ಮಿ. ರಂಗನಾಥ್ …
“ಪ್ರೀತಿಯ ರಂಗನಾಥ್ ಎಂದು ಸಂಭೋದಿಸಬೇಕೆಂದು ಅಂದುಕೊಂಡಿದ್ದೆ. ಯಾಕೋ ಮನಸ್ಸು ಬರುತ್ತಿಲ್ಲ. ಯಾಕಂದ್ರೆ ಅಂತಹಾ ಪ್ರೀತಿ ನನಗ್ಯಾವತ್ತೂ ನಿಮ್ಮ ಮೇಲೆ ಬಂದಿರಲಿಲ್ಲ. ಬರುವಂತಹ ಕೆಲಸವನ್ನೂ ನೀವು ಮಾಡಿಲ್ಲ. ಪ್ರೀತಿ, ಗೌರವವನ್ನು ಪಡೆದುಕೊಳ್ಳುವ ಯಾವ ಯೋಗ್ಯತೆಯನ್ನೂ ನೀವು ಉಳಿಸಿಕೊಂಡಿಲ್ಲ. ಬಿಡಿ, ಪಬ್ಲಿಕ್ ಟಿವಿಯ ಹೆಡ್ ಎನ್ನುವ ಕಾರಣಕ್ಕಾಗಿ ನಿಮ್ಮೊಂದಿಗೆ ನೇರವಾಗಿ ವಿಷಯಕ್ಕೆ ಬರುತ್ತೇನೆ..
ರಂಗನಾಥ್, ರಾಘವೇಶ್ವರ ಶ್ರೀಗಳ ಮೇಲೆ ಏನೆಲ್ಲಾ ಕೇಸ್ ಆಯ್ತು? ಆ ಕೇಸಿನ ಕಥೆ ಏನಾಯ್ತು? ಎಂಬುದು ಸಂತ್ರಸ್ತೆಗಿಂತಲೂ ನಿಮಗೇ ಚೆನ್ನಾಗಿ ಗೊತ್ತಿರುತ್ತದೆ. ಕೇಸಿನ ವಿಚಾರದಲ್ಲಿ ನಿಮ್ಮ ಪಬ್ಲಿಕ್ ಟಿವಿ ಯಾವ ರೀತಿ ಲಜ್ಜೆಗೆಟ್ಟ ವರ್ತನೆ ತೋರಿತ್ತು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ನಾನು ರಾಘವೇಶ್ವರ ಶ್ರೀಗಳ ಶಿಷ್ಯ ಅಂತ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. (ಅಂದ ಮಾತ್ರಕ್ಕೆ, ಶ್ರೀಗಳೇ ನನ್ನನ್ನು ಛೂ ಬಿಟ್ಟಿದ್ದು ಅಂತ ಹೇಳಬೇಡಿ). ಆದರೂ ಒಬ್ಬ ನ್ಯೂಟ್ರಲ್ ವ್ಯಕ್ತಿಯಾಗಿ ನಿಮ್ಮ ಬಳಿ ಮಾತನಾಡುತ್ತೇನೆ ಕೇಳಿ.
