X

ಮಹಾನಗರ ಕಾಡಿಸುತ್ತದೆ, ಮತ್ತೆ ಕೈ ಬೀಸಿ ಕರೆಯುತ್ತದೆ..

ಸಿಲಿಕಾನ್‌ ಸಿಟಿ, ಐಟಿಬಿಟಿ ನಗರ, ಗಾರ್ಡನ್‌ ಸಿಟಿ ಅಂತೆಲ್ಲಾ ಕರೆಸಿಕೊಳ್ಳೋ ಬೆಂಗಳೂರಿನ ಮಾಯೆಯೇ ಅಂಥಹದ್ದು. ರಾಜ್ಯದ ವಿವಿಧ ಮೂಲೆಯಿಂದ ಜನ್ರು ಇಲ್ಲಿ ಬಂದು ಬದುಕು ಕಟ್ಟಿಕೊಳ್ಳುತ್ತಾರೆ. ಅಷ್ಟೇ ಯಾಕೆ ಭಾಷೆ ಅರಿಯದ, ಸಂಸ್ಕೃತಿಯ ಪರಿಚಯವೂ ಇಲ್ಲದ ಅದೆಷ್ಟೋ ರಾಜ್ಯದ ಜನ್ರಿಗೆ ಬೆಂಗಳೂರು ಸೂರಾಗಿದೆ. ಹೊತ್ತಿನ ತುತ್ತು ಗಳಿಸುವ ಕೆಲಸ ನೀಡಿದೆ. ಹಾಗಾಗಿಯೇ ಅದೆಷ್ಟೋ ಜನ್ರ ಪಾಲಿಗೆ ಬೆಂಗಳೂರು ಪೊರೆಯುವ ತಾಯಿ..

ಅದೆಷ್ಟೋ ಸಾರಿ ಈ ಬೆಂಗಳೂರು ಒಂದು ಮಾಯಾನಗರಿ ಅಂತ ಅನಿಸಿದೆ. ಭಿಕ್ಷೆ ಬೀಡುವ ಭಿಕ್ಷುಕನಿಂದ ಹಿಡಿದು, ಕಾರಲ್ಲಿ ಓಡಾಡೋ ಬಾಸ್‌ ಕೂಡಾ ಇಲ್ಲಿ ಸುಖಿಯಲ್ಲ. ಆದ್ರೂ ಎಲ್ಲರಿಗೂ ಬೆಂಗಳೂರೇ ಬೇಕು. ಹಳ್ಳಿಗಳಲ್ಲಿ ಬೆಳೆದವರ ಪಾಲಿಗೆ ಬೆಂಗಳೂರಲ್ಲಿ ಒಂದು ಕೆಲಸ ಗಿಟ್ಟಿಸಿಗೊಳ್ಳುವುದೆಂದರೆ ಎವರೆಸ್ಟ್‌ ಏರಿದಂತಹಾ ಮಹತ್ಕಾರ್ಯ. ಊರೆಲ್ಲಾ ಟಾಂಟಾಂ ಹೊಡೆಯುವ ಬಿಗ್‌ ನ್ಯೂಸ್‌. ಎಜುಕೇಷನ್‌, ಪ್ರೊಫೆಶನಲ್‌ ಅಂತ ಎಲ್ರೂ ಮಾಯಾನಗರಿಗೆ ಮಾರು ಹೋಗುವವರೇ.

