X

ಗಿಲ್ಲಗಿಲ್ಲಗಿಲ್ಲ.ಗಿಲ್ಲೀ…..

“ಏಯ್ ಹೋಗೊ ನಾ ಗಿಲ್ಲಿ ಹೊಡದ್ದಿ.  ಅದೂ ಮೂರ್ ಸರ್ತಿ.  ನೀ ನೋಡಿದ್ದಿಲ್ಲೆ.  ಅದಕೆ ಯಾ ಎಂತ ಮಾಡ್ಲಿ.  ಯಂಗೊತ್ತಿಲ್ಲೆ.  ಯಂಗೆ ಪಾಯಿಂಟ ಕೊಡದೇಯಾ.  

ಅಲ್ಲ್ದನ ರಾಮು.  ನೀ ಯನ್ನ ಪಾಟಿ೯ ಹೌದ ಅಲ್ಲ್ದ.  ಹೇಳು ಮತೆ.

ಏ…. ಹೋಗೆ ಯಾ ಎಂತ ಹೇಳ್ತ್ನಿಲ್ಲೆ.  ಆ ದಿನ ಯಂಗೆ ಒಂದು ಪೇರಲೆ ಹಣ್ಣು ಕೊಡು ಅಂದರೆ ಕೊಟ್ಯನೆ ನೀನು.  ಯನ್ನ ಎದುರಿಗೆ ಚಪ್ಪರಿಸಿಕಂಡ ತಿಂದೆ.  ಈಗ ಆ ಬೇಕ.  ಯಂಗೊತ್ತಿಲ್ಲೆ.

ಹೂಊ……ಹೂಊ..‌‌‌‌..  ಆಯೀ.‌.‌.‌.‌..ನೋಡೆ……”

ಎಲ್ಲಿ ಹೋದವು ಆ ದಿನಗಳು.  ಕಳೆದುಕೊಂಡ ಮುತ್ತಿನ ಮಣಿಗಳಂತ ಕ್ಷಣಗಳು!

ಈ ದಿನ ಒಬ್ಬಳೆ ಮನೆಯಲ್ಲಿ.  ಹೀಗೆ ಗೋಡೆಗೆ ಒರಗಿ ಬೇಜಾರಿಂದ ಆಕಾಶದ ಕಡೆ ಮುಖ ಮಾಡಿ ಕೂತಿದ್ದೆ.  ಮನಸ್ಸು ಊರಿನ ಕಡೆ ವಾಲಿತ್ತು.  ಹಳೆಯ ಸುಮಧುರ ನೆನಪುಗಳು  ಧಾಳಿ ಇಡುವುದು ಇಂಥ ವೇಳೆಯಲ್ಲೆ ಅಲ್ಲವೆ?

ನನ್ನೂರು ಹಳ್ಳಿ ನೆನಪಾದರೆ ಓಡಿ ಹೋಗಿ ಬಿಡಲೆ ಒಮ್ಮೆ.  ಆ ಗದ್ದೆ ತೋಟ ಸುತ್ತಾಡಿ ಬರಲೆ ಅನ್ನಿಸಿ ಕಣ್ಣು ಮಂಜಾಗುತ್ತದೆ. ಆಯಿಯ ನೆನಪು ಕಾಡುತ್ತದೆ.  ಈ ಬೆಂಗಳೂರಿನ ಬೆಂಗಾಡಿನ ಧಗೆಯಲ್ಲಿ ಸುತ್ತಿಕೊಂಡ ಸಂಸಾರದ ನೊಗ ಹೇರಿಕೊಂಡ ದಿನದಿಂದ ನನ್ನೂರ ಹಾದಿ ಬೀದಿಗಳಲ್ಲಿ ನಡೆದಾಡುವ ಕ್ಷಣಗಳು ಕನಸಾಗಿ ಹೋಗಿವೆ.ಇದು ನನಗೊಬ್ಬಳಿಗೇ ಅಲ್ಲ.  ಗೊತ್ತು.  ಆದರೂ ನನ್ನೊಳಗೆ ಇರುವುದು ನಾನೊಬ್ಬನೆ, ನನಗೆ ನಾನೆ ಹೆಚ್ಚು.  ಅಲ್ಲಿ ಬರುವ ಯೋಚನೆ ,ವಿಚಾರ,ಭಾವನೆ,ತುಡಿತ,ಮಿಡಿತಗಳ ಘಷ೯ಣೆಗೆ ನಾನೊಬ್ಬಳೆ ವಾರಸುದಾರಳು. ಕ್ಷಣ ಬಂಗುರವೆಂಬ ಪಗಡೆಯಾಟದ ಈ ಬದುಕಲ್ಲಿ ಎಷ್ಟೋ ನೆನಪುಗಳು ಬೇಡ ಬೇಡವೆಂದರೂ ಹಾಗೆ ಉಳಿದುಕೊಂಡು ಬಿಡುತ್ತವೆ.  ಆ ನೆನಪೆ ಬರೆಯುವಂತೆ ಮಾಡಿತು.

ನಮ್ಮದು ಮಕ್ಕಳ ಸೈನ್ಯವೆ ಇತ್ತು.  ಆಟ ಆಡೋದಕ್ಕೆ ಹೊತ್ತಿಲ್ಲ ಗೊತ್ತಿಲ್ಲ.  ಅದರಲ್ಲೂ ನನ್ನಪ್ಪ ಮನೇಲಿ ಇಲ್ಲ ಅಂದರೆ ನಮಗೆ ಹಬ್ಬ.  ಯಾಕೆ ಗೊತ್ತಾ ಬರಿ ಬಯ್ಯೋದು.  ಬರಿ, ಓದು, ಮನೆಯಲ್ಲಿ ಇರಬೇಕು.  ಕೆಲಸ ಕಲಿರಿ.  ನನಗಂತೂ ಆಟ ಆಡೋದು ಅಂದರೆ ಎಲ್ಲಿಲ್ಲದ ಉಮೇದಿ.  ಅದರಲ್ಲೂ ಚಿನ್ನಿ ಆಟ ಸಖತ್ ಇಷ್ಟ‌.  ಆ ಗಂಡುಮಕ್ಕಳನ್ನೂ ಹಿಂದೆ ಹಾಕಿ ಗಿಲ್ಲಿ ಹೊಡಿತಿದ್ದೆ.  ಎಷ್ಟು ದೂರ ಗಿಲ್ಲಿ ಬಿತ್ತೊ ಅಲ್ಲಿವರೆಗೆ ಕೋಲಲ್ಲಿ ಅಳೆಯೋದು ಕರಾರುವಕ್ಕಾಗಿ.  ಅಲ್ಲಿ ಎರಡು ಪಾಟಿ೯.  ನಾ ಯಾವಾಗಲೂ ಗಂಡು ಮಕ್ಕಳ ಪಾಟಿ೯.

ಹಾ.‌‌‌….  ಗಿಲ್ಲಿ ಅಂದರೆ ಚಿನ್ನಿ ದಾಂಡು.  ಈಗಿನ ಸಿಟಿ ಮಕ್ಕಳಿಗೆ ಗೊತ್ತಿರಲಿಕ್ಕಿಲ್ಲ.  ಚಿನ್ನಿ ನೆಲದ ಮೇಲೆ ಸಣ್ಣ ಕಲ್ಲಿನ ಮೇಲೆ ಮೂತಿ ಹೊರಗೆ ಬರುವ ಹಾಗೆ ಇಟ್ಟು ದಾಂಡು ಅಂದರೆ ಒಂದು ಹನ್ನೆರಡು ಇಂಚಷ್ಟಿರುತ್ತೆ ಕೋಲು.  ಅದರಿಂದ ಚಿನ್ನಿ ಮೂತಿ ಎಗರಿಸಿ ಒಂದು, ಎರಡು, ಮೂರು ಹೀಗೆ ಒಂದೆ ಏಟಿಗೆ ಹೊಡೆದು ದೂರ ಹೋಗಿ ಬೀಳುವಂತೆ ಮಾಡೋದು.  ಈ ಥರ ಹೊಡೆದರೆ ಗಿಲ್ಲಿ ಅಂತ ಕರೆಯೋದು.  ಪಾಯಿಂಟ್ ಜಾಸ್ತಿ.

