ಪರವಾಗಿಲ್ಲಾ..ನಂಬೂದರಿಯ ಕುಟುಂಬದತ್ತ ಮೊದಲು ಬೆರಳು ತೋರಿಸಿದ್ದು ಆಕೆಯೇ ತಾನೆ?.. ಹಾಗಾಗಿ ಇನ್ನೊಂದು ಬಾರಿ ಆಕೆಯಿದ್ದ ಆಸ್ಪತ್ರೆಗೆ ಹೋಗುವುದರಲ್ಲಿ ನನಗೆ ತಪ್ಪೇನೂ ಕಾಣಿಸಲಿಲ್ಲ
ಆನಂತರ ಜಾನಿಯ ಬಳಿ ಹೋಗಿ ಸ್ವಲ್ಪ ಜಾಣತನ ಮತ್ತು ಒತ್ತಡ ಎರಡೂ ಬೆರೆಸಿ ಡೀಲ್ ಮಾಡಿ ಅವನಿಂದ ಬಾಯಿಬಿಡಿಸಿದರೆ ಎಲ್ಲಾ ತಿಳಿಯಾಗುತ್ತದೆ ಎನಿಸಿತು..ಹೇಗೂ ನನ್ನ ಬಳಿ ನನ್ನ ಕೋಲ್ಟ್ ೦.೪೫ ಪಿಸ್ತೂಲ್ ಭದ್ರವಾಗಿದೆಯಲ್ಲಾ!..ಆದರೆ ಕಮೀಶನರ್ ಅವನ ಬಳಿ ಹೋಗುವ ಮುಂಚೆ ನಾನು ಅವನಲ್ಲಿಗೆ ಹೋಗಬೇಕು!
ಈ ಬಾರಿ ಮಾನಸಿಕ ಆಸ್ಪತ್ರೆಯಲ್ಲಿ ಮುಖ್ಯ ಡಾಕ್ಟರ್ ಬಳಿ ಲೂಸಿಯ ಹೆಸರು ಹೇಳುವ, ಫೋನ್’ಕಾಲ್ ಮಾಡುವ ಪ್ರಮೇಯ ಬರಲಿಲ್ಲ.. ಆ ಹುಚ್ಚಿಯನ್ನು ನೋಡಲು ಬಂದ ಇವನು ಇನ್ನೊಬ್ಬ ಹುಚ್ಚ ಎಂಬಂತೆ ನಗುತ್ತಾ ಡಾಕ್ಟರ್, ‘ಈ ಸಲ ನನ್ನ ಪ್ರಶ್ನೆಯೇನು ’ ಎಂದು ನೇರವಾಗಿ ಕೇಳಿದರು.
“ನಾನು ಆಕೆಯನ್ನು ನೋಡಿ ಸ್ವಲ್ಪ ಮಾತನಾಡಿಸಬೇಕಲ್ಲಾ…?” ಎಂದೆ, ಒಂದು ಚಿಕ್ಕ ಅವಕಾಶ ಸಿಗುತ್ತೆನೋ ಎಂಬಂತೆ.
“ ಸಾರಿ!..ಆಕೆಗೆ ಮಾನಸಿಕ ಸ್ವಾಸ್ಥ್ಯವಿಲ್ಲದೆ ಅಲ್ಜೈಮರ್ಸ್ ರೋಗದ ತೊಂದರೆ ಕೂಡಾ ಇದೆ..ಸ್ಪಷ್ಟವಾಗಿ ಯಾರ ಬಳಿಯೂ ಮಾತನಾಡಲಾರಳು..ಅವಳ ಮನದಲ್ಲಿ ಬಂದ ಯೋಚನೆಗಳನ್ನು ತುಂಡು ತುಣುಕಾದರೂ ಬರೆಯಬಲ್ಲಳು. ನೀವು ಅಂದಿನಂತೆ ಪ್ರಶ್ನೆ ಬರೆದು ಕೊಡಿ….ಅದೇ ವಾಸಿ..ಆಕೆಗೆ ತೊಂದರೆಯಿಲ್ಲದಿದ್ದರೆ ಉತ್ತರ ಬರೆಯಬಹುದು” ಎಂದರು ಆಕೆಯ ಡಾಕ್ಟರ್.
