X

ಅಣ್ಣಾ ಮಲೈ ನಿಜಕ್ಕೂ ಒಬ್ಬ ಸಿಂಗಂ..!

ಅಣ್ಣಾಮಲೈ ಅವರು ಉಡುಪಿಯಲ್ಲಿ ಪೋಲಿಸ್ ವರಿಷ್ಟಾಧಿಕಾರಿಯಾಗಿದ್ದಾಗಲೇ ತನ್ನ ಕಾರ್ಯ ಶೈಲಿಯಿಂದ ರಾಜ್ಯಾದ್ಯಂತ ಜನಪ್ರಿಯರಾಗಿದ್ದರು. ಕೊಲೆ, ಅತ್ಯಾಚಾರ ಆರೋಪಿಗಳನ್ನು ಸ್ವತಃ ಮುತುವರ್ಜಿ ವಹಿಸಿ ತಕ್ಷಣವೇ ಅವರನ್ನು ಬಂಧನವಾಗುವಂತೆ ಮಾಡುತ್ತಿದ್ದರಿಂದ, ಅಕ್ರಮ ಗೋಸಾಗಾಟ, ಮಟ್ಕಾ ದಂಧೆಕೋರರನ್ನೆಲ್ಲಾ ಎಗ್ಗಿಲ್ಲದೆ ಮಟ್ಟ ಹಾಕಿದ್ದರಿಂದ “ಪೋಲೀಸ್ ಆಫೀಸರ್ ಎಂದರೆ ಹೀಗಿರಬೇಕು” ಎಂದು ಜನ ಆಡಿಕೊಳ್ಳುವಂತೆ ಮಾಡಿದ್ದರು. ಇತ್ತೀಚೆಗೆ ಅವರ ವರ್ಗಾವಣೆಯಾದಾಗ ಉಡುಪಿಗೆ ಉಡುಪಿಯೇ ಮರುಗಿತ್ತು. ಕೆಲವೊಂದೆಡೆ ಪ್ರತಿಭಟನೆಯೂ ನಡೆದಿತ್ತು. ಆದರೆ ಐಪಿಸ್ ಓದಿ ಬಂದ ಅಧಿಕಾರಿಗೆ ಜಿಲ್ಲೆ ಯಾವುದಾದರೇನು? ಮಾಡಬೇಕಾದ ಕೆಲಸ ಒಂದೇ! ಉಡುಪಿಯಿಂದ ಚಿಕ್ಕಮಗಳೂರಿಗೆ ವರ್ಗಾವಣೆಗೊಂಡು ಈಗ ಅಲ್ಲಿಯೂ ತನ್ನ ವೀರಾವೇಷದಿಂದ ಸುದ್ದಿಯಾಗುತ್ತಿರುವ ಅಣ್ಣಾಮಲೈ ಅವರ ಕಾರರ್ಯ ಶೈಲಿಗೆ ಮತ್ತೆ ಕೆಲವು ಪುರಾವೆಗಳು ಸಿಕ್ಕಿವೆ.

ಪ್ರಜಾವಾಣಿ ಪತ್ರಿಕೆ ವರದಿ ಮಾಡಿರುವಂತೆ, ಕೆ.ಅಣ್ಣಾ ಮಲೈ ಕೇವಲ 20 ದಿನಗಳು ಕಳೆಯುವುದರೊಳಗೆ ಜಿಲ್ಲೆಯ ಜನರಲ್ಲಿ ಅಕ್ಷರಶಃ ಸಂಚಲನ ಮೂಡಿಸಿದ್ದಾರೆ. ಕರ್ತವ್ಯ ಮರೆತು ಕೈಕಟ್ಟಿ ಕುಳಿತ್ತಿದ್ದ ಸಿಬ್ಬಂದಿಗೂ ಚುರುಕು ಮುಟ್ಟಿಸಿದ್ದಾರೆ. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರಿಗೂ ಬಿಸಿ ಮುಟ್ಟಿಸುತ್ತಿದ್ದಾರೆ.

