X

ನಮ್ಮ ಶಾಂತಿಯನ್ನು ಕದಡಲು ಯಾರಿಗೂ ಸಾಧ್ಯವಿಲ್ಲ!

ಸ್ವಾಮಿ, ಏನೇ ಆಗ್ಲಿ ನಾವು ಕುಂತಲ್ಲಿಂದ ಏಳೋರಲ್ಲ. ಊರಿಗೆ ಊರೇ ನಮ್ಮನ್ನ ಬಹಿಷ್ಕರಿಸಿದ್ರೂ ನಾವು ಅಲ್ಲಾಡೋರಲ್ಲ. ಇದ್ದ-ಬಿದ್ದ ಜೀವಿಗಳೆಲ್ಲಾ ಬುದ್ದಿಯಿದೆ, ಎಂದು ಕೊಂಡವರೆಲ್ಲಾ ನಮ್ಮ ಮೇಲೆ ಏರಿ ಬಂದ್ರೂ ಅವರನ್ನು ಸವಿ ಸವಿ ನುಡಿಯಿಂದಲೇ ಮಾತನಾಡಿಸುತ್ತೀವಿ. ಏ ಭಟ್ಟ ಕೋಳಿ ಸುಟ್ಟ ಊರಿಗೆಲ್ಲ ನಾಥ ಕೊಟ್ಟ.. ಜುಟ್ಟೂ, ಡೊಳ್ಳು ಹೊಟ್ಟೆ, ದಾರ, ಕಚ್ಚೆ ಲಂಗೋಟಿ ಎಂದೆಲ್ಲಾ ಹಂಗಿಸಿ ಕಿಸ ಕಿಸಗುಟ್ರೂ ನಾವು ಸಮಾಧಾನದ ಪ್ರಸನ್ನತೆಯ ನಗು ಬೀರಿ ಮುಂದೆ ನಡೆಯುತ್ತೀವಿ. ಇನ್ನು ನಮ್ಮದೇ ಭಾಷೆಯಲ್ಲಿ ಹೇಳಬೇಕೆಂದರೆ, ಜಪ್ಪಯ್ಯ ಅಂದ್ರೂ ನಾವು ಮಾತ್ರಾ ಕುಂತಜಾಗದಿಂದ ಅಲ್ಲಾಡೋರಲ್ಲ.

ಯಾಕೆ ಎಂದು ಕೇಳ್ತೀರಾ?

ಯಾಕಂದ್ರೆ ನಾವು ಬ್ರಾಹ್ಮಣರು. ಶಾಂತಿ ಪ್ರಿಯರು. ಶಾಂತಿ ಮಂತ್ರವನ್ನೇ ಪಠಣ ಮಾಡೋರು. ಶಾಂತಿಯನ್ನೇ ಬೋಧಿಸುವವರು. ಶಾಂತಿಯುತವಾದದ್ದನ್ನೇ ತಿನ್ನುವವರು. ಶಾಂತಿಯನ್ನೇ ನಮ್ಮ ಉಸಿರಾಗಿಸಿಕೊಂಡಿರವವರು. ಹುಟ್ಟಿದರೂ ಶಾಂತಿ ಮಾಡ್ತೀವಿ, ಸತ್ತರೂ ಶಾಂತಿ ಅಂತೀವಿ. ಅಂದ ಮೇಲೆ ಬದುಕಿರುವ ಮೂರು ನಾಲ್ಕು ದಿನ ಶಾಂತಿ ಶಾಂತಿ ಅನ್ನದೇ, ಬದುಕದೆಯೇ ಇರುತ್ತೇವೆಯೇ? ಯಾರು ಬೇಕಿದ್ದರೂ ನಮ್ಮ ವಿರುದ್ದ ಬೊಂಬ್ಡ ಹೊಡೀಲಿ ನಮ್ಮ ಶಾಂತಿಯನ್ನು ನಿಮ್ಮಿಂದ ಅಲ್ಲಾಡಿಸಲೂ ಆಗಲ್ಲ.

