X

ಸಿದ್ಧರಾಮಯ್ಯನವರು ಮತ್ತೊಮ್ಮೆ ಸಿ.ಎಮ್ ಆಗಬೇಕು, ಯಾಕೆ ಗೊತ್ತಾ?

ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೊನ್ನೆಗೆ ಮೂರು ವರುಷಗಳಾಗಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಂದ ಹಿಡಿದ ಜಾತಿ ಜಾತಿಗೂ ಭಾಗ್ಯಗಳನ್ನು ಕೊಟ್ಟ ಸಿದ್ಧರಾಮಯ್ಯನವರಿಗೆ ಇನ್ನು ಎರಡು ವರ್ಷವಷ್ಟೇ ಕೈಯಲ್ಲಿದೆ ಹೇಳಲು ಎರಡು ವರ್ಷವಿದ್ದರೂ ನಿಜವಾಗಿಯೂ ಲಭ್ಯವಿರುವುದು ಒಂದೂವರೆ ವರ್ಷವಷ್ಟೇ. ಮುಂದಿನ ಬಾರಿಗೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಸರಕಾರದ ನಡೆ ಎಷ್ಟು ಮಹತ್ವದ್ದಾಗಿರತ್ತೊ, ಸರಕಾರದ ಈವರೆಗಿನ ಕೆಲಸವನ್ನು ಮೌಲ್ಯಮಾಪನ ಮಾಡಿ ಮುಂದಿನ ಕೆಲಸಗಳನ್ನು ಗಣನೆಗೆ ತೆಗೆದುಕೊಳ್ಳುವ ನಮ್ಮ ನಡೆ ಸಹ ಮಹತ್ವದ್ದಾಗಿದೆ. ನಾನು ಒಂದು ಪಕ್ಷದ ಪರವಾಗಿ ಮಾತನಾಡುತ್ತಿದ್ದೇನೆ ಎಂದುಕೊಂಡರೂ ಪರವಾಗಿಲ್ಲ, ನೇರವಾಗಿ ಹೇಳಿ ಬಿಡುತ್ತೇನೆ.  ಸಿದ್ಧರಾಮಯ್ಯನವರು ನಮ್ಮ ಸಿ.ಎಮ್ ಆಗಬೇಕು.  ಯಾಕೆ ಅಂತ ಕೇಳ್ತೀರಾ? ಕೆಳಗಿನ ಒಂದೊಂದೇ ಅಂಶಗಳನ್ನು ಓದಿ, ನಿಮಗೇ ಗೊತ್ತಾಗುತ್ತೆ . 

1. ಸ್ವಚ್ಚಂದ ಸಮಾಜವನ್ನು ಜಾತಿಯ ಹೆಸರಿನಲ್ಲಿ ಒಡೆದಿದ್ದಕ್ಕಾಗಿ.
ಸಿದ್ಧರಾಮಯ್ಯನವರು ಅಧಿಕಾರಕ್ಕೆ ಬರುತ್ತಲೇ ಮೊತ್ತ ಮೊದಲಾಗಿ ಮಾಡಿದ ಒಳ್ಳೆಯ ಕೆಲಸವೆಂದರೆ ಜಾತಿಯ ಹೆಸರಿನಲ್ಲಿ ಮನಸುಗಳನ್ನು ಒಡೆದಿದ್ದು. ಶಾದಿ ಭಾಗ್ಯ, ದಲಿತ ಮಕ್ಕಳಿಗೆ ಪ್ರವಾಸ ಭಾಗ್ಯದ ಹೆಸರಿನಲ್ಲಿ ಜಾತಿ ವ್ಯವಸ್ಥೆ ಪ್ರಬಲವಾಗಿರುವ ಸಮಾಜದಲ್ಲಿ ಮತ್ತಷ್ಟು ಮೇಲು-ಕೀಳು  ಹುಟ್ಟುವಲ್ಲಿ ಸಿದ್ಧರಾಮಯ್ಯನವರ ಕೊಡುಗೆ ಮಹತ್ತರವಾದದ್ದು. ಇಂತಹ ಮಹತ್ತರವಾದ ಕೊಡುಗೆಯನ್ನು ಹಿಂದೆ ಯಾವ ಮುಖ್ಯಮಂತ್ರಿಯೂ ಕೊಟ್ಟಿಲ್ಲ, ಮುಂದೆ ಕೊಡೋದು ಇಲ್ಲ. ಆ ಕಾರಣಕ್ಕಾಗಿ ಶ್ರೀ ಸಿದ್ಧರಾಮಯ್ಯನವರು ಮತ್ತೊಮ್ಮೆ ಸಿ.ಎಮ್ ಆಗಬೇಕು.

೨. ದಕ್ಷ ಅಧಿಕಾರಿಗಳ ಸೊಲ್ಲಡಗಿಸಿದ್ದು
ಇತ್ತೀಚೆಗಿನ ಮೂರು ವರ್ಷಗಳಲ್ಲಿ ಅತಿಯಾಗಿ ಸುದ್ದಿ ಮಾಡಿದ್ದು, ಸರಕಾರದ ಅವಿಭಾಜ್ಯ ಅಂಗವಾದ ಅಧಿಕಾರಿಶಾಹಿಯ ಸೊಲ್ಲಡಗಿಸಿದ್ದು.

