ಮನೆಯಲ್ಲಿ ಮೂರು ಬೀರುಗಳಿರುವುದರಿಂದ ಯಾರೂ ಆ ಹಳೆಯ ಬೀರುವಿನತ್ತ ಗಮನ ಕೊಟ್ಟಿರಲಿಲ್ಲ.ಅದರಲ್ಲಿ ಭಾರತಿಯ ನೆನಪಿನ ಕಣಜವೇ ತುಂಬಿತ್ತಾದರೂ ಹಳೆಯ ಯಾವ ಡೈರಿಯನ್ನೂ ಓದಲು ಮನಸ್ಸಾಗುತ್ತಿರಲಿಲ್ಲ.ಇಂದೇಕೋ ಓದಬೇಕೆನಿಸಿದರೂ “ಛೇ …..! ಬೇಡ…. ಅದರಲ್ಲಿರುವುದು ನೋವೇ ತಾನೇ..? “ಎನಿಸಿ ಬೇರೆ ಡೈರಿ ತೆಗೆದು ಬರೆಯಲಾರಂಭಿಸಿದಳು.”ಯಾಕೋ ಈ ದಿನ ರವಿ ನನ್ನ ಮನಸ್ಸು ನೋಯಿಸಿಬಿಟ್ಟರು.ಆದರೂ ಅವರು ನನ್ನ ಪಾಲಿನ ದೇವರು…ಹಳೆಯ ದಿನಗಳನ್ನು ಮೆಲುಕು ಹಾಕಿದರೆ ನನ್ನಲ್ಲೊಂದು ಪಶ್ಚಾತ್ತಾಪವಿದೆ….”ಎಂದು ಬರೆದು ಡೈರಿಯನ್ನು ಬೀರುವಿನಲ್ಲಿದ್ದ ಪುಟ್ಟ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿದಳು.ಆದರೂ ತಡೆದರೂ ಕಣ್ಣೀರೊಂದು ಜಾರಿಬಿತ್ತು.ಹತ್ತೊಂಭತ್ತು ವರ್ಷಗಳ ಹಿಂದೆ ತನ್ನ ಬದುಕು ಚಿಂದಿ ಮಾಡಿ ಕಳೆದು ಹೋದ “ಅವನ “ನೆನಪು ಅವಳಿಗೆ ಬಾರದೇ ಇರಲಿಲ್ಲ. ಹತ್ತು ನಿಮಿಷ ಮೌನವಾಗಿ ಕುಳಿತು ಹೊರಗೆದ್ದು ಬಂದು ಮನೆಗೆಲಸದಲ್ಲಿ ತೊಡಗಿದಳು.ರಾತ್ರಿ ರವಿ ಅತ್ತ ತಿರುಗಿ ಮಲಗಿದ ಭಾರತೀಯನ್ನು ತನ್ನತ್ತ ತಿರುಗಿಸಿ “ಇದೊಂದು ಬಾರಿ ಕ್ಷಮಿಸು ಭಾರತಿ..ನಿನ್ನ ಮೌನವನ್ನು ನಾನು ಸಹಿಸಲಾರೆ “ಎಂದು ಅವಲತ್ತುಕೊಂಡಾಗ ತನ್ನ ಬಗ್ಗೆ ತನಗೇ ಕೇಡೆನಿಸಿತು.ಮರುಮಾತನಾಡದೇ ರವಿಯ ಎದೆ ಮೇಲೆ ಮಲಗಿ ಬಿಕ್ಕಿದಳು ಭಾರತಿ.ರವಿ ಭಾರತಿ ಹಣೆಗೊಂದು ಮುತ್ತಿಕ್ಕಿ ತಲೆ ಸವರಿದ. ಬೆಳಗಾದಾಗ ಭಾರತಿ ಲವಲವಿಕೆಯಿಂದ ಇದ್ದದ್ದನ್ನು ಕಂಡು ರವಿ ಮನಸ್ಸಿಗೆ ನೆಮ್ಮದಿಯೆನಿಸಿತು.
