X

ಹರ್ಷನ ಈ ಹರುಷದ ಹಿಂದೆ ವರುಷಗಳ ಸಂಕಟವಿದೆ…

ನನಗದು ಹೇಗೆ, ಯಾವಾಗ ಮತ್ತು ಯಾಕೆ ಆ ಆಸೆ ಹುಟ್ಟಿಕೊಂಡಿತೋ ನೆನಪಿಲ್ಲ. ಸಣ್ಣವನಿರುವಾಗಲೇ ಕ್ರಿಕೆಟ್ ಕಾಮೆಂಟೇಟರ್ ಆಗಬೇಕೆನ್ನುವ ಆಸೆ. ಬಹುಶಃ ಕ್ರಿಕೆಟ್ ನೋಡುತ್ತಾ, ಆಡುತ್ತಾ ಬೆಳೆದುದರ ಇಂಪ್ಯಾಕ್ಟ್ ಆಗಿರಲೂಬಹುದು. ನನಗೆ ಗೊತ್ತಿರುವ ಅರೆಬರೆ  ಇಂಗ್ಲೀಷಿನಲ್ಲೇ ಬಾಯಿಗೆ ಬಂದಿದ್ದನ್ನು ಒದರುವುದು ಈಗಲೂ ನನ್ನ ಗೀಳಾಗಿ ಬಿಟ್ಟಿದೆ. ಅವಾಗೆಲ್ಲ “ಬೌಂಡ್ರೀ ಕೇ ಬಾಹರ್ ಚಾರ್ ರನ್..” ಎನ್ನುವ ಜನಪ್ರಿಯ ರೇಡಿಯೋ ಕಾಮೆಂಟರಿಯನ್ನು ಅದೆಷ್ಟು ಬಾರಿ ಗಂಟಲು ಹರಿದುಕೊಂಡು  ಅನುಕರಿಸಿದ್ದೇನೋ ಲೆಕ್ಕವೇ ಇಲ್ಲ. . ಕಾಮೆಂಟೇಟರ್ ಆಗಬೇಕೆನ್ನುವ  ನನ್ನ ಆಸೆ ನೇರವೇರಿಲ್ಲ, ಇನ್ನು ನೆರವೇರುವುದೂ ಇಲ್ಲ.  ಆದರೆ ನನ್ನಂತ ಹತ್ತಾರು ಹುಚ್ಚು ಮನಸ್ಸಿನ ಹುಡುಗರಿಗೆ ಇಂತಹದ್ದೇ ಆಸೆ ಹುಟ್ಟಿಸಿದ್ದು ಹರ್ಷ ಭೋಗ್ಲೆ, ರವಿ ಶಾಸ್ತ್ರಿಯಂತಹಾ ಕಾಮೆಂಟೇಟರ್’ಗಳು ಎಂಬುದು ಸುಳ್ಳಲ್ಲ.

