X

ಗಡಿಯಲ್ಲಿ ಗಸ್ತು.. ಆತ್ಮಕ್ಕೆ ಬೆಂಕಿ..

( ವಿಷಯವೇ ಗೊತ್ತಿಲ್ಲದೆ ಇವತ್ತು ಮೈಕು, ಭಾಷಣ, ಬರಹ, ಪ್ಯಾನೆಲ್ ಡಿಸ್ಕಷನ್ನು ಎಂದು ಎದ್ದು ನಿಂತು ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ತೀರ ತಮಾಷೆಯೆಂದರೆ ಕಾಶ್ಮೀರದಂತಹ ನೇರ ವಿಷಯವನ್ನು ಸಿಕ್ಕ ಸಿಕ್ಕ ವೇದಿಕೆಯಲ್ಲಿ ಗೊಂದಲ ಎಬ್ಬಿಸಿ ಪೆದ್ದರಾಗುತ್ತಿರುವ ಎಡಜೀವಿಗಳಿಗೆ, ಒಂದು ಚರ್ಚೆಯ ಮೊದಲು ನಿರ್ದಿಷ್ಟ ಮಾಹಿತಿ ಮತ್ತು ಕನಿಷ್ಟ ಜ್ಞಾನ ಇರಬೇಕು ಎನ್ನುವುದು ಗೊತ್ತಿರಬೇಕು.)

ಅದು ಅಪ್ಪಟ ಸ್ವರ್ಗ ಸದೃಶ್ಯ ನಾಡು. ಅದಕ್ಕೂ ಮೊದಲು ಭೂಮುಖ ಹುಟ್ಟಿದಾಗಿನಿಂದಲೂ ಅದು ಭಾರತದ ಅವಿಭಾಜ್ಯ ಅಂಗ. ಈ ಭೂಮಿಯ ಅತ್ಯಂತ ಸುರದ್ರೂಪಿ ಜನಾಂಗದಲ್ಲಿ ಒಂದಾದ ಪಂಡಿತ್, ದಶಕಗಳ ಹಿಂದಿನವರೆಗೂ ಅಲ್ಲಿಯೇ ನೆಲೆಸಿತ್ತು. ಸಧ್ಯಕ್ಕೆ ಜಗತ್ತಿನ ಭಯೋತ್ಪಾದಕ ಪೀಡೀತ ಪ್ರದೇಶವೂ ಹೌದು. ಅದೆಲ್ಲಕ್ಕೂ ಮಿಗಿಲಾಗಿ ಭಾರತದಾದ್ಯಂತ ಗಂಜಿಕೇಂದ್ರದ ತಥಾಕಥಿತ ಬುದ್ಧಿ ಜೀವಿಗಳಿಗೆ ಹೊಟ್ಟೆ ಹೊರೆಯಲು ಲಭ್ಯವಿರುವ ಸುಲಭ ಮಧ್ಯಮಮಾರ್ಗವೂ ಹೌದು. ಎಲ್ಲಾ ವರ್ಗದ ದುರ್ಮಾರ್ಗಿಗಳಿಗೆ, ಎನ್.ಜಿ.ಓ ಹೆಸರಿನಲ್ಲಿ ಗಳಿಸಲು ಅಕ್ರಮ ಮಾರ್ಗವೂ ಹೌದು. ಅಲ್ಲಿ ಅಗಸ್ಟ್ 15, ಜನೇವರಿ 26 ರಂದು ಸ್ವಘೋಷಿತ ಬಂದ್ ಘೋಷಿಸಲಾಗುತ್ತದೆ. ಅದಕ್ಕೆ ಯಾರ ಅಪ್ಪಣೆ ಅಥವಾ ಒತ್ತಾಯವೂ, ನಮ್ಮ ಹುಬ್ಬಳ್ಳಿ ಅಥವಾ ಹಾವೇರಿ ಗಲ್ಲಿಗಳಲ್ಲಿ ಆಗುವಂತೆ ” ಎಯ್ ಅಂಗಡಿ ಬಂದ್ ಮಾಡ್ರಲೇ ” ಎಂದು ಒಬ್ಬೇ ಒಬ್ಬನೂ ಕೂಗುವುದಿಲ್ಲ. ತೀರ ಒಂದು ಕಪ್ಪು ಚಹ ಕೂಡಾ ಆವತ್ತು ನಿಮಗಲ್ಲಿ ಸಿಕ್ಕುವುದಿಲ್ಲ. ಅದನ್ನು ಯಾವ ಟಿ.