ರಂಗನಾಥ್, ಒಂದು ಸಲ ಹಿಂತಿರುಗಿ ನೋಡಿ. ಶ್ರೀಗಳ ಮೇಲೆ ಆರೋಪ ಬಂದಾಗಿನಿಂದ ಹಿಡಿದು ಇವತ್ತಿನವರೆಗೂ ನಿಮ್ಮ ಟಿವಿಯಲ್ಲಿ ಅದೆಷ್ಟು ಮಾನಹಾನಿಕರ ವರದಿಗಳನ್ನು ಪ್ರಕಟಿಸಿದ್ದಿರಿ? ಅತ್ಯಾಚಾರ ಮಾಡಿದ್ದಾರೆ ಎನ್ನುವ ಆರೋಪ ಬಂದ ಮಾತ್ರಕ್ಕೆ ಶ್ರೀಗಳನ್ನು ಬೇಕಾಬಿಟ್ಟಿ ವ್ಯಂಗ್ಯವಾಡಿ ಕಾರ್ಯಕ್ರಮಗಳನ್ನು ಬಿತ್ತರಿಸಿದ್ದಿರಲ್ಲವೇ? ಈಗ “ಶ್ರೀಗಳ ಮೇಲಿನ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಅವರು ನಿರ್ದೋಷಿ” ಅಂತ ಕೋರ್ಟ್ ಹೇಳಿದೆ. ಹೈಕೋರ್ಟ್ ಅಲ್ಲ ಸುಪ್ರೀಂ ಕೋರ್ಟ್’ಗೆ ಹೋದರೂ ಈ ಸತ್ಯ ಸತ್ಯವಾಗಿಯೇ ಇರಲಿದೆ. ಹಿಂದೆ ಮಾನಹಾನಿ ಮಾಡಿದ್ದಕ್ಕೆ ಕ್ಷಮೆ ಕೇಳುವುದು ಬೇಡ, ಹಾಳಾಗಿ ಹೋಗಲಿ. ಆದರೆ ಆವತ್ತು ಸಂತ್ರಸ್ತೆಯ ಮೊಸಳೆ ಕಣ್ಣೀರನ್ನು ತೋರಿಸುವಾಗ ತೋರಿಸಿದ ಉತ್ಸಾಹವನ್ನು ಈಗ ಸತ್ಯವನ್ನು ಜನರಿಗೆ ತಿಳಿಸುವಲ್ಲೂ ತೋರಿಸಿ.
ಅದು ಬಿಟ್ಟು ನೀವು ಮಾಡುತ್ತಿರುವುದೇನು? ಆವತ್ತು ಶ್ರೀಗಳ ಕುರಿತಾಗಿ ಹೀನಾಮಾನವಾಗಿ ಮಾತನಾಡಿ ಇವತ್ತು ಅದ್ಯಾವ ಮುಖವಿಟ್ಟುಕೊಂಡು ಶ್ರೀಗಳ ಸಂದರ್ಶನ ಮಾಡ ಬಂದಿರಿ? ಮಠದೊಳಗೆ ಕ್ಷುಲ್ಲಕ ಜಗಳ ತೆಗೆದು ಅದನ್ನೇ ಭಾರೀ ದಾಂಧಲೆ, ಖಾವಿ ರೌಡಿಸಂ ಎನ್ನುತ್ತಾ ಮತ್ತೊಂದು ಕಾರ್ಯಕ್ರಮ ಮಾಡಿದಿರಲ್ಲ? ನಿಮಗೆ ನಾಚಿಕೆಯ ಲವಲೇಶವೂ ಇಲ್ಲವೇ? ಇರಲಿ, ಮಠದಲ್ಲಿರುವ ಭಕ್ತರೇ ನಿಮ್ಮ ವರದಿಗಾರರ ಮೇಲೆ ಮುಗಿಬಿದ್ದರು ಎಂದಿಟ್ಟುಕೊಳ್ಳೋಣ. ಆದರೆ ಅವರ ಆಕ್ರೋಶಕ್ಕೆ ಕಾರಣರಾದವರು ಯಾರು? ಸಮಾಜಕ್ಕೆ ಮೂರು ಕಾಸಿನ ಉಪಯೋಗವಿಲ್ಲದ ಪಬ್ಲಿಕ್ ಟಿವಿ ತಾನೇ? ಆವತ್ತು ಸಿಕ್ಕಿದ್ದು ಛಾನ್ಸ್ ಅಂತ ರಣಹದ್ದಿನಂತೆ ಕುಕ್ಕಿ ಕುಕ್ಕಿ ತಿಂದು ಮಾನಹರಣ ಮಾಡಿದ್ದಕ್ಕಾಗಿಯೇ ತಾನೇ ನಿಮ್ಮ ಚಾನೆಲಿನ ವರದಿಗಾರರ ಮೇಲೆ ಆಕ್ರೋಶ ಸ್ಪೋಟವಾಗಿದ್ದು? ಟಿ.