ಮೊನ್ನೆ ರಿಯೋನಲ್ಲಿ ನಡೆದ ಕೇರಿನ್ ರೇಸ್’ನಲ್ಲಿ ಬೆಳ್ಳಿ ಪದಕ ಗೆದ್ದ ಬೆಕ್ಕಿ ಜೇಮ್ಸ್ ಸಂತೋಷಕ್ಕೆ ಪಾರವೇ ಇರಲಿಲ್ಲ. ಹಲವರಿಗಂತೂ ಆಕೆಯ ಸಂಭ್ರಮ ನೋಡಿ ಆಶ್ಚರ್ಯವಾಗಿದ್ದು ಸುಳ್ಳಲ್ಲ. ಏಕೆಂದರೆ ಚಿನ್ನದ ಪದಕ ಗೆದ್ದವಳಿಗಿಂತ ಹೆಚ್ಚು ಸಂಭ್ರಮ ಬೆಕ್ಕಿ ಜೇಮ್ಸ್’ಗೆ ಆಗಿತ್ತು. ಆದರೆ ಅದರಲ್ಲಿ ಅತಿಶಯೋಕ್ತಿ ಕೂಡ ಇರಲಿಲ್ಲ. ರೆಬಾಕಾ ಜೇಮ್ಸ್, ‘ಬೆಕ್ಕಿ’ ಎಂದು ಕರೆಯಲ್ಪಡುವ ಈಕೆ ಈಗ ಒಂದೆರಡು ವರ್ಷಗಳ ಹಿಂದೆ ಸೈಕ್ಲಿಂಗ್ ಮಾಡಲೇ ಸಾಧ್ಯವಿಲ್ಲ ಎಂದು ಅಂದಾಜಿಸಲಾಗಿತ್ತು.
೨೦೧೩ರಲ್ಲಿ ಡಬಲ್ ವರ್ಲ್ಡ್ ಚಾಂಪಿಯನ್ ಆಗಿದ್ದ ರೆಬಾಕಾ ಯಶಸ್ಸಿನ ಉತ್ತುಂಗದಲ್ಲಿದ್ದಳು. ಬದುಕು ಇದೇ ರೀತಿ ಇರುವುದಿಲ್ಲ, ಸರಳವೂ ಅಲ್ಲ ಅಂತ ಗೊತ್ತಿದ್ದರೂ ಬದುಕು ಯಾವ ಮಟ್ಟಿಗೆ ಬದಲಾಗಬಹುದು ಎಂಬ ಬಗ್ಗೆ ಕಲ್ಪನೆಯೂ ಇರಲಿಲ್ಲ. ೨೦೧೪ರಲ್ಲಿ ಆಕೆ ಎಡಗಾಲಿನ ಮಂಡಿಯ ಗಾಯದಿಂದ ಬಳಲುತ್ತಾ, ಸೈಕ್ಲಿಂಗ್ ಮಾಡಲು ಕಷ್ಟ ಪಡುತ್ತಿದ್ದ ರೆಬಾಕಾಗೆ ಮತ್ತೊಂದು ಬರಸಿಡಿಲು ಅಪ್ಪಳಿಸಿದ್ದು ಆಕೆಗೆ ಸರ್ವಿಕಲ್ ಕ್ಯಾನ್ಸರ್ ಉಂಟಾಗಿದೆ ಎಂದು ತಿಳಿದಾಗ. ತಾನು ಮತ್ತೆಂದೂ ಸೈಕ್ಲಿಂಗ್ ಮಾಡುವುದೇ ಇಲ್ಲವೇನೊ ಎಂದು ಭಾವಿಸಿದ್ದಳು. ಎಷ್ಟೇ ಆದರೂ ಆಕೆ ಒಬ್ಬ ಅಥ್ಲೀಟ್. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಾದರೂ ಹೇಗೆ??! ಚಿಕಿತ್ಸೆಯ ನಂತರ ಆಕೆ ಮತ್ತೆ ರೇಸಿಂಗ್ ಶುರು ಮಾಡಿದ್ದಳು. “ಈಗ ಒಂದು ವರ್ಷದ ಹಿಂದೆ ನಾನು ಎಲ್ಲಿದ್ದೆ? ಈಗ ಎಲ್ಲಿಗೆ ಬಂದು ತಲುಪಿರುವೆ ಎಂಬುದು ಯೋಚಿಸಿದರೆ ಅಶ್ಚರ್ಯವೂ ಆಗುತ್ತದೆ ಹಾಗೂ ಸಂತೋಷವೂ ಆಗುತ್ತದೆ.” ಎನ್ನುತ್ತಾಳೆ ಬೆಕ್ಕಿ. ನಿಜವೇ ಬದುಕು ಬದಲಾಗುತ್ತಲೇ ಇರುತ್ತದಲ್ಲ.