ಶಾಂತಿ ಎನ್ನುವುದೇ ನಮ್ಮ ರಕ್ತಗತವಾಗಿ ಬಂದಿದೆ. ಶಾಂತಿ ಎನ್ನುವುದೇ ನಮ್ಮ ನಂಬಿಕೆ. ಅದೇ ದೇವರು. ಮಾತಿನ ಆರಂಭದಲ್ಲೂ ಶಾಂತಿ ಮಂತ್ರವನ್ನು ಪಠಿಸುತ್ತೀವಿ, ಮುಕ್ತಾಯವನ್ನೂ ಶಾಂತಿ ಎಂದೇ ಮುಗಿಸುತ್ತೀವಿ. ಶಾಂತಿಯೇ ನಮ್ಮ ಮಂತ್ರ. ನಮ್ಮ ವಿದ್ಯೆ ಆರಂಭವಾಗುವುದೇ ಶಾಂತಿ ಮಂತ್ರದಿಂದ ಹಾಕುವ ಜನಿವಾರದಿಂದ. ದಿನದ ಮೂರೂ ಹೊತ್ತೂ ಶಾಂತಿ ಮಂತ್ರವನ್ನು ಪಠಿಸುತ್ತಾ, ಶಾಂತಿಯಿಂದ ಇರುವುದನ್ನು ರೂಢಿಸಿಕೊಳ್ಳುತ್ತೀವಿ. ಜಗತ್ತನ್ನೇ ಬೆಳಗುವ ಸೂರ್ಯನನ್ನು ನಮಸ್ಕರಿಸಿ, ಧನ್ಯವಾದಗಳನ್ನು ಅರ್ಪಿಸುತ್ತೀವಿ. ಪ್ರಕೃತಿಯನ್ನು ಸ್ಮರಿಸುತ್ತೀವಿ. ತಂದೆ-ತಾಯಿಗಳನ್ನು ದೇವರು ಅಂತೀವಿ. ಅತಿಥಿ ದೇವೋ ಭವ ಎಂದು, ಮನೆಗೆ ಬಂದವರು ಯಾರೇ ಆಗಿರಲಿ ಅವರನ್ನು ಸತ್ಕರಿಸಿಯೇ ಕಳಿಸ್ತೀವಿ. ದೇವರೆಂಬ ನಂಬಿಕೆಯ ಕಲ್ಲಿನ ಮೂರ್ತಿಯೆದುರಿಗೆ,ತುತ್ತು ಅನ್ನವನ್ನಿಟ್ಟು ‘ಈ ಲೋಕದ ಹಸಿವನ್ನೆಲ್ಲಾ ಇಂಗಿಸು ದೇವಾ’ ಎಂದು ಪ್ರಾರ್ಥಿಸುತ್ತೀವಿ. ದೇವಸ್ಥಾನ, ಮಠಗಳನ್ನು ನಿರ್ಮಿಸಿ, ಬಂದ ಜನರಿಗೆ ಪ್ರಸಾದ ರೂಪವಾಗಿ ಹೊಟ್ಟೆ ತುಂಬಿಸಿಯೇ ಕಳಿಸ್ತೀವಿ. ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಬಿತ್ತಿ, ದತ್ತಿ, ದಾನ, ಧರ್ಮಗಳನ್ನು ಬೋಧಿಸಿ ಸಂಪತ್ತು, ಹಣ ಒಬ್ಬರಲ್ಲಿಯೇ ಸಂಗ್ರಹವಾಗುವುದನ್ನು ತಪ್ಪಿಸಿ, ಸಮಾಜಕ್ಕೇ ಹಂಚುವ,ವಿನಿಯೋಗಿಸುವ ವ್ಯವಸ್ಥೇಯನ್ನು ಮಾಡುತ್ತೀವಿ. ದುಃಖದಿಂದ ಬಳಲಿ ಬೆಂಡಾದ ಜನರಿಗೆ ಸಾಂತ್ವಾನ ಮಾಡಿ, ಭವಿಷ್ಯದ ಬಗ್ಗೆ ಧನಾತ್ಮಕವಾಗಿರುವಂತೆ ಬೋಧಿಸುತ್ತೀವಿ. ಸಕಲರಿಗೂ ಒಳ್ಳೆಯದಾಗಲೆಂದು ಹಾರೈಸುತ್ತೀವಿ. ಕೊನೆಯಲ್ಲಿ ಪ್ರತಿಯೊಬ್ಬರೂ ಸುಖವಾಗಿರಲೆಂದು, ಮನಃಪೂರ್ವಕವಾಗಿ ನುಡಿಯುತ್ತೀವಿ. ಇವುಗಳನ್ನೆಲ್ಲಾ ಯಾವುದೇ ಒಂದು ಪ್ರದೇಶಕ್ಕೆ, ದೇಶಕ್ಕೆ ಸೀಮಿತಗೊಳಿಸಿಲ್ಲ ನಾವು. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ನಾವು ಮಾಡುವುದು ಇದನ್ನೇ. ಇಂತಹ ನಮ್ಮನ್ನು ಭಟ್ಟ ಭಟ್ಟ ಎಂದು ನೀವು ಎಷ್ಟೇ ಹಂಗಿಸಿ, ನಮ್ಮ ಶಾಂತಿಯನ್ನು ನಿಮ್ಮಿಂದ ಚೂರೂ ಭಂಗಗೊಳಿಸಲು ಸಾಧ್ಯವಿಲ್ಲ.

ಯಾವುದು ವ್ಯರ್ಥ ಸ್ವಾಮಿ? ‘ಕಲ್ಲಿಗೆ ಹಾಲೆಲ್ಲಾ ಸುರಿದು ವ್ಯರ್ಥ ಮಾಡ್ತೀರಾ’ ಅಂತೀರ, ‘ಬೆಂಕಿಗೆ ಹಾಕಿ ಸುಡುತ್ತೀರಾ’ ಅಂತೀರ. ನಮಗೆ ವಿಜ್ಞಾನವೂ ಗೊತ್ತು ಸ್ವಾಮಿ, ಹಾಗೆ ನಿಮ್ಮ ಅಜ್ಞಾನವೂ. ಈ ಶರೀರದಿಂದ ಹಿಡಿದು, ನಾವು ಬಳಸುವ ಪ್ರತಿಯೊಂದು ಕಣ ಕಣವೂ ಪ್ರಕೃತಿಯಿಂದಲೇ ಪಡೆಯುತ್ತೇವೆ. ಅಂತದ್ದರಲ್ಲಿ ಪ್ರಕೃತಿಯದೇ ವಸ್ತುಗಳನ್ನು ಈ ರೂಪದಲ್ಲಿ ಪ್ರಕೃತಿಗೆ ಸೇರಿಸಿ ಅದರ ಸಮತೋಲನವನ್ನು ಕಾಪಾಡಿಕೊಳ್ಳುತ್ತಿರುವ ನಮಗೆ, ಮಿತಿ ಮೀರಿ ತಿಂದು, ಕಕ್ಕಸಿನಲ್ಲಿ ತುಂಬಿಸಿ, ಚರಂಡಿಯಿಂದ ಅರ್ಕಾವತಿಗೆ ಹರಿಸಿ, ರೋಗಾಣುಗಳನ್ನು ಮಾತ್ರಾ ಹರಡುವ ಯಾವ ಬುದ್ದು ಜೀವಿಗಳಿಂದಲೂ ಅನಗತ್ಯ ಪಾಠ ಹೇಳಿಸಿಕೊಳ್ಳುವ ಅಗತ್ಯ ಖಂಡಿತ ನಮಗಿಲ್ಲ. ಗದ್ದೆ, ತೋಟಗಳಿಂದ ಆವೃತವಾದ ದೇವಸ್ಥಾನಗಳಲ್ಲಿ ಅಭಿಷೇಕ ಮಾಡಿದ ಹಾಲು ಮತ್ತು ಇತರ ಪದಾರ್ಥಗಳು ,(ತೋಟಗಳಲ್ಲಿ, ಗದ್ದೆಗಳಲ್ಲಿ ಚೌಡಿಯನ್ನು, ನಾಗ ಬನವನ್ನು ಪ್ರತಿಷ್ಠಾಪಿಸಿ ಅವುಗಳಿಗೆ ಹಾಲೆರೆಯುವ ಕ್ರಮ) ಅಲ್ಲಿಯ ಮಣ್ಣಿಗೆ ಸೇರಿ, ಜೈವಿಕ ಕ್ರಿಯೆಗಳಿಂದ ಗೊಬ್ಬರವಾಗಿಸಿ, ಉತ್ತಮ ಫಸಲನ್ನು ನೀಡುವಂತೆ ಮಾಡುವ ಪದ್ಧತಿ, (ನಗರದ ದೇವಸ್ಥಾನಗಳನ್ನು ಹೊರತು ಪಡಿಸಿ) ಮದ್ಯಪಾನದ ಮತ್ತಿನಲ್ಲಿ ಬಡ ಬಡಿಸುವ ಯಾರಿಗೆ ತಾನೇ ಅರ್ಥೈಸಿಕೊಳ್ಳಲಾದೀತು? ಔಷಧಿಯುಕ್ತ ವನಸ್ಪತಿಗಳನ್ನು ತುಪ್ಪದೊಂದಿಗೆ ಬೆರೆಸಿ, ಅಗ್ನಿಗೆ ಸಮರ್ಪಿಸಿ, ಹೊಗೆಯನ್ನಾಗಿಸಿ, ಜನರಿಗೆ ಔಷಧಿಯುಕ್ತ ಗಾಳಿಯನ್ನು ಉಸಿರಾಡುವಂತೆ ಮಾಡುತ್ತೇವೆ. ಇದು ಕಾರ್ಖಾನೆ ವಿಷಗಾಳಿ,ಕಾರ್ಪೋರೇಟ್ ಯುಗದ ಏಸಿಯ ಬಿಸಿಗಾಳಿ, ಗಾಡಿಗಳ ಧೂಳುಗಳಲ್ಲಿ ಮುಚ್ಚಿ ಹೋಗಿ ದಿನ ಬೆಳಗಾದರೆ ಡಾಕ್ಟರ್ ಹತ್ತಿರ ಓಡುವ ಯಾರಿಗೆ ತಾನೆ ಇದನ್ನೆಲ್ಲಾ ಯೋಚಿಸಲು ಸಮಯವಿದ್ದೀತು?ಬುಡುಬುಡುಕೆ ಎಂದು ಬಡಬಡಿಸುವ ಯಾವ ಮಂಕುಬೂಧಿಗಳಿಗೆ ನಮ್ಮ ಶಾಂತಿಯನ್ನು ಕಿಂಚಿತ್ತು ಅಲ್ಲಾಡಿಸಲು ಹೇಗೆ ತಾನೇ ಸಾಧ್ಯವಾದೀತು?

