X
    Categories: ಕಥೆ

ಅಜ್ಜನ ಸ್ವಗತ

Solitude - Closeup of a senior man looking away in deep thought

      ಇದು ಎರಡಲ್ಲ ಮೂರನೇ ಸಲ ಅಂತೆ. ಹಾಗಂತ ಈ ಮನೆಯಲ್ಲಿ ಮಾತಾಡ್ತಾ ಇದ್ರು. ಮೊದಲ ಸಲ ಮನೆ ಹಿಂದುಗಡೆ ಇರೋ ಬಾವೀಲಿ ಎರಡೂ ಕಾಲು ಒಳಗಿಟ್ಟುಕೊಂಡು ಕಟ್ಟೆ ಮೇಲೆ ಕೂತಿದ್ದೆನಂತೆ. ಇನ್ನೇನು ಹಾರಬೇಕು,ಅಷ್ಟರಲ್ಲಿ ಯಾರೋ ನೋಡಿ  ಜೋರಾಗಿ ಕೂಗಿದ್ರಿಂದ ಮನೆಯವರೆಲ್ಲ ಓಡಿ ಬಂದು ನನ್ನ ಕಾಪಾಡಿದ್ರಂತೆ. ಇನ್ನೊಂದು ಸಲ ಸೇತುವೆ ಮೇಲಿಂದ ಹೊಳೆಗೆ ಹಾರಕ್ಕೆ ಹೋಗಿದ್ದೆನಂತೆ. ಆಗ ಯಾರೋ ಊರಿನವರು ನೋಡಿ ಮನೆಗೆ ಕರ್ಕೊಂಡು ಬಂದಿದ್ರಂತೆ. ಈ ಸಲ ನಡೆದದ್ದು ಮೂರನೇ ಸಲವಂತೆ. ಹೌದು ಈ ಸಲ ಏನ್ ಮಾಡ್ಕೊಳ್ಳಕ್ಕೆ ಹೋಗಿದ್ದೆ ನಾನು? ಇಲ್ಲ ಸಾಧ್ಯನೇ ಇಲ್ಲ. ಖಂಡಿತ ನನಗೆ ನೆನಪಾಗೋದಿಲ್ಲ. ಯಾರೋ ಹೇಳಿದರಷ್ಟೇ ನನಗೆ ಗೊತ್ತಾಗೋದು ನಾನು ಏನು ಮಾಡಿದೆ ಅಂತ? ಭಯಂಕರ ಮರೆವಿನ ಕಾಯಿಲೆ ನನಗೆ. ಈ ಮನೆಯಲ್ಲಿ ಇದ್ದಾರಲ್ಲ ಅವರು ಯಾರು ಅಂತಾನೇ ಗೊತ್ತಿಲ್ಲ ನನಗೆ. ಅವರ ಹೆಸರುಗಳೂ ಕೂಡ ನೆನಪಿಲ್ಲ ನನಗೆ. ಒಬ್ಬ ನನ್ನ ಅಪ್ಪಯ್ಯ ಅಂತಾನೆ. ಇನ್ನೊಬ್ಬಾಕೆ ನನ್ನ ಮಾವ ಅಂತಾಳೆ. ಆ ಸಣ್ಣ ಹುಡುಗಿಯಂತೂ ಮುದ್ದಾಗಿ ಅಜ್ಜ ಅಂತಾಳೆ. ಮತ್ಯಾರೇ ಸಿಕ್ಕಿದರೂ ನನ್ನ ಅಜ್ಜ ಅಂತಾನೆ ಕರೀತಾರೆ. ಆದರೆ ನನಗೆ ನೆನಪಿರುವ ಹಾಗೆ ನನ್ನ ಮಕ್ಕಳೆಲ್ಲಾ ಇನ್ನೂ ಸಣ್ಣವರು. ಐದೋ ಆರೋ ಮಕ್ಕಳಿದ್ದವು ನನಗೆ.  