X

ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅಷ್ಟೇ…..!

ಸಿದ್ದರಾಮಯ್ಯ ಸರಕಾರಕ್ಕೆ ಮೂರು ವರ್ಷ ತುಂಬಿದೆ. ಸರ್ಕಾರದ ಸಾಧನೆಗಳು ಒಂದಾ ಎರಡಾ ,ಲೆಕ್ಕಮಾಡಲಾಗದಷ್ಟು . ನಾವು ಸಾಧಿಸಿದ್ದೇವೆ ಅಂತಾ ಸರ್ಕಾರವೇ ಜಂಬ ಕೊಚ್ಚಿಕೊಳ್ಳಬೇಕು ಹೊರತು,ಅದೇನು ಸಾಧನೇ ಮಾಡಿದೆಯೋ ಆ ದೇವರಿಗೂ ತಿಳಿದಿದೆಯೋ ಇಲ್ಲವೋ. ಅದೇನೆ ಇರಲಿ ಒಂದಷ್ಟು ನಮಗೆ ತಿಳಿಯದಂತಾ ಸಾಧನೆಗಳನ್ನು ಮಾಡಿರಬಹುದೇನೋ. ಆದರೆ ಅಭಿವೃದ್ಧಿ ಅನ್ನೋ ಪದದ ಅರ್ಥ ಮರೆತೇ ಬಿಟ್ಟಂತಿದೆ. ಇರುವ ವ್ಯವಸ್ಥೆಗಳೇ ಅತಂತ್ರವಾದಂತಿವೆ. ಸದ್ಯ ಮೂರು ಮುಗೀತು, ಇನ್ನೆರಡೇ ಅನ್ನೋ ಅಷ್ಟರಲ್ಲಿ ಸಿಎಮ್ ಕುರ್ಚಿಗೇ ಸ್ವಲ್ಪ ಕಂಟಕ ಬಂದರೂ ಮಾನ್ಯ ಮುಖ್ಯಮಂತ್ರಿಗಳಿಗೆ ಅದೇನೋ ಲಕ್ಕು ಅಂತಾರಲ್ಲಾ ಅದು ಚೆನ್ನಾಗಿಯೇ ಇದೆಯಂತೇ. ಸಂಪುಟ ವಿಸ್ತರಣೇ ಹಾಗೂ ಪುನರ್ ರಚನೆಯಿಂದಾಗಿ ಹೊತ್ತಿದ ಬೆಂಕಿಯಿಂದ ಇತರ ಪಕ್ಷಗಳು ಛಳಿ ಕಾಯಿಸಿಕೊಂಡು ಮೇಲೆದ್ದು ನಿಂತಿದ್ದಾವೆ. ಮುಂದಿನ ಚುಣಾವಣೆಗಾಗಿ ಇತರೇ ಪಕ್ಷಗಳು ತಾಲೀಮು ಪ್ರಾರಂಭ ಮಾಡಿವೆ. ಬಾಜಪಾ,(BJP) ಗೆ ಇದು ಬಹಳಾ ಮುಖ್ಯವಾದ ಚುಣಾವಣೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಎಂಬ ಬ್ಯಾನರ್ ಹಿಡಿದು ಕರ್ನಾಟಕದೆಲ್ಲೆಡೆ ಸುತ್ತಾಡುತ್ತಿದೆ. ಕನ್ನಡಿಗರ ಮನಸ್ಸಲ್ಲಿ ಹೊಸ ಆಸೆಗಳೇನೋ ಮೂಡುತ್ತಲೇ ಇವೆ. ಈ ಹೊಸ ಆಸೆಗಳು ಬರೀ ಚುನಾವಣೇ ನಡುಯುವ ತನಕ ಅಷ್ಟೇ. ಕರ್ನಾಟಕದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅಷ್ಟೇ. ನಾಯಿ ಬಾಲ ಸೀದ ಮಾಡಲು ಸಾಧ್ಯವಾದೀತೇ ಹೇಳಿ. ಮತ್ತದೇ ಭಿನ್ನಮತ, ಹೊಡೆದಾಟ ಕಿತ್ತಾಟ, ಪಕ್ಷ ಮಾತ್ರ ಬೇರೆ ಅಷ್ಟೇ.

