ಕೆಲಸಕ್ಕೆ ಸೇರಿ ಮೂರನೇ ದಿನ.ಸತ್ಯ ಬಸವನಗುಡಿ ಇಂದ ತನ್ನ ಗಾಡಿಯಲ್ಲಿ ಮಾನ್ಯತ ಟೆಕ್ ಪಾರ್ಕಿಗೆ ಪ್ರಯಾಣ ಮಾಡಿ ಸ್ವಲ್ಪ ಸಪ್ಪಗಾಗಿದ್ದ.ನೇಮಕ ಪದ್ಧತಿಗಳು ಇನ್ನು ನಡೀತ ಇತ್ತು.ಅಪ್ಪನ ಆಸೆಯಂತೆ ಕಾಲೇಜಿನಿಂದಲೇ ಪ್ರವೇಶ ಪಡೆದು ದೊಡ್ಡ ಎಮ್ ಎನ್ ಸಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ.ಹೊಸ ಜೀವನದ ಆರಂಭ.ಎಲ್ಲದರಲ್ಲೂ ಒಂದು ರೀತಿಯ ಹೊಸ ಚಿಲುಮೆ.ಆಫೀಸ್ ಕ್ಯಾಂಟೀನ್,ಕ್ಯಾಬಿನ್ನು,ತನ್ನಂತೆ ಬುದ್ಧಿವಂತರ ಹಾಗೆ ತೋರಿಸಿಕೊಳ್ತಿದ್ದ ಸಹ ಉದ್ಯೋಗಿಗಳು ಎಲ್ಲರು ಹೊಸ ಅಲೆಯಂತೆ ಕಂಡು ಬರ್ತಿದ್ರು.ದೊಡ್ಡ ದೊಡ್ಡ ಕನಸನ್ನ ಕಂಡ ಸತ್ಯನಿಗೆ ಅಂದು ಕೂಡ ಒಂದು ಕನಸಿನ ಹಾಗೆ ಭಾಸವಾಗ್ತಿತ್ತು. ದೊಡ್ಡ ಸೆಮಿನಾರ್ ಹಾಲ್ ಅಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ್ದ ಅಷ್ಟೂ ಮಂದಿಯನ್ನು ಕೂಡಿಸಿದ್ರು.ಕತ್ತಿಗೆ “ಟೆಂಪರರಿ” ಪಟ್ಟಿ ನೇತುಹಾಕಲಾಗಿತ್ತು.ಏಸಿ ಇದ್ದಿದ್ದರಿಂದ ಒಂದು ಮಟ್ಟಿಗೆ ನೆಮ್ಮದಿ ಇಂದ ಕೂತಿದ್ರು.ಧಡೂತಿ ಹೆಂಗಸೊಬ್ಳು ಹಾಲೊಳಗೆ ನಡೆದು ಬಂದ್ಲು.ಮಂಡಿ ಮೇಲೆ ಸ್ಕರ್ಟನ್ನು ಹಾಗು ಒಂದು ಪ್ರೊಫ಼ೆಶನಲ್ ಶರ್ಟನ್ನು ಧರಿಸಿದ್ದಳು.ತುಟಿಗೆ ಬೇಕಾದಕ್ಕಿಂತ ಹೆಚ್ಚು ಬಣ್ಣ,ಬೆವರಿನಿಂದ ಇಳಿಯುತ್ತಿದ್ದ ಮೇಕಪ್ಪು,ಎಲ್ಲವೂ ಪಕ್ಕ ಐಟಿ ಕಂಪನಿಯಲ್ಲಿ ಹೇರಿಕೊಂಡಿರೋ ಪದ್ಧತಿಯಂತೆ ಕಾಣ್ತಿತ್ತು.
“ನನ್ ಹೆಸರು ರಮೋನ ಡಿಕ್ರುಜ಼್.ಇವತ್ತು ನಿಮ್ಮ ಟ್ರೈನರ್.” ಎಂದು ಘಡಸು ಧ್ವನಿಯಲ್ಲಿ ಇಂಗ್ಲಿಷಿನಲ್ಲಿ ನುಡಿದಳು.
