ಸುಮ್ನೆ ಒಂದು ಪ್ರಶ್ನೆ. ಸಪ್ಪೋಸ್ ತಮಿಳುನಾಡಿನವರು ಕಾವೇರಿ ನೀರು ಕೊಡಿ ಎಂದು ಕೇಳಿದರೆ ಸೀದಾ ಕೊಡಲು ಮನಸ್ಸು ಒಪ್ಪುತ್ತದಾ? ಪಾಪ, ಅಲ್ಲಿನ ರೈತರಿಗೂ ಕೃಷಿಗೆ, ಕುಡಿಯಲು ನೀರಿಲ್ಲ. ಅವರೂ ಸ್ವಲ್ಪ ನೀರು ಕುಡಿಯಲಿ ಎಂದಾಕ್ಷಣ ನೀರು ಬಿಡಲು ನಿಮ್ಮ ಮನಸ್ಸು ಕೇಳುತ್ತದಾ? ಇಲ್ಲ ಅಲ್ವಾ? ಯಾಕೆ? ತಮಿಳರೂ ಕೂಡಾ ನಮ್ಮಂತೆ ಮನುಷ್ಯರಲ್ವಾ? ನೈಸರ್ಗಿಕವಾಗಿರುವ ದಾರಿಯಲ್ಲೇ ನೀರು ಬಿಡಲು ಒಪ್ಪಲು ಸಾಧ್ಯವಿಲ್ಲವೆಂದಾದರೆ ಪ್ರಕೃತಿಯನ್ನು ವಿಕೃತಿಯ ಮಾರ್ಗದಲ್ಲಿ ವಿರೂಪಗೊಳಿಸಿ ನೀರನ್ನು ಬಿಡಲು ನಮ್ಮ ಮನಸ್ಸು ಒಪ್ಪಬೇಕಾ? ನಮ್ಮ ಅಸ್ಥಿತ್ವವನ್ನೇ ಕಳೆದುಕೊಂಡು ಇನ್ನೊಬ್ಬರನ್ನು ಉಳಿಸುವುದಕ್ಕಾಗಿ ನಾವು ಸಾಯಬೇಕಾ? ಖಂಡಿತಾ ಸಾಧ್ಯವಿಲ್ಲ. ಯಾಕೆಂದರೆ, ಮಂಡ್ಯ, ಮೈಸೂರು, ಬೆಂಗಳೂರಿಗೆ ಕಾವೇರಿ ಹೇಗೋ ನಮಗೂ ನೇತ್ರಾವತಿ ಹಾಗೆಯೇ. ನೇತ್ರಾವತಿ ನಮ್ಮ ಜೀವನದಿ.
ಒಂದು ಕಡೆ ಯೋಜನೆಯ ಕಾಮಗಾರಿಗಳು ಪಶ್ಚಿಮ ಘಟ್ಟವನ್ನು ಕೊಲ್ಲುತ್ತಾ ಎಗ್ಗಿಲ್ಲದೆ ಸಾಗುತ್ತಿದ್ದರೆ, ಇನ್ನೊಂದು ಕಡೆ ನೇತ್ರಾವತಿ ಬರಗಾಲದ ಹೊಡೆತಕ್ಕೆ ತುತ್ತಾಗಿ ಬಾಯ್ದೆರೆದು ಬರಿದಾಗಿ ನಿಂತಿದ್ದಾಳೆ. ಆ ಮೂಲಕ ಎತ್ತಿನ ಹೊಳೆ ಯೋಜನೆಯ ಭವಿಷ್ಯದ ಕರಾಳ ಮುಖವನ್ನು ಈಗಲೇ ಸೂಚ್ಯವಾಗಿ ಸಾರಿ ಹೇಳುತ್ತಿದ್ದಾಳೆ. ಇತ್ತೀಚೆಗಿನ ಇತಿಹಾಸದಲ್ಲಿ ಇದುವರೆಗೂ ಕಂಡು ಕೇಳರಿಯದ ಬರಗಾಲಕ್ಕೆ ದಕ್ಷಿಣ ಕನ್ನಡ ತುತ್ತಾಗಿದೆ. ಇದುವರೆಗೆ ಇಡೀ ರಾಜ್ಯವೇ ಬರಗಾಲಕ್ಕೆ ತುತ್ತಾದಾಗಲೂ ನಮ್ಮಲ್ಲಿ ಯಾವುದೇ ಬರಗಾಲವಿರಲಿಲ್ಲ. ಮಳೆಗೆ ಎಂದೂ ಕೊರತೆಯಿರಲಿಲ್ಲ. ಇಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದು ಅಂತ ಇಲ್ಲವೇ ಇಲ್ಲ. ಆದರೆ ಈ ಭಾರಿ ಮಂಗಳೂರು ನಗರವೂ ಸೇರಿ ಜಿಲ್ಲೆಯ ಹಳ್ಳಿ ಹಳ್ಳಿಗಳೂ ನೀರಿನ ತತ್ವಾರಕ್ಕೆ ಒಳಗಾಗಿದೆ. ಮಂಗಳೂರು ನಗರ ಕುಡಿಯುವ ನೀರಿಗಾಗಿ ಟ್ಯಾಂಕರನ್ನು ಅವಲಂಭಿಸುವಂತಾಗಿದೆ. ಬೋರುವೆಲ್ಲುಗಳು ಪಾತಾಳ ತಲುಪಿದ್ದು ಕೃಷಿಕರು ಆಕಾಶ ನೋಡುವಂತಾಗಿದೆ. ಈವಾಗಲೇ ಹೀಗೆ, ಇನ್ನು ಯೋಜನೆ ಜಾರಿಯಾದರೆ ಹೇಗೆ? ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ.
ಕೆಲ ದುಷ್ಟ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಈ ಯೋಜನೆಯನ್ನು ಜಾರಿಗೊಳಿಸುವುದಕ್ಕಾಗಿ ಕೆಲಸ ಮಾಡಿದರು ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಆ ಯಾವ ರಾಜಕಾರಣಿಗಳಿಗೂ ಯೋಜನೆಯ ಬಗ್ಗೆ ಸ್ಪಷ್ಟತೆ ಇಲ್ಲ. ಯೋಜನೆಯ ಖರ್ಚು ವೆಚ್ಚವೇನು? ಎಷ್ಟು ನೀರನ್ನು ಎತ್ತಬಹುದು? ಅರಣ್ಯ ಸಂಪತ್ತಿನ ಗತಿಯೇನು? ಪಶ್ಚಿಮ ಘಟ್ಟದಲ್ಲಿರುವ ಸಾವಿರಾರು ಜೀವರಾಶಿಗಳ ಗತಿಯೇನು? ಎಂಬುದಕ್ಕೆ ಯಾರ ಬಳಿಯೂ ನಿಖರವಾದ ಮಾಹಿತಿಯಿಲ್ಲ, “ಯೋಜನೆ ಜಾರಿಗೆ ಸರಕಾರ ಬದ್ಧ, ಯೋಜನೆ ಜಾರಿಗೊಳಿಸಿಯೇ ಸಿದ್ಧ” ಎನ್ನುವ ಆಟೋಮ್ಯಾಟಿಕ್ ಉತ್ತರ ಬಿಟ್ಟರೆ.
ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಮಾತ್ರ ಪಂಪ್ ಮಾಡಿ ಬಯಲು ಸೀಮೆಗೆ ಹರಿಸುತ್ತೇವೆ ಎನ್ನುತ್ತಾರೆ. ನನ್ನದೇ ಸಾಮಾನ್ಯ ಜ್ಞಾನದಲ್ಲಿ ಒಂದು ಮಾತನ್ನು ಹೇಳಲಾ? ಹುಟ್ಟಿನಿಂದ ಸಾಯೋವರೆಗೆ ನಮಗೆಲ್ಲವನ್ನೂ ಕೊಡುವ ಈ ಪ್ರಕೃತಿಯಲ್ಲಿ ವ್ಯರ್ಥವಾಗಿ ಹೋಗುವಂತದ್ದು ಏನೂ ಇಲ್ಲ. ಪ್ರಕೃತಿಯಲ್ಲಿ ಏನೇ ನಡೆದರೂ ಅದಕ್ಕೊಂದು ಕಾರಣವಿರುತ್ತದೆ. ಅದಕ್ಕೊಂದು ಸೈಕಲ್ ಅಂತ ಇರುತ್ತದೆ. ಹಾಗೇನೇ, ಬೆಟ್ಟ ಗುಡ್ಡಗಳಲ್ಲಿ ಹುಟ್ಟಿ ಹತ್ತಾರು ಜೀವ ಪ್ರಭೇಧಗಳಿಗೆ, ಸಸ್ಯ ಸಂಕುಲಗಳಿಗೆ ಮತ್ತು ಮನುಷ್ಯರಿಗೆ ಜೀವನಾಧಾರವಾಗುವ ನದಿಗಳು ಕಟ್ಟ ಕಡೆಗೆ ಸಮುದ್ರ ಸೇರುತ್ತದೆ. ಹುಟ್ಟಿದವರು ಸಾಯಲೇ ಬೇಕೆಂಬುದು ಹೇಗೆ ಪ್ರಕೃತಿ ನಿಯಮವೋ ಹಾಗೆಯೇ ಪರ್ವತಗಳಲ್ಲಿ ಹುಟ್ಟಿರುವ ನದಿಗಳು ಸಮುದ್ರ ಸೇರಲೇ ಬೇಕು. ಪ್ರಕೃತಿಯ ಈ ನಿಯಮಗಳನ್ನು ವಿರೂಪಗೊಳಿಸಲು ಹೊರಟರೆ ವಿಕೃತಿಯೇ ಸಂಭವಿಸಿತಷ್ಟೇ ಹೊರತು ಅದರಿಂದ ಖಂಡಿತವಾಗಿಯೂ ಯಾರಿಗೂ ಲಾಭವಿಲ್ಲ.
ಜನರ ಸಮಸ್ಯೆಗಳನ್ನು ಸರಕಾರಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ಜವಾಬ್ದಾರಿಯುಳ್ಳ ಉಸ್ತುವಾರಿ ಮಂತ್ರಿಗಳು “ಈ ಯೋಜನೆಯಿಂದ ನೇತ್ರಾವತಿಗೇನೂ ತೊಂದರೆಯಿಲ್ಲ” ಎನ್ನುತ್ತಾರೆ. ಮತ್ತೊಬ್ಬರು “ನೂರು ಜನ ಶಾಸಕರು ಯೋಜನೆಯ ಪರವಾಗಿರುವಾಗ ನಾವು ಎಂಟು ಜನ ಏನು ಮಾಡಲು ಸಾಧ್ಯ?” ಎಂದು ಕೈಚೆಲ್ಲುತ್ತಾರೆ. ಜಿಲ್ಲೆಗೆ ಜಿಲ್ಲೆಯೇ ಯೋಜನೆಯನ್ನು ವಿರೋಧಿಸುತ್ತಿದ್ದರೂ, ಬಯಲು ಸೀಮೆಯ ಜನ ಪ್ರತಿನಿಧಿಗಳು ಹೇಗೆ ತಮ್ಮ ಜನರ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸುತ್ತಿದ್ದಾರೋ ಹಾಗೆ ದ.ಕ ಜಿಲ್ಲೆಯ ಜನರ ಭಾವನೆಯನ್ನು ಸರಕಾರಕ್ಕೆ ತಲುಪಿಸುವವರು ಒಬ್ಬರೂ ಇಲ್ಲ. ಯೋಜನೆಯ ಪರವಾಗಿ ನೂರು ಜನ ಶಾಸಕರಿದ್ದರೇನಂತೆ? ನಮ್ಮವರು ಪ್ರಯತ್ನಿಸಿದರೆ ಯೋಜನೆಯ ಸಾಧಕ ಬಾಧಕಗಳನ್ನು ಅವರಿಗೆ ಮನವರಿಕೆ ಮಾಡಿ ಕೊಡುವುದು ಕಷ್ಟದ ಕೆಲಸವೇನಲ್ಲ. ಆದರೆ ಯಾವನಾದರೂ ಅಂತಹಾ ಕೆಲಸವನ್ನು ಮಾಡಿದರೇ? ಬತ್ತಿ ಹೋಗಿ ಬೆತ್ತಲಾಗಿ ನಿಂತಿರುವ ನೇತ್ರಾವತಿಯ ವಾಸ್ತವ ಸ್ಥಿತಿಯನ್ನು ಯಾವನಾದರೂ ಬಯಲು ಸೀಮೆಯ ಜನಪ್ರತಿನಿಧಿಗಳಿಗೆ ತೋರಿಸಿಕೊಟ್ಟರೇ?
ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತಿರುವ ಜನ, ದಕ್ಷಿಣ ಕನ್ನಡಕ್ಕೆ ಮಾರಕವಾಗಿರುವ ಎತ್ತಿನ ಹೊಳೆ ಯೋಜನೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ನಾಳೆ ಸ್ವಯಂಪ್ರೇರಿತ ಬಂದ್ ನಡೆಸಲು ನಿರ್ಧರಿಸಿದ್ದಾರೆ.. ಇದೇ ಕಾರಣಕ್ಕೆ ಈಗಾಗಲೇ ಒಂದು ಭಾರಿ ಬಂದ್ ಆಚರಿಸಲಾಗಿದೆ. ರಸ್ತೆ ತಡೆಗಳು ಹಲವಾರು ಭಾರಿ ನಡೆದಿದೆ. ಇನ್ನುಳಿದಂತೆ ನಡೆದ ಪ್ರತಿಭಟನೆಗಳೆಷ್ಟೋ ಆ ದೇವರಿಗೇ ಗೊತ್ತು. ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಬಂದನ್ನು ಬಂದ್ ಮಾಡಬೇಕು ಎನ್ನುತ್ತಿದ್ದವನು ನಾನು. ಆದರೆ ಈಗ ನಾನೆ ಹೇಳುತ್ತಿದ್ದೇನೆ, ಈ ಭಾರಿ ಬಂದ್ ಮಾಡಲೇ ಬೇಕು. ಯಾಕೆ ಗೊತ್ತಾ? ಒಂದೂರಿಗೆ ನೀರನ್ನು ನೀಡುವ ನೆಪದಲ್ಲಿ ಮತ್ತೊಂದೂರಿಗೆ ಮೋಸ ಮಾಡುವುದನ್ನು ತಪ್ಪಿಸುವುದಕ್ಕಾಗಿ, ಕಾರ್ಯಗತಗೊಳ್ಳುವುದು ಅಸಾಧ್ಯವೆಂದು ಗೊತ್ತಿದ್ದರೂ ಮತ ಗಳಿಸುವ ಚೀಪ್ ಉದ್ದೇಶಕ್ಕಾಗಿ ಆ ಊರಿನ ಜನರ ನಂಬಿಕೆಗೆ ದ್ರೋಹವೆಸಗುವುದನ್ನು ತಪ್ಪಿಸುವುದಕ್ಕಾಗಿ, ಯೋಜನೆಯ ಹೆಸರಿನಲ್ಲಿ ನಡೆಯುವ ಕಾಡುಗಳ ಮಾರಣ ಹೋಮವನ್ನು ತಪ್ಪಿಸುವುದಕ್ಕಾಗಿ ಮತ್ತು ಸಾವಿರಾರು ಜೀವ ಸಂಕುಲಗಳನ್ನು ಅಳಿವಿನಂಚಿಗೆ ತಲುಪುವುದರಿಂದ ಕಾಪಾಡುವುದಕ್ಕಾಗಿ. ಈಗಾಗಲೇ ನೀರಿಲ್ಲದೆ ಪರಿತಪಿಸುತ್ತಿರುವ, ನೇತ್ರಾವತಿಯನ್ನೇ ತನ್ನ ಉಸಿರಿನಿಂದಿಗೆ ಬೆಸೆದುಕೊಂಡಿರುವ ಮಂಗಳೂರಿನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಬಂದ್ ಮಾಡಲೇ ಬೇಕಾಗಿದೆ.