ಆರ್.ಪಿಗಾಗಿ ಇತರೆಲ್ಲಾ ವಾಹಿನಿಗಿಂತಲೂ ಹೆಚ್ಚಿನ ಮುತುವರ್ಜಿ ವಹಿಸಿ ಶ್ರೀಗಳ ತೇಜೋವಧೆ ಮಾಡಿದ್ದಕ್ಕಾಗಿಯೇ ತಾನೆ ಮಠದೊಳಗಿದ್ದ ಭಕ್ತರು ನಿಮ್ಮ ವರದಿಗಾರರನ್ನು ನೋಡುತ್ತಲೇ ಕೆರಳಿ ಕೆಂಡವಾಗಿದ್ದು? ಬಿ ಟಿವಿ, ಟಿವಿ೯, ಪ್ರಜಾ ಟಿವಿ, ಈಟಿವಿಯವರೂ ಮೊನ್ನೆಯಿಂದ ಮಠಕ್ಕೆ ಬರುತ್ತಿದ್ದಾರೆ, ಅವರಾರಿಗೂ ಎದುರಾಗದ ಆಕ್ರೋಶ ಬರೀ ನಿಮ್ಮ ಪಬ್ಲಿಕ್ ಟಿವಿಗೆ ಮಾತ್ರ ಎದುರಾಗಿದ್ದು ಯಾಕೆ? ಸ್ವಲ್ಪ ಹಿಂದಿನದ್ದೆಲ್ಲಾ ನೆನಪಿಸಿಕೊಳ್ಳಿ ರಂಗನಾಥ್, ತಮ್ಮ ನಂಬಿಕೆಗೆ, ಭಾವನೆಗೆ ನೀವು ಮೋಸ ಮಾಡಿದ್ದಿರಿ, ಅನ್ಯಾಯ ಮಾಡಿದ್ದೀರಿ ಎನ್ನುವುದೇ ಆ ಆಕ್ರೋಶಕ್ಕೆ ಕಾರಣವೇ ಹೊರತು ಸಂತ್ರಸ್ತೆಯ ಮೊಸಳೆ ಕಣ್ಣೀರನ್ನು ಬಂಡವಾಳವನ್ನಾಗಿಟ್ಟುಕೊಂಡು ಇಂಟರ್’ವ್ಯೂ ಮಾಡಿದ್ದೀರಿ ಎನ್ನುವುದಲ್ಲ ಅವರ ಕೋಪಕ್ಕೆ ಕಾರಣ. ನಿಮ್ಮ ವರದಿಗಾರರು ಹೇಳ್ತಾರೆ, “ಅತ್ಯಾಚಾರಕ್ಕೊಳಗಾದ ಮಹಿಳೆಗೆ ತನ್ನ ಅಳಲನ್ನು ತೋಡಿಕೊಳ್ಳಲು ನಾವೊಂದು ವೇದಿಕೆ ಒದಗಿಸಿದ್ದು, ಅದರಲ್ಲೇನು ತಪ್ಪು?”. ತಪ್ಪೇನೂ ಇಲ್ಲ, ಆದರೆ ನಮ್ಮ ರಾಜ್ಯದಲ್ಲಿ ಅದೆಷ್ಟೋ ಮಹಿಳೆಯರ ಅತ್ಯಾಚಾರವಾಗಿದೆ, ಇಂದಿಗೂ ಆಗುತ್ತಿದೆ. ಅದೆಷ್ಟು ಜನರನ್ನು ಸ್ಟುಡಿಯೋಕ್ಕೆ ಕರೆದು ಅವರ ಇಂಟರ್’ವ್ಯೂ ಪಡೆದಿದ್ದೀರಿ? ಅದೆಷ್ಟು ಜನ ಸಂತ್ರಸ್ತೆಯರ ಬಾಯಲ್ಲಿ ಹಾಡನ್ನು ಹಾಡಿಸಿದ್ದೀರಿ? ಟಿ.ಆರ್.ಪಿ ತಂದು ಕೊಡುವ ಹೈ.ಫೈ ಕೇಸಾದರೆ ಮಾತ್ರ ನೀವು ಇಂಟರ್ ವ್ಯೂ ಮಾಡೋದಾ?