ಅಡಿಗೆ ಆಟ : ಆಟದಲ್ಲಿ ಗಿಡಗಳ ಎಲೆ ಕಿತ್ತು ಗೊಜ್ಜು, ಚಟ್ನಿ, ಚಕ್ಕುಲಿ ಮಾಡಲು ಹೋಗಿ “ಚ್ವಾರಟೆ”(ಪ್ರಾಣಿ)ಹಿಡಿದು ಕರಟೆಯಲ್ಲಿ ಬಂಧಿಸಿ ಇಡುವ ಕಸರತ್ತು.  ಒಂದಿನ ನಿಜವಾಗಲೂ ಒಲೆ ಹೂಡಿ ಬೆಂಕಿ ಕಡ್ಡಿ ಗೀರಿ ಇನ್ನೇನು ಹುಲ್ಲಿನ ಬಣವೆಗೆ ಬೆಂಕಿ ಬೀಳೋದರಲ್ಲಿತ್ತು.  ಅಷ್ಟರಲ್ಲಿ ಜಾನಕ್ಕಜ್ಜಿ ನೋಡಿ ಕೂಗಾಕ್ಕಂಡು ನೀರು ಹೊಯ್ದಿದ್ದು.  ಅಬ್ಬಾ ಎಷ್ಟು ನೆನಪುಗಳು.

ಒಂದಿನ ಏನಾಯ್ತು ಗೊತ್ತಾ?  ಸುಮಾರು ಹದಿನೈದು ಜನ ಮಕ್ಕಳೆಲ್ಲ ಸೇರಿ ಎರಡು ಪಾಟಿ೯ ಮಾಡಿಕೊಂಡು ಲಗೋರಿ ಆಟ ಕೊನೆ ಮನೆ ಬಾಗಕ್ಕನ ಮನೆ ಸಗಣಿ.ಸಾರಿಸಿ ಮೇಲೆ ಅಡಿಕೆ ಅಟ್ಟ ಹಾಕಿದ ದೊಡ್ಡ ಅಂಗಳದಲ್ಲಿ.  ಒಂದೆರಡು ದೊಡ್ಡ ಗಂಡು ಮಕ್ಕಳೂ ಸೇರಿದ್ರು ನಮ್ಮೊಂದಿಗೆ.  ಸಾಯಂಕಾಲ ಸುಮಾರು ಐದು ಗಂಟೆ.  ಆಟ ನೋಡಲು ಕೆಲವರು ಊರಿನವರೂ ನಿಂತಿದ್ರು.  ಹೀಗೆ ಮೇ ತಿಂಗಳ ರಜೆ.  ಲಗೋರಿ ಆಟದ ಬಿದ್ದ ಕಲ್ಲು ತಕ್ಷಣ ಜೋಡಿಸಬೇಕು ನಮ್ಮನ್ನು ಹೊಡೇಯೋದರಲ್ಲಿ.  ನನ್ನಕ್ಕ ಓಡಿ ಹೋದ ದಿಕ್ಕಲ್ಲಿ ಆಗಷ್ಟೆ ಕೆಲಸ ಮುಗಿಸಿ ಬಂದ ನಮ್ಮನೆ ಆಳು ಕಂಬಳಿ ಕೈ ಮೇಲೆ ಹಾಕ್ಕೊಂಡು ನಿಂತಿದ್ದ.  ಅವನಿಗೆ ಡಿಕ್ಕಿ ಹೊಡೆದಿದ್ದೇ ತಡ ಅಯ್ಯೋ ಅಂತ ಜೋರಾಗಿ ಕಿರುಚಿದ್ದಾಳೆ.  ಬಳ ಬಳ ರಕ್ತ ನೆಲದ ಮೇಲೆ ಬೀಳುತ್ತಿದೆ.  ನೋಡಿದರೆ ಪುಣ್ಯಾತ್ಮನ ಕೈಯ್ಯಲ್ಲಿ ಕತ್ತಿ ಇತ್ತು.  ಕಂಬಳಿ ಸಂಧಿಯಲ್ಲಿ ಕತ್ತಿ ಮೊನೆ ತೂರಿ ಬಂದಿದ್ದು ಅವಳ ಕಣ್ಣಿನ ಹತ್ತಿರ ಚುಚ್ಚಿದೆ.  ಎಂಥ ಘಟನೆ!!  ಯಾರೂ ಊಹಿಸೋಕೂ ಸಾಧ್ಯ ಇಲ್ಲ.  ಕೂದಲೆಳೆಯ ಅಂತರದಲ್ಲಿ ಅವಳ ಕಣ್ಣು ಉಳಿದುಕೊಂಡಿತು.  ಆದರೆ ಈಗಲೂ ಗಾಯದ ಗುರುತಿದೆ.  ಮರೆಯಲಾಗದ ಘಟನೆ.