ನಾನು ನೆನಪಿಸಿಕೊಂಡರೆ ನೆನಪಾಗುವುದು ಕೆಲವೇ ಕೆಲವು ವಿಚಾರಗಳು. ಈ ಮನೆಯ ನೆನಪು ಚೆನ್ನಾಗಿದೆ ನನಗೆ.  ಈ ಮನೆಯ ಸುತ್ತಮುತ್ತಲಿನ ಜಾಗ ಎಲ್ಲಾ ನೆನಪಿದೆ. ಇದೇ ಮನೆಯಲ್ಲಿ ಅಲ್ವಾ ನಾನು ಸರೋಜ ಸಂಸಾರ ಮಾಡಿದ್ದು. ನನ್ನ ಮೂರು ಜನ ಅಕ್ಕಂದಿರಿಗೂ ಮದುವೆ ಆಗಿತ್ತು ಆಗ. ಮನೆಯಲ್ಲಿ ಅಪ್ಪಯ್ಯ,ಅಮ್ಮ ,ತಂಗಿ ರುಕ್ಕು, ನಾನು ಮತ್ತು ನನ್ನ ಹೆಂಡತಿ ಸರೋಜ ಇಷ್ಟೇ ಜನ ಇದ್ದದ್ದು. ಹೌದು ಅವರೆಲ್ಲಾ ಎಲ್ಲಿ ಹೋದರು ಈಗ ?ಅಪ್ಪ,ಅಮ್ಮ ಸತ್ತಿದ್ದು ನನಗೆ ನೆನಪಿದೆ. ಆಮೇಲೆ ರುಕ್ಕುಗೆ ನಾನೇ ಮದುವೆ ಮಾಡಿಕೊಟ್ಟೆ. ಅದೆಂತದೋ ಊರು ಈಗ ಹೆಸರೇ ನೆನಪಿಗೆ ಬರುತ್ತಿಲ್ಲ. ಆದರೆ ರುಕ್ಕು ಮಾತ್ರ ಚೆನ್ನಾಗಿ ನೆನಪಿದೆ ನನಗೆ. ಮತ್ತೇನು ನೆನಪಿದೆ? ಹೌದು ನೆನಪಿದೆ.. ನಾನು ಶಾಲೆ ಬಿಟ್ಟು ಅಪ್ಪಯ್ಯನ ಜೊತೆ ತೋಟಕ್ಕೆ ಹೋಗ್ತಾ ಇದ್ದದ್ದು, ಅಪ್ಪಯ್ಯ ಅದೆಲ್ಲೋ ಬಿದ್ದು ಕಾಲಿಗೆ ಗಾಯ ಮಾಡ್ಕೊಂಡಾಗ  ಗಾಡಿಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದದ್ದು. ಆಮೇಲೆ ತಾನೆ ಅವರು ಹಾಸಿಗೆ ಹಿಡಿದದ್ದು. ಆಮೇಲೆ ನನಗೆ ಮದುವೆಯಾಗಿ, ಮಕ್ಕಳಾದವು. ಐದೋ ಆರೋ ಸರಿಯಾಗಿ ನೆನಪಿಲ್ಲ. ನನ್ನ ಮಕ್ಕಳ ಹೆಸರೂ ಕೂಡ ನೆನಪಿಲ್ಲ ಈಗ. ಎಷ್ಟು ವರ್ಷದಿಂದ ಇದೆಯೋ ಈ ಮರೆವಿನ  ಕಾಯಿಲೆ. ಈಗ ನನ್ನನ್ನು ನೋಡಿದ್ರೆ ನನಗೆ ವಯಸ್ಸಾದಂತಿದೆ. ಕಣ್ಣು ಕೂಡ ಮಂಜು ಮಂಜು. ಹಾಗಾದ್ರೆ ನಿಜವಾಗ್ಲೂ ನಾನು ಇವರಿಗೆಲ್ಲಾ ಅಜ್ಜನಾ ?ಈ ಮನೆಯಲ್ಲಿ ಇರೋವ್ರೆಲ್ಲಾ  ನನ್ನ ಮಕ್ಕಳು,ಸೊಸೆ, ಮೊಮ್ಮಕ್ಕಳಾ?  ಇರಬಹುದೇನೋ?

