X
    Categories: ಕಥೆ

ಶುದ್ಧಿ ಭಾಗ-೩

ಶುದ್ಧಿ ಭಾಗ -೨

 

ಮದ್ದೂರಿನಲ್ಲಿ ಮಾಣಿಯಾಗಿ ಕೆಲಸ ಸರಾಗವಾಗೆಸಾಗುತ್ತಿತ್ತು. ಆದರೆ ಗಂಗಾಧರನಿಗೆ ಜೀವನದಿಂದ ಇನ್ನುಏನಾದರು ಬೇಕಾಗಿತ್ತು. ಈ ತಿಂಡಿ ಕೊಡುವುದು,ರುಚಿಯಿಲ್ಲದಿದ್ದರೆ ಜನ ರೇಗುವುದು, ಊಟಬಿಸಿಯಿಲ್ಲದಿದ್ದರೆ ಮುಖ ಹಿಂಡಿಕೊಂಡು ನಿಂದಿಸುವುದುಇವೆಲ್ಲಾ ಸಾಕಾಗಿಹೋಗಿತ್ತು. ಅವನ ದಾರಿ ಇನ್ನುವಿಶಾಲವಾಗಿದೆ. ಸಾಧನೆ ಮಾಡಬೇಕು ಎಂಬ ಹಂಬಲಇವನನ್ನು ಒಳಗೊಳಗೇ ಕೊರೆಯುತ್ತಿತ್ತು. ಬರುತ್ತಿದ್ದಸಂಬಳವನ್ನೆಲ್ಲಾ ಕೂಡಿ ಇಟ್ಟುಕೊಂಡಿದ್ದ. ಒಂದು ದಿನಉಪಾಯ ಹೊಳೆಯಿತು. ತನ್ನಂತೆಯೇ ಕನಸುಗಳನ್ನುಕಟ್ಟಿಕೊಂಡಿದ್ದ ಇಬ್ಬರು ಮಾಣಿಗಳನ್ನು ಕೂಡಿಸಿದ. ಒಬ್ಬತನ್ನ ವಯಸ್ಸಿನವನೇ ಆದ ರಾಜೇಶ ಮತ್ತೊಬ್ಬರು ಕೊಂಚಹಿರಿಯರು ಕೃಷ್ಣಮೂರ್ತಿಗಳು. ಇಬ್ಬರಿಗೂ ಒಂದು ರಾತ್ರಿಮದ್ದೂರು ರೈಲ್ವೆ ನಿಲ್ದಾಣದಲ್ಲಿ ತನ್ನನ್ನು ಭೇಟಿಮಾಡುವುದಾಗಿ ಹೇಳಿ ಅವರಿಗೆ ಹೇಳಬೇಕಾದವಿಷಯಗಳನ್ನು ಮನದಟ್ಟು ಮಾಡಿಕೊಂಡ.

ಮೂವರೂ ಆ ರಾತ್ರಿ ರೈಲ್ವೆ ನಿಲ್ದಾಣದ ಒಂದು ಕಲ್ಲುಬೆಂಚಿನ ಮೇಲೆ ಕುಳಿತು ಚಹಾ ಹೀರುತ್ತಿದ್ದರು.

‘ಮೂರು ಜನಕ್ಕು ಈ ಕೆಲಸ ಬೇಜಾರಾಗಿದೆ. ಯಾಕೆಬೇಜಾರಾಗಿದೆ? ಯಾಕೇಂದ್ರೆ ನಮಗೆ ಕೆಲಸ ಮಾಡೋ ಆಸೆಇಲ್ಲ,ಕೆಲಸ ಕೊಡೋ ಆಸೆ ಇದೆ.’ ಉತ್ಸುಕನಾಗಿ ಗಂಗಾಧರಮಾತು ಆರಂಭಿಸಿದ. ’ಸಾಹುಕಾರ್ರು ನಮ್ಮೇಲೆ ಸವಾರಿಮಾಡೋಬದ್ಲು,ನಾವೇ ಸಾಹುಕಾರರಾಗ್ಬೇಕು.’

‘ಏನ್ ಹೇಳ್ತಿದ್ಯ ಸ್ವಲ್ಪ ಬಿಡಿಸಿ ಹೇಳಪ್ಪ’ ರಾಜೇಶ ಕೇಳಿದ.

‘ನೇರವಾಗಿ ಹೇಳ್ತೀನಿ. ನಾವು ಮೂವರು ಸೇರಿ ಒಂದುಹೋಟೆಲ್ ಶುರು ಮಾಡೋಣ.’

‘ತಮಾಷೆ ಮಾಡ್ತಿದ್ಯೇನೋ ಗಂಗಾ?’ ಹಿರಿಯರು ಕೇಳಿದರು.

‘ಇಲ್ಲ. ತಮಾಷೆ ಅಲ್ಲ. ಇಷ್ಟು ದಿನ ದುಡಿದಿರೋದನ್ನ ನಾನುಕೂಡಿಟ್ಕೊಂಡಿದ್ದೀನಿ. ನೀವು ಕೂಡಿಟ್ಟಿರ್ತೀರ ಅಂತ ಗೊತ್ತು.ಅದನ್ನ ಸೇರಿಸಿ ನಾವೆ ಒಂದು ಹೋಟೆಲ್ ಶುರುಮಾಡೋಣ.

‘ನನ್ ಹತ್ರ ಎಷ್ಟ್ ಮಹಾ ಇದ್ಯಪ್ಪ ದುಡ್ಡು ಹಾಕೋಕೆ?’ರಾಜೇಶ  ಖಾಲಿ ಜೇಬನ್ನು ತೆಗೆದು ತೋರಿಸಿದ.

ಕೃಷ್ಣಮೂರ್ತಿಗಳು ಯೋಚಿಸುತ್ತಿದ್ದರು. ಗಂಗಾಧರಅವರನ್ನೇ ದಿಟ್ಟಿಸಿ ನೋಡುತ್ತಿದ್ದ. ಕಿವಿಯಲ್ಲಿಟ್ಟಿದ್ದಬೀಡಿಯೊಂದನ್ನು ತೆಗೆದು ಮೂರ್ತಿಗಳುಹೊತ್ತಿಸಿಕೊಂಡರು.ಇಬ್ಬರಿಗು ತಿಳಿಸುವಂತೆ ಗಂಗಾಧರಮಾತು ಮುಂದುವರೆಸಿದ.’ಒಂದಂತು ಖಚಿತ.ನೀವಿಬ್ರುದುಡ್ಡು ಹಾಕಿ ಹಾಕ್ದೇ ಇರಿ. ನಾನಂತು ಒಂದು ಹೋಟೆಲ್ಶುರು ಮಾಡೇ ಮಾಡ್ತೀನಿ.’

