X

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೭

________________________________________

ತಳಮಳವಿದೇನಿಳೆಗೆ ? ದೇವದನುಜರ್ ಮಥಿಸೆ |

ಜಳನಿಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ ? ||

ಹಾಳಾಹಳವ ಕುಡಿವ ಗಿರೀಶನಿದ್ದಿರ್ದೊಡೀ |

ಕಳವಳವದೇತಕೆಲೊ ? – ಮಂಕುತಿಮ್ಮ ||

ಕವಿ ಭುವಿಯ ಮೇಲಿನ ಜೀವನದಲ್ಲಿ ತನ್ನ ಸುತ್ತಲು ಕಾಣುವ ಹೊಯ್ದಾಟ, ಗೊಂದಲ, ಅನಿರೀಕ್ಷಿತತೆಯಾದಿಗಳೆಲ್ಲ ಸಂಗಮಿಸಿಕೊಂಡು ತಳಮಳದ ರೂಪಾಗಿ ಪ್ರಕಟವಾಗುವ ಪರಿಗೆ ಬೆರಗಾಗಿ ಕೇಳುವ ಪ್ರಶ್ನೆಗಳಿವು.  ಪುರಾತನ-ಪುರಾಣಕಾಲದಿಂದಲು ಏನಾದರು ಒಳಿತು ಘಟಿಸುವ ಮುನ್ನ ಅದರ ಹಿನ್ನೆಲೆಯಲ್ಲೇನೊ ವಿಪರೀತದ ಅವಘಡ ಮುನ್ನುಡಿಯಾಗಿ ಬರುವುದು ಸಹಜವಾಗಿ ಕಾಣುವ ಪ್ರಕ್ರಿಯೆ. ಅದಕ್ಕೊಂದು ದೊಡ್ಡ ಉದಾಹರಣೆಯೆಂದರೆ ದೇವದಾನವರು ಒಟ್ಟಾಗಿ ನಡೆಸಿದ ಸಮುದ್ರಮಥನ. ಈ ಮಥನದಲ್ಲಿ ಕೈಗೂಡಿಸಿದ ಸುರಾಸುರರಿಗೆ ಆ ಜಳನಿಧಿಯ ಮಥನದಲ್ಲಿ ಮೊದಲು ದರ್ಶನವಾಗಿದ್ದು ಹಾಲಾಹಲವೆಂಬ ವಿನಾಶಕಾರಿ ವಿಷವೆ ಹೊರತು ಅಮೃತ ಸುಧೆಯಲ್ಲ; ಅಮೃತವೊದಗುವ ಮುನ್ನದ ಪೀಠಿಕೆಯಾಗಿ ವಿಷವುದಿಸಿ ಬಂದಿತ್ತು – ತನ್ನ ಕಠೋರಾತಿಕಠೋರ ರೂಪದಲ್ಲಿ.

