ಬಾಕಿ ಉಳಿದಿದ್ದ ಪದಗಳೀಗ
ಸಾಲುಗಳಾಗಿ ಬರಲು ತಡಕಾಡುತ್ತಿವೆ..
ಹೆಣ್ಣು ಜೀವದ ಮಜಲುಗಳೇಕೆ ಹೀಗೆ
ಎಂದು ಬಾರಿ ಬಾರಿ ಪ್ರಶ್ನಿಸುತ್ತಿವೆ…
ಗುಪ್ತಗಾಮಿನಿಯಾದರೂ ಹೆಣ್ಣು
ಭಾವನೆಗಳು ಗುಪ್ತವಲ್ಲ ಅಲ್ಲವೇ..?!
ಹುಟ್ಟಿನಿಂದ ಸ್ವತ್ತಾಗಿದ್ದ
ಕೆಂಪು ಅತ್ತ -ಇತ್ತ -ಸುತ್ತ ಚೆಲ್ಲಿದ್ದರೂ
ಎತ್ತಿಕೊಳ್ಳುವ ತ್ರಾಣವಿದ್ದರೂ
ಏಕೋ ಈಗ ಇದು ಸರಿಯಲ್ಲ…
ಹೂದೋಟದಿ ಮಲ್ಲಿಗೆ
ಅರಳಿ ಘಮ ಘಮ ಸೂಸಿದರೂ
ಏಕೋ ಮುಡಿಯುವ ಮನಸಿಲ್ಲ..!
ಕರಿಮಣಿಗಳು ಕೊರಳ ಬಿಟ್ಟು
ವರ್ಷಗಳೇ ಕಳೆದೊದವು..
ಕಾಲುಂಗುರ ಇಟ್ಟಲ್ಲೇ ಕಪ್ಪಗಾದವು..
ಬಣ್ಣದ ಹೊಸ ಬಳೆಗಳ ನಾದವಿದ್ದರೂ
ಅವು ಹೊಸತನವಿಲ್ಲದವು..
ಮನಸ್ಸನ್ನು ಆಗಾಗ ಹೆಪ್ಪುಗಟ್ಟಿಸುವಂತವು!
ತಿಂದು ಬಿಸಾಡಿದ ಎಲೆಯಲಿ
ನನ್ನಲಿ ಮತ್ತೆ ಬಡಿಸುವ ಹಂಬಲವಿಲ್ಲ..
ಹರೆಯವಿನ್ನೂ ಬಾಕಿಯೇ ಇದೆ
ಕಾಮನೆಗಳಿಗೂ ಬರವಿಲ್ಲ..
ಯೌವನದ ಹೊಸ್ತಿಲು ದಾಟಿ
ಇನ್ನೂ ನಾಕು ವರ್ಷವಾಗಿರಲಿಲ್ಲ..!
ಕುಕ್ಕಿ ತಿನ್ನುವ ರಣ ಹದ್ದುಗಳಿಗೆ
ಆಹಾರವಾದೇನೋ..ಭಯವಿದೆ..
ಇನ್ನೂ ಪುಟ್ಟ ವಿಧವೆಯ
ಆಲಾಪದ ಸಾಲುಗಳ ಹೇಳಲೂ
ಕಂಡೂ ಕಾಣದ ಮುಜುಗರವಿದೆ…
ಹೊರಲಾರದ ಭಾರದ ಬದುಕು
ಇನ್ನೂ ಅಷ್ಟುದ್ದವಿದೆ….!
Facebook ಕಾಮೆಂಟ್ಸ್