ಮತ್ತಷ್ಟು ಮೌನದ ಕ್ಷಣಗಳು ಕಳೆದವು. ’ಎಲ್ಲಿ?ಯಾವಾಗ?ಹೇಗೆ?ಎಷ್ಟು?’ ಕೃಷ್ಣಮೂರ್ತಿಗಳು ಒಂದೇ ಉಸಿರಿನಲ್ಲಿಕೇಳಿದ್ದರು.

ಇದಾದ ಐದು ತಿಂಗಳು ಇಪ್ಪತ್ತೊಂದು ದಿನಕ್ಕೆ ಬೆಂಗಳೂರಿನಆನಂದ್ ರಾವ್ ಸರ್ಕಲಿನಲ್ಲಿ ಬಸವಣ್ಣ ಊಟದ ಮನೆಚಾಲ್ತಿಗೆ ಬಂತು. ಗಂಗಾಧರನ ಪಾಲು ಶೇಖಡ ಅರವತ್ತು,ರಾಜೇಶನ ಪಾಲು ಹದಿನೈದು ಹಾಗು ಕೃಷ್ಣ ಮೂರ್ತಿಗಳಪಾಲು ಇಪ್ಪತ್ತೈದಿತ್ತು. ಮೊದಲೆರಡು ತಿಂಗಳುಪರದಾಟದಲ್ಲೇ ವ್ಯಾಪಾರ ಸಾಗಿತ್ತು. ಮೂರನೇ ತಿಂಗಳುಅಡುಗೆಭಟ್ಟ ಬದಲಾದ. ಹೊಸ ಅಡುಗೆಭಟ್ಟನಕಾಲ್ಗುಣವೋ, ಅವನ ಕೈ ರುಚಿಯೋ ನಿಧಾನವಾಗಿಬಸವಣ್ಣ ಊಟದ ಮನೆ ಹೆಸರು ಪಡೆಯಿತು. ಕೆಲವರ್ಷಗಳ ನಂತರ ಮೂವರು ಸೇರಿ ಬಸವಣ್ಣ ಫ಼ುಡ್ಪ್ರಾಡಕ್ಟ್ಸ್ ಎಂಬ ಹೆಸರಿನಲ್ಲಿ ಹೊಸ ಸಂಸ್ಥೆಯೊಂದನ್ನುಜಾರಿಗೆ ತಂದರು. ಹೋಟೆಲಿಗಿದ್ದ ಹೆಸರಿನಿಂದ ಆಕಂಪನಿಯಲ್ಲಿ ತಯಾರಾದ ಲಘು ತಿಂಡಿ ಪದಾರ್ಥಗಳುಬಹುಬೇಗ ಮಾರಾಟವಾಗುತ್ತಿತ್ತು. ಗಂಗಾಧರ ಏರಿದ್ದಕನಸಿನ ಕುದುರೆ ಗುರಿ ಮುಟ್ಟಿ ಮನೆ-ಮಠ,ಆಸ್ತಿ ಪಾಸ್ತಿ,ಆಳುಕಾಳುಗಳು,ಕಾರು ಬಂಗಲೆಗಳು ಎಲ್ಲವೂ ಗಿಟ್ಟಿತು.ಇನ್ನಾದರು ಅಪ್ಪ ಅವ್ವನನ್ನು ತನ್ನ ಮನೆಗೆ ಕರೆದುಕೊಂಡುಹೋಗಿ ನೋಡಿಕೊಳ್ಳಬೇಕು, ಅದು ತನ್ನ ಧರ್ಮ ಎಂದುಯೋಚಿಸಿದವನೇ ತನ್ನ ನಂಬಿಕಸ್ಥ  ಡ್ರೈವರ್ ಹುಟ್ಟೇಶನಿಗೆಹೇಳಿ ಕಾರನ್ನು ತನ್ನ ಹುಟ್ಟೂರಾದ ಇಟ್ಟಿಗೆಗೂಡಿನ ಕಡೆಗೆಹೊರಳಿಸಿದ್ದ. ಈಗ ಇಷ್ಟೆಲ್ಲಾ ಆಗಿಹೋಗಿದೆ. ಕಾಲಯಾರಿಗು ಕಾಯುವುದಿಲ್ಲ. ತಾನು ಧರ್ಮ ಭ್ರಷ್ಟನಾದೆ.ತಂದೆ ತಾಯಂದಿರನ್ನು ಸಂತೋಷವಾಗಿಟ್ಟುಕೊಳ್ಳದಮಕ್ಕಳು ಕಸಕ್ಕೆ ಸಮ, ಈ ಪಾಪ ಇನ್ನು ನನ್ನನ್ನುಜೀವನಪರ್ಯಂತ ಅಂಟಿಕೊಳ್ಳುತ್ತದೆ. ಇದನ್ನು ತೊಳೆದುಹಾಕಿಕೊಳ್ಳುವುದು ಹೇಗೆ? ಅವರ ಕಣ್ಣೀರಿನ ಶಾಪ ನನ್ನನ್ನುಬಿಟ್ಟೀತೆ?  ಯಾರಿಗಾಗಿ ಮಾಡಿಕೊಂಡೆನು ಈ ದುಡ್ಡು?ಈಮನೆ?ಕಾರು?ನನಗೂ ಮದುವೆಯಾಗಲಿಲ್ಲ. ಅನಾಥನಾಗಿಹೋದೆನಲ್ಲ. ಕೊನೇ ಪಕ್ಷ ಅಂತ್ಯಕ್ರಿಯೆ ಮಾಡುವ ಯೋಗಕೂಡ ತನಗೆ ಒದಗಿಬರಲಿಲ್ಲವಲ್ಲ. ಇದ್ದಾಗಲೇನೋಡಿಕೊಳ್ಳಲಿಲ್ಲ. ಇನ್ನು ಅಂತ್ಯಕ್ರಿಯೆ ಮಾಡುವ ಆಸೆಪಡುವುದು ಅಪರಾಧ ಎಂದು ಯೋಚಿಸುತ್ತಾ ಕಾರಿನಕಿಟಕಿಯ ಹೊರಗೆ ನೋಡಬೇಕಾದರೆ ’ಶ್ರೀರಂಗಪಟ್ಟಣಕ್ಕೆದಾರಿ’ ಎಂಬ ಬೋರ್ಡು ಕಾಣಿಸಿತು. ಇಲ್ಲೇ ಅಲ್ಲವೇ ಅಸ್ತಿವಿಸರ್ಜನೆ ಮಾಡೋದು. ಆಸೆಗಳನ್ನು ಅಪ್ಪ ಅವ್ವ ಇದ್ದಾಗಲೆನಾನೇ ಸುಟ್ಟು ಬೂದಿ ಮಾಡಿದ್ದೆ. ಬದುಕಿದ್ದಾಗಲೇ ಅವರುಅಸ್ತಿಯಂತೆ ಜೀವಿಸುತ್ತಿದ್ದರೇನೋ. ಈಗ ಅವರ ಆತ್ಮವಿಶ್ರಮಿಸುತ್ತಿರುತ್ತದೆ. ಆದರೆ ನನ್ನ ಆತ್ಮ?ಮಲಿನಗೊಂಡಿರೋ ಆತ್ಮ? ಇದಕ್ಕೆ ಶುದ್ಧಿ? ’ಹುಟ್ಟೇಶ,ಕಾರ್ತಿರುಗಿಸು. ಶ್ರೀರಂಗಪಟ್ಟಣಕ್ಕೆ ಹೋಗೋಣ.’