ವಿ.ಯೂ ಇಪ್ಪತ್ನಾಲ್ಕು ಗಂಟೆಯೂ ಸರದಿಯ ಮೇಲೆ ಪ್ರಸಾರವನ್ನೂ ಮಾಡುವುದಿಲ್ಲ. ಕಾರಣ ಅವತ್ಯಾವನಾದರೂ ಇಲ್ಲಿಂದ ಅಲ್ಲಿಗೆ ಹೋಗಿ ಏನಾಗುತ್ತಿದೆ ಎಂದು ನೋಡಿದ್ದರೆ ತಾನೇ..? ರಾಷ್ಟ್ರೀಯ ಹಬ್ಬದ ದಿನಗಳಂದು ಭಾರತದ ಯಾವ ಪ್ರಜೆಯೂ ಆ ರಾಜ್ಯಕ್ಕೆ ಕಾಲಿಡುವ ಹುಂಬತನ ಮಾಡಲಾರ. ಏನಿದ್ದರೂ ಅವನ ಪ್ರವಾಸ ಅದರಾಚೀಚೆಗೆ ಇರುತ್ತದೆ. ಮತ್ತೀಗೀಗ ಅದೂ ಕುಸಿಯುತ್ತಿದೆ. ತಮ್ಮ ಅನ್ನಕ್ಕೆ ತಾವೇ ಕಲ್ಲು ಹಾಕಿಕೊಳ್ಳುತ್ತಿರುವ ಕಾಶ್ಮೀರಿಗಳ ಅನಾಹುತಕಾರಿ ಬೆಳವಣಿಗೆಯಿಂದ ಸ್ವಂತದ ಬದುಕು ಎಕ್ಕುಟ್ಟಿ ಹೋಗುತ್ತದೆನ್ನುವುದು ಅರಿವಿಗೆ ಬಾರದ ಮೂರ್ಖತನಕ್ಕೆ, ಅವರ ಬಾಗಿಲಿನಾಚೆಗೆ ಕೂತು ತಮ್ಮ ಗಂಜಿ ಬೇಯಿಸಿಕೊಳ್ಳುತ್ತಿರುವ ಎಡಜೀವಿಗಳು ಬೇಯದ ಕಾಳು ಹಾಕುತ್ತಿದ್ದಾರೆ.

ಭಾರತದ ಭುಜದ ಮೇಲೆ ಹುಣ್ಣಿನಂತೆ ಅದನ್ನು ಕೆರೆದುಕೊಳ್ಳಲು ಬಿಟ್ಟು ಹೋದ ನೆಹರು ಎಂಬ ಅವಿವೇಕಿ ಅಧಿಕಾರಶಾಹಿ ನಾಯಕನ ಕೊಡುಗೆಯೂ ಆ ರಾಜ್ಯ. ಅದಿವತ್ತಿಗೆ ಈಡೀ ಜಗತ್ತಿನ ಮುಸ್ಲಿಂ ರಾಷ್ಟ್ರಗಳ ಕಣ್ಣಂಚಿನ ಕಾವಲಲ್ಲಿರುವ ಮುಖ್ಯ ಪ್ರದೇಶ. ಪಾಕಿಸ್ತಾನದಂತಹ ದೇಶಕ್ಕೆ ಅನಿವಾರ್ಯವಾಗಿರುವ ರಾಜಕೀಯ ಅಡುಂಬೋಲ. ಭಾರತದ ದೇಶದ ಪ್ರಮುಖ ಆರ್ಥಿಕ ಶಕ್ತಿಯನ್ನು ತಿಂದು ಹಾಕುತ್ತಿರುವ ಪ್ರಮುಖ ಹುಣ್ಣಿನ ಭಾಗವೂ ಹೌದು. ಅದನ್ನು ಜಗತ್ತು ಕಾಶ್ಮೀರ ಎಂದು ಗುರುತಿಸುತ್ತದೆ. ಈ ಕಾಶ್ಮೀರ ಎಂಬ ಗಾಯದ ಕರಡಿಯ ಎದೆಗೆ ಅನಿವಾರ್ಯವಾಗಿ ಮುಲಾಮು ಸವರುವ ಪರಿಸ್ಥಿಯನ್ನು ಅತ್ಯಂತ ವ್ಯವಸ್ಥಿತವಾಗಿ ಮುಂದುವರೆಸುತ್ತಿರುವವರು ಇಲ್ಲಿನ ನೆಲ, ಜಲ ಹಾಗು ಜಗತ್ತಿನಲ್ಲೇ ಲಭ್ಯವಿಲ್ಲದ ಅಪರೂಪದ ಸ್ವಾತಂತ್ರ್ಯವನ್ನು ಅನುಭವಿಸುತ್ತಲೇ ನಮ್ಮ ಬುಡಕ್ಕೇ ನೀರು ಹರಿಸುತ್ತಿರುವ, ಯಾವ ಸ್ಪಷ್ಠ ಸೈದ್ಧಾಂತಿಕ ಬದ್ಧತೆಯೂ ಇಲ್ಲದ, ವಿರೋಧ ಮತ್ತು ಟೀಕೆಯಿಂದಲೇ ಬದುಕು ಕಟ್ಟಿಕೊಳ್ಳಬಹುದೆನ್ನುವುದನ್ನು ಸಾಬೀತು ಮಾಡುತ್ತಿರುವವರು ಎಡಪಂಥೀಯ ಜೀವಿಗಳು.

ಈ ಸುಂದರ ಭೂಭಾಗದ ಮೇಲಿನ ಶೇ. ಎಂಭತ್ಮೂರರಷ್ಟು ಜನರಿಗೆ ಬಡಿದಾಟ ಬೇಕೇ ಆಗಿಲ್ಲ. ಆದರೂ ಜಗತ್ತು ಕಂಡು ಕೇಳರಿಯದ ಅಶಾಂತಿ ಇಲ್ಲಿ ಭುಗಿಲೇಳುತ್ತದೆ. ಉಸಿರೆಳೆದುಕೊಳ್ಳಲೇ (ಹೈ ಆಟಿಟ್ಯೂಡ್) ಒದ್ದಾಡಬೇಕಾದ ಈ ಭಾಗದಲ್ಲಿ ನೂರಾರು ಜನರು ಬೀದಿಗಿಳಿಯುತ್ತಾರೆ. ಹಾಗೆ ಯಾವತ್ತು, ಯಾವ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಉಂಟು ಮಾಡಬೇಕು ಎನ್ನುವುದನ್ನು ಜೈಲು ಮತ್ತು ಗೃಹ ಬಂಧನದಲ್ಲಿದ್ದೇ ಕೆಲ ಪುಂಡರು ಅದನ್ನು ನಿರ್ಧರಿಸುತ್ತಾರೆ. ಅವರನ್ನು ಪ್ರತ್ಯೇಕತಾವಾದಿಗಳು ಎಂದು ಭಾರತೀಯರು ಗುರುತಿಸಿದರೇ, ಎಡಜೀವಿಗಳು ಮತ್ತು ಜಗತ್ತಿನ ಭಯೋತ್ಪಾದಕ ಬಂಟರ ಧರ್ಮಶಾಲೆಯಾಗಿರುವ ಪಾಕಿಗಳು ಇವರನ್ನೆಲ್ಲಾ ಸ್ವಾತಂತ್ರ ಹೋರಾಟಗಾರರ ಗೆಟ್ಟಪ್ಪಿನಲ್ಲಿ ಗುರುತಿಸುತ್ತಾರೆ. ಜೀವನದಲ್ಲಿ ಒಮ್ಮೆಯೂ ಭೇಟಿಯಾಗದಿದ್ದರೂ ಅವರ ಬಗ್ಗೆ ಅದೇನೋ ಕಕ್ಕುಲಾತಿ. ತೆರೆದ ಬಾಹುಗಳಿಗೆಳೆದುಕೊಳ್ಳಲು ಹಾತೊರೆತ. ಇವರ ಇಶಾರೆಯ ಮೇರೆಗೆ ಜನರನ್ನು ದಂಗೆ ಎಬ್ಬಿಸುವ ಕೆಲಸಕ್ಕೆ ಲಕ್ಷಾಂತರ ರೂ. ಕೈ ಬದಲಾಗುತ್ತದೆ. ಈ ಪುಕ್ಕಟ್ಟೆ ದುಡ್ಡು ನಮ್ಮದೇ ನೆಲದ ಬಡತನ ಮತ್ತು ಅವರದ್ದೇ ಭಯೋತ್ಪಾದನೆಯನ್ನು ತೋರಿಸಿ ಉತ್ಪಾದಿಸಿದ್ದು ನೆನಪಿರಲಿ. ಹಾಗಾಗಿ ಅಲ್ಲಿ ದುಡಿಮೆ ಬೇಕಿಲ್ಲ.