ಥಾಮಸ್ ವ್ಯಾನ್’ದೆರ್ ಪ್ಲೇಟ್ಸನ್ ಈಗ ಒಂದೂವರೆ ವರ್ಷಗಳ ಹಿಂದೆ ಕ್ಯಾನ್ಸರ್’ನಿಂದ ಬಳಲುತ್ತಿದ್ದು, ಮತ್ತೆ ಎಂದೂ ಕೂಡ ಆತ ಡೆಕಥ್ಲಾನ್’ನಲ್ಲಿ ಭಾಗವಹಿಸಲಾರ ಎಂದೇ ಪರಿಗಣಿಸಲಾಗಿತ್ತು. ಆದರೆ ಅದು ಈಗ ತಲೆ ಕೆಳಗಾಗಿದೆ. ಕಳೆದ ಒಂದೆರಡು ವರ್ಷಗಳಲ್ಲಿ ನಡೆದ ಘಟನೆಗಳೆಲ್ಲಾ ಆತನ ಕನಸನ್ನು ನುಚ್ಚು ನೂರು ಮಾಡುವಂತವೇ ಆಗಿದ್ದವು. ಆದರೆ ಆತ ಈಗ ಮತ್ತೆ ತನ್ನ ಕನಸನ್ನು ಬೆನ್ನತ್ತಿ ಓಡುತ್ತಿದ್ದಾನೆ.
ಆಂಟಿ-ಡೋಪಿಂಗ್ ಸಂಸ್ಥೆಯಿಂದ ಬಂದ ಪತ್ರವೊಂದು ಥಾಮಸ್’ನ ಬದಕನ್ನ ಬುಡಮೇಲು ಮಾಡಿತ್ತು. ಡೋಪಿಂಗ್ ಟೆಸ್ಟ್’ನಲ್ಲಿ ಕಂಡು ಬಂದ ಹೆಚ್.ಸಿ.ಜಿ ಹಾರ್ಮೋನುಗಳ ಅಸ್ವಾಭಾವಿಕತೆ, ಡೋಪಿಂಗ್ ಮಾಡಿರುವುದನ್ನು ಸೂಚಿಸುತ್ತಿತ್ತು., ಆದರೆ ಡೋಪಿಂಗ್ ಮಾಡಿಯೇ ಇರದ ಥಾಮನ್ ಮತ್ತೆ ಸಮರ್ಥನೆ ಕೇಳಿದ್ದ. ಅಷ್ಟರಲ್ಲಾಗಲೇ ಮಾಧ್ಯಮಗಳು ಆತನ ಹೆಸರಿಗೆ ಮಸಿ ಬಳಿದು ಆಗಿತ್ತು. ಇದೆಲ್ಲ ಸರಿ ಹೋಗುವುದಕ್ಕೂ ಮುಂಚೆಯೇ ಇನ್ನೊಂದು ಆಘಾತಕಾರಿ ಸುದ್ದಿ ಆತನನ್ನು ಕಾಯುತ್ತಿತ್ತು. ಅದೇ ಟೆಸ್ಟಿಕ್ಯುಲಾರ್ ಕ್ಯಾನ್ಸರ್!!! ಆತನ ವೃತ್ತಿ ಬದುಕಿನ ಕೊನೆಯೋ ಅಥವಾ ಬದುಕಿನದೇ ಕೊನೆಯೋ… ಒಂದೂ ಅರಿಯದವನಂತಾಗಿದ್ದ. ಆಗ ಆತನ ಬೆನ್ನೆಲುಬಾಗಿ ನಿಂತಿದ್ದು ಆತನ ಅಣ್ಣ, ಆತನ ಕೋಚ್ ಮೈಕಲ್. ಗುಣಮುಖವಾಗುತ್ತಿರುವ ಕ್ಯಾನ್ಸರ್ ಪೇಷಂಟನ್ನು ಪ್ರಾಕ್ಟೀಸ್’ಗೆ ನೂಕುವುದು ಸುಲಭವೇನೂ ಆಗಿರಲಿಲ್ಲ. ಆದರೆ ಮೈಕಲ್ ತನ್ನ ತಮ್ಮನಿಗೆ “ನೀನು ಯಾವಾಗಲೂ ದುಃಖಪಡುತ್ತಾ, ದೂರುತ್ತಾ ಕೂರುವಂತಿಲ್ಲ. ಎಲ್ಲವನ್ನು