X
    Categories: ಕಥೆ

 ಪ್ರೀತಿ – 2 

 ಪ್ರೀತಿ – 1

ಹೀಗೆಯೇ ಮುಂದುವರೆದಿತ್ತು ಸ್ನೇಹ…ಹಾಗೆಯೇ ಪ್ರೀತಿಯ ಕಾಡಿಸುವ ಮೋಜು ಕೂಡಾ…..ಪ್ರೀತಿಯ ನಿಷ್ಕಲ್ಮಶ ಸ್ವಭಾವ ಅವನಿಗರ್ಥವಾಗಿತ್ತು …ಅವಳು “ನಾನೊಂದು ಕವನ ಬರಿಬೇಕು ಕಣೋ ಯಾವ ವಿಷಯದ ಮೇಲೆ ಬರೀಬೇಕು ತಿಳಿತಿಲ್ವೋ…ನೀ ಹೇಳೋ …ಅದೂ ನೀನೇ ಯೋಚಿಸಿ ಹೇಳ್ಬೇಕು..ಯಾರೋ ಹೇಳಿದ್ದು ಬೇಡ….”ಅಂತ ಅವನ ತಲೆ ತಿಂದಾಗ ಗಂಟೆಗಟ್ಟಲೇ ಯೋಚಿಸಿ ಅವಳ ಕವನಗಳಿಗೆ  ವಿಷಯಗಳನ್ನು  ಒದಗಿಸುತ್ತಿದ್ದ…”ನಿನ್ನ ಮೇಲೆ ಒಂದ್ ಕಥೆ ಬರೀಲಾ?” ಅಂತ ತಲೆ ತಿಂದಾಗ “ನನ್ ಮೇಲೆ ಬೇಡ ತಾಯೀ….! …ಆಮೇಲೆ ಕಥೆಲೂ ನನ್ ಕಾಡಿಸ್ತಿಯಾ” ಅಂತ ಅವಳನ್ನು ನಗಿಸಿ ಕಥಾವಸ್ತುಗಳನ್ನ ,ಪ್ರಸಂಗಗಳನ್ನ ಯೋಚಿಸಿ ಹೇಳುತ್ತಿದ್ದ…ಅವಳೊಂದಿಗಿನ ಹರಟೆ, ನಗು ತುಂಬಾ ಪ್ರಿಯವೆನ್ನಿಸುವ ವಿಷಯಗಳಾಗಿದ್ದವು ಪ್ರೇಮ್ ಗೆ.  ಪ್ರೇಮ್ ನ ಹೃದಯಕ್ಕೆ “ಅವಳೊಂದಿಗೆ ಮಾತಾಡದೆ ಇರಲಾರೆ “ಎಂಬ ಗಟ್ಟಿ ನಿರ್ಧಾರವನ್ನ ನೋಡಿದ್ದವು…

   ಪ್ರೀತಿಯ ಮನೆಯಲ್ಲಿ ಅವಳ ಮದುವೆಯ ಪ್ರಸ್ತಾಪ ಬಂದಿತ್ತು.ಪ್ರೀತಿ ತಮಾಷೆಗಾಗಿ “ಅಮ್ಮ ಇಷ್ಟು ಪುಟ್ಟ ಹುಡುಗಿಗೆ ಮದುವೆನಾ?ನನಗೆ ಬಾಲ್ಯ ವಿವಾಹ ಬೇಡ ಅಮ್ಮಾ…ನೀನೆನಾದರೂ ನನಗೆ ಇಷ್ಟು ಬೇಗ ಮದುವೆ ಮಾಡಿದರೆ ನಿನ್ನ ಅಳಿಯ ನಾನಾಡುವುದನ್ನ ನೋಡಿ ನಿಮ್ಮ ಮಗಳಿನ್ನು ಚಿಕ್ಕವಳು ಬುದ್ಧಿ ತಿಳಿಯುವ ಹಾಗಾದ ಮೇಲೆ ಕಳಿಸಿಕೊಡಿ ಅಂತ ತವರು ಮನೆಗೆ ಬಿಟ್ಟು ಹೋಗ್ತಾನೆ ನೋಡು..ಇನ್ನೆರಡು ವರ್ಷಕ್ಕೆ ನನ್ನ ಮೆದುಳು ಪೂರ್ತಿ ಬೆಳೆಯುತ್ತೆ  ,ಅಂತ ಮೊನ್ನೆ ನೀನು ನನ್ನ ಮದುವೆ ಬಗ್ಗೆ  ಭವಿಷ್ಯ ಕೇಳ್ತಿದ್ದೆಯಲ್ಲ ,ಆ ಜೋತಿಷಿ ನೇ ಹೇಳಿದ್ರಮ್ಮ …ನೀನೂ ನಿಮ್ಮಮ್ಮನ ಹಾಗೇ ….