ಆದರೆ ಅಸಲಿನ ಜನರ ಜೀವನ ದುರ್ಭರವಾಗುತ್ತದಲ್ಲ ಅದನ್ನು ಜಾಲತಾಣದ ಮೂಲಕ ಜಗತ್ತಿನೆಲ್ಲೆಡೆಗೆ ವ್ಯವಸ್ಥಿತವಾಗಿ ತಲುಪಿಸಲಾಗುತ್ತದೆ. ಹಾಗೆ ಹೋದ ಸುದ್ದಿ ಬರೀ ಸುದ್ದಿಯಲ್ಲ ಅದೊಂದು ಹಣ ಹುಟ್ಟಿಸುವ ದಂಧೆ ಕೂಡಾ. ಅದರಲ್ಲಿನ ಒಂದು ಪಾಲು ಅಂತರಾಷ್ಟ್ರೀಯ ಮಟ್ಟದಲ್ಲಿ ಅಮಾನವೀಯತೆಯ ಹೆಸರಿನಲ್ಲಿ ಭಾರತದ ಮಾನ ಹರಾಜು ಹಾಕಲು ಬಳಕೆಯಾಗುತ್ತದೆ. ಉಳಿದ ಪಾಲಿನಲ್ಲಿ ನಾಯಿಗಳಿಗೆಸೆಯುವ ಬಿಸ್ಕೆಟ್ಟಿನಂತೆ ಒಂದು ತುಂಡು ನಮ್ಮ ದೇಶದೊಳಗಿದ್ದೇ ಈ ದೇಶದ ಮಾನ ಹರಾಜು ಹಾಕುವ ವ್ಯವಸ್ಥಿತ ಬುಜೀಗಳಿಗೆ, ಎಡಜೀವಿಗಳಿಗೆ ಸಲ್ಲುತ್ತದೆ. ಅಷ್ಟಕ್ಕೆ ಎದ್ದು ನಿಂತು ಬಾಲ ಅಲ್ಲಾಡಿಸುವ ಇವರು ಯಾವ ಮಾಹಿತಿಯೂ ಇಲ್ಲದೇ ಈ ದೇಶದ ವಿರುದ್ಧ, ಹಿಂದುತ್ವದ ವಿರುದ್ಧ, ಅಜಾದಿ ಬೇಕೆನ್ನುವ ಹುಚ್ಚು ಹುಯಿಲು ಎಬ್ಬಿಸತೊಡಗುತ್ತಾರೆ. ಮಾನವೀಯತೆ ಕೊಲೆಯಾಗಿದೆ ಎಂದರಚುತ್ತಾರೆ ಹೊರತಾಗಿ ಇದೇ ನಮ್ಮದೇ ಕೇಂದ್ರ ಸರಕಾರದ ದೂರದರ್ಶನದ ಅಧಿಕಾರಿ ಲತಾ ಕೌರ್‍ಳನ್ನು ಅಲ್ಲೇ ಗುಂಡಿಟ್ಟು ಕೊಲೆ ಮಾಡಿದಾಗ, ಶಿಕ್ಷಕಿ ಗಿರಿಜಾಳನ್ನು ಸಾಮಿಲ್‍ನಲ್ಲಿ ನಿರಂತರ ಅತ್ಯಾಚಾರಕ್ಕೀಡು ಮಾಡಿ ಮರಮಟ್ಟು ಕತ್ತರಿಸಿದಂತೆ ಕತ್ತರಿಸಿದಾಗ, ಅಪ್ಪಟ ಕಾಶ್ಮೀರ ಪಂಡಿತರ ಹೆಣ್ಣು ಮಗಳು ನೀಲಾಳನ್ನು ಅದೇ ಶಾಲೆಯ ಕೋಣೆಯಲ್ಲಿ ಅತ್ಯಾಚಾರ ಮಾಡಿದಲ್ಲದೇ, ನರ್ಸ್ ಆಗಿ ಅವರದ್ದೇ ಅಕ್ಕ-ತಂಗಿಯರಿಗೆ ಸೇವೆಗೈದಿದ್ದ ಸರಳಾ ಭಟ್‍ಳನ್ನು ಮಂಜು ಕರಗುವ ಮುನ್ನವೇ ಮನೆಯಿಂದ ಹೊತ್ತೊಯ್ದು ಸುಲಿದು ಬಿಟ್ಟಿದ್ದೆಲ್ಲಾ ಈ ವಕ್ರ ಮಾರ್ಗಿಗಳ ಸರಳ ರೇಖೆಯಲ್ಲಿ ಬರುತ್ತಲೇ ಇಲ್ಲ.

