X

ಸಜ್ಜನರ ‘ಸಂಘ’ವಿದು ಹೆಜ್ಜೇನ ಸವಿದಂತೆ…

ಅದು 2004ರ ನವೆಂಬರ್ ಹದಿನಾಲ್ಕು. ಮಕ್ಕಳ ದಿನಾಚರಣೆಯ ರಜಾ ಅಲ್ವಾ? ಅವಾಗೆಲ್ಲ ರಜೆ ಅಂದ್ರೆ ಈಗಿನ ಮಕ್ಕಳಂತೆ ಕಂಪ್ಯೂಟರ್ ಮುಂದೆ ಕುಳಿತು ರೇಸು ನೋಡಿಕೊಂಡು, ಪೋಗೋ ನೋಡುತ್ತಾ ಕಿಲ ಕಿಲ ನಗಾಡಿಕೊಂಡು ಕಾಲ ಕಳೆಯುತ್ತಿದ್ದ ಮಕ್ಕಳು ನಾವಾಗಿರಲಿಲ್ಲ. ನಮ್ಮದೇನಿದ್ದರೂ ಕ್ರಿಕೆಟ್ ಆಟ. ರಜೆ ಸಿಕ್ಕರೆ ಸಾಕು,ಅದೆಷ್ಟೇ ಮಳೆಯಿರಲಿ, ಬೆವರು ಬಿಚ್ಚಿಸುವ ಬಿಸಿಲಿರಲಿ, ಇಡೀ ದಿನ ಕ್ರಿಕೆಟ್ ಅಡುತ್ತಲೇ ದಿನ ಕಳೆಯುತ್ತಿದ್ದವರು ನಾವು. ಆವತ್ತೂ ಹಾಗೆ, ಮಕ್ಕಳ ದಿನಾಚರಣೆಯ ರಜಾ ಆಗಿದ್ದರಿಂದ ಇಡೀ ದಿನ ನಮ್ಮ ಕ್ರಿಕೆಟ್ ಸಾಗಿತ್ತು.  ಸಂಜೆಯ ಸೆಷನ್ ನಡೆಯುತ್ತಿರುವಾಗಲೇ ಫೀಲ್ಡಿಂಗ್ ಮಾಡುತ್ತಿದ್ದವರು ಇದ್ದಕ್ಕಿದ್ದಂತೆ ಆಟವನ್ನು ಬಿಟ್ಟು ಓಡಲಾರಂಭಿಸಿದರು. ಬಲ್ಲಿಪ್ಪುಲೇ ಮಾತೆರ್ಲಾ(ಓಡಿ ಎಲ್ಲರೂ) ಎನ್ನುವ ಅವರ ಮಾತು ಕೇಳಿ ಇತರರೂ ಓಡಲಾರಂಭಿಸಿದರು. ಆರೆಸ್ಸೆಸ್ಸಿನ ಪ್ರಚಾರಕರೊಬ್ಬರು ನಮ್ಮಲ್ಲಿ ಶಾಖೆಯನ್ನು ಆರಂಭಿಸುವುದಕ್ಕಾಗಿ ಬರುತ್ತಿದ್ದಾರೆ, ಅದರಿಂದ ತಪ್ಪಿಸಿಕೊಳ್ಳುವುದಕ್ಕೆ ನಾವೆಲ್ಲಾ ಓಡುತ್ತಿರುವುದೆಂದು ನಮ್ಮ ಗುಡ್ಡಗಾಡು ಮೈದಾನದ ಬರೆಯನ್ನು ಹಾರಿದ ಬಳಿಕ ಗೊತ್ತಾಯಿತು. ಇವರ ಕೈಯಲ್ಲಿ ತಗಲಾಕ್ಕೊಂಡರೆ ನಮ್ಮ ನಿತ್ಯದ ಕ್ರಿಕೆಟ್’ಗೆ ಕುತ್ತು ಬರುತ್ತದೆಂಬ ವಿಷಯ ನಮ್ಮೆಲ್ಲರ ಓಟಕ್ಕೆ ಕಾರಣವಾಗಿತ್ತು.