ಎತ್ತರೆತ್ತರ ಬಿಲ್ಡಿಂಗ್‌ ಕಟ್ಟಿ ಲಕ್ಷ ಲಕ್ಷ ಗಳಿಸುವವರು ಒಂದೆಡೆಯಿದ್ರೆ, 10 ರೂಪಾಯಿಗೆ ಕಡ್ಲೇಕಾಳು ಮಾರುವವರು ಇಲ್ಲಿದ್ದಾರೆ. ರೋಡ್‌ನಲ್ಲಿ ಟೊಮೆಟೋ, ಈರುಳ್ಳಿ ಅಂತ ಕೂಗಿಕೊಂಡು ಹೋಗುವವನಿಂದ ಹಿಡಿದು ಮಕ್ಕಳು, ಆಫೀಸಿಗೆ ಹೋಗುವವರು ಎಲ್ಲರದೂ ಇಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡ ಬದುಕು. ಬಿಸಿ ಬಿಸಿ ತಿಂಡಿಯನ್ನು ಬಾಯಿಗಿಟ್ಟಂತೆ ಮಾಡಿ, ಆಫೀಸ್‌, ಸ್ಕೂಲ್‌ಗೆ ಲೇಟಾಯ್ತು ಅಂತ ಹೊರಟವರು ಮನೆ ಸೇರುವುದು ಸಂಜೆಯೇ. ಗಡಿಬಿಡಿಯ ಬದುಕಿನಲ್ಲಿ ಮಾತನಾಡಲು ಸಿಗದ ಮನೆ ಮಂದಿಯೂ ಅಪರಿಚಿತರೇ..

ಹೂಕಟ್ಟಿ 10 ರೂಪಾಯಿಗೆ ಮಾರುವಾಕೆ, ಎಳನೀರು ವ್ಯಾಪಾರಿ, ಬಜ್ಜಿ, ಬೋಂಡಾ ಸ್ಟಾಲ್, ಪಾನೀ ಪೂರಿ, ಮಸಾಲೆ ಪೂರಿ ಸ್ಟಾಲ್‌ ಎಲ್ರೂ ಹೊಟ್ಟೆ ತುಂಬಿಸಿಕೊಳ್ಳಲು ಮಾಯಾ ನಗರಿಯ ಮೊರೆ ಹೋದವರು. ಇಲ್ಲಿ ಎಲ್ಲರೂ ಒಳ್ಳೆಯವರು ಅಲ್ಲ, ಎಲ್ಲರೂ ಕೆಟ್ಟವರೂ ಅಲ್ಲ. ಅವರವರ ಬದುಕು ಅವರವರಿಗೆ. ಪಕ್ಕದ ಮನೆಗೆ ಬಾಂಬ್‌ ಬಿದ್ದರೂ ನಮಗೆ ಏನೂ ಆಗಬೇಕಾಗಿಲ್ಲ. ಪಿಜ್ಜಾ ಡೆಲಿವರೀ ಬಾಯ್‌, ತರಕಾರಿ ವ್ಯಾಪಾರಿ, ಕೇಬಲ್‌ ಕಲೆಕ್ಟರ್‌ ಎಲ್ಲರೂ ರೊಬೋಟ್‌ ತರಹ ಬಂದು ಹೋಗುತ್ತಾರೆ. ಯಾರಲ್ಲೂ ಹೆಚ್ಚು ಮಾತಿಲ್ಲ. ಮಾತನಾಡಬಾರದು ಅನ್ನೋದು ಅಲಿಖಿತ ನಿಯಮ. ಅದೆಷ್ಟು ಸಾರಿ ಎದುರೆದುರೂ ಬಂದರೂ ಇಲ್ಲಿ ಎಲ್ಲರೂ ಅಪರಿಚಿತರೇ.

ಟೋಪಿ ಹಾಕುವವರೂ ಇಲ್ಲಿ ಕಡಿಮೆಯೇನಿಲ್ಲ. ಒಳ್ಳೆಯವರು ಇದ್ದಾರೆ. ಒಳ್ಳೆಯವರಂತೆ ನಟಿಸುವವರೂ ಇದ್ದಾರೆ. ನಂಬಿಸಿ ಕೈ ಕೊಡೋರು, ಮಾತಲ್ಲೇ ಮನೆ ಕಟ್ಟುವವರು ಹೀಗೆ ವೆರೈಟಿ ವೆರೈಟಿ ಜನ್ರು ಕಾಣ ಸಿಗೋದು ಬೆಂಗಳೂರಿನಲ್ಲಿಯೇ. ಇಲ್ಲಿ ಬಿಸಿಲು, ಮಳೆ, ಚಳಿ ಎಲ್ಲವೂ ಒಂದೇ. ಯಾವುದರಲ್ಲೂ ಬರುವಿಕೆಯಲ್ಲಿ ಉತ್ಸಾಹವಿಲ್ಲ. ಭಾವನೆಯಿಲ್ಲ, ಇಲ್ಲಿಯ ಜನರಂತೆ.