ಎಲ್ಲರೂ ಒಬ್ಬೊಬ್ಬರಾಗಿ ತಮ್ಮ ಪರಿಚಯ ಮಾಡಿಕೊಂಡರು.ಕಳೆದ ಎರಡು ದಿನಗಳು ಇದೇ ವಾಡಿಕೆಯಾಗಿತ್ತು.ಬಂದವರಿಗೆಲ್ಲಾ ತಮ್ಮ ಪರಿಚಯ ಮಾಡಿಕೊಳ್ಳೋ ಅಷ್ಟ್ರಲ್ಲಿ ಅರ್ಧ ದಿನ ಕಳೆಯುತ್ತಿತ್ತು.ಸತ್ಯನಿಗೆ ಏನೋ ಗತ್ತು.
“ನನ್ನ ಹೆಸರು ಸತ್ಯ ಕಾರಂತ್. ಬಿಸಿಎ ಮಾಡಿದ್ದೀನಿ.ಕಾಲೇಜಿಂದ ರೆಕ್ರೂಟ್ ಆಗಿರೋದು.” ಅಂತ ಹೆಮ್ಮೆಯಿಂದ ಎಲ್ಲರಿಗೂ ಪರಿಚಯ ಮಾಡಿಕೊಳ್ತಿದ್ದ. ಇಂದೂ ಅದೇ ಹೆಮ್ಮೆ,ಅದೇ ಉತ್ಸಾಹ.
“ಇವತ್ತು ನಾನು ಟ್ರೇನಿಂಗ್ ಶುರು ಮಾಡೋಕು ಮುಂಚೆ ಒಂದು ಕಥೆ ಹೇಳ್ತೀನಿ. ಖಂಡಿತ ನಿದ್ದೆ ಬರಲ್ಲ.ಈ ಕಥೆಯ ಒಳ ಅರ್ಥ ತಿಳ್ಕೊಂಡ್ರೆ ಐಟಿ ಜೀವನ ಸುಲಭವಾಗತ್ತೆ.ಇನ್ಫ಼್ಯಾಕ್ಟ್ ಬದುಕಿನ ರಹಸ್ಯ ಸ್ವಲ್ಪಮಟ್ಟಿಗೆ ತಿಳಿಯತ್ತೆ.” ಎಂದು ಸುಲಲಿತವಾದ ಇಂಗ್ಲಿಷಿನಲ್ಲಿ ರಮೋನ ಮಾತನಾಡಿದಳು.ಕುರ್ಚಿಯಲ್ಲೇ ಅಲುಗಾಡಿ ತಮ್ಮ ಸಮ್ಮತಿ ಮತ್ತು ಆಸಕ್ತಿಯನ್ನು ಎಲ್ಲರೂ ವ್ಯಕ್ತ ಪಡಿಸಿದರು.
“ಸ್ವಲ್ಪ ಹಾಲ್ ಲೈಟ್ ಡಿಮ್ ಮಾಡೋಣ.ಕಥೆ ಇಂಟ್ರೆಸ್ಟಿಂಗ್ ಆಗಿ ಸಿನೆಮಾ ಥರ ಕಂಡು ಬರಲಿ” ಎಂದು ತಾನೆ ಹೋಗಿ ಹಾಲ್ನ ಲೈಟ್ ಕಮ್ಮಿ ಮಾಡಿದ್ಲು.
“ಇದು ರಾಮಾಯಣ ಕಾಲದ್ದು.ಏನಪ್ಪ ಇದು ಕ್ರಿಶ್ಚಿಯನ್ ಆಗಿ ರಾಮಾಯಣ ಅಂತಾಳೆ ಅಂತ ಆಶ್ಚರ್ಯ ಪಡಬೇಡಿ.ನನ್ನ ವೃತ್ತಿಯಲ್ಲಿ ಎಲ್ಲಾ ಕಲೀಬೇಕಾಗತ್ತೆ.” ಎಂದು ಕಥೆ ಶುರು ಮಾಡಿದಳು.
