X

ಕೊನೆಗೂ ಗೆದ್ದಿದ್ದು ರಾಜಕೀಯವಲ್ಲ, ಸದ್ಗುರುವಿನ ಆಧ್ಯಾತ್ಮಿಕ ಶಕ್ತಿ ಮಾತ್ರ..!

ಧೋ..ಧೋ ಎಂದು ಮಳೆ. ಮಿಸುಕಾಡಲು ಸಾದ್ಯವಾಗದಂತಹ ಟ್ರ್ಯಾಫಿಕ್ ಜ್ಯಾಮ್. ತಮ್ಮ ತಮ್ಮ ಗಾಡಿಗಳಿಂದ ಇಳಿದು ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ಕಾರ್ಯಕ್ರಮದ ಸ್ಥಳಕ್ಕೆ ನಡೆದೇ ಹೋಗುತ್ತಿರುವ ಜನ. ಎಲ್ಲರಿಗೂ ಒಂದೇ ಧಾವಂತ, ಕಾರ್ಯಕ್ರಮ ಶುರುವಾಗುವ ಮುನ್ನ ತಮ್ಮ ಸ್ಥಳಗಳಲ್ಲಿ ಕುಳಿತುಕೊಳ್ಳಬೇಕು.

ನಾನೂ ಆಟೋದಿಂದ ಇಳಿದೆ. ಅದನ್ನೇ ನಂಬಿಕೊಂಡರೆ ಕಾರ್ಯಕ್ರಮ ಮುಗಿವ ಮುನ್ನ ಸ್ಥಳ ಸೇರುವುದು ಅನುಮಾನವೇ ಆಗಿತ್ತು. ಕೆಲವು ಕ್ಷಣಗಳಲ್ಲಿಯೇ ತೊಯ್ದು ತೊಪ್ಪೆ. ಅದರ ನಡುವೆಯೂ ಬಸ್ ಒಂದರಿಂದ ಭಜನೆಯ ದನಿ ಕೇಳಿಬರುತಿತ್ತು. ಇಣುಕಿ ನೋಡಿದರೆ ಕೊಲಂಬಿಯಾದಿಂದ ಬಂದ ಆರ್ಟ್ ಆಫ್ ಲಿವಿಂಗ್’ನ ಅನುಯಾಯಿಗಳು. ಮುಂದೆ ಹೋಗಲೊಲ್ಲೆ ಅನ್ನುತ್ತಿದ್ದ ಬಸ್ಸಿನಲ್ಲಿಯೇ ಬದುಕುವ ತಮ್ಮ ಕಲೆಯನ್ನು ಅನುಭವಿಸುತ್ತಿದ್ದರು.