ಸರಿ, ಒಗಟಿನ ಉತ್ತರವೇ ಗತಿ ಎಂದು ಹೀಗೆ ಒಂದು ಕಾಗದದ ಮೇಲೆ ಬರೆದು ಕೇಳಿದೆ: “ನಂಬೂದರಿ ಮಗಳ ಪ್ರೇಮಿಯಾರು?, ಅವನೆಲ್ಲಿದ್ದಾನೆ?”
ಸ್ವಲ್ಪ ಹೊತ್ತಿನಲ್ಲಿ ಉತ್ತರ ಬಂದಿತ್ತು..
ಡಾಕ್ಟರ್-ನರ್ಸ್ ಇಬ್ಬರೂ ಆ ಚೀಟಿಯನ್ನು ತೆಗೆದುಕೊಂಡು ಬಂದು ಸ್ವಲ್ಪ ಅಚ್ಚರಿಯಿಂದ, “ ಮಿ.ವಿಜಯ್… ಈ ಸಲ ಆಕೆ ಅಳುತ್ತಾ ಅಳುತ್ತಾ ಈ ಪದಗಳನ್ನು ಬರೆದರು, ಯಾವತ್ತೂ ಅಷ್ಟು ಎದುರಿಗೇ ದುಃಖ ತೋರಿಸಿಲ್ಲಾ ಆಕೆ…ಇದು ನಿಮಗೇನಾದರೂ ಅರ್ಥವಾಗುತ್ತಾ ನೋಡಿ” ಎನ್ನುತ್ತಾ ಆ ಉತ್ತರವನ್ನು ಕೊಟ್ಟರು.
ನನ್ನ ಪ್ರಶ್ನೆಯ ಕೆಳಗೆ ಬರೆದಿತ್ತು…
“ನದಿಯ ಬದಿಯಲ್ಲಿ ಬಣ್ಣದ ಚಿತ್ರಣ..ಮಿಲನ…ದೂರದಿಂದ ಬಂದಿದ್ದ, ಇನ್ನೂ ದೂರಕ್ಕೆ ಹೋಗಿಬಿಟ್ಟ…”
ಒಂದು ಕ್ಷಣ ಯೋಚಿಸಿದೆ..ಕೆಲವು ಬಾರಿ ಜೀವನದಲ್ಲಿ ಆರನೆಯ ಇಂದ್ರಿಯಕ್ಕೆ ಕೆಲವು ಅಡಗಿದ್ದ ವಿಚಾರಗಳು ಅರಿವಾಗುತ್ತೆ, ಸ್ಪಷ್ಟವಾಗುತ್ತೆ ಎನ್ನುತ್ತಾರೆ…
ಡಾಕ್ಟರತ್ತ ತಲೆಯೆತ್ತಿ ನೋಡಿದೆ…, “ನನಗರ್ಥವಾಯ್ತು, ಥ್ಯಾಂಕ್ಸ್” ಎಂದು ಅಲ್ಲಿಂದ ಹೊರಟೆ.. ಅವರು ನಾನು ಹೋಗುವುದನ್ನೇ ವಿಚಿತ್ರವಾಗಿ ಗಮನಿಸುತ್ತಿದ್ದರು.
ನನಗೀಗ ಜಾನಿಯ ಬಳಿ ಹೋಗಿ ಮಾತನಾಡುವುದು ಬಹಳ ಮುಖ್ಯವಾಗಿತ್ತು!
ನೇರವಾಗಿ ಗುಂಯ್ಗುಡುತ್ತಿದ್ದ ಮನವನ್ನು ನಿಯಂತ್ರಿಸಿಕೊಂಡೇ ನಾನು ಜಾನಿಯ ಮನೆಯ ಮುಂದೆ ಕಾರ್ ನಿಲ್ಲಿಸಿ ಒಳಹೋದೆ….ಅವನ ಮನೆಯ ಬಾಗಿಲು ಅರೆ ತೆರೆದಿತ್ತು!. ತಲೆಯಲ್ಲಿ ಅಪಾಯದ ಗಂಟೆಗಳು ಶುರುವಾಗಿದ್ದವು.