ಹೇಳಿ ಕೇಳಿ ಇವರು ಆರೆಸ್ಸೆಸ್ಸಿನವರು, ಅಷ್ಟು ಸುಲಭಕ್ಕೆ ನಮ್ಮನ್ನು ಬಿಟ್ಟಾರೆ? ನಾವು ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳಗೆ ತೂರುವ ಜಾತಿಯವರು ಅವರು. ನಮ್ಮನ್ನು ಬೆಂಬತ್ತಿದ ಆ ಪ್ರಚಾರಕರು ನಮ್ಮೆಲ್ಲರನ್ನು ಒತ್ತಾಯ ಪಡಿಸಿ ಅಲ್ಲೊಂದು ಶಾಖೆಯನ್ನು ಆರಂಭಿಸಿಯೇ ಬಿಟ್ಟರು. ಕ್ರಿಕೆಟೆಂಬ ಲವ್ವರನ್ನು ಬಿಟ್ಟು ಶಾಖೆಯ ಜೊತೆ ಬಲವಂತದ ಮದುವೆ ಮಾಡಿಸಿದಂತಿತ್ತು ನಮ್ಮ ಅವಸ್ಥೆ. ಸಂಸಾರ ಹೂಡುವ ಹಾಗೂ ಇಲ್ಲ, ಬಿಟ್ಟು ಬರುವ ಹಾಗೂ ಇಲ್ಲ!  ಕ್ರಿಕೆಟಿನ ಮುಂದೆ ಶಾಖೆಯ ಸಾಂಪ್ರಾದಾಯಿಕ ಆಟಗಳು ಬಹಳ ಸಪ್ಪೆಯೆನಿಸತೊಡಗಿದವು. ಶಾಖೆಯ ಮುಖ್ಯ ಶಿಕ್ಷಕ್”ಸಂಘ ದಕ್ಷ” ಎಂದು ಆಜ್ಞೆ ಕೊಡುವಾಗ ನಗು ಬಂದಿದ್ದೂ, ಅದನ್ನೇ ಹೊರಗಡೆ ಅಪಹಾಸ್ಯ ಮಾಡಿದ್ದೂ ಉಂಟು. ದೇಶ ಭಾಷೆ ಮುಂತಾದವುಗಳ ಕುರಿತಾಗಿ ಹೆಚ್ಚಾಗಿ ತಿಳಿಯದಿದ್ದ ಆ ವಯಸ್ಸಿನಲ್ಲಿ “ಎಂತ ಕರ್ಮದ ಶಾಖೆ ಮಾರ್ರೆ ಇದು” ಅಂತ ಹಿಡಿಶಾಪ ಹಾಕಿದ್ದೂ ನೆನಪಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎನ್ನುವ ಅತ್ಯಂತ ಶಿಸ್ತು ಬದ್ಧ ಸಂಘಟನೆಯೊಂದರ ಒಡನಾಟ ನನಗೆ ಹೀಗೆ ಆರಂಭವಾಗಿತ್ತು.