ಸುಮಾರು ಮೂರು ಕಿಲೋಮೀಟರ್’ಗಳ ಅವಿರತ ನಡಿಗೆಯ ನಂತರ ಗೇಟ್’ನ ತಲುಪಿಕೊಂಡೆ. ಅದಾಗಲೇ ಲಕ್ಷಾಂತರ ಜನ ಒಳಗೆ ಕುಳಿತಾಗಿತ್ತು. ಕಾರ್ಯಕ್ರಮ ಅಂದುಕೊಂಡಂತೆ ಐದು ಗಂಟೆಗೇ ಶುರುವಾಗಿತ್ತು. ಒಂದು ಗಂಟೆ ಮಳೆಗೆ ವೇದಿಕೆ ಬಿಟ್ಟು ಕೊಟ್ಟಂತಾಗಿತ್ತು ಅಷ್ಟೇ! ಆದರೆ ಆಗಸ ಬಿರಿದು ಸುರಿದ ಆ ಮಳೆಯೂ ಮುಮುಕ್ಷುಗಳ ಶ್ರದ್ದೆಯನ್ನು ಕದಡಿರಲಿಲ್ಲ.ಕಾರ್ಯಕ್ರಮವನ್ನು ಕೊನೆಯ ಕ್ಷಣದಲ್ಲಿ ತಡೆಯಲೆತ್ನಿಸಿದ ದುಷ್ಟ ಶಕ್ತಿಗಳಿಗೆ ಹಾಲು ಕುಡಿದಷ್ಟು ಸಂತಸ. ಪತ್ರಕರ್ತ ರಾಜ್’ದೀಪ್ ಸರ್ದೇಸಾಯ್ ಅಂತೂ ತನ್ನ ಒಂದು ಟ್ವೀಟಿನ ಮೂಲಕ ಒಳಗಿದ್ದ ವಿಷ ಕಾರಿಕೊಂಡೇ ಬಿಟ್ಟ, “ಮಾನವನನ್ನು ಗೆಲ್ಲಬಹುದು, ಪ್ರಕೃತಿಯನ್ನಲ್ಲ”  ಎಂದು ಸವಾಲೆಸೆದ. ಭಗವಂತನ ಲೀಲೆಯೇನೋ ಎಂಬಂತೆ ಅದಾದ ಕೆಲವು ನಿಮಿಷಗಳಲ್ಲಿಯೇ ಮೋಡ ಕರಗಿತು.ಬಿರು ಬಿಸಿಲು ಬಂತು ಕಾರ್ಯಕ್ರಮಕ್ಕೆ ಮುನ್ನ ತನ್ನೊಳಗಿನ ರಾಡಿಯನ್ನು ಕಳಕೊಂಡು ಯಮುನೆ ಶುಧ್ಧವಾಗಿತ್ತು. ಅಷ್ಟೇ ಅಲ್ಲ, ವೇದಿಕೆಯ ಹಿಂಭಾಗದಲ್ಲಿಯೇ ಅರಳಿ ನಿಂತಿದ್ದ ಕಾಮನಬಿಲ್ಲು ಪ್ರಸನ್ನನಾದ ಇಂದ್ರನ ದರ್ಶನವನ್ನು ಮಾಡಿಸಿತ್ತು. ವಿಶ್ವ ಆಧ್ಯಾತ್ಮಿಕ ಮೇಳಕ್ಕೆ ಭಗವಂತ ಇದಕ್ಕಿಂತ ಭಿನ್ನವಾಗಿ ಸ್ಪಂದಿಸುವುದಾದರೂ ಹೇಗೆ ಹೇಳಿ?!

ಒಂದು ತಿಂಗಳಿಂದೀಚೆಗೆ ರಾಷ್ಟ್ರವಿರೋಧಿ ಘೋಷಣೆಗಳಿಂದ ಕೊಳಕಾಗಿದ್ದ ದೆಹಲಿಯ ಗಲ್ಲಿಗಲ್ಲಿಗಳೂ ಶುಧ್ಧವಾಗಿ ಆಧ್ಯಾತ್ಮಿಕ ಪ್ರವಾಹಕ್ಕೆ ಅಣಿಯಾಗಿದ್ದವು!

ಆ ನಂತರದ್ದು ಬರಿಯ ಭಾರತ ವೈಭವವಷ್ಟೇ.೧೭೦೦ ಜನ ಕಥಕ್ ನೃತ್ಯ ಕಲಾವಿದರು ಬಿರ್ಜುಮಹಾರಾಜರ ಮಾರ್ಗದರ್ಶನದಲ್ಲಿ ನರ್ತಿಸಿ ಲಕ್ಷಾಂತರ ಜನರ ಮನಸೂರೆಗೊಂಡರು. ಅದಾದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹಾಪೂರ. ಯಾವುದೂ ಹತ್ತು ನಿಮಿಷ ದಾಟದ ಕಾರ್ಯಕ್ರಮಗಳು. ಆದರೆ ಸಾವಿರಾರು ಜನ ಭಾಗವಹಿಸುವ ಕಾರ್ಯಕ್ರಮಗಳು! ವೇದಿಕೆಯಲ್ಲಿ ಬಗೆ-ಬಗೆಯ ಕಾರ್ಯಕ್ರಮಗಳು ಅನಾವರಣಗೊಳ್ಳುತ್ತಿದ್ದಂತೆ, ಜನರ ಮುಗಿಲುಮುಟ್ಟುವ ಉದ್ಘೋಷ.