ಸೂರ್ಯನನ್ನು ನೋಡಲು ಆಗಾಗ ವಿಭಾ ಶುಭಾ ರವಿ ಆಸ್ಪತ್ರೆಗೆ ಹೋಗುತ್ತಿದ್ದರು.ಆದರೆ ಭಾರತಿ ಮಾತ್ರ ತಾನು ಬರುವುದಿಲ್ಲವೆಂದು ಹೇಳಿದ್ದಳು.ಸೂರ್ಯನ ಬಗ್ಗೆ ಮಮತೆ ಇದ್ದರೂ ಅವಳು ಆ ದಿನ ನಡೆದ ಘಟನೆಯಿಂದ ಭಯಗೊಂಡಿದ್ದಳು.ಇದರಿಂದಲೇ ರವಿ ಅವಳನ್ನು ಆಸ್ಪತ್ರೆಗೆ ಬರಲು ಬಲವಂತಿಸಿರಲಿಲ್ಲ.ಆ ಆಸ್ಪತ್ರೆಯಲ್ಲಿ ದಾದಿಯರು ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರಿಂದ ರವಿಯ ಮನಸ್ಸಿಗೆ ನೆಮ್ಮದಿಯಾಗಿತ್ತು.
ಹೀಗೆ ದಿನಗಳು ಸರಿದಿದ್ದವು..ಸೂರ್ಯ ಕೌನ್ಸಲಿಂಗ್ ನಿಂದ ಸ್ವಲ್ಪ ಸುಧಾರಿದ್ದ.ಆದರೂ ಒಂದೊಂದು ಬಾರಿ ವಂದನಾಳ ನೆನಪು ಬಂದರೆ ಕಿಟಕಿಯತ್ತ ಶೂನ್ಯ ದೃಷ್ಟಿಯಿಂದ ನೋಡುತ್ತ ನಿಂತುಬಿಡುತ್ತಿದ್ದ.ವಿಭಾ ಶುಭಾ ಬಂದರೆ ಸ್ವಲ್ಪ ನಿರಾಳವೆನಿಸುತ್ತಿತ್ತು ಸೂರ್ಯನಿಗೆ. ಆದರೆ ಅದೇಕೋ ಪಕ್ಕದ ಬೆಡ್ ನ ಸುಶಾಂತ್ ಮಾತ್ರ ಅವರಿಬ್ಬರು ಬಂದರೆ ಚಡಪಡಿಸುತ್ತಿದ್ದ. ಆದರೂ ಸೂರ್ಯನಿಗಿಂತಲೂ ಹೆಚ್ಚಾಗಿ ಅವರಿಬ್ಬರ ಬರುವಿಕೆಗಾಗಿ ನಿರೀಕ್ಷಿಸುತ್ತಿದ್ದ.ಅದೇನೋ ಅವರಿಬ್ಬರೂ ನಗುತ್ತ ಸೂರ್ಯನೊಂದಿಗೆ ಹರಟುತ್ತಿದ್ದರೆ “ಆ ನಗು …..ಆ ಕಣ್ಣುಗಳಿಂದ ಅವನ ಹೃದಯದಲ್ಲಿ ಅದೇನೋ ಕೋಲಾಹಲ.”ಅವರಿಬ್ಬರ ಕಣ್ಣುಗಳನ್ನೂ ..ನಗುವನ್ನೂ ….ಅವರಿಬ್ಬರ ಕೆನ್ನೆಯ ಮೇಲಿನ ಕಪ್ಪು ಮಚ್ಚೆಯನ್ನೂ ನೋಡುತ್ತ ಮೈಮರೆಯುತ್ತಿದ್ದ. ಅವರು ಮನೆಗೆ ಹೊರಟರೆಂದರೆ ಸೂರ್ಯನಿಗಿಂತ ಅವನಿಗೇ ಜಾಸ್ತಿ ಸಂಕಟವಾಗುತ್ತಿತ್ತು.ಹೀಗೇ ಅವರು ಹೋದ ನಂತರ ಅವರು ಹೋದ ದಾರಿಯತ್ತ ನೋಡುತ್ತ ನಿಟ್ಟುಸಿರು ಬಿಡುತ್ತಿದ್ದ.ಅವನ ಈ ನಡುವಳಿಕೆ ಅಲ್ಲಿರುವ ದಾದಿಯರಿಗೆ ಸೂರ್ಯನಿಗೆ ವಿಚಿತ್ರವಾಗಿ ಕಂಡರೂ “ಬಿಡು ಯಾರದೋ ನೆನಪಾಗಿರಬೇಕು ಅವನಿಗೆ” ಎಂದುಕೊಂಡು ಸುಮ್ಮನಾಗಿರುತ್ತಿದ್ದರು.