ಕಳೆದ ವಾರ ಊರಿಗೆ ಪ್ರಯಾಣ ಮಾಡುತ್ತಿರುವಾಗ,ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಸಹ ಪ್ರಯಾಣಿಕರು ರಾಜ್ಯ ರಾಜಕಾರಣದ ಬಗ್ಗೆ ದೊಡ್ಡ  ಚರ್ಚೆಯನ್ನೇ ನಡೆಸುತ್ತಿದ್ದರು.

“ರಾಜ್ಯದ ಜನತೆಗೆ ಅದೇನು ಮಂಕುಬಡಿದಿತ್ತೋ ಏನೋ, ಹೋಗಿ ಹೋಗಿ ಅದೆಂತಾ ಜನಗಳ ಕೈಗೆ ರಾಜ್ಯವನ್ನು ಕೊಟ್ಟುಬಿಟ್ಟಿದ್ದಾರೆ. ಇನ್ನು ಏನೆಲ್ಲಾ ನೋಡಬೇಕೋ.”

“ಹೌದು ರೀ..! ಏನು ಮಾಡೋದು ಹೇಳಿ ನಮ್ಮ ಕರ್ಮ. ಇನ್ನೆರಡು ವರ್ಷ ಹೇಗೋ ತಡ್ಕೋಳಿ,ಆಮೇಲೆ ಒಳ್ಳೆ ಸರ್ಕಾರ ಬರತ್ತೆ.”

“ಅಯ್ಯೋ ಹೀಗೇ ಹೇಳೀ ಹೇಳೀ ಕಿವಿ ಮೇಲೆ ಹೂ ಇಡ್ತಾ ಇದಾರೆ ಅಷ್ಟೇ. ಯಾರು ಅಧಿಕಾರಕ್ಕೆ ಬಂದರೂ ಅಷ್ಟೇ ರೀ. ಒಬ್ಬೊಬ್ಬರು ಒಂದೊಂದು ಕೆಲಸದಲ್ಲಿ ನಿಪುಣರು…! ಒಳ್ಳೇ ಕೆಲಸ ಅಂತೂ ಮಾಡೋದಿಲ್ಲ ಬಿಡಿ..!”

“ಅದೂ ಸರೀನೆ, ನಾವು ಪ್ರತೀ ಸಲಾನೂ ಹೊಸ ಸರ್ಕಾರದ ಮೇಲೆ ಅತಿಯಾದ ನಂಬಿಕೆ ಇಟ್ಟು ಸಾಕಾಗಿ ಹೋಗಿದೆ. ಬರೋ ಎಲ್ಲಾ ಸರ್ಕಾರಗಳೂ ಮಾಡಿ ಸಾಧಿಸೋ ಅಂಥಾದ್ದೇನಿಲ್ಲ.”

“ಅದಕ್ಕೇ ನಾನು ವೋಟು ಹಾಕೋದೆ ನಿಲ್ಲಿಸಿದ್ದೀನಿ. ಯಾರು ಹಿತವರು ಯಾರು ಉತ್ತಮರು ಅಂತ ಆಯ್ಕೆ ಮಾಡೋದಾದ್ರೂ ಹೇಗೆ ಹೇಳಿ. ಎಲ್ಲರೂ ಒಂದೇ.”

ಇಂತಹ ಚರ್ಚೆಗಳು ಎಲ್ಲೆಡೆಯೂ ನಡೆಯುತ್ತಲೇ ಇರುತ್ತವೇ. ಕೆಲವೊಂದು ವಿಷಯಗಳು ಚರ್ಚೆ ಮುಗಿದ ನಂತರ ಜೀವ ಕಳೆದುಕೊಳ್ಳುತ್ತಾವೆ ಅಷ್ಟೇ.