ನನ್ನ ಕೈಯಲ್ಲಿ ತಾನಾಗಿ ತಾನೇ ಕೋಲ್ಟ್ ೦.೪೫ ರಿವಾಲ್ವರ್ ಹೊರಬಂದಿತ್ತು, ಈ ಬಾರಿ ಅದರಲ್ಲಿ ಬುಲೆಟ್ಸ್ ಕೂಡಾ ತುಂಬಿಸಿಕೊಂಡು ಬಂದಿದ್ದೆ.
ಹಾಲಿನ ಮಧ್ಯೆಯಲ್ಲಿ ಕತ್ತಲಲ್ಲಿ ನೆಲದ ಮೇಲೆ ಜಾನಿಯ ಶೂ ಗಳು ಮಂಕಾಗಿ ಕಾಣಿಸುತ್ತಿದ್ದವು… ಕಾಲಿಗೆ ಪಿಚಪಿಚ ಎಂದು ಏನೋ ಅಂಟಿ ಕೊಂಡಂತಾಯಿತು…ಗೋಡೆಯಲ್ಲಿ ಲೈಟ್ ಸ್ವಿಚ್ ತಡಕಾಡಿ ಹುಡುಕಿ ಆನ್ ಮಾಡಿದೆ.
ರಕ್ತ ಕಾಲುವೆಯಂತೆ ಅವನಿಂದ ಹರಿದಿತ್ತು. ಹಾಲಿನ ಮಧ್ಯೆ ಜಾನಿ ಬಿದ್ದಿದ್ದ, ತಲೆ ನನ್ನೆಡೆಗೇ ತಿರುಗಿತ್ತು. ಅವನ ಹಣೆಯ ಮಧ್ಯೆಯಲ್ಲಿ ಒಂದು ಗುಂಡು ಒಳಹೊಕ್ಕಿ ಹಿಂಭಾಗದಿಂದ ಹೊರಬಂದದ್ದು ಕಾಣಿಸುತಿತ್ತು. ಮನೆಯಲ್ಲಿ ಏನೋ ಸುಟ್ಟ ವಾಸನೆ ಬೇರೆ ಬರುತ್ತಿತ್ತು.
ಗಾಬರಿಯಾಗಿ ಕಿಚನ್ ಕಡೆಗೆ ಓಡಿದೆ,,ನಾನಂದುಕೊಂಡ ಹಾಗೆಯೆ ಅವನ ಗರ್ಲ್ ಫ್ರೆಂಡ್ ಶಾಂತಿಯ ಹೆಣ ಅಡಿಗೆ ಮನೆಯಲ್ಲಿ ಬಿದ್ದಿತ್ತು. ಅದೇ ಗುಂಡೇಟು, ಹಣೆಯ ಮಧ್ಯೆ..ಉರಿಯುತ್ತಿರುವ ಒಲೆಯಲ್ಲಿ, ಸುಟ್ಟು ಹೋದ ಅಡಿಗೆಯಿತ್ತು..ನಾನೇ ಗ್ಯಾಸ್ ಒಲೆ ಆರಿಸಿದೆ. ಹಾಲಿಗೆ ಬಂದು ವಿಫಲನಾದವನಂತೆ ಅವನ ಸೋಫಾದಲ್ಲಿ ಕುಸಿದು ಕುಳಿತೆ.. ನಾನಿನ್ನು ಪೋಲಿಸರನ್ನು ಇಲ್ಲಿಗೆ ಕರೆಯಲೇಬೇಕು ಎಂದು ಗೊತ್ತು..ಆದರೆ ಅಷ್ಟರಲ್ಲಿ ಇಲ್ಲಿ ನಡೆದುದನ್ನು ನಾನು ಅರ್ಥಮಾಡಿಕೊಳ್ಳಲೇಬೇಕು ಎನಿಸಿತು..