ಹೀಗೇ ಯಾವಾಗಲೂ ಬರುವಂತೆ ಆ ದಿನವೂ ಆಸ್ಪತ್ರೆಗೆ ಚಿಕ್ಕಪ್ಪನನ್ನು ನೋಡಲು ವಿಭಾ ಶುಭಾ ಬಂದಿದ್ದರು.ಆ ದಿನ ಅವರ ಹುಟ್ಟು ಹಬ್ಬವಾಗಿದ್ದರಿಂದ ಇಬ್ಬರೂ ಸೀರೆಯುಟ್ಟಿದ್ದರು.ಅವರ ಚಿಕ್ಕಪ್ಪನಿಗೆ ಸಿಹಿ ತಿನ್ನಿಸಿ ದಾದಿಯರು ,ಪೇಷೆಂಟ್ ಗಳಿಗೆ ಸಿಹಿ ಹಂಚಿದರು.ಆಗಲೇ ಸೂರ್ಯ ಆಸ್ಪತ್ರೆಗೆ ಸೇರಿ ಆರು ತಿಂಗಳಾಗಿದ್ದರಿಂದ ದಾದಿಯರು ಆತ್ಮೀಯರಾಗಿದ್ದರು ಅವರಿಗೆ. ಯಾವಾಗಲೂ ನಗುತ್ತ ಮಾತನಾಡುವ ಈ ಅವಳಿಗಳನ್ನು ಕಂಡರೆ ಅವರಿಗೂ ಇಷ್ಟವೇ.ಹೀಗೆ ಸಿಹಿ ಹಂಚುತ್ತ ಸುಶಾಂತ್ ಬೆಡ್ ಹತ್ತಿರ ಬಂದಾಗ ಅವನು ನೇರವಾಗಿ ತಮ್ಮತ್ತಲೇ ದಿಟ್ಟಿಸಿ ನೋಡುತ್ತಿದ್ದಿದ್ದರಿಂದ ಶುಭಾ ಅವನ ಕೈಗೊಂದು ಸಿಹಿ ಹಾಕಿ ಬೇಗನೇ ಚಿಕ್ಕಪ್ಪನತ್ತ ನಡೆದಳು.ವಿಭಾಗೇಕೋ ಸಂಕಟವೆನಿಸಿತು.ತನ್ನ ಅಪ್ಪನ ವಯಸ್ಸಿನ ಸುಶಾಂತ್ ಗೆ ಕೈಯಾರೆ ಸಿಹಿ ತಿನ್ನಿಸಬೇಕೆನಿಸಿತು ಅವಳಿಗೆ.ತಾನೇ ಕೈಯಾರೆ ಸಿಹಿ ತಿನ್ನಿಸಿದಳು ಸುಶಾಂತ್ ನಿಗೆ.ಅವನ ಕಣ್ಣಿರೊಂದು ಅವಳ ಕೈ ಮೇಲೆ ಜಾರಿ ಬಿತ್ತು.ಅವಳ ಕಣ್ಣುಗಳನ್ನೇ ಅವನು ದಿಟ್ಟಿಸಿತ್ತಿದ್ದ. ವಿಭಾ “ಅಂಕಲ್ ಏನಾದರೂ ಮಾತನಾಡಿ…ಯಾವಾಗಲೂ ನಾನು ಬಂದಾಗ ನನ್ನ ಕಣ್ಣನ್ನೇಕೆ ನೋಡ್ತಿರಾ? ಮತ್ತೆ ನೀವು ಮಾತಾಡಿದ್ದನ್ನೇ ನೋಡಿಲ್ಲ ಇಷ್ಟು ದಿನವಾದರೂ…..ನೀವು ಚಿತ್ರ ಬರೆಯುವಾಗ ಎರಡು ಮೂರು ಬಾರಿ ನೋಡಿದ್ದೇನೆ. ಆ ಕಣ್ಣುಗಳು ನನ್ನ ಕಣ್ಣಿನ ತರಾನೇ ಇವೆ ಅನ್ಸುತ್ತೆ. ಸರಿಯಾಗಿ ನೋಡಬೇಕೆಂದರೆ ನೀವು ಯಾರಾದರೂ ಬಂದರೆ ಚಿತ್ರ ಬಿಡಿಸುವುದನ್ನು ನಿಲ್ಲಿಸಿ ಚಿತ್ರ ಮುಚ್ಚಿಟ್ಟುಬಿಡುತ್ತೀರಾ..