ಬುದ್ಧಿ  ಬೆಳೆಯುವುದು ಲೇಟು ಅಂದ್ರಮ್ಮಾ ” ಎಂದು ಅವಳಮ್ಮನನ್ನು ರೇಗಿಸಿ ನಕ್ಕಿದ್ದಳು.ಅವಳ ತಂದೆಯೂ ಅವಳೊಡನೆ ನಕ್ಕಾಗ ಅವಳಮ್ಮನಿಗೆ ಕೋಪ ಬಂದಿತ್ತು. ” ನೀವುಂಟು ನಿಮ್ಮ ಮಗಳುಂಟು.. ಇವಳಿಗೆ ಈ ಹುಣ್ಣಿಮೆಗೆ ಇಪ್ಪತೊಂದಾಯ್ತು..ಇನ್ನೂ ಚಿಕ್ಕ ಹುಡುಗಿಯಂತೆ ತುಂಟಾಟ, ತರ್ಲೆ ಮಾಡ್ತಾಳೆ …ನೀವೂ ಸರಿ ಒಬ್ಬಳೇ ಮಗಳು ಅಂತ ತಲೆ ಮೇಲೆ ಕೂರಿಸಕೊಂಡಿದೀರಾ..ಇವಳ ಮದುವೆ ಬೇಗ ಮಾಡಿ ಮುಗಿಸಿದ್ರೆ ಆದಿಗೆ ಹೆಣ್ಣು ಹುಡುಕಬಹುದು…ಅವನಿಗೆ ಹೆಣ್ಣು ಹುಡುಕಿ ಮದುವೆ ಮಾಡೋದ್ರೊಳಗೆ ಒಂದು ವರ್ಷ ಕಳೆದಿರುತ್ತೆ…ಅವನಿಗೆ ಈಗಾಗ್ಲೆ  ಇಪ್ಪತ್ತಾರು ನಡಿತಿದೆ..ಇವಳು ಹೀಗೇ ಮಾಡ್ತಿದ್ರೆ ಇವಳ ಮದುವೆ ಮುಗಿದು ಇವನ ಮದುವೆ ಮಾಡೋದ್ರೋಳಗೇ ಇವನು ಮುದುಕಾ ಆಗಿರ್ತಾನೆ “ಅಂದರು ಆದಿಯತ್ತ ತಿರುಗಿ .ಆದಿಯತ್ತ ಪ್ರೀತಿ ವಾರೆಗಣ್ಣಿನಿಂದ ನೋಡಿ “ಅಮ್ಮ ನಿನಗೆ ಹುಡುಗಿ ಹುಡುಕ್ತಾರಂತೆ ಅಣ್ಣಾ ….ಅಂತ ಕಣ್ಣು ಹೊಡೆದಾಗ ” ಅಪ್ಪ ಅಮ್ಮನ ಹಿಂದ ನಿಂತಿದ್ದ ಆದಿ “ಕೈ ಮುಗಿದು ದಯವಿಟ್ಟು ನನ್ ಹುಡುಗಿ ವಿಷಯ ಹೇಳಬೇಡ್ವೇ ….”ಎನ್ನುವಂತೆ ಕಣ್ಣಲ್ಲೆ ಸನ್ನೆ ಮಾಡುತ್ತ ಅಂಗಲಾಚಿದ. ಆದಿಯೇ ” ಬೇಡ ಅಮ್ಮಾ  ಇನ್ನೆರಡು ವರ್ಷ ಕಳೀಲಿ… ಅವಳೂ ಕಾಲೇಜ್ ಮುಗಿಸಿ ಸ್ವಲ್ಪ ದಿನ ಮನೇಲಿ ಹಾಯಾಗಿರಲಿ…ಆಮೇಲೆ ನೋಡಿದರಾಯ್ತು. “ಅಂತ ಅಮ್ಮನನ್ನ ಸಮಾದಾನ ಪಡಸಿದ..ಅವನದೂ ಅದರಲ್ಲಿ ಸ್ವಾರ್ಥವಿತ್ತು…ಅವನ ಪ್ರೀತಿಯ ಹುಡುಗಿಯ ಓದು ಮುಗಿಯಲು ಇನ್ನೂ ಎರಡು ವರ್ಷ ಬಾಕಿ ಇತ್ತು.. ಪ್ರೀತಿಯ ಅಪ್ಪನಿಗೂ ಇಷ್ಟು  ಬೇಗ ಮದುವೆ ಮಾಡುವುದು ಇಷ್ಟವಿರಲಿಲ್ಲ .

