X

ಆಹಾ! ಹೊಸ ಮಳೆಯ ಹಸಿ ಮಣ್ಣು…

ಆಹಾ! ಹೊಸ ಮಳೆಯ ಹಸಿ ಮಣ್ಣು…

ಮನಸು ಹಿಗ್ಗುತ್ತದೆ…ನಾಸಿಕವರಳುತ್ತದೆ
ಹೊಸ ಮಣ್ಣಿನ ಹಸಿ ಘಮದ ನೆನಪು ಮರುಕಳಿಸಿ ಬ೦ದು!
ಅ೦ದೆಲ್ಲ ಆಘ್ರಾಣಿಸಿದ ಆ ಪರಿಮಳವು,
ಆ ಹಸಿಯು ಇ೦ದೂ ಅಷ್ಟೇ ಹೊಸದೆ೦ದು,
ಅದು ಹೇಗೆ೦ದು? ಯಾಕಿರಬಹುದೆ೦ದು
ಅಚ್ಚರಿಪಡುತ್ತದೆ ಮನ! ಬೆರಗುವಡೆಯುತ್ತದೆ..

ಅ೦ದಿನ ಮಳೆಗೂ ಇ೦ದಿನ ಮಳೆಗೂ ವ್ಯತ್ಯಾಸವು೦ಟೆ? ಇರಬಹುದೇ?
ಇಲ್ಲ..ಅದೇ ಆಕಾಶ, ಅದೇ ಮೋಡಗಳು.
ಅ೦ತೆಯೇ ಘುಡಘುಡಿಸಿ ತೇಲುವ ಮೇಘಗಳು ,
ಬಿಳಿಮೋಡ ಕರಿಯಾಗಿ ನೀರಹನಿಗಳ ಹೊತ್ತು
ಭಾರದ ಬಿ೦ದಿಗೆಯಾಗಿ ತು೦ಬಿಯೂ ತುಳುಕಲಾರದೆ
ತಟ್ಟನೆ ಬೋರಲಾಗಿ ಭೂಮಿಯತ್ತ ಮುಖ ಮಾಡಿದರೆ
ಇಲ್ಲಿ ‘ಅದೋ ಮುಸಲಧಾರೆ…ಕು೦ಭ ದ್ರೋಣ’
ಅನಿಸಿ ಕವಿಗಳ ಮನದಲ್ಲಿ ಬೆರಗು ಮೂಡಿಸಿ ,
ಹೊಸ ಹುಕಿಗಳ ಉಕ್ಕುಕ್ಕಿ ತರಿಸಿ ಹೊಗಳಿಸಿಕೊಳ್ಳುವ ಹೊಸ ಮಳೆ.

ಬಿಸಿಲಿನ ಕಾವಿಗೆ, ಗ್ರೀಷ್ಮನೆ೦ಬ ಮಾಸದ
ಕಡು ಸೂರ್ಯನ ಝಳಪಿಗೆ ಗೆರೆಗೆರೆಯಾಗಿ ಬಿರಿದ ಭೂಮಿ ,
ಒಣ ಒಡಲಿನಲ್ಲೊ೦ದಿಷ್ಟು ಹಸಿ ಇಳಿಯಬಾರದೇ ಎ೦ದು
ಚಡಪಡಿಸುತ್ತ ಬಾಯಾರಿ ಬಸವಳಿದು ಬೇಡುತ್ತ
ಕಾದು ಕೆ0ಡದ೦ತಾಗಿರಲು, ಆಕಾಶ ಕರುಣೆಯಲಿ ಕೊಡುವ ಮಳೆ!!

ಅ೦ತೆಯೇ, ಕಾಯ್ದ ಆ ಭೂಮಿಯ ಮೇಲಿನ ಕಾವಿಗೆ
ಹೆ೦ಚಿನ ಮೇಲಿಟ್ಟ ಹಪ್ಪಳದ೦ತೆ
ಒದ್ದಾಡುವ ನಾವು ನೀವೆಲ್ಲ
ಅದೇ ಆಗ, ಮೊದಲ ಧಾರೆಯಾಗಿ ಇಳಿದ ಮಳೆಯ
ಗಜ್ಜುಗದ ಗಾತ್ರದ ನೀರಹನಿಯ ಪೆಟ್ಟಿಗೆ ಹಸಿಗೊ0ಡ
ನೆಲವದು ಎಬ್ಬಿಸಿ ಹರಡಿಸಿದ ಒದ್ದೆಯ ಆ
ಘಮಲಿಗೆ ಹುಚ್ಚಾದವರಲ್ಲವೇ?

ಮೊದಲ ಮಳೆಯ ಹಸಿ ಮಣ್ಣಿನ ವಾಸನೆಗೆ ಮರುಳಾದವರಲ್ಲವೇ ?
ಅಲ್ಲವೇ ಹೇಳಿ…!?

— ಜಯಶ್ರೀ ದೇಶಪಾಂಡೆ.

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post