* ಡಿ ಕೆ ರವಿಯವರ ನಿಗೂಢ ಸಾವು
ಇದಂತೂ ದೇಶಾದ್ಯಂತ ಸುದ್ದಿ ಮಾಡಿತು. ರವಿಯವರದ್ದು ಆತ್ಮಹತ್ಯೆಯೋ ಕೊಲೆಯೋ ಎನ್ನುವುದಿನ್ನೂ ದೃಢಪಟ್ಟಿಲ್ಲ. ಆದರೆ ಅವರ ಮೇಲೆ ರಾಜಕೀಯ ಒತ್ತಡವಿದ್ದಿದ್ದಂತೂ ಸೂರ್ಯ ಸತ್ಯ. ಆದರೆ ಅವರ ಹೆಣ ನೋಡುವುದಕ್ಕೂ ಮುನ್ನವೇ ಅವರದ್ದು ಆತ್ಮಹತೆಗೆ ಪ್ರೇಮ ವೈಫಲ್ಯವೇ ಕಾರಣ ಎನ್ನುವ ಕತೆಯನ್ನು ಕಟ್ಟುವ ಕೆಲಸ  ಸರಕಾರದ ಕಡೆಯಿಂದ ವ್ಯವಸ್ಥಿತವಾಗಿ ನಡೆಸಿತು. ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ರಾಜ್ಯಾದ್ಯಂತ ಜನ ದಂಗೆಯೆದ್ದಾಗ ಕ್ಯಾರೇ ಎನ್ನದ ಸಿದ್ಧರಾಮಯ್ಯನವರು ಕಡೆಗೆ ರಾಹುಲ್ ಗಾಂಧಿ ಆದೇಶಕ್ಕೆ ಮಣಿದು “ಜನರ ಭಾವನೆಗೆ ಸ್ಪಂದಿಸಿ ಪ್ರಕರಣವನ್ನು ಸಿಬಿಐಗೆ ವಹಿಸುತ್ತಿದ್ದೇವೆ” ಎನ್ನುವ  ಹಸಿ ಸುಳ್ಳನ್ನು ಸಾರಾಸಗಟಾಗಿ ಹೇಳಿದರು,. ಜನ ಒಂದು ವಾರ ಪ್ರತಿಭಟನೆ ಮಾಡಿದರೂ ಕ್ಯಾರೇ ಎನ್ನದ ಧೈರ್ಯವಂತ ಮುಖ್ಯಮಂತ್ರಿ ನಮಗೆ ಇನ್ನೊಮ್ಮೆ ಬೇಕು. ರವಿಯವರ ಕುಟುಂಬಕ್ಕೆ ಪರಿಹಾರ ಕೊಡಲೂ ನಾಯಿಯನ್ನು ಅಲೆಸಿದಂತೆ ಅಲೆಸಿತು ಸಿದ್ಧರಾಮಯ್ಯನವರ ಸರಕಾರ. ರವಿ ತಾಯಿ ಬಳಿ ರವಿಯವರ ತಿಥಿ ಮಾಡಲೂ ಹಣವಿರಲಿಲ್ಲ, ಕಡೆಗೆ ಆ ವೃದ್ಧ ಮಹಿಳೆ ಧರಣಿ ಕೂರುವ ಹಾಗಾಯ್ತು,. ಒಬ್ಬ ದಕ್ಷ ಅಧಿಕಾರಿಯ ಸಾವಿನ ನಂತರ ಅವರ ಕುಟುಂಬದ ಮೇಲೆ ಈ ರೀತಿಯ ಪ್ರೀತಿ ತೋರಿಸುವ ಮುಖ್ಯಮಂತ್ರಿ ಖಂಡಿತವಾಗಿಯೂ ಮತ್ತೊಮ್ಮೆ ಆರಿಸಿ ಬರಬೇಕು,

* ಮಲ್ಲಿಕಾರ್ಜುನ ಬಂಡೆಯವರ ಕೊಲೆ.
ಇದು ಬರೀ ಸಾವಲ್ಲ, ಕೊಲೆಯೆಂಬುದು ಪೋಲೀಸ್ ತನಿಖೆಯಲ್ಲಿಯೇ ದೃಢ ಪಟ್ಟಿದೆ. ಆರೋಪಿಗಳ್ಯಾರು ಎಂಬುದೂ ಸಹ ಸರಕಾರಕ್ಕೆ ಗೊತ್ತಿದೆ. ಆದರೆ ತನಿಖೆಗೆ ಸಂಬಂಧಿಸಿದ ಫೈಲುಗಳು ಗೆದ್ದಲು ತಿನ್ನುತ್ತಿವೆಯೇ ಹೊರತು ಧೈರ್ಯವಂತ ಪೋಲೀಸಿನ ಸಾವಿಗೆ ಕಾರಣರಾದ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಇಲ್ಲೂ ಅಷ್ಟೇ, ಸರಕಾರ ಬಂಡೆಯವರ ಸಾವಿನ ನಂತರ ಅವರ ಕುಟುಂಬದ ಮೇಲೆ ಅತೀವವಾದ ಪ್ರೀತಿ ತೋರಿಸಿತು. ಬಂಡೆಯವರ ಪತ್ನಿ “ಬ್ರೈನ್ ಹಾಮರೇಜ್” ಆಗಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾಗ, ಚಿಕಿತ್ಸೆಯ ವೆಚ್ಚಕ್ಕಾಗಿ ಅಂಗಲಾಚುವಂತೆ ಮಾಡಿದ ಸಿದ್ಧರಾಮಯ್ಯನವರ ಸರಕಾರದ ನಡೆ ಪ್ರಾತ:ಸ್ಮರಣಿಯವಾದದ್ದು. ಇದರ ಎಲ್ಲಾ ಶ್ರೇಯಸ್ಸು ಮುಖ್ಯಮಂತ್ರಿಗಳಿಗೇ ಸಲ್ಲಬೇಕಾಗಿದ್ದು, ಆ ಕಾರಣಕ್ಕಾಗಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕು.

