X

ಎಂದೂ ಮರೆಯಲಾಗದ ನೆನಪುಗಳು

ಪ್ರತಿಯೊಬ್ಬರ ಜೀವನದಲ್ಲಿ ಮಾಧ್ಯಮಿಕ ಶಾಲಾ ಘಟ್ಟ ಅತ್ಯಂತ ಮಹತ್ವದ್ದು. ಹಂತ ಹಂತವಾಗಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗಿ ವ್ಯಕ್ತಿತ್ವ ರೂಪಗೊಳ್ಳುವ ಸಮಯವಿದು. ಹದಿಹರೆಯದ ಎಲ್ಲ ಹುಡುಗ ಹುಡುಗಿಯರಿಗೆ ಯೌವ್ವನದ ಹೊಸ್ತಿಲಲ್ಲಿ ನಿಂತ ಹೊಸ ಅನುಭವ, ವಯೋ ಸಹಜವಾದ ಹುಚ್ಚು ಮನಸ್ಸಿನ ನೋರೆಂಟು ಆಸೆಗಳು ಮತ್ತು ತಮ್ಮದೇ ಆದ ಕಲ್ಪನಾ ಲೋಕದಲ್ಲಿ ಎಲ್ಲೆ ಇಲ್ಲದೇ ವಿಹರಿಸುವ ಕನಸುಗಳು!ಹಿಂದಿರುಗಿ ನೋಡಿದಾಗ ಸವಿ ನೆನಪುಗಳ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ.

ಈ ವಯಸ್ಸಿನಲ್ಲಿ ಪ್ರೀತಿ ಪ್ರೇಮದ ಪರಿಮಿತಿ ಮತ್ತು ಪರಿಭಾಷೆಯ ಅರಿವಿಲ್ಲದೇ ಇದ್ದರೂ ಗಂಡು ಹೆಣ್ಣಿನ ನಡುವಣ ಪರಸ್ಪರ ಆಕರ್ಷಣೆಯಂತು ಸಹಜ!! ಒಂದು ಹುಡುಗ ಅಥವಾ ಹುಡುಗಿ ತಾನು  ಆಕರ್ಷಿತನಾ(ಳಾ)ದ ವ್ಯಕ್ತಿಯನ್ನು ಅನುಕರಿಸುವದು ಮತ್ತು ಅನುಸರಿಸುವದು ಕೂಡ ಅಷ್ಟೇ ಸಾಮಾನ್ಯ. ಈ ಅನುಕರಣೆ ಶಾಲೆಯಲ್ಲಿ ಅಕ್ಕ ಪಕ್ಕದ ಬೆ೦ಚುಗಳಲ್ಲಿ ಕುಳಿತಾಗ ಅವಳು ಅಥವಾ ಅವನು ಕುಳಿತುಕೊಳ್ಳುವ ಭಂಗಿ, ಒಬ್ಬರು ಗಲ್ಲ ಅಥವಾ ಗಡ್ಡದ ಮೇಲೆ ಕೈ ಇರಿಸಿದ್ದರೆ ತಾನೂ ಅನುಕರಿಸುವದು, ಟೀಚರಗೆ ಕೇಳುವ ಪ್ರಶ್ನೆಗಳು ಹಾಗೂ ವಿದ್ಯಾರ್ಥಿಗಳು ಕೊಡುವ ಉತ್ತರಗಳು, ಮಾತನಾಡದಿದ್ದರೂ – ಮೌನದ ಮಾತುಗಳಲ್ಲೇ ಮ್ಯೂಚುವಲ್ ಎಡ್ಮಿರೇಷನ್ (ಪರಸ್ಪರ ಮೆಚ್ಚುಗೆ)…ಇವೆಲ್ಲವುಗಳು ತಿಳಿದೋ ತಿಳಿಯದೆನೋ ನಡೆದು ಹೋಗುತ್ತವೆ. ಹಾಗೆಂದು ಇದನ್ನು ಪ್ರೀತಿ ಎಂದು ಹೇಳಲಾಗುವದಿಲ್ಲ ಮತ್ತು ಇಂತಹ ಆಕರ್ಷಣೆ ಅನಪೇಕ್ಷಿತವೂ ಅಲ್ಲ..ತಪ್ಪೂ ಅಲ್ಲ…ಇದು ಜೀವನದ ಆ ಘಟ್ಟದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸುಪ್ತ ಮನಸ್ಸಿನ ಆಸೆ,ಆಕಾಂಕ್ಷೆ ಮತ್ತು ಅಭಿಲಾಷೆ ಕೂಡ ಹೌದು, ಆದರೆ ಮುಂದೆ ಇದೇ ಅತೀಯಾಗಿ ಮಹತ್ವಾಕಾಂಕ್ಷೆಯಾಗಬಾರದು.ಹಾಗಾದರೆ ಆ ವಿದ್ಯಾರ್ಥಿಯ ಜೀವನ ದಾರಿ ತಪ್ಪಿ ಓದಿಗೆ ಎಳ್ಳು ನೀರು ಬಿಟ್ಟಂತೆಯೇ!