ಸ್ನೇಹ ಪ್ರೀತಿಗೆ ತಿರುಗಿತು ಎನ್ನುತ್ತಾರಲ್ಲಾ? ಹಾಗೆಯೇ,ಶಾಖೆಯ ಜತೆಗಿನ ಒಡನಾಟ ಹೆಚ್ಚಿದಂತೆಲ್ಲಾ ಅದರ ಮೇಲಿನ ಪ್ರೀತಿ ಜಾಸ್ತಿಯಾಗಲು ಶುರುವಾಯ್ತು. ನಮಗಾರಿಗೂ ಅರಿವೇ ಇಲ್ಲದಂತೆ ಶಾಖೆ ನಮಗೆ ಇಷ್ಟವಾಗಲು ಶುರುವಾಯ್ತು. ಐದು ವರ್ಷದ ಮಕ್ಕಳು, ಇಪ್ಪತ್ತು ವರ್ಷದ ಯುವಕರಿಂದ ಹಿಡಿದು ಎಪ್ಪತ್ತು ವರ್ಷದ ಮುದುಕರೂ ಅಲ್ಲಿದ್ದರು. ಎಲ್ಲ ವರ್ಗದ ಜನರು ಸೇರಿ, ತಮ್ಮ ಜಾತಿ, ಮನೆ, ಮಠ,ವೈಯಕ್ತಿಕ ಜಂಜಾಟಗಳನ್ನೆಲ್ಲಾ ಮರೆತು ಭಿನ್ನ ಭಿನ್ನ ಆಟಗಳನ್ನು ಆಡುವುದು ಒಂಥರಾ ಮುದ ನೀಡುತ್ತಿತ್ತು. ಅದರಿಂದಾಗಿ ನಮ್ಮ ನಮ್ಮೊಳಗೆ ಹೊಸ ಬಾಂಧವ್ಯವೂ ಮೂಡ ತೊಡಗಿತು. ಅಲ್ಲಿ ಶಾರೀರಿಕವಾಗಿ ಆಡುವ ಲಗೋರಿ, ಕಬಡ್ಡಿ ಮುಂತಾದ ದೇಸೀ ಆಟಗಳ ಜೊತೆಗೆ ನಮ್ಮ ಬುದ್ಧಿ ಮಟ್ಟವನ್ನು ಹೆಚ್ಚಿಸುವ, ಏಕಾಗ್ರತೆಗೆ ಸವಾಲೊಡ್ಡುವ ರಾಮ-ರಾವಣ ಮುಂತಾದ ಸಾಂಪ್ರದಾಯಿಕ ಆಟಗಳೂ ಅಲ್ಲಿತ್ತು.

ಈ ಎಲ್ಲಾ ಆಟಗಳಿಗಿಂತಲೂ ಹೆಚ್ಚಾಗಿ  ಸಂಘ ನಮಗೆ ಕಲಿಸಿದ್ದು, ಶಿಸ್ತನ್ನು, ನಾಯಕತ್ವವನ್ನು. ಶಾಖೆಯಲ್ಲಿ ಮುಖ್ಯವಾಗಿ ಎರಡು ಜವಾಬ್ದಾರಿಗಳಿವೆ. ಒಂದು ಮುಖ್ಯ ಶಿಕ್ಷಕ್. ನಿತ್ಯದ ಶಾಖೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು, ಅದಕ್ಕೆ ಸಂಬಂಧಿಸಿದ ಆದೇಶಗಳನ್ನು ನೀಡುವುದು ಆತನ ಜವಾಬ್ದಾರಿ. ಇವತ್ತಿನ ಸ್ಪರ್ಧಾತ್ಮಕ ಜಗತ್ತಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಲೀಡರ್’ಶಿಪ್ ಗುಣಗಳನ್ನು ಮತ್ತು ಮ್ಯಾನೇಜ್’ಮೆಂಟ್ ಕಲೆಗಳನ್ನು ಇದು ನಮಗೆ ಅದರಷ್ಟಕೆಯೇ ಕಲಿಸುತ್ತದೆ. ಮತ್ತೊಂದು, ಪ್ರಾರ್ಥನಾ ಪ್ರಮುಖ್. ನಿತ್ಯದ ಶಾಖೆಯ ಕೊನೇಗೇ “ನಮಸ್ತೇ ಸದಾ ವತ್ಸಲೇ..”