X

ಅನ್ನದಾತನ ಆತ್ಮಬಲಕೆ ಅಕ್ಷಯಪಾತ್ರೆಯಿದು ಮಂಡ್ಯ.

ಜೀವನದಿ ಕಾವೇರಿಗೆ ಕಂಟಕ ಬಂದೆರಗಿದೆ ಎಂದರೆ ಮೊದಲು ಎಚ್ಚೆತ್ತು ಆರ್ಭಟಿಸುವ ನಾಡು ಮಂಡ್ಯ. ಕಾವೇರಿ ಕೊಳ್ಳದ ಹೋರಾಟ ಮಂಡ್ಯದಿಂದಲೇ ಶುರುವಾಗುವುದಾದರೂ ಅದೂ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಆವರಿಸಿಕೊಳ್ಳುತ್ತದೆ. ಸಾಂಘಿಕ ಸ್ವರೂಪವನ್ನೂ ಪಡೆದುಕೊಳ್ಳುತ್ತದೆ. ಪ್ರತಿಭಟನೆ,ಧರಣಿ, ಹರತಾಳ, ಮುಷ್ಕರಗಳು ಹೀಗೆ ಪ್ರತಿರೋಧದ ಹಲವು ಆಯಾಮಗಳಲ್ಲಿ ವ್ಯವಸ್ಥೆಗಳನ್ನೇ ಅಸ್ತವ್ಯಸ್ತ ಮಾಡಬಲ್ಲ ಶಕ್ತಿ ಹೊಂದಿರುವ ಬಲಿಷ್ಠ ನಾಡು ಮಂಡ್ಯ. ಕಾವೇರಿ ನದಿಪಾತ್ರದ ಜನರು ನೀರಿನ ಕುರಿತಾದ ಪಟ್ಟುಗಳನ್ನು, ರೈತ ಸಂಬಂಧಿ ವಿಚಾರಗಳನ್ನು ಪ್ರತಿಪಾದಿಸುವುದರಲ್ಲಿ ಯಾವತ್ತೂ ಹಿಂದೆ ಬಿದ್ದವರಲ್ಲ. ರೈತ ಸಮುದಾಯವೊಂದು ಹಕ್ಕುಗಳನ್ನು ಒಕ್ಕೊರಲಾಗಿ ನಿಂತು ಕೇಳುವ ಪ್ರಕ್ರಿಯೆ ಇಡೀ ದೇಶದಲ್ಲೇ ಅತೀ ವಿರಳ. ಆ ಹಿನ್ನಲೆಯಲ್ಲಿ ಮಂಡ್ಯ ಇಡೀ ರಾಷ್ಟ್ರದ ರೈತರಿಗೆ ಪ್ರೇರಣೆಯಾಗೇ ನಿಲ್ಲುತ್ತದೆ. ನಿಲ್ಲಬೇಕು ಕೂಡ. ರೈತ ದೇಶದ ಬೆನ್ನೆಲುಬು, ಅನ್ನದಾತನಿಂದಲೇ ಈ ದೇಶ, ಕೃಷಿ ಈ ದೇಶದ ಜೀವಾಳ ಎಂದೆಲ್ಲ ಬುರುಡೆ ಬಿಟ್ಟು ರೈತರನ್ನು ಬಂಡವಾಳ ಮಾಡಿಕೊಂಡ ಭಾರತದಲ್ಲಿ ಹೀಗೊಂದು ಮಾದರೀ ರೈತ ಸಮುದಾಯ ಇದೆಯೆನ್ನುವುದೇ ಹೆಮ್ಮೆ. ಕೃಷಿ ಪ್ರಧಾನ ದೇಶ ಇದು ಎಂಬುದೇನೋ ನಿಜ. ಆದರೆ ರೈತಕೇಂದ್ರಿತ ಸಮಾಜ ನಮ್ಮದಲ್ಲ, ಆ ಮಾದರಿಯ ಆದ್ಯತೆಗಳೂ ನಮ್ಮ ವ್ಯವಸ್ಥೆಗಿಲ್ಲ ಎನ್ನುವುದೇ ದುರಂತ. ಏನೇ ಯೋಚನೆ ಯೋಜನೆಗಳಿರಲಿ ಅದರ ಅಂತಿಮ ಪೆಟ್ಟು ರೈತರಿಗೇ ಬಿದ್ದ ನಿದರ್ಶನಗಳು ನಮ್ಮಲ್ಲಿ ಲೆಕ್ಕವಿಲ್ಲದಷ್ಟು ದಿನ ನಿತ್ಯ ಘಟಿಸುತ್ತಿರುತ್ತದೆ. ಆದರೆ ಯಶಸ್ಸು ಮಾತ್ರ ರೈತನ ಮುಕುಟವೇರಿದ ಕತೆಗಳೇ ಕಡಿಮೆ.