      ಅಯ್ಯೋ  ಹಸಿವಾಗುತ್ತಿದೆಯಲ್ಲಾ?  ನಾನು ಯಾವಾಗ ಊಟ ಮಾಡಿದ್ದು ಅಂತಾನೂ ನೆನಪಿಲ್ಲ. ಈ ಹಾಸಿಗೆಯಲ್ಲಿ ಸರಿಯಾಗಿ ನಿದ್ದೆ ಕೂಡ ಬರೋದಿಲ್ಲ. ಈಗ ಹಗಲಾ ರಾತ್ರಿನಾ? ಈ ಗೋಡೆಯ ದೀಪ ಉರಿಯುವುದು ನೋಡಿದರೆ ರಾತ್ರಿನೇ ಇರಬೇಕು. ಈ ದೀಪ ಇದ್ದರೆ ನನಗೆ ನಿದ್ದೆ ಬರೋದಿಲ್ಲ. ಹೇಗೆ ಇದನ್ನು ಆರಿಸೋದು? ಇಲ್ಲೊಂದು ಕೋಲಿತ್ತಲ್ಲ ಎಲ್ಲೋಯ್ತು ಅದು? ಹಾ ಅಲ್ಲಿದೆ. ಈ ಕೋಲೇ ಸರಿ ಇದಕ್ಕೆ. ಫಳ್ ಫಳೀರ್.. ಅಬ್ಬ ಒಡೆದುಹೋಯಿತು. ಈಗ ಕತ್ತಲಿದೆ. ಅಂದರೆ ರಾತ್ರಿನೇ ಇರಬೇಕು. ಈ ಕೋಲು ಮಾತ್ರ ಇಲ್ಲೇ ಇಟ್ಕೋಬೇಕು. ದೀಪ ಆರಿಸೋಕೆ ಇದೇ ಸರಿ. ಸ್ವಲ್ಪ ಹೊತ್ತು ನಿದ್ದೆನಾದ್ರು ಮಾಡೋಣ.

