ಆತ್ಮ ಸಂವೇಧನಾ- 29
ಉಳಿದ ನಾಲ್ಕು ಕಪ್ಪು ಜೀವಿಗಳಲ್ಲಿ ಎರಡು ಜೀವಿಗಳು ತಿರುಗಿ ತಮ್ಮ ಕೇಂದ್ರದತ್ತ ಹೋಗಿದ್ದವು. ಮತ್ತೆರಡು ಜೀವಿಗಳು ಹೋಗಿ ಭೂಮಿಯಿಂದ ಸ್ವಲ್ಪವೇ ದೂರದಲ್ಲಿ ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಕಪ್ಪು ಜೀವಿಗಳ ಮಧ್ಯೆ ಸೇರಿಕೊಂಡವು.
ಭೂಮಿಯಿಂದ ತಮ್ಮ ಕೇಂದ್ರಕ್ಕೆ ತೆರಳಿದ ಜೀವಿಗಳು ಅಲ್ಲಿನ ಬಿಸಿರಕ್ತದ ಜೀವಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಭೂಮಿಯೆಡೆಗೆ ಹೊರಡದಂತೆ ನೋಡಿಕೊಂಡವು. ಎಲ್ಲರನ್ನೂ ಒಂದು ಕಡೆ ಸೇರಿಸಿ ತಮ್ಮ ದೇಹದಿಂದ ಕಪ್ಪು ಹೊಗೆಯನ್ನು ಸೂಸಿ ಆದಷ್ಟು ಬೆಳಕು ತಮ್ಮ ಕಡೆ ಬರದಂತೆ ನಿಯಂತ್ರಿಸಲು ಒದ್ದಾಡುತ್ತಿದ್ದವು.
ಅದು ಆ ಕ್ಷಣದ ವ್ಯವಸ್ಥೆಯಷ್ಟೆ. ಎರಡನೇ ಸೂರ್ಯನ ಪ್ರಭಾವ ಪೂರ್ತಿಯಾಗಿ ತಮ್ಮ ಸ್ಥಳವನ್ನು ನಾಶ ಮಾಡದಿರಲಿ ಎಂದು ಭೂಮಿಯನ್ನು ತಲುಪಿದ ಕಪ್ಪು ಜೀವಿಗಳು ಹೇಗಾದರೂ ಎರಡನೇ ಸೂರ್ಯನನ್ನು ತೆಗೆಯುತ್ತಾರೆ. ಅಲ್ಲಿಯವರೆಗೆ ತಮ್ಮವರನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಅವರ ಮೇಲಿತ್ತು.
ಮಬ್ಬಾದ ವಾತಾವರಣ. ಆದಷ್ಟು ಬೇಗ ಎರಡನೇ ಸೂರ್ಯನ ಅವಸಾನವಾಗಲಿ, ಕತ್ತಲು ಕರಾಳವಾಗಲಿ ಎಂದು ಬಯಸಿದವು ಆ ಜೀವಿಗಳು. ಅಷ್ಟೆ ಅಲ್ಲದೇ ಯುದ್ಧಕ್ಕೆ ಸಿದ್ಧವಾಗಿ ನಿಂತ ಉಳಿದ ಕಪ್ಪು ಜೀವಿಗಳು ಕೂಡ ಇತ್ತಕಡೆ ಬರದಂತೆ ನೋಡಿಕೊಳ್ಳಬೇಕು ಎಂಬುದೂ ಅವರ ಯೋಚನೆಯಾಗಿತ್ತು. ಅದರಿಂದಲೇ ಅವರ ಗುಂಪಿಗೂ ಕೂಡ ಎರಡು ಜೀವಿಗಳು ಹೋಗಿ ಸೇರಿಕೊಂಡಿದ್ದವು. ಪೂರ್ತಿಯಾಗಿ ಬದುಕುವ ನೀತಿಯನ್ನು ಕಳೆದುಕೊಂಡ ಜೀವಿಗಳು ಬಂದು ಇಲ್ಲಿರುವ ಉಳಿದ ಜೀವಿಗಳನ್ನು ಉತ್ತೇಜಿಸಿದರೆ ಅವುಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ ಅದಕ್ಕೆ. ಕೆಟ್ಟದ್ದು ಎಂಬುದಕ್ಕೆ ಪ್ರತಿಕ್ರಿಯೆ ಹೆಚ್ಚು,ಪ್ರಚೋದನೆಗೂ ಸಮಯ ಹಿಡಿಯುವುದಿಲ್ಲ. ಒಳ್ಳೆಯದೆಂಬುವುದು ಸಿಗುವುದು ಕಷ್ಟ. ಹುಡುಕಿ ಹೊರಟರೂ ಸಿಗುವುದಿಲ್ಲ. ಅದಕ್ಕೆ ನಿರಂತರವಾದ ಪ್ರಚೋದನೆ ಅಗತ್ಯ. ಪ್ರತಿಕ್ರಿಯೆಯೂ ನಿಧಾನವೇ. ವಿಶ್ವದಲ್ಲಿ ಮೊದಲು ಹುಟ್ಟಿದ್ದು ಕತ್ತಲು. ಕತ್ತಲನ್ನು ಓಡಿಸಲು ಬೆಳಕು ಜನಿಸಿದ್ದು. ಕೆಟ್ಟದ್ದು ಮೊದಲು ಹುಟ್ಟುವುದು; ಆಯಸ್ಸೂ ಕಡಿಮೆಯೇ. ಅದನ್ನು ನಾಶಪಡಿಸಲು ಹುಟ್ಟುವುದು ಧರ್ಮ. ಕತ್ತಲಿಗೆ ಬೇಗ ಪ್ರಚೋದನೆ ಮತ್ತು ಪ್ರತಿಕ್ರಿಯೆಗಳು ಸಿಗುತ್ತವೆ. ಬೆಳಕಿಗೆ ಸಮಯ ಹಿಡಿಯುತ್ತದೆ. ಕೊನೆಯಲ್ಲಿ ಉಳಿಯುವುದು ಒಳ್ಳೆಯದು ಮಾತ್ರ. ಕೆಟ್ಟದ್ದು ಕೊಡುವ ಫಲಿತಾಂಶ ಕ್ಷಣಿಕ.
ಬೆಳಕು ಸಾಯಲು ರಾತ್ರಿಯಾಗಬೇಕು;
ಕತ್ತಲು ಉಸಿರುಗಟ್ಟಲು ನಂದಾದೀಪ ಸಾಕು.
ಒಳ್ಳೆಯದು ಕೊಡುವ ಫಲಿತಾಂಶ ನಿರಂತರ. ಒಂದು ಸುಖ ಕೊಡುತ್ತದೆ, ಇನ್ನೊಂದು ತೃಪ್ತಿ. ಸುಖಕ್ಕೂ, ತೃಪ್ತಿಗೂ ವ್ಯತ್ಯಾಸವೇ ಇಲ್ಲ ಎನ್ನುವಷ್ಟೇ ವ್ಯತ್ಯಾಸ.
ಪ್ರತಿ ಸುಖವೂ ತೃಪ್ತಿ ಕೊಡುವುದಿಲ್ಲ;
ತೃಪ್ತಿ ಪರಿಪೂರ್ಣ ಸುಖ ಕೊಡುತ್ತದೆ.
ಸುಖಕ್ಕೆ ಸಮಯದ ಪರಿಧಿಯಿದೆ. ಸುಖ ನಿರಂತರವಲ್ಲ. ಪ್ರತಿ ತೃಪ್ತಿಯೂ ಅದೆಷ್ಟೋ ಸುಖದ ಕ್ಷಣಗಳನ್ನು ಕೊಡುತ್ತದೆ. ತೃಪ್ತಿಗೆ ಸಮಯದ ಕ್ಷಿತಿಜಗಳಿಲ್ಲ.
ತೃಪ್ತಿ ಎಂಬುದು ನಿಸ್ವಾರ್ಥ;
ತೃಪ್ತಿ ಕೊನೆಯ ಹಂತ.