ಹೀಗೆ ನೋವು ನಲಿವು, ಸಿಟ್ಟಿಂದ ಟೂ ಬಿಡೋದು

ಜಗಳ, ಕೂಗಾಟ ಆಮೇಲೆ ದೊಡ್ಡವರು ಮದ್ಯ ಪ್ರವೇಶಿಸಿ ಜಗಳ ಬಿಡಿಸೋದು “ನಡಿರೆ ಎಲ್ಲ, ಎಂಥಾ ಹೇಳಿ ಆ ಗಂಡು ಮಕ್ಕಳ ಜತಿಗೆ ಆಡ್ತ್ರೆ.  ಇಶಿಶಿ.  ಬರ್ರೆ ಸಾಕು” ಪಕ್ಕದ ಮನೆ ಜಾನಕ್ಕಜ್ಜಿ ಬಯ್ಗಳ.

ಆದರೆ ನಾವ್ಯಾರು ಕ್ಯಾರೇ ಅಂತಿರಲಿಲ್ಲ.  ನಾನಂತೂ ನಮ್ಮಪ್ಪನಿಗೆ ಮಾತ್ರ ಹೆದರುತ್ತಿದ್ದೆ.  ಯಾಕಂದರೆ ಕೋಲಲ್ಲಿ ಹೊಡೆತ ಬೀಳುತ್ತಿತ್ತಲ್ಲ ಅದಕ್ಕೆ.  ಸುಮಾರು ಒಂಬತ್ತನೆ ಕ್ಲಾಸಿನವರೆಗೂ ಆಟ ಆಟ ಆಟ.  ಲಗೋರಿ ಆಟ, ಸೈಕಲ್ ಟೈರ್ ಆಡಲು ಹೋಗಿ ಊರಿನ ಪಟೇಲನ ಕಾಲಿಗೆ ಸಿಕ್ಕಾಕ್ಕಂಡು ಅಪ್ಪನ ಹತ್ತಿರ ಒದೆ ತಿಂದಿದ್ದು, ಈ ಗಲಾಟೆಲಿ ಆಯಿಗೂ ಅಪ್ಪಂಗೂ ಜಗಳ ತಂದಿಟ್ಟಿದ್ದು, ಕಣ್ಣಕಟ್ಟ ಆಟದಲ್ಲಿ  ಅಡಗಿಕೊಳ್ಳೊ ಭರದಲ್ಲಿ ಅಡಿಕೆ ಚೀಲದ ಸಂಧಿಯಲ್ಲಿ ಕಾಲು ಸಿಕ್ಕಾಕ್ಕೊಂಡು ಎಂಟು ದಿನ ಶಾಲೆನೂ ಇಲ್ಲ ಆಟನೂ ಇಲ್ಲ.  ಕಾಲು ಎಳೆದು ತೆಗೆಯಲು ಹೋಗಿ ಮೂಟೆನೆ ಉರುಳಿ ಕಾಲ ಮೇಲೆ ಬಿದ್ದರೆ ಏನಾಗುತ್ತೆ ಹೇಳಿ.  ಸದ್ಯ ಕಾಲು ಮುರದಿಲ್ಲ ಅಂತ ಒದೆ ಕೊಟ್ಟಿಲ್ಲ ಅಪ್ಪ, ಎಲ್ಲೊ ಕರುಣೆನೊ, ಪ್ರೀತಿನೊ ಇಲ್ಲ ಸಾಯಲಿ ಇವಳು ಎಷ್ಟು ಹೇಳಿದರೂ ಕೇಳೋಳಲ್ಲ ಅಂತ ಸುಮ್ಮನಿದ್ದಿರಬೇಕು.