ಯಾರೋ ಕರೀತಿರೋ  ಹಾಗಿದೆ. ಅದು ನನ್ನನ್ನಾ ಕರಿತಿರೋದು?ಹೌದು ಬಾಗಿಲಿನ ಹತ್ತಿರಾನೇ  ಕೇಳಿಸುತ್ತಿದೆ. ನೋಡೋಣ ಯಾರು ಅಂತ ?

“ ಮಾವ..ಎದ್ದಿದ್ದೀರಾ? .. ರಾತ್ರಿ ನಿದ್ರೆ ಬಂತಾ ನಿಮಗೆ? “

ಮಾವ ಅನ್ನುತ್ತಿದ್ದಾಳೆ. ಹಾಗಾದರೆ ನನ್ನ ಸೊಸೆಯೇ ಇರಬೇಕು. ಅದೇನು ಅವಳ ಕೈಯಲ್ಲಿ? ತಿಂಡಿ ಇರಬೇಕು. ಈ ಮನೆಯಲ್ಲಿ ಇವಳೊಬ್ಬಳೇ ನನ್ನನ್ನು ಇಷ್ಟು ಚೆನ್ನಾಗಿ ನೋಡ್ಕೋಳೋದು. ಈಕೆಯ ಹೆಸರೇ ಮರೆತು ಹೋಯ್ತಲ್ಲ.. ಎಷ್ಟು ಸಲ ಹೇಳಿದ್ದಾಳೋ ಪಾಪ. ಅನ್ನಪೂರ್ಣಮ್ಮ ಅಂತಲೋ ?ಇರಬೇಕು. ನನ್ನ ಪಾಲಿಗಂತೂ ಅನ್ನಪೂರ್ಣೇಶ್ವರಿಯೇ.

“ ತಿಂಡಿ ತೊಗೊಳ್ಳಿ ಮಾವ. ಮುಖ ತೊಳೆದಿದ್ದೀರಾ? “

“ ತುಂಬಾ ಹಸಿವಾಗ್ತಿದೆ. ತಿಂಡಿ ಇಲ್ಲಿಡು. ಹೊರಗಡೆ ಯಾರೋ ಮಾತಾಡ್ತಿದಾರೆ. ಯಾರು ಬಂದಿರೋದು? “

“ ಆಚೆಮನೆ ಸುಬ್ಬಣ್ಣ ಬಂದಿದ್ದಾರೆ. ನೀವು ತಿಂಡಿ ತಿಂದು ಹೊರಗೆ ಬನ್ನಿ.“

“ ಸರಿ “

ಆಹಾ ಎಷ್ಟು ರುಚಿಯಾಗಿದೆ ತಿಂಡಿ. ಇದರ ಹೆಸರು ಏನಂತ ಕೇಳಬೇಕಿತ್ತು. ನನಗಂತೂ ಇಡ್ಲಿ, ದೋಸೆ ಬಿಟ್ಟರೆ ಬೇರೆ ತಿಂಡಿಯ ಹೆಸರೇ ನೆನಪಿಲ್ಲ. ಹೊರಗಡೆ ಬಂದಿದ್ದಾರಲ್ಲಾ ಅವರ ಹೆಸರು ಏನಂತ ಹೇಳಿದ್ಲು?ಮರೆತೇ ಹೋಯ್ತಲ್ಲ. ನನಗೆ ಅವರು ಯಾರು ಅಂತ ಗೊತ್ತಾಗಲ್ಲ  ಆದ್ರೆ ಅವರಿಗೆ ನಾನು ಯಾರು ಅಂತ ಖಂಡಿತ ಗೊತ್ತಿರುತ್ತೆ. ಏನಾದ್ರು ಆಗಲಿ ಹೋಗಿ ಮಾತಾಡೋಣ.

” ಯಾರು ಬಂದಿರೋದು ? “

“ ಓಹೋ ಯಜಮಾನ್ರೆ.. ಹೇಗಿದ್ದೀರಾ?ತಿಂಡಿ ಆಯ್ತಾ? “

“ ಆಯ್ತು. ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ? “

“ ನನ್ನ ಪರಿಚಯ ಆಯಿತೋ ನಿಮಗೆ? “

“ ಪರಿಚಯ ಆಗದೆ ಏನು?ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರಾ? “

“ ನಾವೆಲ್ಲಾ ಚೆನ್ನಾಗಿದ್ದೇವೆ.”

“ ನಿಮ್ಮ ಅಡಿಕೆ ಕೊಯ್ಲೆಲ್ಲ ಹೇಗೆ ನಡೀತಿದೆ ಈಗ ?ಗದ್ದೆ ಬೇಸಾಯ ಮುಗೀತೋ ಹೇಗೆ ? “

ಅಯ್ಯೋ ಅಲ್ಯಾರು ಬರುತ್ತಿರೋದು? ಓ ಅದು ಈ  ಮನೆಯವ ಅಲ್ವಾ? ಅದೇ ನನ್ನ ಅಪ್ಪಯ್ಯ ಅಂತ ಕರೀತಾನಲ್ಲ ಅವನು?ಈಗ ನನ್ನ ಮರ್ಯಾದೆ ತೆಗೀತಾನೆ ಇವರ ಎದುರಿಗೆ. ಹೇಗೋ ಏನೋ ಪರಿಚಯ ಇರೋ ತರ ಮಾತಾಡಿಸಿ ಸುಧಾರಿಸಿದ್ದೆ. ನಗ್ತಾ ಇದ್ದಾನೆ ಅನ್ಸುತ್ತೆ ನಾವಿಬ್ಬರೂ ಮಾತಾಡೋದನ್ನ ನೋಡಿ.

“ ಓಹೋ ಏನ್ರೀ ಸುಬ್ಬಣ್ಣ. ಹೇಗಿದ್ದೀರಾ?ಏನು ಅಪ್ಪಯ್ಯಂಗೆ ನಿಮ್ಮ ಪರಿಚಯ ಆಯ್ತಂತೋ?“

“ ಹೌದ್ರೀ ಅದೇ ಆಶ್ಚರ್ಯ. ನೀವು ನೋಡಿದ್ರೆ ಯಾರನ್ನೂ ಗುರುತೇ ಹಿಡಿಯೊಲ್ಲ ಅಂತೀರಿ. ನೋಡಿ ನನ್ನ ಗುರುತು ಹಿಡಿದಿದ್ದಾರೆ. “

“ ಅಯ್ಯೋ .. ಇಲ್ಲಾರೀ .. ಅವರು ಮಾತಾಡೋದೆ ಹಾಗೆ. ಎಲ್ಲರ ಪರಿಚಯ ಇರೋ ತರಾನೇ ಮಾತಾಡ್ತಾರೆ. ಓಯ್, ಅಪ್ಪಯ್ಯ ಇವರ ಹೆಸರೇನು ಹೇಳಿ ನೋಡೋಣ ?“