* ಅನುಪಮಾ ಶೆಣೈಯವರು ರಾಜೀನಾಮೆ ನೀಡುವಂತೆ ಮಾಡಿದ್ದು
ಕಾಂಗ್ರೆಸ್ ಪಕ್ಷದ ಮಹಾನ್ ನೇತಾರ ರಾಹುಲ್ ಗಾಂಧಿಯವರು ಹುಟ್ಟುವಾಗಲೇ ಕಂಡ ಮಹಾನ್ ಕನಸು ‘ವುಮನ್ ಎಂಪರ್’ಮೆಂಟ್’. ಶ್ರೀ ರಾಹುಲ್ ಜೀಯವರ ಕನಸನ್ನು ನನಸು ಮಾಡುತ್ತಿರುವುದರಲ್ಲಿ ಸಿದ್ಧರಾಮಯ್ಯನವರ ಪಾತ್ರ ಬಹಳ ದೊಡ್ಡದು. ಅದರಲ್ಲಿ ಪ್ರಮುಖವಾದದ್ದು ಡಿವೈಎಸ್’ಪಿ ಅನುಪಮಾ ಶೆಣೈಯವರಿಗೆ ಕಿರುಕುಳ ನೀಡಿದ್ದು, ಬಳ್ಳಾರಿಯ ಕೂಡ್ಲಗಿಯಲ್ಲಿ ಡಿವೈಎಸ್’ಪಿ ಅನುಪಮಾ ಶೆಣೈಯವರನ್ನು ಕಳೆದ ಜನವರಿಯಲ್ಲಿ ರಾಜಕೀಯ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿತ್ತು. ಇದರಲ್ಲಿ ಬಳ್ಳಾರಿಯ ಸಚಿವ ಪರಮೇಶವರ ನಾಯಕ್ ಪಾತ್ರ ಇದೆ ಎನ್ನುವುದು ಸ್ವತಃ ಅವರೇ ಮಾಡಿದ ಭಾಷಣದಿಂದ ಸಾಬೀತಾಗಿತ್ತು. ಈ ಬಗ್ಗೆ ರಾಜ್ಯಾದ್ಯಂತ ಜನ ಸಿಡಿದೆದ್ದರೂ ಮುಖ್ಯಮಂತ್ರಿಗಳು ಮಾತ್ರ ಕ್ಯಾರೇ ಎನ್ನದೇ ತಮ್ಮ ಗಂಡೆದೆ ಪ್ರದರ್ಶಿಸಿದರು, ಕಡೆಗೆ ಪರಮೇಶ್ವರ ನಾಯಕ್ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳದೆ, ವರ್ಗಾವಣೆ ರದ್ದುಗೊಳಿಸಿ ಸರಕಾರ ಕೈತೊಳೆದುಕೊಂಡಿತು. ಅದಾಗಿ ಇನ್ನೂ ಮೂರು ತಿಂಗಳು ಸರಿಯಾಗಿ ಕಳೆದಿರಲಿಲ್ಲ, ಅಷ್ಟ್ರಲ್ಲೇ ಅವರೇ ಹುದ್ದೆಗೆ ರಾಜೀನಾಮೆ ನೀಡುವಂತೆ ಮಾಡಲಾಯ್ತು. ಅಲ್ಲಿಗೆ ರಾಹುಲ್ ಗಾಂಧಿಯವರ ವುಮೆನ್ ಎಂಪರ್ಮೆಂಟ್ ಕನಸು ಸಾಕಾರ ಆಯ್ತು. ಸೋ ತನ್ನ ಪಕ್ಷದ ನೇತಾರ ರಾಹುಲ್ ಗಾಂಧಿಯವರ ಇನ್ನೂ ಹತ್ತು ಹಲವು ಕನಸು ನನನು ಮಾಡುವುದಕ್ಕಾಗಿ ಸಿದ್ಧರಾಮಯ್ಯನವರು ಮತ್ತೊಮ್ಮೆ  ಮುಖ್ಯಮಂತ್ರಿಯಾಗಲೇ ಬೇಕು,.

* ಸಚ್ಚಾರಿತ್ರದ ಸುಭಾಷ್ ಅಡಿಯವರ ಚಾರಿತ್ರ್ಯ ಹರಣ ಮಾಡಿದ್ದು
ಸ್ವತಃ ಲೋಕಾಯುಕ್ತರೇ ಭ್ರಷ್ಟಾಚಾರದ ಕೂಪದೊಳಗೆ ಬಿದ್ದಾಗ ನಮ್ಮೆಲ್ಲರ ಪಾಲಿನ ಏಕಕ ಆಶಾಕಿರಣವಾಗಿದ್ದವರು ಸುಭಾಷ್ ಅಡಿಯವರು. ಭಾಸ್ಕರ್ ರಾವ್ ಮೇಲೆ ಆರೋಪ ಬಂದಾಗ ಅದರ ತನಿಖೆ ನಡೆಸಿ ಎಂದು ಸರಕಾರಕ್ಕೆ ಪತ್ರ ಬರೆದವರು ಇವರೇ. ಆದರೆ ಸರಕಾರಕ್ಕೂ ಭಾಸ್ಕರ್ ರಾವ್’ಗೂ ಅದೇನೋ ಅಡ್ಜಸ್ಟ್’ಮೆಂಟ್ ಇತ್ತೋ ಏನೋ, ಅವರ ಪದಚ್ಯುತಿಗೆ ರಾಜ್ಯಾದ್ಯಾಂತ ಒತ್ತಡ ಬರುತ್ತಿರುವಗಲೇ ಲೋಕಾಯುಕ್ತಕ್ಕೆ ಯಾರೂ ಗೊತ್ತು ಗುರಿಯಿಲ್ಲದಿದ್ದಾಗಲೇ ಸುಭಾಷ್ ಅಡಿ ಪದಚ್ಯುತಿಗೂ ಸಂಚು ರೂಪಿಸಿತು ನಮ್ಮ ಸರಕಾರ. ಅವರ ಮೇಲೆ ಇಲ್ಲ ಸಲ್ಲದ ಆರೋಪವನ್ನು ಹೊರಿಸಿ ಲೋಕಾಯುಕ್ತ ಕಾಯ್ದೆಗೂ ಬದಲಾವಣೆಯನ್ನು ತಂದು, ವಿಧಾನ ಮಂಡಲದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿತು. ಅಷ್ಟು ಹೊತ್ತಿಗೆ ಲೋಕಾಯುಕ್ತ ಅನಾಥವಾದರೂ ಸರಕಾರ ಅದಕ್ಕೂ ಕ್ಯಾರೇ ಅನ್ನಲಿಲ್ಲ. ಕಡೆಗೆ ಸುಭಾಷ್ ಅಡಿ ನಿರಪರಾಧಿ ಎನ್ನುವ ತೀರ್ಪು ಬಂತು. ಸರಕಾರ ಕ್ಷಮೆ ಕೇಳದಿದ್ದರೂ ಅಡಿ ಕರ್ತವ್ಯಕ್ಕೆ ಹಾಜರಾದರು. ಹೀಗಾಗಿ ಅಪರಾಧಿಯಲ್ಲದಿದ್ದರೂ ಅಪರಾಧಿ ಎಂದು ಕರೆದು ಅವರನ್ನು ಜವಾಬ್ದಾರಿಯುತ ಸ್ಥಾನದಿಂದ ಕಿತ್ತೊಗೆಯುವ ಕಾರಣಕ್ಕಾಗಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಬರಬೇಕು ಮತ್ತೊಂದು ಬಾರಿ.