ಮರೆತು ಮುಂದೆ ಸಾಗುವುದರ ಬಗ್ಗೆ ಯೋಚಿಸು. ಬದುಕಿನ ಸಣ್ಣ ಸಣ್ಣ ಗೆಲುವುಗಳ ಬಗ್ಗೆ ಮೊದಲು ಗಮನ ಹರಿಸು” ಎಂದು ಹೇಳಿ ಹುರಿದುಂಬಿಸುತ್ತಿದ್ದ. ಮೈಕಲ್ ಕೆಲವೊಮ್ಮೆ ಥಾಮಸ್’ನನ್ನು ಕಠಿಣವಾಗಿ ನಡೆಸಿಕೊಂಡಿದ್ದನಂತೆ, ಹಾಗಂತ ಸ್ವತಃ ಮೈಕಲ್ ಹೇಳುತ್ತಾನೆ. ಆತ ಮುಂದೆ ಸಾಗಲು ಕಠಿಣ ಪರಿಶ್ರಮದ ಅವಶ್ಯಕತೆಯೂ ಇದೆ ಎನ್ನುತ್ತಾನೆ ಮೈಕಲ್. ಇದರ ಮಧ್ಯೆ ಥಾಮಸ್, ತನ್ನ ಬದುಕಿನಲ್ಲಿ ಬಂದ ಎಲ್ಲ ಸವಾಲುಗಳನ್ನ ಮೀರಿ ಒಲಂಪಿಕ್’ನಲ್ಲಿ ಭಾಗವಹಿಸುತ್ತಿರುವುದೇ ನನ್ನ ಪರಿಶ್ರಮಕ್ಕೆ ಸಿಕ್ಕ ದೊಡ ಜಯ ಎನ್ನುತ್ತಾನೆ.
ಯು.ಎಸ್.ಎ’ಯ ರಗ್’ಬಿ ಸೆವೆನ್ಸ್ ಟೀಮ್’ನ ಆಟಗಾರರಿಗೆ ಆ ಟೀಮಿನ ಕ್ಯಾಪ್ಟನ್ನೇ ಸ್ಪೂರ್ತಿ. ಹೌದು ಜಿಲಿಯನ್ ಪಾಟರ್ ಎಂಬಾಕೆ ರಗ್’ಬಿಯಲ್ಲಿ ಪಾದಾರ್ಪಣೆ ಮಾಡಿದ್ದು ೨೦೦೫ರಲ್ಲಿ, ನಂತರ ಅಂತರಾಷ್ಟ್ರೀಯ ಮಟ್ಟದ ರಗ್’ಬಿಯಲ್ಲಿ ಭಾಗವಹಿಸಿದ್ದು ೨೦೦೭ರಲ್ಲಿ. ೨೦೧೦ರ ವಿಶ್ವಕಪ್ ಟೂರ್ನಿಯಲ್ಲಿ ಕೂಡ ಭಾಗವಹಿಸಿದಳು. ಆದರೆ ಕೆನಡಾದೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕೆ ತನ್ನ ಕುತ್ತಿಗೆಗೆ ಏಟು ಮಾಡಿಕೊಂಡಿದ್ದು ಆಕೆಯನ್ನ ರಗ್’ಬಿಯಿಂದ ಕೆಲ ಕಾಲ ದೂರ ಉಳಿಯುವಂತೆ ಮಾಡಿತು. ಆದರೆ ೨೦೧೩ರ ಸೆವೆನ್ಸ್ ವರ್ಲ್ಡ್’ಕಪ್’ಗೆ ಮರಳಿ ಬಂದಿದ್ದಳು. ನಂತರ ೨೦೧೪ರಲ್ಲಿ ೧೫ರ ವಿಶ್ವಕಪ್ ಕೂಡಾ ಆಡಿದಳು. ಆಗಲೇ ಆಕೆಯ ದವಡೆಯ ಬಳಿ ಸ್ವೆಲ್ಲಿಂಗ್ ಕಾಣಿಸಿಕೊಳ್ಳಲಾರಂಭಿಸಿದ್ದು. ವಿಶ್ವಕಪ್’ನ ಸಂದರ್ಭಗಳಲ್ಲಿ ಆಕೆ ಬಹಳ ಬೇಗ ಸುಸ್ತಾಗುತ್ತಿದ್ದಳು. ಉಸಿರಾಟಕ್ಕೆ ಸಮಸ್ಯೆಯಾಗುತ್ತಿತ್ತು. ವಿಶ್ವಕಪ್ ಮುಗಿದ ತಕ್ಷಣವೇ ಆಕೆಗೆ ಸರ್ಜರಿ ಮಾಡಲಾಯಿತು. ಆಗ ತಿಳಿದದ್ದು ಆಕೆಗೆ ಕ್ಯಾನ್ಸರ್ ಆಗಿದೆಯೆಂದು…!! ಕೀಮೋಥೆರಪಿ, ರೇಡಿಯೇಷನ್ ಎಲ್ಲಾ ಮುಗಿಸಿದ ನಂತರ ಆಕೆ ಬಂದಿದ್ದು ರಿಯೋ ಒಲಂಪಿಕ್’ಗೆ. ಒಲಂಪಿಕ್’ನಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಜಿಲಿಯನ್ “ಅತ್ಯಂತ ಕಠಿಣ ಸಮಯದ ನಂತರವೂ ನಾವು ನಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು” ಎನ್ನುತ್ತಾಳೆ.
ಸದ್ಯ ಎಲ್ಲರ ಕಣ್ಣು ರಿಯೋ ಒಲಂಪಿಕ್ ಮೇಲೆ ಇರುವುದಂತೂ ನಿಜ. ಅದೇ ನಿಟ್ಟಿನಲ್ಲಿ ಫ್ರೇಯ ಎಂಬಾಕೆ ವಿಶೇಷವಾದ ಹಾಗೂ ವಿಭಿನ್ನವಾದ ಪ್ರಯತ್ನವನ್ನು ಮಾಡುತ್ತಿದ್ದಾಳೆ. ಅದೇ ಫ್ರೇಯೆಥ್ಲಾನ್..!!! ಫ್ರೇಯ ರೋಡ್ಜರ್ ಎಂಬ ೫೫ ವರ್ಷದ ಕ್ಯಾನ್ಸರ್ ಸರ್ವೈವರ್ ತನಗೆ ತಾನೆ ಕೊಟ್ಟು ಕೊಂಡಿರುವ ಒಲಂಪಿಕ್ ಚಾಲೆಂಜ್ ಈ ಫ್ರೇಯಥ್ಲಾನ್..! ಫ್ರೇಯ ನಾನ್-ಹಾಡ್ಕಿನ್ಸ್ ಲಿಂಫೋಮಾ ಸರ್ವೈವರ್. ೨೦೧೫ರಲ್ಲಿ ರೇಡಿಯೋನಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಮಹಿಳೆಯರು ಆಟೋಟಗಳಲ್ಲಿ ಭಾಗವಹಿಸಲು ಇರುವ ಅಡ್ಡಿಗಳು ಯಾವುವು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅದನ್ನು ಕೇಳಿದ ಬಳಿಕ ತಾನೂ ಕೂಡ ಸಾಕಷ್ಟು ಆಟಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿ ಭಾಗವಹಿಸತೊಡಗಿದಳು. ಆನಂತರ ಆಕೆಯ ಮನಸ್ಸಿಗೆ ಬಂದಿದ್ದೇ ಫ್ರೇಯಾಥ್ಲಾನ್..!!