ಭೌತಿಕ ಶರೀರದ ಬಗ್ಗೆ ಎಲ್ಲರಿಗಿಂತಲೂ ಹೆಚ್ಚಾಗಿಯೇ ತಿಳಿದುಕೊಂಡ ನಮಗೆ, ಈ ಶರೀರ ಯಾವ ಯಾವ ಆಹಾರಗಳಿಗೆ ಯಾವ ಯಾವ ರೀತಿ ಪ್ರತಿಕ್ರಯಿಸುತ್ತದೆ, ಜೊತೆ ಜೊತೆಗೆ ಮನಸ್ಸನ್ನು ನಿಯಂತ್ರಿಸುವ ರೀತಿಯನ್ನು ನಾವು ಸೇವಿಸುವ ಆಹಾರಗಳಿಗೆ ಹೊಂದಿಸಿ, ಅದೇ ರೀತಿಯಾದ ಸಾತ್ವಿಕ ಪದ್ಧತಿಯ ಆಹಾರ ಕ್ರಮವನ್ನು ಅನುಸರಿಸಿ ನಮ್ಮ ಶರೀರವನ್ನು, ಮನಸ್ಸನ್ನೂ ಸದೃಢವಾಗಿ ಕಾಪಾಡಿಕೊಳ್ಳುತ್ತೇವೆ. ಉಳಿದವರಿಗೂ ಸಹ ಇದೇ ಆಹಾರ ಪದ್ಧತಿಯನ್ನು ದೇವರ ಹೆಸರಿನಲ್ಲಿ ಅಮೃತಮಯವಾದ ಆಹಾರವನ್ನೇ ಹಿತ, ಮಿತವಾಗಿ ಉಣಿಸಿ, ಅದನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಲು ಉಪದೇಶಿಸುತ್ತೇವೆ. ಈ ರೀತಿಯಾಗಿ ಪ್ರಕೃತಿಯ ಉಳಿದ ಜೀವಿಗಳನ್ನೂ ಗೌರವಿಸಿ ಅವುಗಳ ಸಂರಕ್ಷಣೆಗೆ ನೇರವಾಗಿಯೇ ಕಾರಣರಾಗುತ್ತೇವೆ. ಇಂತಹ ಶುದ್ಧಿಯಿಂದಲೂ, ರುಚಿಯಿಂದಲೂ ಇರುವ ಹಲವು ಬಗೆಯ ಪಾಕಗಳನ್ನು ಶಾಸ್ತ್ರ ಬದ್ಧವಾಗಿ ಸಿದ್ಧಪಡಿಸಿ ಸವಿಯುವ ನಮಗೆ, ಕಂಡಲೆಲ್ಲಾ, ಕಂಡದ್ದೆಲ್ಲಾ ತಿಂದು ಶರೀರವನ್ನೂ ಮನಸ್ಸನ್ನೂ ಮಲಿನಗೊಳಿಸಿಕೊಂಡು ಕೋತಿಗಳಂತೆ ಕುಪ್ಪಳಿಸಿ ತಿಪ್ಪರಲಾಗ ಹಾಕಿದರೂ ನಮ್ಮ ಶಾಂತಿಯನ್ನು ಕೆಡಿಸಲು ಸಾಧ್ಯವಿಲ್ಲ.

ಚಂದವಾಗಿ ಸಾಂಸ್ಕøತಿಕವಾಗಿ ಮೈತುಂಬಾ ಬಟ್ಟ ಧರಿಸಿ ನಮ್ಮ ಸಂಸ್ಕøತಿಯ ಜೊತೆ ಜೊತೆ ಮಾನವನ್ನೂ ಕಾಪಾಡಿಕೊಳ್ಳುವ ನಾವು, ನಮ್ಮದೇ ಆದ ಶೈಲಿಯಲ್ಲಿ ಸಮಾಜದ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಮಗೆ ಅರ್ಧಂಬರ್ಧ ಬಟ್ಟೆಧರಿಸಿ ಮಾನ ಹರಾಜಿಗಿಟ್ಟುಕೊಂಡು, ಬಲಾತ್ಕಾರ ಹೆಚ್ಚಾಗ್ತಿದೆ ಎಂಬ ಢೋಂಗಿ ಚಳುವಳಿಗಿಳಿಯುವ ಮಂದಿ ಎಷ್ಟೇ ಬಾಯ್ಬಡಿದಿಕೊಂಡರೂ ನಮ್ಮ ಶಾಂತಿಯನ್ನು ಸ್ವಲ್ಪ ಮಾತ್ರಕ್ಕೂ ನಾಶಗೊಳಿಸಲಾರರು.