ತೃಪ್ತಿಗೊಂಡ ಜೀವಿ ಮತ್ತೇನನ್ನೂ ಬಯಸುವುದಿಲ್ಲ, ಬೇಡಿ ಬರುವುದಿಲ್ಲ. ವಿಶ್ವ ಹೇಳುವುದೂ ಅದನ್ನೇ. ಸುಖ ಹುಡುಕುವ ಮುನ್ನ ತೃಪ್ತಿ ಇರಲಿ. ತೃಪ್ತಿ ಹೊಂದುತ್ತ ಹೋದಂತೆ ಜೀವ ಮಾಗುತ್ತದೆ. ಬದುಕು ಮುಕ್ತಾಯದತ್ತ ಸಾಗುತ್ತ ಹೋಗುತ್ತದೆ. ಆಗ ಸಾವಿನ ಭಯ ಆವರಿಸುವುದಿಲ್ಲ. ಪ್ರತಿಯೊಂದು ತೃಪ್ತಿಯೂ ಒಂದು ಅಂತ್ಯ. ಹಲವಾರು ಅಂತ್ಯಗಳು ಜೊತೆಯಾದಲ್ಲಿ ಕೊನೆಯಾಗುವ ಬಗೆಗಿನ ಭಯವೇ ಹೋಗಿಬಿಟ್ಟಿರುತ್ತದೆ. ಕೊನೆಗೆ ಅಂತ್ಯವೂ ಕೊನೆಯ ತೃಪ್ತಿಯಾಗಿ, ಸಂತೃಪ್ತಿಯಾಗಿ ನಿಲ್ಲುತ್ತದೆ.
ಅವೆರಡು ಜೀವಿಗಳ ಪ್ರಯತ್ನ ಫಲಿಸಿತ್ತು. ಆಗಷ್ಟೇ ಜೀವ ತಳೆದ ಅಲ್ಲಿನ ಜೀವಿಗಳು ಕ್ರೂರರಾಗಿರಲಿಲ್ಲ. ನಿಧಾನವಾಗಿ ಅವರ ದೇಹ ಮಬ್ಬು ವಾತಾವರಣಕ್ಕೆ ಹೊಂದಿಕೊಳ್ಳತೊಡಗಿತು. ಅದನ್ನು ನೋಡಿ ಅವೆರಡು ಕಪ್ಪು ಜೀವಿಗಳು ಹಿಗ್ಗಿದವು. ಅಲ್ಲಿ ಹುಟ್ಟುವ ಪ್ರತಿ ಜೀವಿಗೂ ಇತಿಹಾಸ ತಿಳಿದಿರುತ್ತದೆ. ತಮ್ಮವರು ಯುದ್ಧಕ್ಕೆ ಹೋಗಿದ್ದಾರೆ, ತಾವೂ ಅವರ ಜೊತೆ ನಿಲ್ಲಬೇಕು ಎಂದು ಬೇರೆಯವರು ಹೇಳಬೇಕಿಲ್ಲ. ಅಂತಹ ಸಮಯದಲ್ಲಿ ಅವೆರಡು ಜೀವಿಗಳು ಅವುಗಳನ್ನು ತಡೆದಿದ್ದವು. ಯುದ್ಧ ಒಳಿತಲ್ಲ ಎಂಬ ಭಾವನೆಯನ್ನು ಮೂಡಿಸಿದ್ದವು. ಅಲ್ಲಿ ಆ ಕ್ಷಣಕ್ಕೆ ಎಲ್ಲವೂ ಶಾಂತವಾಗಿಯೇ ಕಂಡವು.
ಯುದ್ಧಕ್ಕೆ ಸಿದ್ಧರಾದ ಕಪ್ಪು ಜೀವಿಗಳ ಗುಂಪಿನಲ್ಲಿ ಸೇರಿಕೊಂಡ ಉಳಿದೆರಡು ಎಲಿಯನ್ ಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದವು. ಹೇಗಾದರೂ ಅವುಗಳ ಮನವೊಲಿಸಲು ಸಾಧ್ಯವೇ? ಹಾಗೆ ಆಗದಿದ್ದಲ್ಲಿ ಅದೆಷ್ಟೊಂದು ಸಾವು-ನೋವುಗಳು? ಭೂಮಿ ಉಳಿಯುವುದು ಅನುಮಾನ.
