“ಗುಣಪಡಿಸಲಾಗದ ಖಾಯಿಲೆ ಎಂದರೆ ಬದುಕು ಮುಗಿದಂತಲ್ಲ” ಹೀಗಂತ ಹೇಳಿದ್ದು, ನ್ಯೂಜೆರ್ಸಿಯ ಡೇವಿಡ್ ಕ್ಲಾರ್ಕ್. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಆತನಿಗೆ ಬರುವ ಮೊದಲ ಯೋಚನೆ, ತನಗೆ ಟರ್ಮಿನಲ್ ಕ್ಯಾನ್ಸರ್ ಇದೆ ಎಂಬುದು. ಅದರ ನಂತರ ಎರಡನೆಯ ಯೋಚನೆಯೇ “ಈ ದಿನವನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳುವುದು?” ಎಂದು.
ಸಾವನ್ನ ಬೆನ್ನ ಹಿಂದೆಯೇ ಇಟ್ಟುಕೊಂಡು ಇನ್ನೇನನ್ನ ತಾನೆ ಯೋಚಿಸಲಾಗುವುದು?! ಹಾಗೆ ನೋಡಿದರೆ ನಮ್ಮ ಸ್ಥಿತಿಯೇನೂ ಭಿನ್ನ ಅಲ್ಲ. ಸಾವು ನಮ್ಮ ಬೆನ್ನ ಹಿಂದೆಯೇ ಇದೆ. ಆದರೂ ನಾವಿನ್ನೂ ತುಂಬಾ ವರ್ಷ ಬದುಕುತ್ತೇವೆ ಎಂಬ ಹುಚ್ಚು ಧೈರ್ಯ! ಒಂದು ರೀತಿಯಲ್ಲಿ ಒಳ್ಳೆಯದೇ. ನಾಳೆ ಎಂಬುದೊಂದಿದೆ ಎಂಬ ಭರವಸೆಯಲ್ಲೇ ಹೊಸ ಕನಸುಗಳ ಬೆನ್ನತ್ತಿ ಸಾಗುತ್ತಿರುವುದು. ನಾಳೆ ಇದೆ ಎಂಬ ಭರವಸೆಯಲ್ಲೇ ನಾಳೆಗಾಗಿ ಶ್ರಮ ಪಡುತ್ತಿರುವುದು. ಒಟ್ಟಿನಲ್ಲಿ ಬದುಕುತ್ತಿರುವುದೇ ನಾಳೆಗಾಗಿ! ಆ ನಾಳೆಗಳ ಮಧ್ಯೆ ‘ಇಂದು’ ಎನ್ನುವುದು ಕಳೆದುಹೋಗುತ್ತಲೇ ಇರುತ್ತದೆ. ‘ನಾಳೆ’ ಕೂಡ ನಾಳೆ ಬರುತ್ತೇನೆ ಎಂದು ಸತಾಯಿಸುತ್ತಲೇ ಇರುತ್ತದೆ. ‘ಇಂದು’ ಎನ್ನುವುದರ ಬೆಲೆ ಅರ್ಥವಾಗುವುದು ಬಹುಶಃ ನಾಳೆ ಎಂಬುದು ಇಲ್ಲವೆಂದಾಗಲೇ ಇರಬೇಕು.
ಕ್ಯಾನ್ಸರ್ ಎಂದರೇನೇ ಬದುಕು ಮುಗಿದೇಹೋಯಿತು ಎಂಬ ಯೋಚನೆಗಳು ಬರಲಾರಂಭಿಸುತ್ತೆ. ಅಂತದ್ದರಲ್ಲಿ ಟರ್ಮಿನಲ್ ಕ್ಯಾನ್ಸರ್ ಎಂದರೆ ಯಾವುದೇ ಹೋಪ್ ಕೂಡ ಇಟ್ಟುಕೊಳ್ಳಲು ಬಿಡದಂತೆ ಬಂದು ಅಪ್ಪಳಿಸುತ್ತದೆ. ಟರ್ಮಿನಲ್ ಡಿಸೀಸ್ ಎಂದರೆ ನಾನ್ ಕ್ಯೂರಬಲ್, ಗುಣಪಡಿಸಲಾಗದ್ದು ಎಂದು. ಸಾವಿನೊಂದಿಗೆ ಮುಗಿಯುವಂಥದ್ದು ಎಂದು. ಅಂತಹ ಟರ್ಮಿನಲ್ ಕ್ಯಾನ್ಸರ್’ಗೆ ಒಳಗಾಗಿದ್ದಾನೆ ಡೇವಿಡ್ ಕ್ಲಾರ್ಕ್.