ರಾಮಾಯಣ ಕಾಲ.ಅಯೋಧ್ಯೆಯಲ್ಲಿ ವಿಜಯೋತ್ಸವ.ರಾವಣನ ಸಂಹಾರವಾಗಿದೆ.ರಾಮ ಲಕ್ಷ್ಮಣರನ್ನು ಕೊಂಡಾಡಿದ ಜನಗಳು ಮನೆಯಲ್ಲೆಲ್ಲಾ ರಾಮನ ಜಪ ಮಾಡಲು ಶುರು ಮಾಡಿದ್ದಾರೆ.ಆ ಕಾಲ,ಆ ಕ್ಷಣ,ಆ ಘಳಿಗೆ ಇತಿಹಾಸದ ಪುಟಗಳಲ್ಲಿ ಇನ್ನೆಷ್ಟು ಕೋಟಿ ವರ್ಷಗಳ ಕಾಲ ಅಜರಾಮರವಾಗಿ ಉಳಿಯತ್ತೋ,ವಿಜಯೋತ್ಸವದಲ್ಲಿ ಭಾಗಿಯಾಗಿರೋ ಯಾರಿಗೂ ತಿಳಿದಿಲ್ಲ.ಸಂತೋಷ ರಾಮರಸವಾಗಿ ಹರಿದಾಡ್ತಿದೆ.ಸೀತೆ ಲಂಕಾವಾಸದಿಂದ ತೂಕ ಕಳೆದುಕೊಂಡಿದ್ದರೂ ಹುರುಪು ಕಮ್ಮಿಯಾಗಿಲ್ಲ.ಎಲ್ಲರೂ ಆಕೆಯನ್ನು ಮುದ್ದಾಡಿದ್ದೋ ಆಡಿದ್ದು,ವಿಚಾರಿಸಿದ್ದೋ ವಿಚಾರಿಸಿದ್ದು.ಬೀದಿ ಬೀದಿಯಲ್ಲಿ ಹೂವಿನ ರಾಶಿ.ಅಯೋಧ್ಯೆಯ ಪ್ರತಿ ರಸ್ತೆಯು ಹೂವಿನ ಹಾಸಿಗೆಯಂತೆ ಕಾಣ್ತಿದೆ.ಅಷ್ಟು ಸಂಭ್ರಮ.ರಾಮನ ಪಟ್ಟಾಭಿಷೇಕದ ತಯಾರಿಗೆ ಮಾತು ಕಥೆ ಕೂಡ ಆರಂಭವಾಗಿತ್ತು.ಲಕ್ಷ್ಮಣನ ಉಲ್ಲಾಸಕ್ಕೆ ಮಿತಿಯೇ ಇಲ್ಲ. ಅಯೋಧ್ಯೆಯಲ್ಲಿ ಹೊರಚಿಮ್ಮುತ್ತಿರೋ ಸಂಗೀತ ಮೂರು ರಾಜ್ಯಗಳು ಕೇಳುವಷ್ಟು ದೂರ ಸಾಗಿದೆ.
ಇನ್ನೆಲ್ಲೋ ಮೂಲೆಯಲ್ಲಿ ಕೋತಿರಾಮ ಬೆಟ್ಟದ ತುದಿಯಲ್ಲಿ ಮೇಲುಸಿರು ಬಿಡುತ್ತಾ ಕೂತಿದಾನೆ.ಕಣ್ಣಲ್ಲಿ ಕಂಬನಿ ಜಾರುತಿದೆ.ಬೆಟ್ಟದ ತುದಿಯಿಂದ ಕೆಳಗೊಮ್ಮೆ ನೋಡಿದ.ಸಾವು ಕಣ್ಣ ಮುಂದೆ ಕಂಡಿತು. ಈಗ ಹಾರಿದರೆ ಕ್ಷಣಮಾತ್ರದಲ್ಲಿ ಕೆಳಗೆ ಬೀಳ್ತೀನೋ ಅಥವ ನಿಮಿಷಗಳು ಗಾಳಿಯಲ್ಲಿ ತೇಲ್ತಿರ್ತೀನೋ ಅಂತ ಯೋಚಿಸಿದ. ಪಕ್ಕದಲ್ಲೇ ಮೋಡಗಳು ಭೂಮಿಯ ಯಾವ ಚಿಂತೆಯೂ ಇಲ್ಲದೆ ಸಾಗ್ತಿವೆ.ಕೋತಿರಾಮನ ಕಾಲುಗಳು ನಡುಗುತ್ತಿವೆ.ಕೋತಿಯಾದರು ಸಾವು ಸಾವೇ ತಾನೇ.ನೈಸರ್ಗಿಕ ಸಾವಲ್ಲದೇ ಹೋದ್ರು ಆತ್ಮಹತ್ಯೆ ಇಂದ ಸಾಯೋ ಯೋಚನೆ ಬಂದಿದೆ.
