X

ಮೇರೆ ಇರದ ಸಾಗರ, ಅಚ್ಚರಿಗಳ ಆಗರ

ನಾನು ಇದುವರೆಗೆ ಪ್ರವಾಸ ಮಾಡಿದ ಸ್ಥಳಗಳ ಪಟ್ಟಿ ಮಾಡಿದರೆ ಅರ್ಧಕ್ಕರ್ಧ ಸಿಗುವುದು ಸಮುದ್ರ ತೀರಗಳು. ಮುಂಬಯಿಯಿಂದ ಕಲಕತ್ತೆಯವರೆಗೆ, ಭಾರತಕ್ಕೆ ಹಾರ ತೊಡಿಸಿದಂತಿರುವ ತೀರದ ಬಹುತೇಕ ಎಲ್ಲ ಸ್ಥಳಗಳನ್ನೂ ಕಣ್ತುಂಬಿಕೊಂಡಿದ್ದೇನೆ. ಅಲ್ಲಿನ ಮರಳಲ್ಲಿ ಹೆಜ್ಜೆ ಗುರುತು ಮೂಡಿಸಿದ್ದೇನೆ. ಸಮುದ್ರ ಒಂದೇ, ಅಲೆಗಳೊಂದೇ ಆದರೂ ಪ್ರತಿ ತೀರವೂ ವಿಶಿಷ್ಟ, ಅನನ್ಯ. ಸಮುದ್ರ ರಾಜನ ಮೊರೆತ ಒಂದೊಂದು ಕಡೆ ಒಂದೊಂದು ಬಗೆ. ಗೋಕರ್ಣದ ನಾಲ್ಕು ಬೀಚುಗಳಲ್ಲಿ ಅದೇ ಸಮುದ್ರ ನಾಲ್ಕು ಬಗೆಯಲ್ಲಿ ಅನಾವರಣಗೊಳ್ಳುವ ಅಚ್ಚರಿಯನ್ನು ನೋಡಿಯೇ ಅನುಭವಿಸಬೇಕು.

ಸಮುದ್ರ ಮನುಷ್ಯನಿಗೆ ಕುಬ್ಜತೆಯನ್ನು ನೆನಪಿಸುತ್ತದೆ. ಪ್ರಕೃತಿಯ ಮಾಟದೆದುರು ಅವನ ಆಟಗಳೆಷ್ಟು ಕ್ಷುಲ್ಲಕ ಎಂಬ ಆತ್ಮ ಸಾಕ್ಷಾತ್ಕಾರ ಮಾಡಿಸುತ್ತದೆ. ನಡೆದಷ್ಟು ತೀರ, ಇಳಿದಷ್ಟು ಆಳ, ಬರೆದಷ್ಟು ಸಲ ಬಂದು ಅಪ್ಪಳಿಸಿ ಅಳಿಸುವ ಇದು ಯಾರು ಎಸೆವ ಕಲ್ಲಿಗೆ ಏಳುವ ಅಲೆ? ಎಂಬ ಪ್ರಶ್ನೆಯನ್ನು ಸಾಗರದೆದುರು ಮನುಷ್ಯ ಹರವಿಕೊಂಡು ಕೂತಿದ್ದಾನೆ. ಸಂಜೆ ಸೂರ್ಯಾಸ್ತದ ಹೊತ್ತಲ್ಲಿ ಬಾನು-ಕಡಲು ಮುತ್ತಿಕ್ಕುವ ಕ್ಷಿತಿಜದಂಚಲ್ಲಿ ನಿಶ್ಚಲ ನಿಂತಂತೆ ಕಾಣುವ ದೋಣಿ, ಸಾಗರದ ವಿಶಾಲತೆಯಲ್ಲಿ ಮನುಷ್ಯನ ಅಸ್ತಿತ್ವದ ಕ್ಷುಲ್ಲಕತೆಯನ್ನು ನೆನಪಿಸುವ ಜೊತೆ ಜೊತೆಗೇ ಅಖಂಡ ಸಾಗರವನ್ನೂ ಜಯಿಸಿಯೇನೆಂಬ ಅವನ ಕೆಚ್ಚನ್ನೂ ಪ್ರತಿಬಿಂಬಿಸುವಂತಿದೆ. ಕಾರವಾರದ ಕಡಲ ತೀರದಲ್ಲಿ ಕೂತ ರವೀಂದ್ರನಾಥ ಟಾಗೋರರು “ಆಹ! ಏನದ್ಭುತ ಅಚ್ಚರಿಯ ರಾಶಿ!” ಎಂದು ಉದ್ಗರಿಸಿದ್ದರಂತೆ.

ಗಗನನೌಕೆಯಲ್ಲಿ ಕೂತು ನೂರಾರು ಮೈಲಿ ಮೇಲೆ ಸಾಗಿ ವಸುಂಧರೆಯತ್ತ ಕಣ್ಣು ಹಾಯಿಸಿದರೆ ಆಕೆ ನೀಲಿ ಸೀರೆಯುಟ್ಟು ನಿಂತ ಗರ್ಭವತಿಯಂತೆ ಕಾಣುತ್ತಾಳೆ. ಭೂಮಿಯ 71% ಉಪ್ಪುನೀರ ಜಲರಾಶಿ. ಮಿಕ್ಕ 29% ಮಾತ್ರ ಭೂಭಾಗ. ಪ್ರಪಂಚದಲ್ಲಿರುವ ಒಟ್ಟು ನೀರಿನ ಪೈಕಿ 97%, ಸಾಗರಗಳಲ್ಲಿದೆ. ನಮ್ಮ ಅನುಕೂಲಕ್ಕಾಗಿ ಅವನ್ನು ಅಟ್ಲಾಂಟಿಕ್, ಪೆಸಿಫಿಕ್, ಹಿಂದೂ, ಆರ್ಕ್‍ಟಿಕ್ ಮತ್ತು ದಕ್ಷಿಣ ಧ್ರುವದ ಪಂಚ ಮಹಾಸಾಗರಗಳೆಂದು ಭಾಗ ಮಾಡಿಕೊಂಡಿದ್ದೇವಾದರೂ ಅವುಗಳಿಗೆ ಇಂತಲ್ಲೇ ಎಂಬ ಗಡಿರೇಖೆಗಳಿಲ್ಲ. ಎಲ್ಲಿ ಹಿಂದೂಸಾಗರ ಮುಗಿದು ಶಾಂತಸಾಗರ ಶುರುವಾಯಿತೆಂಬುದನ್ನು ಗಜಪಟ್ಟಿ, ಬಳಪ ಹಿಡಿದು ಗೆರೆ ಎಳೆಯಲು ಬಾರದು. ಈ ಮಹಾ ಜಲರಾಶಿಯ ಮೇಲೆ ಭೂಖಂಡಗಳು ತೇಲುತ್ತಿವೆ. ಒಂದಾನೊಂದು ಕಾಲದಲ್ಲಿ ಭಾರತದ ಭೂಶಿರದ ಭುಜಕ್ಕೆ ಭುಜ ಉಜ್ಜುತ್ತ ನಿಂತಿದ್ದ ಆಸ್ಟ್ರೇಲಿಯ, ಆಫ್ರಿಕಗಳು ದೂರ ಹೋಗಿ ಅಲ್ಲೆಲ್ಲ ಸಾಗರದ ನೀರು ತುಂಬಿಕೊಂಡಿದೆ. ಈ ಸಾಗರದ ನೀರಿನ ಪ್ರಮಾಣವಾದರೂ ಎಷ್ಟು ಎನ್ನುತ್ತೀರಿ? 130 ಕೋಟಿ ಕಿಲೋಮೀಟರಿನಷ್ಟು ಉದ್ದ-ಅಗಲ-ಎತ್ತರಗಳಿರುವ ಗಾಜಿನ ಪೆಟ್ಟಿಗೆಯಲ್ಲಿ ತುಂಬಿಸಿದರೂ ಹೊರ ತುಳುಕುವಷ್ಟು! ಭಾರತದ ವಿಸ್ತೀರ್ಣದ ಮೂರು ಪಟ್ಟು ಇರುವ ಅಮೆರಿಕಾ ಸಂಸ್ಥಾನದ ಮೂವತ್ತಾರು ಪ್ರತಿಗಳನ್ನು ಮಾಡಿ ಹಂಚಿದರೂ ಅವು ಭೂಮಂಡಲದ ಸಾಗರವಿಸ್ತಾರವನ್ನು ಮುಚ್ಚಲಾರವು.

