X

ನಮ್ಮಿಬ್ಬರ ಜಗಳ ಕಂಡು

ನಮ್ಮಿಬ್ಬರ ಜಗಳ ಕಂಡು

ತಲೆದಿಂಬುಗಳಲ್ಲಿ ತುಂಬಿದೆ

ದುಃಖ ಬರಪೂರ..

ಕಾರಣ

ಇಂದು ರಾತ್ರಿ ಒಂದಕ್ಕೊಂದು

ಅಗಲಿ ಮಲಗಬೇಕಾಗಿದೆ

ಬಲುದೂರ ದೂರ…!

***

ದೊಡ್ಡ ವೇದಿಕೆಯಲ್ಲಿ

ದೊಡ್ಡವರ ಸಣ್ಣತನದ

ವಿಚಾರಕ್ಕೆ

ಸಿಂಗರಿಸಿದ ವೇದಿಕೆ ಹೇಳಿತು

“ಬೇಗ ಕಳಚೀ ನನ್ನೀ ಅಲಂಕಾರ”..!

***

ಲತೆಯಿಂದ ಬೇರಾದ ಹೂ

ಹೆಣ್ಣ ಮುಡಿ ಏರಿದರೇನು

ದೇವರ ಅಡಿ ಸೇರಿದರೇನು..

ಇಬ್ಬರೂ ಕೊಡರು ಸಾಂತ್ವಾನ

ಅಗಲಿದ ಹೂವಿನ ನೋವಿಗೆ..!

***

ನೀನು ನಕ್ಕಾಗಲೆಲ್ಲಾ

ಚಂದ್ರನಿಗೆ ಮುನಿಸು..!

ಕಾರಣ

ಎಲ್ಲಾ ತಾಯಂದಿರು

ತೋರಿಸುವರು

ತಮ್ಮ ಮಕ್ಕಳು ಅತ್ತಾಗ

ನಿನ್ನನ್ನೇ..!

***

ನಾನು, ನಾನೇ, ನನ್ನಿಂದಲೇ..

 ಎನ್ನುವ ನೀನು

‘ನಾ’ ತೆಗೆದು ‘ನೀ’ ಇಟ್ಟು ನೋಡು

ಅವನೂ ಮೆಚ್ಚುವ

‘ನಾ’ ಇಲ್ಲದ ‘ನೀ’ ನನ್ನು..!

***

ಹರಿವ ಹಾವ ಭಯವಿಲ್ಲದ

ಉರಿವ ಉರಿಯ ಭಯವಿಲ್ಲದ

ಕಪ್ಪು ಕತ್ತಲ ಭಯವಿಲ್ಲದ

ಮಗುವ ಮಾಡು ತಂದೆ

ನಿನ್ನ ಭಯವೂ ಇಲ್ಲದೆ

ಪ್ರೀತಿಯಿಂದಿರುವೆ ಶ್ರೀ ಗುರು ಕೊಟ್ಟೂರೇಶ..!

***

ಮಿಂಚು ಮಿಂಚ ಬೇಕಾದರು

ಬಿಳಿ ಮೋಡಗಳು

ಕಪ್ಪಾಗಲೇ ಬೇಕು,

ಸೂರ್ಯ ಕಾಣ ಬೇಕಾದರೂ

ಕಪ್ಪುದಾರಿಯ ಹಾದು ಬರಲೇಬೇಕು…!

ಶ್ರೀ. ನಾಗರಾಜ್.ಮುಕಾರಿ (ಚಿರಾಭಿ)

         ಕೈಗಾ, ಕಾರವಾರ.

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post