ಆದರೆ ಮನೆಗೆ ಬಂದವರ ಹತ್ತಿರ ನನ್ನ ಆಟದ ಬಗ್ಗೆ ಹೊಗಳುತ್ತಿದ್ದದ್ದು ಸಂಧಿಯಲ್ಲಿ ನಿಂತು ಕೇಳಿಸಿಕೊಂಡಿದ್ದಿದೆ. ಆಗ ನಿಜವಾಗಿ ಅನಿಸಿದ್ದು “ಅಪ್ಪಯ್ಯ ಜೋರಿದ್ದ.  ಆಡಡಾ ಹೇಳ್ತಾ.  ಮತ್ಯಂತಕ್ಕೆ  ಹೆಣ್ಣು ಮಕ್ಕಳಿಗೆ ಮನೇಲಿ ಕೂಡಾಕ್ತಾ? ಮತ್ತೆ ಹೊಗಳ್ತಾ. ” ತಲೆ ಬುಡ ಅಥ೯ ಆಗುತ್ತಿರಲಿಲ್ಲ.  ಸೊಣಕಲ ಕಡ್ಡಿ ನಾ, ಬುದ್ದಿ ಬೆಳೆದಿರಲಿಲ್ಲ, ದೊಡ್ಡೋಳಾಗಿರಲಿಲ್ಲ, ಓದೊ ಬುದ್ದಿ ಮೊದಲೆ ಇಲ್ಲ.  ಆಟವೇ ನನ್ನ ಲೋಕ.  ಏನೇ ಇದ್ದರೂ ಆಯಿ ಮಡಿಲಲ್ಲಿ ಮಲಗಿ ಅತ್ತು ಸಮಾಧಾನ ಮಾಡಿಕೊಳ್ಳುತ್ತಿದ್ದೆ.

ಆದರೆ ಈಗ ಆತರ ತರಲೆ ಆಟ ಕನಸು.  ಆಯಿನೂ(ಅಮ್ಮ)ಇಲ್ಲ, ಅವಳಿಲ್ಲದ ಆ ಊರಿಗೆ ಹೋದರೆ ಮನಸ್ಸಿನ ಮೂಲೆಯಲ್ಲಿ ದುಃಖ ಉಮ್ಮಳಿಸುತ್ತೆ.  ಬರೀ ನೆನಪೊಂದೆ ಸಂಗಾತಿ ಆಗಾಗ ಕಣ್ಣು ಮಂಜಾಗಲು.  ಅದಕ್ಕೆ ಎಲ್ಲ ನೆನಪಿಗೂ ಇರಲಿ ಎಂದು ನನ್ನ ಹಳ್ಳಿ ಹೆಸರು  ನನ್ನ ಹೆಸರಿನ ಜೊತೆ ಜೋಡಿಸಿಕೊಂಡೆ!

-ಸಂಗೀತಾ ಕಲ್ಮನೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post