ಕಾವೇರಿ ನದಿ ತನ್ನದೇ ನಾದವನ್ನು ಸೃಷ್ಟಿಸುತ್ತಾ ಪ್ರಪಂಚದಪರಿವಿಲ್ಲದೆ ಹರಿಯುತ್ತಿತ್ತು. ಹುಟ್ಟೇಶನಿಗೆ ಈ ದಿನನಡೆದಿರುವ ಸಂಗತಿಗಳು ವಿಚಿತ್ರವೆನ್ನಿಸುತ್ತಿದೆ. ತನ್ನ ಧಣಿಬಟ್ಟೆ ಕಸಿದು ನೇರ ನದಿಯೊಳಕ್ಕೆ ಇಳಿದಿದ್ದಾರೆ. ಮೂರುಬಾರಿ ಮುಳುಗೆದ್ದರು. ಅಲ್ಲೇ ಕೆಲಕಾಲ ನಿಂತಿದ್ದಾರೆ.ಧಣಿಗಳು ಇಷ್ಟು ದಿನ ತನ್ನನ್ನು ಸ್ವಂತ ತಮ್ಮನಂತೆಕಾಣುತ್ತಿದ್ದರು. ಹಬ್ಬಕ್ಕೆ ರಜ, ಬೋನಸ್ ದುಡ್ಡು, ಕೇಳಿದಾಗಸಂಬಳ ಹೆಚ್ಚಿಸುತ್ತಿದ್ದರು, ಎಂದೂ ದರ್ಪ ತೋರಿದವರಲ್ಲ.ಅದೇ ಕಾರಣದಿಂದ ಹುಟ್ಟೇಶ ಕೆಲಸ ಬದಲಾಯಿಸಿರಲಿಲ್ಲ.ಧಣಿಗಳಿಗು ತನಗೂ ಒಂದು ರೀತಿಯ ಬಾಂಧವ್ಯ ಬೆಳೆದಿತ್ತು.ಎಷ್ಟೇ ಸಲುಗೆಯಿದ್ದರೂ ಅವರ ಬಗೆಗೆ ಹುಟ್ಟೇಶನಿಗೆಅಪಾರವಾದ  ಗೌರವವಿತ್ತು. ಇಂದು ಬೆಳಗ್ಗೆಯಿಂದ ಒಂದುರೀತಿಯ ಮುಜುಗರ. ಧಣಿಗಳ ಜೊತೆಗೆ ಮಾತನಾಡಿ ತನ್ನಮನೋವೇದನೆಗೆ ಒಂದು ಪರಿಹಾರ ಕಂಡುಕೊಳ್ಳಬೇಕೆಂಬತವಕ. ಆದರೆ ಈ ದಿನ ವಿಚಿತ್ರವಾಗಿ ಸಾಗುತ್ತಿದೆ.ಬೆಂಗಳೂರಿನಿಂದ ಹೊರಟಾಗ ಅತ್ಯಂತ ಉತ್ಸಾಹದಲ್ಲಿದ್ದಧಣಿಗಳು ಮೈಸೂರಿನಲ್ಲಿ ಯಾಕೋ ಮಂಪರುಕವಿದಂತಾಗಿದ್ದಾರೆ. ಶ್ರೀರಂಗಪಟ್ಟಣದಲ್ಲಂತುಕಳೆದೇಹೋಗಿದ್ದಾರೆ.

