‘ಇನ್ನೊಬ್ಬ ಸರ್ವೈವರ್ ಜೊತೆ ಹಂಚಿಕೊಳ್ಳುವ ಸಮಯ ಒಂದು ರೀತಿಯ ಮ್ಯಾಜಿಕಲ್ ಮೊಮೆಂಟ್ ಇದ್ದ ಹಾಗೆ’ ಅಂತ ಮೊನ್ನೆ ಯಾರೋ ಟ್ವೀಟ್ ಮಾಡಿದ್ದರು. ನಿಜ. ಅದರಲ್ಲೂ ಎದುರಿಗಿರುವ ವ್ಯಕ್ತಿ ಕೂಡ ನಾವು ಒಳಗಾಗಿದ್ದ ಕ್ಯಾನ್ಸರ್’ಗೆ ಒಳಗಾಗಿ ಗುಣಮುಖರಾಗಿದ್ದಲ್ಲಿ ಈ ಮಾತು ನೂರಕ್ಕೆ ನೂರು ನಿಜ ಎನಿಸುತ್ತದೆ. ಅಂದರೆ ಆಸ್ಟಿಯೋ ಸರ್ಕೋಮ ಸರ್ವೈವರ್, ಆಸ್ಟಿಯೋ ಸರ್ಕೋಮಾ ಸರ್ವೈವರ್’ನೊಂದಿಗೆ ಮಾತಾಡುವಾಗ, ಹಾಡ್ಕಿನ್ಸ್ ಲಿಂಫೋಮಾ ಸರ್ವೈವರ್ ಇನ್ನೊಬ್ಬ ಹಾಡ್ಕಿನ್ಸ್ ಲಿಂಪೋಮಾ ಸರ್ವೈವರ್ ಜೊತೆ ಸಮಯ ಹಂಚಿಕೊಂಡಾಗ ಆ ಸಮಯ ಮ್ಯಾಜಿಕಲ್ ಎಂದೇ ಎನಿಸುತ್ತದೆ. ಅದರಲ್ಲೇನು ಅಂತಹ ವಿಶೇಷ ಅಂತೀರಾ?! ಹೇಳ್ತೀನಿ..
ಅದೇನೋ ಗೊತ್ತಿಲ್ಲ ಎಲ್ಲ ಕ್ಯಾನ್ಸರ್ ಸರ್ವೈವರ್’ಗಳು, ಕ್ಯಾನ್ಸರ್’ಗೆ ಒಳಗಾದವರು ಒಂದು ರೀತಿ ‘ನಮ್ಮವರು’ ಎಂಬ ಭಾವನೆ ಬಂದುಬಿಟ್ಟಿರುತ್ತೆ. ಅದರಲ್ಲೂ ನಮಗಾಗಿದ್ದ ಕ್ಯಾನ್ಸರ್’ಗೆ ಒಳಗಾದವರು ಸಿಕ್ಕಿ ಬಿಟ್ಟರೆ, ಒಂಥರಾ ವಿದೇಶದಲ್ಲಿ ಕನ್ನಡದವರು ಸಿಕ್ಕ ಭಾವ!! ಹಾಗಂತ ನಾವು ನಮ್ಮ ನೋವುಗಳನ್ನ ಹಂಚಿಕೊಳ್ಳುತ್ತೇವೆ ಅಂದುಕೊಳ್ಳಬೇಡಿ. ಬದಲಾಗಿ ನಾವು ನಮ್ಮ ಮನೋಬಲವನ್ನ ಹೆಚ್ಚಿಸಿಕೊಳ್ಳುತ್ತೇವೆ. ಸಹಜತೆಯನ್ನ ಕಂಡುಕೊಳ್ಳುತ್ತೇವೆ. ಸಾಮಾನ್ಯವಾಗಿ ಜನರಿಂದ ನಮಗೆ ಒಂದೋ ಸಿಂಪತಿ ಸಿಗುತ್ತದೆ ಇಲ್ಲಾ ಏನೋ ಮಹತ್ಕಾರ್ಯ ಮಾಡಿದ ಹಾಗೆ ಹೆಮ್ಮೆಯಿಂದ ನೋಡಿ ಬಿಡುತ್ತಾರೆ ಅಥವಾ ನಮ್ಮಲ್ಲಿರೋ ಏನೋ ಒಂದು ಕೊರತೆಯನ್ನ ಎತ್ತಿ ಹಿಡಿದು ಛೇ ಎಂದು ಬಿಡುತ್ತಾರೆ. ಇವೆಲ್ಲಾ ಒಂದು ರೀತಿಯ ಮುಜುಗರ ಉಂಟು ಮಾಡುತ್ತಿರುತ್ತದೆ. ಆದರೆ ಸರ್ವೈವರ್ ಜೊತೆ ಮಾತಾಡಿದಾಗ ಎಲ್ಲವೂ ನಾರ್ಮಲ್ ಎನಿಸಿ ಬಿಡುತ್ತದೆ. ಅಲ್ಲಿ ಸಿಂಪತಿಗೆ, ಕೊರತೆಗಳಿಗೆ ಜಾಗವೇ ಇರುವುದಿಲ್ಲ.