ಕೆಲವರು ಏನಕ್ಕೂ ಲಾಯಕ್ಕಿಲ್ಲದವರು ಅದಾಗಲೇ ಪ್ರಸಿದ್ಧವಾಗಿರುವ ಸ್ಥಾನಕ್ಕೆ ಬಂದು ಮುಂದೆ ತಾವೂ ಪ್ರಸಿದ್ದರಾಗುತ್ತಾರೆ.  ಕೆಲವೇ ಕೆಲವರು ಮಾತ್ರ ತಮ್ಮದೇ ವರ್ಚಸ್ಸಿನಿಂದ ತಾವು ಕೂತಿರುವ ಸ್ಥಾನಕ್ಕೆ ವರ್ಚಸ್ಸನ್ನು ತಂದು ಕೊಡುತ್ತಾರೆ. ಎಷ್ಟೆಂದರೆ ಸಾಮಾನ್ಯರು ಆಸೆ ಪಟ್ಟುಕೊಳ್ಳಬೇಕು “ನಾನೂ ಆ ಸ್ಥಾನಕ್ಕೆ ಏರಬೇಕೆಂದು. ನಾನೂ ಸಹ ಅವನಂತಾಗಬೇಕು” ಅಂತ. ಹರ್ಷ ಭೋಗ್ಲೆಯೂ ಹಾಗೆಯೇ. ಕ್ರೀಡಾ ಜಗತ್ತಿನಲ್ಲಿ ಎಂತೆಂತಹಾ ಕಾಂಮೆಂಟೇಟರುಗಳಿದ್ದಾರೆ. ಆದರೆ ತನ್ನದೇ ಆದ ವಿಶ್ಲೇಷಣೆಯ ಮೂಲಕ, ಹಾವಭಾವದ ಮೂಲಕ ಕಾಮೆಂಟರಿ ಕ್ಷೇತ್ರಕ್ಕೆ ಹೆಚ್ಚಿನ ಹೊಳಪನ್ನು ತಂದುಕೊಟ್ಟ ಕೆಲವೇ ಕೆಲವರಲ್ಲಿ  ಹರ್ಷ ಭೋಗ್ಲೆಯೂ ಒಬ್ಬ.   ಹೆಚ್ಚಿನ ಹುಡುಗರು ಸಚಿನ್, ಸೆಹವಾಗ್’ನ ಆಟವನ್ನು ನೋಡಿ ತಾನೂ ಅವರಂತೆ ಆಟಗಾರನಾಗಬೇಕೆಂದು ಬಯಸುತ್ತಿರಬೇಕಾದರೆ ಕೆಲವರಲ್ಲಾದರೂ ‘ತಾನು ಭೋಗ್ಲೆಯಂತೆ ವೀಕ್ಷಕ ವಿವರಣಕಾರನಾಗಬೇಕೆಂಬ ಆಸೆ ಹುಟ್ಟಿಸುವುದಿದೆಯಲ್ಲ, ಖಂಡಿತವಾಗಿಯೂ ಅದು ಸಾಧಾರಣ ಮಾತಲ್ಲ.

ಹಾಗಾದರೆ ಹರ್ಷ ಭೋಗ್ಲೆಯ ಹಿನ್ನೆಲೆಯೇನು? ವೀಕ್ಷಕ ವಿವರಣೆ ಕ್ಷೇತ್ರದಲ್ಲಿ ಅತ ಇಷ್ಟೊಂದು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಹೇಗೆ ಎಂಬುದನ್ನು ಬೆನ್ನು ಹತ್ತಿ ಹೊರಟರೆ ನಮ್ಮನ್ನು ಸ್ವಾಗತಿಸುವುದು ಹರ್ಷನ ಹತಾಶೆ, ಹಾರ್ಡ್ವರ್ಕ್, ಏನೇ ಆದರೂ ಕೈಚೆಲ್ಲಬೇಡ ಎನ್ನುವ ಯಶೋಗಾಥೆ ಮಾತ್ರ. ಹರ್ಷ ಓದಿದ್ದಕ್ಕೂ ಮತ್ತೀಗ ಆತ ಆಗಿರುವುದಕ್ಕೂ ಸಂಬಂಧವೆ ಇಲ್ಲ. ಆತನ ಡಿಗ್ರಿಯನ್ನು ನೋಡಿದರೆ ಆತನೀಗ ಅಹಮದಾಬಾದಿನ IIMನಲ್ಲಿ ಪ್ರೊಫೆಸರೋ ಇಲ್ಲಾ ಯಾವುದಾದರು ದೊಡ್ಡ ಕಂಪೆನಿಯಲ್ಲಿ ಮ್ಯಾನೇಜರೋ ಆಗಿರಬೇಕಿತ್ತು. ಆದರೆ  ಅಹಮದಾಬಾದಿನ IIMನಲ್ಲಿ ಓದು ಮುಗಿಸಿದ ಬಳಿಕ ಆತನಿಗೆ ಹತ್ತಿಕೊಂಡ ಗೀಳೇ ಬೇರೆ. ಲವ್ ಒಬ್ಬಳ ಜೊತೆ, ಮದುವೆ ಮತ್ತೊಬ್ಬಳ ಜೊತೆಗೆ ಅಂದ ಹಾಗೆ!