‘ದೇಶ ಸುತ್ತು ಕೋಶ ಓದು’ ಎನ್ನುತ್ತಾ, ಎರಡು ಅಡಕೆಯ ಸಂಭಾವನೆಯ ನೆಪದಲ್ಲಿ, ಊರೂರು ಸುತ್ತುತ್ತಾ ಅಲ್ಲಿಯಲ್ಲಿಯ ಸಂಸ್ಕøತಿಯ ವೈವಿಧ್ಯತೆಯನ್ನು, ಭಾಷೆಯ ಶೈಲಿಯನ್ನು ಅರಿತು,ಅದಕ್ಕೆ ತಕ್ಕಂತೆ ಹೊಂದಿಸಿಕೊಂಡು ಆ ಸೊಗಸನ್ನು ಸವಿಯುವ ನಮ್ಮ ಶಾಂತಿಯನ್ನು ಕೆಡಿಸಲು, ದಿನ ಬೆಳಗಾದರೆ ಬಕೆಟ್ ಹಿಡಿದು ರಾಜಕಾರಣಿಗಳ ಹಿಂಬಾಲಿಸಿ, ಅವರು ನೆಕ್ಕಿ ಬಿಟ್ಟ ಮೂಳೆಗಳಾನ್ನಾಯುವ ಯಾರಿಂದಲೂ ಸಾಧ್ಯವಿಲ್ಲ.

ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೂ ನಾನಾ ವಿಚಾರಧಾರೆಗಳಿಂದ, ತರ್ಕದಿಂದ ಸತ್ವಯುತ ಸಾತ್ವಿಕ ವಾದಕ್ಕಿಳಿದು, ಮಂಥನ ಚಿಂತನದಿಂದ ಹುಟ್ಟಿದ ಬೆಣ್ಣೆಯಂತ ಜ್ಞಾನವನ್ನು ಸವಿದು ಗಳಿಸಿಕೊಂಡ ಶಾಂತಿಯೆಂಬ ವಿದ್ಯೆಯನ್ನು ಕರಗತ ಮಾಡಿಕೊಂಡ ನಮಗೆ, ಕುತರ್ಕದ ಬುದ್ಧಿಯುಳ್ಳ ಬುದ್ದುಗಳು ಖಾಲಿ ಬಾಟಲಿಗಳನ್ನು ಅಲ್ಲಾಡಿಸಿದಾಗ ಬರುವ ಶಿಳ್ಳೆಯಂತ ಸದ್ದನ್ನೇ ಜ್ಞಾನವೆಂದು ತಿಳಿದ ಮಂಕೆಗಳು ಎಷ್ಟೇ ಒದರಿದರೂ ನಮ್ಮ ಒಂದು ಕೂದಲನ್ನೂ ಕೊಂಕಿಸಲಾರರು.

ಹೌದು. ನಾವು ಭಯಗೊಳಿಸುತ್ತೀವಿ. ದೇವರು ಶಾಪ ಕೊಡುತ್ತಾನೆಂಬ ಭೀತಿ ಹುಟ್ಟಿಸುತ್ತೀವಿ. ಇದು ಖಂಡಿತ ಸಮಾಜವನ್ನು ದೋಚಲಲ್ಲ. ನಮ್ಮ ಮಕ್ಕಳು ದಾರಿತಪ್ಪಿ, ಸಮಾಜ ಕಂಟಕರಾಗದಿರಲೆಂದೇ ಹೊರತು ಇದರ ಹಿಂದೆ ನಮ್ಮ ಯಾವ ಹುನ್ನಾರ ಇಲ್ಲ. ನಮಗೆ ಪುಣ್ಯವೂ ಗೊತ್ತು ಪಾಪವೂ ಗೊತ್ತು. ಪಾಪಗಳನ್ನು ಮಾಡಿ ತಮ್ಮ ಅಶಾಂತಿಯನ್ನು ಹೆಚ್ಚಿಸಿಕೊಳ್ಳಬೇಡಿ ಎಂದು ಪುಣ್ಯದ ಮಾತನಾಡುತ್ತೇವೆ. “ಪಾಪಾಯ ಪರ ಪೀಡನಂ” ‘ಬೇರೆಯವರನ್ನು ಪೀಡಿಸುವುದೇ ಪಾಪ’ ಎನ್ನುವ ನಾವು ನಿಮಗೇಕೆ ಕೇಡು ಬಗೆದು ನಮ್ಮ ಶಾಂತಿಗೆ ಕಲ್ಲು ಹಾಕಿಕೊಳ್ಳಲಿ ಹೇಳಿ?

ಇಷ್ಟೇ ಅಲ್ಲ. ಇಂತಹ ಬೇಕಾದಷ್ಟಿದೆ ನಮ್ಮ ಸಮಾಜ ಮುಖಿ ಯೋಚನೆಗಳು, ಮಂತ್ರಗಳು ಬುದ್ಧಿ ಜೀವಿಗಳ ನೂರು ಜನ್ಮಕ್ಕೂ ಸಾಕಾಗುವಷ್ಟು ಜ್ಞಾನ ಭಂಡಾರವೇ ನಮ್ಮಲ್ಲಿದೆ. ಇದೊಂದು ಸಣ್ಣ ಝಲಕ್ ಅಷ್ಟೇ.