ಮೊನ್ನೆ ಮೊನ್ನೆ ತಾನೆ ಒಬ್ಬ ಆಸ್ಟಿಯೋ ಸರ್ಕೋಮ ಸರ್ವೈವರ್ ಜೊತೆ ಮಾತಾಡುತ್ತಿದ್ದೆ. “ಚಿಕಿತ್ಸೆ ಎಲ್ಲಿ ಆಗಿದ್ದು, ಈಗ ನೋವೇನಾದ್ರು ಇದ್ಯ?, ನಿನ್ನ ಪ್ರೊಸ್ತೆಸಿಸ್ ಸ್ಟೈನ್’ಲೆಸ್ ಸ್ಟೀಲ್ ಅಥವಾ ಟೈಟಾನಿಯಂ? ಎಷ್ಟು ದೂರ ನಡೆಯಬಹುದು? ಡ್ರೈವ್ ಮಾಡ್ತಿದೀಯಾ? ಬಾಕಿ ಎಲ್ಲ ಸ್ವಲ್ಪ ರಿಸ್ಕಿ, ನಮಗೆ ಆಟೋ ಗೇರ್ ಕಾರ್ ಬೆಸ್ಟ್” ಅಂತೆಲ್ಲಾ ಮಾತಾಡಿಕೊಂಡಾಗ ಸಿಗುವ ಒಂದು ರೀತಿಯ ಸಹಜತೆ ಇದೆಯಲ್ಲ, ಅದು ತುಂಬಾ ಸಮಾಧಾನ ನೀಡುತ್ತೆ! ಅಷ್ಟೇ ಅಲ್ಲದೇ ನಾವಿನ್ನೂ ಎಷ್ಟು ಕಲಿಯುವುದಿದೆ? ನಮ್ಮ ಮನೋಬಲವನ್ನು ಇನ್ನೂ ಎಷ್ಟು ಹೆಚ್ಚಿಸಿಕೊಳ್ಳಬಹುದು ಅನ್ನುವುದನ್ನ ಸಹ ಹೇಳಿ ಕೊಡತ್ತೆ.
ನಾನು ಗುಣಮುಖಳಾಗಿ ಬಂದ ಮೇಲೆ ಮಾಡಿದ ಮೊದಲ ಕೆಲಸ ಸಾಕಷ್ಟು ಸರ್ವೈವರ್’ಗಳನ್ನ ಸಂಪರ್ಕಿಸುವುದು ಅವರ ಬಗ್ಗೆ ತಿಳಿದುಕೊಳ್ಳುವುದು. ಮಣಿಪಾಲದಲ್ಲಿ ಸಾಕಷ್ಟು ಜನರನ್ನು ನೋಡಿದ್ದೆ. ಅಲ್ಲಿದ್ದ ಕೆಲವರನ್ನ ನೋಡಿದಾಗ ನನ್ನೆದುರಿಗಿದ್ದ ಸವಾಲು ಅವರಷ್ಟು ದೊಡ್ದದಲ್ಲ ಎನಿಸುತ್ತಿತ್ತು. ಹಾಗೆಯೇ ಗುಣಮುಖಳಾದ ನಂತರ ಹಲವು ಸೈಟ್’ಗಳಲ್ಲಿ ಸಾಕಷ್ಟು ಜನರ ಬಗ್ಗೆ ತಿಳಿದುಕೊಂಡೆ. ರಿಬ್ ಬೋನ್’ಗಳಲ್ಲಿ ಟ್ಯೂಮರ್ ಆಗಿ, ಜೀವನ ಪರ್ಯಂತ ಹಾಸಿಗೆಯ ಮೇಲೆ ಇರುವಂತಾದವರ ಬಗ್ಗೆ ತಿಳಿದಾಗ ಅವರ ಮನೋದಾರ್ಢ್ಯದ ಬಗ್ಗೆ ತಿಳಿದಾಗ ಅವರೆದುರು ನಾನೆಷ್ಟು ಸಣ್ಣವಳು ಎನಿಸಿತ್ತು. ಕೆಲವೊಮ್ಮೆ ನಮ್ಮನ್ನ ನಾವು ತೀಸ್’ಮಾರ್ ಖಾನ್ ಅಂದುಕೊಂಡು ಬಿಟ್ಟಿರುತ್ತೇವೆ. ಅದಕ್ಕೆ ಯಾವಾಗಲೂ ನಮಗಿಂತ ದೊಡ್ಡವರನ್ನ, ಹೆಚ್ಚು ಸಂಘರ್ಷಗಳನ್ನ ನೋಡಿ, ಅದನ್ನ ದಾಟಿ ಬಂದವರನ್ನು ನೋಡುತ್ತಿರಬೇಕು. ಹಾಗಾಗಿಯೇ ನಾನು ಯಾವಾಗಲೂ ಶಾನ್ ಸ್ವಾರ್ನರ್ ಅನ್ನು ನೋಡುತ್ತಿರುತ್ತೇನೆ. ಆತ ಯಾವಾಗಲೂ ಎವೆರೆಸ್ಟ್’ನಂತೆ ನಿಂತಿರುತ್ತಾನೆ ನನ್ನ ಮುಂದೆ. ಆತನ ಬದುಕು, ಆತನ ವ್ಯಕ್ತಿತ್ವ ಎರಡೂ ಎವೆರೆಸ್ಟ್ ಅಷ್ಟೇ ಎತ್ತರ. ಆತನನ್ನು ನೊಡಿದಾಗಲೆಲ್ಲಾ, ಆತ ಎದುರಿಸಿದ ಸವಾಲುಗಳನ್ನು ನೋಡಿದಾಗಲೆಲ್ಲಾ ನಾನು ಎದುರಿಸಿದ ಸವಾಲುಗಳು ತುಂಬಾ ಚಿಕ್ಕದೆನಿಸುತ್ತದೆ!
ಆ ಸಮಯದಲ್ಲೇ ಕ್ಯಾನ್ಸರ್ ಪ್ಯಾಲ್ಸ್ ಇಂಡಿಯಾ ಎಂಬ ಫೋರಮ್ ಒಂದರಲ್ಲಿ ಇಣುಕಿದ್ದೆ. ಚೆನ್ನೈನ ರಮ್ಯಾ ಆ ಫೋರಮ್ ಅನ್ನು ಯಂಗ್ ಕ್ಯಾನ್ಸರ್ ಸರ್ವೈವರ್’ಗಳಿಗಾಗಿ ಆರಂಭಿಸಿದ್ದಳು. ಅಲ್ಲಿ ಕೂಡ ಸಾಕಷ್ಟು ಜನರ ಬಗ್ಗೆ ತಿಳಿದುಕೊಂಡೆ. ರಮ್ಯಾಳೊಂದಿಗೆ ಮಾತನಾಡಿದೆ ಕೂಡ. ಆಕೆ ಅಮೆರಿಕಾದಲ್ಲಿ ಒಳ್ಳೆಯ ಕೆಲಸದಲ್ಲಿದ್ದಾಗ ಆಕೆಯ ತಾಯಿಗೆ ಕ್ಯಾನ್ಸರ್ ಎಂದು ತಿಳಿದು, ತಾಯಿಯನ್ನು ನೋಡಿಕೊಳ್ಳಲು ಹಿಂದಿರುಗಿದ್ದಳು. ಆಕೆಯ ತಾಯಿ ಚಿಕಿತ್ಸೆ ತೆಗೆದುಕೊಳ್ಳುತ್ತಿರುವಾಗಲೇ ರಮ್ಯಾಗೆ ತನಗೆ ಬ್ರೆಸ್ಟ್ ಕ್ಯಾನ್ಸರ್ ಉಂಟಾಗಿದೆ ಎಂದು ತಿಳಿದು ಬಂದಿತ್ತು. ಆ ಮನಸ್ಥಿತಿ ಹೇಗಿರಬಹುದು. ತಾಯಿಗೆ ಸಮಾಧಾನ ಹೇಳುವುದಾ ಅಥವಾ ತನಗೆ ತಾನು ಹೇಳಿಕೊಳ್ಳುವುದಾ? ತಾನು ಚಿಕಿತ್ಸೆಯಲ್ಲಿರುವಾಗಲೇ ತನ್ನ ತಾಯಿಯನ್ನ ಕ್ಯಾನ್ಸರ್’ನಿಂದಾಗಿ ಕಳೆದುಕೊಳ್ಳುತ್ತಾಳೆ ರಮ್ಯಾ. ಆಕೆಯ ಆತ್ಮವಿಶ್ವಾಸಕ್ಕೆ ಬಿದ್ದಿದ್ದ ಏಟು ಅದು. ಕಲ್ಪನೆಗೂ ಮೀರಿದ್ದು. ಆದರೂ ಅದೆಲ್ಲವನ್ನು ಮೀರಿ ಗುಣಮುಖಳಾಗುತ್ತಾಳೆ. ಏಳು ವರ್ಷಗಳ ನಂತರ ಮತ್ತೆ ಕ್ಯಾನ್ಸರ್! ಆದರೆ ಆಕೆ ತನ್ನ ಮನೋಬಲದಿಂದ ಎಲ್ಲವನ್ನು ಮೀರಿ ನಿಂತಿದ್ದಳು. ಈಗ ಆಕೆ ಅರೋಗ್ಯವಾಗಿದ್ದಾಳೆ.