೫೧ ವರ್ಷದ ಡೇವಿಡ್ ಕ್ಲಾರ್ಕ್ ೨೦೧೫, ಜನವರಿಯಲ್ಲಿ ಟರ್ಮಿನಲ್ ಲಂಗ್ ಕ್ಯಾನ್ಸರಿನಿಂದ ಬಳಲುತ್ತಿದ್ದಾನೆಂದು ತಿಳಿಯಿತು. ತೂಕ ಕಳೆದುಕೊಂಡಿದ್ದ ಕ್ಲಾರ್ಕ್, ಎಷ್ಟೇ ಪ್ರಯತ್ನಿಸಿದರೂ ತೂಕ ಗಳಿಸಲಾಗುತ್ತಿರಲಿಲ್ಲ. ಡಾಕ್ಟರ್’ನ ಭೇಟಿಯಾದಾಗ ಮಾಡಿದ ಸಿ.ಟಿ. ಸ್ಕ್ಯಾನ್’ನಿಂದ ಬೆನ್ನುಹುರಿಯಲ್ಲಿ ಗಾಲ್ಫ್ ಬಾಲಿನಷ್ಟು ದೊಡ್ಡದಾದ ಟ್ಯೂಮರ್ ಇದೆ ಎಂಬುದು ಕಂಡುಬಂದಿದ್ದು. ಅದರ ನಂತರ ನಡೆದ ಹಲವಾರು ಟೆಸ್ಟ್’ಗಳ ತರುವಾಯ ಅದರ ಮೂಲ ಇರುವುದು ಶ್ವಾಸಕೋಶ ಎನ್ನುವುದರ ಅರಿವಾಗಿದ್ದು. ಅದಾಗಲೇ ನಾಲ್ಕನೇ ಸ್ಟೇಜ್’ನಲ್ಲಿತ್ತು ಆತನ ಕ್ಯಾನ್ಸರ್.
ಆಗಲೇ ಹೇಳಿದಂತೆ, ಕ್ಯಾನ್ಸರ್ ಎಂದರೇನೇ ದೊಡ್ಡ ಆಘಾತ, ಅದರಲ್ಲೂ ಡಾಕ್ಟರ್, “ನಿಮಗೆ ಟರ್ಮಿನಲ್ ಕ್ಯಾನ್ಸರ್ ಇದೆ” ಎಂದಾಗ ಆತ ಮಾನಸಿಕವಾಗಿ ಕುಸಿದುಹೋಗಿದ್ದ. ಆತ ಯಾವಾಗಲೂ ಕನಸು ಕಾಣುತ್ತಿದ್ದನಂತೆ ತನ್ನ ಪತ್ನಿಯೊಂದಿಗೆ ಜೀವನ ಸಾಗಿಸುತ್ತಾ, ವೃದ್ಧನಾಗಿ ತನ್ನ ಮನೆಯ ವರಾಂಡಾದಲ್ಲಿ ತನ್ನ ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲಕಳೆಯಬೇಕೆಂದು. ಆದರೆ ಇಂತಹದೊಂದು ಸುದ್ದಿ ಆತನ ಆಸೆಗಳನ್ನೆಲ್ಲಾ ತಲೆಕೆಳಗೆ ಮಾಡಿತ್ತು. ಅಂತಹ ಆಸೆಗಳು ಈಡೇರುವುದಿಲ್ಲ ಎಂಬ ಸತ್ಯ ಬಹಳ ಕ್ರೂರವಾಗಿತ್ತು. ಈ ವಿಷಯ ತಿಳಿದಾಗ ಮೂರು ದಿನಗಳ ಕಾಲ ಅತ್ತನಂತೆ ಆತ. ಅದು ಚಿಕಿತ್ಸೆಯ ದಿನಗಳಲ್ಲಿ ಮುಂದುವರೆಯಿತು ಕೂಡ. ರೇಡಿಯೇಷನ್, ಆ ಟ್ಯೂಮರ್ ಅನ್ನು ತೆಗೆಯುವುದಕ್ಕಾಗಿ ಸರ್ಜರಿ, ಪ್ರತಿ ಮೂರು ವಾರಗಳಿಗೊಮ್ಮೆ ಕೀಮೋ. ಈ ಎಲ್ಲಾ ನಿಷ್ಠುರ ಚಿಕಿತ್ಸೆಗಳ ನಂತರವೂ ಡಾಕ್ಟರ್ ಹೇಳಿದ್ದು, “ಇವರು ೮೦% ಒಂದು ವರ್ಷದೊಳಗೆ ಸಾವನ್ನಪ್ಪುತ್ತಾರೆ. ಐದು ವರ್ಷಗಳ ಒಳಗಂತೂ ೯೯% ಖಚಿತ” ಎಂದು!!! ಆತ ಈ ಸತ್ಯವನ್ನು ಒಪ್ಪಿಕೊಂಡ.
ಕೆಲವು ಸತ್ಯಗಳೇ ಹಾಗೆ, ಅದನ್ನ ಒಪ್ಪಿಕೊಳ್ಳಲೇಬೇಕು. ಅದು ಒಳ್ಳೆಯದೂ ಹೌದು. ಕಹಿಸತ್ಯವನ್ನು ಒಪ್ಪಿಕೊಂಡು ಅಪ್ಪಿಕೊಂಡಾಗಲೇ ಬದುಕು ಸರಳವಾಗುವುದು. ನಾವು ಒಲ್ಲೆ ಎಂದಾಕ್ಷಣ ಸತ್ಯ ಬದಲಾಗುವುದಿಲ್ಲವಲ್ಲ. ಎಷ್ಟೇ ಕಹಿಯಾಗಿದ್ದರೂ, ಕ್ರೂರವಾಗಿದ್ದರೂ ಅದು ನಮ್ಮ ಬದುಕಿನ ಭಾಗ ಎಂಬುದು ಮಾತ್ರ ಬದಲಾಗುವುದಿಲ್ಲ. ಸುಮ್ಮನೇ ಆ ಸತ್ಯವನ್ನು ಒಪ್ಪಿಕೊಳ್ಳದೇ ಅದರೊಂದಿಗೆ ಗುದ್ದಾಡುವುದಕ್ಕಿಂತ, ಒಪ್ಪಿಕೊಂಡು ಸ್ವಲ್ಪಮಟ್ಟಿಗಾದರೂ ಸರಳ ಎನ್ನುವಂತೆ ಮಾಡಿಕೊಳ್ಳಬಹುದು! ಆತ ಮಾಡಿದ್ದು ಕೂಡ ಅದನ್ನೇ.
ತಾನು ಯಾವುದನ್ನು ಪ್ರೀತಿಸುತ್ತೇನೋ ಅದನ್ನ ತನ್ನಿಂದ ಕಸಿದುಕೊಳ್ಳಲು ಕ್ಯಾನ್ಸರ್’ಗೆ ಬಿಡಬಾರದೆಂದು ನಿರ್ಧರಿಸಿದ ಆತ. ಕ್ಲಾರ್ಕ್ ಹೇಳುತ್ತಾನೆ, “ಒಂದು ದಿನ ನಾನು ಪ್ರೀತಿಯಿಂದ ಮಾಡುವ ಕೆಲಸಗಳನ್ನು ಮಾಡಲಾಗದಂತಹ ದಿನ ಬರಬಹುದು. ಆದರೆ ‘ಇಂದು’ ಆ ದಿನವಲ್ಲ.” ಅದಕ್ಕಾಗಿ ಆತ ಸುಮಾರು ೧೮ ವರ್ಷಗಳಿಂದ ಆತನಿಗೆ ಖುಶಿಯನ್ನು ತಂದುಕೊಟ್ಟಿದ್ದ ಕಾರ್ಯವನ್ನ ಆರಿಸಿಕೊಂಡ. ಅದೇ ಪರ್ವತಾರೋಹಣ.! ನ್ಯೂಯಾರ್ಕ್’ನ ೪೦೦೦ಅಡಿಗೂ ಮೇಲ್ಪಟ್ಟಿರುವ ೪೬ ಪರ್ವತಗಳನ್ನು ಏರಬೇಕು ಎಂದು ನಿರ್ಧರಿಸಿದ್ದಾನೆ!! ಈಗಾಗಲೇ ತನ್ನ ಮಗನೊಂದಿಗೆ ಮೂರು ಪರ್ವತಗಳನ್ನ ಹತ್ತಿದ್ದಾನೆ.