ಈ ನಡುವೆ ಮಾತನಾಡಲು ನಿಂತವರು ಆರ್ಟ್ ಆಫ್ ಲಿವಿಂಗ್’ನ ಸಂಸ್ಥಾಪಕ ಶ್ರೀಶ್ರೀ ರವಿಶಂಕರ ಗುರೂಜಿ. ನನ್ನ ಅಕ್ಕಪಕ್ಕದಲ್ಲಿ ಕುಳಿತಿದ್ದ ಅನ್ಯದೇಶದ ಜನರೂ ಏಕಕಂಠದಲ್ಲಿ ಕೂಗಾಡುವಾಗ ಒಮ್ಮೆ ಮೈಯಲ್ಲಿ ವಿದ್ಯುತ್ಸಂಚಾರವಾದಂತಾಯಿತು. ಅಲ್ಲವೇ ಮತ್ತೆ? ಯಾವುದನ್ನು ರಾಜ್ಯ,ಪ್ರಭುತ್ವ ಮಾಡಲಾಗದೋ ಅದನ್ನು ಆಧ್ಯಾತ್ಮಿಕ ನೇತಾರನೊಬ್ಬ ಮಾಡುತ್ತಾನೆನ್ನುವುದು ಸಾಬೀತಾಗಿ ಹೋಯ್ತು. ರಾಜನಿಗೆ ಆಯಾ ರಾಜ್ಯ ದೇಶಗಳಲ್ಲಷ್ಟೇ ಗೌರವ. ಸಜ್ಜನರಿಗೆ ಜಗತ್ತಿನಲೆಲ್ಲಾ ಗೌರವ ಎಂಬುದು ಮತ್ತೆ ಖಾತ್ರಿಯಾಯಿತು. ಈ ಎಲ್ಲ ಕೂಗಾಟಗಳು ಇದ್ದಕ್ಕಿದ್ದಂತೆ ಮುಗಿದು ಇಡಿಯ ಆವರಣ ಒಮ್ಮೆಗೇ ಸ್ಥಬ್ದವಾಯಿತು. ಅನುಮಾನವೇ ಇಲ್ಲ, ಈ ಎಲ್ಲಾ ಸಂಭ್ರಮಗಳ ಹಿಂದಿನ ಸೂತ್ರಧಾರನ ಮಾತು ಶುರುವಾಗಿತ್ತು.”ನಾನು ನಿಮಗೆ ಸೇರಿದವನು” ಎನ್ನುವುದರೊಂದಿಗೆ ಆರಂಭವಾದುದು ಸಲಿಲ ಧಾರೆಯಂತೆ ಹರಿದರೂ ಅಲ್ಲಲ್ಲಿ ಸ್ವಲ್ಪ ಜೋರಾಗಿಯೇ ಇತ್ತು. “ಈ ಸಂಭ್ರಮವನ್ನು ವೈಯಕ್ತಿಕ ಪಾರ್ಟಿ ಅಂತಾರೆ, ಅವರು ಹೇಳಿದ್ದು ಸರಿಯೇ, ಏಕೆಂದರೆ ಇಡಿಯ ವಿಶ್ವವೇ ನನ್ನ ಕುಟುಂಬ” ಎನ್ನುವಾಗ ಮಾಧ್ಯಮಗಳ ಅನೇಕರ ಮುಖಗಳು ಹುಳ್ಳಗಾಗಿರಲಿಕ್ಕೆ ಸಾಕು.”ಆಟಗಳು,ಕಲೆ,ವ್ಯಾಪಾರ, ವಿಜ್ಞಾನ ಮತ್ತು ಆಧ್ಯಾತ್ಮ ಇವು ಜಗತ್ತನ್ನು ಬೆಸೆಯಬಲ್ಲಂಥ ಶಕ್ತಿಗಳು” ಎಂಬುದನ್ನು ಅವರು ಮತ್ತೊಮ್ಮೆ ನೆನಪಿಸಿಕೊಟ್ಟರು.