ಇದಕ್ಕಿಂತಲೂ ಮುಖ್ಯವಾದ ಕಾರಣ ಮತ್ತೊಂದಿದೆ. ಯೋಜನೆಯನ್ನು ವಿರೋಧಿಸಿ ಅದೆಷ್ಟು ಹೋರಾಟಗಳು ಜಿಲ್ಲೆಯಲ್ಲಿ ನಡೆದಿದ್ದರೂ ಯೋಜನೆಯ ಅನುಷ್ಟಾನಕ್ಕೆ ಶತಾಯ ಗತಾಯ ಪ್ರಯತ್ನಿಸುತ್ತಿರುವ ಸರಕಾರ ನಮ್ಮ ಭಾವನೆಗೆ ಕನಿಷ್ಟ ಸ್ಪಂದನೆಯನ್ನೂ ನೀಡಿಲ್ಲ. ಯೋಜನೆಯ ಸಾಧಕ ಬಾಧಕದ ಕುರಿತು ಜನರ ಜೊತೆಗೊಂದು ಸಂವಾದವನ್ನು ಮಾಡಿ ಜನರಿಗೆ ತಿಳುವಳಿಕೆ ಮಾಡುವಂತಹ ಸಣ್ಣ ಕೆಲಸವನ್ನೂ ನಮ್ಮ ಸರಕಾರ ಮಾಡಿಲ್ಲ. ಯೋಜನೆಯಿಂದ ಪರಿಸರಕ್ಕಾಗುವ ಹಾನಿಯೇನು? ಜೀವ ಸಂಕುಲಗಳಿಗಾಗುವ ಹಾನಿಯೇನು? ವಾಸ್ತವದಲ್ಲಿ ಎಷ್ಟು ನೀರನ್ನೆತ್ತಬಹುದು? ಎಂಬುದರ ಬಗ್ಗೆ ವಿವರವಾದ ಅಧ್ಯಯನ ವರದಿ ಮಾಡುತ್ತೇವೆಂದು ಕಳೆದ ಭಾರಿ ಹೋರಾಟಗಳು ನಡೆದಿದ್ದಾಗ ನಮ್ಮ ಬಾಯಿ ಮುಚ್ಚಿಸಿದ್ದ ಸರಕಾರ ಇದುವರೆಗೂ ಆ ಕೆಲಸಕ್ಕೆ ಕೈ ಹಾಕಿಲ್ಲ, ಆದರೆ ಯೋಜನೆಯ ಕಾಮಗಾರಿಗಳು ಮಾತ್ರ ಎಗ್ಗಿಲ್ಲದೆ ಮುಂದುವರಿದೆ. ಸರಕಾರ ನಮಗೆ ಮೋಸ ಮಾಡುತ್ತಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ. ಹೀಗಾಗಿ, ಒಂದಿಡೀ ಜಿಲ್ಲೆಯ ಜನರ ಸ್ವಾಭೀಮಾನವನ್ನು ಕೆಣಕುತ್ತಿರುವ ಸರಕಾರದ ಕೊಬ್ಬು ಮುರಿಯುವುದಕ್ಕಾದರೂ ಈ ಭಾರಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬಂದ್ ಆಗಲೇ ಬೇಕು.
Facebook ಕಾಮೆಂಟ್ಸ್