ಪಾಪ ಕನ್ನಡಿಗರು ಬಹಳಾ ವಿಶಾಲ ಹೃದಯದವರು. ಕರುಣೆ ತೋರಿಸೋದರಲ್ಲಿ ಯಾವಾಗಲೂ ಮುಂದೆ. ಸರ್ಕಾರ ಮಾಡೋ ಕೆಟ್ಟ ಕೆಲಸಗಳನ್ನೆಲ್ಲಾ ಹೇಗೋ ಮರೆತೇ ಬಿಡುತ್ತಾರೆ. ಮತ್ತೆ ಅದೇ ಸರ್ಕಾರದ ಕೈಗೆ ರಾಜ್ಯ ಕೊಟ್ಟು ಪಾಪ ಮತ್ತೆ ಮೋಸ ಹೋಗಿ ಬಿಡುತ್ತಾರೆ. ಎಷ್ಟೋ ದಶಕಗಳಿಂದಲೂ ಅದೇ ಕನಸುಗಳು ಕನ್ನಡಿಗರ ಮನದಾಳದಲ್ಲಿ ಕುಳಿತು ಇಂದಲ್ಲಾ ನಾಳೆ ನನಸಾಗುತ್ತವೆಂದು ಕಾಯುತ್ತಿವೆ. ಅದೆಂದು ಒಂದೊಳ್ಳೆ ಸರ್ಕಾರ ಬರುತ್ತದೋ ದೇವರೇ ಬಲ್ಲ. ಅದೇ ಹಗರಣಗಳು, ಅದೇ ಭ್ರಷ್ಟಾಚಾರ,ಅದೇ ಕಿತ್ತೋಗಿರೋ ಭಿನ್ನಮತ. ಐದು ವರ್ಷದ ಅವಧಿಯಲ್ಲಿ ಹೆಚ್ಚೆಂದರೇ ಮೂರೋ ನಾಲ್ಕು ಮುಖ್ಯಮಂತ್ರಿ ಬದಲಾವಣೆ. ಪ್ರತೀ ಸರ್ಕಾರಕ್ಕೆ ನಾಲ್ಕು ವರ್ಷಗಳು ಈ ಹೊಡೆದಾಟಗಳಲ್ಲೆ ಕಳೆದು ಹೋದರೆ ಉಳಿದಿರೋ ಒಂದು ವರ್ಷದಲ್ಲಿ ಏನು ಸಾಧನೆ ಮಾಡುತ್ತಾರೆ ಹೇಳಿ. ದೇಶದ  ಉದ್ಧಾರಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿರುವ ಭಾರತ ಮಾತೆಯ ಹೆಮ್ಮೆಯ ಪುತ್ರ, ಮಹಾನ್ ವ್ಯಕ್ತಿ ಮೋದಿ ಒಂದೆಡೆಯಾದರೆ, ರಾಜ್ಯಗಳನ್ನು ಕಿತ್ತು ತಿನ್ನುತ್ತಿರುವ ರಾಜಕಾರಣಿಗಳು ಇನ್ನೊಂದೆಡೆ. ಕರ್ನಾಟಕದಲ್ಲಿ ಬಂದು ಹೋಗುತ್ತಿರುವ ಸರ್ಕಾರಗಳು ಭರವಸೆಯ ಅರ್ಥ ಮರೆತಂತಿವೆ. ಹೇಳುವುದು ಒಂದು ಮಾಡುವುದು ಇನ್ನೊಂದು. ಇವರನ್ನು ನಾವು ಅಯ್ಕೆ ಮಾಡಿ ಕಳಿಸೋದು ವಿಧಾನ ಸೌಧದಲ್ಲಿ ಕಿತ್ತಾಡಿ ಹೊಡೆದಾಡಿ ಅಂತಲೋ ಅಥವಾ ಜನರ ಸೇವೆ ಮಾಡುವುದಕ್ಕೋ ಆ  ಭಗವಂತನೇ ಬಲ್ಲ.