ಇಂತಹ ಪರಿಸರದಲ್ಲೇ 1988ರಲ್ಲಿ ನಾವು 10ನೇ ತರಗತಿಯಲ್ಲಿದ್ದಾಗ ನಡೆದ ಒಂದು ಪ್ರಸಂಗ, ನಾವೆಲ್ಲ ಶಾಲೆ ಬಿಟ್ಟ ಮೇಲೆ ಇಂಗ್ಲೀಷ ಗ್ರಾಮರ್ ಮನೆಪಾಠಕ್ಕಾಗಿ ತಿಮ್ಮಾಪುರ ಸರ್ ಮನೆಗೆ ಹೋಗುತ್ತಿದ್ದೆವು. ತಿಮ್ಮಾಪುರ ಸರ್ ಕೇವಲ ಇಂಗ್ಲೀಷ್ ಶಿಕ್ಷಕರು ಮಾತ್ರ ಆಗಿರದೆ ಒಬ್ಬ ಪಕ್ಷಿ ತಜ್ಞ, ಕ್ರಿಕೇಟ ಪಟು, ನಾಟಕ ನಿರ್ದೇಶಕ, ನಿಸರ್ಗ ಪ್ರೀಯ ಮತ್ತು ಕಲಾಪೋಷಕರಾಗಿದ್ದರು. ಅದೊಂದು ದಿನ ನಾವೆಲ್ಲ ಸ್ನೇಹಿತರು ಕೊಂಚ ಮುಂಚೇನೆ ನಮ್ಮ ಗುರುಗಳ ಮನೆ ಹತ್ತಿರವಿರುವ ಇನ್ನೊಬ್ಬ ಗೆಳೆಯ ಸುಧೀರನ ಮನೆ ತಲುಪಿದ್ದೆವು. ಆ ದಿನ ಅವನ ಮನೆಯಲ್ಲೂ ಪಾಲಕರು ಇರಲಿಲ್ಲ, ಕೆಲಸದ ನಿಮಿತ್ತ ಊರಿಗೆ ಹೋಗಿದ್ದರು. ಸರಿಯಾಗಿ ಸಂಜೆ 7ಕ್ಕೆ ನಾವು ಸರ್ ಮನೆ ಸೇರಬೇಕು, ಆದರೆ ಅಂದು ನಾವೆಲ್ಲ ಕೇಬಲ್ ಟಿವಿಯಲ್ಲಿ ಹಾಕಿದ್ದ ವಿನೋದ ಖನ್ನಾ ಮತ್ತು ಮಾಧುರಿ ದೀಕ್ಷಿತ ಅಭಿನಯದ   ‘ದಯಾವಾನ್’ ಚಲನ ಚಿತ್ರವನ್ನು ಸ್ನೇಹಿತನ ಮನೆಯ ನೆಲ್ಕೊ ಟಿವಿಯಲ್ಲಿ ವೀಕ್ಷಿಸುತ್ತಾ ಮೈಮರೆತೆವು. ಆಗಿನ ಕಾಲದಲ್ಲಿ ಟಿವಿ ಒಂದು ಐಷಾರಾಮಿ ವಸ್ತು…ಯಾರ ಮನೆಯಲ್ಲಿ ಕಲರ್ ಟಿವಿ  ಇದೆಯೋ ಅವರು ಸ್ಥಿತಿವಂತರಂತಲೇ ಅರ್ಥ. ಮಾಧುರಿಯ ಸೌಂದರ್ಯಕ್ಕೆ ಮನ ಸೋತ ನಾವು ಅಂದಿನ ಟ್ಯೂಷನ್-ಗೆ ಚಕ್ಕರ ಹೊಡೆದಿದ್ದೆವು. ‘ದಯಾವಾನ್’ ದ “ಆಜ್ ಫಿರ್ ತುಮ್ ಪೆ ಮುಝೆ ಪ್ಯಾರ ಆಯಾ ಹೈ ಬೇಹತ್ ಔರ್ ಬೇಶುಮಾರ್ ಆಯಾ ಹೈ“ ಗೀತೆ ಮತ್ತು ಅದರಲ್ಲಿಯ ಮಾಧುರಿ ವಿನೋದ ಖನ್ನಾರ ಆಗಿನ ಕಾಲಕ್ಕೆ ತುಸು ಜಾಸ್ತಿನೆ ಬೋಲ್ಡ್ ಆದ ಚುಂಬನ ದೃಶ್ಯ ಪಡ್ಡೆ ಹುಡುಗರ ಮೈಕಾವೇರಿಸಿತ್ತು!! ಮಾರನೆಯ ದಿನ ಟ್ಯೂಷನಲ್ಲಿ ನಮ್ಮ ಸರ್ “ಯಾಕರಲೇ ಮಕ್ಕಳಾ ..ಹೆಂಗ್ ಇತ್ತು ನಿನ್ನೆ ‘ದಯಾವಾನ್’??” ಅಂತ ನಮ್ಮನ್ನು ಛೇಡಿಸಿದ್ದರು. ಚಲನ ಚಿತ್ರ ಗೀತೆಗಳು ಮಕ್ಕಳ ಮೇಲೆ ಬೀರುವ ಪ್ರಭಾವಕ್ಕೊಂದು ಉದಾಹರಣೆ…. ಮಕ್ಕಳಿಗೆ ಶಿಕ್ಷಕರು ತೃತೀಯ ಭಾಷೆಯಾದ ಹಿಂದಿಯ ಅಂಕೆಗಳನ್ನು ಕಲಿಸಲು ಹೆಣಗಾಡುತಿದ್ದರು, ಆದರೆ ‘ತೇಜಾಬ್’ ನ “ಏಕ್ ದೊ ತೀನ…” ಹಾಡು ನೋಡಿದ ಮೇಲೆ ಮಕ್ಕಳಿಗೆ  ಹಿಂದಿ ಅಂಕೆಗಳು ಕಂಠ ಪಾಠವಾದವ೦ತೆ! ಹಾಗೆಂದು ನಮ್ಮ ಗುರುಗಳೊಬ್ಬರು ನಗೆ ಚಟಾಕೆ ಹರಿಸುತ್ತಿದ್ದರು.