ಮಹಾನಗರಿಯಲ್ಲಿ ಸಂಬಂಧಗಳು ಅಷ್ಟೇ ಕ್ಲಿಷ್ಟಕರ. ಪ್ರೀತಿ, ಸ್ನೇಹ, ಸಂಬಂಧ, ನಂಬಿಕೆ ಯಾವುದಕ್ಕೂ ಇಲ್ಲಿ ವ್ಯಾಲಿಡಿಟಿ ಇಲ್ಲ. ಅಪ್ಪ,ಅಮ್ಮ, ಅಜ್ಜ, ಅಜ್ಜಿ ಯಾವ ಬಾಂಧವ್ಯಕ್ಕೂ ಬೆಲೆಯಿಲ್ಲ. ರಸ್ತೆ ಬದಿಯಲ್ಲಿ ಎದ್ದು ನಿಲ್ಲಲೂ ಆಗದ ವೃದ್ಧರು, ವೃದ್ಧೆಯರೂ ಸೀಬೆ ಹಣ್ಣು, ಕಡಲೇಕಾಯಿ ಮಾರುವ ದೃಶ್ಯ ಕಣ್ಣಲ್ಲಿ ನೀರು ತರಿಸುತ್ತದೆ. ಆದ್ರೆ ರಸ್ತೆಯಲ್ಲಿ ಸಾಗಿ ಹೋಗುವ ಸಾವಿರಾರು ಜನ್ರಿಗೆ ಇದು ಹೊಸ ವಿಷ್ಯವಲ್ಲ. ಕರುಣೆ ಉಕ್ಕಿಸುವ ಘಟನೆಯಲ್ಲ. ಆ ಹಿರಿ ಜೀವದ ಜತೆಗೂ ಚೌಕಾಸಿಯ ಜಗಳ ನಡೆಯುತ್ತದೆ.

ನಾಲ್ಕು ರಸ್ತೆಗಳ ಮಧ್ಯೆ ದಾರಿ ತಪ್ಪಿ ನಿಂತರೂ ಇಲ್ಲಿ ನಿಮ್ಮ ನೆರವಿಗೆ ಬರುವವರಿಲ್ಲ. ಆಟೋಗಳ 5 ಕಿಲೋಮೀಟರ್‌ನ್ನು ಆಗ್ಲೇ 50 ಕಿಲೋಮೀಟರ್‌ ಮಾಡಿ ದುಡ್ಡು ಜೇಬಿಗಿಳಿಸುವ ಪ್ಲಾನ್‌ನಲ್ಲಿತ್ತಾರೆ. ಮಹಾನಗರಕ್ಕೆ ಹಳಬನಾದ ವ್ಯಕ್ತಿಗೆ ರೂಟ್‌ ಕೇಳಿದವನೊಬ್ಬ ವಿಚಿತ್ರ ಪ್ರಾಣಿ. ಧಾವಂತದಲ್ಲಿರುವ ಯಾರಿಗೂ ನಿಮ್ಮ ಮಾತನ್ನೂ ಕೇಳುವ ವ್ಯವಧಾನವೂ ಇರಲ್ಲ. ಕಣ್ಣೆದುರೇ ಯಾರದೋ ಪರ್ಸ್‌ ಕಿತ್ತುಕೊಂಡು ಹೋದರೂ, ಒಂಟಿ ಹುಡುಗಿಯನ್ನು ಹುಡುಗರ ಗ್ಯಾಂಗ್‌ವೊಂದು ರೇಗಿಸಿದ್ರೂ ಇಲ್ಲಿ ಎಲ್ಲರೂ ಬರೀ ಮೂಕ ಪ್ರೇಕ್ಷಕರು. ಹೆಲ್ಪ್‌ ಹೆಲ್ಪ್‌ ಅಂತ ಎಷ್ಟು ಕಿರುಚಿಕೊಂಡರೂ ಯಾಕ್‌ ಬೇಕು ಇಲ್ಲದ ಉಸಾಬರಿ ಅಂತ ಸುಮ್ಮನಾಗುತ್ತಾರಷ್ಟೇ.