ಎನ್ನುವ ಪ್ರಾರ್ಥನೆಯನ್ನು ಗಟ್ಟಿಯಾಗಿ ಹಾಡುವುದು ಆತನ ಕೆಲಸ. ನಾಲ್ಕು ಜನರ ಮುಂದೆ ನಿಂತು ಮಾತನಾಡುವ ಆತ್ಮವಿಶ್ವಾಸವನ್ನು,ಧೈರ್ಯವನ್ನು ಇದು ನಮಗೆ ಕೊಡುತ್ತದೆ. ಇವಲ್ಲದೆ “ಅಗ್ರೇಸರ”ಮುಂತಾದ ಸಣ್ಣ ಪುಟ್ಟ ಜವಾಬ್ದಾರಿಗಳೂ ಸಂಘದಲ್ಲಿದೆ. ಇದರ ಜೊತೆ ಜೊತೆಗೇನೇ, ಶಿಸ್ತು ಬದ್ಧವಾಗಿ ಕುಳಿತುಕೊಳ್ಳುವುದು ಹೇಗೆ, ಇನ್ನೊಬ್ಬರ ಜೊತೆಗೆ ವ್ಯವಹರಿಸುವುದು ಹೇಗೆ, ಶಿಸ್ತು ಬದ್ಧವಾಗಿ ಸಮವಸ್ತ್ರ ಧರಿಸುವುದು ಹೇಗೆ, ಸ್ವಲ್ಪವೂ ವ್ಯತ್ಯಾಸವಾಗದಂತೆ ಮಾರ್ಚ್ ಫಾಸ್ಟ್ ಮಾಡುವುದು ಹೇಗೆ ಎಂಬುದನ್ನೆಲ್ಲಾ ಸಂಘವು ನಮಗೆ ಇನ್ಯಾವುದೇ ಮ್ಯಾನೇಜ್’ಮೆಂಟ್ ಕೋರ್ಸುಗಳಿಗಿಂತಲೂ,ಕಾರ್ಪೋರೇಟ್ ಕಂಪನಿಗಳಿಗಿಂತಲೂ ಮೊದಲೇ ಹೇಳಿ ಕೊಟ್ಟಿದೆ ಎಂದರೆ ನೀವು ನಂಬಲೇ ಬೇಕು.

ಆಟಗಳೆಲ್ಲವೂ ಮುಗಿದ ಬಳಿಕ ಕೊನೇಯ ಹತ್ತು ನಿಮಿಷಗಳ ಕಾಲ ವೈಚಾರಿಕ ವಿಷಯಗಳ ವಿನಿಮಯಕ್ಕೆ ಮೀಸಲು. ರಾಜಕೀಯ ದುರುದ್ದೇಶಕ್ಕಾಗಿ ನಮ್ಮ ಪಠ್ಯ ಪುಸ್ತಕಗಳಲ್ಲಿ ಕಡೆಗಣಿಸಲ್ಪಟ್ಟಿದ್ದ ಸುಭಾಶ್ಚಂದ್ರ ಬೋಸ್, ಸ್ವಾಮೀ ವಿವೇಕಾನಂದ, ವೀರ್ ಸಾವರ್ಕರ್, ಭಗತ್ ಸಿಂಗ್,ಚಂದ್ರ ಶೇಖರ ಆಜಾದ್ ಮುಂತಾದ ಅದೆಷ್ಟೋ ವೀರಕಲಿಗಳ ಕುರಿತಾಗಿ ನಾವು ಸವಿಸ್ತಾರವಾಗಿ ಕೇಳಿದ್ದು ಸಂಘದ ಶಾಖೆಗಳಲ್ಲೇ. ನಮ್ಮ ಸರಕಾರ ಅವುಗಳನ್ನೆಲ್ಲಾ ಮುಚ್ಚಿಟ್ಟು ನಮ್ಮನ್ನೆಲ್ಲಾ ವಂಚಿತರನ್ನಾಗಿ ಮಾಡಿದ್ದರೂ ಸಹ ಶಾಖೆಯು ಇವುಗಳನ್ನೆಲ್ಲಾ ಬಗೆದೂ ಬಗೆದೂ ಕೊಡುತ್ತಿತ್ತು. ಆ ಮೂಲಕ ದೇಶಕ್ಕಾಗಿ ನಮ್ಮನ್ನು ನಾವು ಅರ್ಪಣೆ ಮಾಡಿಕೊಳ್ಳಬೇಕು ಎನ್ನುವ ಸ್ಪೂರ್ತಿಯನ್ನು ಕೊಟ್ಟಿದ್ದು ಸಂಘ ಎಂದು ಘಂಟಾಘೋಷವಾಗಿ ಹೇಳಬಲ್ಲೆ.

