ಧೀರ್ಘ ನಿಟ್ಟುಸಿರು.. ನೆಮ್ಮದಿಯ ಛಾಯೆ.. ನನಗೆ ಬೇಸರವಾಗಿದ್ದು ನಿಜವಾದರೂ, ” ಈಗ ನಾನು ಅಲ್ಲಿಲ್ಲ…” ಅಂದಾಗ ನಮ್ಮವರಿಗೆ, ನೆಂಟರಿಷ್ಟರಿಗೆ ಖುಷಿಯಾದದ್ದು ಅಷ್ಟಿಷ್ಟಲ್ಲ.. ನೆಮ್ಮದಿಯ ನಿಟ್ಟುಸಿರು ಬಿಟ್ಟವರೇ ಜಾಸ್ತಿ.. ಹಾಗಾದರೆ ನಾನು ಹೋಗುತ್ತಿದ್ದ ಹಾದಿ ಸರಿಯಾಗಿರಲಿಲ್ಲವೇ..? ನಾನಾಗೇ ವಾಪಾಸು ಬರದೇ ಇದ್ದಿದ್ದರೆ ಮುಂದೆ ಅಪಾಯ ಬಂದೊದಗುತ್ತಿತ್ತೆ..? ಅವರೆಲ್ಲ ಅಷ್ಟು ಭಯ ಪಟ್ಟಿದ್ದರೂ ಯಾಕೆ ಒಬ್ಬರೂ ಕೂತು ಮಾತನಾಡಲಿಲ್ಲ ನನ್ನ ಜೊತೆ..? ಈಗ ಒಬ್ಬೊಬ್ಬರಾಗಿ ನಾವೇ ಹೇಳಬೇಕೆಂದಿದ್ದೆವು ಎಂದು ಹೇಳುತ್ತಿರುವರಲ್ಲ..? ಹಾಗಾದರೆ, ಅನಾಹುತ ಆಗುವ ಮೊದಲೇ ಎಚ್ಚೆತ್ತು ಕೊಂಡಿದ್ದು ಒಳ್ಳೆಯದೇ ಆಯ್ತಲ್ಲವೇ..
ನಿಜ. ಎಫ್.ಬಿ. “ಮುಖವೇ ತೋರಿಸದಿದ್ದರೂ ನಾವಿದ್ದೇವೆ ನಿಮ್ಮಜೊತೆ ಎಂದು ಒತ್ತೊತ್ತಿಗೆ ಬಂದು ನಮ್ಮ ಕತೆಯನ್ನೆಲ್ಲಾ ಕೇಳಿ ಸಮಾಧಾನ ಮಾಡುವ ನೆಪದಲ್ಲಿ ಅದರಿಂದ ನನಗೇನು ಲಾಭ ? ಇದೆ ಎಂದು ಯೋಚಿಸುವವರೇ ಜಾಸ್ತಿಯಾಗಿರುವ ಸಾಮಾಜಿಕ ಜಾಲತಾಣ ಮುಖಹೊತ್ತಿಗೆ ಯಾನೆ ಫೇಸ್ಬುಕ್”.. ಹತ್ತು ವರುಷಗಳ ಕಾಲ ಒಟ್ಟಿಗೆ ಓದಿದ ಸ್ನೇಹಿತರಾಗಲಿ ಡಿಗ್ರಿಯಲ್ಲಿ ಮೂರು ವರುಷ ಒಟ್ಟಿಗೆ ಓದಿದವರಾಗಲಿ ಕಾಲೇಜು ಕಂಪೌಂಡ್ ಬಿಟ್ಟ ಕೂಡಲೇ ಪರಿಚಯವೇ ಇಲ್ಲದ ಹಾಗೆ ವರ್ತಿಸುವುದು ಅಭ್ಯಾಸ ಮಾಡಿಕೊಂಡಿರುತ್ತಾರೆ… ನಮ್ಮ ಬಗ್ಗೆಯಾಗಲಿ ನಮ್ಮ ಅಭಿರುಚಿ , ಆಸಕ್ತಿ, ಎಲ್ಲವೂ ಅರ್ಥೈಸಿಕೊಂಡಿದ್ದವರು ಕೊನೆಗೆ ಜನುಮದಿನಕ್ಕೆ ಒಂದು ಹಾರೈಕೆ ಕೂಡ ಮಾಡಲು ಬರುವುದಿಲ್ಲ.. ಅವರವರ ಜೀವನ ಅವರವರಿಗೆ ಎಂದು ನಾವು ಕೂಡ ಸುಮ್ಮನಾಗಿ ಬಿಡುತ್ತೇವೆ… ಅಂತದ್ದರಲ್ಲಿ ಮುಖವೇ ತೋರಿಸದವರು, ಹೆಸರೇ ಇಲ್ಲದವರು, ಒಮ್ಮೆಯೂ ಭೇಟಿಯಾಗದವರ ಹೇಗೆ ನಂಬಲು ಸಾಧ್ಯಾ.!? ಅವರ ಜೊತೆ ಎಲ್ಲವನ್ನೂ ಹಂಚಿಕೊಳ್ಳಲು ಮನ ಬಯಸುವುದಾದರೂ ಯಾಕೆ?! ನಮ್ಮವರು ಎಂದು ಮನಸ್ಸು ಹಚ್ಚಿಕೊಳ್ಳುವುದಾದರೂ ಏಕೆ! ಜೀವನದ ಬೀದಿಯಲಿ ಸಿಕ್ಕವರನ್ನು ನಿಲ್ಲಿಸಿ ಮಾತನಾಡುವುದಾದರೂ ಯಾಕೆ?! ಅನುಮಾನ ಪಡಬಾರದು. ನಿಜ. ಹಾಗಂತ ಕುರುಡರ ಹಾಗೆ ಎಲ್ಲರನ್ನೂ ನಂಬಲೂ ಬಾರದು.. ನಮ್ಮ ವೈಯಕ್ತಿಕ ವಿಷಯವನ್ನೇಲ್ಲ ಹಂಚಿಕೊಳ್ಳಬಾರದು.. ಬೇಕನಿಸಿದಾಗೆಲ್ಲ ಸೆಲ್ಫೀ ತೆಗೆತೆಗೆದು ಹಾಕಬಾರದು.. ಮನಸ್ಸಿಗೆ ಲಗಾಮು ಹಾಕಿದಷ್ಟು, ಬುದ್ಧಿ ಹಿಡಿತದಲ್ಲಿದ್ದಷ್ಟು ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯದು.. ಹದ್ದುಗಳಂತೆ ಗಂಡಸರು ಚೆಂದದ ಹುಡುಗಿಯರನ್ನ ತಿನ್ನಲು ಕಾಯುತ್ತಾ ಇರುತ್ತಾರೆ.. ಮೋಸದ ಬಲೆ ಹೆಣೆಯುವ ಜೇಡಗಳಿವೆ ಎಚ್ಚರಿಕೆ ಎಂದು ಆಗಾಗ ಮಾಧ್ಯಮಗಳಲ್ಲಿ ಬರುತ್ತಿರುತ್ತದೆ.. ಬೇರೇನಿಲ್ಲ, ಚಪಲ ತೀರಿಸಿಕೊಳ್ಳುವ ಮಾತನಾಡುವುದು, ಮೈ ತೋರಿಸಲು ಹೇಳುವುದು, ಪಾಪದವರಂತೆ ಮುಖವಾಡಹಾಕಿಕೊಂಡಿರುವುದು, ನಂಬಿಕಸ್ಥನಂತೆ, ಸಜ್ಜನರಂತೆ ವರ್ತಿಸುವುದು.. ನಮಗೆ ಏನು ಇಷ್ಟವೆಂದು ನಿಖರವಾಗಿ ಅರಿತುಕೊಂಡು ಅದರಂತೆ ತಮಗೂ ಅವೆಲ್ಲವೂ ಇಷ್ಟ ಎನ್ನುವಂತೆ ತೋರಿಸುವುದು.. ನೀವೇ ಅಂದ ನೀವೇ ಚಂದ ಎನ್ನುತ್ತಾ ಹೊಗಳುತ್ತಿರುವುದು.. ಅಬ್ಬಬ್ಬಾ ಡ್ರಾಮಾ ಕಂಪೆನಿಯಲ್ಲಿ ಕೂಡ ಈ ರೀತಿಯ ತರಬೇತಿ ಕೊಡರು ಎನ್ನಬಹುದು.. ಅಷ್ಟೆ ಅಲ್ಲ ಈಗೀಗ ಕನ್ನಡದ ಕಹಳೆ ಎಲ್ಲೆಂದರಲ್ಲಿ ಮೊಳಗುತ್ತಿದೆ… ಯುವ ಲೇಖಕರೂ ಇನ್ನಿಲ್ಲದಂತೆ ಹುಟ್ಟಿಕೊಂಡಿದ್ದಾರೆ.. ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದವರೂ ಕವಿಗಳೆ ಇಲ್ಲಿ.. ಎಲ್ಲರೂ ಬರೆಯುವವರೇ.. ಎಲ್ಲರೂ ಹೊಗಳುಭಟ್ಟರೆ.. ಅಟ್ಟಕ್ಕೇರಿಸುವಲ್ಲಿ ತಾಮುಂದು ನಾಮುಂದು.. ಒಂದು ಮೆಚ್ಚುಗೆ, ಒಂದು ಕಮೆಂಟ್ ಮಾಡಿದರೂ ಆ ದಿನವಿಡೀ ಮನಸ್ಸು ಉಬ್ಬಿಕೊಂಡಿರುತ್ತದೆ.. ಹುಡುಗಿಯರಿಗೋ ಅಷ್ಟೇ ಸಾಕು.. ಮೈಮರೆತು ಬಿಡುತ್ತಾರೆ.. ಆಗಲೇ ಗಂಡು ಜೀವಿ ನಿಧಾನಕ್ಕೆ ಕತ್ತಲೆ ಕೋಣೆಯೊಳಗೆ ನುಸುಳಿ(ಇಂಬಾಕ್ಸ್) ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ವ್ಯಕ್ತಪಡಿಸುತ್ತಾರೆ.. ನಾವು ಬರೆಯುವುದರ ಮೂಲಕವೇ “ನಾವು ಹೇಗೆ? ನಮ್ಮ ಸುಖ ದುಃಖ” ಎಲ್ಲವನ್ನೂ ಅರ್ಥೈಸಿಕೊಳ್ಳುತ್ತಾರೆ.. ಅದಕ್ಕೆ ಬಿಟ್ಟಿ ಸಲಹೆ ಕೂಡ ಕೊಟ್ಟು ಸಮಾಧಾನ ಮಾಡುವ ಹಾಗೆ ವರ್ತಿಸಿ ಮನದಲ್ಲಿ ತಳಕಟ್ಟು ಕಟ್ಟಲು ನಿರತರಾಗುತ್ತಾರೆ.. ಅದನ್ನ ನಂಬಿದಿರಿ ಎನ್ನಿ ನೀವು ಮೋಸ ಹೋದಂತೆ.. ಸಮಾಜಮುಖಿಯಾಗಿ ಬರೆದ ಮಾತ್ರಕೆ ಸಮಾಜವಾಗಲಿ ಇಲ್ಲಿರುವ ಜನರಾಗಲಿ ಬದಲಾಗುವುದಿಲ್ಲ.. ನಾಲ್ಕು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಅಷ್ಟೆ.. ನೀವೊಬ್ಬ ಸಹೃದಯೀ ಎಂದು ತಿಳಿಯುತ್ತದೆ.. ನಾವೆಲ್ಲರೂ ಒಂದೇ ಎಂದು ಹಿಂದು ಮುಸಲ್ಮಾನರನ್ನೆಲ್ಲ ಒಟ್ಟಿಗೆ ಗುಡ್ಡೆಹಾಕಿದರೆ ನಮ್ಮನ್ನು ಬಹಳದಿನದಿಂದ ಇಷ್ಟ ಪಟ್ಟವರು ದೂರ ಸರಿಯುತ್ತಾರೆ ಎಂದು ನಾನೇ ಕಣ್ಣಾರೆ ನೋಡಿದೆ.. ಕಾರಣ ಜನರ ಮನಸ್ಥಿತಿ ಇನ್ನೂ ಬದಲಾಗಲಿಲ್ಲ..ಅವರು ಒಪ್ಪುವುದೂ ಇಲ್ಲ..