ಒಲಂಪಿಕ್’ನಲ್ಲಿ ಮಹಿಳೆಯರಿಗೆ ಸುಮಾರು ೪೧ ರೀತಿಯ ವಿಭಿನ್ನ ರೀತಿಯ ಸ್ಪರ್ಧೆಗಳಿರುತ್ತವೆ. ಆ ಎಲ್ಲಾ ವಿಭಿನ್ನ ಪ್ರಾಕಾರಗಳಲ್ಲಿ ಭಾಗವಹಿಸಬೇಕು ಎನ್ನುವುದೇ ಫ್ರೇಯಾಳ ಇಚ್ಛೆ. ಈಗಾಗಲೇ ಆರ್ಚೆರಿ, ಟೆನಿಸ್, ವೈಟ್’ಲಿಫ್ಟಿಂಗ್, ಸ್ವಿಮ್ಮಿಂಗ್ ಸೇರಿದಂತೆ ಸುಮಾರು ೩೭ ಪ್ರಾಕಾರಗಳನ್ನು ಬೇರೆ ಬೇರೆಡೆಯಲ್ಲಿ ಪೂರೈಸಿರುವ ಫ್ರೇಯಾ ಉಳಿದ ಪ್ರಾಕಾರಗಳನ್ನು ರಿಯೋನಲ್ಲಿ ಒಲಂಪಿಕ್ ಮುಗಿಯುವುದರೊಳಗೆ ಪೂರೈಸಲಿದ್ದಾರೆ. ಆಕೆ ರಿಯೋದಲ್ಲಿ ಇಲ್ಲದಿದ್ದರೂ, ಆಕೆ ಒಲಂಪಿಕ್ ಸ್ಪರ್ಧಾಳು ಅಲ್ಲದಿದ್ದರೂ ರಿಯೋನಲ್ಲಿ ನಡೆಯುವ ಮುಕ್ತಾಯ ಸಮಾರಂಭಕ್ಕೂ ಮುನ್ನ ಉಳಿದ ಪ್ರಾಕಾರಗಳಲ್ಲಿ ಭಾಗವಹಿಸಿ ತನಗೆ ತಾನೆ ಕೊಟ್ಟುಕೊಂಡಿರುವ ಚಾಲೆಂಜನ್ನು ಪೂರ್ಣಗೊಳಿಸಲಿದ್ದಾಳೆ. ಇದರೊಂದಿಗೆ ಕ್ಯಾನ್ಸರಿನಿಂದ ಬಳಲುತ್ತಿರುವವರಲ್ಲಿ, ಮುಖ್ಯವಾಗಿ ಹೆಣ್ಣು ಮಕ್ಕಳಲ್ಲಿ ಭರವಸೆ ಮೂಡಿಸುವುದಕ್ಕಾಗಿ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾಳೆ.
ಇಂದು ಇಡೀ ಜಗತ್ತಿನ ಕಣ್ಣು ರಿಯೋ ಒಲಂಪಿಕ್ ಮೇಲೆ ಇದೆ. ಎಷ್ಟೋ ಜನರ ಕನಸು ಸಾಕಾರಗೊಂಡಿದೆ, ಕೆಲವರ ಕನಸು ಇನ್ನೂ ಸಾಕಾರಗೊಳ್ಳುವುದರಲ್ಲಿದ್ದರೆ, ಕೆಲವರು ಸೋಲಿನಿಂದ ನಿರಾಶೆಗೊಳ್ಳದೇ, ಸೋಲೇ ಗೆಲುವಿನ ಸೋಪಾನ ಎಂಬ ವಾಕ್ಯವನ್ನು ನೆನೆಯುತ್ತಾ, ಮುಂದಿನ ಬಾರಿಗೆ ಮತ್ತೆ ಬರುವ ಭರವಸೆಯನ್ನು ಹೊತ್ತಿದ್ದಾರೆ. ಇನ್ನು ಈ ಕ್ಯಾನ್ಸರ್ ಸರ್ವೈವರ್’ಗಳು ಒಲಂಪಿಕ್’ನಲ್ಲಿ ಪದಕ ಗೆಲ್ಲಲಿ ಅಥವಾ ಗೆಲ್ಲದಿರಲಿ ಜೀವನದಲ್ಲಂತೂ ಗೆದ್ದಿದ್ದಾರೆ…!!!
Facebook ಕಾಮೆಂಟ್ಸ್