ಸಂಘದ  ವಿವಿಧ ಸ್ತರಗಳಲ್ಲಿ ಜಾತಿ-ಉಪಜಾತಿಗಳನ್ನು ಮೀರಿ ಮೇಧಾವಿಗಳೇ ತುಂಬಿಕೊಂಡಿದ್ದಾರೆ. ಸೂಕ್ಷ್ಮವಾಗಿ ಗಮನಿಸಿ,ಸಂಘದೊಳಗೆ ಹೆಚ್ಚಾಗಿ ಡಾಕ್ಟರುಗಳು,ಇಂಜಿನಿಯರುಗಳು, ಚಾರ್ಟೆಡ್ ಅಕೌಂಟೆಂಟುಗಳಿದ್ದಾರೆ.  ಲಕ್ಷಗಟ್ಟಲೆ ಸಂಬಳ ತಂದು ಕೊಡುತ್ತಿದ್ದ ಕೆಲಸವನ್ನು ಬಿಟ್ಟು ಪ್ರಚಾರಕರಾಗಿ ದುಡಿಯುವ ಸಾವಿರಾರು ಮಂದಿಯಿದ್ದಾರೆ. ಸಂಘದೊಳಗೆ ಶಿಕ್ಷಕರಿದ್ದಾರೆ, ಸಾಹಿತಿಗಳಿದ್ದಾರೆ,ಕೃಷಿಕರಿದ್ದಾರೆ, ಜನ ಸಾಮಾನ್ಯರೂ ಇದ್ದಾರೆ. ಸಂಘದೊಂದಿಗಿನ ಹದಿನಾಲ್ಕು  ವರ್ಷಗಳ ಒಡನಾಟದ ಅನುಭವದೊಂದಿಗೆ   ಹೇಳುವುದಾದರೆ“ಸಜ್ಜನರ ‘ಸಂಘ’ವಿದು ಹೆಜ್ಜೇನು ಸವಿದಂತೆ” ಎಂದು ಹೇಳುವುದಕ್ಕೆ ಆರೆಸ್ಸೆಸ್ಸಿಗಿಂತ ಉತ್ತಮವಾದ ಸಂಘಟನೆ ಮತ್ತೊಂದಿಲ್ಲ.