ಎಲ್ಲಿಯ ಕೆಮಿಕಲ್ ಇಂಜಿನಿಯರಿಂಗ್ ಎಲ್ಲಿಯ ಟಿವಿ ಆಂಕರಿಂಗ್? ಎಲ್ಲಿಯ ಎಂ.ಬಿ.ಎ ಎಲ್ಲಿಯ ಕಾಮೆಂಟರಿ? ತನ್ನ ಓರಗೆಯ ಉಳಿದ ಹುಡುಗರು ಓದು ಮುಗಿಸಿ ವಿವಿಧ ಕಂಪನಿಗಳ ಬಾಗಿಲು ತಟ್ಟುತ್ತಿದ್ದರೆ ಹರ್ಷನ ಬೆನ್ನು ಹತ್ತಿದ ಆಸೆಯೊಂದೇ. ಕ್ರಿಕೆಟ್ ಕಾಮೆಂಟೇಟರ್ ಆಗಬೇಕೆನ್ನುವುದು.. ಓದು ಮುಗಿದ ಬಳಿಕ ಎರಡು ವರ್ಷಗಳ ಕಾಲ ಜಾಹೀರಾತು ಏಜೆನ್ಸಿಯೊಂದರಲ್ಲಿ ಕೆಲಸ ಮಾಡಿದ ಹರ್ಷನ ಮನಸ್ಸು ಇನ್ನೇನೋ ಕೆಲಸದತ್ತ ತುಡಿಯುತ್ತಿತ್ತು. ಕಾಂಮೆಂಟೇಟರ್  ಆಗಬೇಕೆನ್ನುವ ಕನಸು ಹೊತ್ತು  ಟಿ.ವಿ ಚಾನಲುಗಳ ಮನೆ ಮುಂದೆ ನಿಲ್ಲಲು ಆರಂಭಿಸಿದ. ಆದರೆ ಏನೇನೂ ಅನುಭವವಿಲ್ಲದವನಿಗೆ ಕೆಲಸ ಕೊಡುವವರಾರು ಬೇಕೆ? ಅದೂ ಸಹ ಪತ್ರಿಕೋದ್ಯಮದ ಹಿನ್ನೆಲೆಯಿಲ್ಲದವನಿಗೆ.. ದಿನಾ ಇಂಟರ್ವ್ಯೂಗಳನ್ನು ಎದುರಿಸುವುದು, ವಾಪಾಸ್ ಬರುವುದು… ಕಂಪೆನಿಗಳಲ್ಲಿ ಕೆಲಸ ಹುಡುಕುವ ಇತರರ ಸ್ಥಿತಿಗಿಂತ ಭಿನ್ನವಾಗಿರಲಿಲ್ಲ ಹರ್ಷನ ಸ್ಥಿತಿ. ಹತ್ತಾರು ಚಾನಲುಗಳ ಕದ ತಟ್ಟಿದ ಬಳಿಕವೂ ಆತನಿಗೆ ಸಿಕ್ಕಿದ್ದು ನಿರಾಸೆ ಮಾತ್ರ. ಆತನಿಗೆ ತನ್ನ ಸಾಮರ್ಥ್ಯದ ಮೇಲೆ ಸಂಪೂರ್ಣ ನಂಬಿಕೆಯಿದ್ದರೂ ಚಾನಲುಗಳಿಗೆ ಆತನ ಮೇಲೆ ನಂಬಿಕೆ ಮೂಡಲಿಲ್ಲ.  ಎಲ್ಲಾ ಚಾನಲುಗಳೂ ಹರ್ಷನನ್ನು ಹಿಂದೆ ಮುಂದೆ ನೋಡದೆ ಹೊರ ಕಳಿಸಿದವು. ಈಗ ಸ್ಟಾರ್ ಸ್ಪೋರ್ಟ್ಸ್ ವಾಹಿಸಿಯ ಸ್ಟಾರ್ ಕಾಮೆಂಟೇಟರ್ ಆಗಿರುವ ಹರ್ಷ ಭೋಗ್ಲೆಯನ್ನು ಅದೇ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು  ನೋಡಲು ಚೆನ್ನಾಗಿಲ್ಲ, ದಪ್ಪವಾದ ಕನ್ನಡಕವನ್ನು ಧರಿಸುತ್ತಾನೆ ಎನ್ನುವ ಕಾರಣಕ್ಕೆ ಹರ್ಷ ಭೋಗ್ಲೆಯನ್ನು ಹೀಯಾಳಿಸಿ ಮನೆಗೆ ಕಳುಹಿಸಿತ್ತು ಎಂದರೆ ನೀವು ನಂಬಲೇ ಬೇಕು.