ಶ್ರೀರಂಗಪಟ್ಟಣದ ಈ ಸಂಗಮ ಮನಸಿನಲ್ಲಿ ಒಂದುರೀತಿಯ ಶಾಂತತೆ ತುಂಬುತ್ತಿದೆ. ಇಲ್ಲಿ ಯಾರಿಗೂ ಚಿಂತೆಯೇಇಲ್ಲವೇ? ಈ ನೀರಿಗೆ? ಆ ಗಾಳಿಗೆ? ಮರಗಳಿಗೆ? ಅಲ್ಲಿಮರದ ಕೆಳಗೆ ಹಿಮಾಲಯದ ಯೋಗಿಯ ರೂಪದಲ್ಲಿಕುಳಿತಿರುವ ಬಾಬಾಗೆ, ಯಾರಿಗೂ ಯಾವ  ಚಿಂತೆಯೂಇಲ್ಲದಂತಿದೆ.ಈ ನೀರಿನ ಮಹಿಮೆ ಇರಬಹುದು.ಕಾವೇರಿ,ಕಬಿನಿ ಮತ್ತು ಹೇಮಾವತಿ ಮೂರು ಸೇರುವಸಂಗಮ ಇದು. ಚಿಕ್ಕವಯಸಿನಲ್ಲಿ ಕೇಳಿದ ನೆನಪು. ಮೂರುನದಿಗಳು ಕಾಯ,ವಾಚ,ಮನಸಾ ಸಂಗಮವಾಗಿ ಮನುಷ್ಯನಆಲೋಚನೆ ಮತ್ತು ಆತ್ಮದ ಸ್ಥಿರತೆ ಸಿಗುವ ಸ್ಥಳವಿದುಎಂದು. ಹುಟ್ಟೇಶ ನದಿಯನ್ನೊಮ್ಮೆ ನೋಡಿದ. ಮಂಕುಬಡಿದವನಂತೆ ನದಿಯ ಬಳಿ ನಡೆದು ಬಟ್ಟೆಗಳನ್ನು ಬಿಚ್ಚಿನೀರಲ್ಲಿ ಇಳಿದ. ಮ್ಲಾನತೆಯಲ್ಲಿ ಮುಳುಗಿದ್ದ ಮನಸ್ಸುಏನನ್ನೂ ಯೋಚಿಸದೆ ಧ್ಯಾನದಲ್ಲಿ ತಲ್ಲೀನನಾದಂತೆಭಾಸವಾಯಿತು. ಒಂದು ಕ್ಷಣ ತನ್ನ ಕಷ್ಟಗಳೆಲ್ಲಾ ಮುಳುಗಿನಾಶವಾಯಿತು. ತಲೆ ಸುತ್ತಿದ ಹಾಗಾಯಿತು. ಕೌಸಲ್ಯ ಮತ್ತುಶಾಂತಿ ನಗುತ್ತಾ ಇದ್ದಾರೆ. ತನ್ನ ಸುಳ್ಳನ್ನು ಕ್ಷಮಿಸಿದ್ದಾರೆ.ತಾನು ಮಾಡಿರುವುದು ಅಷ್ಟು ದೊಡ್ಡ ತಪ್ಪೇ? ತನ್ನ ಸುಳ್ಳುಅಷ್ಟು ಶಕ್ತಿಯುತವಾದದ್ದೇ? ಎದೆಯಾಳದಲ್ಲಿ ಕುಳಿತಿದ್ದಅಪರಾಧಿ ಭಾವಕ್ಕೆ ತಲೆ ತಗ್ಗಿಸುವಂತಾಗಿತ್ತು. ಇದರಿಂದಮುಕ್ತಿ ಬೇಕು ಎಂದುಕೊಳ್ಳುವಷ್ಟರಲ್ಲಿ ಪಕ್ಕದಲ್ಲಿ ಧಣಿಗಳುಬಂದು ನಿಂತಿದ್ದರು. ಮುಖದಿಂದ ನೀರು ಸೋರುತ್ತಿತ್ತು. ’ಮೂರು ಬಾರಿ ಮುಳುಗು’ ಎಂದರು.ಹುಟ್ಟೇಶ ಮುಳುಗೆದ್ದ.ಇಬ್ಬರೂ ನದಿಯ ದಡಕ್ಕೆ ಬಂದು ಮೆಟ್ಟಿಲುಗಳನ್ನುಹತ್ತಬೇಕಾದರೆ ಮರದ ಕೆಳಗೆ ಕುಳಿತಿದ್ದ ಬಾಬಾಇದ್ದಕ್ಕಿದ್ದಂತೆ ಕಿರುಚಿಕೊಂಡ. ’ಬಹಿರಂಗವನ್ನು ತೊಳೆದ್ರೇಸಾಕೇನೋ ಮೂಢ, ಅಂತರಂಗಾನ ಹೇಗೆ ತೊಳೀತೀಯಾ?ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ. ಬಸವಣ್ಣ,ಬಸವಣ್ಣ.ಪರಿಶುದ್ಧತೆಯ ಹುಡುಕಾಟದಲ್ಲಿ ಸಿಗೋದೆ ಕಚ್ಚಾ ಸತ್ಯ!ಬದುಕಿನ ಸತ್ಯ’  ಎಂದು ಕೈಯಲ್ಲಿ ಹಿಡಿದಿದ್ದ ಗಂಧದಕಡ್ಡಿಯನ್ನು ಮರಕ್ಕೆ ಆರತಿಯಂತೆ ಬೆಳಗಿ ಮರಕ್ಕೆ ಸಿಕ್ಕಿಸಿದ.

ಶ್ರೀರಂಗಪಟ್ಟಣದಿಂದ ಹೊರಟ ಕಾರಲ್ಲಿ ಗಂಭೀರವಾದಮೌನ. ಬೆಂಗಳೂರು ತಲುಪುವವರೆಗೂ ಇಬ್ಬರೂಮಾತನಾಡಲಿಲ್ಲ. ಇಬ್ಬರ ಅಂತರಾಳ ಮಹಾಯುದ್ಧಮುಗಿದು ಖಾಲಿ ಇರುವ ಯುದ್ಧಭೂಮಿಯಂತೆನಿಶ್ಯಬ್ದವಾಗಿದೆ. ಹುಟ್ಟೇಶ ಕನ್ನಡಿಯಲ್ಲಿ  ಬೀಳುತ್ತಿದ್ದಧಣಿಗಳ ಪ್ರತಿಬಿಂಬವನ್ನೊಮ್ಮೆ  ನೋಡಿದ. ಗಂಭೀರವಾಗಿಕುಳಿತಿದ್ದರು. ಮುಖದಲ್ಲಿ ಗೆಲುವು ಸಾಧಿಸಿ ಶಾಂತತೆಯತೇಜಸ್ಸು ಜಿನುಗುತ್ತಿತ್ತು. ‘ಕಾರ್ ಯಾಕೋ ಎಳೀತಿಲ್ಲ ಸಾರ್’ಎಂದು ಹುಟ್ಟೇಶ ಸ್ಟೇರಿಂಗ್ ವೀಲನ್ನು ನಿಧಾನವಾಗಿ ಎಡಕ್ಕೆಹೊರಳಿಸಿದ.

ಕಿಟುಕಿಯ ಹೊರಗೆ ನೋಡುತ್ತಲೇ ಧಣಿಗಳು ‘ಒಂದ್ ಸರ್ತಿಗ್ಯಾರೇಜಲ್ಲಿ ತೋರಿಸಿಬಿಡು’ ಎಂದರು.

‘ನಾಳೆ ಬೇಕಂದ್ರೆ ಸರ್ವೀಸಿಗೆ ಬಿಟ್ ಬಿಡ್ತೀನಿ. ಇವತ್ತುನಿಮ್ಮನ್ನ ಮನೆಗೆ ಬಿಟ್ಟು, ನೇರ ಸರ್ವೀಸ್ ಸ್ಟೇಶನ್ನಿಗೆಬಿಡ್ತೀನಿ’

‘ಹ್ಮ್.’

ಹುಟ್ಟೇಶ ಕಾರನ್ನು ತನ್ನದಂತೆಯೇ ಬಹಳ ಪ್ರೀತಿಯಿಂದನೋಡಿಕೊಳ್ಳುತ್ತಿದ್ದ. ಒಂದು ಹತ್ತಿಯಷ್ಟು ಧೂಳು ಕಂಡರುಇಡೀ ಕಾರನ್ನು ತೊಳೆಸುತ್ತಿದ್ದನು. ಇಂದು ಧಣಿಗಳಿಗೆಹೇಳಿದ್ದು ಸುಳ್ಳು. ಒಂದು ಸುಳ್ಳನ್ನು ಮುಚ್ಚುವುದಕ್ಕೆ ಹೇಳಿದಮತ್ತೊಂದು ಸುಳ್ಳು. ಆದರೆ ಇಂದು ಇದನ್ನು ನುಡಿದಾಗಅವನಲ್ಲಿ ಯಾವ ವಿಧವಾದ ವ್ಯಸನವೂ ಇರಲಿಲ್ಲ.ಧಣಿಗಳನ್ನು ಮನೆಗೆ ತಲುಪಿಸಿ ಕಾರನ್ನು ಮನೆಯ ಕಡೆಗೆತಿರುಗಿಸಿದನು. ಮನೆ ತಲುಪುವ ಮುನ್ನ ಅಲ್ಲೇ ಇದ್ದಬೇಕರಿಯಲ್ಲಿ ಅರ್ಧ ಕೇಜಿ ಮೈಸೂರು ಪಾಕುಕಟ್ಟಿಸಿಕೊಂಡು ಹೋದನು.

ಶಾಂತಿ ಕಾರನ್ನು ಕಂಡವಳೇ ಅದರ ಒಳ ಹೊಕ್ಕು ಡ್ರೈವರ್ಸೀಟಲ್ಲಿ ಕುಳಿತು ಸ್ಟೇರಿಂಗ್ ಹಿಡಿದು ಆಟವಾಡುತ್ತಾಕುಳಿತಳು.’ನಾನು ಈ ಸೀಟಲ್ಲಿ ಕೂತು ಡ್ರೈವಿಂಗ್ ಮಾಡ್ತೀನಿ’ಎಂದು ಹಿಗ್ಗಿನಲ್ಲಿ ಹೇಳಿದಳು.

‘ನೀನು ಈ ಸೀಟಲ್ಲಿ ಬೇಡ ಮರಿ, ಹಿಂದೆ ರಾಣಿಯ ಹಾಗೆಕೂತ್ಕೋಬೇಕು. ಡ್ರೈವರ್ ಕಾರ್ ಓಡಿಸ್ತಾನೆ’ ಎಂದು ತನ್ನಪರಿಸ್ಥಿತಿಯನ್ನು ಬಿಂಬಿಸುವಂತೆ ಹುಟ್ಟೇಶ ನುಡಿದನು.ಕೌಸಲ್ಯಳ ಮನಸಿನಲ್ಲಿ ಸಂಭ್ರಮ. ಆದರೆ ಎಂದಿನಂತೆಮುಖದ ಮೇಲೆ ನಗು ಬೀರುತ್ತಾ ಹೆಮ್ಮೆಯನ್ನು ಸೂಸುತ್ತಾಗಂಡನ ಕೈ ಹಿಡಿದು ನಿಂತಳು. ’ಕಾಸ್ಟ್ಲಿ ಕಾರ್ಇರಬೇಕಲ್ಲ?.ನೋಡಿದ್ರೆ ತುಂಬ ದೊಡ್ಡದಾಗಿದೆ ಅನ್ನಿಸ್ತಾಇದೆ.’ ಎಂದಳು. ಹುಟ್ಟೇಶ ಅವಳ ಭುಜದ ಮೇಲೆ ಕೈ ಹಾಕಿಅಕ್ಕರೆಯಿಂದ ಅವಳನ್ನು ಹಿಡಿದನು. ತಾನುನುಡಿದಿರುವುದು ಸುಳ್ಳು. ಆ ಸುಳ್ಳಿನಿಂದ ಇವರಲ್ಲಿಸಂತೋಷ ಉಂಟಾಗಿದೆ. ಹೆಂಡತಿ ಮಕ್ಕಳನ್ನುಸಂತೋಷವಾಗಿ ಕಾಣುವುದು ತನ್ನ ಧರ್ಮವಲ್ಲವೇ? ಆದರೆಇದು ಕ್ಷಣಿಕ ಸುಖ. ನಾಳೆ ಕಳೆದರೆ ಬದುಕು ಮತ್ತೆ ಶೂನ್ಯಕ್ಕೆಬಂದು ನಿಲ್ಲುತ್ತದೆ. ಅದೇಕೋ ಶ್ರೀರಂಗಪಟ್ಟಣಕ್ಕೆಹೋಗಬೇಕು ಎನಿಸಿತು. ಮನಸು ಮ್ಲಾನವಾಯಿತು.