ಮೊದಲ ನೋಟಕ್ಕೆ ಅವರ ರಕ್ತ, ಗಾಯ್ದ ಸ್ಥಿತಿ ಎಲ್ಲಾ ನೋಡಿದರೆ ಇವರಿಬ್ಬರನ್ನೂ ಶೂಟ್ ಮಾಡಿದ್ದು ಹಿಂದಿನ ರಾತ್ರಿಯಿರಬೇಕು…ಕೊಲೆ ಮಾಡಲು ಬಳಸಿದ ರಿವಾಲ್ವರ್ ಅಲ್ಲೆಲ್ಲೂ ಕಾಣುತ್ತಿಲ್ಲಾ..
ಮತ್ತೆ ನಾನು ಎದ್ದು ಅವನ ಬ್ಲ್ಯಾಕ್’ಮೈಲ್ ಮಾಡಲು ಬಳಸುತ್ತಿದ್ದ ಪತ್ರಗಳ ಫೈಲ್ಸ್ ಎಲ್ಲಾ ಹುಡುಕಿದೆ..ಎಲ್ಲವನ್ನೂ ಹರಿದು ಚೂರು ಚೂರು ಮಾಡಿ ನೆಲದ ಮೇಲೆ ಎಸೆದಿದ್ದಾರೆ..
ಆಗ ನನಗೆ ಎಲ್ಲಾ ತಿಳಿಯಾಗುತ್ತಾ ಹೋಯಿತು….
ಕೊಲೆಗಾರನಿಗೆ ಬೇಕಾದ ಮೇ ತಿಂಗಳ ಜನ್ಮ ಮತ್ತು ದತ್ತು ಪತ್ರಗಳನ್ನು ನಾನು ಅಂದೇ ತೆಗೆದುಕೊಂಡು ಹೋಗಿಬಿಟ್ಟಿದ್ದೆ..ಅದು ಕೊಲೆಗಾರನಿಗೆ ಗೊತ್ತಿರಲಿಲ್ಲ..ಹಾಗಾಗಿ ಅವನೇ ಮೊದಲ ದಿನ ತಾನು ಹೊರಗೆ ಬಂದಾಗ ಕತ್ತಲಲ್ಲಿ ಜಾನಿಯೆಂದು ತಪ್ಪು ತಿಳಿದು ಹೊಡೆದಿದ್ದರೂ… ಆ ಪತ್ರಗಳು ಒಳಗೆ ಎಲ್ಲಿಯೂ ಸಿಗದ್ದು ನೋಡಿ ಅವನ್ನು ಜಾನಿಯೇ ಬಚ್ಚಿಟ್ಟಿದ್ದನೆಂದುದು ಊಹಿಸಿದ್ದಿರಬೇಕು, ನನ್ನನ್ನು ಕಂಡು ತನ್ನ ತರಹ ಅವನನ್ನು ಭೇಟಿ ಮಾಡಲು ಬಂದವನೆಂದು ಭಾವಿಸಿ, ಪತ್ರಗಳನ್ನು ನನ್ನ ಜೇಬಿನಲ್ಲಿ ಹುಡುಕದೆಯೇ, ಏನೂ ಹಾನಿ ಮಾಡದೆ ಸುಮ್ಮನೆ ಹೊರಟು ಹೋಗಿದ್ದಾನೆ. ನನ್ನ ಅದೃಷ್ಟ ಮತ್ತು ಆತನ ತಪ್ಪುಗ್ರಹಿಕೆ ಎರಡೂ ಇದೆ!…ಇಲ್ಲದಿದ್ದರೆ ಅಂದು ಆ ಪತ್ರಗಳಿಂದ ನಾನು ನನ್ನ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತಿತ್ತೋ ಏನೋ?..
ನಾನು ಅದೃಷ್ಟವಂತ, ಸರಿ..ಆದರೆ ಜಾನಿ ಮತ್ತು ಅವನ ಪ್ರಿಯತಮೆ ಶಾಂತಿ ಅಂತಾ ಅದೃಷ್ಟವಂತರಾಗಿರಲಿಲ್ಲಲ್ಲ..ಅವರು ತಮ್ಮ ಜಾಲದಲ್ಲಿ ತಾವೇ ಬಲಿಯಾಗಿದ್ದರು….