        ಆ ಸಂಜೆ ವರಾಂಡದಲ್ಲಿ ಒಂಟಿಯಾಗಿ ಕುಳಿತ ಪ್ರೀತಿಗೆ “ನನಗೆ ಮದುವೆಯ ವಯಸ್ಸಾಯಿತಾ? ಹೌದು ! ತನ್ನ ಗೆಳೆಯತಿಯರು ಲವ್  ,ಎಂಗೇಜ್ ಮೆಂಟ್,ಮದುವೆ … ಅಂತ ಬ್ಯುಸಿ ಇದಾರೆ ..ನಾನು ಮಾತ್ರ ಕೋತಿ ತರ ಆಡ್ಕೊಂಡಿದೀನಿ …ಇರ್ಲಿ ಬಿಡು ಆಮೇಲೆ ಈ ಜಂಜಾಟಗಳು ಇದ್ದಿದ್ದೆ “ಅಂದುಕೊಂಡು ಇನ್ನೇನು ಮಲಗಬೇಕೆನ್ನುವಷ್ಟರಲ್ಲಿ ಪ್ರೇಮ್ ನ ಕರೆ ..”ನನ್ನ ಮದುವೆ ಮಾಡ್ತಾರಂತೆ ಕಣೊ …ಇವತ್ತು ಅದೇ ಸುದ್ದಿ ಮನೇಲಿ ..ಅಮ್ಮಂದು ಇದೇ ಗಲಾಟೆ ಕಣೋ ಅಪ್ಪ ,ಅಣ್ಣ ಎರಡು ವರ್ಷ ಬಿಟ್ ಮದುವೆ ಮಾಡೋಣ ಅಂತ ಅಂದಿದಕ್ಕೆ  ಅಮ್ಮ ಸುಮ್ಮನಾಗಿದಾರೆ …ನನ್ ಕೋತಿ ಆಟ ತಡ್ಕೊಳೋ ಗಂಡು ಎಲ್ಲಿದಾನೋ ಬಿಡು..ಅವನ ಕಥೆ ಅಷ್ಟೇ” ಎಂದು ನಗುತ್ತ ಹೇಳುತ್ತಿರುವಾಗ …ಮೆಲ್ಲಗೆ “ನಾನೇ ಇದೀನಲ್ಲ….! “ಅಂತ ನಾಲಿಗೆ ಕಚ್ಚಿಕೊಂಡ ಪ್ರೇಮ್. ಅದು ಅವಳಿಗೆ ಸರಿಯಾಗಿ ಕೇಳಿತ್ತು. “ಏನು?” ಎಂದು ಪ್ರೀತಿ ಪ್ರಶ್ನಿಸಿದಾಗ ” ಏನಿಲ್ಲ “ಅಂತ ಮಾತು ತುಂಡರಿಸಿದ್ದ ಪ್ರೇಮ್ ..ಅವನಿಗಂತೂ ಖುಷಿಯಾಗಿತ್ತು ,ಎರಡು ವರ್ಷ ಪ್ರೀತಿಯ ಮದುವೆ ಮುಂದೆ ಹೋಗಿದ್ದು. ..ಪ್ರೀತಿ ಇನ್ನೂ ಯಾರ ಪ್ರೀತಿಯ ಬಲೆಗೂ ಬಿದ್ದಿಲ್ಲ ಎನ್ನುವುದನ್ನು ಅವಳಿಂದಲೇ ಬಾಯಿ ಬಿಡಿಸಿದ್ದ.ಹಾಗೇ ಬೇಕಂತಾನೇ ತಾನೂ ಇನ್ನೂ ಯಾವ ಪ್ರೀತಿಯ ಬಲೆಯಲ್ಲಿ ಬಿದ್ದಿಲ್ಲ ಎನ್ನುವುದನ್ನು ಸ್ಪಷಟಪಡಿಸಿದ್ದ  …ಹಾಗಾದರೆ ಪ್ರೀತಿ ನನ್ನವಳಾಗೇ ಆಗುತ್ತಾಳೆ ಅನ್ನಿಸಿತ್ತು..ಪ್ರೀತಿಗೆ “ನಾನೇ ಇದ್ದೀನಲ್ಲಾ “ಎನ್ನುವ ಮಾತು ಕಿವಿಯಲ್ಲಿ ಮಾರ್ದನಿಸಿ ಮನಸಿಗೆ ಮುದ ನೀಡಿತ್ತು.”ಹೌದಲ್ವಾ ನನ್ನ ಕೋತಿಯಾಟವನ್ನು ಸಹಿಸುವ ಈ ತುಂಟ ಪ್ರೀತಿಯ ಗಂಡ ಪ್ರೇಮ್ ಯಾಕಾಗಬಾರದು? ಪ್ರೀತಿ -ಪ್ರೇಮ್ ಎಂತಹ ಮುದ್ದಾದ ಜೋಡಿ ಹೆಸರುಗಳು …ಒಳ್ಳೆಯ ಕೆಲಸವಿದೆ …ಒಳ್ಳೆಯ ಮನಸ್ಸಿದೆ …ಅದಕ್ಕಿಂತ ಹೆಚ್ಚಾಗಿ ಈ ಒಂದು ವರ್ಷ ಎಷ್ಟು ಕಾಡಿಸಿದರೂ ನನ್ನ ಕೋತಿಯಾಟ ಸಹಿಸಿದ್ದಾನೆ …ಮೊದಲ ಸಲ ಮಾತ್ರವೇ ಅವನು ಕೋಪ ಮಾಡಿಕೊಂಡಿದ್ದು …ಯಾರಾದರೂ ಬೇರೆ ಹುಡುಗನಾಗಿದ್ದರೆ, ನೋಡದೇ ಈ ರೀತಿ ಸ್ನೇಹವಾಗಿದ್ದರೆ ಖಂಡಿತಾ ನೋಡಬೇಕೆಂದು ಹೇಳಿರುತ್ತಿದ್ದರು …ಇವನು ಯಾವತ್ತೂ ನನನ್ನು ನೋಡಬೇಕೆಂದು ಹಂಬಲಿಸಿಲ್ಲ ..