ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೫

_______________________________

ಹಳೆಯ ಭಕ್ತಿ ಶ್ರದ್ಧೆಯಳಿಸಿಹೋಗಿವೆ ಮಾಸಿ |

ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ ||

ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ |

ತಳಮಳಿಸುತಿದೆ ಲೋಕ – ಮಂಕುತಿಮ್ಮ ||

ಪರಂಪರೆಯೆನ್ನುವುದು ಪೀಳಿಗೆಯಿಂದ ಪೀಳಿಗೆಗೆ ಹರಿದು ಬರಬೇಕಾದ ಅಮೃತ ರಸ – ಹಾಗೆ ಬರುವಾಗ ತನ್ನಂತಾನೆ ಹೊಸತಿಗೆ ಅಳವಡಿಸಿಕೊಳ್ಳುತ್ತ, ಹೊಂದಿಸಿಕೊಳ್ಳುತ್ತ – ‘ಹಳೆ ಬೇರು, ಹೊಸ ಚಿಗುರು’ ಎನ್ನುವ ಹಾಗೆ. ಆದರೆ ಈ ಕಲಿಯುಗದ ಮಹಿಮೆಯೊ, ಕಾಲಧರ್ಮದ ಪ್ರಭಾವವೊ – ಪೀಳಿಗೆ ಪೀಳಿಗೆಗೆ, ಸಂತತಿ ಸಂತತಿಗೆ ಆ ಹಳತಿನ ಕುರಿತಾದ ಗೌರವ, ಶ್ರದ್ಧೆ, ಆದರ, ಭಕ್ತಿಗಳು ಕುಗ್ಗುತ್ತಾ, ಮಾಸುತ್ತ ಅದರ ಬದಲು ಆಧುನಿಕತೆಯ ಅಂಧಾನುಕರಣೆ, ಹಳತಿನ ಅವಹೇಳನ ಮಾಡುವ ಮನೋಭಾವಗಳು ನೆಲೆಯೂರುತ್ತಿವೆ.

ಅಪ್ಪ ಹಾಕಿದ ಆಲದ ಮರದಂತೆ ಹಳತಿಗೆ ಜೋತುಬಿದ್ದ ನಿಂತ ನೀರಾಗಬಾರದು ಎನ್ನುವುದು ನಿಜವಾದರೂ, ಹಳತೆಲ್ಲ ಹಿಂದೆ ಸರಿಯುತ್ತಿರಬೇಕಾದರೆ, ಅದರ ಮೀರಿಸುವ ಅಥವಾ ಕನಿಷ್ಠ ಅದರದೆ ಸಮಾನ ಬಲದ ಹೊಸ ದರ್ಶನ, ಸಿದ್ದಾಂತ, ತಿಳುವಳಿಕೆ, ಜ್ಞಾನದ ಆಸರೆಯೀವ ಹೊಸತೊಂದರ ಸಹಚರ್ಯೆಯಿರಬೇಕಲ್ಲವೆ? ಹೊಸತಿನ ಖಚಿತ ಸಿದ್ದಾಂತದ, ಮಾರ್ಗದರ್ಶನದ ಸುಳಿವೆ ಕಾಣುತ್ತಿಲ್ಲವಾದರೂ ಹಳತನ್ನೆಲ್ಲ ಒದರೆಸೆದುಬಿಟ್ಟು ಹೊಸತರಂತೆ ಕಾಣುವ ಯಾವಾವುದೊ ದಾರಿಯತ್ತ ಹಿಂದೆ ಮುಂದೆ ನೋಡದೆ ಮುನ್ನುಗ್ಗುವುದು ಸರಿಯೆ ? ಎನ್ನುವ ಪ್ರಶ್ನೆ ಕವಿಯದು. ಈ ರೀತಿಯ ಮಾನಸಿಕ ತಳಮಳ ಈಗಲೂ ನಮ್ಮ ಮನಗಳಲ್ಲಿ ಜೀವಂತವಾಗಿರುವ ಪರಿ ನೋಡಿದರೆ, ಈ ರೀತಿಯ ಹಳತು – ಹೊಸತರ ತಿಕ್ಕಾಟದ ಸದ್ದು ಪೀಳಿಗೆಗಳಾಚೆಗೂ ಸದಾ ನಿರಂತರವಾಗಿ ಹರಿಯುವ ಅಂತರಗಂಗೆಯೇನೊ ಎನಿಸದಿರದು.

