X

ಈತ ಚಾಣಕ್ಯನೂ ಹೌದು, ಚಾಣಾಕ್ಷನೂ ಹೌದು..

ರಾಜಕೀಯದಲ್ಲಿ ಕಿಂಗ್ ಮೇಕರ್’ಗಳಿಗೆ ಬಹಳ ಮಹತ್ತರ ಪಾತ್ರ ಇದೆ. ಚುನಾವಣೆಯ ಬಳಿಕ ಆಡಳಿತ ಯಂತ್ರದ ಚುಕ್ಕಾಣಿಯನ್ನು ಹಿಡಿಯಲು ರಾಜಕೀಯ ಪಕ್ಷಗಳು ಅರಸುವುದು ಈ ಕಿಂಗ್ ಮೇಕರ್’ಗಳನ್ನೇ. ಆದರೆ ತಂತ್ರಜ್ಞಾನದ ಪ್ರಭಾವವೋ ಏನೋ ಅಥವಾ ತಂತ್ರಗಾರಿಕೆಯ ಕಾರಣವೋ ಚುನಾವಣೆಯ ನಂತರ ಕಿಂಗ್ ಮೇಕರ್’ಗಳನ್ನು ಹುಡುಕುವುದರ ಬದಲು ಚುನಾವಣೆಗೂ ಮುನ್ನ ಕಿಂಗ್ ಮೇಕರ್ ಒಬ್ಬರನ್ನು ಹಿಡಿದು ತಾವೇ ಕಿಂಗ್ ಆಗುವುದು ರಾಜಕೀಯ ಪಕ್ಷಗಳ ಸಧ್ಯದ ರಾಜಕೀಯ ನಡೆಯಾಗಿದೆ. ಅಂತಹ ಒಬ್ಬ ಕಿಂಗ್ ಮೇಕರ್ ಪ್ರಶಾಂತ್ ಕಿಶೋರ್!!

ಮೂಲತಃ ಬಿಹಾರದವರಾದ ಪ್ರಶಾಂತ್ ಕಿಶೋರ್ ವಿಶ್ವಸಂಸ್ಥೆಯ ಉದ್ಯೋಗಕ್ಕೆ ರಾಜೀನಾಮೆ ನೀಡಿ ಐಪ್ಯಾಕ್ ಸಂಸ್ಥೆಯನ್ನು ಸ್ಥಾಪನೆ ಮಾಡುತ್ತಾರೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಪ್ರಶಾಂತ್ ಅವರಿಗಿತ್ತು. ಇಂಡಿಯನ್ ಪಾಲಿಟಿಕಲ್ ಆಕ್ಷನ್ ಕಮಿಟಿ(ಐಪ್ಯಾಕ್) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಚುನಾವಣಾ ತಂತ್ರಗಾರಿಕೆಯನ್ನು ಉದ್ಯೋಗವನ್ನಾಗಿಸಿದ ಪ್ರಶಾಂತ್ ಕಿಶೋರ್’ಗೆ ಈಗ ರಾಜಕೀಯ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ. ರಾಜಕೀಯ ಪಕ್ಷಗಳಿಗೆ ಚುನಾವಣೆ ಗೆಲ್ಲಲು ರಣತಂತ್ರ ಹೂಡುವುದು ಮತ್ತು ಅದನ್ನು ಕಾರ್ಯಗತಗೊಳಿಸಲು ಹಗಲಿರುಳೂ ದುಡಿಯುವುದು ಇವರ ಕೆಲಸ. ೨೦೧೨ರ ಗುಜರಾತ್ ಚುನಾವಣಾ ಸಂದರ್ಭದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುತ್ತಾರೆ. ಮೋದಿ ಚುನಾವಣಾ ಪ್ರಚಾರಕ್ಕೆ ಹೈಟೆಕ್ ಟಚ್ ಕೊಡುತ್ತಾರೆ ಪ್ರಶಾಂತ್. ೩ಡಿ ಹಾಲೋಗ್ರಾಮ್ ಭಾಷಣದ ಮೂಲಕ ಮೋದಿ ಹೆಸರು ದೇಶವ್ಯಾಪಿಯಾಗುವಂತೆ ಮಾಡುತ್ತಾರೆ. ನಂತರ ಲೋಕಸಭಾ ಚುನಾವಣೆಯಲ್ಲೂ ಅಮಿತ್ ಶಾ ಮತ್ತು ಮೋದಿ ಬೆನ್ನ ಹಿಂದೆ ನಿಂತು ಕೆಲಸ ಮಾಡುತ್ತಾರೆ. ಪ್ರಶಾಂತ್ ತಂಡದಲ್ಲಿರೋರು ಹೆಚ್ಚಿನವರು ಐಐಟಿ ಪಧವೀರರು. ಇವರ ಪ್ರಚಾರ ತಂತ್ರಗಳೇ ವಿಭಿನ್ನ. ಸಾಮಾಜಿಕ ಜಾಲತಾಣಗಳಲ್ಲದೇ, ರೇಡಿಯೋ, ಟೀವಿ ಮುಖಾಂತರ ಜನಗಳನ್ನು ಸೆಳೆಯುವುದು ಇವರ ಕಾರ್ಯಶೈಲಿ. ಚುನಾವಣಾ ಕಾರ್ಯತಂತ್ರಕ್ಕಾಗಿಯೇ ಸುಸಜ್ಜಿತ ಕಾರ್ಯಾಲಗಳನ್ನು ಆರಿಸಿಕೊಳ್ಳುತ್ತಾರೆ. ಅದರಲ್ಲಿ   ತಾವು ಕೆಲಸ ಮಾಡುತ್ತಿರುವ ಪಕ್ಷದ ನಾಯಕರುಗಳು ಮತ್ತು ವಿಶ್ವದ ರಾಜಕೀಯ ನಾಯಕರುಗಳ ನುಡಿಮುತ್ತುಗಳು ರಾರಾಜಿಸುತ್ತವೆ. ಜೊತೆಗೆ ಎಲ್ಲಾ ನ್ಯೂಸ್ ಚಾನೆಲ್ ಗಳೂ ಪ್ರಸಾರವಾಗಲು ಒಂದಷ್ಟು ಟಿವಿಗಳು. ಜನಗಳ ಮನಸ್ಸನ್ನು ಮುಟ್ಟಬಲ್ಲ ಕ್ಯಾಚಿ ಸ್ಲೋಗನ್ ಮತ್ತು ವಿನೂತನ ಕಾರ್ಯಕ್ರಮಗಳು ಮತ್ತು ಪ್ರಚಾರ ಕಾರ್ಯದಲ್ಲಿ ಸೃಜನಶೀಲತೆ ಇವರ ಆಕ್ಷನ್ ಪ್ಲಾನ್.

೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಗೆಲುವಿನಲ್ಲಿ ಪ್ರಶಾಂತ್ ಪಾಲೂ ಮಹತ್ತರ. ಪ್ರಶಾಂತ್ ಅವರ ” ಅಗ್ಲೀ ಬಾರ್ ಮೋದಿ ಸರಕಾರ್” ಸ್ಲೋಗನ್ ಮತ್ತು ಚಾಯ್ ಪೇ ಚರ್ಚಾದಂತಹ ಕಾರ್ಯಕ್ರಮಗಳು ಮೋದಿ ಅವರ ವರ್ಚಸ್ಸನ್ನು ಇನ್ನೂ ಹೆಚ್ಚುವಂತೆ ಮಾಡಿ ಬಿಜೆಪಿಯನ್ನು ಗೆಲುವಿನತ್ತ ಕೊಂಡೊಯ್ಯುವುದರಲ್ಲಿ ಯಶಸ್ವಿಯಾಗಿತ್ತು. ಆದರೆ ಬಿಹಾರ ಚುನಾವಣೆಯ ಸ್ವಲ್ಪ ದಿನಗಳ ಮೊದಲು ನಿತೀಶ್ ಕ್ಯಾಂಪ್’ಗೆ ಸೇರಿದ್ದ ಪ್ರಶಾಂತ್ ಬಿಹಾರದಲ್ಲಿ ಮೋದಿ ಹವಾ ಟುಸ್ಸ್ ಆಗಿಸುವುದರಲ್ಲಿ ಯಶಸ್ಸಾಗಿದ್ದರು. ನಿತೀಶ್ ಗೆಲುವಿನ ನಗೆ ಬೀರಿ ಬಿಜೆಪಿ ಮಕಾಡೆ ಮಲಗುವಲ್ಲಿ ಪ್ರಶಾಂತ್ ರಾಜಕೀಯ ಲೆಕ್ಕಾಚಾರ ಮತ್ತು ಚತುರತೆ ಕಾರಣವಾಗಿತ್ತು. ಅಲ್ಲದೇ ಮೋದಿಯವರ ರಾಜಕೀಯ ನಿಲುವುಗಳನ್ನು ಬಹಳ ಹತ್ತಿರದಿಂದ ಅರಿತಿದ್ದ ಪ್ರಶಾಂತ್ ಬಹಳ ಜಾಣತನದಿಂದ ರಾಜಕೀಯ ದಾಳವನ್ನು ಉದುರಿಸಿದ್ದರು. ಮೋದಿ ಪಾಳಯಕ್ಕೆ ಟಾಂಗ್ ನೀಡಲು “ಫಿರ್ ಏಕ್ ಬಾರ್ ನಿತೀಶ್ ಕುಮಾರ್” ಘೋಷಣೆ ಫೇಸ್ಬುಕ್, ಟ್ವಿಟರ್, ಹೋರ್ಡಿಂಗ್ಸ್ ಎಲ್ಲಾ ಕಡೆ ಹರಿದಾಡಿತು. ಪರಿಣಾಮವಾಗಿ ಬಿಹಾರದಲ್ಲಿ ಕಮಲ ಅರಳಲಿಲ್ಲ.

ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ನಂಬಿಕೊಂಡಿರುವುದೂ ಇದೇ ಪ್ರಶಾಂತ್ ಕಿಶೋರ್ ಅವರನ್ನು. ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ಇನ್ನೇನು ಒಂದು ತಿಂಗಳಿದೆ ಅನ್ನುವಾಗ ಮೈಕೊಡವಿ ಏಳುವುದು ಸಂಪ್ರದಾಯ. ಉತ್ತರ ಪ್ರದೇಶದ ಗದ್ದುಗೆ ಏರದೇ ದಶಕಗಳೇ ಸಂದಿರುವಾಗ, ದೇಶದೆಲ್ಲಡೇ ದಿನೇ ದಿನೇ ಪಾತಾಳಕ್ಕಿಳಿಯುತ್ತಿರುವ ಪಕ್ಷದ ವರ್ಚಸ್ಸು ಮತ್ತು ರಾಹುಲ್ ಗಾಂಧಿಯವರ ನಾಯಕತ್ವವನ್ನು ಸಂಪೂರ್ಣವಾಗಿ ನಂಬಲಸಾಧ್ಯವಾಗಿರುವ ಸಂಕೀರ್ಣ ಪರಿಸ್ಥಿತಿ ತಲುಪಿರುವಾಗ ಕಾಂಗ್ರೆಸ್’ಗೆ ಭರವಸೆಯ ಆಶಾಕಿರಣವಾಗಿ ಕಂಡು ಬಂದುವರು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್. ಮೋದಿ ಮತ್ತು ನಿತೀಶ್’ರ ಗೆಲುವಿಗೆ ಕಾರಣರಾಗಿದ್ದ ಪ್ರಶಾಂತ್ ಮೇಲೆ ಕಾಂಗ್ರೆಸ್ ಬಹಳ ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದೆ. ೨೭ ಸಾಲ್ ಯುಪಿ ಬೇಹಾಲ್ ಘೋಷಣೆ, ೬ ತಿಂಗಳ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್ ಘೋಷಣೆ, ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿ ಗುಲಾಂ ನಬಿ ಆಜಾದ್, ರಾಜ್ಯಾಧ್ಯಕ್ಷರಾಗಿ ರಾಜ್ ಬಬ್ಬರ್ ನೇಮಕ ಇವೆಲ್ಲಾ ಪ್ರಶಾಂತ್ ಅವರ ಮಾಸ್ಟರ್ ಪ್ಲಾನ್. ಪಂಜಾಬ್’ನಲ್ಲಿಯೂ ಟಿಕೆಟ್ ಹಂಚಿಕೆಗೆ ಹೊಸ ವಿಧಾನವನ್ನು ಜಾರಿಗೆ ತಂದಿರುವ ಪ್ರಶಾಂತ್ ಮತ್ತು ತಂಡ ಪ್ರತೀ ಕ್ಷೇತ್ರದಲ್ಲಿಯೂ ಬೇರು ಮಟ್ಟದಲ್ಲಿ ಕ್ಷೇತ್ರದ ಬಗ್ಗೆ ಗೊತ್ತಿರುವ ಕಾರ್ಯಕರ್ತರಿಗೆ ಮಾತ್ರ ಪಕ್ಷದ ಟಿಕೆಟ್ ಎಂಬ ಸೂತ್ರವನ್ನು ಜಾರಿಗೊಳಿಸಿದ್ದಾರೆ. ಪ್ರಶಾಂತ್ ಪ್ರಚಾರ ಶೈಲಿಯಿಂದ ಸಹಜವಾಗಿಯೇ ಉತ್ತರ ಪ್ರದೇಶ ಮತ್ತು ಪಂಜಾಬ್ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ. ಆದರೆ ದೆಹಲಿಯಲ್ಲಿ ತಿರಸ್ಕೃತವಾಗಿದ್ದ ಶೀಲಾ ದೀಕ್ಷಿತ್ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಎಂಬ ಮುಳುಗಿರುವ ಹಡಗನ್ನು ಮೇಲೆತ್ತುವುದು ಪ್ರಶಾಂತ್ ಕಿಶೋರ್ ಮತ್ತವರ ತಂಡದ ಕಾರ್ಯಕ್ಷಮತೆಯ ಮೇಲೆ ಬಹಳ ಅವಲಂಬಿತವಾಗಿದೆ. ಮೋದಿ ಮತ್ತು ನಿತೀಶ್ ಗೆಲುವಲ್ಲಿ ಬಹಳ ದೊಡ್ದ ಫ್ಯಾಕ್ಟರ್ ಆಗಿದ್ದ ಪ್ರಶಾಂತ್ ಕಾಂಗ್ರೆಸ್ ದೋಣಿಯನ್ನು ಯಶಸ್ಸಿನೆಡೆಗೆ ಮುನ್ನಡೆಸುವ ನಾವಿಕರಾಗುವರೇ ಅನ್ನುವುದು ರಾಜಕೀಯ ಪಡಸಾಲೆಯಲ್ಲಿ ಸಧ್ಯದಲ್ಲಿ ಹರಿದಾಡುತ್ತಿರುವ ಬಹುದೊಡ್ಡ ಪ್ರಶ್ನೆ.

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post