ನಿಮ್ಮ ಖಾವಿ ರೌಡಿಸಂ ಪ್ರೋಗ್ರಾಂನಲ್ಲಿ ಅರುಣ್ ಬಡಿಗೇರ್ ಎನ್ನವ ಆಂಕರ್ ಒಬ್ಬರು ಪದೇ ಪದೇ ಹೇಳ್ತಾಯಿದ್ರು, “ಭಕ್ತರು ಗೂಂಡಾಗಿರಿ ಮಾಡಿದ್ರು, ಇದುವಾ ನಿಮ್ಮ ಮಠ ಹೇಳ್ಕೊಟ್ಟಿರೋದು?” ಅಂತ. ಅಲ್ಲೂ ಮಠದ ಮಾನಹಾನಿಗೆ ಪ್ರಯತ್ನಿಸಿದ್ದೀರಲ್ಲಾ? ನನಗಿನ್ನೂ ನೆನಪಿದೆ ಸರ್. ಈಚೆಗೆ ಆರು ತಿಂಗಳ ಹಿಂದೆ ಇದೇ ಆಂಕರ್ ತಿಳಿಗೇಡಿ ಭಗವಾನನ ಅಸಂಬದ್ಧ ಪ್ರಲಾಪಗಳ ಕುರಿತಾಗಿ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದರು. ಬಳಿಕ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ “ಯಾಕ್ರಿ ನಿನ್ನೆಯಿಂದ ಆ ಹೇಡಿಯ ಬಗ್ಗೆ ಹಾಕ್ತಾ ಇದ್ದೀರಾ, ಬೇರೆ ಕೆಲ್ಸ ಇಲ್ವಾ” ಅಂತ ನಿಮ್ಮದೇ ಪಬ್ಲಿಕ್ ಟಿವಿಯ ವೀಕ್ಷಕರೊಬ್ಬರು ಕೇಳಿದ್ದರು. ಅದಕ್ಕೆ ಈ ಆಂಕರ್ “ನಿಮಗೆ ಬೇರೆ ಕೆಲ್ಸ ಇಲ್ವಾ? ಟಿ.ವಿ ಯಾಕ್ ನೋಡ್ತೀರಾ? ನಮ್ಮ ಚಾನಲನ್ನೇ ನೋಡಿ ಅಂತ ನಾವೇನ್ ನಿಮ್ಗೆ ಹೇಳಿದ್ವಾ? ” ಅಂತ ಉತ್ತರಿಸಿ ಕರೆ ಕಟ್ ಮಾಡಿದ್ದರು.(ವಿಡಿಯೋ ಫೂಟೇಜ್ ನನ್ನ ಬಳಿ ಇಲ್ಲ, ಇದ್ದರೆ ನಿಮ್ಮ ಬಳಿಯೇ ಇರಬೇಕು). ಒಬ್ಬ ಜವಾಬ್ದಾರಿಯುತ ಮಾಧ್ಯಮದ ಪ್ರತಿನಿಧಿಯಾಗಿ ವೀಕ್ಷಕನಿಗೆ ಆ ಥರಾ ಅಗೌರವ ತೋರಿದ್ದು ಸರಿಯಾ? ಲೈವ್ ಫೋನ್ ಇನ್’ನಲ್ಲಿಯೇ ಅಥರಾ ಮಾತನಾಡಿದ ಆಂಕರ್ ಮಠದಲ್ಲಿ ಇನ್ಯಾವ ರೀತಿ ಮಾತನಾಡಿರಬೇಡ? ಇದೇನಾ ನೀವು ನಿಮ್ಮ ಆಂಕರ್’ಗೆ ಹೇಳ್ಕೊಟ್ಟಿರೋದು?