“ಕೋತಿರಾಮ,ನೀನಿದ್ದರೆಷ್ಟು,ಬಿದ್ದರೆ
“ಏನಾಯ್ತು ಕೋತಿ ರಾಮ?ನನ್ನ ಸೈನ್ಯದಲ್ಲಿದ್ದು ಸಾಯೋ ನಿರ್ಧಾರವೇ?” ನಳ ವಿನಯವಾಗಿ ಕೇಳಿದ.
“ಸಾಯೋದಲ್ದೆ ಮತ್ತೇನ್ ಮಾಡೋದು ಸ್ವಾಮಿ?ನಾನಿದ್ದರೆಷ್ಟು ಸತ್ತರೆಷ್ಟು?ನನ್ನಂಥ ಜುಜುಬಿ ಕೋತಿಗೆ ಬೆಲೆಯುಂಟ?
“ಯಾಕೆ ಖಾರವಾದ ಮಾತುಗಳು ಕೋತಿರಾಮ?ಬದುಕಿನ ಅಂತಿಮ ನಿರ್ಧಾರ ಸಾವು.ಅದು ಅತ್ಯಂತ ದುಃಖದಲ್ಲಿದ್ದರೆ ಮಾತ್ರ ಸಾಧ್ಯೆ.ನಿನಗಂಥ ದುಃಖವೇನಿದೆ?” ಸಮಾಧಾನ ಪಡಿಸುತ್ತ ನಳ ಕೇಳಿದ.
“ಸ್ವಾಮಿ,ನಮಗೆ ಇನ್ನು ಬೆಲೆಯಿಲ್ಲ ಸ್ವಾಮಿ.ಭೂಮಿಗೆ ಬಂದ ಉದ್ದೇಶ ತೀರಿದೆ.ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ತಿದ್ದೆ. ನಮ್ಮನ್ನು ಇನ್ನು ಲೆಕ್ಕಿಸೋರ್ ಯಾರು? ನಮ್ಮ ಸಾಧನೆಯಾದ್ರು ಏನು? ನಾವು ಹೋದ ನಂತರ ನಮ್ಮನ್ನ ಯಾರು ನೆನಪು ಮಾಡಿಕೊಳ್ತಾರೆ?” ಅಳುತ್ತಾ ಕೋತಿರಾಮ ಕಂಪಿಸೋ ಧ್ವನಿಯಲ್ಲಿ ಕೇಳಿದ.
ಕೋತಿರಾಮನ ಮಾತು ನಳನಿಗೆ ಪೂರ್ತಿಯಾಗಿ ಅರ್ಥವಾಗಲಿಲ್ಲ.ಆದರೆ ಏನೋ ಒಳ ಅರ್ಥ ಇದೆ ಎಂದು ಭಾವಿಸಿದ.
“ಅದೇನೆಂದು ಬಿಡಿಸಿ ಹೇಳು ಕೋತಿರಾಮ.ನಾವು ಸಾವಿರಾರು ಕೋತಿಗಳಿದ್ದೇವೆ.ವಾನರ ಸೇನೆ ಅಂದ್ರೆ ಸುಮ್ನೆನಾ?ಈ ರಾಮನ ಕಾಲಮಾನದಲ್ಲಿ, ರಾಮಾಯಣ ಎಂದೇ ಗುರುತಿಸಲಾಗೋ ಈ ವರ್ಷದಲ್ಲಿ ಜೀವಿಸಿ,ಸಕಾರಾತ್ಮಕ ಭಾವನೆಯನ್ನ ಅನುಭವಿಸೋ ಬಿಟ್ಟು,ಹುಚ್ಚನ ಹಾಗೆ ಸಾಯಲು ಹೊರಟ್ಟಿದ್ದೀಯಲ್ಲ ಕೋತಿರಾಮ?”