ಏನಿದು ಬರೀ ಧನಾತ್ಮಕವಾಗಿ ಮಾತನಾಡುತ್ತಿದ್ದಾರೆ? ಎಂದೆನಿಸಬೇಡಿ.. ಹೆಣ್ಣುಮಕ್ಕಳಿಗೆ ಅಷ್ಟಾಗಿ ಸೇಫಲ್ಲ , ರಕ್ಷಣೆ ಇಲ್ಲ ಅನ್ನುತ್ತಿರುವುದು.. ಓ ನಿಮ್ಮ ಜೀವನದಲ್ಲಿ ಹೀಗೆಲ್ಲ ನಡೆಯಿತಾ?! ಎಂದು ತಲೆಗೆ ಹುಳಬಿಟ್ಟುಕೊಂಡು ರಾಗಎಳೆಯಬೇಡಿ.. ನಮ್ಮ ಸಮೂಹದಲ್ಲಿ ಕುಳಿತು ಮಾತನಾಡಿದಾಗ ಕಲೆಹಾಕಿದ ಮಾಹಿತಿ ಇದು..
ಆದರೆ ಇಲ್ಲಿ ಹಾಕಿದ ಪೋಸ್ಟ್ ಓದಿ ಮೆಚ್ಚಿ “ಕಿರುಚಿತ್ರಕ್ಕೆ” ( ShortFilms) ಕಥೆ ಆಯ್ಕೆಯಾಗಿರುವುದು, ಹಾಡು ಬರೆದುಕೊಟ್ಟವರೂ (Lyrics Writers) ಇದ್ದಾರೆ.. ಸಿನೆಮಾ ಮಾಡಿದವರು, ನಟರಾಗಿ ,ನಟಿಯಾಗಿ ಆಯ್ಕೆ ಯಾದವರೂ ಇದ್ದಾರೆ.. ಎಲ್ಲರಿಗೂ ಅದೃಷ್ಟದೇವತೆ ಕೈಹಿಡಿಯಬೇಕೆಂದೇನಿಲ್ಲ ತಾನೆ.. ಸಿನೆಮಾಗೆ ಆಯ್ಕೆ ಮಾಡುತ್ತೇವೆ , ನಿಮಗೊಂದು ಚಾನ್ಸ್ ಕೊಡುತ್ತೇವೆ ಎಂದು ಮೋಸ ಮಾಡಿದವರು, ಹಣ ಪೇರಿಸುವವರೂ ಇದ್ದಾರೆ.. ಆದರೂ ಒಳ್ಳೊಳ್ಳೆಯ ಸ್ನೇಹಿತರನ್ನು ಒಂದೇ ರೀತಿಯ ಅಭಿರುಚಿಯುಳ್ಳ ಗೆಳೆಯರನ್ನು ಪರಿಚಯಿಸಿಕೊಡುತ್ತದೆ.. ಒಂದಷ್ಟು ಯುವಕರೇ ತಂಡ ಕಟ್ಟಿಕೊಂಡು ಸಮಾಜ ಕಲ್ಯಾಣ ಕಾರ್ಯಕ್ರಮ ಹಾಕಿಕೊಂಡಿದ್ದರು.. ಅವರೆಲ್ಲರೂ ಒಂದಾದದ್ದು ,ಭೇಟಿಯಾದದ್ದು ಈ ಮುಖಹೊತ್ತಿಗೆಯಲ್ಲಿಯೇ ಎಂದು ಹೇಳಬಹುದು..
ಆದರೆ ಕೊನೆಯಲಿ ಒಂದು ಮಾತು : ಮುಗ್ಧ ಜನರು ಎಲ್ಲಿ ತನಕ ಇರುವರೋ ಅಲ್ಲಿ ತನಕ ಮೋಸ ಮಾಡುವವರು ಇರುತ್ತಾರೆ… ಅದಕ್ಕೆ ಈ ಸಾಮಾಜಿಕ ಜಾಲತಾಣವಾದ ಮುಖಹೊತ್ತಿಗೆಯೇ ಬೇಕೆಂದಿಲ್ಲ. ನಮ್ಮ ಜೀವನದ ಹಾದಿಯಲ್ಲಿ ನಡೆಯುತ್ತಿರುವಾಗ ಸುತ್ತಮುತ್ತಲೂ ಕಣ್ಣಾಡಿಸಿದರೂ ಸಾಕು..
ಸಿಂಧು ಭಾರ್ಗವ್..
ಬೆಂಗಳೂರು
Facebook ಕಾಮೆಂಟ್ಸ್