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಎಲ್ಲ ಕಾರ್ಯಕ್ರಮಗಳನ್ನು ಮತ್ತು ಯಾವುದೇ ಹೊಸ ಹಿಂದಿ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೋಡುವ  ಅವಕಾಶವನ್ನು  ನಮಗೆ ಒದಗಿಸಿದ್ದು ಕೇಬಲ್ ಭಾಗ್ಯ! ಬಾನೆತ್ತರದ ಎಂಟೆನಾಗಳನ್ನು ಮನೆ ಮೇಲೆ ನಿಲ್ಲಿಸಿದರೂ ಬಹುತೇಕ ಪ್ರದೇಶಗಳಲ್ಲಿ ಸ್ಪಷ್ಟವಾದ ಸಿಗ್ನಲ್ ಸಿಗುತ್ತಿರದ ಕಾಲ ಹಾಗೂ ಕೇಬಲ್ ಟಿವಿ ಜಾಲ ಕೂಡ ಇನ್ನೂ ಅಷ್ಟಾಗಿ ಬೆಳೆದಿರಲಿಲ್ಲ, ನಾವು ನೆಲಿಸಿದ್ದ ಬೆಳಗಾವಿ ಜಿಲ್ಲೆಯ ನಮ್ಮ ಪಾಲಿನ ನಂದನವನವಾದ ಹಿಡಕಲ್ ಡ್ಯಾಮ್-ಗೆ 80ರ ದಶಕದ ಕೊನೆಯಲ್ಲಿ ಕೇಬಲ್ ಟಿವಿ ಕದ ತಟ್ಟಿ ಬೇರೂರುವ ಪ್ರಯತ್ನದಲ್ಲಿತ್ತು…ಮನೆಯಲ್ಲಿ ಟಿವಿ ಇಲ್ಲದೆ ಇದ್ದರೂ ಅಕ್ಕ ಪಕ್ಕದ ಟಿವಿ ಇದ್ದವರ  ಮನೆಗಳಿಗೆ ಹೋಗಿ ಟಿವಿ ನೋಡುವದು ನಮ್ಮ ದಿನಚರಿಯ ಒಂದು ಭಾಗವಾಗಿತ್ತು, ಇದು ಅಲ್ಲಿಯ ಜನತೆಯ ಹೃದಯ ವೈಶಾಲ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. ಈಗಿನ ಯಾಂತ್ರಿಕ ಯುಗದಲ್ಲಿ ಬೇರೆಯವರು ನಮ್ಮ ಮನೆಗಳಿಗೇನಾದರೂ ಬಂದರೆ ನಮ್ಮಲ್ಲಿ ಎಷ್ಟು ಜನ  ತೆರೆದ ಮನಸ್ಸಿನಿಂದ  ಸ್ವಾಗತಿಸುತ್ತೇವೆ? ನಮ್ಮ ತಥಾ ಕಥಿತ ಖಾಸಗಿತನವನ್ನು ಬಿಟ್ಟು ಕೊಡಲು ಹಿಂಜರಿಯುತ್ತೇವೆಯಲ್ಲವೇ? ಯಾವುದೇ ವಿಚಾರಧಾರೆ, ಜಾತಿ ಮತದ ಕಟ್ಟಳೆಗಳ್ಳಿಲ್ಲದೇ ಪರಿಶುದ್ಧ ಮನಸ್ಸಿನಿಂದ  ಗಂಟೆಗಟ್ಟಲೇ ಬೇರೆಯವರಿಗೆ ತಮ್ಮ ಮನೆಯಲ್ಲಿ ಜಾಗ ಕೊಟ್ಟು ಟಿವಿ ನೋಡಲು ಅನುವು ಮಾಡಿಕೊಡುತ್ತಿದ್ದ ಆಗಿನ ಕಾಲದ ನಮ್ಮ ಹಿರಿಯರು ಅಭಿನಂದನಾರ್ಹರು. ನಮ್ಮ ಹಿರಿಯರ ನಡವಳಿಕೆಯಿಂದ ಇಂದಿನ ಪೀಳಿಗೆಯ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ನಿಜ ಅರ್ಥದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಪೀಠಿಕೆ ಹಾಕಿ ಕೊಟ್ಟವರೆ ನಮ್ಮ  ಹಿರಿಯರು ಎಂದರೆ ತಪ್ಪಾಗಲಿಕ್ಕಿಲ್ಲ, ಈ ಶಬ್ದಗಳು ಈಗ ಬರೀ ರಾಜಕೀಯ ಘೋಷಣೆಗಳಾಗಿ ಉಳಿದಿವೆ.

ನಾನು ಹೈಸ್ಕೂಲಿನಲ್ಲಿ ಓದುವಾಗಿನ ಇನ್ನೊ೦ದು ಕುತೂಹಲಕಾರಿ ಘಟನೆ ನನ್ನ ಸ್ಮೃತಿ ಪಟಲದಲ್ಲಿ ಅಳಿಸದೆ ಉಳಿದಿದೆ. ನಮ್ಮೂರ ಹನುಮಂದೇವರ ಗುಡಿಯಲ್ಲಿ ಕೀರ್ತನೆ ಹೇಳಲು ಪ್ರತಿ ವರ್ಷ ಒಬ್ಬೊಬ್ಬ ದಾಸರನ್ನು ಕರೆಸುತ್ತಿದ್ದರು. ಹೀಗೆ ಬರುತ್ತಿದ್ದ ದಾಸರನ್ನು ಪ್ರತಿ ದಿನ ಮಧ್ಯಾಹ್ನ ಊಟಕ್ಕೆ ಮೊದಲೇ ನಿಗದಿಪಡಿಸಿದ ಮನೆಗಳಿಗೆ ಕರೆದುಕೊಂಡು ಹೋಗುವದು ವಾಡಿಕೆ. ಅದೊಂದು ದಿನ ಇಂತಹ ದಾಸರೊಬ್ಬರು (ಬಹುಶಃ ಅವರ ಹೆಸರು ಜಗದೀಶದಾಸರಿರಬೇಕು..) ನಮ್ಮ ದೊಡ್ಡಪ್ಪನ ಮನೆಗೆ ಊಟಕ್ಕೆ ಬಂದಿದ್ದರು, ಊಟವಾಯಿತು ತಾಂಬೂಲ ಹಾಕಿಕೊಂಡು ದಕ್ಷಿಣಾದಿಗಳನ್ನು ಸ್ವೀಕರಿಸಿ ದೇವಸ್ಥಾನಕ್ಕೆ ಹೊರಡಲು ಸಿದ್ಧರಾದರು. ನನಗೆ ಮತ್ತು ನನ್ನ ಸ್ನೇಹಿತನಿಗೆ ಯಾಕೋ ಕುತೂಹಲಕ್ಕಾಗಿ ಅವರನ್ನು ಹಿಂಬಾಲಿಸಬೇಕಿನ್ನಿಸಿತು, ಮನೆಯಿಂದ ಪೇಟೆಯ ಮಾರ್ಗವಾಗಿ ಬಸ್ ಸ್ಟ್ಯಾಂಡ್ ಮುಖಾಂತರ ದೇವಸ್ಥಾನ ತಲುಪುವ ದಾರಿ ಸುಮಾರು ಒಂದೂವರೆ ಕಿಲೋಮೀಟರನಷ್ಟಿತ್ತು. ದಾಸರನ್ನು ಅವರಿಗರಿವಿಲ್ಲಂದಂತೆ ಹಿಂಬಾಲಿಸಿದ ನಮಗೆ ಪೇಟೆ ತಲುಪುವ ಹೊತ್ತಿಗೆ ಅಚ್ಚರಿ ಕಾದಿತ್ತು! ದಾಸರು ಪಾನಪಟ್ಟಿ ಅಂಗಡಿಯಲ್ಲಿ ಸಿಗರೇಟೊಂದನ್ನು ತೆಗೆದುಕೊಂಡು ಗಿಡವೊಂದರ ಮರೆಗೆ ನಿಂತು ಜುರುಕಿ ಎಳೆಯುತ್ತಿದ್ದರು!! ಆಗ ನನಗಸಿದ್ದು “ಆಚಾರ ಹೇಳಿ ಬದನಿಕಾಯಿ ತೀನ್ನೋದು” ಅಂದರ ಬಹುಶಃ ಇದ ಇರಬೇಕಂತ…. ಮಾಸದೇ  ಉಳಿದಿರುವ  ಇಂತಹ ಅನೇಕ ಘಟನಾವಳಿಗಳ ಸರಪಳಿಯೇ “ಎಂದು ಮರೆಯಲಾಗದ ನೆನಪುಗಳು” ಲೇಖನ ಮಾಲೆ.

ಶ್ರೀನಿವಾಸ .ನಾ. ಪಂಚಮುಖಿ

snpanchmukhi@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post