ಮೊನ್ನೆ ಜುವಿಯಸ್ ಲೈಫ್’ಸೈನ್ಸ್ ಅವರು ನಡೆಸಿದ ಎವೆರೆಸ್ಟ್ ಏರಿದ ಮೊದಲ ಕ್ಯಾನ್ಸರ್ ಸರ್ವೈವರ್ ಆಗಿರುವ ಶಾನ್’ನ ಸಂದರ್ಶನವನ್ನು ಓದುತ್ತಿದ್ದೆ. “ನೀವು ಇಲ್ಲಿಯ ತನಕ ಸಾಕಷ್ಟು ಸರ್ವೈವರ್’ಗಳನ್ನ, ಕ್ಯಾನ್ಸರ್ ಪೇಷಂಟ್ಸ್’ಗಳನ್ನ ನೋಡಿದ್ದೀರಿ. ಅವರಲ್ಲಿ ಯಾರಾದರೂ ಒಬ್ಬರು ಅಥವಾ ಯಾವುದಾದರೊಂದು ಘಟನೆ ನೀವು ಮರೆಯುವುದಕ್ಕೆ ಸಾಧ್ಯ ಇಲ್ಲ ಎನ್ನುವಂತಹದ್ದು ಯಾವುದು?” ಎಂಬ ಪ್ರಶ್ನೆಗೆ ಉತ್ತರವಾಗಿ ಶಾನ್ ಒಂದು ಘಟನೆಯನ್ನ ವಿವರಿಸಿದ್ದ. ಒಮ್ಮೆ ಒಂದು ಕಾನ್ಫೆರೆನ್ಸ್’ನ ನಂತರ ಸಾಕಷ್ಟು ಜನ ಸರತಿಯಲ್ಲಿ ಬಂದು ಈತನನ್ನು ಮಾತನಾಡಿಸುತ್ತಿದ್ದರು. ಆಗ ಆ ಸರತಿಯಲ್ಲಿದ್ದ ಒಬ್ಬ ಮಹಿಳೆ ಇವನ ಬಳಿ ಬಂದು ಆತನನ್ನು ಬಿಗಿಯಾಗಿ ಅಪ್ಪಿ ಹಿಡಿದು ಜೋರಾಗಿ ಬಿಕ್ಕಳಿಸಲಾರಂಭಿಸಿದ್ದಳು. ಸ್ವಲ್ಪ ಕಾಲ ಜೋರಾಗಿ ಅತ್ತು ಸಮಾಧಾನವಾದ ನಂತರ ಶಾನ್ ಬಳಿ ತನ್ನ ಕಥೆಯನ್ನ ಹೇಳಿಕೊಂಡಿದ್ದಳು. ಹಿಂದಿನ ಆರು ತಿಂಗಳಲ್ಲಿ ಕ್ಯಾನ್ಸರಿನಿಂದ ತನ್ನ ಗಂಡನನ್ನೂ ಹಾಗೂ ಮಗನನ್ನೂ ಕಳೆದುಕೊಂಡಿದ್ದಳು. ಅಲ್ಲದೇ ಆಕೆ ಮೂರನೇ ಬಾರಿ ಕ್ಯಾನ್ಸರ್’ಗೆ ಒಳಗಾಗಿದ್ದಳು. ಆಕೆ ಎಷ್ಟು ಹತಾಶೆಗೊಳಗಾಗಿದ್ದಳು ಎಂದರೆ ಕಾನ್ಫರೆನ್ಸ್ ನಡೆದ ಆ ಹೋಟೆಲಿನ ರೂಮಿನಲ್ಲಿ ಸೂಸೈಡ್ ನೋಟ್ ಬರೆದಿಟ್ಟು ಬಂದಿದ್ದಳು. ಆ ಕಾನ್ಫರೆನ್ಸ್ ನಡೆಸಿದ ಕಂಪನಿಯವಳೇ ಆಗಿದ್ದರಿಂದ ಇದನ್ನೊಂದು ನೋಡಿ ಬಿಡೋಣ ಎಂದು ಬಂದಿದ್ದಳು. ತನ್ನ ಕಥೆಯೆಲ್ಲಾ ಹೇಳಿಕೊಂಡ ಆಕೆ ಕೊನೆಯಲ್ಲಿ, “ಯೂ ಸೇವಡ್ ಮೈ ಲೈಫ್” ಎಂದು ಹೇಳಿ ಕಣ್ಣೀರಿಟ್ಟಿದ್ದ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತ್ಯಜಿಸಿದ್ದಳು. ಎಷ್ಟು ಹತಾಶೆ ಇದ್ದಿರಬಹುದು ಆಕೆಯ ಮನದಲ್ಲಿ. ಕ್ಯಾನ್ಸರ್ ಆಕೆಯಿಂದ ಆಕೆಯ ಕುಟುಂಬವನ್ನೇ ಕಸಿದುಕೊಂಡಿತ್ತು. ಆಕೆಯ ನೆಮ್ಮದಿ, ಖುಷಿ, ತಾಳ್ಮೆ ಎಲ್ಲವನ್ನೂ ಕಿತ್ತುಕೊಂಡಿತ್ತು. ಇದೆಲ್ಲದರ ನಂತರವೂ ಆಕೆ ಬದುಕುವ ನಿರ್ಧಾರ ಮಾಡುತ್ತಾಳೆ. ನನ್ನ ಪ್ರಶ್ನೆ ಇಷ್ಟೇ, ನಮ್ಮ ಸಮಸ್ಯೆಗಳು ಇಷ್ಟೊಂದು ದೊಡ್ಡದಿದೆಯೇ??
ಸಮಸ್ಯೆಗಳು, ನೋವುಗಳ ಬದುಕಲ್ಲಿ ಸಹಜ. ಆದರೆ ಕೆಲವೊಮ್ಮೆ ನಮ್ಮ ಸಮಸ್ಯೆಗಳಲ್ಲಿ ಎಷ್ಟು ಮುಳುಗಿ ಹೋಗಿರುತ್ತೇವೆಂದರೆ ಬೇರೆಯವರನ್ನ, ಅವರ ಸಮಸ್ಯೆಗಳನ್ನ ನೊಡುವ ಪರಿವೆಗೇ ಹೋಗುವುದಿಲ್ಲ. ಹಾಗಾಗಿಯೇ ನಮಗೆ ನಮ್ಮ ಸಮಸ್ಯೆಗಳೇ ಎಲ್ಲಕ್ಕಿಂತ ದೊಡ್ಡದಾಗಿ ಕಾಣುತ್ತದೆ. ಸಮಸ್ಯೆಗಳಿರದ ಮನುಷ್ಯನೇ ಇಲ್ಲ. ಒಮ್ಮೆ ಉಳಿದವರ ಬದುಕಿನ ಮೇಲೆ ಕಣ್ಣಾಡಿಸಿ ಪ್ರಾಯಶಃ ನಿಮ್ಮ ಸಮಸ್ಯೆಗಳು, ಸಮಸ್ಯೆಗಳೇ ಅಲ್ಲ ಎನಿಸಬಹುದು. ಸಮಸ್ಯೆಗಳು ಎದುರಾದಾಗಲೆಲ್ಲ ಒಮ್ಮೆ ಆ ಮಹಿಳೆಯನ್ನು ನೆನಸಿಕೊಳ್ಳಿ. ಸಮಸ್ಯೆ ಚಿಕ್ಕದೆನಿಸುತ್ತದೆ. ‘ನಾನು’ ಎಂಬ ಭಾವ ಹೆಚ್ಚಾದಾಗೆಲ್ಲ, ಆಕೆಯನ್ನು ಬದುಕಲು ಪ್ರೇರೇಪಿಸಿದ ಶಾನ್’ನನ್ನು ನೆನೆಸಿಕೊಳ್ಳಿ ನಾವಿನ್ನು ಎಷ್ಟು ಚಿಕ್ಕವರು, ಇನ್ನೂ ಎಷ್ಟು ಬೆಳೆಯುವುದಿದೆ ಎಂಬುದರ ಅರಿವಾದೀತು!!
Facebook ಕಾಮೆಂಟ್ಸ್