ಒಂದೇ ಬಾರಿ ಅವನು ನಿನ್ನ ನೋಡಬೇಕೆಂದಿದ್ದ..ಆದರೆ ನಾನು ಒಪ್ಪದಿದ್ದಕ್ಕೆ ಮತ್ತೆಂದೂ ನೋಡಬೇಕೆಂದು ಕೇಳಿಲ್ಲ.ದಿನಕ್ಕೆ ಮೂರು ಬಾರಿ ಕಾಲ್ ಮಾಡ್ತಾನೆ …ನನಗೂ ಈಗೀಗ ಅವನೊಂದಿಗೆ ಮಾತಾಡದೆ ಇರಲಾರೆ ಅನ್ನಿಸುತ್ತದೆ …ಹಾಗಾದರೆ ಈ ಕೋತಿಯಂತ ಪ್ರೀತಿಯ ಹೃದಯದಲ್ಲಿ ಪ್ರೇಮವೆಂಬ ಹೂವರಳಿತಾ? ಅವನೇನಾದರೂ ನೋಡಲು ಕಪ್ಪಗಿದ್ದರೆ …ಮೂಗು ಸೊಟ್ಟಗಿದ್ದರೆ …ಕುಳ್ಳನಿದ್ದರೆ …..ಛೇ   ಇಲ್ಲಾ… ನಿಜವಾದ ಪ್ರೀತಿ ಇದನ್ನೆಲ್ಲಾ ನೋಡುವುದಿಲ್ಲ ….ಅಲ್ಲವೇ…”ಹೀಗೆ ಯೋಚಿಸುತ್ತ ನಿದ್ರೆಗೆ ಜಾರಿದ್ದಳು ಪ್ರೀತಿ

       ಹೀಗೆ ಅವನ ಹೃದಯದಲ್ಲಿ ಪ್ರೀತಿ….ಇವಳ ಹೃದಯದಲ್ಲಿ ಪ್ರೇಮ್….ಹೀಗೆ ಒಂದು ವರ್ಷ ಕಳೆಯುವುದರಲ್ಲಿ..ನೋಡದೇ ಆರಂಭವಾದ ಸ್ನೇಹ ಪ್ರೀತಿಯ ಬಳ್ಳಿಯಾಗಿ ಚಿಗುರಿತ್ತು…ಆದರೆ …ಹೇಳಿಕೊಳ್ಳುವುದು ಹೇಗೆ ಎನ್ನುವುದು ತಿಳಿಯಲಿಲ್ಲ ಇಬ್ಬರಿಗೂ.ಸರಿಯಾದ ಸಮಯಕ್ಕೆ ಕಾಯುತ್ತಿದ್ದರು ಅವನಿಗೆ ಗೊತ್ತಿಲ್ಲದೆ ಅವಳು ಅವಳಿಗೆ ಗೊತ್ತಿಲ್ಲದೆ ಇವನು…

ಆ ದಿನವೂ ಬಂದೇ ಬಿಟ್ಟಿತು….
ಪ್ರೀತಿಯೇ “ನಾನು ನಿನ್ನನ್ನು ನೋಡಬೇಕು ಕಣೋ…ಒಂದು ಸಾರಿ ಮೀಟ್ ಆಗೋಣ್ವಾ? “ಅಂದಾಗ ಪ್ರೇಮ್ ಗೆ “ರೋಗಿ ಬಯಸಿದ್ದೂ ಹಾಲು ಅನ್ನ ವೈದ್ಯ ಹೇಳಿದ್ದೂ ಹಾಲು ಅನ್ನ” ಅಂದಂತಾಗಿತ್ತು.ಅವನೂ ಹೂಂಗುಟ್ಟಿದ್ದ. ಪ್ರವಾಹಪೀಡಿತ ಪ್ರದೇಶದ ಜನರಿಗಾಗಿ ಹಣ ಸಂಗ್ರಹ ಮಾಡಲು ಪಾರ್ಕ್ ಹತ್ತಿರ ಹೋಗಬೇಕಿತ್ತು …ಸಂಜೆ ನಾಲ್ಕು ಗಂಟೆಗೆ ಅಲ್ಲಿಗೇ ಬರಲು ತಿಳಿಸಿದಳು…ಯಾವಾಗ ನಾಳೆ ಸಂಜೆಯಾಗುತ್ತದೆ ಎನ್ನುವ ತವಕ..ಪ್ರೇಮ್ ಇರುವ ಸ್ಥಳಕ್ಕೂ ಪ್ರೀತಿಯಿರುವ ಸ್ಥಳಕ್ಕೂ ಐದು ಗಂಟೆಗಳ ಪ್ರಯಾಣ ಮಾಡಬೇಕಿತ್ತು.ಅವತ್ತು ತನ್ನ ಮೇಲಾಧಿಕಾರಿಗೆ ಎಮರ್ಜೆನ್ಸಿ ನೆಪ ಹೇಳಿ ರಜೆ ಪಡೆದು ಪ್ರೀತಿ ಹೇಳಿದ ಪಾರ್ಕ್ ಗೆ ಹೊರಟಿದ್ದ..ಹೊರಡುವ ಮುನ್ನ ಪ್ರೀತಿಯಿಂದ ಪಾರ್ಕ್ ಇರುವುದೆಲ್ಲಿ ಎಂದು ತಿಳಿದುಕೊಂಡಿದ್ದ..ಬೈಕನ್ನ ಎಲ್ಲಿಯೂ ನಿಲ್ಲಿಸದೆ ಓಡಿಸಿದ್ದ.