ಯುದ್ಧದ ಮತ್ತು ರಕ್ತದ ರುಚಿ ನೋಡಿದ ಜೀವಿಗಳು ಅವುಗಳಿಂದ ದೂರ ಉಳಿಯುವುದು ಕಷ್ಟ. ಅದು ಕೂಡ ಒಂದು ಚಟದಂತೆ. ಚಟವೆಂದು ತಿಳಿಯುವವರೆಗೆ ಹವ್ಯಾಸವೇ ಆಗಿರುತ್ತದೆ. ಹೆಸರು ಬದಲಾದ ಮೇಲೆ ತೀರಲೇಬೇಕು ಆಸೆಗಳು.
ಚಟ ಎಂದರೇನು? ಬಿಡಲು ಸಾಧ್ಯವಿಲ್ಲದ್ದು. ನಾವದನ್ನು ಬಿಟ್ಟರೂ ಅದು ನಮ್ಮನ್ನು ಬಿಡಲೊಲ್ಲದು. ಮತ್ತೆ ಮತ್ತೆ ಮಾಡಬೇಕೆನ್ನಿಸುವಂಥದ್ದು. ಹವ್ಯಾಸವೆಂದರೂ ಅದೇನಾ?? ಚಟ ಮತ್ತು ಹವ್ಯಾಸಕ್ಕಿರುವ ವ್ಯತ್ಯಾಸವೇನು? ಒಂದು ಕತ್ತಲು, ಇನ್ನೊಂದು ಬೆಳಕು. ಒಂದು ಮಾಡಲೇಬಾರದ್ದು;ಇನ್ನೊಂದು ಮಾಡದಿದ್ದರೂ ಸರಿಯೇ.
ಯುದ್ಧವೂ ಚಟವೇ. ಕೊಲ್ಲುವುದೂ ಕೂಡ ಒಂದು ಮೋಜು. ಒಂದು ಜೀವಿಯನ್ನು ಕೊಲ್ಲುತ್ತಿದ್ದೇನೆ ಎಂಬ ಯೋಚನೆ ಎಂಥಹ ಭಾವವನ್ನು ಸೃಷ್ಟಿಸುತ್ತದೆ?ಕೊಲ್ಲುವಾಗಿನ ಮನಸ್ಸಿನ ಸ್ಥಿತಿಯಾದರೂ ಎಂಥದ್ದು? ಸಾವು ಬೇರೆ, ಕೊಲ್ಲುವಿಕೆಯೇ ಬೇರೆ.
ಸೈನಿಕರದು ಹೊಟ್ಟೆ ಪಾಡು ಹೋರಾಡುತ್ತಾರೆ;
ರಾಜ?? ಮೋಜು.. ಬೇಟೆಯಾಡುತ್ತಾನೆ.
ಯುದ್ಧದಲ್ಲಿ ಕೊಲ್ಲುವುದು, ಸಾಯುವುದು ಎರಡೂ ವಿಪರೀತತೆಗಳೇ. ಅದೊಂದು ಕಿಚ್ಚು. ಸತ್ತರೂ, ಕೊಂದರೂ ತಿಳಿಯದ ಉನ್ಮಾದ ಸ್ಥಿತಿ. ತಿಳಿಯುವ ಮನಸ್ಸೇ ಸತ್ತು ಹೋಗಿರುತ್ತದೆ. ಮನಸ್ಸನ್ನು ಮೊದಲೇ ಕೊಂದುಕೊಳ್ಳುತ್ತಾನೆ ಅವನು. ಸಾಯುವವನಿಗಿಂತ ಕೊಲ್ಲುವವನ ಮನಸ್ಸು ಮೊದಲು ಸತ್ತಿರುತ್ತದೆ. ಯುದ್ಧ ಎಂದರೆ ಇಷ್ಟೆ.