ಒಂದು ಗೊತ್ತಿರಲಿ ನಾವು ನೀವಂದುಕೊಂಡಂತೆ ಕಾಶ್ಮೀರ ಉಳಿದೇ ಇಲ್ಲ ಇಲ್ಲವೂ ಇಲ್ಲ. ಇಲ್ಲಿನ ಒಂದು ಹಂತದ ನನ್ನ ಚಾರಣದ ಅವಧಿಯಲ್ಲಿ ಸೈನಿಕನೊಬ್ಬ ಅದರ ನಾಲ್ಕು ಪಟ್ಟು ಮೇಲಕ್ಕೇರುತ್ತಾನೆ. ಆದರೆ ಸ್ಥಳೀಯ ಕಾಶ್ಮೀರಿ ಆರು ಪಟ್ಟು ಮೇಲಕ್ಕೇರುತ್ತಾನೆ. ಯಾವ ಅಯಾಸವನ್ನೂ ದೇಹಕ್ಕೆ ವರ್ಗಾಯಿಸದೇ, ಬದುಕು ಮತ್ತು ಬಂದೂಕು ಎರಡನ್ನೂ ಗಟ್ಟಿಗೊಳಿಸಿಕೊಳ್ಳುತ್ತಲೇ ನೆಲ, ಜಲ ಎರಡನ್ನೂ ಈ ದೇಶದ ಸೈನಿಕ ಕಾಯ್ದುಕೊಳ್ಳುವುದನ್ನು, ದೇಶದ ವಿರುದ್ಧ ಘೋಷಣೆ ಕೂಗುವವರೊಂದಿಗೆ ಅದನ್ನು ಬೆಂಬಲಿಸುವವರು ಜೀವನದಲ್ಲೊಮ್ಮೆ ನೋಡಿದರೂ ಸಾಕು, ಇಲ್ಲಿ ಕೂತು ಅಕ್ಷರ ಹಾದರ ಮಾಡುವವರಿಗೆ ತಮ್ಮ ಬದುಕು ಎಷ್ಟು ಸುಖದಲ್ಲಿ ನಡೆಯುತ್ತಿದೆ ಎಂದರಿವಾದೀತು. ದಿನಕ್ಕೆ ಹನ್ನೆರಡು ತಾಸು, ಕನಿಷ್ಟ ಹತ್ತಾರು ಕೇ.ಜಿ ಭಾರದ ಮದ್ದು, ಗುಂಡು, ಬಂದೂಕು ಅಂತೆಲ್ಲಾ ಹೊತ್ತು ಅಪರಿಮಿತ ಹವಾಮಾನದ ವ್ಯತ್ಯಾಸದಲ್ಲಿ ಅಖಂಡವಾಗಿ ಹೆದ್ದಾರಿಯನ್ನೂ, ಗಡಿಯನ್ನೂ ಒಬ್ಬೊಬ್ಬನೇ ನಿಂತು ನಿಂತೇ ಕಾಯುವುದಿದೆಯಲ್ಲ ಅದರ ಏಕತಾನತೆಯೇ ಅವನಿಂದ ಬದುಕು ಮತ್ತದರ ಇಚ್ಛೆ ಎರಡನ್ನೂ ಕಸಿದುಕೊಂಡು ಬಿಡುತ್ತದೆ. ಆ ಗಡಿಯಲ್ಲಿ ಕಾರ್ಯ ನಿರ್ವಹಿಸುವ ನಮ್ಮ ಸೈನಿಕ ಬಾಹ್ಯವಾಗಿ ಬರುವ ವೈರಿಯನ್ನು ಕ್ಷಣಾರ್ಧದಲ್ಲಿ ತರಿದು ಬಿಡಬಲ್ಲ ಹುಕಿಯೊಂದಿಗೆ ಎದ್ದು ನಿಲ್ಲುತ್ತಾನೆ. ಆದರೆ ಒಳಗಿದ್ದೇ ಹಿಂದಿನಿಂದ ಹಾರಿಸುವ ಗುಂಡಿಗೆ ಅವನಿಗರಿವಾಗೋ ಮೊದಲೇ ಎದೆ ಸೀಳಿರುತ್ತದೆ ಅದರೊಂದಿಗೆ ಕ್ರಮೇಣ ಈ ನೆಲದ್ದೂ.