ಅಷ್ಟು ಮಾತ್ರವಲ್ಲದೆ, ಆ ಆಂಕರ್ ಮಹಾಶಯ ಮತ್ತೊಂದು ಮಾತು ಹೇಳುತ್ತಾರೆ, “ನಾನು ರಾಜ್ಯದಲ್ಲಿರುವ ಸಾವಿರಾರು ಮಠಕ್ಕೆ ಹೋಗಿದ್ದೇನೆ, ಯಾವ ಭಕ್ತರೂ ಸಹ ಇಂತಹ ಗೂಂಡಾ ವರ್ತನೆ ತೋರಿಲ್ಲ” ಅಂತ. ರಾಮಚಂದ್ರಾಪುರ ಮಠವನ್ನು ಬಿಟ್ಟು ಬೇರೆ ಯಾವುದಾದರೂ ಮಠವನ್ನು ನೀವು ಇಷ್ಟು ಟಾರ್ಗೆಟ್ ಮಾಡಿದ್ದೀರಾ? ನಿರಂತರವಾಗಿ ತೇಜೋವಧೆ ಮಾಡಿದ್ದೀರಾ? ರಾಘವೇಶ್ವರ ಶ್ರೀಗಳನ್ನು ಬಿಟ್ಟು ಬೇರೆ ಯಾವುದಾದರೂ ಮಠಾಧಿಪತಿಗಳ ಕುರಿತಾಗಿ ಸುಳ್ಳು ಸುಳ್ಳು ಅವಮಾನಕಾರಿ ವರದಿಗಳನ್ನು ಬಿತ್ತರಿಸಿದ್ದೀರಾ? ಇಲ್ಲಾ ಅಂದರೆ ಒಮ್ಮೆ ಟ್ರೈ ಮಾಡಿ ನೋಡಿ. ಯಾವ ಮಠದ ಭಕ್ತರು ಯಾವ ರೀತಿ ವರ್ತಿಸುತ್ತಾರೆ ಎಂಬುದು ನಿಮಗೆ ಸ್ಪಷ್ಟವಾಗಿ ಗೊತ್ತಾಗಬಹುದು. ಮಠ ಯಾವುದೇ ಆಗಿರಲಿ, ಪೀಠಾಧಿಪತಿ ಯಾರೇ ಆಗಿರಲಿ, ತನ್ನ ಹೃದಯದಲ್ಲಿಟ್ಟು ಆರಾಧಿಸುತ್ತಿರುವ ಮಠಕ್ಕೋ, ಗುರುಗಳಿಗೋ ಅನ್ಯಾಯವಾಗಿ ಕೇಡು ಬಗೆದರೆ ಯಾವ ಮಠದ ಭಕರೂ ಸುಮ್ಮನಿರಲಾರರು, ನೆನಪಿರಲಿ!