ನಿಮಗೆ ನನ್ನ ತರಾ ಮಗಳೇನಾದರೂ ಇದಾಳಾ?…..” ಹೀಗೇ ಒಂದೇ ಉಸಿರಿಗೆ ಕೇಳಿದರೂ ಅವನು ಮಾತ್ರ ಶಾಂತವಾಗಿ ಎತ್ತಲೋ ನೋಡುತ್ತಿದ್ದ. ಅಷ್ಟರಲ್ಲಿ ದಾದಿಯೊಬ್ಬಳು ಬಂದು “ಇವರು ಮಾತ್ರ ಯಾರು ಕೇಳಿದರೂ ಬಾಯಿ ಬಿಡುವುದಿಲ್ಲ ವಿಭಾ….ಪಾಪ ಏನೋ ದೊಡ್ಡ ಆಘಾತವಾಗಿರಬೇಕು ಮನಸ್ಸಿಗೆ ..ಆದರೆ ಒಂದು ದಿನವೂ ಯಾರಿಗೂ ತೊಂದರೆ ಮಾಡಿಲ್ಲ. “ಎಂದಳು..ವಿಭಾ ನಿರಾಶೆಗೊಂಡು ಹೊರನಡೆದಳು.”ಏನೇ ನೀನು ಅವನನ್ನ ಎಷ್ಟು ಕೇಳಿದರೂ ಬಾಯಿ ಬಿಡುವುದಿಲ್ಲ ಎಂದು ಗೊತ್ತಿದ್ದರೂ ಕೇಳ್ತೀಯಾ…ನಿನಗೆ ಬುದ್ದಿ ಇಲ್ಲ “ಎಂದಳು ಶುಭಾ.”ಆಯ್ತು ಬಾರೇ ಇನ್ನು ಮೇಲೆ ಕೇಳಲ್ಲ.”ಅಂತ ವಿಭಾ ಬೇಸರದಿಂದ ನುಡಿದಳು.ಮಾತಾನಾಡುತ್ತಿರವಾಗ ಅಪ್ಪನ ಕಾರು ಬಂದಿದ್ದರಿಂದ ಮಾತು ನಿಲ್ಲಿಸಿ ಕಾರು ಹತ್ತಿದರು.
ಇನ್ನೆರಡು ತಿಂಗಳು ಕಳೆಯುವುದರಲ್ಲಿ ಸೂರ್ಯ ಸ್ವಲ್ಪ ಸುಧಾರಿಸಿದ್ದ. ಅವನು ಅತ್ತಿಗೆಯನ್ನು ನೋಡಿ ಕ್ಷಮೆ ಕೇಳಲು ಬಯಸಿದ್ದ. ಅದನ್ನು ವಿಭಾ ,ಶುಭಾ ,ತನ್ನ ಅಣ್ಣನ ಹತ್ತಿರವೂ ಹೇಳಿದ್ದ.ಆ ದಿನ ಭಾರತಿಯ ಮನವೊಲಿಸಿ ಅವಳನ್ನು ಆಸ್ಪತ್ರೆಗೆ ಕರೆತಂದಿದ್ದ ರವಿ.ಸೂರ್ಯ ನ ಎದುರಿಗೆ ಬರಲು ಅವಳಿಗೆ ಭಯವೆನಿಸಿತ್ತು.ವಿಭಾ ಶುಭಾ ಜೊತೆಯಲ್ಲಿ ಬಂದಿದ್ದರು.ಅವನಿರುವ ವಾರ್ಡ್ ಗೆ ಬಂದಾಗ ಸೂರ್ಯ ಅತ್ತಿಗೆಯ ಮುಖ ನೋಡಿ ತಲೆ ಬಾಗಿಸಿದ. ಪಕ್ಕದ ಬೆಡ್ ನ ಪೇಷೆಂಟ್ ಮುಸುಕು ಹಾಕಿ ಮಲಗಿದ್ದ.ಅವನ ಮುಖ ಕಂಡಿದ್ದರೆ ಆಘಾತವಾಗಿ ಭಾರತಿ ಹುಚ್ಚಿಯಾಗುತ್ತಿದ್ದಳೇನೋ.ಕಾಲುಗಳು ಮಾತ್ರ ಕಾಣುತ್ತಿದ್ದವು.. ಸೂರ್ಯ ಅತ್ತಿಗೆಯ ಕಾಲು ಹಿಡಿದು ಕ್ಷಮೆ ಕೇಳಿದ.