ಇನ್ನು ಆದಾಯದ ವಿಷಯಕ್ಕೆ ಬರುವ. ಗಂಡ ಹೆಂಡತಿಯರನ್ನು ಡೈವೋರ್ಸ್ ಕೊಟ್ಟು ಬೇರ್ಪಡಿಸುವ ವಕೀಲರೆ ಲಕ್ಷ ಲಕ್ಷ ಫೀಜ್ ಕಿತ್ತು ಕೊಳ್ಳುವಾಗ, ಅವರಿಬ್ಬರನ್ನೂ ಈ ಜನ್ಮಕ್ಕೊಂದೇ ಅಲ್ಲ ಏಳೇಳು ಜನ್ಮಕ್ಕು ಒಟ್ಟಾಗಿ, ಹೊಂದಿಕೊಂಡು, ಸುಖವಾಗಿ ಬಾಳುವಂತೆ ಮಾಡುವ ಸಂಸ್ಕಾರಕ್ಕೆ ಕಿಂಚಿತ್ ದಕ್ಷಿಣೆ ಅಂತ ಪಡೆಯಬಾರದಾ? ಶರೀರ ತನಗೆ ಬಂದು ಹಲವಾರು ರೋಗಗಳನ್ನು ತಾನೇ ಗುಣಪಡಿಸಿಕೊಳ್ಳತ್ತದೆಂಬ ಜ್ಞಾನ ನಿಮಗಿಲ್ಲದಿರಬಹುದು, ಆದರೆ ನಮಗಿದೆ. ಅದಕ್ಕೆ ದೇವರ ನಾಮ ಸ್ಮರಣೆಯಿಂದ ರೋಗ ಗುಣವಾಗುತ್ತದೆಂಬ ನಂಬಿಕೆ ಅವರಲ್ಲಿ ಹುಟ್ಟಿಸಿ, ಅವರ ಅನೇಕ ಖಾಯಿಲೆ, ಸಮಸ್ಯೆಗಳನ್ನು ಗುಣಪಡಿಸಲು ಶರೀರಕ್ಕೆ ಅವಶ್ಯಕವಾದ ಸಮಯ ಕೊಡುವುದನ್ನು ಕಲಿಸಿಕೊಡುವುದಕ್ಕೆ ಜನ ಪ್ರತಿಫಲವಾಗಿ ಕೊಡುವ ಹೂವಿನ ಎಸಳೂ ನಿಮ್ಮ ಕಣ್ಣಿಗೆ ಕುಕ್ಕಿದರೆ ನಾವೇನು ಮಾಡುವುದು? ಅನಾವಶ್ಯಕ ಹೆದರಿಸಿ ಸುಳ್ಳು ಸುಳ್ಳೇ ಪರೀಕ್ಷೆಗಳನ್ನು ಬರೆಯಿಸಿ ದುಡ್ಡು ಕಿತ್ತುಕೊಳ್ಳುವ ವೈದ್ಯರು, ಇವತ್ತು ಕಟ್ಟಿ ನಾಳೆ ಬಿದ್ದು ನೂರಾರು ಬಲಿ ತೆಗೆದುಕೊಳ್ಳುವ ಕಟ್ಟಡಗಳನ್ನು ಕಟ್ಟಿದ ಇಂಜಿನಿಯರ್, ಇಲೆಕ್ಷನ್ ಬಂತೆಂದರೆ ಪೊಳ್ಳು ಆಶ್ವಾಸನೆಗಳನ್ನು ನೀಡಿ ನಂಬಿಸಿ, ಗೆದ್ದು ಕೋಟಿ ಕೋಟಿ ಹಣ ದೋಚುವ ರಾಜಕಾರಣಿ. ಇವರೆಲ್ಲಾ ಯಾರು? ನಾವು ಇವರನ್ನು ಪಾಪಿಗಳೆಂದೇ ಕರೆಯೋದು. ನಿಮಗೆ ಇವರೇ ದೇವತೆಗಳೆಂದು ನಮಗೆ ಗೊತ್ತು ಬಿಡಿ. ಹೊಸ ಗೃಹ ಪ್ರವೇಶಿಸಿ ಸುಖವಾಗಿ ನೂರು ವರ್ಷ ಬಾಳ್ರಪ್ಪ ಅಂತ ಹಾರೈಸುವ ನಾವೆಲ್ಲಿ? ದಿನ ಬೆಳಗಾದರೆ ಪೊಳ್ಳು ಪ್ರಶಸ್ತಿಯ ಆಸೆಗಾಗಿ ಮನೆ ಮುರಿಯೋ ಮಾತನಾಡುವ ನೀವೆಲ್ಲಿ ಸ್ವಾಮಿ?

ಸುಳ್ಳು ಸುಳ್ಳೇ ಸುದ್ದಿ ಹರಡಿಸಿ, ಜನರನ್ನು ಎತ್ತಿ ಕಟ್ಟಿ, ಮೂಢನಂಬಿಕೆಯ ಮಸೂದೆಯನ್ನು ಹೊರಡಿಸಿ, ನಮ್ಮ ಹೊಟ್ಟೆಗೆ ಹಿಟ್ಟಿಲ್ಲದಂತೆ ಮಾಡಿ ಚಂದ ಕಾಣುವ ದರ್ದು ಯಾರಿಗೆಲ್ಲಾ ಇದೆ ಎಂದು ತಿಳಿದುಕೊಂಡಿರವರಷ್ಟು ಮೂಢರೇನೂ ನಾವಲ್ಲ. ಹೀಗೆ ಸಮಾಜದಲ್ಲಿ ಅಶಾಂತಿಯನ್ನು ಹರಡಿ ಸಮಾಜದ ವ್ಯವಸ್ಥೆಯನ್ನು ಕುಲಗೆಡಿಸುವುದರಲ್ಲಿ ನಿಸ್ಸೀಮರಾದವರು, ಅಶಾಂತಿಯೆಂಬ ನರಕದಲ್ಲಿ ಬೇಯುತ್ತಿರುವರು ಯಾರೆಲ್ಲಾ ಎಂಬ ವಿಚಾರ ಶಾಂತಿಯಿಂದಿರುವ ನಾವು ಬಲ್ಲೆವು.

ನಾವೇನು ದರ್ಭೆಯನ್ನು ಮಾತ್ರಾ ಹಿಡಿದು ಬದುಕಿದವರಲ್ಲ. ಕಾಲಕ್ಕೆ, ಸಮಾಜಕ್ಕೆ ತಕ್ಕಂತೆ ಹೊಂದಿಕೊಂಡು ಬಂದಿದ್ದೀವಿ. ದರ್ಭೇ ಹಿಡಿಯುವ ಸಂದರ್ಭದಲ್ಲಿ, ದರ್ಭೆ ಹಿಡಿದು ಶಾಂತಿಯ ಮಂತ್ರ ಪಠಿಸಿದ್ದೀವಿ, ಬೆತ್ತ ಹಿಡಿದು ಶಿಕ್ಷಕರಾಗಿದ್ದೀವಿ, ಹೋಟೆಲ್‍ಗಳನ್ನು ನಡೆಸಿ ಸೈ ಅನಿಸಿಕೊಂಡಿದ್ದೀವಿ, ಲೇಖನಿ ಹಿಡಿದು ಜ್ಞಾನಪೀಠಿಗಳಾಗಿದ್ದೀವಿ, ವ್ಯಾಪಾರಿಗಳಾಗಿದ್ದೀವಿ, ಕೃಷಿಕರಾಗಿದ್ದೀವಿ, ದೇಶ,ವಿದೇಶಗಳಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ದುಡಿಯುತ್ತಲೂ ಇದ್ದೀವಿ, ಅಂತಹ ಅನೇಕ ಕಂಪನಿಗಳನ್ನು ಹುಟ್ಟು ಹಾಕಿದ್ದೀವಿ, ರಾಜ್ಯವನ್ನೂ ಆಳಿದ್ದೀವಿ, ಬಂದೂಕು ಹಿಡಿದು ದೇಶಕ್ಕಾಗಿ ಹೋರಾಡಿದ್ದೀವಿ. ನಮಗೆ ಎದೆಯುಬ್ಬಿಸಿ ನಿಲ್ಲುವುದೂ ಗೊತ್ತು, ತಲೆಬಾಗಿ ವಂದಿಸಿ ಗೌರವಿಸುವುದೂ ಗೊತ್ತು.