ನನಗೊತ್ತಿತ್ತು. ಇವ ಬಂದು ನನ್ನ ಮರ್ಯಾದೆ ತೆಗೀತಾನೆ ಅಂತ. ಸುಮ್ಮನೆ ಹೊರಗೆ ಹೋಗ್ಬಿಡೋಣ. ಇಲ್ಲೇ ಇದ್ರೆ ಮತ್ತೆ ಏನೇನೋ ಕೇಳಿ ತಲೆ ತಿಂತಾನೆ. ನನ್ನ ಮನೆಯಲ್ಲೇ ಇರ್ತಾರೆ ಇವರೆಲ್ಲಾ. ಯಾರು ಇವರೆಲ್ಲಾ ಅಂತ ಎಷ್ಟು ನೆನಪು ಮಾಡ್ಕೊಂಡ್ರು ನೆನಪಾಗೊಲ್ಲ. ನಾವು ನಿಮ್ಮ ಮಕ್ಕಳು ಅಂತಾರೆ. ಆದ್ರೆ ನನಗೆ ನೆನಪಿರುವ ಹಾಗೆ ನನಗಿದ್ದದ್ದು ಸಣ್ಣ ಸಣ್ಣ ಮಕ್ಕಳು. ಕೇಳೋಣ ಅಂದರೆ ಸರೋಜ ಕೂಡ ಇಲ್ಲ ಇಲ್ಲಿ. ಎಲ್ಲಿ ಹೋದಳು ಅಂತ? ನನ್ನನ್ನ ಒಬ್ಬನೇ ಬಿಟ್ಟು ಅದೆಲ್ಲಿಗೆ ಹೋದಳು ಅವಳು. ನನಗೆ ಮರೆವಿನ ಕಾಯಿಲೆ ಇರೋದೇನೋ ನಿಜ. ಆದರೆ ನನಗೆ ಈ ಮನೆ,ಈ ತೋಟ,ಗದ್ದೆ,ನಾನು ಮಾಡುತ್ತಿದ್ದ ಕೆಲಸ ಎಲ್ಲಾ ನೆನಪಿದೆ. ನಾನು ದಿನಾ ಸಂಜೆ ನಡೆದುಕೊಂಡು ಹರಿಹರಪುರಕ್ಕೆ ಹೋಗುತ್ತಿದ್ದೆ. ಕಾಡಿನ ಆ ಕಾಲು ದಾರಿ ಈಗಲೂ ನೆನಪಿದೆ. ಹರಿಹರಪುರದಲ್ಲಿದ್ದ ಮೋಹನ ಭಟ್ರ ಅಂಗಡಿ,ನನಗೋಸ್ಕರ ದಿನಪತ್ರಿಕೆ ತೆಗೆದಿಡುತ್ತಿದ್ದ ಸದಾಶಿವ,ದಿನಾ ಸಂಜೆ ಮಾತಿಗೆ ಸಿಗುತ್ತಿದ್ದ ಶಾನುವಳ್ಳಿ ಸುರೇಶ ಇವರೆಲ್ಲರ ಮುಖ ಚೆನ್ನಾಗಿ ನೆನಪಿದೆ. ಅಷ್ಟೆಲ್ಲ  ಯಾಕೆ ನಮ್ಮ ಕೊಟ್ಟಿಗೆಯಲ್ಲಿದ್ದ ದನಗಳ  ಹೆಸರು ನೆನಪಿದೆ. ಅಡಿಕೆ ಗೊನೆ ತೆಗೆಯೋಕೆ ಅಂತ ಒಬ್ಬ ಬರುತ್ತಿದ್ದ ಲಿಂಗಣ್ಣ ಅಂತ. ಹೌದು,ಆ ಲಿಂಗಣ್ಣನಿಗೆ ನಾನು ಸಾಲ ಕೊಟ್ಟಿದ್ದೆ ಅಲ್ವಾ?ವಾಪಾಸು ಕೊಡಲೇ ಇಲ್ಲ ಅವನು. ನಾಳೇನೇ ಕೇಳಬೇಕು. ನನ್ನ ಲೆಕ್ಕದ ಪುಸ್ತಕ ಎಲ್ಲೋಯ್ತೀಗ ?ಒಂದು ಸಾರಿ ಲೆಕ್ಕದ ಪುಸ್ತಕ ನೋಡಿ ಹಳೇ ಸಾಲ ಎಲ್ಲಾ ವಸೂಲಿ ಮಾಡ್ಬೇಕು. ಈ ಕಂಬಳಿ ಇಲ್ಲೇ ಹೊರಗೇ ಇದೆ. ನಾನೇ ತೆಗೆದು ಒಳಗಿಡ್ತೇನೆ. ಒಳಗಡೆ ಇನ್ನೂ ಮಾತು ಕೇಳಿಸುತ್ತಿದೆ. ಅಂದರೆ ಅವರಿನ್ನೂ ಹೋಗಿಲ್ಲ ಅನ್ಸುತ್ತೆ. ಆ ಕಡೆ ನೋಡಿದ್ರೆ ಮತ್ತೆ ಏನೇನೋ ಕೇಳ್ತಾರೆ. ಅವರಿಗೆ ಕಾಣದ ಹಾಗೆ ಹೋಗ್ಬೇಕು.