ಅವಳ ಪಾದಗಳ ಮೇಲೆ ಅವನ ಕಣ್ಣೀರು ಕಂಡು ಕರಗಿ ಹೋದಳು ಭಾರತಿ.”ನಿನ್ನ ಬಗ್ಗೆ ಬೇಸರವಿಲ್ಲ ಸೂರ್ಯ …ಆದಷ್ಟು ಬೇಗ ಮನೆಗೆ ಬಾ…ನಿನ್ನ ಬರುವಿಕೆಗಾಗಿ ನಾವೆಲ್ಲಾ ಕಾಯುತ್ತಿರುತ್ತೇವೆ…ಅಳಬೇಡ …ಗಂಡಸರು ಅಳಬಾರದು “ಎಂದು ಕಣ್ಣೊರೆಸಿದಳು..”ರವಿಯ ಕಣ್ಣಂಚಿನಲ್ಲಿ ನೀರು ಬಂದಿತ್ತು. ಇದ್ಯಾವುದರ ಪರಿವೆಯೇ ಇಲ್ಲದೇ ಸುಶಾಂತ್ ಮುಸುಕು ಹಾಕಿಕೊಂಡು ಸುಖ ನಿದ್ರೆಯಲ್ಲಿದ್ದ. ವಿಭಾ ಶುಭಾ ಈ ಸನ್ನಿವೇಶದಲ್ಲಿ ಮಾತನಾಡವುದು ಸರಿಯಲ್ಲ ಎಂದು ಸುಮ್ಮನಿದ್ದರು.ಸೂರ್ಯನ ಮುಖದಲ್ಲಿ ಸ್ವಲ್ಪ ಸಮಾಧಾನ ಕಾಣಿಸಿತು ..ಸೂರ್ಯನಿಗೆ ಹೊತ್ತು ಹೊತ್ತಿಗೆ ಔಷಧಿ ತೆಗೆದುಕೊಳ್ಳಲು ತಿಳಿಸಿ ಬಾಗಿಲಿನತ್ತ ನಡೆದರು ರವಿ ಭಾರತಿ,ವಿಭಾ,ಶುಭಾ.ಸೂರ್ಯ ನೀರು ಕುಡಿಯಲು ಬಾಟಲ್ ತೆಗೆದುಕೊಳ್ಳಲು ಹೋಗಿ ಜಾರಿ ನೆಲಕ್ಕೆ ಬಿತ್ತು..ಅದರೊಂದಿಗೆ ಅಲ್ಲಿಟ್ಟಿದ್ದ ಸ್ಟೀಲ್ ಲೋಟ ಕೆಳಗೆ ಬಿದ್ದ ಸಪ್ಪಳಕ್ಕೆ ಸುಶಾಂತ್ ಗೆ ಎಚ್ಚರವಾಯಿತು.ಎದ್ದು ಕಣ್ಣುಜ್ಜಿಕೊಂಡ.ಆಕಳಿಸುತ್ತ ಕಿಟಕಿಯತ್ತ ನಡೆದ. ಕೆಳಗೆ ನಿಂತಿದ್ದ ಮಹಿಳೆಯನ್ನು ನೋಡಿದ ಕೂಡಲೇ ಪೂರ್ತಿ ನಿದ್ದೆ ಹಾರಿ ಹೋದಂತಾಯಿತು..”ಜಾನೂ….!” ಅವನಿಗರಿವಿಲ್ಲದಂತೆ ಬಾಯಿಂದ ಹೊರಬಿದ್ದಿತು ಮಾತು.ಒಂದನೆ ಮಹಡಿಯ ವಾರ್ಡ್ ಆಗಿದ್ದರಿಂದ ಅವಳ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು.”ಜಾನೂ….! ನನ್ನ ಜಾನೂ….!” ಎಂದ ಉದ್ವೇಗದಿಂದ…ಸೂರ್ಯ ಅವನತ್ತ ಆಶ್ಚರ್ಯದಿಂದ ನೋಡುತ್ತಿದ್ದ.ರವಿ ಬರುತ್ತಿದ್ದಂತೆ ಅವಳು ಕಾರನ್ನೇರಿದಳು.ಹಿಂದೆ ವಿಭಾ ಶುಭಾ ಕುಳಿತರು..