- ಧೈರ್ಯವಾಗಿ ಸೋಲನ್ನು ಒಪ್ಪಿಕೊಳ್ಳಿ:
ಸೋಲು ಗೆಲುವು ಒಂದೆ ನಾಣ್ಯದ ಎರಡು ಮುಖಗಳು ಸೋಲು ಎನ್ನುವುದು ಆಟದ ಒಂದು ಭಾಗವೇ ಆದರೂ ಸೋತವರೇನು ದುರ್ದೈವಿಗಳಲ್ಲ ಯಾರಾದರು ವಿಜಯಿಗಳಾಗಬೇಕಾದರೆ ಸೋಲುವವರಿರಬೇಕಲ್ಲವೆ? ಈ ಭಾರಿಯೂ ನೀವೇನಾದರು ಸೋತು ಸುಣ್ಣವಾಗಿದ್ದರೆ ಸಂಕಟ ಪಡುವ ಅಗತ್ಯವಿಲ್ಲ. ಒದಗಿ ಬಂದ ಸೋಲಿಗಾಗಿ ಸ್ವಲ್ಪ ಹೊತ್ತು ರೋಧಿಸಿ, ದೂರಿ, ಕೊರಗಿ ಮತ್ತು ವಿಷಾದಿಸಿ ಆದರೆ ಇವುಗಳಲ್ಲಿ ಮುಳುಗಿ ಖಿನ್ನತೆಯ ಮೃತ್ಯುವಿಗೆ ಆಹ್ವಾನಿಸುವುದು ಅಥವ ನಿಮ್ಮನ್ನು ನೀವೇ ಬಡಿದುಕೊಳ್ಳುವುದು ಎರಡೂ ಬೇಡ. ಅನುಭವಿಸುತ್ತಿರುವ ಈ ಸೋಲು ಜೀವನ ಪರ್ಯಂತದಲ್ಲ ಹಾಗೆ ನೀವೇನು ಅಯೋಗ್ಯ ವೃತ್ತಿಯಲ್ಲೇನು ಇಲ್ಲ. ಸಾಧಿಸಬೇಕಾದ ಕಾರ್ಯ ಸಂಧರ್ಬೋಚಿತ ಫಲಿತಾಂಶವನ್ನು ಒದಗಿಸಲಿಲ್ಲವೆಂದು ಭವಿಷ್ಯದ ಅಭ್ಯುದಯದ ದಿನಗಳಲ್ಲಿ ಹೇರಳವಾಗಿ ದೊರಕುವ ಅವಕಾಶಗಳಲ್ಲಿ ಸಾಧಿಸಿತೋರುವ ಛಲದಿಂದ ದಾಪುಗಾಲಿಡಿ.
- ದೋಷಗಳನ್ನು ಮರುಪರಿಶೀಲಿಸಿ:
ಸೋಲಿಗೆ ಅರೆಕೊರೆಯಾದ ಪೂರ್ವ ಸಿದ್ಧತೆಯ ಪರಿಣಾಮವೋ ಅಥವ ದೋಷಪೂರಿತ ತಂಡದ ಬಳಕೆಯ ಕಾರಣವೋ ಎಂದು ಮರುಪರಿಶೀಲಿಸಿ,ತಂಡದೊಂದಿಗೆ ನಿಸ್ಸಂಕೋಚವಾಗಿ ಅಭಿಪ್ರಾಯ ಹಂಚಿಕೊಳ್ಳಿ. ಯೋಜನೆಗೆ ತಂಡದ ಪ್ರತಿಯೊಬ್ಬ ಸದಸ್ಯನ ಕೊಡುಗೆ ಬಗ್ಗೆ ತಿಳಿಹೇಳಿ ನಂತರದಲ್ಲಿ ಯೋಜನೆಯು ಮುರಿದು ಬೀಳಲು ಕಾರಣವನ್ನು ತಂಡದ ಹೇಳಿಕೆ, ಟೀಕೆಗಳಿಂದ ಗ್ರಹಿಸಿ. ಕೆಲವು ಬಾರಿ ಉನ್ನತ ಸ್ಥಾನದಲ್ಲಿರುವವರು ಪುಟ್ಟ ಪುಟ್ಟ ಸಂಗತಿಗಳು ಕೈಲಿರುವ ಯೋಜನೆಗೆ ನಗಣ್ಯವೆಂದು ತಾತ್ಸಾರ ಮಾಡಿರುತ್ತಾರೆ. ಇವುಗಳನ್ನು ಮರೆಯದೆ ಲೆಕ್ಕಕ್ಕೆ ತೆಗೆದುಕೊಳ್ಳುವುದು ಜಾಣತನ. ಬಹು ಮುಖ್ಯವಾಗಿ ತಂಡ ನಿಮ್ಮ ಕಣ್ತೆರೆಯುವುದು ನೀವು ಯಾವುದು ಸಣ್ಣ ವಿಷಯಗಳೆಂದು ಬಿಟ್ಟು ಬೀಗುತ್ತಿರುತ್ತಿರೋ ಅವನ್ನೆ, ಸ್ವಾರಸ್ಯವೆಂದರೆ ಈ ಸಣ್ಣ ವಿಷಯಗಳೇ ಸೋಲಿಗೆ ಕಾರಣವಾಗಿರುತ್ತವೆ. ತಂಡದೊಂದಿಗೆ ಆಪಾದನೆಯ ತಂತ್ರ ಉಪಯೋಗಿಸುವುದರಿಂದ ನಿಮ್ಮ ಕಾಲಿನ ಮೇಲೆ ನೀವೆ ಕಲ್ಚಪ್ಪಡಿ ಎಳೆದುಕೊಂಡಂತೆ, ನೆನಪಿರಲಿ ನೀವು ತಂಡದ ಒಬ್ಬ ಜವಾಬ್ದಾರಿಯುತ ಸದಸ್ಯ!