ಅಪರಾಧ ಚಟುವಟಿಕೆ ನಿಯಂತ್ರಿಸಲು ಆಯಾ ವೃತ್ತ, ಠಾಣೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಗಡುವು ನೀಡಿದರು.‘ವಾರದ ನಂತರ ತಾನೇ ಮಾರುವೇಷದಲ್ಲಿ ಕಾರ್ಯಾಚರಣೆಗೆ ಇಳಿಯುತ್ತೇನೆ, ಅಪರಾಧ ಚಟುವಟಿಕೆಗಳು ಕಂಡುಬಂದರೆ ಆ ವ್ಯಾಪ್ತಿಯ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ತಕ್ಕ ಬೆಲೆ ತೆರಬೇಕಾಗುತ್ತದೆ’ ಎನ್ನುವ ಪರೋಕ್ಷ ಎಚ್ಚರಿಕೆ ರವಾನಿಸಿದರು.ಇಷ್ಟು ಮಾಡಿ ಅವರು ಕಚೇರಿಯಲ್ಲಿ ಸುಮ್ಮನೆ ಕುಳಿತುಕೊಂಡರಾ? ಇಲ್ಲ; ತಮ್ಮ ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗೆ ಸುಳಿವು ಕೊಡದೆ ನೇರ ಕಾರ್ಯಾಚರಣೆಗೆ ಇಳಿದಿದ್ದಾರೆ.

ಅಣ್ಣಾಮಲೈ ಅವರ ಕಾರ್ಯ ಶೈಲಿಯ ಕೆಲವು ಝಲಕ್ ಇಲ್ಲಿದೆ ನೋಡಿ:

ಹೆಲ್ಮೆಟ್‌ ಕಡ್ಡಾಯ:

ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವಾಗ ಸಮವಸ್ತ್ರ ಮತ್ತು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಲೇಬೇಕು. ಬೈಕ್‌ ಚಾಲನೆಗೂ ಪೊಲೀಸರಿಗೆ ಪ್ರತ್ಯೇಕ ಹೆಲ್ಮೆಟ್‌ ಕಡ್ಡಾಯ. ನಿಯಮ ಉಲ್ಲಂಘಿಸಿದರೆ ಸ್ಥಳದಲ್ಲೇ ಅಮಾನತು ಎನ್ನುವ ಖಡಕ್‌ ಎಚ್ಚರಿಕೆಯನ್ನು ಮೊದಲ ಪತ್ರಿಕಾಗೋಷ್ಠಿಯಲ್ಲಿ ರವಾನಿಸಿದರು. ಆ ಮೂಲಕ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದಂತೆ ಪರೋಕ್ಷವಾಗಿ ನಾಗರಿಕರಿಗೂ ಕಠಿಣ ಸಂದೇಶ ರವಾನಿಸಿದರು.ಈಗ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ತಲೆ ಮೇಲೂ ಇಲಾಖೆ ಹೆಲ್ಮೆಟ್‌ ಕಾಣಿಸುತ್ತಿವೆ. ರಸ್ತೆಯಲ್ಲಿ ಬೈಕ್‌ ಓಡಿಸುವ ಶೇ 95ಕ್ಕೂ ಹೆಚ್ಚು ಜನರು ಹೆಲ್ಮೆಟ್‌ ಧರಿಸುವುದು ಕಾಣಿಸುತ್ತಿದೆ. ಬಾಕಿ ಶೇ 5 ಜನರು ದಂಡ ತೆತ್ತ ಮೇಲೆಯೇ ಪಾಠ ಕಲಿಯಬಹುದು!

ಮಟ್ಕಾ ಅಡ್ಡೆ ಮೇಲೆ ದಾಳಿ:

ಒಂದು ದಿನ ಸಂಜೆ ಅಣ್ಣಾ ಮಲೈ ಹರಿದ ಬಟ್ಟೆ ಧರಿಸಿ, ಸೈಕಲ್ಲೇರಿ ಕಾರ್ಮಿಕನ ಸೋಗಿನಲ್ಲಿ ಕೈಮರದ ಕಡೆಗೆ ಹೋದರು. ಅಲ್ಲಿ ಮಟ್ಕಾ ಆಡಿಸುವ ವ್ಯಕ್ತಿ ಪತ್ತೆ ಹಚ್ಚಿ ‘ನನಗೆ 20 ಮಟ್ಕಾ ಬರಿಯಪ್ಪ’ ಅಂದ್ರು.ಮಟ್ಕಾ ಆಡಿಸುವಾತ ನಮ್ಮತ್ರ  20 ಆಟವಿಲ್ಲ, ಏನಿದ್ದರೂ  50, 100ರ ಮೇಲೆ ಎಂದ. ಆತನ ಕೊರಳಪಟ್ಟಿ ಹಿಡಿದು ಠಾಣೆಗೆ ಎಳೆತಂದು ಕೇಸು ಜಡಿದರು. ಈಗ ಏನಿಲ್ಲವೆಂದರೂ ದಿನಕ್ಕೆ ಸರಾಸರಿ 2 ಮಟ್ಕಾ ಪ್ರಕರಣಗಳು ಪತ್ತೆಯಾಗುತ್ತಿವೆ.

ಬೀಡಿ, ಸಿಗರೇಟ್‌, ಗುಟ್ಕಾ ಮಾರಾಟಕ್ಕೆ ದಂಡ:

ಒಂದು ದಿನ ಬೆಳ್ಳಂಬೆಳಿಗ್ಗೆ ಎದ್ದು ಸರಿಯಾಗಿ ಮುಖವನ್ನು ತೊಳೆಯದೆ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ‘ಸಿವಿಲ್‌ ಡ್ರೆಸ್‌’ನಲ್ಲಿ ಗವನಹಳ್ಳಿ ಕಡೆಗೆ ಹೊರಟರು. ಗವನಹಳ್ಳಿಯ ಒಂದು ಪ್ರಾವಿಜನ್‌ ಅಂಗಡಿ ಮುಂದೆ ನಿಂತು ಒಂದು ಪ್ಯಾಕು ಸಿಗರೇಟು, ಒಂದು ಕಟ್ಟು ಬೀಡಿ, ಒಂದು ಪ್ಯಾಕ್‌ ಗುಟ್ಕಾ ಖರೀದಿಸಿದರು. ಅಂಗಡಿ ಮಾಲೀಕನಿಗೆ  30 ಸಾವಿರ ದಂಡ ವಿಧಿಸಿ, ರಸೀದಿ ಕೈಗೆ ಇಟ್ಟಾಗಲೇ ಆತನಿಗೆ ಇವರು ಎಸ್‌ಪಿ ಅಣ್ಣಾ ಮಲೈ ಅಂತಹ ಗೊತ್ತಾಗಿದ್ದು. ‘ಸರ್‌ ದಂಡದ ಮೊತ್ತ ಕಡಿಮೆ ಮಾಡಿ’ ಎಂದು ಅಂಗಡಿಯಾತ ಗೋಗರೆದ. ‘ಇಂದೇ ಕಟ್ಟುವುದಾದರೆ ಬರಿ ₹30 ಸಾವಿರ. ನಾಳೆ, ನಾಡಿದ್ದು ಎನ್ನುವುದಾರೆ 1 ಲಕ್ಷ’ ಎನ್ನುವ ಎಚ್ಚರಿಕೆ ನೀಡಿದರು. ಅಂಗಡಿಯಾತ ಮರು ಮಾತನಾಡದೆ ದಂಡ ಕಟ್ಟಿದ. ಆತನಷ್ಟೆ ಅಲ್ಲ, ದಿನಸಿ ಅಂಗಡಿಗಳ ವರ್ತಕರು ಬೆಚ್ಚಿಬಿದ್ದಿದ್ದಾರೆ. ಇವರು ಸದ್ಯಕ್ಕೆ ಸಿಗರೇಟು ಮತ್ತು ತಂಬಾಕು ಮಾರುವ ದುಸ್ಸಾಹಸಕ್ಕೆ ಇಳಿಯಲಾರರು ಎನಿಸುತ್ತದೆ.

ಇಸ್ಪೀಟ್‌ ಕ್ಲಬ್‌ ಮೇಲೆ ದಾಳಿ–ಕಪಾಳ ಮೋಕ್ಷ:

ನಗರ ಸಮೀಪದ ಕ್ಲಬ್‌ ಮೇಲೆ ಒಂದು ದಿನ ಸಂಜೆ ಮಫ್ತಿಯಲ್ಲಿ ಭೇಟಿ ಕೊಟ್ಟ ಅವರು ಮೊದಲು ‘ಇಲ್ಲಿ ನಮ್ಮ ಇಲಾಖೆಯವರು ಯಾರಾದರೂ ಇದ್ದರೆ ತೋರಿಸಿ’ ಎಂದು ಕ್ಲಬ್‌ ಪರಿಚಾರಕರ ಕಿವಿಯಲ್ಲಿ ಪಿಸು ಮಾತಿನಲ್ಲಿ ಕೇಳಿದರು.

ಅಲ್ಲಿದ್ದ ಕೆಲವರು ಪೊಲೀಸ್‌ ಪೊಲೀಸ್‌… ಎಂದು ಕೂಗಿದರು, ಯಾರೂ ಕೂಡ ಎದ್ದು ಓಡಲಿಲ್ಲ. ಆಡುತ್ತಿದ್ದವರಲ್ಲಿ ಒಬ್ಬ ‘ಪೊಲೀಸರು ಬಂದ್ರೆ ಏನ್‌ ಮಾಡ್ತಾರೆ, ಬರಲಿ ಬಿಡು ಗುರು ಏನ್‌ ಒಂದು ಪೆಟ್ಟಿ ಕೇಸು ತಾನೆ, ಹೋಗ್ತಾರೆ ಬಿಡು’ ಅಂದ.

ಆತನನ್ನು ಗುರುತಿಸಿ ಅಣ್ಣಾ ಮಲೈ ತಮ್ಮ ಬಳಿಗೆ ಕರೆದರು. ಆ ವ್ಯಕ್ತಿ ಸಾರ್‌ ನಾನು ‘….. ಪಕ್ಷದ ಲೀಡರ್‌, …….. ಅವರ ಕಡೆಯವನು’ ಎಂದು ಮಾಜಿ ಜನಪ್ರತಿನಿಧಿಯೊಬ್ಬರ ಹೆಸರು ಹೇಳಿ ಪರಿಚಯಿಸಿಕೊಳ್ಳಲು ಮುಂದಾದ. ಆತನ ಕೆನ್ನೆಗೆ ಪಟೀರ್‌ ಎಂದು ಏಟು ಕೊಟ್ಟರು. ಜೂಜಿನಲ್ಲಿ ಸೆರೆ ಸಿಕ್ಕಿದ 32 ಮಂದಿ ಜತೆಗೆ ಕಪಾಳ ಮೋಕ್ಷ ಮಾಡಿಸಿಕೊಂಡಾತನನ್ನು ಪೊಲೀಸ್‌ ವಾಹನಕ್ಕೆ ಹತ್ತಿಸಿದರು. ಇಸ್ಪೀಟ್‌ ಆಡುವಾಗ ‘ರೆಡ್‌ ಹ್ಯಾಂಡ್‌’ ಆಗಿ ಸಿಕ್ಕಿಬಿದ್ದು ತಮ್ಮ ಕೈಯಿಂದಲೇ ನುಣಿಚಿಕೊಂಡು ಪರಾರಿಯಾದ ಮೂವರು ಕಾನ್‌ಸ್ಟೆಬಲ್‌ಗಳನ್ನು ಸ್ಥಳದಲ್ಲೇ ಅಮಾನತುಗೊಳಿಸಿದರು.

ಸಿಬ್ಬಂದಿ ಸೇವಾನಿಷ್ಠೆ ಪರೀಕ್ಷೆ:

ಅಣ್ಣಾ ಮಲೈ ಅವರಿಗೆ ತಮ್ಮ ಇಲಾಖೆ ಸಿಬ್ಬಂದಿಯ ಸೇವಾನಿಷ್ಠೆ ಪರಿಶೀಲಿಸುವ ಮನಸ್ಸಾಗಿ, ಒಂದು ದಿನ ರಾತ್ರಿ 2.30ರಿಂದ 3 ಗಂಟೆ ಸುಮಾರಿಗೆ ‘ನೈಟ್‌ ಡ್ರೆಸ್‌’ನಲ್ಲಿ ಸೈಕಲ್ಲೇರಿ ರಾಸ್ತಿ ಗಸ್ತಿನಲ್ಲಿದ್ದ ಬೀಟ್‌ ಪೊಲೀಸರನ್ನು ಹುಡುಕುತ್ತಾ ಹೊರಟರು.ಎಂ.ಜಿ.ರಸ್ತೆಯ ಅಂಗಡಿಯೊಂದರ ಬಳಿ ಇಬ್ಬರು ಕಾನ್‌ಸ್ಟೆಬಲ್‌ಗಳು ಟೋಪಿ, ಲಾಠಿಗಳನ್ನು ದಿಂಬಿನ ಬಳಿ ಇಟ್ಟುಕೊಂಡು ಅಂಗಡಿ ಸೂರಿನಡಿಯೇ ಗಾಢ ನಿದ್ದೆಗೆ ಜಾರಿದ್ದರು. ಅಣ್ಣಾ ಮಲೈ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನಿದ್ರೆಯಿಂದ ಎಚ್ಚರಗೊಳಿಸಲಿಲ್ಲ.ಟೋಪಿ ಮತ್ತು ಲಾಠಿ ಎತ್ತಿಕೊಂಡು ಬಂದರು. ಬೆಳಿಗ್ಗೆ ಇಬ್ಬರನ್ನು ಕಚೇರಿಗೆ ಕರೆಸಿ ‘ಎಲ್ರಪ್ಪಾ ನಿಮ್ಮ ಟೋಪಿ ಮತ್ತು ಲಾಠಿ’ ಎಂದು ಕೇಳಿದರು. ಪೆಚ್ಚುಮೋರೆಯಲ್ಲಿ ನಿಂತಿದ್ದ ಸಿಬ್ಬಂದಿಗೆ ರಾತ್ರಿ ತಪ್ಪಿನ ಅರಿವಾಗಿತ್ತು.

ಮಾನವೀಯ ಮುಖ:

ಒಂದು ದಿನ ಮಧ್ಯಾಹ್ನ ಅವರ ಕಚೇರಿಗೆ ಏಳೆಂಟು ತಿಂಗಳ ತುಂಬು ಗರ್ಭಿಣಿ ತಮ್ಮ ಪೋಷಕರೊಂದಿಗೆ ಸಮಸ್ಯೆ ಹೊತ್ತು ಬಂದರು. ‘ಸರ್‌ ನನ್ನ ಅತ್ತೆ, ಮಾವ, ನಾದಿನಿ ಕಿರುಕುಳ ಕೊಡುತ್ತಿದ್ದಾರೆ. ಹಲ್ಲೆ ಮಾಡಿ, ಗಂಡನ ಮನೆಯಿಂದ ಹೊರ ಹಾಕಿದ್ದಾರೆ.ನನ್ನ ಗಂಡನ ಮೇಲೂ ಪೊಲೀಸ್‌ ದೂರು ಕೊಟ್ಟಿದ್ದಾರೆ. ನನಗೆ ರಕ್ಷಣೆ ಬೇಕು. ನಾನು ಎಷ್ಟು ದಿನ ತವರು ಮನೆಯಲ್ಲಿರಲಿ, ಗಂಡನ ಮನೆ ಸೇರಬೇಕು…..’ ಎಂದು ಗೋಳು ತೋಡಿಕೊಂಡರು.ಆ ತುಂಬು ಗರ್ಭಿಣಿಯ ಸಮಸ್ಯೆ ಆಲಿಸಿದ ಅಣ್ಣಾ ಮಲೈ ‘ನೋಡಿ ಅಮ್ಮಾ ನಿಮಗೆ ಒಬ್ಬ ಅಣ್ಣನಾಗಿ ಹೇಳ್ತೇನೆ, ನೀವು ಈಗ ಆ ಮನೆಗೆ ಹೋಗುವುದು ಬೇಡ. ಅಲ್ಲಿಗೆ ಹೋದರೆ ಕುಡಿಯುವ ನೀರು, ತಿನ್ನುವ ಆಹಾರ ಹೀಗೆ ಪ್ರತಿಯೊಂದನ್ನು ಹೋರಾಟ ಮಾಡಿ ಪಡೆಯಬೇಕಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಯಾಕೆ ಇಲ್ಲದ ಒತ್ತಡ ತಂದುಕೊಳ್ತೀರಿ, ಎರಡು ಜೀವದ ಪ್ರಶ್ನೆ ಅಮ್ಮಾ ಯೋಚನೆ ಮಾಡಿ. ಸುಸೂತ್ರ ಹೆರಿಗೆ ಆಗುವವರೆಗೆ ತಾಯಿ ಮನೆಯಲ್ಲಿರಿ. ಇನ್ನು 3 ತಿಂಗಳು ಬಿಟ್ಟು ಬನ್ನಿ, ನಾನು ನಿಮಗೆ ನ್ಯಾಯ ಕೊಡಿಸುತ್ತೇನೆ’ ಎನ್ನುವ ಸಾಂತ್ವನ ಹೇಳಿದರು. ಆ ಗರ್ಭಿಣಿಯ ಮುಖದಲ್ಲಿ ಮಂದಹಾಸ ಮತ್ತು ಕಣ್ಣುಗಳಲ್ಲಿ ಆನಂದಭಾಷ್ಪ ಒಟ್ಟೊಟ್ಟಿಗೆ ಕಾಣಿಸಿದವು.

