ಕಾರ್ಮೋಡದ ಹೊನಲಿನ ಸುಳಿಯಲಿ
ಮುಳುಗಿದ ತಿಳಿ ಚಂದಿರನ
ಮಾಸಿದ ಮುಗ್ಧ ಮುಗುಳ್ನಗುವಿಗೆ,
ಅವನೊಡಲಿನಲಿ ಬಚ್ಚಿಟ್ಟು
ಕದ್ದು ಜತೆಗೊಯ್ದ ಸುಂದರ ಸ್ವಪ್ನಗಳಿಗೆ,
ದೂರದಲೆಲ್ಲೋ ಕಾಣದೆ ಅಡಗಿ,
ಕುಳಿತಿಹ ನೇಸರನ ಸುಡುಮೌನಕೆ,
ನೀ ಉತ್ತರವಾಗುವೆಯಾ?!
ಬೆಳಕದುವು ಮಾಯವಾಗಿ,
ಮಳೆಯ ತರುವುದೋ?
ಸಾವಿನ ನೆರೆಯ ತರುವುದೋ?
ಜತೆ ಗುಡುಗುಮ್ಮನು ನೀಲಾಕಾಶದಿ
ಮಧುರ ಹಿಮ್ಮೇಳವಾಗಿಹನೋ?
ಮರಣ ಮೃದಂಗವಾಗಿಹನೋ?
ಕಣ್ಣಂಚಲಿ ಹುಟ್ಟಿ ಬಿಸಿಯುಸಿರಲಿ
ಕೊನೆಯಾಗುವ ನೂರೆಂಟು ವಿಹ್ವಲಗಳಿಗೆ
ನೀ ಉತ್ತರವಾಗುವೆಯಾ?!
ರಭಸದಿ ಗಾಳಿಯು ಬೀಸಿದೊಡೆ
ಸಕಲ ಪಶುಪಕ್ಷಿ-ತರುಲತೆಗಳು,
ನಲಿದು ನರ್ತಿಸುವವೋ?
ನಲುಗಿ ನರಳುವವೋ?
ಮಣ್ಣ ಸುಗಂಧವು ಕಟ್ಟಿಕೊಡುವುದು
ಚೈತ್ರದ ಸೊಗಸೋ? ಅಂತ್ಯದ ನೆನಪೋ?
ಭೋರ್ಗರೆಯುತ ದಡಕೆ ಅಪ್ಪಳಿಸುವ
ಅಲೆಯ ಆಲಿಂಗನವೆನ್ನಲೋ?
ಎಲ್ಲೆಯ ಉಲ್ಲಂಘನವೆನ್ನಲೋ?
ಚಡಪಡಿಕೆಯ ಬಿಸಿಲೊಳು ಮನದಿ,
ಇಂತು ಕುದಿಯುತಿಹ ಜಿಜ್ಞಾಸೆಗಳಿಗೆ
ನೀ ಉತ್ತರವಾಗುವೆಯಾ?!!
-ಪ್ರಸಾದ್ ಸಿದ್ಧೇಶ್ವರ್
Facebook ಕಾಮೆಂಟ್ಸ್