- ನೂತನ ಮಾರ್ಗೋಪಾಯದ ಚಿಂತನೆ ನಡೆಸಿ:
ನಿರಾಸೆಯಿಂದ ಸಮಯ ವ್ಯರ್ಥ ಮಾಡಿ ಕೊಳೆತು ನಾರಿದ್ದು ಸಾಕು, ಇನ್ನು ಪ್ರತಿಕ್ಷಣವು ಅತ್ಯಮೂಲ್ಯ ನಿಮ್ಮ ಹಿಂದಿನ ಮಾರ್ಗಸೂಚಿಗೆ ಅಂಟಿಕೊಳ್ಳದೆ ತಾಜಾ ಮಾರ್ಗೋಪಾಯದ ಅಳವಡಿಸಿಕೊಳ್ಳಲು ಯತ್ನಿಸಿ. ಹೊಸ ಭರವಸೆಯೊಂದಿಗೆ ನವೀನ ರೀತಿಯಲ್ಲಿ ಮುನ್ನಡೆಯುವುದಕ್ಕೆ ಟೊಂಕಕಟ್ಟಿ ಮುಂದೆ ಸಾಗಿ ಹೋಗಿ ಗೆಲುವು ನಿಮ್ಮದೆ.
- ಪರಿಸ್ಥಿತಿಯಿಂದ ಕೊಂಚ ದೂರ ಸರಿಯಿರಿ:
ತಂಡದ ಒಬ್ಬ ಸದಸ್ಯನಾಗಿಯೋ ಅಥವ ನಾಯಕನಾಗಿಯೋ ಸೋಲಿಗೆ ನೀವೇ ಕಾರಣ ಎಂದು ಎಣಿಸಿರಬಹುದು, ಇಡಿಯ ಜಗತ್ತೇ ಸೋಲಿಗೆ ನಿಮಗೆ ಸಂಭಂಧ ಕಲ್ಪಿಸಿ ದಿನಂಪ್ರತಿ ನೋಡುತ್ತಿದ್ದರೂ ಪರವಾಗಿಲ್ಲ ನೀವು ಸಹಜ ಸ್ಥಿತಿಗೆ ಮರಳಬೇಕಾದರೆ ಜಗತ್ತಿನ ಈ ವ್ಯಾಖ್ಯಾನವನ್ನು ಮರೆತು ಬಿಡಿ. ಈ ಪರಿಸ್ಥಿತಿಯಿಂದ ಕೊಂಚ ದೂರ ಸರಿದು ನಿಮ್ಮ ಜೀವನದ ಇತರ ಹಿರಿಮೆಯ ಕಾರ್ಯಕ್ಷೇತ್ರಗಳಲ್ಲಿ ವ್ಯಾಪಿಸಲು ಪ್ರಯತ್ನಿಸಿ,ಸೋಲು ನೀವು ಅಭ್ಯಾಸಿಸುತ್ತಿದ್ದ ಒಂದು ಯೋಜನೆಯಷ್ಟೆ. ಒಂದು ಹೆಜ್ಜೆ ಪಕ್ಕಕ್ಕೆ ಸರಿದು ವೈಪಲ್ಯ ಇಷ್ಟೇನಾ ಎಂದು ನಕ್ಕುಬಿಡಿ.
- ಸಕಾರಾತ್ಮಕತೆಯ ಕಡೆಗೆ ದೃಷ್ಟಿಹರಿಸಿ:
ಗೆಲುವಿಗಿಂತ ತಪ್ಪುಗಳಿಗೆ ಜಾಸ್ತಿ ಕಿಮ್ಮತ್ತು! ಏಕೆ ಗೊತ್ತೆ? ನಿಮ್ಮ ತಂಡದ ಅತ್ಯುತ್ತಮ ಸದಸ್ಯನನ್ನು ಗುರುತಿಸಲು ಇಲ್ಲವೆ ನಿಮ್ಮ ಕಂಪನಿಯ ಸಾಮರ್ಥ್ಯ ಅಳೆಯಲು ಈ ತಪ್ಪುಗಳಿಂದ ಮಾತ್ರ ಸಾಧ್ಯ. ವೈಪಲ್ಯ ಹಿಂದಿಕ್ಕಿ ಮುಂದುವರಿಯುವ ಫ್ರೀವೇ ಮತ್ತು ಹೈಸ್ಪೀಡ್ ಬೈಕ್ ನಿಮ್ಮ ಮುಂದಿದೆ – ಆಯ್ಕೆ ನಿಮ್ಮದು!
ಸುರೇಶ ಬಾಲಚಂದ್ರನ್
Facebook ಕಾಮೆಂಟ್ಸ್