ಆದರೆ ದೇಶದ ಬಹಳಷ್ಟು ಜನ ಸಂಘದ ಬಗ್ಗೆ ಪೂರ್ವಾಗ್ರಹಪೀಡಿತರಾಗಿದ್ದಾರೆ. ಸಂಘದ ಸ್ವಯಂಸೇವಕರನ್ನು ಚಡ್ಡಿಗಳು, ಸಂಘಿಗಳೆಂದು ಹೀಯಾಳಿಸುವವರಿದ್ಡಾರೆ. ವೋಟು ಬ್ಯಾಂಕಿನ ಕಾರಣಕ್ಕಾಗಿ ಆರೆಸ್ಸಿಸ್ಸಿನವರು ಕೋಮುವಾದಿಗಳೆಂಬ ಗಂಭೀರ ಆರೋಪ ಮಾಡುವವರೂ ಇದ್ದಾರೆ.ಇವರಿಗೆಲ್ಲಾ ನಾನು  ಒಂದು ಕ್ಷಣ ಸಂಘದಿಂದ ಆಚೆ ನಿಂತು ಉತ್ತರ ಕೊಡುತ್ತೇನೆ. “ನೋಡಿ, ಸಂಘ ಯಾವತ್ತೂ ಕೋಮುವಾದಿಯಲ್ಲ. ಉಳಿದ ಧರ್ಮಗಳನ್ನು ದ್ವೇಷಿಸು, ಅವರನ್ನು ಹಿಂಸಿಸು ಅಂತ ಶಾಖೆಯು ನಮಗೆಂದೆಂದೂ ಹೇಳಿ ಕೊಟ್ಟಿಲ್ಲ, ಮುಂದೆಯೂ ಹಾಗೆ ಹೇಳಲ್ಲ. ಆದರೆ ನಮ್ಮ ಸುದ್ದಿಗೆ ಬಂದರೆ ಸುಮ್ಮನಿರಬೇಡ, ನಮ್ಮ ಸಹೋದರರನ್ನು ಕೆಣಕಿದರೆ ಕೈಕಟ್ಟಿ ಕುಳಿತುಕೊಳ್ಳಬೇಡ ಎನ್ನುವ ಧೈರ್ಯವನ್ನು ಸಂಘ ನಮಗೆ ಕೊಟ್ಟಿದೆ. ಇಲ್ಲಾ ಅಂತ ಹೇಳಲ್ಲ, ಬೇರೆ ಎಲ್ಲಾ ಸಂಘಟನೆಗಳಲ್ಲೂ ಇರುವಂತೆ ಸಂಘದಲ್ಲೂ ಕೆಲವೇ ಕೆಲವರು ಸ್ವಾರ್ಥ ಮನೋಭಾವದ, ಬೇಳೆ ಬೇಯಿಸಿಕೊಳ್ಳುವ ವ್ಯಕ್ತಿಗಳಿದ್ದಾರೆ. ಎಲ್ಲೋ ಒಮ್ಮೊಮ್ಮೆ ನಡೆಯುವ ಸಭೆಗಳಲ್ಲಿ ಇವರುಗಳು ಆಕ್ರೋಶಭರಿತರಾಗಿ   ದ್ವೇಷ ತುಂಬುವ ಭಾಷಣಗಳನ್ನು ಮಾಡಿದರೂ ಅದು ಸಂಘದ ಧ್ಯೇಯೋದ್ದೇಶವಲ್ಲ. ಪ್ರಾಚಿ ಸಿಂಗ್, ಗಿರಿರಾಜ್ ಸಿಂಗ್’ಗಳೇ ಸಂಘದ ಮುಖವಾಣಿಯಲ್ಲ.ಇದೆಲ್ಲಕ್ಕಿಂತ ಮಿಗಿಲಾದ,ಉತ್ಕಷ್ಠವಾದ ಧ್ಯೇಯೋದ್ದೇಶಗಳು ಸಂಘಕ್ಕಿರುವಾಗ ಇಲ್ಲ ಸಲ್ಲದ ವಿವಾದಗಳನ್ನು ಮೈಗೆಳೆದುಕೊಂಡು,ದೇಶದೆಲ್ಲೆಡೆ ಕೋಮು ಗಲಾಟೆಗಳನ್ನು ನಡೆಸಿ ದೇಶವನ್ನು ಮತ್ತೆ ಒಂದು ದಶಕ ಹಿಂದಕ್ಕೆ ಕೊಂಡೊಯ್ಯುವ ದರ್ದು ಸಂಘಕ್ಕಿಲ್ಲ.  