X

ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ..

ಹೂವಲ್ಲೂ ಗಂಡು ಹೂ ಮತ್ತು ಹೆಣ್ಣು ಹೂವಿರುವುದು ಸಾಮಾನ್ಯ ಜ್ಞಾನವಲ್ಲ. ಬಹುಶಃ ವಿಜ್ಞಾನದ ಕಲಿಕೆಯಲಿ ತೊಡಗಿರುವವರಿಗೆ ಗೊತ್ತಿರಬಹುದಾದರೂ, ಕವಿ ಕಲ್ಪನೆಯ ಮೂಸೆಯಲ್ಲಿ ಹೂವೆಂದರೆ ಹೆಣ್ಣಿನ ರೂಪವೆ ಕಣ್ಮುಂದೆ ಬಂದು ನಿಲ್ಲುತ್ತದೆ. ಕವಿಯತ್ರಿಗಳೂ ಸಹ ಹೆಚ್ಚು ಕಡಿಮೆ ಇದೆ ಅರಿವಿನ ಮೂಸೆಯಲ್ಲೆ ಕಾವ್ಯ ಹೊಸೆಯುವಂತೆ ಭಾಸವಾಗುತ್ತದೆ. ಈ ಗುಂಪಿನಲ್ಲಿ ಬಹುತೇಕ ಹೂವೆಂದರೆ ಹೆಣ್ಣಿನ ಪ್ರತೀಕವಾಗಿಬಿಡುತ್ತದೆ, ಗಂಡಿನ ಪ್ರತೀಕವಾಗಿ ಹಿಡಿಶಾಪ ಹಾಕಿಸಿಕೊಳ್ಳುವ ಬಡಪಾಯಿ ಪಾಪಾ ದುಂಬಿ!
ಈ ಜೋಡಿ ಕವನಗಳಲ್ಲಿ ಮೊದಲನೆಯದು’ಹೂವಲ್ಲೂ ಹೆಣ್ಣು ಗಂಡಿದೆ, ಗೊತ್ತಾ?’ ಈ ವಿಸ್ಮಯವನ್ನು ಬಿಟ್ಟಗಣ್ಣಿಂದ ನೋಡುತ್ತಾ, ನಮ್ಮ ಅರ್ಧನಾರೀಶ್ವರನಂತೆ ಒಂದೆ ಹೂವಿನೊಳಗೆ ಗಂಡು ಭಾಗ ಮತ್ತು ಹೆಣ್ಣು ಭಾಗ ಎರಡೂ ಇರುವ ವಿಚಿತ್ರವನ್ನು ಎತ್ತಿ ತೋರಿಸುತ್ತದೆ. ತಂತಾನೆ ಪರಾಗ ಸ್ಪರ್ಶ ಮಾಡಿಕೊಂಡು , ತಾನೆ ಸಂತತಿಯ ಸೃಷ್ಟಿಸುವ ಹರಿಕಾರನಾಗುವ ಹೂವಿಗೆ ಮತ್ತೊಂದು ಲಿಂಗವನ್ಹುಡುಕುವ ಪ್ರಮೇಯವೆ ಇಲ್ಲದೆ ಎಲ್ಲಾ ಕೂತಲ್ಲೆ ನಡೆಯುವ ಸರಾಗ ಬಂಧ, ಮತ್ತದರ ವರ್ಣನೆ ಈ ಪದ್ಯ.

ಎರಡನೆ ಕವನ ‘ಹೂವೊಳಗಿನ ಪುಲ್ಲಿಂಗ, ಸ್ತ್ರೀಲಿಂಗ’ಇರುವ ವೈಚಿತ್ರದ ಕುರಿತೆ ಚಿತ್ರಿಸಿದರೂ, ಇಲ್ಲಿ ಒಂದೆ ಮರದಲಿರುವ ಪುಲ್ಲಿಂಗ, ಸ್ತ್ರೀಲಿಂಗಗದ ಹೂಗಳು,ಒಂದೆ ಕೊಂಬೆಯಲ್ಲಿರುವ ಸಜಾತಿಯ ಯಾ ವಿಜಾತಿಯ ಗುಂಪುಗಳು ಅಥವಾ ಒಂದೆ ಬಳ್ಳಿಯಲ್ಲಿರುವ ಗಂಡು ಮತ್ತು ಹೆಣ್ಣು ಹೂಗಳ ಚಿತ್ರಣ; ಆದರೆ ಒಂದೆ ಹೂವಿನೊಳಗಿರುವ ಅರ್ಧನಾರೀಶ್ವರ ಹೂ ಮಾತ್ರ ಈ ಗುಂಪಲಿ ಬೆರೆಯುವುದಿಲ್ಲ. ಅದು ಮೊದಲ ಪದ್ಯದಲ್ಲಿ ಮಾತ್ರ ನಿರೂಪಿತ.

ಹೂವಲ್ಲೂ ಹೆಣ್ಣು ಗಂಡಿದೆ ಗೊತ್ತ?