ಆ ಜೀವಿಗಳಿಗೂ ಅದೇ ಭಯ. ಯುದ್ಧದ ಮೋಜು ಕಂಡ ಜೀವಿಗಳು ಮತ್ತೆ ಹಿಂದಿರುಗುವುದಿಲ್ಲ. ಯುದ್ಧಕ್ಕೆ ಪ್ರಚೋದನೆ ನೀಡುತ್ತಾರೆ. ಆಗ ವ್ಯತಿರಿಕ್ತ ಪ್ರತಿಕ್ರಿಯೆಗಳು ಸಹಜ. ಹಾಗಾಗಬಾರದು. ಇಲ್ಲಿಗೇ ಕೊನೆಯಾಗಬೇಕು. ಅದಕ್ಕೇನಾದರೂ ಪರ್ಯಾಯ ಪರಿಚಯಿಸಬೇಕು ಎಂಬ ಭಾವ. ಇಂಥ ಭಾವ ಅವುಗಳಿಗೆ ತೃಪ್ತಿ ನೀಡುತ್ತಿತ್ತು. ಅದೇ ಬದುಕುವ ನೀತಿ. ಏಕೆಂದರೆ ಅವು ವಿಶ್ವದ ಖುಷಿಗಾಗಿ, ವಿಶ್ವದ ಒಳಿತಿಗಾಗಿ ಕ್ರಿಯಿಸುತ್ತಿದ್ದವು.
ನಿಸ್ವಾರ್ಥ ಸೇವೆ ಸುಖ ಕೊಡುತ್ತದೆ, ಅದಕ್ಕೂ ಮಿಗಿಲಾಗಿ ತೃಪ್ತಿ ಸಿಗುತ್ತದೆ.
ಸಮಯ ಓಡುತ್ತಲೇ ಇತ್ತು. ಉಳಿದಿರುವುದು ಕೇವಲ ಒಂದು ದಿನ. ಭೂಮಿಯಲ್ಲಿ ಏನು ನಡೆಯುತ್ತಿದೆ ಎಂದು ಆ ಜೀವಿಗಳಿಗೆ ತಿಳಿಯುತ್ತಿದೆ, ಹಾಗೆಯೇ ಉಳಿದ ಕಪ್ಪು ಜೀವಿಗಳಿಗೂ ಕೂಡ. ಆದರೆ ಯುದ್ಧಕ್ಕೆ ಸಿದ್ಧವಾದ ಕಪ್ಪು ಜೀವಿಗಳಿಗೆ ತಮ್ಮನ್ನು ವಿರೋಧಿಸಲು, ತಮ್ಮೆದುರೇ ನಿಲ್ಲಲು ಕಪ್ಪು ಜೀವಿಗಳೇ ಪಣ ತೊಟ್ಟಿವೆ ಎಂಬುದು ತಿಳಿದಿಲ್ಲ. ಆ ಸುಳಿವನ್ನು ಅವು ಬಿಟ್ಟುಕೊಟ್ಟಿರಲೇ ಇಲ್ಲ. ಇದೇ ಬದುಕುವ ನೀತಿಗಿರುವ ಶಕ್ತಿ.
ಯಾರೂ ತಮ್ಮನ್ನು ಎದುರಿಸಲಾರರು ಎಂಬುದು ಅವುಗಳಿಗೆ ಚೆನ್ನಾಗಿ ತಿಳಿದಿತ್ತು. ಮನುಷ್ಯನನ್ನು ಅಸಹ್ಯ ರೀತಿಯಲ್ಲಿ ಕೊನೆಗೊಳಿಸಬೇಕು ಎಂಬುದೇ ಅವುಗಳ ಗುರಿ.
ಅಸಹ್ಯವಾಗಿಯಲ್ಲ, ಅದಕ್ಕಿಂತಲೂ ಕ್ರೂರವಾಗಿ. ಎಚ್ಚರಿಸಿತು ಅವುಗಳ ಅಂತರಾತ್ಮ. ಸಮಯ ಕಳೆಯುತ್ತಲೇ ಇಲ್ಲ ಎಂದು ನೊಂದುಕೊಂಡವು ಕಪ್ಪು ಜೀವಿಗಳು. ಕ್ಷಣಗಳು ನಿಲ್ಲುತ್ತಲೇ ಇಲ್ಲ ಎಂದು ನೋವಾದ ಮನುಷ್ಯ. ಸಮಯ ಬೇರೆಯಲ್ಲ.. ಅದನ್ನು ನಿರ್ಧರಿಸುವ ಮಾನ ಅವುಗಳ ನಡುವೆಯೇ ವ್ಯತ್ಯಾಸ ಮೂಡಿಸಿತ್ತು.