ಮೊನ್ನೆ ಶಿವಪ್ರಸಾದ್ ಭಟ್  ಅವರ”ಯಡಿಯೂರಪ್ಪನವರಿಗೊಂದು ಬಹಿರಂಗ ಪತ್ರ” ಲೇಖನಓದುವಾಗ ಅನಿಸಿದ್ದೇನೆಂದರೆ, ಬರೀ ಯಡಿಯೂರಪ್ಪನವರಿಗೆಮಾತ್ರವಲ್ಲ ಎಲ್ಲಾ ರಾಜಕಾರಣಿಗಳಿಗೂ ಕನ್ನಡಿಗರ ಮನದಾಳದಮಾತುಗಳು ಮುಟ್ಟಲೇಬೇಕು.

ಘನತೆವೆತ್ತ ರಾಜಕಾರಣಿಗಳೇ,

ನಾವು ಕನ್ನಡಿಗರು ದೊಡ್ಡ ಭರವಸೆಯನ್ನೇ ಇಟ್ಟುಕೊಂಡಿದ್ದೇವೆ. ಮನದಲ್ಲಿ ಬಹಳಷ್ಟು ಆಸೆಗಳಿವೆ. ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ದೇಶದ ಜೊತೆ ನಾವು ಕನ್ನಡಿಗರೂ ಕೈಜೋಡಿಸಬೇಕೆಂಬ ಆಸೆಯಿದೆ. ರಾಜ್ಯ ಬಡತನದಿಂದ ಮುಕ್ತವಾಗಬೇಕೆಂಬ ಕನಸಿದೆ. ಹಳ್ಳಿ ಹಳ್ಳಿಗೂ ರಸ್ತೆಗಳಾಗಬೇಕಿದೆ. ಉದ್ಯೋಗ ಇಲ್ಲದೆ ಕುಳಿತಿರುವ ಅದೆಷ್ಟೋ ವಿದ್ಯಾವಂತರಿಗೆ ಉದ್ಯೋಗ ಸೃಷ್ಟಿಯಾಗಬೇಕಿದೆ. ಬೆಲೆಯೇರಿಕೆಯಿಂದ ಶ್ರೀಸಾಮಾನ್ಯನ ಬದುಕ ನರಕವಾಗುತ್ತಿದೆ. ಅದೆಷ್ಟೋ ಹಳ್ಳಿಗಳು ಇನ್ನೂ ಬೆಳಕನ್ನೇ ಕಂಡಿಲ್ಲ. ಬಡವರಿಗೆ ಸಿಗಬೇಕಾದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಒಬ್ಬ ದಿನಗೂಲಿ ಮಾಡುವ ವ್ಯಕ್ತಿ ತನಗೆ ದೊರೆಯಬೇಕಾದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ದಿನವಿಡೀ ಅದೆಷ್ಟು ಅಲೆಯಬೇಕೆಂದು ನಿಮಗೆ ತಿಳಿದೀತೆ. ಅನ್ನದಾತ ರೈತನ ಆತ್ಮಹತ್ಯೆ ನಮ್ಮಿಂದ ನೋಡಲಾಗುತ್ತಿಲ್ಲ.