“ ಅಪ್ಪಯ್ಯ ರೂಮಲ್ಲೇ ಇರಿ. ಎಲ್ಲೆಲ್ಲೋ  ಹೊರಗೆ ಹೋಗ್ಬೇಡಿ. “

ಇವನೊಬ್ಬ, ನಂಗೆ ಹೇಗೆ ಜೋರು ಮಾಡ್ತಾನೆ ಇವ್ನು?ಈ ಮನೆಯಲ್ಲಿ ಇರುವವರನ್ನೆಲ್ಲ ಹೊರಗೆ ಕಳಿಸಿ ಬಿಡ್ತೇನೆ. ಆ ಅನ್ನಪೂರ್ಣಮ್ಮ ಮಾತ್ರ ಇರಲಿ ಸಾಕು. ನನ್ನನ್ನೇ ರೂಮಲ್ಲಿ ಕೂಡಿ ಹಾಕ್ತಾರೆ. ಎಷ್ಟು ಬೊಬ್ಬೆ ಹಾಕಿದ್ರು ಬಾಗಿಲು ತೆಗೆಯೊಲ್ಲ. ಅಲ್ಲ ನನಗೆ ಮರೆವು ಅಂತಾರಲ್ಲ.. ಎಲ್ಲಾ ಸುಳ್ಳು. ಎಷ್ಟೆಲ್ಲಾ ವಿಷಯ ನೆನಪಿದೆ ಗೊತ್ತಾ ನನಗೆ. ಗಾಯತ್ರಿ ಮಂತ್ರ,ಸಂಸ್ಕೃತ ಶ್ಲೋಕ ಚೆನ್ನಾಗಿ ನೆನಪಿದೆ. ದೇವರ ಪೂಜೆಯ ಮಂತ್ರ ನೆನಪಿದೆ. ದೇವರು ಅಂದಾಗ ನೆನಪಾಯ್ತು. ನನಗೆ ದೇವರ ಮೇಲೇನು ವಿಶೇಷ ಭಕ್ತಿ ಇರಲಿಲ್ಲ. ದಿನಾ ದೇವರ ಪೂಜೆ ತಪ್ಪದೆ ಮಾಡ್ತಿದ್ದೆ ಅಷ್ಟೇ. ನನ್ನ ನಂಬಿಕೆಯ ದೇವರಿಗೆ ಯಾವುದೇ ಹೆಸರಿರಲಿಲ್ಲ. ನಾನು ಇಲ್ಲಿ ಬದುಕಿದ್ದೇನೆ,ತಿನ್ನಲು ಆಹಾರ,ಉಸಿರಾಡಲು ಗಾಳಿ,ಕುಡಿಯಲು ನೀರು ಕೊಟ್ಟು,ಒಂದು ಉತ್ತಮ ಜೀವನ ನಡೆಸುವಷ್ಟು ಬುದ್ಧಿ ಕೊಟ್ಟಿರುವ ಆ ಅಗೋಚರ ಶಕ್ತಿಗೆ ದಿನವೂ ತಪ್ಪದೇ ನಮಿಸುತ್ತಿದ್ದೆ. ದೇವಸ್ಥಾನದ ಮೇಲಾಗಲಿ,ಪೂಜೆ,ಹೋಮಗಳಲ್ಲಾಗಲೀ,ಜ್ಯೋತಿಷ್ಯಗಳಲ್ಲಾಗಲೀ ಭಾರೀ ನಂಬಿಕೆ ಏನು ಇರಲಿಲ್ಲ. ಆದರೆ ಈ ಸುಂದರ ಪ್ರಕೃತಿಯ ಮಧ್ಯೆ ನನಗೂ ಬದುಕಲು ಅವಕಾಶ ಕೊಟ್ಟ ಆ ಭಗವಂತನಿಗೆ ನಮಸ್ಕರಿಸುವುದಷ್ಟೆ ನನ್ನ ಕರ್ತವ್ಯ ಅಂತ  ತಿಳಿದಿದ್ದೆ.  ಅಷ್ಟಕ್ಕೇ ಎಲ್ಲರೂ ನನ್ನನ್ನು ನಾಸ್ತಿಕ ಅಂತ ಕರೆದರು. ಯಾರು ಏನೇ ಅಂದರೂ ನನಗೇನು ಬೇಜಾರಿರಲಿಲ್ಲ. ಆದರೆ ನನಗೆ ಈ ವಯಸ್ಸಿನಲ್ಲಿ ಬಂದಿರುವ ಮರೆವಿನ ಕಾಯಿಲೆಗೂ ಆವತ್ತು ನಾನು ನಂಬಿದ್ದ ನಂಬಿಕೆಗೂ ಏನಾದ್ರು ಸಂಬಂಧವಿದೆಯೇ?ನನಗೆ ಈಗ ಸರಿಸುಮಾರು ಎಲ್ಲವೂ ಮರೆತುಹೋಗಿದೆ. ನೆನಪಿರುವುದು ಎಲ್ಲೋ ಅಲ್ಪ ಸ್ವಲ್ಪ ಮಾತ್ರ. ನಾನು ಈ ಜೀವನವನ್ನು ಹೇಗೆ ಜೀವಿಸಿದೆ ಅನ್ನುವುದೇ ನನಗೆ ನೆನಪಿಲ್ಲ. ನಾನು ಬದುಕಿ ಬಾಳಿದ ದಿನಗಳೇ ನನಗೆ ನೆನಪಿಲ್ಲ. ಇದೆಂಥಾ ಹಿಂಸೆಯ ಕಾಯಿಲೆ. ಈ ಕಾಯಿಲೆ ನನ್ನ ನೆನಪನ್ನೆಲ್ಲಾ ಅಳಿಸಿಹಾಕಿದೆ. ನನ್ನ ಜೀವನ ಹೇಗಿತ್ತು ಅನ್ನುವ ಚಿಕ್ಕ ಕುರುಹನ್ನೂ ಬಿಡದೆ ಎಲ್ಲವನ್ನೂ ಶೂನ್ಯವಾಗಿಸಿದೆ. ಆದರೆ ಆ ಒಂದು ಘಟನೆ ಮಾತ್ರ ಇವತ್ತಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಎಲ್ಲವನ್ನೂ ಅಳಿಸಿಹಾಕಿದ ಈ ಕಾಯಿಲೆಗೆ  ಆ ಒಂದು ಘಟನೆಯನ್ನು ಮರೆಸುವುದು ಸಾಧ್ಯವಾಗಲಿಲ್ಲವೇ?