ಖುಷಿಯ ಸಂಗತಿಯೆಂದರೆ ಹೋರಾಟವನ್ನು ರೂಪಿಸುವ ನೆಲೆಯಲ್ಲಿ ಈ ನಾಡು ಇನ್ನಿತರ ನಾಯಕ ಕೇಂದ್ರಿತ ಚಳುವಳಿಗೆ ಸಂಪೂರ್ಣ ತದ್ವಿರುದ್ದ. ಇಲ್ಲಿನ ಜನ ಸಂಘರ್ಷ, ನ್ಯಾಯಯುತ ಹೋರಾಟಗಳಿಗೆ ಯಾವ ದೊಣ್ಣೆ ನಾಯಕನನ್ನೂ ಕಾಯುವುದಿಲ್ಲ. ರಾಜಕೀಯ ನಾಯಕರ ಊವಾಚಗಳಿಗೆ ಕಿವಿಗೊಡುವುದೂ ಇಲ್ಲ, ಬದಲಾಗಿ ತಾವೇ ಹೋರಾಟ ರೂಪಿಸುತ್ತಾರೆ. ತನಗೆದುರಾಗಿ ನಿಂತರೆ ಎಂತಹಾ ವರ್ಚಸ್ವೀ ಜನನಾಯಕನೇ ಇರಲಿ, ಗಟ್ಟಿಸಿದ್ದಾಂತಗಳೋ ಇಲ್ಲ ಸೆಲೆಬ್ರಿಟಿಗಳೇ ಇರಲಿ ಲೆಕ್ಕಿಸದೆ ಮಕಾಡೆ ಮಲಗಿಸಿ ಧೂಳೀಪಟ ಮಾಡುತ್ತಾರೆ. ಇಲ್ಲಿನ ನಾಯಕತ್ವವನ್ನು ಇಲ್ಲಿನ ರೈತಾಪಿ ಜನ ಯಾರ ಕೈಯಲ್ಲೂ ಅಡವಿಡುವುದಕ್ಕೆ ಬಿಟ್ಟಿಲ್ಲ. ಪ್ರಸ್ತುತ ನಮ್ಮ ಪರಿಸ್ಥಿತಿ ಹೇಗಿದೆಯೆಂದರೆ ರಾಷ್ಟ್ರೀಯ ಪಕ್ಷಗಳು ಅಪ್ಪಣೆ ಹೊರಡಿಸುವುದನ್ನೇ ಕಾಯುತ್ತಿರುವವರು ಒಂದೆಡೆಯಾದರೆ,  ಹೈಕಮಾಂಡು ಗ್ರೀನ್‍ಸಿಗ್ನಲ್ ತೋರುವವರೆಗೂ ತುಟಿಪಿಟಿಕ್ಕೆನ್ನದ ಇನ್ನೊಂದು ಮಗ್ಗುಲಿನ ನಾಯಕರದ್ದೇ ಮೇಲಾಟಗಳು. ರಾಜಕೀಯ ರಂಗದ ಬಗೆಬಗೆಯ ನಾಟಕಗಳನ್ನು ನೋಡಿರುವ ರಾಜ್ಯಕ್ಕೆ ರೈತರೇ ಬೀದಿಗಿಳಿದು ರೂಪಿಸಿರುವ ಮಂಡ್ಯದ ಹೋರಾಟ ನಿಜಕ್ಕೂ ಮಾದರಿಯಲ್ಲದೆ ಮತ್ತೇನು?