ಹಾಗಾದರೆ ನನ್ನ ಪ್ರಕಾರ: ನಿನ್ನೆ ರಾತ್ರಿ ಕೊಲೆಗಾರ ಮತ್ತೆ ಇಲ್ಲಿಗೆ ಬಂದು ’ಆ ಪತ್ರಗಳು, ದುಡ್ದು ತೆಗೆದುಕೊಂಡ ರಸೀತಿಗಳು ಎಲ್ಲಿ, ಕೊಡು ’ ಎಂದು ಜಬರಿಸಿ ಕೇಳಿರಬೇಕು…ಜಾನಿ ತನ್ನ ಬ್ಲ್ಯಾಕ್ ಮೈಲ್ ತ್ಯಜಿಸಲು ಒಪ್ಪುವನೆ?… ಮಾತಿಗೆ ಮಾತು ಬೆಳೆದಿರಬೇಕು…ಕೊಲೆಗಾರ ತನ್ನನ್ನು ನೋಡಿಬಿಟ್ಟಿದ್ದರಿಂದ ಜಾನಿಯನ್ನೂ ಅಲ್ಲೇ ಅವನ ಜತೆಗಿದ್ದ ಶಾಂತಿಯನ್ನೂ ಕೊಂದುಬಿಟ್ಟಿದ್ದಾನೆ..ಆ ಪತ್ರಗಳನ್ನೆಲ್ಲಾ ಹುಡುಕಿ ಸಿಗದೇ ಹತಾಶನಾಗಿ. ಎಲ್ಲವನ್ನೂ ಹರಿದು ಹಾಕಿ ಹೋಗಿದ್ದಾನೆ..
ಆದರೆ ಯಾರವನು?.ನನ್ನ ಮೇಲೆ ದಾಳಿ ಮಾಡಿದ್ದವನೇ ಆದರೂ ನಾನವನನ್ನು ಅಂದು ನೋಡಕ್ಕಾಗಿರಲಿಲ್ಲ…ನಾನು ಎಚ್ಚರಿಕೆಯಿಂದ ಜಾನಿಯ ಹಣೆಯನ್ನು ಪರೀಕ್ಷಿಸಿದೆ..ಕೋಲ್ಟ್ ೦.೩೮ ಸೈಜಿನ ಬುಲೆಟ್ ಒಳಹೊಕ್ಕಿದೆ ಎಂದೆನಿಸಿತು…ಹತ್ತಿರವೆಲ್ಲೂ ಆ ಗುಂಡಿನ ಖಾಲಿ ಕಾರ್ಟ್ರಿಜ್ ಸಿಕ್ಕಲಿಲ್ಲ..ಕೊಲೆಗಾರನೇ ಆ ಪುರಾವೆಯನ್ನು ತೆಗೆದುಕೊಂಡು ಹೋಗಿದ್ದಾನೆ ಮರೆಯದೇ!
ಈ ಕೋಲ್ಟ್೦.೩೮ ರಿವಾಲ್ವರನ್ನು ಪೋಲಿಸರೂ ಉಪಯೋಗಿಸುತ್ತಾರೆ ಎಂದು ನನಗೆ ಗೊತ್ತು..ನನ್ನ ಬಳಿಯಿದ್ದ ಕೋಲ್ಟ್ ೦.೪೫ ಗಿಂತ ಸ್ವಲ್ಪ ಚಿಕ್ಕದು ಇದು… ಪೋಲಿಸ್ ಸ್ಟಾಕಿನಲ್ಲಿ ಅವು ಸಿಗುತ್ತವೆ..
ಕಮಿಶನರ್ ಬಳಿಯೂ ಇಂತಾ ಒಂದು ರಿವಾಲ್ವರ್ ಇರಲು ಸಾಧ್ಯ..