ಇಲ್ಲಿ ಕೂತು ಕತೆ ಬರೆಯುವ, ಇಂಗ್ಲೀಷು ಲೇಖನದ ಭಟ್ಟಿ ಇಳಿಸುವ ಹೆಚ್ಚಿನ ಎಡಪಂಥೀಯರಿಗೆ ರಾಷ್ಟ್ರೀಯತೆಯಿಂದ ಆಗಬೇಕಾದುದೇನೂ ಇಲ್ಲ. ಅಸಲಿಗೆ ಅಚ್ಚ ಕಾಶ್ಮೀರದ ವಿಷಯ ಇವರಿಗೆಲ್ಲಾ ಗೊತ್ತೂ ಇಲ್ಲ. ಕಾರಣ ಆವತ್ತೂ, ಇವತ್ತೂ ಕಾಶ್ಮೀರದ ಯಾವ ಭಾಗಕ್ಕೆ ಬೇಕೆಂದರೂ ಸ್ವತಂತ್ರವಾಗಿ ಓಡಾಡಬಹುದಾದ ಪರಿಸ್ಥಿತಿ ಇಲ್ಲವೇ ಇಲ್ಲ. ಇದು ನನ್ನ ಅನುಭವ. ಅಷ್ಟ್ಯಾಕೆ ನಮ್ಮದೇ ರಾಜ್ಯದ ಕೆಲ ಭಾಗದಲ್ಲಿ ನಾವ್ಯಾರಾದರೂ ಒಬ್ಬಂಟಿಯಾಗಿ ಕಾಲಿಡುವ ಪರಿಸ್ಥಿತಿ ಇದೆಯಾ ಇವತ್ತು..? ಇವತ್ತು ಕಾಶ್ಮೀರದ ಹೆಚ್ಚಿನ ಪ್ರದೇಶಗಳಲ್ಲಿ ಇತರ ಧರ್ಮೀಯರಿಗೆ ಪ್ರವೇಶವೇ ಇಲ್ಲ. ಹಲವು ಬಾರಿ ಕಾಶ್ಮೀರಕೊಳ್ಳದಲ್ಲಿ ಸಂಚರಿಸಿರುವ ನಾನೇ ಇದಕ್ಕೆ ಜೀವಂತ ಉದಾ. ನಿಮ್ಮ ಸುತ್ತ ಮುತ್ತಲಲ್ಲೂ ಗಮನಿಸಿ ಕೇವಲ ಒಂದೂವರೆ ದಶಕದ ಹಿಂದೆ ಇರದಿದ್ದ ಬಟ್ಟೆ, ಬರೆ, ಬಣ್ಣ ಮತ್ತು ಜೀವನದ ಪದ್ಧತಿಗಳಲ್ಲಿ ಧರ್ಮ ಆವರಿಸಿಕೊಂಡಿರುವ ಪರಿ ನೋಡಿ..! ಬದಲಾಗುತ್ತಿರುವ ಇತರರ ನಂಬುಗೆ, ನಿಷ್ಟೆ ಹಿಂದೂಗಳಿಗೆ ಬೇಡ ಎನ್ನುವುದು ಯಾವ ನ್ಯಾಯ..?