ಒಂದು ವರ್ಷದಿಂದ ನೋಡದೆಯೇ ಪ್ರೀತಿಸಿದ ಪ್ರೀತಿ ಕಣ್ಣೆದುರಿಗೆ ಬರುತ್ತಿದ್ದಾಳೆನ್ನುವ ಖುಷಿಗೆ ಎಲ್ಲೆಯೇ ಇರಲಿಲ್ಲ ..ಹೃದಯ, ಮನಸುಗಳು ಖುಷಿಯಿಂದ  ಹಕ್ಕಿಯಂತೆ ಹಾರುತ್ತಿದ್ದವು..ಖುಷಿಯಲ್ಲಿ ಮೂರು ಗಂಟೆಗೇ ಪ್ರೀತಿ ಹೇಳಿದ ಪಾರ್ಕ್ ತಲುಪಿದ್ದ .. ಬರುವ ಅವಸರದಲ್ಲಿ ಊಟವನ್ನೂ ಮಾಡಿರಲಿಲ್ಲ..ಹಸಿವೆಯ ಅರಿವೂ ಆಗಿರಲಿಲ್ಲ ಅವನಿಗೆ…ಹೊಟ್ಟೆ ಹಸಿವಾದ ಅರಿವಾದಾಗ ಅಲ್ಲಿಯೇ ನಿಂತು ಪಾರ್ಕ್ ಪಕ್ಕದಲ್ಲಿನ ಅಂಗಡಿಯಲ್ಲಿ ಜೂಸ್ ಕುಡಿಯುತ್ತ ಪ್ರೀತಿಗೆ ಪೋನಾಯಿಸಿದ. ಪ್ರೀತಿ ಇನ್ನೂ ತಯಾರಾಗುತ್ತಿದ್ದಳು, ಹತ್ತು ನಿಮಿಷಗಳಲ್ಲಿ ಅಲ್ಲಿರುತ್ತೇನೆಂದು ತಿಳಿಸಿ ತಯಾರಾಗುವ ಕಾರ್ಯ ಮುಂದುವರಿಸಿದಳು.ಪಿಂಕ್ ಚೂಡಿದಾರಿನಲ್ಲಿ ಪ್ರೀತಿ ಮುದ್ದಾಗಿ ಕಾಣುತ್ತಿದ್ದಳು..ತನ್ನ ಗೆಳತಿಯರಿಗೆ ಪ್ರವಾಹಪೀಡಿತ ಜನರಿಗಾಗಿ ಹಣ ಸಂಗ್ರಹಿಸಲು ಬರುವಂತೆ ಹೇಳಿದ್ದಳು…ಅವರಿಗೆ ಪಾರ್ಕ್ ಗ ಬರಲು ತಿಳಿಸಿ ಅವಳೂ ತನ್ನ ಸ್ಕೂಟಿಯೇರಿ ಪಾರ್ಕಿನತ್ತ ಓಡಿಸಿದಳು.ಅವನು ಹೇಗಿರಬಹುದೆನ್ನುವ ಪ್ರಶ್ನೆ ಇವಳ ಮನದಲ್ಲಿ, ಅವಳು ಹೇಗಿರಬಹುದೆನ್ನುವ ಪ್ರಶ್ನೆ ಅವನ ಮನದಲ್ಲಿ…

       ಪಾರ್ಕ ಹತ್ತಿರ ಸ್ಕೂಟಿ ಪಾರ್ಕ ಮಾಡಿ ಪಾರ್ಕ ಒಳನಡೆದಳು ಪ್ರೀತಿ ..ಗೆಳತಿಯರಿನ್ನೂ ಬಂದಿರಲಿಲ್ಲ.ಗಿಡವೆರಡು ಮರೆಯಾಗಿರುವ ಆಸನದಲ್ಲಿ ಕುಳಿತು ಪ್ರೇಮ್ ಗೆ ಕರೆ ಮಾಡಿದಾಗ ಅವನು ಪಾರ್ಕ ಹೊರಗಡೆ  ಇರುವುದು ತಿಳಿದು ಪಾರ್ಕ ಒಳಬರಲು ತಿಳಿಸಿದಳು ಪ್ರೀತಿ ..ಇಬ್ಬರ ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು.ಪಾರ್ಕನ ಒಳಬಂದವನು “ಎಲ್ಲಿದ್ದೀಯಾ?” ಎಂದು ಕೇಳಿದಾಗ “ನೀನು ಯಾವ ಬಣ್ಣದ ಬಟ್ಟೆ  ಹಾಕಿದ್ದಿಯಾ ಹೇಳು ನಾನೇ ಬರುತ್ತೇನೆ” ಎಂದಳು ಪ್ರೀತಿ.ಅವನು “ಲೈಟ್ ಪಿಂಕ್ ಟೀಶರ್ಟ್, ಬ್ಲ್ಯಾಕ್ ಪ್ಯಾಂಟ್ “ಎಂದಾಗ ಅವಳಿಗೆ ಆಶ್ಚರ್ಯ …ಅವಳೂ ಲೈಟ್  ಪಿಂಕ್ ಚೂಡಿದಾರ್ ಹಾಕಿದ್ದಳು  ..ಕಾಕತಾಳೀಯ…ಹಾಗೆಯೇ ಮುಂದೆ ಬಾಗಿ ನೋಡಿದಾಗ ಅವಳಿಗೆ ಅವನು ನೇರವಾಗೇ ಕಾಣುತ್ತಿದ್ದ …ಮುದ್ದಾದ ಗುಳಿ ಕೆನ್ನೆಯ ಹುಡುಗ …ಆಗಲೇ ಅವಳು ಆ ಮುದ್ದಾದ ಹುಡುಗನ ಕೆನ್ನೆಯ ಗುಳಿಯಲ್ಲಿ ಸಿಲುಕಿಕೊಂಡಿದ್ದಳು..