ಬೇಕಿದ್ದರೆ ಒಮ್ಮೆ ಸರ್ವೆ ಮಾಡಿ ನೋಡಿ. ವಿದ್ಯೆ ಕಲಿತವರಲ್ಲಿ ಒಬ್ಬರಾದರೂ ಮುಂದೆ ಬರಲಿ ನಾನು ಬ್ರಾಹ್ಮಣರಿಂದ ಪಾಠ ಮಾಡಿಸಿಕೊಳ್ಳಲಿಲ್ಲ ಎಂದು! (ಅನ್ಯ ಧರ್ಮಿಯರನ್ನು ಹೊರತು ಪಡಿಸಿ) ಉಣ್ಣುವವರಲ್ಲಿ ಬ್ರಾಹ್ಮಣರ ಹೋಟೆಲ್ ಲಿ ಊಟ ಮಾಡಲಿಲ್ಲ ಎಂದು, ಎಷ್ಟು ಮಂದಿ ಬ್ರಾಹ್ಮಣರ ಸಾಹಿತ್ಯಗಳನ್ನು ಓದಿ ಖುಷಿ ಪಡಲಿಲ್ಲ ಎಂದು? ಎಷ್ಟು ಜನ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳ ಒಡೆಯರಾದ ಬ್ರಾಹ್ಮರನ್ನು ಆದರ್ಶರನ್ನಾಗಿ ಇಟ್ಟುಕೊಂಡಿಲ್ಲ ಎಂದು? ನಮ್ಮ ಸಾಧನೆ ಒಂದೆರಡು ಕ್ಷೇತ್ರಗಳಲ್ಲಲ್ಲ, ಏ ಟೂ ಝಡ್ ಎಲ್ಲಾ ಕ್ಷೇತ್ರಗಳಲ್ಲೂ ನಾವು ಸಾಧಕರೇ.

ಇಂತಹ ಸಾಧಕರಾದ ನಮಗೆ ಯಾರೂ ಯಾವ ಸೌಲಭ್ಯಗಳನ್ನೂ ಕೊಟ್ಟಿದ್ದಿಲ್ಲ. ಯಾರೂ ಮೀಸಲಾತಿ ಇಟ್ಟಿದ್ದಿಲ್ಲ, ಯಾರಲ್ಲೂ ಬಕಿಟ್ ಹಿಡಿದಿದ್ದಿಲ್ಲ. ಏನಿದ್ದರೂ ನಮ್ಮ ಸ್ವ ಸ್ವಾಮಥ್ರ್ಯದಿಂದಲೇ ಗಳಿಸಿಕೊಂಡಿದ್ದು. ಆಶ್ಚರ್ಯದ ಸಂಗತಿ ಎಂದರೆ, ನಾವು ಮನುಷ್ಯ ಜನರನ್ನೇ ನಂಬುವವರಲ್ಲ, ಅವರು ನಮ್ಮವೇ ಜಾತಿಗಳಾಗಿದ್ದರೂ ಕೂಡ! ಅದಕ್ಕೇ ನಮ್ಮಲ್ಲಿ ಒಗ್ಗಟ್ಟಿಲ್ಲ. ಒಗ್ಗಟ್ಟಿಲ್ಲವೆಂಬ ಚಿಂತೆಯೂ, ಅಳುಕೂ ನಮಗಿಲ್ಲ. ನಾವು ಬಿದ್ದಾಗ ನಮ್ಮವರಾದರೂ ಬರುತ್ತಾರೋ ಎಂದು ನಾವು ಎದುರು ನೋಡುವವರೂ ಅಲ್ಲ. ಹಾಗೆ ಅವರು ಬರುವವರೂ ಅಲ್ಲ ಎನ್ನುವುದೂ ನಮಗೆ ಗೊತ್ತು. ಏಕೆಂದರೆ ಅವರಿಗೆ ನಮ್ಮವರ ಸಾಮರ್ಥ್ಯ ಗೊತ್ತು. ಯಾರ ಋಣಕ್ಕೂ ಬೀಳದಿರು ಎನ್ನುವ ಪಾಠವನ್ನು ಈ ರೀತಿಯಾಗಿ ಕಲಿಸುವ ಛಾತಿ ನಮ್ಮಲ್ಲಿಯೇ ಇದೆ. ನಮ್ಮ ಹುಟ್ಟು ಸಂಸ್ಕøತಿಯನ್ನು ನಾವು ಎಷ್ಟು ಪ್ರೀತಿಸುತ್ತೇವೆಂದರೆ, ಅನ್ಯ ಸಂಸ್ಕøತಿಯ ನಮ್ಮವರಲ್ಲೂ ನಾವು ರಾಜಿ ಮಾಡಿಕೊಳ್ಳಲಾರೆವು. ಇದೂ ನಮ್ಮ ಶಕ್ತಿಯೇ. ಏಕೆಂದರೆ ನಮ್ಮ ಸಂಸ್ಕøತಿ ಅಳಿದರೆ ನಾವು ಅಳಿದಂತೆ, ನಾವು ಅಳಿದರೆ ಈ ಸಮಾಜದ ಹಿತ ಕಾಪಾಡುವವರಾರೆಂಬ ಕಳಕಳಿ. ಇದೇ ನಮ್ಮ ಜನಿವಾರದಲ್ಲಿರುವ ಬ್ರಾಹ್ಮಣ್ಯದ ಗುಟ್ಟು. ಎಲ್ಲಿಯವರೆಗೆ ಈ ಜನಿವಾರ ನಮ್ಮಲ್ಲಿದೆಯೋ ಅಲ್ಲಿಯವರೆಗೂ ನಮ್ಮನ್ನು ಯಾರೂ ಏನೂ ಮಾಡಲಾಗದು.