ಅಕ್ಕ ನಿನಗೊಂದು ವಿಷಯ ಗೊತ್ತ
ಹೂವಲ್ಲೂ ಗಂಡು ಹೆಣ್ಣಿರುವ ಸತ್ಯ ?
ಒಂದೆ ಗಿಡದಲ್ಲೆ ಎರಡಿರುವ ದೃಶ್ಯ..
ಒಂದೆ ಹೂವಲ್ಲೆ ಇಬ್ಬರಿರೊ ಲಾಸ್ಯ ?||

ಅಚ್ಚರಿ ಪೆಚ್ಚು ಕುರಿ ಏಕೇಳು ಕಣ್ಣುರಿ ?
ಸೃಷ್ಟಿ ವೈಚಿತ್ರ ಎಷ್ಟೊ ಜಾಣ ಮರಿ
ಹೂವೆಂದರೆ ಹೆಣ್ಣೆನ್ನೆ ಅದರ ತಪ್ಪಲ್ಲ
ಗಂಡುವ್ವ ಗಮನಿಸದ ಬೆಪ್ಪೆ ನಾವೆಲ್ಲ ||

ಹೆಣ್ಣ ರೂಪವನಕ್ಕ ಹೂವಾಗಿಸಿ ನಕ್ಕ
ಕವಿ ಸಾರ್ವಭೌಮನೇನಲ್ಲ ಸರಿ ಪಕ್ಕ
ಗಂಡ್ಹೂವ್ವ ನೋಡಿದ ಕವಿಯತ್ರಿ ದಕ್ಕ
ಕವಿಯ ನಡುವೆ ಕವಿಯತ್ರಿಗೆ ಚೊಕ್ಕ ||

ಅರ್ಧನಾರಿಶ್ವರನಕ್ಕ ಹಂಚಿ ತನು ತಕ್ಕ
ನಡೆಸಿ ಸುಖ ಸಂಸಾರ ಸಂತತಿ ದಕ್ಕ
ಸಂಯೋಗ ಪರಾಗ ಸ್ವಕೀಯ ಸ್ಪರ್ಶ
ತನ್ನೊಡಲಲೆ ತನ್ನ ರೇಣು ಗರ್ಭ ಹರ್ಷ ||

ಪ್ರೀತಿ ಅಪರಿಮಿತವೆನ್ನಿ ಅಸಂಕರವೆನ್ನಿ
ತನ್ನ ಪಾಡಿಗೆ ತಾನೆ ವಂಶೋತ್ಪತ್ತಿ ದನಿ
ಒಂದಾಗಿ ಬೆರೆತ ಜೀವಗಳುದಾಹರಣೆ
ಬೇರೆಲ್ಲಿ ಸಿಕ್ಕೀತು ಗಂಢಭೇರುಂಡ ಕಣೆ ||

-ನಾಗೇಶ ಮೈಸೂರು

ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ

ಅಕ್ಕ ಈ ಗಿಡ ಬರಿ ಗಂಡು, ಬರಿ ಹೆಣ್ಣು
ಆದರು ನೋಡ್ಹೇಗೆ ಒಂದೆ ಬಳ್ಳಿ ಗಿಣ್ಣು
ಒಂದೆ ತಾಯ್ಬಳ್ಳಿ ತಾಳಿ ಕಟ್ಟಿದ ಬಂಧ
ಇದು ಕೂಡ ಸ್ವಕೀಯ-ಸ್ಪರ್ಶ ಸಂಬಂಧ ||

ಇಲ್ಲು ಮರೆತುಬಿಡಕ್ಕ ಸಹಜಾತ ಸಖ್ಯ
ವಂಶ ಪರಂಪರೆ ಮುಂದುವರಿಕೆ ಮುಖ್ಯ
ಗಾಳಿ ಚಿಟ್ಟೆ ದುಂಬಿ ಪತಂಗ ಸಂವಾಹಕ
ಜೋಡಿಸಿಟ್ಟಿಹನ್ಹೀಗೆ ಜಗಕೆ ನಿರ್ಮಾಪಕ ||

ಅಲ್ನೋಡು ನಮ್ಮಂತೆ ಬೇರೆ ಗಿಡದ್ಹೂವು
ಗಂಡಲ್ಲಿ ಹೆಣ್ಣಲ್ಲಿ ಚೆಲ್ಲಾಡೀ ಚದುರಿದವು
ಗಾಳಿ ನೀರಿಂದ್ಹಿಡಿದು ಚಿಟ್ಟೆ ಜುಟ್ಟಾಡಿಸಿ
ಬೆಳೆಸೆ ವಂಶವಾಹಿ ವೈವಿಧ್ಯ ಚೌಕಾಸಿ ||

ಅಕ್ಕ ವಿಚಿತ್ರ ನೋಡು ಸಂತತಿ ಕಾವು
ಈ ಗಿಡದ ತುಂಬೇಕೆ ಬರಿ ಗಂಡು ಹೂವು
ಅಲ್ಲೊಂದಿಲ್ಲೊಂದರಂತೆ ಅರಳಿದ ಹೆಣ್ಣು
ಮಿಕ್ಕೆಲ್ಲ ಕೊಂಬೆ ಗೊಂಚಲು ಗಂಡ ಕಣ್ಣು ||

ಕೆಲ ಎಲೆಗಳೇ ಹೂವಾಗುವ ವಿಸ್ಮ್ಮಯ
ಬಣ್ಣಗಳೆ ಬದುಕಾಗುವ ಜೀವನ ಮಾಯ
ಹೆಣ್ಣು ಹೂವಷ್ಟೆ ಸಂತಾನ ಭಾಗ್ಯ ನಿಸರ್ಗ
ಮತ್ತೆಲ್ಲಾಕರ್ಷಣೆ ಹಿಡಿದಿಡಿಸೆ ಸಂಸರ್ಗ ||

-ನಾಗೇಶ ಮೈಸೂರು

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post