ಏನೋ ಆಕರ್ಷಣೆಯಿದೆ ಅವನ ಮುಖದಲ್ಲಿ ಎನಿಸಿತು…ಅವಳು ಮೌನವಾಗಿದ್ದನ್ನ ನೋಡಿ “ಹೇ ಪ್ರೀತಿ ಎಲ್ಲಿದಿಯಾ ?ಎದುರುಗಡೆ ಬರ್ತಿನಿ ಅಂದವಳು ಮಾತಾಡ್ತಿಲ್ಲ? ಏನಾಯ್ತು?” ಎಂದಾಗ ಇವಳ ಮನದಲ್ಲಿ ಮತ್ತೆ ಕಾಡಿಸಿ ಮೋಜು ನೋಡುವ ಕೆಟ್ಟ ಯೋಚನೆ ಬಂದೇ ಬಿಟ್ಟಿತ್ತು. “ಇರು ಬಂದೆ “ಎಂದವಳೇ ಫೋನ್ ಸೈಲೆಂಟ್ ಮೋಡ್ ಗೆ ಹಾಕಿ ಗೆಳತಿಯರಿದ್ದಲ್ಲಿಗೆ ಬಂದಳು…ಅವರಾಗಲೇ ಇವಳಿಗೆ ಕರೆ ಮಾಡಿ ಮಾಡಿ ಸಾಕಾಗಿ …ಹುಂಡಿಗಳನ್ನು ಹಿಡಿದು ಪ್ರವಾಹನಿಧಿಗೆ ಜನರಿಂದ ಹಣ ಸಂಗ್ರಹಿಸುವುದರಲ್ಲಿ ತಲ್ಲೀನರಾಗಿದ್ದರು..ಪ್ರೇಮ್ ಗೆ ಹೊರಬರಲು ಹೇಳಿದ ಪ್ರೀತಿ ಗೆಳತಿಯರ ಗುಂಪು ಸೇರಿಕೊಂಡಳು ….ಹುಂಡಿ ಹಿಡಿದು ನಿಂತವಳು ಪ್ರೇಮ್ ನನ್ನು ಗಮನಿಸುತ್ತಿದ್ದಳು

ಪ್ರೀತಿಗೆ ಕರೆ ಮಾಡುತ್ತಿದ ಅವನ ಕಣ್ಣುಗಳು ಪ್ರೀತಿಯನ್ನು ಅರಸುತ್ತಿದ್ದವು.”ಬೆಕ್ಕಿಗೆ ಆಟ, ಇಲಿಗೆ ಪ್ರಾಣಸಂಕಟ”ಎನ್ನುವಂತಾಗಿತ್ತು ಪ್ರೇಮ್ ನ ಪಾಡು..ಪ್ರೇಮ್ ನಿಂದ ಹತ್ತು ಹೆಜ್ಜೆ ಅಂತರದಲ್ಲಿದ್ದಳು ಪ್ರೀತಿ.ಆದರೂ ಅವಳೇ ಪ್ರೀತಿ ಎಂದು ಗೊತ್ತಾಗಲಿಲ್ಲ ವಾಕಿಂಗ್ ,ರನ್ನಿಂಗ್  ಮಾಡುವ ಹುಡುಗಿಯರು,ಬಾಯ್ ಫ್ರೆಂಡ್ ಗೋಸ್ಕರ ಕಾದಿರುವ ಹುಡುಗಿಯರು, ಗೆಳತಿಯರೊಂದಿಗೆ ಹರಟುತ್ತಿರುವ ಹುಡುಗಿಯರು, ಪ್ರವಾಹ ನಿಧಿಗೆ ಹಣ ಸಂಗ್ರಹಿಸುತ್ತಿದ್ದ ಹುಡುಗಿಯರು…ಅಷ್ಟು ಜನ ಹುಡುಗಿಯರಲ್ಲಿ ಈ ಪ್ರೀತಿ ಯಾರು? ಇವಳೇಕೆ ಕಾಲ್ ತಗೋತಿಲ್ಲ…?ಕಾಡಿಸೋದರಲ್ಲಿ ಅದೇನ್ ಖುಷಿನೋ ಇವಳಿಗೆ….ನನಗಿಲ್ಲಿ ತಲೆ ಕೆಡುತ್ತಿದ್ದರೆ ಇವಳು ಆಟ ಆಡುತ್ತಿದ್ದಾಳೆ …ಆ ದೇವ್ರು ಏನಂತ ಸೃಷ್ಟಿ ಮಾಡಿದನೋ ಇವಳನ್ನ “ಎಂದು ಯೋಚಿಸುತ್ತಿದ್ದ ಅವನನ್ನು ನೋಡಿದರೆ ಇನ್ನೇನು ಮೊಬೈಲ್ ಎತ್ತಿ ಬಿಸಾಡುವ ಕೋಪ ಎದ್ದು ಕಾಣಿತ್ತಿತ್ತು ಪ್ರೇಮ್ ನ ಮುಖದಲ್ಲಿ.ಅವಳು ಪ್ರವಾಹ ಪೀಡಿತರಿಗೆ ಹಣ ಸಂಗ್ರಹಣೆಯಲ್ಲಿ ತೊಡಗಿ ಇವನನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಳು ….ಹೀಗೆ ಮೂರು ಗಂಟೆಗಳು ಉರುಳಿದ್ದವು..