ನನ್ನ ಮುಖದಲ್ಲಿ ಈ ಯೋಚನೆಯಿಂದ ಬೆವರೊಡೆಯಿತು… ಹಾಗಾದರೆ ಕಮೀಶನರ್ ರಾಮನ್ ಮಾಡಬೇಕೆಂದಿದ್ದ ಉಪಾಯ ಇದೇ ಏನು?..ಬೇರೆ ಮಾರ್ಗವಿಲ್ಲದೆ ಬ್ಲ್ಯಾಕ್’ಮೈಲ್’ನಿಂದ ತಮ್ಮ ಮನೆಯ ಗೌರವ ಕಾಪಾಡಲು ಜಾನಿ ಮತ್ತು ಶಾಂತಿಯನ್ನು ಅವರೇ ಕೊಂದುಬಿಟ್ಟರೆ?
ನನ್ನ ಮೊಬೈಲ್’ನಲ್ಲಿ ಆಗಲೇ ಕಮೀಶನರ್ ಫೋನ್’ನಂಬರ್ ದಾಖಲಿಸಿಕೊಂಡಿದ್ದೆ..
ಹೇಗೂ ನಾನು ಈ ಎರಡೂ ಕೊಲೆಗಳ ಬಗ್ಗೆ ಸುದ್ದಿ ಕೊಡಬೇಕಿತ್ತು.. ಅ ವಿಷಯವನ್ನು ಪೋಲಿಸ್ ಸ್ಟೇಷನ್ನಿನಲ್ಲಿ ಯಾರಿಗೋ ಹೇಳದೇ ಅವರಿಗೇ ನೇರವಾಗಿ ವರದಿ ಮಾಡಿ ನೋಡಿದೆ.
“ ಮೈ ಗಾಡ್…ನಾನಿದನ್ನು ನಿರೀಕ್ಷಿಸಿರಲಿಲ್ಲಾ..ನಾವು ಈಗಲೆ ಬರುತ್ತೇವೆ..ನೀನೆಲ್ಲೂ ಹೋಗ ಬೇಡಾ..ಯಾವ ಸಾಕ್ಷಿ ಪುರಾವೆಯನ್ನೂ ಹಾಳು ಮಾಡಬೇಡಾ..”ಎಂದರು ಕಮೀಶನರ್
ಅದೆಲ್ಲಾ ನನಗೆ ಚೆನ್ನಾಗಿ ತಿಳಿದ ವಿಷಯ ಎಂದೆ…‘ನಾನಿದನ್ನು ನಿರೀಕ್ಷಿರಲಿಲ್ಲ ’ ಎಂದರೇನು?..ತಾನಲ್ಲ ಎಂದೆ?..
ನನ್ನ ಜತೆ ಒತ್ತಾಸೆಯಾಗಿ ಲೂಸಿ ಇದ್ದರೆ ಚೆನ್ನ ಎನಿಸಿತು…ಅವಳಿಗೆ ಫೊನ್ ಮಾಡಿದೆ.
“ ಲೂಸಿ, ನಿನ್ನ ಢಾಭಾದಲ್ಲಿ ಕೊಡುತ್ತೇನೆಂದ ಟ್ರೀಟ್ ನನಗೆ ಸದ್ಯಕ್ಕೆ ದೊರೆಯುವಂತಿಲ್ಲ…, ನಾನು ತಪ್ಪು ಮಾಡಿಬಿಟ್ಟೆನೆ ಎನಿಸುತ್ತೆ…ಜಾನಿಯನ್ನು ಸಮಯಕ್ಕೆ ಸರಿಯಾಗಿ ಎಚ್ಚರಿಸಲಾಗಲಿಲ್ಲ..”ಎಂದು ಅವಳಿಗೆ ಜಂಟಿ ಕೊಲೆಯ ಎಲ್ಲಾ ವಿವರಗಳನ್ನೂ ಕೊಟ್ಟೆ.
“ ನಾನು ಬರುತ್ತಾ ಇದ್ದೇನೆ, ಅಲ್ಲೇ ಇರಿ..ಎಲ್ಲೂ ಹೋಗಬೇಡಿ” ಎಂದಳು. ಎಂತಾ ಸಂದರ್ಭದಲ್ಲೂ ಗಾಬರಿಯಿಲ್ಲ, ಹೆಚ್ಚು ಮಾತಿಲ್ಲ…ಭಲೇ!