ಮರುದಿನ ಭಾನುವಾರ. ಕಾರಿನಲ್ಲಿ ಹೆಂಡತಿ ಮತ್ತುಮಗಳನ್ನು ಜಯನಗರಕ್ಕೆ ಕರೆದುಕೊಂಡು ಹೋದನು.ಹಿಂದಿದ್ದ ಪುಟ್ಟಣ್ಣ ಚಿತ್ರಮಂದಿರ ಕೆಡವಿ ಈಗ ಬೇರೊಂದುಬಿಲ್ಡಿಂಗ್ ಏರಿಸಲಾಗಿದೆ. ಮದುವೆಯ ಹೊಸತಲ್ಲಿ ತಾನುಕೌಸಲ್ಯ ಈ ಬೀದಿಗಳಲ್ಲಿ ಸುತ್ತಾಡಿದ್ದುಂಟು. ಕೌಸಲ್ಯಳಿಗೆಕಾಟನ್ ಕ್ಯಾಂಡಿ ಕಂಡರೆ ಪ್ರೀತಿ. ಶಾಂತಿಗೆ ಬೇಯಿಸಿದಜೋಳವಿಷ್ಟ. ಕಾರನ್ನು ಒಂದು ಬದಿಯಲ್ಲಿ ನಿಲ್ಲಿಸಿಇಬ್ಬರಿಗೂ ಆ ತಿನಿಸುಗಳನ್ನು ಕೊಡಿಸಿದನು. ಹೆಂಡತಿಮಗಳು ಇಷ್ಟು ಸಂತೋಷವಾಗಿ ಇದ್ದದ್ದನ್ನು ಕಂಡುಬಹಳಷ್ಟು ದಿನಗಳೇ ಕಳೆದು ಹೋಗಿದ್ದವು. ‘ಅಪ್ಪ ಎಷ್ಟ್ಚೆನ್ನಾಗ್ ಕಾರ್ ಓಡಿಸ್ತಾರಲ್ವಮ್ಮ?’ ಜೋಳ ಬಾಯಿಗೆಹಾಕಿಕೊಂಡು ಶಾಂತಿ ಕೇಳಿದಳು.’ಕಾರಿದೆ ಅಂದಮೇಲೆಜೋಪಾನವಾಗಿ ಓಡಿಸಲೇ ಬೇಕು. ಚೆನ್ನಾಗಿನೋಡ್ಕೋಬೇಕು ಅಲ್ವ ಕಂದ?’ ಎನ್ನುತ್ತಾ ಕೌಸಲ್ಯಹುಟ್ಟೇಶನ ಕಡೆಗೆ ಹೆಮ್ಮೆಯಿಂದ ನೋಡಿದಳು.ಹುಟ್ಟೇಶನಿಗೆ ಕಸಿವಿಸಿಯಾಯಿತು. ಅದೇ ಹೊತ್ತಿನಲ್ಲಿಹಿಂದಿನಿಂದ ಯಾರೋ ಬಂದಂತಾಯಿತು. ಹುಟ್ಟೇಶನತೋಳಿನ ಮೇಲೆ ಕೈ ಇಟ್ಟರು.

‘ಸರ್,ಸ್ವಲ್ಪ ಅರ್ಜೆಂಟ್ ಇದೆ. ಮನೆಗೆ ಡ್ರಾಪ್ ಮಾಡ್ತೀರ?’ಎಂದು ಧ್ವನಿ ಮಾತ್ರ ಕೇಳಿಸಿತು. ಈ ಧ್ವನಿ ಹುಟ್ಟೇಶನಿಗೆಬಹಳ ಪರಿಚಯ. ತಿರುಗಿ ನೋಡಿದರೆ ಹಿಂದೆನಿಂತಿರುವುದು ತನ್ನ ಧಣಿಗಳು. ಸಿಕ್ಕಿಬಿದ್ದ ಭಾವನೆಯಲ್ಲಿಹುಟ್ಟೇಶನಿಗೆ ಏನು ಹೇಳುವುದು ತಿಳಿಯಲಿಲ್ಲ. ಶಾಂತಿತಕ್ಷಣ  ‘ಅದಕ್ಕೇನಂತೆ ಅಂಕಲ್, ನಮ್ಮಪ್ಪಂದೆ ಕಾರು.ಬನ್ನಿಬಿಡ್ತೀವಿ.’ ಅಂದುಬಿಟ್ಟಳು. ಈ ಮಗು ಅಧಿಕಪ್ರಸಂಗಿ.ಮಾತು ಹೆಚ್ಚು. ಕಾರು ತರಲೇಬಾರದಿತ್ತು. ಒಂದು ಸುಳ್ಳನ್ನುಮುಚ್ಚಲು ನೂರಾರು ಸುಳ್ಳುಗಳ ಸರಮಾಲೆಕಟ್ಟಬೇಕಾಗಿದೆ. ಈಗ ನೇರ ಧಣಿಗಳ ಕೈಗೇ ಸಿಕ್ಕಿಬಿದ್ದಿದ್ದೇನೆ.ತಲೆಯಲ್ಲಿ ಯಾವ ವಿಚಾರವೂ ನಿಲ್ಲುತ್ತಿಲ್ಲ. ನಿಧಾನವಾಗಿಧಣಿಗಳು ಮಗುವಿನ ಜೊತೆಗೆ ಹಿಂದಿನ ಸೀಟಿನಲ್ಲಿಕುಳಿತರು. ಮುಂದೆ ಕೌಸಲ್ಯ ಕುಳಿತಿದ್ದಳು.ಹುಟ್ಟೇಶ ಕಾರನ್ನುಒಲ್ಲದ ಮನಸಿನಲ್ಲಿ ಮುನ್ನಡೆಸಿದ. ಒಮ್ಮೆ ಕನ್ನಡಿಯಲ್ಲಿ ತನ್ನಧಣಿಗಳ ಮುಖವನ್ನು ನೋಡಿದ. ಶ್ರೀರಂಗಪಟ್ಟಣದಿಂದಬರುತ್ತಿರುವಾಗ ಇದ್ದ ಶಾಂತ ಮುಖಭಾವವೇ ಈಗಲೂಇದೆ. ಅವರ ಕಾರನ್ನು ತನ್ನದು ಎಂದು ಸುಳ್ಳುಹೇಳಿರುವುದು ತಿಳಿದಮೇಲು ಧಣಿಗಳಿಗೆ ಕೋಪಬಂದಿಲ್ಲವೇ? ಅಥವ ತನ್ನನ್ನು ಪರೀಕ್ಷಿಸಲೆಂದೆ ಹೀಗೆಮಾಡುತ್ತಿದ್ದಾರೆಯೇ? ಏನೂ ಹೊಳೆಯಲಿಲ್ಲ. ಧಣಿಗಳಮನೆ ಹತ್ತಿರ ಬಂತು. ‘ಇಲ್ಲೇ ನಿಲ್ಲಿಸಿ ಸಾರ್. ತುಂಬ ಥ್ಯಾಂಕ್ಸ್’ಎಂದು ಹುಟ್ಟೇಶನನ್ನು ನೋಡಿದರು. ಹುಟ್ಟೇಶ ಭಯದಿಂದಧಣಿಗಳನ್ನು ನೋಡಿದನು. ಶಾಂತಿಗೆ ಜೇಬಿನಿಂದ ಒಂದುಚಾಕಲೇಟ್ ತೆಗೆದು ಕೊಟ್ಟರು. ಆಕೆಯ ಹಣೆಗೆ ಮುತ್ತಿಟ್ಟುಗಂಗಾಧರ ಸ್ವಾಮಿ ತಮ್ಮ ಮನೆಯ ಕಡೆಗೆ ಹೆಜ್ಜೆ ಹಾಕಿದರು.ಅದೇ ದಿಗ್ಭ್ರಮೆಯಲ್ಲೇ ಹುಟ್ಟೇಶ ಧಣಿಗಳ ಕಾರನ್ನು ತನ್ನಮನೆಯ ಕಡೆಗೆ ತಿರುಗಿಸಿದ.