ಇದೊಂದು ಅಚ್ಚರಿಯೆನ್ನಿ, ಅದ್ಭುತವೆನ್ನಿ, ಆಘಾತವೆನ್ನಿ. ವಿಶ್ವದಲ್ಲಿರುವ ಬಿಲಿಯನ್‍ಗಟ್ಟಲೆ ಗ್ರಹಕಾಯಗಳನ್ನು ಹುಡುಕಿದರೂ ಒಂದೇ ಒಂದು ಹನಿ ನೀರು ಸಿಗದಿರುವಾಗ ಭೂಮಿಯ ಒಡಲಲ್ಲಿ ಪ್ರಕೃತಿ ಅದು ಹೇಗೆ ಇಷ್ಟೊಂದು ಅಪಾರ ನೀರನ್ನು ತುಂಬಿಸಿಟ್ಟಿತು? ನೆಲದ ಮೇಲೆ ಓಡಾಡುವ ಇರುವೆಯಿಂದ ಮನುಷ್ಯನವರೆಗೆ ಎಲ್ಲವನ್ನೂ ಎಲ್ಲರನ್ನೂ ಕೂಡಿಸಿಟ್ಟರೂ ಅದು ಭೂಗ್ರಹದಲ್ಲಿರುವ ಜೀವಸಂಕುಲದ ಕೇವಲ 1% ಅಷ್ಟೇ. ಮಿಕ್ಕ 99% ಸಾಗರದಲ್ಲಿವೆ! ಹಾಗಾದರೆ ಸಾಗರದ ನೀಲಶರಧಿ ಪೊರೆಯುತ್ತಿರುವ ಜೀವ ವೈವಿಧ್ಯದ ಪ್ರಮಾಣವಾದರೂ ಎಷ್ಟು! ಮನುಷ್ಯನ ಕಲ್ಪನೆಗೆ ನಿಲುಕದಂಥ ವೈಚಿತ್ರ್ಯಗಳೆಲ್ಲ ಸಾಗರದಾಳದಲ್ಲಿವೆ. ಅಟ್ಲಾಂಟಿಕ್‍ನಿಂದ ಹಿಂದೂ ಸಾಗರದ ಮೂಲಕ ಪೆಸಿಫಿಕ್ ಸಾಗರದವರೆಗೆ ಹಬ್ಬಿರುವ, ಒಟ್ಟು 65,000 ಕಿಮೀ ಉದ್ದವಿರುವ ಪರ್ವತ ಶ್ರೇಣಿ ಸಾಗರದಡಿಯಲ್ಲುಂಟು. ನಾವು ನಡೆದಾಡುವ ಭೂಭಾಗದ ಕಾಲು ಭಾಗದಷ್ಟು ದೊಡ್ಡ ಪರ್ವತ ಇದು. ತಮಾಷೆಯೆಂದರೆ 1969ರಲ್ಲಿ ಮನುಷ್ಯ ಚಂದ್ರನ ಮೇಲೆ ಕಾಲಿರಿಸಿ ಬಂದ. ಆದರೆ ಅದಾಗಿ ನಾಲ್ಕು ವರ್ಷಗಳ ನಂತರವಷ್ಟೇ ಸಮುದ್ರದಾಳದ ಈ ಪರ್ವತದ ಮೇಲೆ ಇಳಿಯಲು ಅವನಿಗೆ ಸಾಧ್ಯವಾಯಿತು! ಪ್ರತಿ ಸೆಕೆಂಡಿಗೆ ಎಷ್ಟು ನೀರನ್ನು