ರಂಗನಾಥ್ ಅವರೇ ಮಾಧ್ಯಮದ ಜವಾಬ್ದಾರಿ ಏನು ಅಂತ ನಿಮಗೆ ಗೊತ್ತಾ? ಹಣ ಮಾಡುವುದು ಮಾತ್ರವಲ್ಲ, ಕೇಳಿ ಇಲ್ಲಿ. ಸಂತ್ರಸ್ತೆಗೆ ಸಹಾಯ ಮಾಡಲು ಹೊರಟಿದ್ದೇನೋ ಸರಿ, ಈಗ ಕೇಸೇ ರದ್ದಾಗಿದೆ, ಆ ಮೂಲಕ ನಮ್ಮ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಾನೂನಿನ ದುರ್ಬಳಕೆ ಮತ್ತೊಮ್ಮೆ ಸಾಬೀತಾಗಿದೆ. ಒಂದು ಜವಾಬ್ದಾರಿಯುತ ಮಾಧ್ಯಮವಾಗಿ ಕಾನೂನಿನ ದುರ್ಬಳಕೆ ಮಾಡುವವರಿಗೆ ಕಠಿಣ ಶಿಕ್ಷೆ ಕೊಡುವಂತಹ ಕಾನೂನು ತನ್ನಿ ಎಂದು ನೀವು ಸರಕಾರವನ್ನು ಒತ್ತಾಯಿಸಬೇಕಿತ್ತು. ಶ್ರೀಗಳನ್ನು ದುರುದ್ದೇಶದಿಂದ ಖೆಡ್ಡಾಕ್ಕೆ ಬೀಳಿಸಲೆತ್ನಿಸಿದ್ದ ಪ್ರೇಮಲತಾ ಮತ್ತಾಕೆಯ ಪಟಾಲಂ ಮೇಲೆ ಕ್ರಮ ಕೈಗೊಳ್ಳಿ ಅನ್ನುವಂತಹಾ ಪ್ರೋಗ್ರಾಂ ಒಂದನ್ನು ಮಾಡಬೇಕಿತ್ತು, ಸಾರ್ವಜನಿಕ ಹಿತಾಸಕ್ತಿ ಎಂದು ಪರಿಗಣಿಸಿ ಸ್ವತಃ ನೀವೇ ಒಂದು ಕೇಸ್ ಕೊಡಬೇಕಿತ್ತು. ಅದೆಲ್ಲಾ ಬಿಟ್ಟು ನೀವು ಮಾಡಿದ್ದೇನು? “ಈ ತೀರ್ಪು ಸುಪ್ರೀಂ ಕೋರ್ಟಿನಲ್ಲಿ ಬದಲಾಗಬಹುದು” ಎನ್ನುವ ವಾಕ್ಯಗಳನ್ನು ಬಿತ್ತರಿಸಿ ನಿಮ್ಮೊಳಗಿದ್ದ ವಿಷವನ್ನು ಸಂಪೂರ್ಣವಾಗಿ ಹೊರ ಹಾಕಿದ್ದಾ? ಅಲ್ಲಾ ರೀ, ನಿಮ್ಮ ಉದ್ದೇಶ ಏನು? ನೇರವಾಗಿ ಹೇಳಿ ಬಿಡಿ
ಎರಡು ವರ್ಷಗಳಿಂದ ನಿರಂತರವಾಗಿ ತೇಜೋವಧೆ ಮಾಡಿದ್ದಲ್ಲದೆ ಕೋರ್ಟ್ ನಿರ್ದೋಷಿ ಎಂದ ಬಳಿಕವೂ ಅದೊಂದು ಒಪ್ಪಿತ ಸೆಕ್ಸ್ ಎನ್ನುತ್ತಿದ್ದೀರಲ್ಲಾ, ನಮ್ಮನ್ನೇನು ಏನೂ ಅರಿಯದ ಮೂರ್ಖರು ಅಂದುಕೊಂಡಿರಾ? ಪಬ್ಲಿಕ್ ಟಿವಿಯಲ್ಲಿ ಬರುವುದೆಲ್ಲವೂ ಸತ್ಯ ಅಂತ ನಂಬುವ ಮೂಢರು ಅಂದುಕೊಂಡಿರಾ? ರೀ, ನಮ್ಮ ಬಳಿಯೂ ಕೋರ್ಟ್ ಆದೇಶದ ಪ್ರತಿ ಇದೆ. ಒಂದು ಕಡೆ ಕೋರ್ಟ್ ಸ್ಪಷ್ಟವಾಗಿ ಹೇಳಿದೆ, ಲೈಂಗಿಕ ಕ್ರೀಯೆ ನಡೆದೇ ಇಲ್ಲ ಅಂತ, ಮತ್ತೊಂದು