‘ಇವತ್ತು ರಾತ್ರಿ ಮೂರು ಜನ ಮಹಡಿ ಮೇಲೆ ಮಲಗೋಣ?ತುಂಬ ದಿನ ಆಯ್ತು.’ ಎಂದು ಕೌಸಲ್ಯ ಹುಟ್ಟೇಶ ಬಟ್ಟೆಬದಲಾಯಿಸುತ್ತಿದ್ದಾಗ ಬಂದು ಕೇಳಿದಳು.ಹುಟ್ಟೇಶ,ಕೌಸಲ್ಯ ಮತ್ತು ಶಾಂತಿ ಅಂದು ರಾತ್ರಿ ಮಹಡಿಯಮೇಲೆ ಮಲಗಿದರು. ಹುಟ್ಟೇಶನಿಗೆ ನಿದ್ರೆ ಬರುತ್ತಿಲ್ಲ.ಆಕಾಶದಲ್ಲಿ ಮಿನುಗುತ್ತಿರುವ ತಾರೆಗಳನ್ನು ನೋಡುತ್ತ ಹಾಗೆಮಲಗಿದ್ದಾನೆ. ಹೆಂಡತಿ ಹುಟ್ಟೇಶನ ಎದೆಯನ್ನು ಅಪ್ಪಿ’ಥ್ಯಾಂಕ್ಸ್’ ಎಂದಳು. ಹುಟ್ಟೇಶ ಅವಳನ್ನು ಇನ್ನು ಬಿಗಿಯಾಗಿಅಪ್ಪಿ ಕಣ್ಣು ಮುಚ್ಚಿದನು.ಸ್ವಲ್ಪ ಹೊತ್ತಿನಲ್ಲಿ ಕೌಸಲ್ಯಳಿಗೆ ನಿದ್ರೆಹತ್ತಿದ್ದು ತಿಳಿಯಿತು. ಅಂದು ರಾತ್ರಿ ಹುಟ್ಟೇಶ ನಿದ್ರೆಮಾಡಲೇ ಇಲ್ಲ.

ಬೆಳಗ್ಗೆ  ಕೌಸಲ್ಯ ಹುಟ್ಟೇಶನಿಗೆ ತಿಂಡಿ ಮಾಡುತ್ತಿದ್ದಳು.ಹುಟ್ಟೇಶ ದಿನನಿತ್ಯ ಕೆಲಸಕ್ಕೆ ತಯಾರಾದಂತೆ ಅಂದು ಕೂಡತಯಾರಾಗಿ ಬಂದು ಅಡುಗೆಮನೆಯಲ್ಲಿ ಕೌಸಲ್ಯಳ ಪಕ್ಕನಿಂತನು. ಕೌಸಲ್ಯ ಹುಟ್ಟೇಶನನ್ನು ನೋಡಿ ನಗುತ್ತಾ ’ಏನ್ರಿನಿಮ್ಮ ತರಲೆ ಬೆಳಗ್ಗೆ ಬೆಳಗ್ಗೆ?’ ಎಂದಳು

‘ಈ ಕಾರು ನಂದಲ್ಲ ಕೌಸಲ್ಯ. ನಮ್ಮ ಧಣಿಗಳದ್ದು. ನಾನುಡ್ರೈವರ್ ಕೆಲಸ ಮಾಡ್ತಿದ್ದೀನಿ. ಯಾವ ಆಫೀಸು ಇಲ್ಲ ಏನುಇಲ್ಲ. ನಿನ್ನ ಗಂಡ ಒಬ್ಬ ಸಾಧಾರಣ ಡ್ರೈವರ್. ಸಮಾಜದಲ್ಲಿನಿನ್ನ ಮತ್ತು ಶಾಂತಿಯ ಮರ್ಯಾದೆಗೋಸ್ಕರ ಸುಳ್ಳುಹೇಳಿದ್ದೀನಿ. ನನ್ನನ್ನ ಕ್ಷಮಿಸು. ನಿಮ್ಮ ಸಂತೋಷ  ನನಗೆಮುಖ್ಯ.’ ಎಂದು ಉಸಿರು ಬಿಡದಂತೆ ನುಡಿದು ಕೌಸಲ್ಯಳಮುಖವನ್ನೂ ನೋಡದೆ ಅಲ್ಲಿಂದ ಹೊರಟುಹೋದ.ಕೌಸಲ್ಯಳ ಕಣ್ಣಿನಲ್ಲಿ ನೀರು ತುಂಬಿತ್ತು.

ತನ್ನ ಮನಸ್ಸಿನಲ್ಲಿದ್ದ ಕಲ್ಮಶವನ್ನು ಶುದ್ಧಿಮಾಡಿಕೊಂಡುಹುಟ್ಟೇಶ ಗಾಳಿಯಲ್ಲಿ ತೇಲುತ್ತಿರುವಂತೆ ನಿರಾಳವಾಗಿದ್ದ.ತನಗೆ ಭಯವಿರಲಿಲ್ಲ. ನೋವಿರಲಿಲ್ಲ. ಒಂದು ರೀತಿ ಈಬದುಕಿನಿಂದ ನಿರ್ಲಿಪ್ತನಾಗಿರುವ ಭಾವನೆ ಆವರಿಸಿಕೊಂಡುಬಿಟ್ಟಿತ್ತು. ನೇರ ಧಣಿಗಳ ಕಾರನ್ನು ಅವರ ಮನೆಗೆಓಡಿಸಿಕೊಂಡು ಹೋದ. ಧಣಿಗಳ ಮನೆಯ ಮುಂದೆಎಂದೂ ಇಲ್ಲದಷ್ಟು ಜನ. ಕಪ್ಪು ಕೋಟಿನ ಲಾಯರುಗಳುಒಳಗೆ ಹೋಗುತ್ತಿದ್ದದ್ದು ಇವನ ಕಣ್ಣಿಗೆ ಬಿತ್ತು. ಒಂದು ಕ್ಷಣಎದೆ ನಿಂತಂತಾಯಿತು. ಭಯಪಡಬಾರದೆಂದು ನಿಶ್ಚಯಿಸಿನೇರ ಒಳಗೆ ನಡೆದ. ಧಣಿಗಳ ಮನೆಯಲ್ಲಿ ಕೆಲಸಕ್ಕಿದ್ದರಾಮನಾಥ ಇವನ ಬಳಿಗೆ ಬಂದು ’ಬಾ ಇಲ್ಲಿ. ನಿನ್ನೇಕಾಯ್ತಿದ್ರು.’ ಎನ್ನುತ್ತಾ ಇವನನ್ನು ಲಾಯರಿಗಳ ಮುಂದೆನಿಲ್ಲಿಸದ. ’ಸಾರ್,ಇವನೇ ಹುಟ್ಟೇಶ. ಧಣಿಗಳ ಕಾರ್ಡ್ರೈವರ್ರು.’