ಕೋತಿರಾಮ ಕಹಿನಗುವನ್ನ ಮುಖದ ಮೇಲೆ ತಂದುಕೊಂಡದ್ದನ್ನು ನಳ ಗಮನಿಸಿದ.ಬಂಡಾಯ ಯೋಚನೆಗಳು ಅವನ ಮುಖದ ಮೇಲೆ ಪ್ರತಿಬಿಂಬಿಸಿದವು.ಆದರು ಅವನೇ ಮಾತಾಡಲಿ ಎಂದು ಕಾದು ಕೂತ.ಕೆಲ ನಿಮಿಷಗಳ ನಂತರ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು ಕೋತಿರಾಮ ಮಾತನಾಡಿದ.
“ರಾಮ?ಯಾವ ರಾಮನ ಬಗ್ಗೆ ಹೇಳ್ತಿದ್ದೀರ ಸ್ವಾಮಿ?”
“ಎಂಥಾ ಮಾತನಾಡ್ತಿ ಮೂಢ!” ನಳನಿಗೆ ಬಿಸಿರಕ್ತ ತಲೆಗೆ ಏರಿದಂತಾಯಿತು.ಮುಖ ಕೆಂಪಾಯಿತು.
“ರಾಮನ ಮೇಲೆ ನನಗೂ ಗೌರವ,ಪ್ರೀತಿ ಇದೆ ಸ್ವಾಮಿ.” ಎಂದು ಮೆಲುಧ್ವನಿಯಲ್ಲೇ ಕೋತಿರಾಮ ಉತ್ತರ ಕೊಟ್ಟ.
“ಮತ್ತೇನು ನಿನ್ನ ರೋದನೆ?”
“ಈ ಸಂವತ್ಸರ ಕಳೆದು ಹೋಗತ್ತೆ. ಲಂಕೆಯಲ್ಲಿ ಯುದ್ಧವಾಯ್ತು. ಸಾವಿರಾರು ಮಂದಿ ಸತ್ತರು. ನಮ್ಮ ವಾನರ ಸೇನೆಯಲ್ಲೇ ಎಷ್ಟೋ ಕೋತಿಗಳು ಬೆಂಕಿಗಾಹುತಿಯಾದ್ವು. ಆಂಜನೇಯ ವೀರಾವೇಷ ತೋರಿದ.ಸೈನಿಕರು ದಿಕ್ಕಾಪಾಲಾದ್ರು. ಅವರಲ್ಲಿ ಎಲ್ಲರು ನೆಲಸಮವಾಗಿ ಹೋದ್ರು. ಕೊನೆಗೂ ನಾವು ಗೆದ್ದೆವು.ಸತ್ಯ ಗೆಲುವು ಕಂಡಿತು.ಈ ಇಡೀ ಕಥೆ,ಹಿಂದೂ ರಾಷ್ಟ್ರದಲ್ಲಿ ನದಿ ಹರಿದಂತೆ ಇತಿಹಾಸವಾಗಿ ಉಳಿಯತ್ತೆ.ಇನ್ನು ಕೋಟಿ ವರ್ಷ ಕಳೆದರು,ಈ ಕಥೆ ಗ್ರಂಥವಾಗತ್ತೆ,ಇದನ್ನು ಸಂಶೋಧನೆಗೆ ಒಳಪಡಿಸ್ತಾರೆ,ಪಂಡಿತರು ಸತ್ಯ ಸುಳ್ಳಿನ ನಡುವೆ ವಾದ ಮಾಡ್ತಾರೆ. ಇಷ್ಟೆಲ್ಲಾ ಸೈನಿಕರು ಹೋರಾಡಿದ್ರು,ಹಂತ ಹಂತವಾಗಿ ಜಯ ತಂದುಕೊಟ್ರು. ಈ ಇಡೀ ವೀರಚರಿತೆಗೆ ’ರಾಮಾಯಣ’ ಅಂತ ಕರೆಯೋಕೆ ಶುರು ಮಾಡಿದಾರೆ,ಇನ್ನು ಮುಂದೆ ಹಾಗೆ ಉಳಿಯತ್ತೆ,ದೇವರು ಇರೋವರೆಗು.ಯಾಕೇಂದ್ರೆ ಈಗ ರಾಮನು ದೇವರ ಸಮಾನ.”