ಜಲಪಾತಗಳು ಕೆಳ ಹಾಕುತ್ತವೆಂಬ ಲೆಕ್ಕ ಮಾಡಿ ಕಾಂಗೋ ದೇಶದ ಇಂಗಾ-ಅನ್ನು ಪ್ರಪಂಚದ ಅತಿದೊಡ್ಡ ಜಲಪಾತ ಎಂದು ಗುರುತಿಸಲಾಗಿದೆ. ನಂಬಿದರೆ ನಂಬಿ, ಇದು ಚೆಲ್ಲುವ ನೀರಿನ 116 ಪಟ್ಟು ಹೆಚ್ಚು ನೀರನ್ನು ಪ್ರತಿಕ್ಷಣವೂ ಹೊರಹಾಕಿ ಮೈಭಾರವಿಳಿಸಿಕೊಳ್ಳುವ ಮಹಾಜಲಪಾತ, ಗ್ರೀನ್‍ಲ್ಯಾಂಡ್ ಮತ್ತು ಐಸ್‍ಲ್ಯಾಂಡ್ ದ್ವೀಪಗಳ ನಡುವಿನ ಸಾಗರದಲ್ಲಿದೆ. ಸಮುದ್ರದ ನಟ್ಟ ನಡುವಿಂದ ಎದ್ದು ನಿಂತ ಪರ್ವತದಂತೆ ಕಾಣುವ ಮೌನ ಕಿಯ ಬೆಟ್ಟದ ಎತ್ತರ, ಸಮುದ್ರ ಮಟ್ಟದಿಂದ 4200 ಮೀಟರ್‍ಗಳು. ಆದರೆ ಸಮುದ್ರಕ್ಕಿಂತ ಕೆಳಗೆ 5800 ಮೀಟರ್ ಚಾಚಿರುವ ಅದರ ಮಹಾಕಾಯವನ್ನು ಪರಿಗಣಿಸಿದರೆ, ಅದು ನಮ್ಮ ಮೌಂಟ್ ಎವರೆಸ್ಟ್’ಗಿಂತ ಒಂದು ಕಿಲೋಮೀಟರ್ ಎತ್ತರವಿದೆ! ಬೆಟ್ಟಗಳ ಕತೆ ಹೀಗಾದರೆ ಕಣಿವೆಗಳ ಕತೆ ಕೇಳಿ. ನಾವು ಇದುವರೆಗೆ ಕಂಡು ಹಿಡಿದಿರುವ ಅತ್ಯಂತ ಆಳದ ಕೊರಕಲು ಎಂದರೆ ಚಾಲೆಂಜರ್ ಡೀಪ್. ಇದು ಸಮುದ್ರಮಟ್ಟದಿಂದ ಬರೋಬ್ಬರಿ ಹನ್ನೊಂದು ಕಿಲೋಮೀಟರ್ ಆಳದಲ್ಲಿದೆ. ಎವರೆಸ್ಟ್ ಪರ್ವತವನ್ನೇನಾದರೂ ಈ ಹೊಂಡದಲ್ಲಿ ಮುಳುಗಿಸಿಟ್ಟರೆ ಅದರ ತುದಿಯೂ ಮುಳುಗಿ, ಅಲ್ಲಿಂದ ಎರಡೂವರೆ ಕಿಲೋಮೀಟರ್ ಮೇಲೆ ಬಂದರಷ್ಟೇ ಸಮುದ್ರದಿಂದ ಹೊರಗೆ ತಲೆ ಹಾಕಲು ಸಾಧ್ಯವಾದೀತು!

