ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೨
___________________________________
ಕೃತಿಮವೊಂ ಜಗವೆಲ್ಲ | ಸತ್ಯತೆಯದೆಲ್ಲಿಹುದೋ? |
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು ||
ಚತ್ರವಿ ಜಗವಿದರೊಳಾರ ಗುಣವೆಂತಹುದೊ !
ಯಾತ್ರಿಕನೆ ಜಾಗರಿರೊ – ಮಂಕುತಿಮ್ಮ ||
ತನ್ನೆಚ್ಚರದಲ್ಲಿ ತಾನು ಸದಾ ಜಾಗೃತನಾಗಿರಬೇಕೆಂದು ಸಾರುವ ಕವಿವಾಣಿ ಈ ಪದ್ಯದ ತಾತ್ಪರ್ಯ. ಈ ಕಲಿಯುಗದ ಜಗದಲ್ಲಿ ಎಲ್ಲವು ಕೃತಕ, ಕೃತಿಮ. ಎಲ್ಲರು ಒಂದಲ್ಲ ಒಂದು ರೀತಿಯ ವೇಷ ತೊಟ್ಟುಕೊಂಡು ನಟಿಸುವವರೆ ಆದ ಕಾರಣ ಯಾರ ನಿಜ ಸ್ವರೂಪ ಏನೆಂದು ಸುಲಭದಲ್ಲಿ ಗೊತ್ತಾಗುವುದಿಲ್ಲ. ತಮ್ಮ ಗುರಿ ಸಾಧನೆಗಾಗಿ ಯಾವ ಮಟ್ಟಕ್ಕೆ ಬೇಕಾದರು ಇಳಿಯುವ ಮಟ್ಟಕ್ಕೆ ಜನ ಮಾನಸಿಕವಾಗಿ ಸಿದ್ದರಿರುವಾಗ ಸತ್ಯ, ನ್ಯಾಯಗಳಿಗೆ ಬೆಲೆಯಾದರೂ ಎಲ್ಲಿ? ಅವು ಇರುವುದಾದರೂ ಎಲ್ಲಿ? ಅಷ್ಟೆಲ್ಲಾ ಏಕೆ – ಈ ಸೃಷ್ಟಿಯಲ್ಲಿ ಎಲ್ಲವನ್ನು ನಿರ್ಮಿಸಿದ ಆ ಸೃಷ್ಟಿಕರ್ತನೆ ಯಾರ ಕೈಗು ಸಿಗದಂತೆ ಎಲ್ಲೊ ಗುಪ್ತನಾಗಿ ಅಡಗಿಕೊಂಡುಬಿಟ್ಟಿದ್ದಾನೆ – ಆ ಹೊಡೆತಗಳನ್ನು ಸಹಿಸಲಾಗದ ಭೀತಿಯ ಸಲುವಾಗಿ. ಇನ್ನು ಪಾಮರರಾದ ನಮ್ಮಗಳ ಪಾಡೇನು?
ಜಗದಲ್ಲಿರುವವರು ಒಬ್ಬರೊ ಇಬ್ಬರೊ ಆಗಿದ್ದರೆ ಅವರನ್ನು ಅಧ್ಯಯನ ಮಾಡಿ, ಗುಣಾವಗುಣ, ಲೋಪದೋಷಗಳನ್ನೆಲ್ಲಾ ಪೂರ್ತಿಯಾಗಿ ಅರಿತು ನಂತರ ಅವರೊಡನಾಟ ಸೂಕ್ತವೆ, ಅಲ್ಲವೆ ಎಂದು ನಿರ್ಧರಿಸಬಹುದಿತ್ತೇನೊ? ಆದರೆ ಇಡೀ ಜಗವೆ ದೊಡ್ಡ ಚತ್ರದಂತೆ ಜನ ಜಂಗುಳಿಯಿಂದ ತುಂಬಿಹೋಗಿದೆ – ಗೊತ್ತಿದ್ದವರು, ಗೊತ್ತಿಲ್ಲದವರು ಎಲ್ಲರೂ ಸೇರಿಕೊಂಡು. ಅಂದಮೇಲೆ ಅಲ್ಲಿ ಅರಿಯುವುದನ್ನಾದರೂ ಯಾರನ್ನು? ನಂಬುವುದಾದರೂ ಯಾರನ್ನು? ಯಾರ ನಿಜವಾದ ಗುಣ ಹೀಗೇ ಎಂದು ಹೇಳುವುದಾದರೂ ಎಂತು? ಈ ಜೀವನ ಪಯಣದಲ್ಲಿ ಯಾತ್ರಿಕರಾಗಿ ಬಂದ ನಮಗೆ ಹಿಂದೆಯೂ ಗೊತ್ತಿಲ್ಲ, ಮುಂದೆಯೂ ಗೊತ್ತಿಲ್ಲ. ಯಾತ್ರೆಯಲ್ಲಿ ಹೋಗುತ್ತೋಗುತ್ತಲೆ ಅಷ್ಟಿಷ್ಟು ಅರಿತು, ಕಲಿತು ಮುನ್ನಡೆಯುವ ಪರಿಸ್ಥಿತಿ. ಈ ಗೊಂದಲ, ಗದ್ದಲದಲ್ಲಿ ನಮ್ಮೆಚ್ಚರಿಕೆಯಲ್ಲಿ ನಾವು ನಡೆಯುವುದು ಒಳಿತು – ಮೋಸ ಹೋಗದ ರೀತಿಯಲ್ಲಿ. ಸುಮ್ಮನೆ ಯಾರಾರನ್ನೊ ನಂಬಿ ಬದುಕು ಸಾಗಿಸಲಾಗದು ಎನ್ನುವ ಬುದ್ದಿಮಾತು ಹೇಳುತ್ತಿದ್ದಾನಿಲ್ಲಿ ಮಂಕುತಿಮ್ಮ.