೩. ಇತಿಹಾಸ ಬರೆದ ರೈತರ ಆತ್ಮಹತ್ಯೆ
ಬೆಳೆ ಕೈಕೊಟ್ಟ ಕಾರಣಕ್ಕೆ, ಸೂಕ್ತ ಬೆಂಬಲ ಬೆಲೆ ಸಿಗದ ಕಾರಣಕ್ಕಾಗಿ ರಾಜ್ಯದಲ್ಲಿ ಈ ಭಾರಿ ಸಾವಿರಕ್ಕೂ ಮಿಕ್ಕಿ ರೈತರು ಆತ್ಮಹತೆ ಮಾಡಿಕೊಂಡರು. ಇದಂತೂ ಈವರೆಗಿನ ಸಾರ್ವಕಾಲಿಕ ದಾಖಲೆ. ರೈತರು ಪೈಪೋಟಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರೂ ಸರಕಾರ ಶೀಘ್ರಗತಿಯಲ್ಲಿ ಅವರ ನೋವಿಗೆ ಸ್ಪಂದಿಸಲಿಲ್ಲ. ಇದಕ್ಕೂ ಕಡೆಗೆ ರಾಹುಲ್ ಗಾಂಧಿಯನ್ನೆ ಕರೆಸಬೇಕಾಯ್ತೆಂಬುದು ಸಿದ್ಧರಾಯಮಯ್ಯನವರ ಹೆಗ್ಗಳಿಕೆ. ಆತ್ಮಹತ್ಯೆ ಮಾಡುತ್ತಿರುವಾಗಲೂ ಅವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಮುಖ್ಯಮಂತ್ರಿಯನ್ನು ನಾವೆಂದೂ ಕಂಡಿಲ್ಲ. ಮುಂದೆಂದೂ ಕಾಣುವುದೂ ಇಲ್ಲ. ಆ ಕಾರಣಕ್ಕೆ ಸಿದ್ಧರಾಮಯ್ಯನವರು ಮತ್ತೊಮ್ಮೆ ನಮ್ಮ ಸಿ.ಎಮ್ ಆಗಬೇಕು.

೪. ಲೋಕಾಯುಕ್ತವನ್ನು ಮಕಾಡೆ ಮಲಗಿಸಿದ್ದು
ಸಿದ್ಧರಾಮಯ್ಯ ಆಡಳಿತಾವಧಿಯ ಪರಮೋಚ್ಛ ಸಾಧನೆಯೆಂದರೆ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿ ದೇಶಾದ್ಯಂದ ಖ್ಯಾತಿ ಗಳಿಸಿದ್ದ ಲೋಕಾಯುಕ್ತದ ಹಲ್ಲು ಕಿತ್ತು ಅದನ್ನು ಮಕಾಡೆ ಮಲಗಿಸಿದ್ದು. ಭಾಸ್ಕರ ರಾವ್ ಲೋಕಾಯುಕ್ತರಾಗಿ ಆಯ್ಕೆಯಾಗಿದ್ದು ಬಿಜೆಪಿ ಸರಕಾರವಿದ್ದಾಗಲೇ ಆಗಿರಬಹುದು, ಆದರೆ ಅವರ ಎಲ್ಲಾ ಅಕ್ರಮಗಳಿಗೆ ನೀರೆರೆದು ಪೋಷಿಸಿದ್ದು ಸಿದ್ಧರಾಮಯ್ಯನವರ ಕಾಂಗ್ರೆಸ್ ಸರಕಾರ. ಹಿಂದಿನ ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನೇ ಚುನಾವಣೆಯ ಅಸ್ತ್ರವನ್ನಾಗಿಸಿಕೊಂಡು ಬಂದವರು ಸಿದ್ಧರಾಮಯ್ಯನವರು. ಆದರೆ ಭಾಗ್ಯಗಳ ಮಂಪರಿನಲ್ಲಿ ಅವರಿಗೆ ಪಾರದರ್ಶಕತೆಯೆಂಬುದು ಮರೆತೇ ಹೋಯ್ತು. ಭಾಸ್ಕರ್ ರಾವ್ ಮೇಲೆ ಆರೋಪಗಳು ಬಂದಾಗ ಅವರನ್ನುಾ ಸ್ಥಾನದಿಂದ ತೆಗೆಯಲು ಪ್ರಯತ್ನಿಸಲಿಲ್ಲ. ಹೆಚ್ಚು ಕಡಿಮೆ ಹತ್ತು ತಿಂಗಳು ಲೋಕಾಯುಕ್ತ ಅನಾಥವಾಗಿ ಬಿದ್ದಾಗಲೂ ಸರ್ಕಾರ ತಲೆ ಕೆಡಿಸಲಿಲ್ಲ. ಬಳಿಕ ಭಾಸ್ಕರ ರಾವ್ ರಾಜೀನಾಮೆ ನೀಡಿ ತಿಂಗಳು ಆರಾಗುತ್ತ ಬಂದರೂ ಹೊಸ ಲೋಕಾಯುಕ್ತರ ಸ್ಥಾನಕ್ಕೆ ಕಳಂಕಿತರನ್ನೇ ಶಿಫಾರನ್ನು ಮಾಡುವ ಮೂಲಕ ಲೋಕಾಯುಕ್ತವನ್ನು  ಸಾಧ್ಯವಾದಷ್ಟು ದಿನ ಅನಾಥವನ್ನಾಗಿ ಮಾಡಿ, ಲೂಟಿ ಮಾಡುವ ಪ್ಲಾನ್ ಸರಕಾರದ್ದು. ಈ ಮಧ್ಯೆ ಮೊದಲೇ ಲೋಕಾಯುಕ್ತರಿಲ್ಲದೆ ಸೊರಗಿದ್ದ ಲೋಕಾಯುಕ್ತವನ್ನು ACB ರಚನೆ ಮಾಡುವ ಮೂಲಕ  ದುರ್ಬಲಗೊಳಿಸುವ ಯೋಜನೆಯನ್ನೂ ಜಾರಿಗೊಳಿಸಿತು ಸರಕಾರ . ಈ ಕುರಿತಾಗಿಯೂ ರಾಜ್ಯಾದ್ಯಂತ ವಿರೋಧ ವ್ಯಕ್ತವಾದರೂ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ದಪ್ಪ ಚರ್ಮದ ಸರಕಾರ. ಅಲ್ಲಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಮಗಿದ್ದ ಒಂದೇ ಒಂದು ಅಸ್ರಕ್ಕೆ ಸರಕಾರ ಎಳ್ಳು ನೀರು ಬಿಟ್ಟಿತು. ಸೋ, ವೆಂಕಟಾಚಲಯ್ಯ, ಸಂತೋಷ್ ಹೆಗ್ಡೆ ಮುಂತಾದವರು ತಮ್ಮ ದಕ್ಷ ಕೆಲಸದಿಂದಾಗಿ ಖ್ಯಾತಿ ತಂದುಕೊಟ್ಟಿದ್ದ ಲೋಕಾಯುಕ್ತವನ್ನು ಮೂರೇ ಮೂರು ವರ್ಷಗಳಲ್ಲಿ ಮೂಲೆ ಗುಂಪು ಮಾಡಿದ ಮುಖ್ಯಮಂತ್ರಿ ಇದುವರೆಗೂ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ, ಸಿದ್ಧರಾಮಯ್ಯನವರನ್ನು ಬಿಟ್ಟರೆ. ಆ ಕಾರಣಕ್ಕಾಗಿಯಾದರೂ ಸಿದ್ಧರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು.