ಆದರೆ ಈ ಪರಿಸ್ಥಿತಿಗೆ ಸಿಕ್ಕಿಬಿದ್ದ ಮನಗಳ ಸ್ಥಿತಿಯಾದರೂ ಎಂತದ್ದೆನ್ನುವುದನ್ನು ಕವಿ ಎಷ್ಟು ಸೊಗಸಾಗಿ ‘ಕುಂಟ ಕುರುಡ’ನ ಪ್ರತಿಮೆಯಲ್ಲಿ ಹಿಡಿದಿಡುತ್ತಾರೆ ನೋಡಿ? ನಮ್ಮ ಯಾವುದೇ ಹೆಜ್ಜೆ, ನಡಿಗೆಗೆ ಮುಖ್ಯವಾದ ಬಾಹ್ಯಾಂಗಗಳೆಂದರೆ ಕಣ್ಣು ಮತ್ತು ಕಾಲು. ಕಣ್ಣು ದಿಕ್ಕುದೆಸೆಯನ್ನು ಅವಲೋಕಿಸಿ ಎತ್ತ ಹೋಗಬೇಕೆಂಬ ನಿರ್ಧಾರಕ್ಕೆ ಪೂರಕ ಅಂಶಗಳನ್ನೊದಗಿಸಿದರೆ, ಅದರ ಆಧಾರದ ಮೇಲೆ ಮತ್ತು ಪೂರಕವಾಗಿ ಕಾಲು ಹೆಜ್ಜೆಯಿಡಲು ಸಾಧ್ಯವಾಗುತ್ತದೆ. ಆದರೆ ಕುಂಟತನ, ಕುರುಡುತನದಿಂದ ಬಾಧಿಸಲ್ಪಟ್ಟವರಿಗೆ ದಿಕ್ಕು ದೆಸೆ ಕಾಣುವ ಅನುಕೂಲವೂ ಇಲ್ಲ, ನಡೆಯುವ ಸೌಲಭ್ಯವೂ ಇಲ್ಲ. ಅಂತಹವರಿಗೆ ಕ್ಷಿಪ್ರ ಬದಲಾವಣೆಯೆನ್ನುವುದೇ ಒಂದು ಶಾಪವಿದ್ದಂತೆ. ಹಳತಿನ ಆರಾಮವೆನಿಸಿದ್ದ ಪರಿಸರ ಹೇಗಿತ್ತೆಂದರೆ ಕುಂಟ, ಕುರುಡ ಎನಿಸಿಕೊಂಡವರೂ ಸಹ ಯಾವುದೆ ತೊಡಕಿಲ್ಲದೆ ಸರಾಗವಾಗಿ ಅಡ್ಡಾಡಿಕೊಂಡು ಮನೆಯಲ್ಲಿರುವಷ್ಟು. ಸರಳವಿರುವ, ತಲತಲಾಂತರದಿಂದ ಪರಿಚಿತವಿರುವ ಮನೆ-ಪರಿಸರದಲ್ಲಿ (ಅರ್ಥಾತ್ ಹಳತಿನ ಸಂಪ್ರದಾಯ, ನಡೆ, ನುಡಿಗಳಲ್ಲಿ) ಹೇಗೋ ಸಂಭಾಳಿಸಿಕೊಂಡು ನಡೆಯುವವರನ್ನು, ಬದುಕುವವರನ್ನು ಅದರ ಮೂಲ ಬೇರಿನ ಕೊಂಡಿಗೆ ಧಕ್ಕೆಯಾಗದಂತೆ ಅಳವಡಿಸಿಕೊಂಡ ಹೊಸ ಬದುಕಿಗೆ ಜತನದಿಂದ, ನಾಜೂಕಾಗಿ ವರ್ಗಾಯಿಸಬೇಕು. ಅಂದರೆ ಆ ವರ್ಗಾವಣೆಯ ಪ್ರಕ್ರಿಯೆಯಲ್ಲಿ ಹಳೆಯ ಮತ್ತು ಹೊಸ ಸಿದ್ದಾಂತಗಳಿಗೆ ಸ್ವಾಭಾವಿಕವಾದ, ನೈಸರ್ಗಿಕವಾದ ಸೇತುಬಂಧವಿರಬೇಕು – ಆ ವರ್ಗಾವಣೆ, ವರ್ಗಾವಣೆಯೇ ಅಲ್ಲ ಅನಿಸುವ ಮಟ್ಟಿಗೆ.