ನಳನಿಗೆ ಮೈ ಉರಿಯಲು ಶುರುವಾಯ್ತು.ಕೋತಿ ಕೋಪದಲ್ಲಿ ಮೆಲ್ಲನೆ ಘರ್ಜಿಸಿದ. “ಪ್ರೀತಿಯಿಂದ ಕೇಳಿದರೆ ನೇರ ಉತ್ತರ ಕೊಡೋದಿಲ್ಲ ನೀನು.ಅದೇನು ನಿನ್ನ ಮನಸ್ಸಲ್ಲಿ ಇರೋದು ಅಂತ ಬೊಗಳು” ಎಂದು ಉದ್ಘರಿಸಿದ.
“ಕೋಟಿ ಶತಮಾನಗಳು ಕಳೆದರು ರಾಮಾಯಣ ಉಳಿಯುತ್ತದೆ.ನಿಜವಲ್ಲವೇ?”
ಕಿರಿಕಿರಿಯಲ್ಲೇ “ಹೌದು” ಎಂದ ನಳಮಹಾರಾಜ.
“ರಾಮ ಮಹಾಪುರುಷನಾದ,ರಾವಣ ಖಳನಾಯಕನಾದ.ಲಕ್ಷ್ಮಣ,ಆಂಜನೇಯ ಪೋಷಕರಾದ್ರು.”
“ಹ್ಮ್..”
“ಈ ಕೋಟಿ ವರ್ಷಗಳು ಕಳೆದ ಮೇಲೆ ದೇವರ ದುರ್ಬೀನಿನಲ್ಲಿ ಕಂಡರೆ ರಾಮ ಇರೋದಿಲ್ಲ,ಸೀತೆ ಇರೋದಿಲ್ಲ,ಆಂಜನೇಯ ಇರೋದಿಲ್ಲ,ಲಕ್ಷ್ಮಣ ಇರೋದಿಲ್ಲ. ದುರ್ಬೀನಲ್ಲಿ ಕಾಣುವುದೇನು ಹೇಳು?”
ನಳಮಹರಾಜ ಚಿಂತನೆಗೆ ಒಳಗಾದ. ಇದೆಂಥ ವ್ಯಾವಹಾರಿಕ ಪ್ರಶ್ನೆ?ಉತ್ತರವೇನು ಎಂದು ಕಣ್ಣು ಮುಚ್ಚಿ ಯೋಚಿಸಿದ.ಸಾಕಷ್ಟು ತೊಳಲಾಟದ ನಂತರ ಧ್ವನಿ ತೆಗೆದ.
“ಇನ್ನೆಷ್ಟೇ ಶತಮಾನಗಳು ಕಳೆದರು,ರಾಮಾಯಣದ ಸಂಕೇತವಾಗಿ ಉಳಿಯೋದು, ರಾಮೇಶ್ವರದಿಂದ ಲಂಕೆಗೆ ಕಟ್ಟಿದ ಸೇತುವೆ. ಯಾಕೆಂದರೆ ಸಮುದ್ರದ ನೀರಿನಲ್ಲಿ ಅದಕ್ಕೆ ತೇಲೋ ತಾಕತ್ತಿದೆ.” ಎಂದು ಖಡಾಖಂಡಿತವಾಗಿ ಉತ್ತರಿಸಿಬಿಟ್ಟ.
ಚಪ್ಪಾಳೆ ತಟ್ಟುತ್ತಾ,ನಗುತ್ತಾ ಕೋತಿರಾಮ ನಳರಾಜನ ಮುಂದೆ ವಾಲಿದ.