ಐದು ವರ್ಷದ ಹಿಂದೆ ನನ್ನ ಕಾಲೇಜಿನಲ್ಲಿ ಸಂಘದ ವಾರ್ಷಿಕ ರಾಷ್ಟ್ರೀಯ ಪ್ರತಿನಿಧಿ ಸಭಾ ನಡೆದಿದ್ದಾಗ ಅದರಲ್ಲಿ ಸ್ವಯಂ ಸೇವಕನಾಗಿ  ಭಾಗವಹಿಸುವ ಅವಕಾಶ ನನಗೆ ದೊರಕಿತ್ತು. ಆವಾಗ ಮೋಹನ್ ಭಾಗವತ್, ಸುದರ್ಶನ್, ಅಶೋಕ್ ಸಿಂಘಾಲ್. ಸುರೇಶ್ ಭಯ್ಯಾಜಿ ಜೋಷಿ, ಮುಂತಾದ ಹಿರಿಯರೊಂದಿಗೆ ಒಡನಾಡುವ ಅವಕಾಶಗಳ ಜೊತೆಗೆ ಸಂಘದ ವಾರ್ಷಿಕ ನೀತಿ ನಿರೂಪಣೆಯನ್ನು ನಿರ್ಧರಿಸುವಂತಹ ಮಹತ್ವದ ಕೆಲಸಗಳನ್ನು ಅತೀ ಹತ್ತಿರದಿಂದ ಕಾಣುವ ಸುಸಂದರ್ಭ ನನಗೊದಗಿತ್ತು. ದೇಶದ ಅಭಿವೃದ್ಧಿಗೆ ಪೂರಕವಾಗುವಂತಹ ಅಜೆಂಡಾಗಳನ್ನು ಬಿಟ್ಟರೆ ಕೋಮುವಾದದ ಲವಲೇಷವೂ ಅಲ್ಲಿರಲಿಲ್ಲ.

ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಬಹಳಾನೇ ಸುಲಭ. ಮಾವಿನ ಹಣ್ಣು ಸಿಹಿಯಾಗಿದೆಯೇ, ಹುಳಿಯಾಗಿದೆಯೇ ಎನ್ನಲು ಅದನ್ನು ತಿಂದರೆ ಮಾತ್ರ ಸಾಧ್ಯವಲ್ಲವೇ? ಹಾಗೆಯೇ ಸಂಘವೆಂದರೆ ಏನು ಎನ್ನುವುದು ನಮಗರಿವಾಗಬೇಕಾದರೆ ಒಮ್ಮೆ ಅದರೊಳಗೆ ಬಂದರೆ ಮಾತ್ರ ಸಾಧ್ಯ.  ಅಷ್ಟಕ್ಕೂ ಈ ಥರ ಆರೋಪ ಮಾಡುವವರೆಂದೂ ಸಮಾಜದ ಒಳಿತಿಗಾಗಿ ಎಂದಿಗೂ ಕೆಲಸ ಮಾಡುವುದಿಲ್ಲ. ಇಂತವರು ಆರೋಪಗಳನ್ನು ಮಾಡುತ್ತಿರುವಾಗಲೇ ಸಂಘದ ಸ್ವಯಂಸೇವಕರು ಬರ ಪೀಡಿತರಿಗೆ ನೆರವಾಗುವಲ್ಲೋ, ಅತಿವೃಷ್ಟಿಯಿಂದ ತೊಂದರೆಗೊಳಗಾದವರಿಗೆ ಸಹಾಯ ಮಾಡುವಲ್ಲೋ ಇಲ್ಲಾ ಭೂಕಂಪ ಪೀಡಿತರನ್ನು ರಕ್ಷಿಸುವಲ್ಲೋ ತಮ್ಮ ಪಾಡಿಗೆ ತಾವು ಬ್ಯುಸಿಯಾಗಿರುತ್ತಾರೆ.  ಇಷ್ಟರ ಮೇಲೆಯೂ ಆರೆಸ್ಸೆಸ್ಸನ್ನು ಕೋಮುವಾದಿಗಳ ಸಂಘವೆಂದು ಕರೆಯುವುದಾದರೆ ನಾನೂ ಒಬ್ಬ ಕೋಮುವಾದಿಯೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ.

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post