ಆಗ ನನಗೆ ಸುಮಾರು ಇಪ್ಪತ್ತೋ ಇಪ್ಪತ್ತೊಂದೋ ವಯಸ್ಸು. ಆಗಿನ್ನೂ ನಮಗೆ ಆಂಗ್ಲರಿಂದ ಸ್ವಾತಂತ್ರ ಸಿಕ್ಕಿರಲಿಲ್ಲ. ಊರಲ್ಲೆಲ್ಲಾ ಒಂದೇ ಸುದ್ದಿ. ಆಂಗ್ಲರ ಕಡೆಯ ಸೈನಿಕರು ಶ್ರೀಮಂತರ ಮನೆಗೆ ನುಗ್ಗುತ್ತಿದ್ದಾರಂತೆ,ಅಗತ್ಯಕ್ಕಿಂತ ಹೆಚ್ಚಿನ ಹಣ,ಒಡವೆ ಸಿಕ್ಕಿದರೆ ಜಪ್ತಿ ಮಾಡುತ್ತಾರಂತೆ. ಹೀಗೆ ಏನೇನೋ. ನಮ್ಮಮನೆಯಲ್ಲಿ ಅಪ್ಪಯ್ಯ ದುಡ್ಡು,ಒಡವೆಯನ್ನೆಲ್ಲಾ ಬಟ್ಟೆಯಲ್ಲಿ ಕಟ್ಟಿ ಉಪ್ಪರಿಗೆ ಮೇಲೆ ಹಳೇ ಪಾತ್ರೆಗಳ ಮಧ್ಯೆ ಯಾರಿಗೂ ಕಾಣದಂತೆ ಅಡಗಿಸಿಟ್ಟಿದ್ದರು. ಒಂದು ದಿನ ಮನೆಯಲ್ಲಿ ನಾನೊಬ್ಬನೇ ಇದ್ದೆ. ಆಪ್ಪಯ್ಯ,ಅಮ್ಮ ಯಾವುದೋ ಊರಿಗೆ ಹೋಗಿದ್ದರು. ಅದೇನಾಯಿತೋ ಏನೋ ನನಗೊಂದು ಕೆಟ್ಟ ಯೋಚನೆ ಬಂತು. ನಾನೇ ಅಪ್ಪಯ್ಯ ಇಟ್ಟಿದ್ದ ದುಡ್ಡು,ಒಡವೆಯನ್ನು ಬೇರೆ ಕಡೆ ಕದ್ದಿಟ್ಟು,ಮನೆಯಲ್ಲಿದ್ದ  ವಸ್ತುಗಳನ್ನೆಲ್ಲಾ ಆಚೆ ಈಚೆ ಬಿಸಾಡಿ,ಯಾರೋ ಬಂದು ಎಲ್ಲಾ ದುಡ್ಡು,ಒಡವೆ ದೋಚಿಕೊಂಡು ಹೋದರು ಅಂತ ಅಪ್ಪಯ್ಯ,ಅಮ್ಮಂಗೆ ನಂಬಿಸಿದ್ದು ,ಅವರು ದುಡ್ಡು ಹೋದರೆ ಹೋಗಲಿ ನನಗೇನು ಆಗಲಿಲ್ಲವಲ್ಲಾ ಅಂತ ಸಮಾಧಾನ ಪಟ್ಟುಕೊಂಡದ್ದು, ಛೆ,ನನಗೇಕೆ ಅವತ್ತು ಅಂತಾ ದುರಾಲೋಚನೆ ಬಂತೋ ಗೊತ್ತಿಲ್ಲ. ಧೈರ್ಯ ಸಾಲದೆ ಮತ್ತೆಂದೂ ಆ ವಿಷಯವನ್ನು ಅಪ್ಪಯ್ಯ,ಅಮ್ಮಂಗೆ ಹೇಳಲೇ ಇಲ್ಲ. ಆ ದುಡ್ಡನ್ನೆಲ್ಲಾ ಏನು ಮಾಡಿದೆ ಅಂತಾನೂ ನೆನಪಿಲ್ಲ.

“ ಅಜ್ಜ ಬಿಸಿಲಲ್ಲಿ ಏನು ಮಾಡ್ತಾ ಇದ್ದೀರಾ?ಬನ್ನಿ ಒಳಗೆ. “

ನನ್ನ ಅಜ್ಜ ಅಂತ ಕರೀತಾಳಲ್ಲ ಈ ಹುಡುಗಿ. ಯಾರ ಮಗಳೋ ಏನೋ? ನನಗೆ ಕಾಯಿಲೆ ಇದ್ದರೂ ಇವರೆಲ್ಲಾ ನನ್ನನ್ನು ಚೆನ್ನಾಗಿ ನೋಡ್ಕೊಳ್ತಾರಲ್ಲ ಅಷ್ಟು ಸಾಕು ನನಗೆ. ಯಾರು ಹೆತ್ತ ಮಕ್ಕಳೋ ಏನೋ? ಎಲ್ಲಾ ಚೆನ್ನಾಗಿರಲಿ.

— ವೇಣು ರಾವ್,

ಕೊಪ್ಪ.

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post