ಆತನ ಖಾಯಿಲೆ ಹಾಗೂ ಚಿಕಿತ್ಸೆ ಪರ್ವತಾರೋಹಣವನ್ನು ಇನ್ನೂ ಕಷ್ಟಕರವಾಗಿ ಮಾಡಿದ್ದಂತೂ ನಿಜ. ಆದರೆ ಆತ ತನಗೆ ಪ್ರಕೃತಿಯೇ ಶಕ್ತಿ ನೀಡುತ್ತದೆ ಎನ್ನುತ್ತಾನೆ. “ ಪರ್ವತಗಳ ಸೌಂದರ್ಯ, ಆಗತಾನೆ ಬಿದ್ದ ಮಂಜು ನನ್ನಲ್ಲಿ ಒಂದು ರೀತಿಯ ಶಾಂತಿಯನ್ನ ನೀಡುತ್ತದೆ. ಶಕ್ತಿಯನ್ನ ನೀಡುತ್ತದೆ. ಅಂತಹ ಸುಂದರ ತಾಣದಲ್ಲಿ ನನಗೆ ಗುಣಪಡಿಸಲಾಗದ ಕ್ಯಾನ್ಸರ್ ಇದೆ ಎನ್ನುವುದನ್ನೇ ಮರೆತುಬಿಟ್ಟಿರುತ್ತೇನೆ” ಎಂದಿದ್ದಾನೆ.
ಆತನಿಗೆ ಇನ್ನೂ ಕೆಲ ಕೀಮೋ ತೆಗೆಕೊಳ್ಳಬೇಕೆಂದು ಡಾಕ್ಟರ್ ಹೇಳಿದ್ದಾರೆ. ಕ್ಲಾರ್ಕ್ ತಾನು ಕ್ಯಾನ್ಸರಿನೊಂದಿಗೆ ‘ಹೋರಾಡು’ತ್ತಿದ್ದೇನೆ ಎಂದು ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಅಲ್ಲೆಲ್ಲೋ ಒಂದು ಕಡೆ, ಒಬ್ಬರ ಗೆಲುವು, ಒಬ್ಬರ ಸೋಲು ಎನ್ನುವಂತಾಗುತ್ತದೆ. ಆತ ತಾನು ಪರ್ವತ ಹತ್ತುವುದು, ಪರ್ವತವನ್ನು ಸೋಲಿಸುವುದಕ್ಕಲ್ಲ ಬದಲಾಗಿ ತನ್ನನ್ನು ತಾನು ಗೆದ್ದುಕೊಳ್ಳಲು. ಹಾಗೆಯೇ ಕ್ಯಾನ್ಸರ್ ಕೂಡ ಎನ್ನುತ್ತಾನೆ.