ಘನತೆವೆತ್ತ ರಾಜಕಾರಣಿಗಳೇ,

ನಮಗೆ ನಿಮ್ಮ ಭಿನ್ನಮತ ಬೇಕಾಗಿಲ್ಲ, ನಮಗೆ ನಿಮ್ಮ ಕಿತ್ತಾಟಗಳು ಬೇಕಾಗಿಲ್ಲ, ನಮಗೆ ನಿಮ್ಮ ಭ್ರಷ್ಟಾಚಾರ ಬೇಕಾಗಿಲ್ಲ, ನಮಗೆ ನೀವು ಎಷ್ಟು ಆಸ್ತಿ ಮಾಡಿದ್ದೀರಿ ಅನ್ನೊದರ ವಿವರ ಬೇಕಾಗಿಲ್ಲ, ನಮಗೆ ನಿಮ್ಮ ಜಾತಿ ರಾಜಕಾರಣ ಬೇಕಾಗಿಲ್ಲ, ನಮಗೆ ನಿಮ್ಮ ಪಕ್ಷ ಯಾವುದೆಂದು ತಿಳಿದು ಏನೂ ಪ್ರಯೋಜನವಿಲ್ಲ. ನಮಗೆ ಬೇಕಾಗಿರೋದು ರಾಜ್ಯದ ಅಭಿವೃದ್ಧಿ. ಬಡ ಜನರ ಸೇವೆಗೆ ಸದಾ ತಯಾರಿರುವ ಮನಸ್ಸು. ರೈತರಿಗೆ ತಲುಪಬೇಕಾದ ಎಲ್ಲಾ ಸವಲತ್ತುಗಳು ಸರಿಯಾಗಿ ತಲುಪಬೇಕಿದೆ. ಹಳ್ಳಿ ಹಳ್ಳಿಯ ಅಭಿವೃದ್ಧಿಯಾಗಬೇಕಿದೆ. ಸಾಕಷ್ಟು ಉದ್ಯೋಗ ಸೃಷ್ಟಿಯಾಗಬೇಕಿದೆ. ಶ್ರೀಸಾಮಾನ್ಯನ ಬದುಕು ಒಂದೊಳ್ಳೆ ರೀತಿ ಸಾಗಬೇಕಿದೆ. ರಸ್ತೆಗಳಲ್ಲಿ ಗಹಗಹಿಸಿ ನಗುತ್ತಿರುವ ಗುಂಡಿಗಳನ್ನು ಮುಚ್ಚಬೇಕಿದೆ. ಬೆಳಕು ಕಾಣದ ಎಷ್ಟೋ ಹಳ್ಳಿಗಳು ಬೆಳಕು ಕಾಣಬೇಕಿದೆ. ಅಭಿವೃದ್ಧಿಯ ಪತದತ್ತ ಮುನ್ನುಗ್ಗುತ್ತಿರುವ ಭಾರತದ ಜೊತೆ ನಾವು  ಕೈಜೋಡಿಸುವ ಆಸೆಯಿದೆ. ದಯವಿಟ್ಟು ನಮ್ಮ ಈ ಎಲ್ಲಾ ಆಸೆಗಳಿಗೆ ಕಲ್ಲು ಹಾಕಬೇಡಿ. ನಮಗೆ ನೀವು ಕೊಡುವ ಭರವಸೆಯ ಜೊತೆ ಆಟವಾಡಬೇಡಿ. ಒಂದು ಮಾತು ನೆನಪಿಡಿ,ಕನ್ನಡಿಗರು ಎಂದೆಂದಿಗೂ ಇತಿಹಾಸ ಮರೆತು ಬದುಕುವವರಲ್ಲ. ನೀವೇನೆ ಮಾಡಿದರೂ ನಂಬಿ ಸಹಿಸಿಕೊಳ್ಳುತ್ತೇವೆ ಎಂದು ನೀವು ತಿಳಿದಿದ್ದರೆ ಅದು ನಿಮ್ಮ ಭ್ರಮೆ ಅಷ್ಟೇ. ಒಂದೊಳ್ಳೆ ಸರ್ಕಾರಕ್ಕಾಗಿ ಕಾಯುತ್ತಿದ್ದೇವೆ. ನಮ್ಮ ಕನಸುಗಳ ಅಳಿವು ಉಳಿವು ನಿಮ್ಮ ಕೈಯಲ್ಲಿದೆ. ನಾವು ನಿಮ್ಮ ಕೆಲಸವೇನೆಂದು ಹೇಳುತ್ತಿಲ್ಲ, ಬದಲಾಗಿ ನೀವು ಮರೆತಿರುವ ನಿಮ್ಮ ಜವಾಬ್ದಾರಿಯನ್ನು ನೆನಪಿಸುತ್ತಿದ್ದೇವೆ ಅಷ್ಟೇ. ನಮ್ಮಲ್ಲಿ ಕನಸುಗಳ ದೊಡ್ಡ ಬುತ್ತಿಯೇ ಇದೆ. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ.

-ಮಂಜುನಾಥ್ ಮಧ್ಯಸ್ಥ

ತೀರ್ಥಹಳ್ಳಿ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post