ಹಾಗೆ ನೋಡಿದರೆ ಮಂಡ್ಯ ಎನ್ನುವುದು ಕಂದಾಯ ಇಲಾಖೆ ಹೇಳಿದಂತೆ, ಆಡಳಿತ ವ್ಯವಸ್ಥೆ ಕಟ್ಟಿಕೊಟ್ಟಂತೆ ಬರೇ ಏಳು ಜಿಲ್ಲೆಗಳ ಒಂದು ಪ್ರಾದೇಶಿಕ ಸಂರಚನೆ ಖಂಡಿತಾ ಅಲ್ಲ. ಮಂಡ್ಯ ಎನ್ನುವುದೇ ಒಂದು ಜನಸಮೂಹ ಪ್ರಣೀತ ಅಸ್ತಿತ್ವ. ಅದು ಬೆಂಗಳೂರು,ರಾಮನಗರ, ತುಮಕೂರು, ಮೈಸೂರು,ಚಾಮರಾಜನಗರ, ಕೊಡಗು, ಹಾಸನ ಮತ್ತಿತರ ಜಿಲ್ಲೆಗಳನ್ನೂ ತನ್ನ ಕಾವಿನೊಳಗೆ ಕಾಪಿಟ್ಟು ಹೋರಾಟ ರೂಪಿಸುತ್ತದೆ.  ರೈತಾಪಿ ವರ್ಗವೇ ಹೇರಳವಾಗಿರುವ ಈ ಭಾಗಗಳು ಹೋರಾಟದ ಕಿಚ್ಚು, ಸ್ವಾಭಿಮಾನಗಳನ್ನು ಸಮಸಮವಾಗಿಯೇ ಬೆಸೆದುಕೊಂಡಿದೆ. ಇಲ್ಲಿ ಐಡೆಂಟಿಗಾಗಿ ಜಗಳ ನಡೆಯುವುದಿಲ್ಲ. ಬದಲಾಗಿ ಸಾಮೂಹಿಕವಾಗಿಯೇ ರೈತಾಪಿ ವರ್ಗ ಸಿಡಿದಬ್ಬರಿಸುತ್ತದೆ. ರೈತ ಚಳುವಳಿಗಳು ಈ ಭಾಗದಲ್ಲಿ ಪಾರಮ್ಯ ಮೆರೆಯಲು ಈ ಭಾಗದ ಗಟ್ಟಿ ಮಾನಸಿಕತೆಯೇ ಕಾರಣ. ಹಿಂದೆ ಗುಂಡೂರಾವ್ ರೈತ ವಿರೋಧಿ ನಿಲುವುಗಳಿಗೆ ಬೀದಿಗಿಳಿದು ಗುಂಡಿಗೆ ಎದೆಯೊಡ್ಡಿದ ಕೀರ್ತಿ ಈ ನಾಡಿನದ್ದು.

ವಿಶಿಷ್ಟವಾದ ಹಿರಿಮೆಯೊಂದು ಈ ಭೂಪ್ರದೇಶಕ್ಕಿದೆ. ರಾಮನಗರದಾಚೆಗೆ ಕಾಲಿಡುತ್ತಲೇ ಬೆಂಗಳೂರು ಬಾಯ್ದೆರೆದು ಆಪೋಶನಕ್ಕೆ ರೆಡಿಯಾಗಿ ಕುಳಿತಿರುತ್ತದೆ. ಬೆಂಗಳೂರಿನ ದಾಹ ದಾಂಗುಡಿಗಳು ಯಾರಿಗೂ ತಿಳಿಯದೇ ಇರುವಂತದ್ದಲ್ಲ. ಭಾಷೆ,ಬದುಕು, ಸ್ವಾಭಿಮಾನಗಳನ್ನೇ ಸದ್ದಡಗಿಸುವ ಧಾವಂತ ಅದರದ್ದು!! ಹೇಳಿ ಕೇಳಿ ಅಲ್ಲಿರುವುದು ಹೈಟೆಕ್ ಮಂದಿ!, ವ್ಯಾಪಿಸಿರುವುದು ಐಟಿ, ಬಿಟಿ ಹಬ್, ಉದ್ಯೋಗದ ಹುಡುಕಾಟಕ್ಕೆ ಎಲ್ಲಿಂದಲೋ ಬಂದು ಇಲ್ಲೇ ಸೆಟ್ಲಾಗಿರುವವರೇ ಜಾಸ್ತಿ. ಕೃಷಿ ಎಂದರೆ ಮೂಗು ಮುರಿಯುವವರು, ಕೇವಲವಾಗಿ ನೋಡುವವರು ಬೆಂಗಳೂರಿನಲ್ಲಿ ಬಹುಪಾಲು ಜನರಿದ್ದಾರೆ. ಅದರಲ್ಲಿ ರೈತ ಕುಟುಂಬದ ಹಿನ್ನಲೆಯವರೂ ಇದ್ದಾರೆ ಎನ್ನುವುದೇ ದುರಂತ! ಇನ್ನು ಮೈಸೂರಿಗೆ ಪ್ರವಾಸೀ ತಾಣ ಎಂಬ ಹೆಗ್ಗಳಿಕೆಗಳು ಲೆಕ್ಕವಿಲ್ಲದಷ್ಟು ಹಿರಿಮೆ ಗರಿಮೆ ತಂದಿತ್ತಿವೆ. ಇಂದಿಗೂ ಕೆಆರ್‍ಎಸ್ ಅಣೆಕಟ್ಟು ಮೈಸೂರು ಜಿಲ್ಲೆಯಲ್ಲಿದೆ ಎಂದೇ ಬಹುತೇಕ ಪ್ರವಾಸಿಗರು ಭಾವಿಸಿದ್ದಾರೆ. ಅಸಲಿಗೆ ಅದು ಇರುವುದು ಮಂಡ್ಯದಲ್ಲಿ. ಅಚ್ಚರಿ ಹಾಗೂ ತೇಜೋಹಾರಿ ಸಂಗತಿಯೆಂದರೆ ಇಷ್ಟೆಲ್ಲ ಪ್ರಭಾವ,ಸೆಳೆತಗಳ ಮದ್ಯದಲ್ಲೂ ಮಂಡ್ಯ ಗ್ರಾಮೀಣ ಸೊಗಡನ್ನು ಬೆಂಗಳೂರಿನ ತೆಕ್ಕೆಗಾಗಲೀ, ಮೈಸೂರಿನ ವಶಕ್ಕಾಗಲೀ ನೀಡಿಲ್ಲ. ಇದು ರೈತಾಪಿ ವರ್ಗದ ಅಂತಃಸತ್ವದ ಗಟ್ಟಿತನಗಳೇ ಹೌದು. ತನ್ನದೇ ಭಾಷೆಯ ಸೊಗಡು, ತನ್ನದೇ ಜೀವನ ಶೈಲಿ, ತನ್ನದೇ ಪರಂಪರೆಯ ಮೂಲಕ ಅದು ಎರಡೂ ನಗರಗಳನ್ನು ಮೀರಿಸುವ ಮಟ್ಟಿಗೆ ಎದೆಯುಬ್ಬಿಸಿ ನಿಂತಿದೆ. ಚಿತ್ರರಂಗವೇ ಮಂಡ್ಯ ಭಾಷೆಯ ಬಳಕೆಗೆ,ಜೀವನ ಶೈಲಿಯ ಅನುಕರಣೆಗೆ ಸರತಿಯಲ್ಲಿ ಕಾದು ಕುಳಿತಿರುತ್ತದೆ ಎನ್ನುವುದು ಇಲ್ಲಿ ಗಮನಾರ್ಹ.

ಮಂಡ್ಯದ ಜನರು ಜಾತೀಯವಾದಿಗಳೆಂದು ಅನೇಕರು ಅಪವಾದ ಹೊರಿಸುತ್ತಾರೆ. ಆದರೆ ಜಾತೀಯವಾದದಲ್ಲಿ ಈ ನೆಲ ಅಷ್ಟೊಂದು ನಂಬಿಕೆಯಿಟ್ಟಿದ್ದರೆ ಇಲ್ಲಿ ಗ್ರಾಮ ಗ್ರಾಮದಲ್ಲಿ ವಿಶ್ವೇಶ್ವರಯ್ಯನವರ ಪ್ರತಿಮೆ ಎದ್ದು ನಿಲ್ಲುತ್ತಿರಲಿಲ್ಲ. ಇಂದು ಇಡೀ ಮಂಡ್ಯಕ್ಕೆ ಮಂಡ್ಯವೇ ವಿಶ್ವೇಶ್ವರಯ್ಯನವರಿಗೆ ಕೊಡುವ ಗೌರವ ವರ್ಣಿಸಲಸದಳ. ಭಾಷೆ ಮತ್ತು ಜನರು ಒರಟು ಎಂದು ಅನೇಕರು ಅಭಿಪ್ರಾಯ ಪಡುತ್ತಾರೆ. ಆದರೆ ಎರಡು ಮಹಾನಗರಿಗಳನ್ನು ಬಗಲಲ್ಲಿ ಕಟ್ಟಿಕೊಂಡರೂ ಮಂಡ್ಯದಿಂದ ಮುಗ್ದತೆ ಹೊರಟು ಹೋಗಿಲ್ಲ. ಪ್ರೀತಿಗೆ ಬರವೂ ಭಾದಿಸಿಲ್ಲ. ಅದಕ್ಕೆ ಈ ನಾಡಿನ ಹಬ್ಬಗಳು, ವೈಯಕ್ತಿಕ ನೆಲೆಯ ಕಾರ್ಯಕ್ರಮಗಳಿಗೆ ಜನ ಸ್ಪಂದಿಸುವ ರೀತಿಯೇ ಅಭೂತಪೂರ್ವ. ಇದರಾಚೆಗೆ ಇಲ್ಲಿನ ಸಾಂಘಿಕ ಹೋರಾಟಗಳಾದರೂ ಯಾವತ್ತೂ ಕಳೆಗುಂದಿಲ್ಲ. ನಾಡು-ನುಡಿ, ನೆಲ-ಜಲದ ಬಗೆಗೆ ಇಲ್ಲಿಯ ಜನರ ನಿಲುವುಗಳು ಎಂದಿಗೂ ಸ್ತುತ್ಯರ್ಹ. ಕಾವೇರಿ ಪ್ರವಹಿಸದ ಊರಿನ ಜನರೂ ಹೋರಾಟದ ನೇತೃತ್ವ ವಹಿಸುತ್ತಿದ್ದಾರೆ. ಶಿಂಷಾ, ಲೋಕಪಾವನಿ ಆಧಾರಿತ ಕೃಷಿ ಮಾಡುವವರೂ ಕಾವೇರಿ ನಮ್ಮವಳೆಂದೇ ಬಗೆದು ನ್ಯಾಯಕ್ಕೆ ಆಗ್ರಹಿಸುತ್ತಾರೆ. ಹೀಗೆಲ್ಲ ಮಾಡಿ ಇಂದು ಒರಟುತನದಿಂದ ಬೀದಿಗಿಳಿದು ಜನ ನೀರಿಗೆ ಆಗ್ರಹಿಸದಿರುತ್ತಿದ್ದರೆ. ರಾಜಕೀಯ ಇಚ್ಚಾಶಕ್ತಿ ಯಾವುದೇ ಕಾರಣಕ್ಕೂ ಮೈದಳೆಯುತ್ತಿರಲಿಲ್ಲ. ದೆಹಲಿವರೆಗೆ ಕಾವೇರಿ ಕೂಗು ಕೇಳಿಸುತ್ತಲೂ ಇರಲಿಲ್ಲ. ಒಕ್ಕೂಟ ವ್ಯವಸ್ಥೆ ಮಾಡಿದ ದ್ರೋಹಕ್ಕೆ ಇಡೀ ರಾಜ್ಯವೇ ಆಕ್ರಂದಿಸಿ ಸುಮ್ಮನಾಗುತ್ತಿತ್ತು. ಹೋರಾಟದ ಕಿಚ್ಚು ಹಚ್ಚಿಸಿದ್ದು ಮಂಡ್ಯದ ಹೆಗ್ಗಳಿಕೆ. ಸಂಕಷ್ಟದ ಗಹನತೆ ಎಷ್ಟಿದೆಯೆಂಬುದರ ಅಭಿವ್ಯಕ್ತಿ ಇದು.