“ಆ ಸೇತುವೆ ಇಲ್ಲದಿದ್ರೆ,ಸೀತೆ ಸಿಗುತ್ತಿರಲಿಲ್ಲ. ಸೀತೆ ಇಲ್ಲದಿದ್ರೆ ರಾಮ ಇಲ್ಲ. ರಾಮಾಯಣವಾದದ್ದು ನಿಜ,ರಾಮ ದೇವದೂತನಾಗಿದ್ದು ನಿಜ. ಆದ್ರೆ ಆ ಸೇತುವೆ ಕಟ್ಟಿದ ನಮಗೇನು ಸಿಕ್ಕಿತು ಸ್ವಾಮಿ,ಮಣ್ಣು?.” ಎಂದು ಬಲವಾಗಿ ಉಸಿರಾಡುತ್ತ ನುಡಿದ ಕೋತಿರಾಮ.
ನಳರಾಜನಿಗೆ ಮಾತಿಲ್ಲ.ಕೋತಿರಾಮನೆ ಮುಂದುವರಿಸಿದ.
“ಅದಕ್ಕೆ ಸ್ವಾಮಿ,ನಾನು ಇದ್ದರೇನು ಇತಿಹಾಸದಲ್ಲಿ ನನ್ನ ಹೆಸರು ಕೆತ್ತುವರೆ?ಅಥವ ನನ್ನ ಹಾಗೆ ಸಾವಿರಾರು ಕೋತಿಗಳು ಕಲ್ಲು ಹಾಕಿ ಸೇತುವೆ ಕಟ್ಟಿದವು,ಪ್ರತಿ ಕಲ್ಲಿನ ಮೇಲೆ ರಾಮನ ಹೆಸರು ಅಚ್ಚೆ ಹಾಕಿದೆವು.ಆದರೆ ಕೋಟಿ ವರ್ಷಗಳಾದ ಮೇಲೆ ಪ್ರತಿ ಕೋತಿಯ ಹೆಸರು ಯಾರಾದರು ಹೇಳ್ತಾರ? ಅಥವ ಈಗಲೇ ಅಯೋಧ್ಯೆಯ ವಿಜಯೋತ್ಸವದಲ್ಲಿ ನಮ್ಮ ಹೆಸರನ್ನೇನಾದ್ರು ಹೇಳ್ತಾರ?ನಾವಿದ್ದರೆಷ್ಟು ಬಿಟ್ಟರೆಷ್ಟು ಸ್ವಾಮಿ?”
ನಳರಾಜನಿಗೆ ಏನು ತೋಚದಂತಾಗಿ ಮುಖ ಪೆಚ್ಚಾಯಿತು. ಇವನ ಮಾತಲ್ಲಿ ಸತ್ಯವಿದೆ. ಆದರೆ ರಾಮನು ಒಂದು ಶಕ್ತಿ. ಆ ಶಕ್ತಿ ಇಲ್ಲದಿದ್ದರೆ ನಾವು ಕಪಿಚೇಷ್ಟೆ ಮಾಡುತ್ತ,ಹೆಂಡ ಕುಡ್ಕೊಂಡು,ಜೂಜು ಆಡಿಕೊಂಡೆ ಇರ್ತಿದ್ವಿ. ಆದರು ಇವನ ಮಾತಿನಲ್ಲಿ ತತ್ವವಿದೆ. ಒಂದು ಮಹಾಸಾರದಲ್ಲಿ ಅದೆಷ್ಟು ಜನಗಳ ಕೈ ಇರುತ್ತದೆ. ಒಂದು ಗೆಲುವಿಗೆ ಅಥವ ಒಂದು ಸಾಧನೆಗೆ ಅದೆಷ್ಟು ಪ್ರಯಾಣಿಕರು ಬೆನ್ನೆಲುಬಾಗಿ ನಿಂತು ಕೊನೆಗೆ ನಮ್ಮ ಹಾಗೆ ಕೋತಿಗಳಾಗಿ ಹೋಗ್ತಾರೆ. ನಳರಾಜನ ಯೋಚನೆಗೆ ಅಡ್ಡಿಯಾಗಿ ಕೋತಿರಾಮ ಮತ್ತೆ ಮಾತನಾಡಿದ.