“ಜನನಾತ್ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೆ” ಎಂದರೆ “ಹುಟ್ಟುವಾಗ ಕೆಳಜಾತಿಯಲ್ಲೇ ಹುಟ್ಟಿ, ಅವನಿಗೆ ಸಿಗುವ ಸಂಸ್ಕಾರದಿಂದ ಎರಡನೆಯ ಜನ್ಮ ಸಿಕ್ಕಿ, ಬ್ರಾಹ್ಮಣನಾಗುತ್ತಾನೆ”ಎಂದು ಹೇಳಿದವರೂ ಬ್ರಾಹ್ಮಣರೆ ಹೊರತು ಅನ್ಯರಲ್ಲ. ಅಂತಹ ನಾವು ಉಳಿದ ಜನರ ದೇವರನ್ನಷ್ಟೇ ಅಲ್ಲ, ಅನ್ಯ ಧರ್ಮಿಯರ ಸಾಧಕರನ್ನೂ ಆರಾಧಿಸುತ್ತೇವೆ, ಪೂಜಿಸುತ್ತೇವೆ, ಗೌರವಿಸುತ್ತೇವೆ. ಅವರೇ ನಮಗೆ ಆದರ್ಶ ಪ್ರಾಯರೂ ಕೂಡ, ಇಂತವರು ನಾವು. ಇನ್ನು ಶುದ್ಧತೆಗೆ ಮಡಿಯೆಂದು ಅನ್ಯಜಾತಿಯರನ್ನು, ನಮ್ಮ ಸಂಸ್ಕøತಿಗೆ ಎಲ್ಲಿ ಧಕ್ಕೆ ಬರುತ್ತದೋ ಎಂಬ ಕಳಕಳಿಗೆ ಅನ್ಯ ಧರ್ಮಿಯರನ್ನು ದೂರ ಇಟ್ಟಿರಬಹುದೇ ಹೊರತು, ಖಂಡಿತಾ ಅವರ ಮೇಲಿನ ದ್ವೇಷಕ್ಕಾಗಲ್ಲ. ಇಂತಹ ನಾವು ಅವರ ಮೇಲೆ ದಬ್ಬಾಳಿಕೆ ಮಾಡಿದ್ದರೆ, ನಾವು ನಂಬುವ ನಮ್ಮ ದೇವರೂ ನಮ್ಮನ್ನು ಕ್ಷಮಿಸಲಾರ. ಅಂತವರನ್ನು ನಾವು ಶೂದ್ರರೆಂದೇ ಪರಿಗಣಿಸುತ್ತೇವೆ ಕೂಡ. ಇದರಲ್ಲಿ ಇಂತವರ ಜೊತೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ.

ಇನ್ನು ಹುಟ್ಟುವಾಗಲೇ ಶೂದ್ರನಾಗಿದ್ದು, ಸಿಗುವ ಸಂಸ್ಕಾರದಿಂದ ತನ್ನನ್ನು ತಾನು ತಿದ್ದಿಕೊಳ್ಳದೆ, ಸಮಾಜಕ್ಕೆ ಅಹಿತವನ್ನೇ ಬಗೆಯುವ ಕೇವಲ ಜಾತಿಯ ಹೆಸರಿಗೆ ಬ್ರಾಹ್ಮಣನೆಂದುಕೊಳ್ಳುತ್ತಾ ತಿರುಗುವವರ ಜೊತೆಗೂ ನಮ್ಮ ಸಂಬಂಧ ಏನೇನೂ ಇಲ್ಲ. ಕೇವಲ ಮಾನವೀಯ ದೃಷ್ಟಿಯಿಂದ, ಅಂತಹ ಕಟುಕರನ್ನು ಕರುಣಾಪೂರಿತ ಕಂಗಳಿದ ಕಾಣುತ್ತೇವೆ ಅಷ್ಟೇ. ಆ ನಂಬಿಕೆಯ ದೇವರಲ್ಲಿ ಅವರಿಗೆ ಸದ್ಬುದ್ದಿಯನ್ನು ಕೊಡುವಂತೆ ಪ್ರಾರ್ಥಿಸುತ್ತೇವೆ ಕೂಡ.

ನಾವು ದ್ವೇಷ, ಅಸೂಯೆ, ಸಿಟ್ಟು, ಜಂಭ, ಹಿಂಸೆ, ಆಸೆಗಳನ್ನು ಯಾವಾಗಲೂ ಸಾಕಿಕೊಂಡಿದ್ದಿಲ್ಲ. ಇವುಗಳನ್ನೇ ಶತ್ರುಗಳೆಂದು ಪರಿಗಣಿಸುವರು ನಾವು. ಈ ರೀತಿಯಾಗಿ ಇಂತಹ ರಾಗಳಿಂದ ದೂರವಾಗಿ ಶಾಂತಿಯುತವಾಗಿ ಬದುಕುವ ನಾವು, ಸಮಾಜದ ಅಸುರೀ ಶಕ್ತಿಗಳ ನಾಲಿಗೆಯ ಚಪಲಕ್ಕೆ ಸುಲಭವಾಗಿ ತುತ್ತಾಗುವವರು ನಾವೇ. ಅವರಿಗೆ ಗೊತ್ತು ನಮ್ಮ ಬೇಳೆ ಬೇಯುವುದು ನಮ್ಮಲ್ಲಿ ಮಾತ್ರಾ ಎಂದು. ಅವರ ಇನ್ಯಾವುದೋ ಕುತಂತ್ರಕ್ಕೆ ಜನರ ದಿಕ್ಕು ತಪ್ಪಿಸಲು ನಮ್ಮನ್ನು ಕಾಯಿಗಳನ್ನಾಗಿ ಬಳಸುತ್ತಿರುತ್ತಾರೆ. ಪಾಪದ ಜನರು, ತೋಳ, ನಾಯಿಗಳ ಹುಯಿಲಿಗೆ ಬೇಸ್ತುಬಿದ್ದು ಆಟವನ್ನು ನೋಡುತ್ತಿರುವಾಗ, ಮತ್ತೊಂದು ಕಡೆ ಅವರ ಇನ್ನಾವುದೋ ತಂತ್ರಕ್ಕೆ ಇದೇ ಜನರನ್ನು ಬಲಿ ಕೊಡಲು ಸಿದ್ಧತೆ ನಡೆಸುತ್ತಿರುತ್ತಾರೆ. ಅದಕ್ಕೆ ತಕ್ಕಂತೆ ಉಪಯೋಗಿಸಲು ಮಾಧ್ಯಮಗಳನ್ನು, ವರದಿಗಾರರನ್ನು, ಬುದ್ಧಿಜೀವಿಗಳಿಗೆ ಕಾಲ ಕಾಲಕ್ಕೆ ಬಡಿಸಿ ತೋಳ, ನಾಯಿಗಳನ್ನು ಸಾಕಿಕೊಂಡಿರುತ್ತಾರೆ. ಅವರು ಕೂ ಎಂದಾಕ್ಷಣ ಇವು ನಮ್ಮ ಮೇಲೆ ಹುಯಿಲೆಬ್ಬಿಸುತ್ತವೆ. ಜನರು ಅದಕ್ಕೆ ತಕ್ಕಂತೆ ತಲೆಯಾಡಿಸುತ್ತಾ ಬಲಿ ಬೀಳುತ್ತಾರೆ. ಇದೆಲ್ಲವೂ ನಮಗೆ ಗೊತ್ತಿರುವ ವಿಚಾರವೆ ಹೊರತು ಹೊಸದಲ್ಲ. ಅನಾದಿ ಕಾಲದಿಂದಲೂ ನಮ್ಮ ಮೇಲೆ ಕುಳ್ಳಿರಿಸಿದ ಗೂಬೆಗಳೇ ಇವು. ಅದಕ್ಕಾಗಿಯೇ ಶಾಂತರಾಗಿಯೇ ನಾವು ಇದನ್ನೆಲ್ಲಾ ಕಾಣುತ್ತೇವೆ. ನಮಗೆ ಗೊತ್ತು ಇವರ ಆಟ ಹೆಚ್ಚು ದಿನ ನಡೆಯುವುದಲ್ಲ. ಇವರೂ ಮಣ್ಣಾಗಿ ಹೋಗುವವರೇ ಎಂದು.