೫. ಶಿಕ್ಷಣ ಇಲಾಖೆಯನ್ನು ಬರ್’ಬಾದ್ ಮಾಡಿದ್ದು
ರಾಜ್ಯ ಸರಕಾರಕ್ಕೆ ಪದೇ ಪದೇ ಹೆಸರು ತಂದುಕೊಟ್ಟಿದ್ದು ನಮ್ಮೆಲ್ಲರ ಮೆಚ್ಚಿನ ಶಿಕ್ಷಣ ಇಲಾಖೆ. ಒಂದೇ ಪ್ರಶ್ನೆ ಪತ್ರಿಕೆ, ಒಂದಲ್ಲ ಎರಡಲ್ಲ ಮೂರು ಭಾರಿ ಲೀಕ್ ಆಗಿದ್ದು ಇತಿಹಾಸದಲ್ಲಿಯೇ ಇರಲಿಲ್ಲ,. ಅದೂ ಸಹ ಈ ಭಾರಿ ಘಟಿಸಿತು. ಇದರ ಜೊತೆಗೆ ಹೋದ ವರ್ಷದ ಫಲಿತಾಂಶದಲ್ಲಿ ಗೊಂದಲ, ಟೀಚರ್ಸ್ ಪರೀಕ್ಷೆಯ ಗೊಂದಲ, ಅಕ್ರಮ ಮುಂತಾದವುಗಳಿಗೆಲ್ಲಾ ನಾವು ಸಾಕ್ಷಿಯಾಗಿದ್ದೇವೆ. ಇಷ್ಟೆಲ್ಲಾ ಆದರೂ ಅಪ್ರಯೋಜಕ ಮಂತ್ರಿಯ ಮೇಲೆ ಮುಖ್ಯಮಂತ್ರಿಗಳು ದೃತರಾಷ್ಟ್ರ ಪ್ರೇಮವನ್ನು ಮೆರೆದರು. ಪದೇ ಪದೇ ಆರೋಪಗಳು ಬಂದರೂ ಜನ ತಿರುಗಿ ಬಿದ್ದರೂ ಮಾನ್ಯ ಮಾಡದೆ, ವಿಧ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬಿಟ್ಟರೆ ಮತ್ತಿನ್ನಾರಾದರೂ ಇದ್ದಾರಾ? ಈ ಕಾರಣಕ್ಕೆ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು.