ಭೋಗ್ಲೆ ಮಾತ್ರ ಜಪ್ಪಯ್ಯ ಅಂದರೂ ಕುಗ್ಗಲಿಲ್ಲ. ಒಂದಲ್ಲಾ ಒಂದು ದಿನ ಇವರು ನನ್ನನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಆತನ ಅಚಲ ನಂಬಿಕೆಯಾಗಿತ್ತು. ಮೆಕಾನಿಕಲ್,ಸಿವಿಲ್ ಇಂಜಿನಿಯರಿಂಗ್ ಮಾಡಿ ಕೆಲಸ ಸಿಗದೆ ಕಡೆಗೆ  ಕೆಲಸ ಯಾವುದಾದರೇನು, ಫೀಲ್ಡ್ ಯಾವುದಾದರೇನು, ಸಂಬಳ ಬಂದರಾಯಿತು ಎಂಬ ಧೋರಣೆಯೊಂದಿಗೆ ಸಾಪ್ಪ್ಟ್’ವೇರ್’ನತ್ತ ಮುಖ ಮಾಡುವ ಇಂಜಿನಿಯರುಗಳಂತೆ ಎಂದೂ  ತನ್ನ ಗುರಿಯಿಂದ ವಿಮುಖನಾಗಿ ಮತ್ತೊಂದು ಗುರಿಯೆಡೆಗೆ ತಪ್ಪಿಯೂ ಹೋಗಲಿಲ್ಲ. “Good better best, Never let it rest, until your good is better and your better is best” ಎನ್ನುವುದು ಆತನ ಸಿದ್ಧಾಂತವಾಗಿತ್ತು.  ಅವಕಾಶ ಸಿಕ್ಕಾಗೆಲೆಲ್ಲ ಮತ್ತೆ ಮತ್ತೆ ಇಂಟರ್ವ್ಯೂಗೆ ಹಾಜರಾದ. ಒಂದು ಇಂಟರ್ವ್ಯೂನಿಂದ ಮತ್ತೊಂದು ಇಂಟರ್ವ್ಯೂಗೆ ಹೋಗುವಾಗ ತನ್ನ ಕೌಶಲ್ಯವನ್ನು ವೃದ್ಧಿಸಿಕೊಂಡ.  ಪ್ರತಿಯೊಬ್ಬರಿಗೂ ಅವರದ್ದೇ ಆದ ದಿನ ಅಂತ ಇರುತ್ತದಲ್ಲಾ? ಹರ್ಷನ ದಿನವೂ ಬಂದೇ ಬಿಟ್ಟಿತು.  All India Radio ದಲ್ಲಿ ಕ್ರಿಕೆಟ್ ಕಾಮೆಂಟೇಟರ್ ಆಗಿ ನೇಮಕಗೊಂಡ. 1992 ರಲ್ಲಿ Australian Broadcasting Corporation ನಿಂದ ಆಮಂತ್ರಿತಗೊಂಡ ಮೊದಲ ಭಾರತೀಯ ವಿಕ್ಷಕ ವಿವರಣೆಕಾರ ಹರ್ಷನಾಗಿದ್ದ.  