ಬೆಳಗ್ಗಿನಿಂದ ಸಂಜೆಯವರೆಗೆ ದುಡಿಮೆ, ಬಾಸ್ ಬೈಗುಳ, ಕೊಲೀಗ್‌ ಕಿರಿಕಿರಿ ಸದ್ಯ ಇವತ್ತಿಗೆ ಮುಗೀತು ಅಂತ ಮನೆ ಕಡೆ ಹೊರಟ್ರೂ, ಟ್ರಾಫಿಕ್‌ ತಲೆನೋವು. ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತ ವಾಹನಗಳು. ನಿಂತು ನಿಂತು ಕಾಲು ನೋವು ಬಂದರೂ ಬಾರದ ಬಸ್ಸು. ಕೊನೆಗೆ ಎಷ್ಟೋ ಹೊತ್ತಿಗೆ ಬಂದರೂ ಕಾಲಿಡಲಾಗದಷ್ಟು ನೂಕನುಗ್ಗಲು. ಹೇಗೋ ಹತ್ತಿ, ಎಲ್ಲರಿಂದ ತಳ್ಳಿಸಿಕೊಂಡು ಮನೆ ಸೇರೋ ಹೊತ್ತಿಗೆ ಅರೆ ಜೀವ. ಬದುಕು ಇಷ್ಟೇನಾ ಅನ್ನೋ ನಿರಾಶೆ. ಇಲ್ಲಿ ನೆಮ್ಮದಿ ಅನ್ನೋದು ಇರೋದು ತಿಂಗಳ ಕೊನೆಗೆ ಸಿಗುವ ಸಂಬಳದಲ್ಲಿ ಮಾತ್ರ.

ಎಲ್ಲವನ್ನೂ ಬಿಟ್ಟು ಊರಿಗೆ ಹೋಗಿ ಬಿಡಬೇಕೆಂಬ ಹಂಬಲ. ಆದ್ರೆ ಹಬ್ಬ, ಹರಿದಿನ ಅಂತ ಅದ್ಯಾವಾಗಲೋ ಊರಿಗೆ ಹೋದರೆ ಬರಲಾಗದ ಮನಸ್ಥಿತಿ. ಎರಡು ದಿನ ಹೆಚ್ಚು ಉಳಿದರೆ ನೂರು ಮಾತನಾಡುವ ಜನಗಳ ವರ್ತನೆಯೂ ರೇಜಿಗೆ ಹುಟ್ಟಿಸುತ್ತದೆ. ಇದೇ ತುಮುಲ, ಅನಿವಾರ್ಯತೆಗಳ ಹೊಡೆದಾಟದಲ್ಲಿ ವರ್ಷಗಳೇ ಉರುಳಿ ಹೋಗಿ ಬಿಡುತ್ತವೆ. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಅನ್ನೋ ಪರಿಸ್ಥಿತಿ.

ಕಣ್ಣಂಚು ತೇವವಾದ್ರೂ, ಟ್ರೈನ್‌ ಹತ್ತಲೇಬೇಕು. ಅಷ್ಟೆಲ್ಲಾ ಕಾಡಿದರೂ ಬೆಂಗಳೂರು ಮತ್ತೆ ಕೈ ಬೀಸಿ ಕರೆಯುತ್ತದೆ. ಮತ್ತೆ ಮಾಯಾನಗರಿಯಲ್ಲಿ ಅದೇ ಬೆಳಗು, ಅದೇ ಜನ, ಅದೇ ಟ್ರಾಫಿಕ್‌..ದಿನಗಳು ಕಳೆದು ಹೋಗುತ್ತಲೇ ಇರುತ್ತದೆ.

– ವಿನುತಾ ಪೆರ್ಲ

Facebook ಕಾಮೆಂಟ್ಸ್

Team readoo kannada:
Related Post