೬.ಜನರ ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡಿದ್ದು
ದೇಶದ ಜನರ ಸ್ವಾತಂತ್ರ್ಯವನ್ನು ಹರಣ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷ ೧೯೭೫ ರಿಂದಲೇ ಭಾರೀ ಫೇಮಸ್ಸು. ಅಂತೆಯೇ ೨೦೧೩ ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯನವರ ಸರಕಾರವೂ ಏನೂ ಹಿಂದೆ ಬೀಳಲಿಲ್ಲ. ಸರಕಾರದ ಧೋರಣೆಯನ್ನು ವಿರೋಧಿಸುವವರ ಮೇಲೆ ಹದ್ದಿನ ಕಣ್ಣಿಟ್ಟು ಅವರನ್ನು ಮತ್ತಿನ್ಯಾವುದೋ ಸಂದರ್ಭದಲ್ಲಿ ಸಿಕ್ಕಿಸಿ ಹಾಕುವ ಕೆಲಸ ಎಗ್ಗಿಲ್ಲದೆ ನಡೆಯಿತು. ಇದಕ್ಕಾಗಿಯೇ ಕೆಲಸವಿಲ್ಲದೆ ಕಾಲಿ ಬಿದ್ದಿದ್ದ ವಿಶೇಷ “ಸಲಹೆಗಾರರನ್ನೂ” ನೇಮಿಸಲಾಯ್ತು. ಈ ಕಾರ್ಯಾಚರಣೆಯ ಅಂಗವಾಗಿ  ಮೊತ್ತ ಮೊದಲನೇ ಭಾರಿಗೆ ನಿಲುಮೆ ಗುಂಪಿನ ಮುಖ್ಯಸ್ಥರ ಮೇಲೆ ಕೇಸು ದಾಖಲಾಯ್ತು, ಭಗವಾನನೆಂಬ ತಿಳಿಗೇಡಿಯನ್ನು ಪ್ರಶ್ನಿಸಿದ್ದಕ್ಕಾಗಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಗೆ ನಾಯಿಗೆ ಹೊಡೆದಂತೆ ಹೊಡೆಯಲಾಯ್ತು. ಉಗ್ರಪ್ಪರ ಭಾಷಣಕ್ಕೆ ಚಪ್ಪಾಳೆ ಹೊಡೆಯದೆ, ಎಸ್ಪಿ ಅಣ್ಣಾಮಲೈ ಮಾತಿಗೆ ಚಪ್ಪಾಳೆ ಹೊಡೆದ ಇಬ್ಬರನ್ನು ಬಂಧಿಸಲಾಯ್ತು. ಕರೆಂಟ್ ಕೊಡಿ ಎಂದು ಇಂಧನ ಸಚಿವರನ್ನು ತರಾಟೆಗೆ ತೆಗೆದುಕೊಂಡ ವ್ಯಕ್ತಿಯನ್ನು ಅವರ ಮನೆಯ ಹಂಚು ತೆಗೆದು ಹಾರಿ ಕಂಬಿ ಹಿಂದೆ ತಳ್ಳಲಾಯ್ತು. ಪ್ರಶ್ನೆ ಕೇಳಿದ ಪತ್ರಕರ್ತರನ್ನೇ ಬಂಧಿಸುವ ಬೆದರಿಕೆ ಹಾಕಿದ್ದೂ ನಡೆದಿದೆ. ಹೀಗಾಗಿ ನಮ್ಮೆಲ್ಲಾ ಸ್ವಾತಂತ್ರ್ಯವನ್ನು ರಾಜಕಾರಣಿಗಳ ಕೈಗೊಪ್ಪಿಸಿ ಅದನ್ನು ಸೂಕ್ತ ಸಂದರ್ಭದಲ್ಲಿ ಹರಣ ಮಾಡಿಸಿಕೊಳ್ಳುವುದಕ್ಕಾಗಿ ಸಿದ್ಧರಾಮಯ್ಯನವರನ್ನು ಮತ್ತೊಮ್ಮೆ ಆರಿಸಬೇಕು.

೭. ಆಂಜನೇಯ ಡೀಲ್ ಪ್ರಕರಣ
ಸಚಿವ ಆಂಜನೇಯ, ಸಿದ್ಧರಾಮಯ್ಯ ಸರಕಾರದ ಕೀರ್ತಿ ಕಲಶ ಇದ್ದಂತೆ. ಸಿದ್ಧರಾಮಯ್ಯ ಕೆಮ್ಮಿದರೂ ಗುಮ್ಮಿದರೂ ಅವರ ಆಜುಬಾಜಿನಲ್ಲಿ ಮೊದಲು ಕಾಣ ಸಿಗುವ ಸಚಿವರೂ ಇವರೇ. ಇಂತಿಪ್ಪ ಆಂಜನೇಯ, ಹಿಂದುಳಿದ ವರ್ಗದ ಮಕ್ಕಳಿಗೆ ನೀಡುವ ಅನ್ನದಲ್ಲಿ ಕಮಿಷನ್ ಪಡೆದು ತನ್ನ ಕಲ್ಯಾಣ ಮಾಡಿಕೊಂಡಿದ್ದ ಸಂಗತಿ ಆರು ತಿಂಗಳ ಹಿಂದೆ ರಾಜ್ಯಾದ್ಯಂತ  ಜನಜನಿತವಾಗಿತ್ತು. ಆಂಜನೇಯ ಪಾತ್ರ ವೀಡಿಯೋದಲ್ಲಿ ಸ್ಪಷ್ಟವಾಗಿದ್ದರೂ ಸಹ ಅದು ಬರೀ ಕಾಗದದ ಕಟ್ಟು ಎನ್ನುತ್ತಾ, ಅದರ ಕುರಿತಾಗಿ ಒಂದು ತನಿಖೆಯನ್ನೂ ನಡೆಸದೆ ಪ್ರಕರಣಕ್ಕೆ ಅಂತಿಮ ಮೊಳೆ ಹೊಡೆಯಲಾಯ್ತು, ಸಾಲದ್ದಕ್ಕೆ ಆ ವೀಡಿಯೋವನ್ನು ಪ್ರಕಟಿಸಲೇಬಾರದು, ಈ ಕುರಿತು ಯಾವುದೇ ಪ್ರೋಗ್ರಾಂ ಮಾಡಬಾರದೆಂದು ಕೋರ್ಟ್  ಆದೇಶ ತಂದು  ಮಾಧ್ಯಮದವರ  ಬಾಯಿ ಮುಚ್ಚಿಸಲಾಯ್ತು. ದಲಿತರ, ಹಿಂದುಳಿದವರ ಹೆಸರು ಹೇಳಿಕೊಂಡು ಸ್ವಂತಕ್ಕೆ ಹಣ ಮಾಡಿಕೊಂಡವರನ್ನು ಸರಕಾರವೇ ರಕ್ಷಿಸಿತ್ತು. ಸೋ, ಇಂತಹಾ ಬ್ರಹ್ಮಾಂಡ ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುವುದಕ್ಕಾಗಿ ಸಿದ್ಧರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು.