ಕಡಲ ಜಗತ್ತಿನ ಅಚ್ಚರಿಗಳ ಮಾತೆಲ್ಲ ಬದಿಗಿಟ್ಟು, ಕಡಲು ಎಂದಾಗ ತಟ್ಟನೆ ನೆನಪಾಗುವ ಮೂರು ಸಂಗತಿಗಳನ್ನು ಹೇಳಿ ಈ ಬರಹವನ್ನು ಮುಗಿಸುತ್ತೇನೆ. ಒಂದು – ರವೀಂದ್ರನಾಥ ಟಾಗೋರರು, ತನ್ನ ಇಪ್ಪತ್ತೆರಡನೆ ವಯಸ್ಸಿನಲ್ಲಿ ಕಾರವಾರಕ್ಕೆ ಬಂದು ಹಲವು ದಿನಗಳು ಇಲ್ಲಿ ಅಡ್ಡಾಡಿ, ಮೊರೆಯುವ ಕಡಲಿಗೆದುರಾಗಿ ಕೂತು ಅದರ ಸ್ನಿಗ್ಧ  ಸೌಂದರ್ಯವನ್ನೂ ರುದ್ರ ಗಾಂಭೀರ್ಯವನ್ನೂ ಕಂಡು ಬೆರಗಾಗಿ ಒಂದು ಕಾವ್ಯ ನಾಟಕವನ್ನು ಬರೆದರು. ಅದೇ ಕಡಲು ಮತ್ತೊಮ್ಮೆ ಟಾಗೋರರ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಗೀತಾಂಜಲಿ ಕಾವ್ಯ ಸಂಕಲನವನ್ನು ಬರೆದು ಇಂಗ್ಲೆಂಡಿನ ಕವಿಗಳಿಗೆ ತೋರಿಸಬೇಕೆಂದು ಹೋಗುತ್ತಿದ್ದಾಗ ಹಸ್ತ ಪ್ರತಿ ಕಳೆದುಹೋಗಿ ಟಾಗೋರರು ಕಡಲ ಪ್ರಯಾಣದ ನಡುವಲ್ಲೇ ಇಡೀ ಪುಸ್ತಕವನ್ನು ಮತ್ತೊಮ್ಮೆ ನೆನಪಿನಿಂದ ಬರೆದು ಪೂರ್ಣಗೊಳಿಸಿದರಂತೆ! ಎರಡನೆಯದು – ಸ್ವಾಮಿ ವಿವೇಕಾನಂದರ ದಿಗ್ವಿಜಯದ ಕತೆ. ಸಾಗರೋಲ್ಲಂಘನ ಮಾಡುವುದು ಶಾಸ್ತ್ರ ನಿಷಿದ್ಧವೆಂಬ ಮಾತನ್ನು ಬದಿಗಿಟ್ಟು ಅಮೆರಿಕೆಗೆ ಹೋಗಿ ಶಿಕಾಗೋ ನಗರಿಯಲ್ಲಿ ಸನಾತನ ಧರ್ಮದ ವಿಜಯ ದುಂದುಭಿ ಬಾರಿಸಿದ ಕ್ಷಾತ್ರ ತೇಜಸ್ಸಿನ ಮೊದಲ ಸಂನ್ಯಾಸಿ ಅವರು. ಇನ್ನು ಮೂರನೆಯದು – ಸರ್ ಸಿ.ವಿ.ರಾಮನ್ ಅವರ ಜೀವನದಲ್ಲಿ ನಡೆದ ಘಟನೆ. “ರಾಮನ್ ಪರಿಣಾಮ”ವನ್ನು ಕಂಡು ಹಿಡಿದು ಅದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆಯುವ ಮಟ್ಟಕ್ಕೇರಿದ ಈ ಅಸೀಮ ಸಾಹಸಿಯ ಪ್ರಯತ್ನಕ್ಕೆ ಬೀಜಕ್ಷೇಪವಾಗಿದ್ದು ಸಾಗರ ಪ್ರಯಾಣದಲ್ಲಿದ್ದಾಗ. ತೀರ ಪ್ರದೇಶದಲ್ಲಿ ಕಾಣಿಸುವ ತೆಳು ನೀಲಿಗಿಂತ ಭಿನ್ನವಾದ, ನಟ್ಟ ನಡುವಿನ ಸಾಗರಕ್ಕೆ ಬಂದಾಗ ಹೊಳೆವ ಅಕ್ಷತ ನೀಲಿಯನ್ನು ಕಂಡು ಬೆರಗಾದ ರಾಮನ್ ಕೇಳಿಕೊಂಡ ಪ್ರಶ್ನೆ: “ಸಾಗರವೇಕೆ ನೀಲಿ?”

ದಿನವೆಲ್ಲ ಉರಿದುರಿದು ಬೀಳುವ ಕೆಂಡಗಣ್ಣ ನೇಸರನನ್ನೂ ತಣ್ಣಗೆ ನುಂಗಿ ನೊಣೆಯಬಲ್ಲ ಸಾಗರವೆಂದರೆ ಸಾಮಾನ್ಯವೇ?

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post