ಇನ್ನೇನು ಪಾರ್ಕ ಬಾಗಿಲು ಮುಚ್ಚುವ ಸಮಯ…ಅವನು ಬಾವುಕನಾಗಿದ್ದ …ಅವನನ್ನು ನೋಡಿ ಅಯ್ಯೋ !ಎನಿಸಿದರೂ ಪ್ರೀತಿಗೆ ಅವಳ ಕಾಡುವ ಆಟವೇ ಮುಖ್ಯವಾಗಿತ್ತು ….ಅಲ್ಲಿಯೇ ನಿಂತಿದ್ದ ಅವನನ್ನು ಪ್ರೀತಿ ಪ್ರವಾಹ ಪರಿಹಾರ ನಿಧಿಗೆ ಹಣ ಕೇಳಿದಾಗ ಮೊಬೈಲ್ ನೋಡುತ್ತಲೇ ಹುಂಡಿಗೆ ಹಣ ಹಾಕಿದ್ದ…ಅವಳ ಮುಖ ನೋಡಿದರೂ ಅವಳೇ ಪ್ರೀತಿ ಎನ್ನುವುದು ಹೇಗೆ ತಾನೇ ಗೊತ್ತಾಗಬೇಕು? ಸೆಕ್ಯೂರಿಟಿ ಗಾರ್ಡ್ ಪಾರ್ಕ್ ಬಾಗಿಲು ಮುಚ್ಚಿದ. ಸಹನೆ ಕಳೆದುಕೊಂಡ ಪ್ರೇಮ್ ಇನ್ನು ಇವಳ ಸಹವಾಸ ಸಾಕೆಂದುಕೊಂಡು ಬೈಕ್ ನತ್ತ ನಡೆದ. ಪ್ರೀತಿಯ ಗೆಳತಿಯರು ಅವಳಿಗೆ ವಿದಾಯ ಹೇಳಿ ತಮ್ಮ ಮನೆ ದಾರಿ ಹಿಡಿದರು.ಪ್ರೀತಿ ಬೇಗನೇ ತನ್ನ ಸ್ಕೂಟಿ ತೆಗೆದು ಸ್ವಲ್ಪ ಮುಂದೆ ಹೋಗಿ ಪ್ರೇಮ್ ಗೆ ಕರೆ ಮಾಡಿದಳು.ಕೋಪದಿಂದ ಕುದಿಯುತ್ತಿದ್ದ ಪ್ರೇಮ್ “ನೀನೇನು ಬೆಳದಿಂಗಳ ಬಾಲೆ ಸಿನಿಮಾ ಹೀರೋಯಿನ್ ಅನ್ಕೊಂಡಿದೀಯಾ?ಕಾಡಿಸೋಕೊಂದು ಮಿತಿಯಿದೆ…ಬರೀ ಭಾವನೆಗಳ ಜೊತೆ ಆಟವಾಡುವುದೇ ನಿನ್ನ ಕೆಲಸ …ಛೇ ! “ಎಂದು ಕಾಲ್ ಕಟ್ ಮಾಡಿದ ….ಪ್ರೀತಿ ” ನಿನ್ನ ಮುಂದೆ ಸ್ವಲ್ಪ ದೂರದಲ್ಲಿದ್ದೆನೆ ……ನೀನು ನನ್ನ ನೋಡಬೇಕೆಂದರೆ ಬೇಗ ಬಾ….ನಾನಂತೂ ನಿನ್ನ ನೋಡಿಯಾಯಿತು “ಎಂದು ಸಂದೇಶ ಕಳುಹಿಸಿದ್ದಳು …ದೂರದಿಂದ ಪ್ರೀತಿ ಕಾಣುತ್ತಿದ್ದಳು ….ಆದರೆ ಕತ್ತಲಾಗಿದ್ದರಿಂದ ಸರಿಯಾಗಿ ಕಾಣುತ್ತಿರಲಿಲ್ಲ. “ಓ ನನ್ನ ಪ್ರೀತಿ ಸಿಕ್ಕಿದಳು “ಎನ್ನುವ ಖುಷಿಯಲ್ಲಿ ಎಲ್ಲ ಕೋಪವನ್ನು ಮರೆತು ಬೈಕ್ ಸ್ಟಾರ್ಟ್ ಮಾಡಿದ.ಇವಳೂ ಸ್ಕೂಟಿ ಸ್ಟಾರ್ಟ್ ಮಾಡಿ ಜೋರಾಗಿ ಓಡಿಸಿದಳು…ಮುಂದೆ ದಾರಿಯಲ್ಲಿ ಮೂರು ತಿರುವುಗಳಿದ್ದುದು ಪ್ರೀತಿಗೆ ಮೊದಲೇ ಗೊತ್ತಿದ್ದರಿಂದ ಜೋರಾಗಿ ಓಡಿಸಿ ಎಡ ತಿರುವಿಗೆ ಸ್ಕೂಟಿ ತಿರುಗಿಸಿದಳು…ಎಷ್ಟೇ ವೇಗವಾಗಿ ಬಂದರೂ ಪ್ರೀತಿ ಪ್ರೇಮ್ ನ ಕಣ್ಣಿಗೆ ಕಾಣಲಿಲ್ಲ ..ಯಾವ ತಿರುವಿಗೆ ಹೋಗಬೇಕೆಂದು ತಿಳಿಯಲಿಲ್ಲ …ರಸ್ತೆಯ ತುಂಬಾ ಟ್ರಾಫಕ್ ಜಾಮ್ ಆಗಿತ್ತು ..ಏನು ಮಾಡುವುದು ಪ್ರೀತಿಗೆ ಕಾಲ್ ಮಾಡಿದರೆ  ಸೈಲೆಂಟ್ ಮೋಡ್ ನಲ್ಲಿದ್ದಿದ್ದರಿಂದ ಪ್ರೀತಿಗೆ ಗೊತ್ತೆ ಆಗಲಿಲ್ಲ.