ಸಾಮಾನ್ಯವಾಗಿ ಜಿಲ್ಲಾ ಕೇಂದ್ರಗಳು ಪ್ರತಿಭಟನೆಯ ತಾಣಗಳಾಗುತ್ತದೆ. ಇಲ್ಲಿ ಹಾಗಲ್ಲ, ಮಹಿಳೆಯರು,ಮಕ್ಕಳೂ ಸೇರಿದಂತೆ ಗ್ರಾಮ ಗ್ರಾಮಗಳೂ ಹರತಾಳದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಸಂಸಾರದ ನೊಗ ಹೊತ್ತಿರುವ ರೈತರೇ ಕೆಆರ್‍ಎಸ್‍ಗೆ ಧುಮುಕಲೂ ಹಿಂದೆ ಮುಂದೆ ನೋಡುವುದಿಲ್ಲ. ಅದು ನೋವಿನ ತೀವ್ರತೆಗೆ ಕೈಗನ್ನಡಿ. ಇಂದು ಕಾರ್ಮಿಕ ವರ್ಗ ಇಂತಹದ್ದೊಂದು ಪ್ರತಿಭಟನೆ ಮಾಡುವುದಾದರೆ ಅದಕ್ಕೆ ಸಾಂಸ್ಥಿಕತೆಯ ಶ್ರೀರಕ್ಷೆಯಿದೆ. ವ್ಯವಸ್ಥೆ ಪ್ರತಿಭಟನೆಗಿಳಿದರೆ ಅದಕ್ಕೆ ಟ್ರೇಡ್ ಯೂನಿಯನ್ನಿನ ಬೆಂಬಲಗಳಿವೆ. ಆದರೆ ರೈತರಿಗೆ ಯಾರಿದ್ದಾರೆ? ಬವಣೆ ಬೇಗುದಿಗಳೇ ಇವರ ಇಚ್ಚಾಶಕ್ತಿಗಳು. ಇಂದು ಮಹದಾಯಿ, ನೇತ್ರಾವತಿ ಸಂಬಂಧಿ ರೈತ ಹೋರಾಟಗಳೂ ಚಾಲ್ತಿಯಲ್ಲಿವೆ ಆದರೆ ಅದಕ್ಕೆ ಜನಮಾನಸದ ಸಕ್ರಿಯ ಪಾಲ್ಗೊಳ್ಳುವಿಕೆ ಇಂತಹದ್ದೊಂದು ಗಂಭೀರ ಸ್ವರೂಪ ತಳೆದಿಲ್ಲ. ಇಂದು ಪ್ರಭುತ್ವಗಳನ್ನು ತಲುಪುವುದೇ ಸವಾಲಾಗಿರುವ ಹೊತ್ತಿನಲ್ಲಿ ಜನಪ್ರತಿನಿಧಿಗಳು ಮನೆ ಹುಡುಕುವುದರಲ್ಲಿ, ಭದ್ರತೆಯ ಭೀತಿಯಲ್ಲಿ,ಹೊರದೇಶದಲ್ಲಿ ಇಸ್ಪೀಟು ಆಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಬುದ್ದಿವಂತರಾದ ನಾವು ಕನ್ನಂಬಾಡಿ ಕಟ್ಟಿದ್ದು ವಿಶ್ವೇಶ್ವರಯ್ಯನಾ? ಟಿಪ್ಪು ಸುಲ್ತಾನನಿಗೆ ಕನಸು ಬಿತ್ತಾ, ಸರ್ ಎಂ.ವಿ ಕರ್ಮಠ ಬ್ರಾಹ್ಮಣರಾ ಎಂದು ನಯಾಪೈಸೆ ಲಾಭವಿಲ್ಲದ ಚರ್ಚೆ ಶುರು ಮಾಡಿದ್ದೇವೆ. ಊರಲ್ಲಿರುವ ಸಂಸದರು ತಮ್ಮ ಲಾಭ ನಷ್ಟದ, ಸಂಬಳದ ಲೆಕ್ಕಾಚಾರದಲ್ಲೇ ಮುಳುಗುತ್ತಾರೆ. ಇನ್ನುಳಿದ ಜನಪ್ರತಿಧಿಗಳ ಕತೆಯಂತೂ ಭ್ರಮ ನಿರಸನವನ್ನೇ ಸೃಜಿಸುತ್ತದೆ.  ಹಾಗಾದರೆ ಪ್ರಾದೇಶಿಕ ಸಮಸ್ಯೆಗಳ ಬಗೆಗೆ ತಲೆ ಕೆಡಿಸಿಕೊಳ್ಳುವವರಾರು? ರೈತಾಪೀ, ಕೂಲಿ ಕಾರ್ಮಿಕ,ಮುಂತಾದ ಅಬಲ ವರ್ಗವೂ ಹೋರಾಟಗಳನ್ನು ಸಶಕ್ತವಾಗಿ ಸಂಘಟಿಸಬಹುದಾ?

ಮಂಡ್ಯ ಈ ಹೋರಾಟಕ್ಕೆಲ್ಲ ಹೊಸ ಭರವಸೆ ತುಂಬಬಲ್ಲ ಅಕ್ಷಯ ಪಾತ್ರೆ.

ಶಿವಪ್ರಸಾದ್ ಸುರ್ಯ, ಉಜಿರೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post