“ನಾನೆಲ್ಲಿ ಹೋಗುತ್ತೇನೆ?…ಪೋಲಿಸರನ್ನು ನಾನೇ ಕರೆಸಿದ್ದೇನೆ..ಬಾ…” ಎಂದೆ.
ಪೋಲಿಸ್ ಕಮೀಶನರೇ ಖುದ್ದಾಗಿ ತಮ್ಮ ಇನ್ಸ್’ಪೆಕ್ಟರ್, ಛಾಯಾಗ್ರಾಹಕ, ಬೆರಳಚ್ಚು ತಜ್ಞ ಮೊದಲುಗೊಂಡು ತಮ್ಮ ಪೂರ್ತಿ ತಂಡವನ್ನು ಕರೆತಂದರು, ಅವರು ಹೆಣಗಳ ಚಿತ್ರಗಳು, ಅದರ ನೆಲದ ಮೇಲಿನ ಪೊಸಿಶನ್’ನ ಚಿತ್ರ,,ಅಲ್ಲಿ ಬಿದ್ದಿದ್ದ ಪತ್ರಗಳ ತುಂಡುಗಳು..ಹೀಗೆ ಎಲ್ಲವನ್ನೂ ತಮ್ಮ ಮಹಜರ್’ನಲ್ಲಿ ಸೇರಿಸಿದರು.
ಬೆರಳಚ್ಚು ತಜ್ಞರು ನನ್ನ ಕೈ ಬೆರಳ ಗುರುತನ್ನೂ ಕೇಳಿದರು.. ನಾನು ಗ್ಯಾಸ್ ಒಲೆ ಮತ್ತು ಸ್ವಿಚ್ ಬಿಟ್ಟು ಬೇರೇನೂ ಮುಟ್ಟಿಲ್ಲವೆಂದೆ.
ನನ್ನನ್ನೇ ದುರುಗಟ್ಟಿ ನೋಡುತ್ತಿದ್ದ ಕಮೀಶನರ್,” ಕೊಡಿ..ಸಾಬೀತಾಗುವವರೆಗೂ ಎಲ್ಲರ ಮೇಲೂ ಸಂಶಯ ಇರುತ್ತೆ..ನೀವು ಕೊಲೆ ಮಾಡಿಲ್ಲ ಎಂದ ಮೇಲೆ ಏಕೆ ಅನುಮಾನ ?” ಎಂದು ನನ್ನನ್ನು ಕೆಣಕಿದರು..
“ನನ್ನ ಬಳಿ ಕೋಲ್ಟ್ ೦.೪೫ ಇದೆ, ಅದರಲ್ಲಿ ಕೊಲೆ ನಡೆದಿಲ್ಲ. ನಿಮ್ಮ ಬಳಿ ೦.೩೮ ಇರಬಹುದಲ್ಲಾ, ಈ ಕೊಲೆ ಅಂತಾ ಪಿಸ್ತೂಲಿನಲ್ಲೆ ಆಗಿದೆ,,ಹಾಗಾದರೆ ನಿಮ್ಮ ಮೇಲೂ ಅನುಮಾನ ಪಡಬಹುದಲ್ಲಾ…?”ಎಂದು ಸವಾಲೆಸೆದೆ
“ ನಿನಗೆ ಬೇರೆ ರಿವಾಲ್ವರ್ ಪಡೆದಿಯಲು ಸಾಧ್ಯವಿಲ್ಲವೆ?..ಬಚ್ಚಿಟ್ಟಿರಬಹುದು ಅದನ್ನು..ನೀನು ಜಾನಿಯ ಬಳಿ ಬಂದು ಹೆದರಿಸಿದ್ದು ಉಂಟು ಎಂದವನು ನನಗೆ ಹೇಳಿದ್ದ..ನಿನಗೆ ಸಾಕಷ್ಟು ಕೊಲ್ಲುವ ಕಾರಣಗಳಿದ್ದವು, ಅವಕಾಶಗಳೂ ಇದ್ದವು..”ಎಂದು ವಾದಿಸಿದರು..ಅವರಿಗೆ ಸದ್ಯಕ್ಕೆ ಯಾರಾದರೂ ಬಲಿಪಶು ಬೇಕಾಗಿತ್ತೇನೋ!