ಆತನ ಈ ನಿರ್ಧಾರದ ಹಿಂದೆ ನಿಂತಿರುವ ಆತನ ಕುಟುಂಬ ಕೂಡ ಶ್ಲಾಘನೆಗೆ ಅರ್ಹರು. ಇಂತಹ ಸ್ಥಿತಿಯಲ್ಲಿ “ಇಂತಹ ಕೆಲಸಗಳಿಗೆ ಕೈ ಹಾಕದೇ ಸುಮ್ಮನೆ ಮನೆಯಲ್ಲಿದ್ದು ವಿಶ್ರಾಂತಿ ಪಡೆ” ಎನ್ನದೇ ಆತನ ಬೆನ್ನುಲುಬಾಗಿ ನಿಂತಿದ್ದಾರೆ ಆತನ ಪತ್ನಿ ಹಾಗೂ ಮೂರು ಮಕ್ಕಳು. ಅದರಲ್ಲೂ ಒಬ್ಬ ಮಗ ತಂದೆಯ ಜೊತೆ ತಾನೂ ಪರ್ವತಗಳನ್ನ ಹತ್ತಿ ಇಳಿಯುತ್ತಿದ್ದಾನೆ! ಕ್ಯಾನ್ಸರ್ ಫೋರಮ್ ಒಂದರಲ್ಲಿ ಯಾರೋ ಒಬ್ಬರು ಬರೆದಿದ್ದನ್ನ ನೋಡಿದ್ದೆ. “ನನ್ನ ಪರಿಚಿತರೊಬ್ಬರ ತಾಯಿ ಕ್ಯಾನ್ಸರ್ ಎಂದು ತಿಳಿದುಬಂತು. ಆಗಲೇ ಅವರು ತಮ್ಮ ತಾಯಿ ಇನ್ನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ನಿರ್ಧರಿಸಿಬಿಟ್ಟರು. ಕ್ಯಾನ್ಸರ್ ಅವರನ್ನು ಸಾಯಿಸಿತ್ತು ಎನ್ನುವುದಕ್ಕಿಂತ ಮನೆಯವರ ಮನೋಭಾವ, ವರ್ತನೆ ಕ್ಯಾನ್ಸರಿಗಿಂತ ಮೊದಲು ಅವರನ್ನು ಸಾಯಿಸಿತ್ತು.” ಎಂದು. ಇದಕ್ಕೆ ವ್ಯತಿರಿಕ್ತ ಡೇವಿಡ್ ಕ್ಲಾರ್ಕ್’ನ ಕುಟುಂಬ.
ತಂದೆಯ ಜೊತೆ ಪರ್ವತಾರೋಹಣ ಮಾಡುತ್ತಿರುವ ಮ್ಯಾಥ್ಯೂ(ಮಗ), “ನನ್ನ ತಂದೆಯೇ ನನಗೆ ಮಾದರಿ. ಮುಂದೆ ನಾನು ಹೇಗೆ ಬದುಕಬೇಕು ಎನ್ನುವುದನ್ನ ಅವರು ನನಗೆ ತೋರಿಸಿಕೊಡುತ್ತಿದ್ದಾರೆ” ಎನ್ನುತ್ತಾನೆ. ಕ್ಲಾರ್ಕ್ ಮ್ಯಾಥ್ಯೂಗೆ ಮಾತ್ರವಲ್ಲ ನಮಗೆಲ್ಲರಿಗೂ ಮಾದರಿಯೇ ಸರಿ. ನಿನ್ನೆಗಳ, ನಾಳೆಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡು ‘ಇಂದು’ ಕಳೆದುಕೊಳ್ಳುತ್ತಿರುವವರಿಗೆ ಆತನ ಬದುಕು ಒಂದು ಪಾಠ. ಸಾವನ್ನು ಪಕ್ಕದಲ್ಲಿಟ್ಟುಕೊಂಡೇ ಅತ್ಯಂತ ಸಂತಸದಿಂದ ಬದುಕಬಹುದು ಎಂದು ತೋರಿಸಿಕೊಟ್ಟಿದ್ದಾನೆ ಕ್ಲಾರ್ಕ್. “ಪ್ರಪಂಚ ನಿಜಕ್ಕೂ ಎಷ್ಟು ಸುಂದರವಾಗಿದೆ ಎಂದು ನೋಡುವಂತೆ ಕಣ್ಣು ತೆರೆಸಿದ್ದೇ ಕ್ಯಾನ್ಸರ್” ಎನ್ನುವ ಡೇವಿಡ್ ಕ್ಲಾರ್ಕ್’ಗೆ ಒಂದು ಸಲಾಮ್.
Facebook ಕಾಮೆಂಟ್ಸ್