ಸಾರಾಂಶದಲ್ಲಿ ಹೇಳುವುದಾದರೆ ಈ ಜಗದ ಸೃಷ್ಟಿಯ ಮೂಲ ಸ್ವರೂಪವೆ ಕೃತಿಮತೆ, ಮಿಥ್ಯತೆಗಳ ಮೂಲವಸ್ತುವನ್ನೊಳಗೊಂಡು, ತರುವಾಯ ಅದರ ಪ್ರಕಟರೂಪಕ್ಕೆ ದಂಗಾಗಿ, ಅದನ್ನು ಸೃಷ್ಟಿಸಿದ ಆ ಸೃಷ್ಟಿಕರ್ತನೇ ಬಯಲಿಗೆ ಬರದೆ ಅವಿತುಕೊಂಡಿರುವಂತೆ ಮಾಡಿಬಿಟ್ಟಿದೆ. ಇಂತದ್ದರಲ್ಲಿ ಹುಲು ಮಾನವರಾದ ನಮ್ಮ ಪಾಡ್ಯಾವ ಲೆಕ್ಕ? ಅವನಿಗಾದರೊ ಯಾರಾರ ಗುಣ ವಿಶೇಷಗಳೇನೆಂದು ಅರಿಯುವ ಸಾಮರ್ಥ್ಯವಾದರೂ ಇದ್ದೀತು. ಅದಾವುದೂ ಇಲ್ಲದ ನಾವು ಈ ಚತ್ರದ ದೊಂಬಿಯಂತಹ ಜಗದಲ್ಲಿ, ಯಾರನ್ನಾದರು ಸರಿ – ನಂಬಿ ಮುನ್ನಡೆವೆ ಎನ್ನಲಾದೀತೆ ? ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬಿ ಮೋಸಕ್ಕೊಳಗಾಗದೆ ಬಾಳ ಪಯಣದ ಹಾದಿಯಲ್ಲಿ ಎಚ್ಚರದಿಂದ ನಡೆಯೊ ಯಾತ್ರಿಕ ಎನ್ನುವ ಕಿವಿಮಾತು ಮಂಕುತಿಮ್ಮನ ನುಡಿಗಳಲ್ಲಿ ಅನುರಣಿತವಾಗಿದೆ.
ಈಗಿನ ಸಾಮಾಜಿಕ ತಾಣ, ಸಾರ್ವಜನಿಕ ಬದುಕು, ಸಭೆ ಸಮಾರಂಭಗಳು, ಸಿನಿಮಾ, ನಾಟಕ, ಸಾಹಿತ್ಯಗಳಲ್ಲಾಗುವ ಕೆಸರೆರಚಾಟ ದೊಂಬಿಯನ್ನು ಗಮನಿಸಿದರೆ ಈ ಮಾತುಗಳು ಇಂದಿಗೂ ಅಂದಿಗಿಂತ ಹೆಚ್ಚು ಪ್ರಸ್ತುತ ಎನ್ನುವುದು ಮಾತ್ರ ಕಾಲದ ವಿಪರ್ಯಾಸ, ವ್ಯಂಗ್ಯ.
Facebook ಕಾಮೆಂಟ್ಸ್