ಸ್ವಲ್ಪ ಹೊತ್ತು ಬಿಡಿ
ವಾದ ವಿವಾದ, ಚರ್ಚೆ
ಹೋಗಿದ್ದು ಸರಿ ತಪ್ಪು ಜಿಜ್ಞಾಸೆ
ಹೆತ್ತವರದಿಲ್ಲವೇ ಹಕ್ಕು ?
ಮಕ್ಕಳ ಒತ್ತಡ ಸರಿಯಲ್ಲ ಇತ್ಯಾದಿ..
ಅರೆ ! ನೋಡಿದಿರಾ ಇಲ್ಲಿ ?
ಹದಿಮೂರಕ್ಕೊಂದು ಅದ್ಭುತ
ಜೀವನಾನುಭವ ಹೃದ್ಗತ !
ಎಷ್ಟಿತ್ತೊ ಹೊರಟ ರೋಷ
ಹೋರಾಟ ದ್ವಂದ್ವ ಸಿಟ್ಟಿನ ರಟ್ಟೆ..
ಏಕಾಂಗಿ ಭಂಢ ಧೈರ್ಯ
ಯಾವುದೊ ಗಮ್ಯ ನಿರ್ಧಾರ
ಎಲ್ಲಿಂದಲೊ ತಂದ ಮೂಲ ಧನ
ಮತ್ತೆ ಸಾಗುವ ಹಾದಿ ಸಾರಿಗೆ
ನಡೆದೊಬ್ಬಳೆ ಬಿಟ್ಟೆಲ್ಲ ಗಣಿಸದೆ..
ಬುದ್ಧನಂತಲ್ಲದ ಬುದ್ಧ ಸಂತ
ಸಂತೆಯೊಳಗೆತ್ತಲೋ ನಡೆದು
ದಾರಿಯುದ್ದಕೂ ಎಷ್ಟಿತ್ತೊ ಭೋಧಿ ?
ಇಳಿದುನ್ಮೇಷ ಭೀತಿಯೇನೋ ಕಾಡಿ
ಜ್ಞಾನೋದಯವಾಗುವ ಹೊತ್ತಿಗೆ..
ಮತ್ತೆ ಮರಳಿತ್ತು ಹಕ್ಕಿ ಗೂಡಿಗೆ
ತನ್ನೆದೆಯ ಒಲವಿನ ನಾಡಿಗೆ
ಅದಲ್ಲವೆ ವೈಯಕ್ತಿಕ ವಿಜಯ ?
ತನ್ನೆ ಸಂಭಾಳಿಸಿಕೊಂಡು ಬಂದ ಪ್ರಜ್ಞೆ
ಭಾವ ಬಂಧ ಕಟ್ಟಿ ತಂದ ಹೆಡೆಮುರಿ..
ಇನ್ನವಳು ಗೆಲ್ಲುವ ಕುದುರೆ
ಎದುರಾಗಿದ್ದೆಲ್ಲ ಏದುಸಿರ ಬಿಡದೆ
ನೋಡಬಲ್ಲ ಸಮಚಿತ್ತದೊಂದು
ನವಿಲಗರಿ ತಲೆಗೇರಿದನುಭವ
– ನೀವಚ್ಚರಿ ಕಣ್ಣರಳಿಸಿ ನೋಡಿದರೆ ! ||
– ನಾಗೇಶ ಮೈಸೂರು
Facebook ಕಾಮೆಂಟ್ಸ್