           ” ಛೇ !ಇವಳೇನು ತ್ರಿಪುರ ಸುಂದರಿಯಾ? ಇವಳ ತಂಟೆ ಬೇಡ ನನಗೆ …ಈಗಾಗಲೇ ತಡವಾಗಿದೆ..ಪ್ರೇಮ್ ಬಲ ತಿರುವಿಗೆ ಹೊರಟರೆ ಆ ದಾರಿಯಿಂದ ನಾಲ್ಕು ಗಂಟೆಗಳಲ್ಲಿ ಮನೆ ತಲುಪಬಹುದೆಂದು ಮೊಬೈಲ್ ಇಂಟರನೆಟ್ ಲಿ ತಿಳಿದುಕೊಂಡ.ಬಲಕ್ಕೆ ಬೈಕ್ ತಿರುಗಿಸಿದ.ಇತ್ತ ವಿಧಿಯಾಟ ಬೇರೆಯೇ ಇತ್ತು …ವೇಗವಾಗಿ ಹೋಗುತ್ತಿದ್ದ ಪ್ರೀತಿಯು ಮುಂದೆ ಹೋಗುತ್ತಿದ್ದ ಒಂದು ಬೈಕ್ ಗೆ ಗುದ್ದಿ ರಸ್ತೆಯ ಬದಿಯಲ್ಲಿ ಬಿದ್ದಿದ್ದಳು..ಹಿಂದೆಯೇ ಬರುತ್ತಿದ ಲೋಡ್ ತುಂಬಿದ್ದ ಲಾರಿಯ ಚಕ್ರಗಳು ಅವಳ ಬಲಗಾಲ ಮೇಲೆ ಹಾಯ್ದು ಹೋಗಿದ್ದವು …..ರಸ್ತೆ ಬದಿ ನಿಲ್ಲಿಸಿದ್ದ ಕಲ್ಲಿಗೆ ಪ್ರೀತಿಯ ತಲೆ ಬಡಿದು ಪ್ರೀತಿ ಪ್ರಜ್ಞೆ ತಪ್ಪಿದ್ದಳು ……..

    ಪ್ರೀತಿ ಬದುಕಿದಳಾ?  ಪ್ರೇಮ್ ಪ್ರೀತಿಯ ಮುಖವನ್ನು ನೋಡಿದನಾ? …ಮುಂದಿನ ಭಾಗದಲ್ಲಿ …..

Facebook ಕಾಮೆಂಟ್ಸ್

Mamatha Channappa: ಬದುಕೆಂಬ ರೈಲಿನಲ್ಲಿ ಜೀವನಾನುಭವದ ದೊಡ್ಡ ಮೂಟೆಯನ್ನು ಹೊತ್ತು ನಡೆದಿರುವ ಪುಟ್ಟ ಪಯಣಿಗಳು ನಾನು.. ಕಾಕತಾಳೀಯವೆಂಬಂತೆ ರೈಲ್ವೆ ಇಲಾಖೆಯಲ್ಲೆ ಕೆಲಸಮಾಡುತ್ತ ಬದುಕು ಎಸೆದ ಪಂಥಗಳನ್ನು ಎದುರಿಸುತ್ತ ಸಾಗಿದ್ದೇನೆ. ಆ ಹಾದಿಯಲ್ಲಿ ಜೊತೆಗಾರರಾಗಿ ಸಾಥ್ ಕೊಟ್ಟ ಹವ್ಯಾಸಗಳು ಗೀಳುಗಳಾಗಿ ಆಗಾಗ ಪದಗಳಾಗಿಯೋ, ಕುಶಲ ಕಲೆಯ ರೂಪದಲ್ಲೋ, ಕುಂಚದಿಂದ ಹೊಮ್ಮಿದ ಚಿತ್ರವಾಗಿಯೋ ಅನಾವರಣವಾಗುತ್ತವೆ - ನೋವು, ನಲಿವುಗಳೆಲ್ಲದರ ಅಭಿವ್ಯಕ್ತಿಯಾಗುತ್ತವೆ.ಇದಕ್ಕಿಂತ ಹೆಚ್ಚು ಹೇಳಲೇನೂ ಇಲ್ಲ ; ಇದ್ದರು ಅವು ಅಭಿವ್ಯಕ್ತವಾಗುವುದು ಬರಹದಲ್ಲಿ ಭಾವನೆಗಳಾಗಿ...
Related Post