ಇವೆಲ್ಲಾ ನಮಗೆ ಸಿಕ್ಕಿರುವ ಕೆಲವು ಝಲಕ್ಕುಗಳಷ್ಟೇ. ನಮ್ಮ ಕಣ್ಣಿಗೆ ಕಾಣದ ಅವೆಷ್ಟು ಉತ್ತಮ ಕೆಲಸಗಳನ್ನು ಅಣ್ಣಾಮಲೈ ಸರ್  ಮಾಡಿದ್ದಾರೋ ಗೊತ್ತಿಲ್ಲ. “ಸಿಂಗಂ” ಎನ್ನುವ ವ್ಯಕ್ತಿಯನ್ನು ನಾವು ಸಿನಿಮಾದಲ್ಲಷ್ಟೇ  ನೋಡಿದ್ದೆವು. ಈಗ ನಿಜ ಜೀವನದಲ್ಲಿ ಬಹಳ ಹತ್ತಿರದಿಂದ ನೋಡುತ್ತಿದ್ದೇವೆ. ಅಣ್ಣಾಮಲೈ, ರವಿ ಚೆನ್ನಣ್ಣನವರ್’ರಂತಹ  ಅಧಿಕಾರಿಗಳು ಪ್ರತೀ ಜಿಲ್ಲೆಗೂ ಸಿಕ್ಕಿದರೆ ಇಡೀ ದೇಶ ಅಪರಾಧಮುಕ್ತವಾಗುವ ದಿನಗಳು ಖಂಡಿತಾ ದೂರವಿಲ್ಲ. ಒಂದು ಕಡೆ ಪೋಲೀಸ್ ಇಲಾಖೆ ವಿಶ್ವಾಸ ಕಳೆದುಕೊಳ್ಳುತ್ತಿರುವಾಗಲೇ ಅಣ್ಣಾಮಲೈಯಂತವರು ಅದನ್ನು ದುಪ್ಪಟ್ಟು ಹೆಚ್ಚಿಸುತ್ತಾರೆಂದರೆ ಅಂತಹಾ  ಅಧಿಕಾರಿಗೆ ಒಂದು ಸೆಲ್ಯೂಟ್ ಹೊಡೆಯದಿರಲಾದೀತೇ? Hats Off Sir..!

(ಲೇಖನದಲ್ಲಿ ಪ್ರಸ್ತಾಪಿಸಿರುವ ಪೂರಕ ಉದಾಹರಣೆಗಳನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಸಂತೋಷ್ ಕುಮಾರ್ ಅವರು ಬರೆದಿರುವ ಲೇಖನದಿಂದ ಆಯ್ದುಕೊಳ್ಳಲಾಗಿದ್ದು, ಇಂತಹ ಉತ್ತಮ ವಿಷಯಗಳು ಎಲ್ಲರನ್ನೂ ತಲುಪಲಿ ಎನ್ನುವ ಉದ್ದೇಶದೊಂದಿಗೆ ರೀಡೂ ಕನ್ನಡದಲ್ಲಿ ಪ್ರಕಟಿಸಲಾಗಿದೆ)

Facebook ಕಾಮೆಂಟ್ಸ್

Readoo Staff: Tailored news content, just for you.
Related Post