X

ಹಿಡಿಂಬೆ

ಸೋಕುತಿದೆ ತಂಗಾಳಿ ಹಿತವಾಗಿ
ಮಧುರ ನೆನಪುಗಳ ಹರವಿಡುತಾ
ಬಚ್ಚಿಟ್ಟ ಬಯಕೆಗಳ ಬಡಿದೆಬ್ಬಿಸುತಾ
ಜೀವಲಹರಿ ಮೂಡಿಸುತಾ

ವರುಷವರುಷಗಳೇ ಕಳೆದರೂ
ಹರುಷದ ಪರ್ವವದೊಂದೇ
ಅನುದಿನಾದನುಕ್ಷಣದನುಭವ
ಹಸಿರು ಉಸಿರಲೆಂದೆಂದೂ

ಹಿಡಿಂಬವನದ ರಕ್ಕಸಿ ಅಂದು
ಘಟೋತ್ಕಚನ ತಾಯಿಯಾಗಿ
ದಿನವೂ ಭೀಮಾನಾಗಮಾನಕೆ
ಪ್ರಾರ್ಥಿಸುವ ಪತಿವ್ರತೆಯಿಂದು

ನರಮಾಂಸದಾಸೆಗೆ ಹೋದೆನಲ್ಲಿ
ಪವಡಿಸಿತ್ತು ಪೂರ್ತಿ ಪರಿವಾರ
ಕಾಯುತಿದ್ದ ಆಜಾನುಬಾಹು ರಣಧೀರ
ತನ್ನ ವಿಶ್ರಾಂತಿಯ ಬದಿಗಿರಿಸಿ

ನರಮಾನವನ ಬಯಸಿ ನಿಂತೆ
ನೋಟದಲೇ ನನ್ನನಾರಿಸಿದವ
ಮೋಕ್ಷ ನೀಡಿದ ರಕ್ಕಸಿತನಕೆ
ಸ್ಫುರಿಸಿದ ಪ್ರೇಮಸುಧೆಯ

ಭೀಮ, ನಿನಗೂ ನೆನಪಿಹುದೆ
ನಸುಕಿನ ಬಾನು ಝರಿಯ ನಿನಾದ
ಪುಷ್ಪಗಳ ಮೈಮರೆವ ಗಂಧ
ಒಲವ ಕೂಡಿ ಘಟೋತ್ಕಚ

ಅರೇ , ಅವರೇ ಬರುತಿಹರೇ
ಮರುಭೂಮಿಯ ಮರೀಚಿಕೆಯಂತೆಯೇ
ಇಲ್ಲ, ಬರುತಿರುವರು ನನ್ನ ನೋಡಲು
ಸೌಖ್ಯವೇ ಸಖಿ ಎಂದು ಕೇಳಲು

ದಶಕಗಳುರುಳಿವೆ ಹುಸಿಕೋಪ ತೋರಿ
ರಮಿಸಲಿ ನಾನಾ ತರದಿ ನನ್ನ ನಗಿಸಿ
ಕೋಪದಿ ಹೊರತು ನಿಂತರೆ
ಇಲ್ಲ, ಭಕ್ತಿಯಲಿ ಆಧರಿಸುವೆ

ಅವನಂಶದವನೆಂಬೊಧಿಕಾರವೇ  ಸಾಕೇ
ಪಾಲಿಸದ ಪೋಷಿಸದ ಅಪ್ಪನಿಗೆ
ಕರೆದೊಯ್ಯುವರಂತೆ ಅವರೊಂದಿಗೆ
ಇನ್ನೆಲ್ಲಿಗೆ? ಕುರುಕ್ಷೇತ್ರಕೆ !

ಹೊರಟಿಹರು ಈರ್ವರೂ ಜೊತೆಯಾಗಿ
ನೋಡೆಯಾ ಒಮ್ಮೆ ಹಿಂತಿರುಗಿ
ಅವರ ಕೈ ನನ್ನ ಮಗನ ಬಳಸಿದೆ
ಪುತ್ರಾವತ್ಸಲ್ಯವದಲ್ಲ ,
ರಣ ಸೈನಿಕನೊಬ್ಬ ಸಿಕ್ಕ ಖುಷಿ

(ಹಿಡಿಂಬೆ ಎಂದರೆ  ನಮ್ಮೆಲ್ಲರಿಗೆ ಸಹಜವಾಗಿ ನೆನಪಾಗುವುದು ರಾಕ್ಷಸಿ ಎಂಬುದೊಂದೇ. ಭೀಮನಿಗೆ ಮನಸೋತ ಹಿಡಿಂಬೆ ಅವಳಿಗೆ ಒಂದು ಮಗು ಹುಟ್ಟುವಲ್ಳಿಯವರೆಗೆ ಹಗಲು ಹೊತ್ತು ಅವಳ ಜೊತೆ ಇರುತ್ತಾನೆ ಎನ್ನುವ ಷರತ್ತಿಗೆ ಒಪ್ಪಿ ಭೀಮನನ್ನು ಮದುವೆಯಾಗುತ್ತಾಳೆ. ಶರತ್ತಿನಂತೆಯೇ ಘಟೋತ್ಕಚನ ಜನನವಾದೊಡನೆ ಭೀಮ ಹೊರತು ನಿಂತಾಗ ಹೋಗದಿರೆಂದು  ಅಥವಾ ನಾನು ಬರುವೆನೆಂದು ಕಾಡಲಿಲ್ಲವಾದರೂ ಹತ್ತಾರು ವರುಷಗಳೇ ಕಳೆದರೂ ಭೀಮ ಬರುವನೆಂಬ ಹುಸಿ ನಂಬಿಕೆಯಿಂದ ಕಾದ ಹಿಡಿಂಬೆ, ಒಂದು ದಿನ ಬಂದು ಅವಳ ಪ್ರಪಂಚವೇ ಆಗಿದ್ದ ಮಗನನ್ನು ಯುದ್ದಕ್ಕೆ ಕರೆದೊಯ್ದಾಗಲೂ ತಿರುಗಿಬೀಳದ  ಕೋಮಲ ಸ್ತ್ರೀ ಹೃದಯದ  ಚಿತ್ರಣ ಈ ಕವನ.)

-Varija Hebbar

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post