ಕಡೆ “ನನ್ನ ಮೇಲೆ ನೂರಾ ಅರುವತ್ತೊಂಬತ್ತು ಭಾರಿ ಅತ್ಯಾಚಾರ ಆಗಿದೆ “ ಎನ್ನುವ ಆರೋಪವನ್ನು ಉಲ್ಲೇಖ ಮಾಡಿ “ಒಂದು ವೇಳೆ ನೂರಾ ಅರುವತ್ತೊಂಬತ್ತು ಭಾರಿ ಆಗಿರುವುದೇ ನಿಜ ಆಗಿದ್ದಲ್ಲಿ ಅದು ಅತ್ಯಾಚಾರ ಅಂತಾಗುವುದಿಲ್ಲ, ಅದು ಒಪ್ಪಿತ ಸೆಕ್ಸ್ ಎಂದಾಗುತ್ತದೆ” ಎಂದು ಮಾನ್ಯ ನ್ಯಾಯಾಧೀಶರು ಹೇಳಿದ್ದಾರೆ. ಲೈಂಗಿಕ ಕ್ರೀಯೆ ನಡೆದೇ ಇಲ್ಲ ಎನ್ನುವ ನ್ಯಾಯಾಧೀಶರು ಒಪ್ಪಿತ ಸೆಕ್ಸ್ ಆಗಿದೆ ಎನ್ನುತ್ತಾರಾ? ಅದನ್ನು ಅರ್ಥೈಸಲಾರದ ನೀವು ಅದೊಂದು ಒಪ್ಪಿತ ಸೆಕ್ಸ್ ಎನ್ನುತ್ತಾ ಶ್ರೀಗಳ ನೈತಿಕತೆ ಪ್ರಶ್ನಿಸುತ್ತೀದ್ದೀರಾ? ಅಲ್ಲಾ ರೀ, ಒಪ್ಪಿತ ಸೆಕ್ಸ್ ನಡೆದಿದ್ದರೂ ಸಹ, ಪ್ರೇಮಲತಾ ಹೇಳಿದ ದಿನಾಂಕ, ಸಮಯ ಹೊಂದಾಣಿಕೆ ಆಗಬೇಕಿತ್ತಲ್ಲಾ? ಕಡೇ ಪಕ್ಷ ಮೊಬೈಲ್ ನೆಟ್ವರ್ಕ್ ಆದರೂ ಮ್ಯಾಚ್ ಆಗಬೇಕಿತ್ತಲ್ಲ? ಅದ್ಯಾವುದೂ ಮ್ಯಾಚ್ ಆಗಲಿಲ್ಲವೆಂದ ಮೇಲೆ ಒಪ್ಪಿತ ಸೆಕ್ಸ್ ಎಲ್ಲಿಂದ ಬಂತು? ಅದಿರಲಿ, ಪ್ರೇಮಲತಾ ಒದಗಿಸಿದ ಸಾಕ್ಷಿಯಲ್ಲಿಯೇ ಮತ್ತೊಬ್ಬ ಗಂಡಸಿನ ವೀರ್ಯ ಸಿಕ್ಕಿದೆ ಎಂದರೆ ಏನರ್ಥ? ಆಕೆ ಸುಳ್ಳು ಸಾಕ್ಷ್ಯ ನೀಡಿದ್ದಾಳೆ ಎಂದಲ್ಲವೇ? ವೀರ್ಯ ಮತ್ತೊಬ್ಬನದ್ದು ಎಂದಾದರೆ, ಅದರಲ್ಲಿ ಮತ್ತೊಬ್ಬ ಗಂಡಸಿನ ‘ಕೈ’ವಾಡ ಇದೆ ಎಂದಲ್ಲವೇ? ಆ ಮೂಲಕ ರಾಘವೇಶ್ವರರನ್ನು ಎಲ್ಲರೂ ಸೇರಿ ಫಿಕ್ಸ್ ಮಾಡಲೆತ್ನಿಸಿದ್ದಾರೆ ಎಂದಲ್ಲವೇ? ಸ್ಪಷ್ಟವಾಗಿ ಕೇಳಿಸಿಕೊಳ್ಳಿ ರಂಗನಾಥ್, ಅತ್ಯಾಚಾರದ ಆರೋಪ ಬಂದಾಗಲೇ ನಾವು ರಾಘವೇಶ್ವರ ಶ್ರೀಗಳ ಕೈ ಬಿಟ್ಟವರಲ್ಲ, ಇನ್ನು ಕೋರ್ಟ್ ನಿರ್ದೋಷಿ ಎಂದ ಬಳಿಕವೂ “ಭಕ್ತರಿಗೆ ಮೋಸ ಮಾಡಿದರಾ ರಾಘವೇಶ್ವರ ಶ್ರೀ” ಎನ್ನುವ ವರದಿ ಬಿತ್ತರಿಸಿದ ಮಾತ್ರಕ್ಕೆ ಕೈ ಬಿಡುತ್ತೇವಾ? ನೆವರ್ ಎವರ್!
