ಶುಭೋದಯ
ತೊಳೆದು ಹಳೆದಿನದುಳಿದ ಬೇಸರ
ಕಳೆಯ ಕೀಳಲು ಬಂತು ರಾತ್ರಿಯು
ಕಳೆದು ಮರಳಿದ ಹೊಸತು ಸೂರ್ಯೋದಯವ ನೋಡಲ್ಲಿ |
ಛಳಿಯ ಹೆದರಿಸೆ ಬಾನಮಾರ್ಗದೊ
ಳೆಳೆದ ಗೆರೆಗಳು ಭುವಿಯ ಸೋಂಕಲು
ಹೊಳೆದ ರಶ್ಮಿಯ ನೋಡುತೆದ್ದವು ಸಕಲ ಜೀವಕುಲ ||
ಸೇರಿ ಹಿಮಮಣಿ ಹನಿಯ ಮಾಲೆಯ
ಸೀರೆ ಹಸುರಲಿ ಹೊದ್ದು ಸೆರಗನು
ತೂರಿ ಗಾಳಿಗೆ ಸಿರಿಯ ಹರಡುತ ಬಂದ ರವಿತೇಜ |
ಜಾರಿ ನಾಕದ ಬಣ್ಣ ಹಲವಿಧ
ಸೋರಿ ತೋರಣ ಬಂದು ಬಿದ್ದಿತೊ
ಭಾರಿಯೆನ್ನುವ ರೀತಿ ಬಾನಲಿ ರಕ್ತದೋಕುಳಿಯು ||
ನಕ್ಕು ಹರಿಯುವ ನೀರ ಜುಳುಜುಳು
ಹೆಕ್ಕಿ ಮೆಲ್ಲನೆ ಗಾಳಿ ತೂಗಲು
ಹಕ್ಕಿ ಚಿಲಿಪಿಲಿ ಕೂಡಿ ನುಡಿಸೆ ಪ್ರಕೃತಿ ಸಂಗೀತ |
ರೆಕ್ಕೆ ಬಂತಿದೊ ಜಡದ ಚೇತನ
ಮುಕ್ಕಿ ಮಣ್ಣಲಿ, ನಿತ್ಯ ನೂತನ
ದಿಕ್ಕು ಕಾಲದ ತಿರುಗು ಚಕ್ರದಿ ಸತ್ಯದರ್ಶನವು ||
ಒಂದು ಚೆಂಡಿದುವೆಂದು ಹಿಡಿಯಲು
ಕಂದ ಹನುಮನೆ ಹಾರಿ ಸೋತಿಹ
ಚೆಂದದುಂಡೆಯ ತೀಕ್ಷ್ಣ ಕಿಚ್ಚಿನ ಭುವಿಯ ನಕ್ಷತ್ರ |
ಮುಂದುವರಿಯಿರಿ ಕರ್ಮವೆಸಗುತ
ಹಿಂದೆ ನೋಡುತ ಮೈಯ ಮರೆಯದಿ
ರೆಂದು ಸಾರುತ ಬಂದ ಭಾಸ್ಕರ ಲೋಕಕಿವ ಮಿತ್ರ || 🙂
ಭಾಮಿನೀ ಷಟ್ಪದಿ:
ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಸಾಲಿಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ 7 ಮಾತ್ರೆಗಳ ಮೂರುಗಣಗಳೂ ಹಾಗು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ 7ಮಾತ್ರೆಗಳ ಎರಡು ಗಣಗಳಿರುತ್ತವೆ. ಮತ್ತೊಂದು ಪ್ರಮುಖ ನಿಯಮವೆಂದರೆ, 7 ಮಾತ್ರೆಗಳ ಗಣಗಳು ಕಡ್ಡಾಯವಾಗಿ 3+4ಮಾದರಿಯಲ್ಲಿರಬೇಕು. ಅಂದರೆ 3 ಮಾತ್ರೆಯ ಗಣದ ನಂತರ 4ಮಾತ್ರೆಯ ಗಣವು ಬಂದು, ಒಟ್ಟು 7 ಮಾತ್ರೆಗಳ ಗಣವಾಗಬೇಕು. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ.
ಕುಮಾರವ್ಯಾಸನ ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿ.
೩|೪|೩|೪ ೩|೪|೩|೪ ೩|೪|೩|೪|೩|೪|- ೩|೪|೩|೪ ೩|೪|೩|೪ ೩|೪|೩|೪|೩|೪|-
-Shylaja Kekanaje
Facebook ಕಾಮೆಂಟ್ಸ್