AIRನಲ್ಲಿ ಹರ್ಷ ನೀಡುತ್ತಿದ್ದ ಸೊಗಸಾದ ಕಾಮೆಂಟರಿಯಿಂದ ಇಂಪ್ರೆಸ್ಸ್ ಆದ BBC ಭೋಗ್ಲೆಯನ್ನು ತನ್ನತ್ತ ಸೆಳೆದುಕೊಂಡಿತು. ಮುಂದೆ ಇದುವೇ ಹರ್ಷ ಭೋಗ್ಲೆ ಎನ್ನುವ ಕಾಮೆಂಟರಿ ಕ್ಷೇತ್ರದ ದಿಗ್ಗಜ, ಸ್ಟಾರ್ ಸ್ಪೋರ್ಟ್ಸ್ ಎಂಬ ದಿಗ್ಗಜ ಕ್ರೀಡಾ ವಾಹಿನಿಯನ್ನು ಸೇರುವುದಕ್ಕೆ ದಾರಿ ಮಾಡಿ ಕೊಟ್ಟಿತು.  ನೋಡಿ, ಯಾವ ಚಾನಲ್ ಹರ್ಷನನ್ನು ಸಾರಾಸಗಟಾಗಿ ತಿರಸ್ಕರಿಸುತ್ತೋ ಅದೇ ಚಾನಲ್ ಬೇಡಿಕೆಯೊಂದಿಗೆ ಹರ್ಷನನ್ನು ನೇಮಕ ಮಾಡಿಕೊಂಡಿತು.

ಹರ್ಷನಿಗೆ ಬೇಕಿದ್ದಿದ್ದು ಅದೊಂದು ಅವಕಾಶವಷ್ಟೇ ತನ್ನ ಸಾಮರ್ಥ್ಯವನ್ನು ನಿರೂಪಿಸಲು. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಹಂತ ಹಂತವಾಗಿ ಏರುತ್ತಾ ಬಂದ ಹರ್ಷ  Hunt of Harsha, Harsha Online, Harsha Unplugged ಮುಂತಾದ ಹಲವಾರು ಜನಪ್ರಿಯ ಶೋಗಳನ್ನು ನಡೆಸಿಕೊಡುವ ಮೂಲಕ ಜನಪ್ರಿಯನಾದ. ಹರ್ಷ ಕಾಮೆಂಟರಿ ಬಾಕ್ಸಿನಲ್ಲಿದ್ದಾನೆಂದರೆ ಸಾಕು. ಅವನ ಮಾತಿನ ಶೈಲಿ, ಹಾವ ಭಾವ, ಟೆಕ್ನಿಕಲ್ ವಿಶ್ಲೇಷಣೆ ನಾವು ನೋಡುವ ಕ್ರಿಕೆಟ್ ಆಟವನ್ನು ಮತ್ತಷ್ಟು ರೋಚಕಗೊಳಿಸುತ್ತದೆ. ತನ್ನ ಕೆಲಸದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಂಡಿರುವ ಹರ್ಷನನ್ನು ಇತ್ತೀಚೆಗೆ ಟಿ-ಟ್ವೆಂಟಿ ವಿಶ್ವಕಪ್’ನಲ್ಲಿ ಭಾರತೀಯ ಆಟಗಾರರ ಸ್ಟ್ರಾಟೆಜಿಯನ್ನು ಟೀಕಿಸಿ ಕಾಮೆಂಟರಿ ಮಾಡಿದ್ದಕ್ಕಾಗಿ  ಐಪಿಲ್ ಪಂದ್ಯಾವಳಿಯ ಕಾಮೆಂಟರಿ ಪ್ಯಾನಲ್’ನಿಂದ ಕೈಬಿಡಲಾಗಿತ್ತು ಎನ್ನುವುದನ್ನು ಇಲ್ಲಿ ಉಲ್ಲೇಖಿಸಬಹುದು.