ರಂಗನಾಥ್, ಒಂದು ಭಾರಿ ಒಂದೇ ಭಾರಿ ಒಬ್ಬ ಗಂಡಸಾಗಿ ಯೋಚಿಸಿ ನೋಡಿ. ಒಂದು ವೇಳೆ ನಿಮ್ಮ ಮೇಲೆ ಯಾವುದಾದರೂ ಮಹಿಳೆ ಸುಳ್ಳು ಅತ್ಯಾಚಾರದ ಕಂಪ್ಲೇಂಟ್ ಕೊಟ್ಟಿದಿದ್ದರೆ, ಆವಾಗಲೂ ನೀವು ಈ ಥರಾ ಬಿಹೇವ್ ಮಾಡುತ್ತಿದ್ದಿರಾ? ಸಂತ್ರಸ್ತೆಯನ್ನು ಸ್ಟುಡಿಯೋಕ್ಕೆ ಕರೆದು ಆಕೆಯ ಇಂಟರ್ ವ್ಯೂ ತೆಗೆದುಕೊಳ್ಳುತ್ತಿದ್ದಿರಾ? ಆಕೆಯ ಕಾಗೆಯಂತಹಾ ಕಂಠದಲ್ಲಿ ಸುಶ್ರಾವ್ಯವಾದ ಹಾಡನ್ನು ಹಾಡಿಸುತ್ತಿದ್ದಿರಾ? ಕೋರ್ಟ್ ನಿರ್ದೋಷಿ ಎಂದು ಹೇಳಿದ ಬಳಿಕವೂ, “ಇಲ್ಲಾ ಇಲ್ಲಾ, ನಮ್ಮದು ಒಪ್ಪಿತ ಸೆಕ್ಸ್ ಆಗಿತ್ತು” ಅಂತಿದ್ರಾ?
ಮತ್ತೆ ಕೇಳ್ಸ್ಕೊಳ್ಳಿ, ನಾನು ರಾಮಚಂದ್ರಾಪುರ ಮಠದ ಅನುಯಾಯಿ ಹೌದು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೆ ನಾನು ಈ ಲೇಖನ ಬರೆಯುವಲ್ಲಿ ಮಠವಾಗಲಿ, ಶ್ರೀಗಳಾಗಲೀ ಪ್ರಭಾವ ಬೀರಿಲ್ಲ. ಮಠದ ಯಾವ ಅಧಿಕಾರಿಯ ಸಂಪರ್ಕವೂ ನನಗಿಲ್ಲ. ಆದ್ದರಿಂದ “ರಾಮಚಂದ್ರಾಪುರ ಮಠದ ಗೂಂಡಾ ಭಕ್ತನಿಂದ ಪಬ್ಲಿಕ್ ಟಿವಿಯ ಮೇಲೆ ಆನ್’ಲೈನ್’ನಲ್ಲಿ ದಾಂಧಲೆ” ಅಂತ ಬಿತ್ತರಿಸಬೇಡಿ ಪ್ಲೀಸ್!
Facebook ಕಾಮೆಂಟ್ಸ್