೮. ಬೆಂಗಳೂರಿಗೆ ‘ರೇಪ್ ಕ್ಯಾಪಿಟಲ್’ ಎನ್ನುವ ಹೆಸರು ತಂದು ಕೊಟ್ಟೀದ್ದಕ್ಕಾಗಿ
ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವವಿಖ್ಯಾತವಾಗಿರುವ ಬೆಂಗಳೂರಿನಲಿ ಇತ್ತೀಚೆಗಿನ ಎರಡು ವಷದಲ್ಲಿ ಲೆಕ್ಕವಿಲ್ಲದಷ್ಟು ಅತ್ಯಾಚಾರಗಳು ನಡೆಯಿತು. ಅದೂ ಸಹ ಎರಡು ಮೂರು ವರ್ಷಗಳ ಹಸುಗೂಸುಗಳ ಮೇಲೆ. ಜೊತೆಗೊಂದಿಷ್ಟು ಗ್ಯಾಂಗ್ ರೇಪುಗಳು. ಒಬ್ಬ ಗೃಹ ಸಚಿವ ಎರಡು ಜನ ಮಾಡಿದ್ರೆ ಅದೇಗೆಗ್ಯಾಂಗ್ ರೇಪ್ ಆಗುತ್ತದೆ ಅಂತ ಪ್ರಶ್ನಿಸಿದ್ರು. ಮತ್ತೊಬ್ಬ ರಾತ್ರಿ ಹೊತ್ತಿನಲ್ಲಿ ಆ ಮಹಿಳೆ ಟೆನಿಸ್ ಆಡಲು ಹೋಗಿದ್ದೇಕೆ ಅಂತ್ರ ಪ್ರಶ್ನಿಸಿದ್ರು. ಆದ್ದರಿಂದ ಅಂತಹಾ ಘನಾಂದಾರಿ ಗೃಹ ಸಚಿವರನ್ನು ರಾಜ್ಯಕ್ಕೆ ನೀಡಿದ್ದಕ್ಕಾಗಿ ಬೆಂಗಳೂರನ್ನು ರೇಪ್ ಕ್ಯಾಪಿಟಲ್ ಮಾಡಿದ್ದಕ್ಕಾಗಿ ಸಿದ್ಧರಾಮಯ್ಯನವರು ಅಭಿನಂದಾರ್ಹರು. ಈ ಕಾರಣಕ್ಕಾಗಿ ಅವರನ್ನು  ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು.

೯. ಅಧಿಕಾರಶಾಹಿಯ ಪ್ರತಿಭಟನೆ
ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೊಲ್ಲೊಂದು ಇಲಾಖೆಯ ಅಧಿಕಾರಿಗಳು, ನೌಕರರ ಪ್ರತಿಭಟನೆ ನೋಡುವ ಭಾಗ್ಯ ಜನರಿಗೆ ಲಭಿಸಿದೆ. ಇದಕ್ಕೆ ಮೊನ್ನೆ ಒಂದರ ಹಿಂದೆ ಮತ್ತೊಂದು ಎಂಬಂತೆ ನಡೆದ ಸರಕಾರಿ ನೌಕರರ ಪ್ರತಿಭಟನೆ ಮತ್ತು ನಡೆಯಬೇಕಾಗಿದ್ದ ಪೋಲೀಸರ ಪ್ರತಿಭಟನೆ ಜ್ವ್ಲಂತ ಉದಾಹರಣೆ. ಇದಲ್ಲದೆ ೧೦೮ ಆಂಬುಲೆನ್ಸ್ ನೌಕರರ ಪ್ರತಿಭಟನೆ, ಉಪನ್ಯಾಸಕರ ಪ್ರತಿಭಟನೆಯನ್ನು ನಾವು ಕಂಡಿದ್ದೇವೆ. ಆದರೆ ಈ ಎಲ್ಲಾ ಪ್ರತಿಭಟನೆಯನ್ನು ಎಸ್ಮಾ ಕಾನೂನು, ಶಿಸ್ತು ಕ್ರಮ ಮುಂತಾದುವುಗಳ ಹೆಸರಿನಲ್ಲಿ ಹತ್ತಿಕ್ಕಲಾಯಿತು. ಅದರಲ್ಲೂ ಪ್ರತಿಭಟನೆಗ ನಡೆಸುವ ತಯಾರಿಯಲ್ಲಿದ್ದ ಪೋಲೀಸರಲ್ಲಿ ಕೆಲವರನ್ನು ಮೊದಲೇ ಬಂಧಿಸುವ ಮೂಲಕ ಪ್ರತಿಭಟನೆಯನ್ನು ಮೂಲೆ ಗುಂಪು ಮಾಡಲಾಯ್ತು. ಈ ವಿಷಯದಲ್ಲಿ ಮುಜುಗರ ತಪ್ಪಿಸುವುದಕ್ಕಾಗಿ ಸರಕಾರ ಎಷ್ಟು ಕೀಳು ಮಟ್ಟಕ್ಕಿಳಿಯಿತೆಂದರೆ ಪೋಲೀಸರಿಗೆ ನೀಡಿರುವ ವಸತಿ ಗೃಹಗಳಿಂದ ಹೊರ ಹಾಕುವುದಾಗಿಯೂ ಬೆದರಿಕೆ ಹಾಕಿತು,. ಈ ರೀತಿ, ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ, ತಮ್ಮ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನಿ ವಿರೋಧಿಸುವುದಕ್ಕಾಗಿ ಪ್ರತಿಭಟನೆ ನಡೆಸುವವರನ್ನು ಎಗ್ಗಿಲ್ಲದೆ ದಮನ ಮಾಡಿದ ಕೀರ್ತಿ ಶ್ರೀಮಾನ್ ಸಿದ್ಧರಾಮಯರವರಿಗೆ ಸಲ್ಲಬೇಕು. ಮುಂದೆಯೂ ಸರಕಾರದ ವಿರುದ್ಧ ಸೊಲ್ಲೆತ್ತದಂತೆ, ಪ್ರತಿಭಟನೆ ನಡೆಸದಂತೆ ಮಾಡಲು ಸಿದ್ಧರಾಮಯನವರು ಮತ್ತೊ ಸಿ.ಎಂ ಆಗಲೇಬೇಕು ಯಾಕೆಂದರೆ ಈ ಕೆಲಸ ಅವರಿಂದ ಮಾತ್ರ ಸಾಧ್ಯ.