‘ಮಿಸ್ಟರ್ ಹುಟ್ಟೇಶ್, ಗಂಗಾಧರ ಸ್ವಾಮಿಗಳು ತಮ್ಮ ಆಸ್ತಿಪಾಸ್ತಿ ಬಿಟ್ಟು ಬೆಳಗಾಗೆದ್ದು ಎಲ್ಲೋ ಹೊರಟು ಹೋಗಿದ್ದಾರೆ.ನಮಗೆ ನೆನ್ನೆ ಕರೆ ಮಾಡಿ ಈ ವಿಚಾರ ಹೇಳಿದ್ರು. ಎಲ್ಲಿಗೆಹೋಗ್ತಿದ್ದೀರಿ ಅಂತ ಕೇಳಿದ್ದಕ್ಕೆ ಕಚ್ಚಾ ಸತ್ಯವನ್ನಹುಡುಕೋಕೆ ಅಂದ್ರು. ಈ ಕಾಲದಲ್ಲೂ ಇವೆಲ್ಲಾ ನಡೆಯತ್ತೆಅಂದ್ರೆ ನಮಗೆ ನಂಬೋದು ಕಷ್ಟ. ನಿಮಗೆಲ್ಲಾ ಒಂದು ಪತ್ರಬರೆದಿದ್ದಾರೆ. ಅವರ ಕೈ ಕೆಳಗೆ ಕೆಲಸ ಮಾಡೋಪ್ರತಿಯೊಬ್ಬರಿಗೂ ಒಂದೊಂದು ಆಸ್ತಿ ಬರೆದು ಹೋಗಿದ್ದಾರೆ.  ಅದರಲ್ಲಿ ನೀವು ಓಡಿಸುತ್ತಿದ್ದ ಕಾರು ನಿಮಗೆ ಬರೆದಿದ್ದಾರೆ.ತೊಗೊಳ್ಳೀ ಈ ಪತ್ರ ಓದಿ. ಆಮೇಲೆ ಇಲ್ಲೊಂದು ಸಹಿಮಾಡಿ’

ಹುಟ್ಟೇಶ ಮೌನಿಯಾದ. ಲಾಯರ್ ಕೊಟ್ಟ ಪತ್ರವನ್ನುಓದಿದ. ಅದರಲ್ಲಿ ಧಣಿಗಳ ಅಕ್ಷರವೇ ಇತ್ತು. ’ಅಂತರಂಗಶುದ್ಧಿ, ಬಹಿರಂಗ ಶುದ್ಧಿ. ಪರಿಶುದ್ಧ ಬದುಕನ್ನು ಹುಡುಕುಹುಟ್ಟೇಶ. ಮಗಳನ್ನು ಚೆನ್ನಾಗಿ ಓದಿಸು. ಕಾರಲ್ಲಿ ಓಡಾಡಿಸು.’ಎಂದು ಬರೆದಿದ್ದರು. ಹುಟ್ಟೇಶ ಒಮ್ಮೆ ಸುತ್ತ ನೋಡಿದ.ಎಲ್ಲಾ ಖಾಲಿಯಾದಂತೆ ಭಾಸವಾಯಿತು. ಎದುರಿಗೆ ಕಾಗದಬಂತು. ಕೈಗೆ ಕಲುಮು ಕೊಟ್ಟರು. ಸಹಿ ಹಾಕಿದ. ನೇರಹೊರ ನಡೆದ. ಯಾರು ಏನು ಮಾತನಾಡುತ್ತಿದ್ದಾರೆ ಎನ್ನುವಕಲ್ಪನೆಯು ಅವನಿಗೆ ಇರಲಿಲ್ಲ. ಧಣಿಗಳ ಕಾರ್ ನೋಡಿದ.ನಿಧಾನವಾಗಿ ಅದರೊಳಗೆ ಕುಳಿತ. ತನ್ನ ಮನೆಯ ಕಡೆಗೆಗಾಡಿಯನ್ನು ತಿರುಗಿಸಿದ.ಅಂತರಾಳದ ತುದಿಗೆಯೋಚನೆಯ ಗಾಡಿ ರಭಸವಾಗಿ ಓಡುತ್ತಿತ್ತು. ಹುಟ್ಟೇಶಧಣಿಗಳ ಮನೆಯನ್ನು ದಾಟಿ ಮುಖ್ಯರಸ್ತೆಯ ಕಡೆಗೆಸ್ಟೇರಿಂಗ್ ತಿರುಗಿಸಿದ.

Facebook ಕಾಮೆಂಟ್ಸ್

Rohit Padaki: ಕನ್ನಡದ ಯುವ ಲೇಖಕರಲ್ಲಿ ಒಬ್ಬರು. ದೃಶ್ಯ ಮಾಧ್ಯಮದಲ್ಲಿ ಸಾಕಷ್ಟು ಕಾರ್ಯ ನಿರ್ವಹಿಸಿ ಬಿಗ್ ಬಾಸ್, ವೀಕೆಂಡ್ ವಿತ್ ರಮೇಶ್ ಎಂಬ ಶೋಗಳಿಗೆ ಇವರ ಬರವಣಿಗೆಯಿದೆ. ಇತ್ತೀಚೆಗೆ ಬಿಡುಗಡೆಯಾದ ಆಟಗಾರ ಚಿತ್ರಕ್ಕೆ ಸಂಭಾಷಣೆ ಸಾಹಿತ್ಯ ಇವರದೇ ಆಗಿತ್ತು. ಮೊನಚಾದ ಪದಗಳಿಗೆ ಹೆಸರುವಾಸಿಯಾಗಿರುವ ಇವರ ಬರಹ ಪ್ರಭಾವಶಾಲಿ, ಹಾಗು ಹೊಸತನ ತುಂಬಿರುತ್ತದೆ.
Related Post