ಅಲ್ಲಿ ಒಬ್ಬೇ ಒಬ್ಬ ಸೈನಿಕ ಕೂಡಾ ಇವತ್ತು ನಮ್ಮಂತೆ ನೆಮ್ಮದಿಯಿಂದ ರಾತ್ರಿ ನಿದ್ರೆ ಮಾಡಿದ ಉದಾಹರಣೆಗಳಿಲ್ಲ. ಹೊರಗಿನಿಂದ ನುಗ್ಗುವ ಶತ್ರು ಒಂದೆಡೆಯಾದರೆ, ಪೂರ್ಣ ಕಾಶ್ಮೀರದ ಒಳಗಿರುವ ಪಾಕಿಗಳೆಡೆಗಿನ ಅಭಿಮಾನದ ಅಂಧಾಭಿಮಾನಿಗಳು ಯಾವ ಹೊತ್ತಿಗೆ ಯಾವ ರೀತಿಯಲ್ಲಿ ತಿರುಗಿ ಬಿದ್ದು ಸೈನ್ಯದ ಬುಡಕ್ಕೆ ನೀರು ಬಿಡುತ್ತಾರೋ ಅರಿವಾಗದ ಸ್ಥಿತಿ. ಅದಕ್ಕಾಗೇ ಪ್ರತೀ ಸೈನಿಕನೂ ತನ್ನ ನೆಲ ಮತ್ತು ದೇಶ ಎಂದು ಬಡಿದಾಡುವಾಗ ನಿರ್ದಾಕ್ಷಿಣ್ಯನಾಗುತ್ತಾನೆ, ಯಾವ ದಯೆಯೂ ಅವನೆದುರಿಗೆ ಕಾಣಿಸುವುದಿಲ್ಲ ಅದಲ್ಲೆಕ್ಕಿಂತಲೂ ಮೊದಲು ನಮ್ಮ ಸೈನಿಕನಿಗೆ ಗಡಿ, ದೇಶ ಕಾಯುವ ಕರ್ತವ್ಯದೆಡೆಗಿನ ಬದ್ಧತೆ ಮತ್ತು ಅವನದೇ ಕುಟುಂಬಕ್ಕಾಗಿಯೂ ಬದುಕಬೇಕಾದ ಅವಶ್ಯಕತೆ ಎರಡೂ ಇದೆ. ಆದರೆ ಅನವಶ್ಯಕವಾಗಿ ಬಾಡಿಗೆ ದುಡ್ಡಿಗೆ ಜೀವ ಮಾರಿಕೊಳ್ಳುವ ಪಾತಕಿಗಳಿಗೆ ಇದೆಲ್ಲಿಯದು. ಅವನ ಲಕ್ಷ ಏನಿದ್ದರೂ ಭೂಮಿಯಾಚೆಗಿನ ಎಪ್ಪತ್ತು ಕನ್ಯೆಯರ ಕಡೆ ನೆಟ್ಟಿರುತ್ತದೆ. ಹಾಗಾಗಿ ಸಾಯಲೇ ಬಂದಿರುವವನಿಗೂ, ಕಾಯುವವನಿಗೂ ಅಗಾಧ ವ್ಯತ್ಯಾಸವಿರುತ್ತದೆ.