“ ನಿಮಗೆ ಅವನು ಗೊತ್ತಿದ್ದ ಎಂದು ಹೇಳುತ್ತೀರಿ. ನಿಮಗೆ ಅವನನ್ನು ಕೊಲ್ಲಲು ನನಗಿಂತಾ ಹೆಚ್ಚಿನ ಪ್ರಮುಖ ಕಾರಣಗಳಿತ್ತಲ್ಲಾ,ಅದು ನನಗೆ ತಿಳಿಯದು ಎಂದುಕೊಂಡಿದ್ದೀರಾ? ಇದಕ್ಕೆ ಲೂಸಿಯೂ ಸಹಾ ಸಾಕ್ಷಿ…”ಎಂದು ಅವರ ಮುಖವನ್ನು ಗಮನಿಸಿದೆ
”ಶಟಪ್!..ಈ ಊರಿನಿಂದಲೇ ನಿಮ್ಮನ್ನು ಓಡಿಸಬೇಕಾಗುತ್ತೆ” ಎಂದು ಬೇರೇನೂ ತೋಚದೆ ಗುಡುಗಿದರು.
ಲೂಸಿಯಿದ್ದವಳು, “ ಸರ್…ಕೊಲೆಗೆ ಉಪಯೋಗಿಸಿದ ಗುಂಡುಗಳ ಬ್ಯಾಲಿಸ್ಟಿಕ್ ರಿಪೋರ್ಟ್ ಬರಲಿ, ನಿಮಗನುಮಾನವಿದ್ದರೆ ನಮ್ಮ ಮೇಲೆ ಕೇಸ್ ದಾಖಲಿಸಿ ಕ್ರಮ ತೆಗೆದುಕೊಳ್ಳಿ “ ಎಂದು ಶಾಂತವಾಗಿ ಉತ್ತರಿಸಿದಳು.
’ನಮ್ಮ ಮೇಲೆ’ ಎಂದಳು, ಇಬ್ಬರನ್ನೂ ಸೇರಿಸಿ!. ಲೂಸಿ ತನ್ನನ್ನೂ ನನ್ನನ್ನೂ ಒಂದೇ ಎಂದು ಭಾವಿಸಿದ್ದಾಳೆ! ..ನನ್ನ ರೊಟ್ಟಿ ಜಾರಿ ತುಪ್ಪಕ್ಕೆ ಬೀಳುತ್ತಾ ಇದೆ!
ನಾವು ಅಲ್ಲಿಂದ ಹೊರಡುವಾಗ,ಕಮೀಶನರ್ ಕಡೆಗೆ ಒಂದು ಕೊನೆಯ ಬಾಣ ಬಿಟ್ಟೆ:
“ ಆ ಮೇ ತಿಂಗಳ ಪೇಪರ್ಸ್ ನನ್ನ ಬಳಿಯೇ ಇದ್ದವು,,,ಕೊಲೆಗಾರ ಅದನ್ನು ಹುಡುಕಿದರೂ ಸಿಕ್ಕಲಿಲ್ಲಾ..”
ಕಮೀಶನರ್ ಮುಖವನ್ನು ದಿಟ್ಟಿಸಿ ನೋಡಿದೆ..ಅವರಿಗೆ ನಾನು ಆಡಿದ ಮಾತಿನ ತಲೆ ಬುಡವೇ ಅರ್ಥವಾಗಲಿಲ್ಲ, ಪಾಪ. ಸ್ವಲ್ಪ ಪ್ರತಿಕ್ರಿಯೆ ಇದ್ದರೂ ನಾನು ಹಿಡಿದುಬಿಡುತ್ತಿದ್ದೆ.
ಕೊಲೆಗಾರ ಅವರಲ್ಲವೇ ಅಲ್ಲಾ ಹಾಗಾದರೆ!
Facebook ಕಾಮೆಂಟ್ಸ್