ಇವತ್ತು ಹರ್ಷನನ್ನು ಐಐಟಿ, ಐಐಎಮ್’ಗಳು ಜಿದ್ದಿಗೆ ಬಿದ್ದು ತಮ್ಮ ಕಾಲೇಜುಗಳಿಗೆ ಕರೆಸಿಕೊಳ್ಳುತ್ತಿವೆ. Excellence, Ambition ಮುಂತಾದ ವಿಷಯಗಳ ಮೇಲೆ ಹರ್ಷ ಅರಳು  ಹುರಿದಂತೆ ಮಾತನಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಾನೆ. ಗೂಗಲ್’ನ ಸಿ.ಇ.ಓ ಸುಂದರಂ ಪಿಚ್ಚಾಯಿಯಂತಹ ಘಟಾನುಘಟಿಗಳನ್ನು ಇಂಟರ್ವ್ಯೂ ಮಾಡಲೂ ಹರ್ಷಗೆ ಬುಲಾವ್ ಬರುತ್ತದೆ. ಒಟ್ಟಾರೆಯಾಗಿ, ಅದು ಕ್ರಿಕೆಟ್ ಕಾಮೆಂಟರಿಯೆ ಇರಲಿ, ಭಾಷಣವೇ ಇರಲಿ, ಎಲ್ಲರನ್ನು ಮಂತ್ರಮುಗ್ದಗೊಳಿಸುವುದರಲ್ಲಿ ಹರ್ಷ ಭೋಗ್ಲೆ ಪರಿಣತನಾಗಿದ್ಡಾನೆ.

ಹರ್ಷನಿಲ್ಲದಿದ್ದರೆ ಕ್ರಿಕೆಟ್ಟೇ ಇಲ್ಲವೆಂದಲ್ಲ. ಕ್ರಿಕೆಟ್ ಎನ್ನುವ ಎಂದೂ ಸಾಯದ ಆಟದ ಮುಂದೆ ಹರ್ಷ ಒಂದು ಲೆಕ್ಕವೇ ಅಲ್ಲ. ಆದರೆ ಉಪ್ಪು, ಉಪ್ಪಿನಕಾಯಿಯಂತಹ ಸಣ್ಣ ಪದಾರ್ಥಗಳೇ ನೋಡಿ ನಮ್ಮ ಊಟವನ್ನು ಮತ್ತಷ್ಟು ರುಚಿಯಾಗುವಂತೆ ಮಾಡುವುದು.  ಹರ್ಷ ಭೋಗ್ಲೆ ಇವತ್ತು ಕ್ರಿಕೆಟ್ ಜಗತ್ತಿನಲ್ಲಿ ಇಷ್ಟೊಂದು ಜನಪ್ರಿಯನಾಗಿದ್ದಾನೆಂದರೆ ಅದರಲ್ಲಿ ಹಲವು ವರ್ಷಗಳ ಪರಿಶ್ರಮ ಅಡಗಿದೆ. ಬಹುಶಃ ಆ ದಿನಗಳ ಸೋಲು, ಅವಮಾನಗಳಿಗೆ ಹೆದರಿ ಓಡಿ ಹೋಗಿದಿದ್ದರೆ ಹರ್ಷ ಭೋಗ್ಲೆ ಇವತ್ತು ಯಾವುದಾದರೂ ಕಂಪೆನಿಯಲ್ಲಿ ಸಾಮಾನ್ಯ ಮ್ಯಾನೇಜರೋ ಇಲ್ಲಾ ಇಂಜಿನಿಯರೋ ಆಗಿರುತ್ತಿದ್ದ. ಇಲ್ಲಾ ಇನ್ನೇನೋ ಆಗಿರುತ್ತಿದ್ದ.   IIT, IIM ಗಳು ಬೇಡಿಕೆಯಿಟ್ಟು ಕರೆಸಿಕೊಳ್ಳುವ ಎಕ್ಸ್’ಪರ್ಟ್ ಮಾತುಗಾರನಾಗುತ್ತಿರಲಿಲ್ಲ. ಸ್ಟಾರ್ ಸ್ಪೋರ್ಟ್ಸ್ ತಿರಸ್ಕರಿಸಿದಾಗ ಧೃತಿಗೆಟ್ಟಿದಿದ್ದರೆ ಆತ  ಎಂದಿಗೂ ಜನ ಮೆಚ್ಚುವ ಕಾಮೆಂಟೇಟರ್ ಆಗುತ್ತಿರಲಿಲ್ಲ.

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post