ಆದರೆ ಆಗುತ್ತಿರುವುದಾದರೂ ಏನು? ಅಲ್ಲಿ ಪಳಗಿದ್ದ, ಅದರಲ್ಲಿ ಹೇಗೊ ಸಮತೋಲನ ಕಂಡುಕೊಂಡು ಜೀವಿಸಿಕೊಂಡಿದ್ದ ಕುಂಟ, ಕುರುಡರು ಹೊಸತಿನ ಆಘಾತಕ್ಕೆ ಸಿಕ್ಕಿ ತತ್ತರಿಸಿ ಹೋಗುತ್ತಿದ್ದಾರೆ. ಹೊಂದಿಕೊಳ್ಳಲಾಗದ, ನಿಭಾಯಿಸಿಕೊಳ್ಳುವುದು ಹೇಗೆಂದು ಗೊತ್ತಿರದ ಹೊಸ ಮನೆಯಲ್ಲಿ ದಿಕ್ಕು ದೆಸೆ ಕಾಣದಂತೆ ಕಂಗಾಲಾಗಿ ಹೋಗಿದ್ದಾರೆ. ಈ ಲೋಕದ ಜನರ ಸ್ಥಿತಿಯೇನೂ ಆ ಕುಂಟ ಕುರುಡರ ಸ್ಥಿತಿಗಿಂತ ಕಡಿಮೆಯಿಲ್ಲ ‘ಅತ್ತಲೂ ಇರುವಂತಿಲ್ಲ, ಇತ್ತಲು ಇರುವಂತಿಲ್ಲ’ ಎಂಬ ‘ಅತ್ತ ದರಿ, ಇತ್ತ ಪುಲಿ’ ಗೊಂದಲದಲ್ಲಿ ಸಿಕ್ಕಿದ ಜಗ, ಆ ಕುಂಟರು, ಕುರುಡರ ಹಾಗೆಯೆ ಕಳವಳಿಸಿ ತಳಮಳಿಸುತ್ತಿದ್ದಾರೆ ಎನ್ನುತ್ತಾನೆ ಮಂಕುತಿಮ್ಮ.

ನಿಗದಿಯಾದ ಪೂರ್ವ ಯೋಜನೆಯಿರದೆ, ಸರಿಯಾದ ದಿಕ್ಕು ದೆಸೆಯನ್ನರಿಯದೆ ಗೊತ್ತು ಗುರಿಯಿರದ ಎತ್ತಲೊ ನಡೆದಂತಿರುವ ಜಗವನ್ನು ಕಂಡು ಕಳವಳದಿಂದ ಹೇಳುತ್ತಿರುವ ಮಾತೆನ್ನುವ ಭಾವ ಒಂದೆಡೆ ಮೊಳಗಿದರೆ, ಹಾಗೆ ನಡೆದಿರುವ ಹಾದಿಗೆ ಇರಬೇಕಾದ ತೀರಾ ಸಾಮಾನ್ಯ ಜ್ಞಾನವೂ ಇರದ ವಿಷಾದ, ಖೇದವೂ ಅಲ್ಲಿ ಮನೆ ಮಾಡಿಕೊಂಡಿದೆ. ಒಂದೆಡೆ ಬಿದ್ದುಹೋಗುತ್ತಿರುವ ಹಳತಿನ ಮೌಲ್ಯವನ್ನು ಅರಿಯದ ಮೂಡರೆಂಬ ಸಂಕಟ ಕಾಡುತ್ತಿದ್ದರೆ, ಮತ್ತೊಂದೆಡೆ ಅದನ್ನು ದೂರ ತಳ್ಳುವ ಅವಸರದಲ್ಲಿ ಅಪ್ಪಿಕೊಳ್ಳುತ್ತಿರುವ ಹೊಸತಿನಲ್ಲಿ ಎಳ್ಳಿಗಿಂತ ಹೆಚ್ಚು ಜೊಳ್ಳೆ ಇದೆಯಲ್ಲಾ ಎನ್ನುವ ನೋವು ಕಾಣಿಸಿಕೊಳ್ಳುತ್ತದೆ ಕವಿ ಭಾವದಲ್ಲಿ. ಹಳತು ಸರಿಯಿಲ್ಲವೆಂಬ ನೈಜ ಕಾರಣಕ್ಕೆ ಹೀಗಾಗಿದ್ದರೆ ಅಷ್ಟೊಂದು ಬೇಸರವಿರುತ್ತಿರಲಿಲ್ಲವೇನೊ – ಆದರಿಲ್ಲಿ ಹಳತನ್ನರಿಯದೆಯೆ ಅದರ ಮೌಲ್ಯಮಾಪನ ಮಾಡದೆಯೆ ತಿರಸ್ಕರ, ಅಸಡ್ಡೆಯಿಂದ ಹೊಸತರತ್ತ ಮುಖ ಮಾಡಿಕೊಂಡು ಹೋದರು, ಅಲ್ಲಿ ಈಗಿರುವುದಕ್ಕಿಂತ  ಉತ್ತಮವಾದದ್ದೇನಾದರೂ ಇರುವುದೆ ಎಂದು ತಾಳೆ ನೋಡಲು ಆಗದಷ್ಟು ಗೊಂದಲವಿರುವೆಡೆ, ಕುರುಡು ಹೆಜ್ಜೆ ಹಾಕಬೇಕಾದ ಅನಿವಾರ್ಯಕ್ಕೆ ತಳಮಳಿಸುವ ಕವಿಭಾವ ಇಲ್ಲಿ ಅನನ್ಯ ರೂಪದಲ್ಲಿ ಪ್ರಕಟವಾಗುತ್ತದೆ – ಲೋಕದ ಕಳವಳದಂತೆಯೆ.

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post
whatsapp
line