ಹೀಗೆಲ್ಲಾ ಸತ್ಫಲಿತದ ಮುನ್ನದ ಪೀಠಿಕೆಯಾಗಿ ಏನಾದರು ಘೋರ ಪರಿಣಾಮವಿರಬೇಕೆನ್ನುವುದೆ ಲೋಕದ ನಿಯಮವೆನ್ನುವುದಾದರೆ, ಈ ಇಳೆಯ ಮೇಲಿನ ಬದುಕಿನಲ್ಲಿ ಕಾಣುತ್ತಿರುವ ತಳಮಳವೂ ಕೂಡ ಅಂತಹುದ್ದೆ ಸತ್ಫಲಿತಕ್ಕೆ ಮೊದಲಿನ, ಮುನ್ನುಡಿಯಾಗಿ ಬಂದಿರುವ ಪೀಠಿಕೆಯೆ? ಎಂದು ಕೇಳುತ್ತದೆ ಕವಿಮನ. ಆ ಹಾಲಹಲವೆದ್ದ ಹೊತ್ತಿನಲ್ಲಿ ಅದು ಸುರಾಸುರರಿಬ್ಬರನ್ನು ಆಹುತಿ ತೆಗೆದುಕೊಳ್ಳಲು ಹವಣಿಸುತ್ತಿದ್ದರೆ, ಏನೂ ಮಾಡದೆ ಕೈ ಬಿಟ್ಟು ಸುಮ್ಮನೆ ಕೂತನೇ ಆ ಪರಮೇಶ ? ಬದಲಿಗೆ ಹಿಂದೆ ಮುಂದೆ ಯೋಚಿಸದೆ ಆ ಭೀಕರ ವಿಷವನ್ನು  ಆಪೋಶಿಸಿ ಕುಡಿದು, ನುಂಗಿ ಗಂಟಲಲಿರಿಸಿಕೊಂಡ. ಮಿಕ್ಕವರೆಲ್ಲರು ಅದರಿಂದ ಪಾರಾಗುವಂತೆ ಮಾಡಿ, ಅವರು ನಿರಾಳವಾಗಿ ಕಡಲನ್ನು ಕಡೆಯುವುದನ್ನು ಮುಂದುವರೆಸುತ್ತ ಯಶಸ್ವಿಯಾಗಿ ಅಮೃತವನ್ನು ಸಂಪಾದಿಸಲು ಅನುವು ಮಾಡಿಕೊಟ್ಟ. ಹೀಗೆ ಅಂಥಾ ಹಾಲಾಹಲ ವಿಷವನ್ನೇ ಕುಡಿದು ಸರ್ವರನ್ನು ರಕ್ಷಿಸಿದ ಗಿರೀಶನಿರುವಾಗ, ಲೋಕದ ತಳಮಳವನ್ನು ನೋಡಿ ಅವನು ಸುಮ್ಮನಿರುತ್ತಾನೆಯೆ? ಸೂಕ್ತ ಸಮಯದಲ್ಲಿ ತಾನಾಗಿಯೆ ಬಂದು ರಕ್ಷಿಸದಿರುತ್ತಾನೆಯೆ? ಎಂದು ಸಮಾಧಾನಗೊಳ್ಳುವ ಕವಿಮನದ ಆಶಾಭಾವ  ಇಲ್ಲಿ ಅನಾವರಣಗೊಂಡಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ – ಹಿಂದಿನ ಕೆಲವು ಪದ್ಯಗಳಲ್ಲಿದ್ದ ಆತಂಕ, ತಳಮಳಗಳೆ ಇಲ್ಲಿನ ಮೂಲ ವಿಷಯವಾದರೂ ಅಲ್ಲಿ ಕಾಣದ ಆಶಾವಾದದ ಚಿಗುರು ಇಲ್ಲಿ ಎದ್ದು ಕಾಣುತ್ತದೆ. ಎಷ್ಟೆ ತೊಳಲಾಟವಿದ್ದರು, ಬದುಕಿನ ಈ ಹೋರಾಟದಲ್ಲಿ ಅದು ಮುಂಬರುವ ಯಾವುದೊ ಒಳಿತಿಗೆ ಬರೆಯುತ್ತಿರುವ ಮುನ್ನುಡಿಯೆಂಬ ಭಾವದಲ್ಲಿ ನೋಡಿದರೆ, ಅನುಭವಿಸುತ್ತಿರುವ ಕಷ್ಟಗಳೆಲ್ಲ ಕಷ್ಟಗಳೆಂದೆನಿಸದೆ, ಯಾವುದೊ ಅನಿವಾರ್ಯದ ಪೂರ್ವಸಿದ್ದತೆಯಾಗಿ ಕಾಣಿಸಿಕೊಂಡುಬಿಡುತ್ತದೆ. ‘ಆಗುವುದೆಲ್ಲ ಒಳ್ಳೆಯದಕ್ಕೆ’ ಎನ್ನುವ ಗಾದೆ ಮಾತಿನಂತೆ ಆ ಹೊತ್ತಲ್ಲಿ ಅನುಭವಿಸುತ್ತಿರುವ ತಳಮಳಕ್ಕೆ ಕಾರಣವಾದ ಕಷ್ಟ-ಕಾರ್ಪಣ್ಯಗಳೂ ಕೂಡ ಸಹನೀಯವಾಗಿ, ಅವನ್ನೆದುರಿಸಿ ಬದುಕುವ ಸ್ಥೈರ್ಯ, ಧೈರ್ಯ ತುಂಬುತ್ತವೆ. ಮುಂದೆ ನಿಜಕ್ಕು ಒಳಿತಾಯಿತೊ ಇಲ್ಲವೊ ಎನ್ನುವುದಕ್ಕಿಂತ , ಅದಾಗಬಹುದೆನ್ನುವ ಭಾವನೆ ಮನಸನ್ನು ಹಗುರಾಗಿಸಿ ಪ್ರಸ್ತುತದ ದುಸ್ಥಿತಿಯನ್ನೆದುರಿಸುವಲ್ಲಿ ಮನಸ್ಥೈರ್ಯವನ್ನಿತ್ತು ಮುನ್ನಡೆಸುತ್ತದೆ.

ಹೀಗಾಗಿ ಇದೊಂದು ಆಶಾವಾದವನ್ನು ತುಂಬುವ, ಪ್ರತಿಬಿಂಬಿಸುವ ಪದ್ಯ. ಇಲ್ಲೂ ಕವಿ ಬಳಸುವ ಸಮುದ್ರಮಥನದ ಹೋಲಿಕೆ ಅಪಾರ ಪ್ರಾಮುಖ್ಯತೆಯುಳ್ಳದ್ದಾಗಿಬಿಡುತ್ತದೆ.  ನಮ್ಮ ಸಂಸ್ಕೃತಿಯಲ್ಲಿ ಪಾಮರನಿರಲಿ, ಪಂಡಿತನಿರಲಿ – ಸಮುದ್ರ ಮಥನ ಕಥನವನ್ನು ಯಾವುದಾದರೊಂದು ಬಗೆಯಲ್ಲಿ ಅಷ್ಟಿಷ್ಟಾದರೂ ಅರಿಯದವನಾದರೂ ಯಾರು ? ಆ ಕಾರಣದಿಂದ, ಓದಿ ಸಾರವನ್ನು ಅರ್ಥೈಸಿಕೊಂಡ ಎಲ್ಲರಿಗೂ ಆಪ್ಯಾಯವಾಗುವ ಸಾಲುಗಳಾಗಿ ಬಿಡುತ್ತವೆ – ಕಷ್ಟಕಾರ್ಪಣ್ಯಗಳನ್ನೆದುರಿಸುವ ಅದ್ಭುತ ಸ್ಥೈರ್ಯ ತುಂಬಿಸುತ್ತಾ.

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post