ಸತ್ಯದ ಡಮರುಗ ಬಡಿಯುವ ಜಂಗಮ,
ನಡೆದಿಹ ಮಸಣದ ಓಣಿಯೊಳು!
ಜೀವವೆ ಇಲ್ಲದ ದೇಹಕೆ ಮಾಡುತ,
ಬೆಳಕಿನ ಪಾಠ ಇರುಳಿನೊಳು..!
ಸುಳ್ಳಿನ ಸಾವಿಗೆ ಮೋಕ್ಷವ ನೀಡಿ,
ಮಸಣವ ಮಂದಿರವಾಗಿಸುತ,
ಢಂ!ಢಂ!ಘಂಟೆಯಿಂ ಬಡಿದೆಬ್ಬಿಸುತ,
ಪ್ರತಿಮಿಸಿ ಸತ್ಯವ ಗರ್ಭದೊಳು!
ಮೋಸಗಳೆಲ್ಲವೂ ಮುಳ್ಳುಗಳು,
ಮೋಹವೆ ಗಾಜಿನ ಚೂರುಗಳು!
ಪಾದಕೆ ಪ್ರೇಮದ ರಕ್ಷೆಯ ಧರಿಸಿ,
ಗುಡಿಸಿಹ ಕೆಡುಕಿನ ಕುರುಹುಗಳು!
ಡಮರುಗಕೆ ಹಿನ್ನೆಲೆ ಖಗಪುಂಜದ ಕಲರವ,
ಸುಶ್ರಾವ್ಯ ಹಾಡಾಗಿಸಿ ಈ ಮಸಣಮೌನವ!
ಶಾಂತಿಯ ರಾಗಕೆ ಸಂತಸದ ನರ್ತನ
ಸತ್ಯದ ಸದ್ದಿಗೆ ಜಗ ಬೃಂದಾವನ!
ಪುನಃ ಪುನಃ ಜನಿಸುವನು ಜಂಗಮ,
ರುದ್ರಭೂಮಿಯ ಮಧ್ಯದೊಳು!
ತನ್ನ ತಾಂಡವದಿಂ ಜಗವ ಮೈಮರೆಸಿ,
ಹಂಚುವ ಪ್ರೇಮವ ಎಲ್ಲರೊಳು!
– ಪ್ರಸಾದ ಸಿದ್ಧೇಶ್ವರ
Facebook ಕಾಮೆಂಟ್ಸ್