X

ಕವಿತೆ

ಓ ಸೂರ್ಯ ದೇವನೇ
ಇಷ್ಟೇಕೆ ಮುನಿಸು
ಒಮ್ಮಿಂದೊಮ್ಮೆಲೇ..
ಬಿಸಿಲ ಧಗೆಗೆ
ಬೆಂದು ಹೋಗುತಿರುವೆವು
ಕೃಪೆ ತೋರು ನಮ್ಮ ಮೇಲೆ..

ಬಾಯಾರಿಸೆ ಹನಿ
ನೀರು ಕುಡಿಯಲಾಗುತ್ತಿಲ್ಲ
ಜೀವಜಲವೇ ಬಿಸಿಯಾಗಿದೆ ..
ಸುಟ್ಟು  ಬೂದಿಯಾಗುವೆವೋ
ಎನ್ನುವ ಭಯವಾಗಿದೆ..

ಬಲಿಯಾಗುತಿವೆ
ಜೀವಗಳು
ನಿನ್ನ ಕೋಪದ ತಾಪ ತಾಳಲಾರದೇ
ಒಂದಿನಿತು ಶಾಂತಭಾವ ತಾಳು
ನಮ್ಮ ನೋಡಿದರೆ ದಯಬಾರದೇ

ಭೂತಾಯಿಯ ಒಡಲು
ಸುಡುತಿದೆ..
ಸುಟ್ಟು  ಬಾಯ್ದೆರೆದಿದೆ
ಓ ರವಿಯೇ ನೀನು
ತುಸು ತಂಪಾಗಬಾರದೇ?

ಮೂಕ ಪ್ರಾಣಿಗಳೂ
ಮೌನವಾಗಿ ರೋದಿಸುತಿವೆ…
ಬಸವಳಿದು ಹೋಗಿವೆ
ತೆರೆದ ಕಣ್ಣುಗಳು
ನಿಸ್ತೇಜವಾಗಿವೆ
ಆಗಸವನ್ನೇ ದಿಟ್ಟಿಸುತ್ತಿವೆ..

ನಿನ್ನ ಕೋಪದ ತಾಪಕೆ
ಕಾರಣವೇ ನಾವಾದರೂ
ಕಾಯುವವನು ನೀನೇ..
ಮೈಮೇಲೆ ಕೆಂಡ
ಉಗುಳಿದಂತಾಗುತಿದೆ
ಶರಣಾಗಿ ಬೇಡುವೆವು
ಶಾಂತವಾಗು ದೇವನೇ ..

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post