೧೦.ಟಿಪ್ಪು ಜಯಂತಿ.

ಟಿಪ್ಪು ಜಯಂತಿಯ ಕರಾಳ ಇಥಾಸ ಎಂದೆಂದಿಗೂ ಮರೆಯಲಾರದ್ದು. ಟಿಪ್ಪು ಜಯಂತಿಯನ್ನು ಮಾಡಬೇಡಿ, ಗಲಭೆಯಗುತ್ತದೆ, ಸಮಾಜದ ಶಾಂತಿ ಕೆಡುತ್ತದೆ ಎಂದು ರಾಜ್ಯದ ಜನರು ಪರಿಪರಿಯಾಗಿ ಬೇಡಿಕೊಂಡರೂ, ವೋಟಿನಾಸೆಗೆ ಬಿದ್ದ ಸರಕಾರ ಮತ್ತೊಂದು ವರ್ಗದ ಮನಸೆಳೆಯುವುದಕ್ಕಾಗಿ ಟಿಪ್ಪು ಜಯಂತಿಯನ್ನು ನಡೆಸಿಯೇ ತೀರಿತು. ಇದರ ಪರಿಣಾಮವಾಗಿ ಮಡಿಕೇರಿಯಲ್ಲಿ ರಕ್ತಪಾತ ನಡೆಯಿತು. ಒಂದೆರಡು ಅಮಾಯಕರ ಹೆಣ ಬಿತ್ತು. ಅಲ್ಲಿನ ಗಲಭೆ ಹುಟ್ಟಿಸಿದ ಕಿಡಿಗೆ ಇತರ ನಗರಗಳಲ್ಲೂ ಬೆಂಕಿ ಹತ್ತಿಕೊಂಡಿತು. ಇಂತಹ ಅರ್ಥವಿಲ್ಲದ, ಜನಕ್ಕೇನೂ ಉಪಯೋಗವಿಲ್ಲದ ಜಯಂತಿಗಳನ್ನು ನಡೆಸುವ ಮೂಲಕ ಸರಕಾರಿ ಕೃಪಾಪೋಷಿತ ಗಲಭೆಯನ್ನು ನಡೆಸುವುದಕ್ಕಾಗಿ ಈ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು.

ಸರಕಾರದ ಆಯಕಟ್ಟಿನಲ್ಲಿ ಅಪ್ರಯೋಜಕ ನಿರುದ್ಯೋಗಿಗಳನ್ನು ನಿಯೋಜಿಸಿಕೊಳ್ಳಲು, ಕೆ.ಪಿ.ಎಸ್.ಸಿ, ಲೋಕಾಯುಕ್ತದಂತಹ ಪ್ರಮುಖವಾದ ಕ್ಷೇತ್ರಗಳಿಗೆ ತಮಗೆ ಆಪ್ತರಾಗಿರುವ ಬ್ರಹ್ಮಾಂಡ ಭೃಷ್ಟಾಚಾರಿಗಳನ್ನು ನೇಮಿಸಿಕೊಳ್ಳುವುದಕ್ಕಾಗಿ, ಬೇಡ ಬೇಡವೆಂದು ಅಂಗಲಾಚಿದರೂ ನೇತ್ರಾವತಿಯಂತಹ ಪಾವನ ನದಿಗಳನ್ನು ತಿರುಗಿಸಿ ಒಂದಿಡೀ ಊರಿಗೆ ಅನ್ಯಾಯ ಮಾಡಲು, ಚಾಮುಂಡೇಶ್ವರಿಯ ತಪ್ಪಲಿನಲ್ಲಿ ಮಾಲುಗಳನ್ನು ತೆರೆದು ದೊಡ್ಡ ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಕೊಡುವುದಲ್ಲದೇ, ಪ್ರಶಾಂತ ಪರಿಸರವನ್ನು ಕೆಡಿಸುವುದಕ್ಕಾಗಿ ಸಿದ್ಧರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು.  ಇದೆಲ್ಲದರ ಜೊತೆಗೆ, ರಾಜ್ಯವನ್ನು ಬರೀ ಐದು ವರ್ಷದಲ್ಲಿ ಲೂಟಿಮಾಡಿ ಮುಗಿಸಲು ಸಾಧ್ಯವಿಲ್ಲ.  ಕರ್ನಾಟಕವನ್ನು ಸಂಪೂರ್ಣವಾಗಿ ನುಂಗಿ ನೀರು ಕುಡಿದು ಬಿಡುವುದಕ್ಕಾದರೂ ಸಿದ್ಧ್ರಾಮಯ್ಯ ಮತ್ತೊಮ್ಮೆ ನಮ್ಮ ಸಿ.ಎಂ ಆಗಲೇಬೇಕು,. ಇನ್ನೂ ಒಂದು ಬಹಳಾನೆ ಇಂಪಾರ್ಟೆಂಟ್ ಮ್ಯಾಟರ್ ಹೇಳಲಾ? ಸದನದಲ್ಲಿ ಬಹಳಾ ಗಂಭೀರ ವಿಷಯಗಳ ಮೇಲೆ  ಚರ್ಚೆ ನಡೆಯುತ್ತಿರುವಾಗ  ಹಾಯಾಗಿ ಮಲಗಿ ನಿದ್ರಿಸುವುದಕ್ಕಾಗಿ ಶ್ರೀ ಸಿದ್ಧರಾಮಯ್ಯನವರನ್ನು ಮತ್ತೆ ಸಿ.ಎಂ ಮಾಡಲೇಬೇಕು. ಇಂತಹಾ ಸಿ.ಎಂ ಅನ್ನು ರಾಜ್ಯ ಇತಿಹಾಸದಲ್ಲೇ ಕಂಡಿಲ್ಲ, ಮುಂದೆ ಕಾಣುವುದೂ ಇಲ್ಲ.

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post