ಒಂದು ಕ್ಷಣ ಏನಾಯಿತೋ “ಜಾನೂ….! ನನ್ನ ಬಿಟ್ಟು ಹೋಗಬೇಡ ಕಣೇ …ಇಷ್ಟು ವರ್ಷ ನಿನಗಾಗಿ ಜೀವ ಹಿಡಿದುಕೊಂಡಿದ್ದೇನೆ ..ನಾನು ಮೋಸಗಾರನಲ್ಲ ಎಂದು ಹೇಳಲು…..!”ಎನ್ನುತ್ತ ಮೂರ್ಛೆ ಹೋದ ಸುಶಾಂತ್.ಸೂರ್ಯ ಕಿಟಕಿಯ ಹತ್ತಿರ. ಬಂದು ನೋಡಿದ.ಯಾರೂ ಕಾಣಲಿಲ್ಲ .ಅಲ್ಲಿ ಅವನು ಭಾರತಿಯನ್ನು ಕಂಡಿದ್ದರೆ ಮೂರ್ಛೆ ಹೋಗುತ್ತಿದ್ದ.ಅಷ್ಟೊತ್ತಿಗೆ ದಾದಿಯರು ಬಂದು ಅವನನ್ನು ಬೆಡ್ ಮೇಲೆ ತಂದು ಮಲಗಿಸಿದರು. ಡಾಕ್ಟರ್ ಬಂದು ಪರೀಕ್ಷಿಸಿದರು.ಜನಾರ್ಧನನಿಗೆ ಕರೆ ಮಾಡಿ ನಡೆದ ಘಟನೆ ವಿವರಿಸಿದರು.ಅರ್ಧ ಗಂಟೆಯಲ್ಲಿ ಜನಾರ್ಧನ ಆಸ್ಪತ್ರೆಯಲ್ಲಿದ್ದ.ಮಲಗಿದ್ದ ತನ್ನ ಗೆಳೆಯನನ್ನು ಕಂಡು ಅಯ್ಯೋ ಎನಿಸಿತು.ಜನಾರ್ಧನನನ್ನು ಕರೆದು ಡಾಕ್ಟರ್ “ನಿಮ್ಮ ಪ್ರೆಂಡ್ ಜಾನೂ… ಜಾನೂ…ಎಂದು ಜೋರಾಗಿ ಚೀರಿಕೊಂಡು ಮೂರ್ಛೆ ಹೋದರೆಂದು ದಾದಿಯರು ಹೇಳಿದರು…..ನಿಮಗೆ ಆ ಜಾನೂ ಯಾರು ಅಂತ ಗೊತ್ತಾ? ಗೊತ್ತಿದ್ದರೆ ಕರೆದುಕೊಂಡು ಬನ್ನಿ..ಆಗ ಸುಶಾಂತ್ ತನ್ನ ಮನಸ್ಸಿನಲ್ಲಿರುವುದನ್ನು ಹೊರಹಾಕಲು ಸಾಧ್ಯ. “ಎಂದಾಗ ಜನಾರ್ಧನನ ಮೈಯಲ್ಲಿ ಶಾಕ್ ಸರ್ಕ್ಯೂಟ್ ಆದ ಅನುಭವ….”ಜಾನೂ ……! ” “ಅವನು ಹೇಳಿದ ಜಾನೂ ಅವಳಾಗಿರದಿದ್ದರೆ ಸಾಕು ದೇವರೇ…….!” ಎಂದು ಮನಸ್ಸಿನಲ್ಲಿ ಕೈ ಮುಗಿದ. ಡಾಕ್ಟರ್ ಗೆ ಜಾನೂ ಅಂತ ಯಾರೂ ತನಗೆ ಗೊತ್ತಿಲ್ಲವೆಂದು ಹೇಳಿ ಹೊರನಡೆದ.ಸುಶಾಂತ್ ಗೆ ಮತ್ತಿನ ಇಂಜೆಕ್ಷನ್ ಕೊಟ್ಟಿದ್ದರಿಂದ ಅವನು ಗಾಢ ನಿದ್ರೆಯಲ್ಲಿದ್ದ.ಅವನ ತಲೆಯನ್ನೊಮ್ಮೆ ಸವರಿ ಮನೆ ಕಡೆಗೆ ಹೊರಟ ಜನಾರ್ಧನ….
ಮುಂದುವರೆಯುವುದು…..
Facebook ಕಾಮೆಂಟ್ಸ್