ಇದಕ್ಕೆಲ್ಲ ಕಳಸ ಪ್ರಾಯವಾಗಿ ಸ್ಥಳೀಯ ಬೆಂಬಲ ಇಲ್ಲದೇ ಒಂದು ದೇಶ ಮತ್ತದರ ನೆಲ ಕಾಯುವ ಕಾರ್ಯವಿದೆಯಿದೆಯಲ್ಲ ಅದಕ್ಕೆ ಬೇಕಿರುವ ದಮ್ಮೇ ಬೇರೆ. ಅಂತಹ ಗುಂಡಿಗೆಯ ಕೆಲಸವನ್ನು ಕಾಶ್ಮೀರದಲ್ಲಿ ನಮ್ಮ ಸೈನಿಕರು ಮಾಡುತ್ತಿದ್ದರೆ, ಇಲ್ಲಿ ಬೆಂಗಳೂರಿನ ಟೌನ್‍ಹಾಲ್ ಎದುರಿಗೆ ಅದು ಅಮಾನವೀಯ, ಅಲ್ಲಿ ನಮ್ಮವರಿಗೆ ಅನ್ಯಾಯವಾಗುತ್ತಿದೆ, ಸೈನಿಕರಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಬೊಬ್ಬೆಯಿಟ್ಟು ಮಧ್ನಾನ್ಹವಾಗುತ್ತಿದ್ದಂತೆ ಊಟದ ಮೆನು ಹುಡುಕುವ ಬುಜೀಗಳೇ.. ಎರಡೆ ಎರಡು ವಾರ ಅವನಂತೆ ಆ ಕನಿಷ್ಟ -18 ಡಿಗ್ರಿ ಉಷ್ಣಾಂಶ, ಲಭ್ಯವಿಲ್ಲದ ನೀರು, ಬಾರದ ಶೌಚ, ಕೇವಲ ಎರಡೂವರೆ ಅಡಿ ಜಾಗದಲ್ಲಿ ಕಾಲು ಮಡಚಿ ಅರ್ಧರ್ಧ ದಿನ ಕೂರುವ ಅನಿವಾರ್ಯತೆ ಇವೆಲ್ಲವನ್ನೂ ಒಮ್ಮೆ ಅನುಭವಿಸಿ ಬನ್ನಿ. ಯಾಕಿಷ್ಟು ಧೃಢವಾಗಿ ಹೇಳುತ್ತಿದ್ದೇನೆಂದರೆ ನಾನು ಹಾಗೆ ಅಲ್ಲೆಲ್ಲ ಕೂತೆದ್ದು ಬಂದು ನನ್ನ ದೇಶ ಕಾಯುವ ಸಹೋದರರು ದಿನವೂ ಹೇಗೆ ಇಷ್ಠಿಷ್ಠೆ ಸಾಯುತ್ತಿರುತ್ತಾರೆ ಎಂದು ಕಣ್ಣಾರೆ ನೋಡಿರುವುದರಿಂದ.

ಒಂದು ದೇಶಕ್ಕೆ ಅದರ ಗಡಿ ಕಾಯಲು ಸೈನ್ಯ ಹೇಗೆ ಮುಖ್ಯವೋ, ಹಾಗೇ ದೇಶದ ಅಂತರಾತ್ಮವನ್ನು ಅದರ ಪ್ರಜೆಗಳು ಕಾಯಬೇಕು. ಆದರೆ ನಾವು ಆತ್ಮಕ್ಕೆ ಮೊದಲ ಕೊಡಲಿ ಹೊಡೆಯಲು ಸಜ್ಜಾಗಿದ್ದರೆ ಗಡಿಯ ಯಾವ ಬೇಲಿ ನಮ್ಮನ್ನು ಕಾಯ್ದೀತು ಪ್ರತಿಯೊಬ್ಬನೂ ಯೋಚಿಸಬೇಕಾದ ವಿಷಯ.

(ಹೊಸದಿಗಂತ ಪತ್ರಿಕೆಯಲ್ಲಿ ಇನ್ನೆ[18-09-16] ಪ್ರಕಟವಾದ ಈ ಲೇಖನವನ್ನು ಲೇಖಕರ ಅನುಮತಿ ಪಡೆದು ರೀಡೂ ಕನ್ನಡದಲ್ಲಿ ಪ್ರಕಟಿಸಲಾಗಿದೆ)

Facebook ಕಾಮೆಂಟ್ಸ್

Santoshkumar Mehandale: ಅಂಕಣಕಾರರಾಗಿರುವ ಸಂತೋಷ್ ಕುಮಾರ್ ಮೆಹಂದಲೆ, ಮೂಲತಃ ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಪ್ರಸ್ತುತ ಕೈಗಾದಲ್ಲಿ ಉದ್ಯೋಗಿಯಾಗಿದ್ದಾರೆ. ಇದುವರೆಗೆ ೮ ಕಾದಂಬರಿಗಳು, ೩ ಕಥಾ ಸಂಕಲನಗಳೂ ಸೆರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
Related Post