“ನಿಮ್ಮನ್ನ ಮರೆಯೋದಿಲ್ಲ ಬಿಡಿ ಸ್ವಾಮಿ.ನೀವು ನೇತೃತ್ವದಲ್ಲಿದ್ದೋರಲ್ವೆ?”
ಈ ಮಾತು ನಳನಿಗೆ ಸ್ವಲ್ಪ ಮುಜುಗರವೆನಿಸಿತು. “ಇದು ಸಾಯುವಷ್ಟು ದೊಡ್ಡ ವಿಷಯವಲ್ಲ.ಕೆಲವರು ಕೋತಿಗಳಾಗೆ ಇರ್ತಾರೆ.ಅದೇ ಪ್ರಪಂಚ.ಇದು ರಾಮಾಯಣವಲ್ಲ,ಇನ್ನೆಷ್ಟು ಸಂವತ್ಸರಗಳು ಕಳೆದರು ಹೀಗೆ ಇರತ್ತೆ.ಬಾ.” ಎಂದು ಪುಸುಲಾಯಿಸಿ ಕೋತಿರಾಮನನ್ನು ಎಳೆದುಕೊಂಡು ಹೋದ.ಕೋತಿರಾಮ ವಿರೋಧಿಸುತ್ತಲೇ ಕಾಲೆಳೆದು ನಡೆದು ನಳನ ಹಿಂದೆ ಹೆಜ್ಜೆ ಹಾಕಿದ.
ಸೆಮಿನಾರ್ ಹಾಲಿನಲ್ಲಿ ಕೂತೋರೆಲ್ಲಾ ರಮೋನ ಹೇಳಿದ ಕಥೆಯನ್ನು ಆಳವಾಗಿ ಕೇಳುತ್ತಾ ಕೂತಿದ್ದರು.
“ಅಷ್ಟೆ ಕಥೆ.ಮಲ್ಗಿದ್ದೋರೆಲ್ಲಾ ಏಳಬಹುದು.” ಎಂದು ಕೊಂಕಾಡಿದಳು ರಮೋನ.
ಅಲ್ಲಿ ಕೂತಿರೋರಿಗೆ ಅರ್ಧ ಹೊಟ್ಟೆ ತುಂಬಿದ ಭಾವ. ಬುದ್ಧಿಗೆ ಬುಗುರಿ ಬಿಟ್ಟು ನಿಂತಿರೋ ರಮೋನಾನ ಕಂಡು ಕಣ್ಣಲ್ಲೇ ಕೆಂಡ ಕಾರ್ತಿದ್ರು ಎಲ್ರು.ಸತ್ಯನ ತಲೆಯಲ್ಲು ಏನು ಹೊಳೀತಿಲ್ಲ.ರಮೋನಾಳ ಮುಂದಿನ ಮಾತು ಕೇಳಲು ಕಾತುರದಿಂದ ಕಾಯ್ತ ಇದ್ದ. ಅಷ್ಟರಲ್ಲಿ ಪಕ್ಕದಲ್ಲಿದ್ದ ಮಲಯಾಳಿ ಕೈ ಎತ್ತಿದ.
“ಮೇಡಂ,ಈ ಕಥೆಯನ್ನ ನಮಗ್ಯಾಕೆ ಹೇಳ್ತಿದ್ದೀರಿ?” ಅಂತ ತನ್ನ ಮುರುಕಲು ಇಂಗ್ಲಿಷಲ್ಲಿ ಪ್ರಶ್ನಿಸಿದ.
ರಮೋನ ಮುಗುಳ್ನಕ್ಕು “ಬನ್ನಿ ಕೋತಿಗಳಾ,ಸೇತುವೆ ಕಟ್ಟೋಣ.ವೀರಗಾಥೆ ರಚಿಸೋಣ.” ಎಂದು ಮಂದವಾಗಿದ್ದ ದೀಪವನ್ನು ಮತ್ತೆ ಹೊತ್ತಿಸಿದಳು.ಚಪ್ಪಾಳೆ ಸದ್ದು ಸೆಮಿನಾರ್ ಹಾಲ್ ತುಂಬಿಕೊಂಡಿತು.
Facebook ಕಾಮೆಂಟ್ಸ್