ಇಷ್ಟು ಶಾಂತಿ ನಮಗೆ ಹೇಗೆ ಬಂತು ಅಂದುಕೊಳ್ಳುತ್ತೀರಾ?

ನಮ್ಮ ಪೂರ್ವಜರಿಂದ ಹಿಡಿದು ನಮ್ಮಲ್ಲಿಯವರೆಗೂ ನಾವು ಅಗ್ನಿಯ ಆರಾಧಕರು. ತಾನು ಮುಟ್ಟಿದ್ದನ್ನೆಲ್ಲವನ್ನು ಸುಟ್ಟು ಕರಕಲಾಗಿಸುವ ತಂತ್ರದಲ್ಲಿ ಅಗ್ನಿ ನಿಸ್ಸೀಮ. ಇಂತಹ ಅಗ್ನಿಯ ಜೊತೆ ಒಡನಾಟ ಬೆಳೆಸಿಕೊಂಡು, ಆ ಅಗ್ನಿಯ ಒಡಲ ಶಾಂತಿಯನ್ನು ಸಾಕ್ಷಾತ್ಕರ ಮಾಡಿಕೊಂಡವರು ನಾವುಗಳು. ಅಂತಹ ಅಗ್ನಿಯ ಒಡಲ ಶಾಂತತೆಯನ್ನೇ ಕಂಡ ನಮಗೆ ಶಾಂತಿಯುತವಾಗಿ ಬದುಕಲು ಎಳ್ಳಿನಷ್ಟೂ ಕಷ್ಟವಿಲ್ಲ. ನಾವು ಹಾಗೆ ಬದುಕುತ್ತಿದ್ದೇವೆ ಕೂಡ. ಆದರೆ ಆ ಅಗ್ನಿಯನ್ನೇ ಭಕ್ಷಿಸುವ ಆಸೆಗೆ ಬಿದ್ದ ಹುಳ ಹುಪ್ಪಟೆಗಳು, ಇದೇ ಅಗ್ನಿಯನ್ನು ಸ್ಪರ್ಷಿಸಿ ಸುಟ್ಟು ಬೀಳುತ್ತಿರುವುದನ್ನು ಕಂಡರೆ ನಮಗೆ ಪಾಪ ಎನಿಸಿಬಿಡುತ್ತದೆ. ಹೀಗಾದರೆ ಅಗ್ನಿಯದೇನು ತಪ್ಪು. ಅದರ ಸ್ವಭಾವವೇ ಸುಡುವುದು. ತಮ್ಮ ಪಾಡಿಗೆ ತಾವು ಬದುಕುವ ನಮ್ಮನ್ನು ಕೆಣಕುವ ಹುಳುಗಳಿಗೇನು ಕಮ್ಮಿಯಿಲ್ಲ. ಹಾಗೆ ಕೆಣಕಿ ರಾಜ್ಯಕ್ಕೆ ರಾಜ್ಯವೇ ಬುಡ ಮೇಲಾಗಿ, ಹೊಸ ರಾಜ್ಯಗಳ ಸ್ಥಾಪನೆಯಾದ ಇತಿಹಾಸವೇನೂ ನಮ್ಮಲ್ಲಿ ಕಡಿಮೆಯಿಲ್ಲ. ಹಾಗಿದ್ದರೂ ನಮ್ಮ ಶಾಂತಿಯನ್ನು ಕೆಣಕುವ ಹುಳುಗಳ ಕರ್ಮಕ್ಕೆ ಯಾರುತಾನೆ ಹೊಣೆ?

ಇಂತಹ ಯಾವ ಹುಳುಗಳಿಂದಲೂ ನಮ್ಮ ಭಕ್ಷಣೆ ಸಾಧ್ಯವಿಲ್ಲ. ಏಕೆಂದರೆ ನಾವು ಈ ಜಗತ್ತಿನ ಸಂಸ್ಕøತಿ. ಈ ಜಗತ್ತಿನ ಆತ್ಮ. ಆತ್ಮಕ್ಕೆ ಸಾವಿಲ್ಲ ಎಂದು ಅರಿತವರು ನಾವು.

ಹಣ್ಣುಗಳ ರಾಶಿ ಎಂದಾಕ್ಷಣ ಕೊಳೆತ ಹಣ್ಣುಗಳೂ, ಹುಳ ಹಿಡಿದ ಹಣ್ಣುಗಳೂ ಹೇರಳವಾಗೇ ದೊರೆಯುತ್ತವೆ. ಅಂತಹ ಹಣ್ಣುಗಳನ್ನು ತಮ್ಮ ಜೋಳಿಗೆಯಲ್ಲಿ ಇರಿಸಿಕೊಂಡು, ಹಸಿದಾಗ ಅದನ್ನೇ ಜೊಲ್ಲು ಸುರಿಸಿ ತಿನ್ನುವ ಹೊಟ್ಟೆಬಾಕ ಪರದೇಶಿಗಳ ಮಾತಿಗೆ ಯಾವ ಸತ್ವಯುತ ಬ್ರಾಹ್ಮಣರೂ ತಮ್ಮ ಶಾಂತಿಯನ್ನು ಕಳೆದುಕೊಳ್ಳುವುದಿಲ್ಲ. ಏಕೆಂದರೆ ನಾವು ಶಾಂತಿ ಪ್ರಿಯರು. ನಮ್ಮನ್ನು ಕಡಿಯಲು ಬಂದ ಕಟುಕರನ್ನೂ ಸೇರಿಸಿಯೇ ನಾವು ಹೇಳುತ್ತೇವೆ, “ಲೋಕಾಃ ಸಮಸ್ತಾ ಸುಖಿನೋ ಭವಂತು” ‘ಎಲ್ಲರೂ ಸುಖವಾಗಿಯೇ ಬಾಳಲಿ’ ಎಂದು.

ಓಂ ಶಾಂತಿಃ ಶಾಂತಿಃ ಶಾಂತಿಃ.

Gopala Krishna Bhat

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post