ಫ್ರಾನ್ಸ್’ನ ಮಾಜಿ ಪ್ರಧಾನಮಂತ್ರಿ ಡಾಮಿನಿಕ್ ವಿಲೇಪಿನ್, ನೇಪಾಳದ ಪ್ರಧಾನಮಂತ್ರಿ ಕಮಲ್ ಥಾಪಾ, ಶ್ರೀಲಂಕಾ ಸದನದ ಸ್ಪೀಕರ್ ಕರು ಜಯಸೂರ್ಯ ಹೀಗೆ ಅನೇಕರು ಭಾಗವಹಿಸಿ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಮೆರಗು ತಂದಿದ್ದರು. ಲ್ಯಾಟಿನ್ ಅಮೇರಿಕಾ ಭಾಗದ ಮುಖ್ಯಸ್ಥರೊಬ್ಬರು ಭಾರತವನ್ನು “ವಿಶ್ವಗುರು” ಎಂದು ಸಂಬೋಧಿಸಿದ್ದು ರೋಮಾಂಚನವಾಗಿತ್ತು.

ಈ ನಡುವೆ ಅರ್ಜೆಂಟೈನಾದ ಸ್ಥಳೀಯ ನರ್ತಕರು, ವಾದ್ಯ ವೃಂದದವರು ತಮ್ಮ ರಾಷ್ಟ್ರದ ಸಂಗೀತ-ನೃತ್ಯಗಳ ಪ್ರದರ್ಶನ ಮಾಡುತ್ತಲೇ ಮಧ್ಯೆ “ಶ್ರೀರಾಮ ಜಯರಾಮ ಜಯ ಜಯ ರಾಮ” ಎಂದು ಭಜನೆಮಾಡಲು ಆರಂಭಿಸಿದಾಗ ಮತ್ತೊಮ್ಮೆ ಯಮುನೆಯ ಆವರಣ ಕುಣಿಯಲಾರಂಭಿಸಿತ್ತು. ಅದೊಂದು ಮರೆಯಲಾಗದ ಅನುಭವ. ನಮ್ಮ ದೇಶದಲ್ಲಿಯೇ ಅನೇಕರು ಅಜ್ಞಾನಿಗಳಾಗಿ ರಾಮನ ಕುರಿತಂತೆ ಅಪಸವ್ಯಗಳನ್ನಾಡುತ್ತಿದ್ದರೆ, ಯಾವುದೋ ರಾಷ್ಟ್ರದ ಜನ ಅವನ ನಾಮದಿಂದ ಪುಳಕಿತರಾಗುತ್ತಿದ್ದುದು ರೋಮಾಂಚನಕಾರಿಯಲ್ಲದೇ ಮತ್ತೇನು?

ಮೋದಿಯವರ ಭಾಷಣ ಶುರುವಾದಾಗಲೂ ಹಾಗೆಯೇ ಎಲ್ಲೆಲ್ಲೂ ವಿದ್ಯುತ್ ಸ್ಪರ್ಶದ ಅನುಭವ. ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿದ ಮೋದಿ ಮಳೆಯಲ್ಲಿ ತೋಯ್ದಿದ್ದ ಜನರನ್ನು ಬೆಚ್ಚಗಾಗಿಸಿದ್ದರು. ಅದಾಗಲೇ ಅವರ ಭಾಷಣದ ತುಣುಕುಗಳು ಫೇಸ್’ಬುಕ್, ವಾಟ್ಸಾಪ್’ಗಳಲ್ಲಿ ಅಡ್ಡಾಡಲಾರಂಭಿಸಿದೆ.ನೀವೂ ನೋಡಿಯೇ ಇರುತ್ತೀರಿ.

ಒಂದಂತೂ ಸತ್ಯ. ಇಂತಹದೊಂದು ಅದ್ಭುತ ಕಾರ್ಯಕ್ರಮದ ಕಲ್ಪನೆ ಮಾಡಿಕೊಳ್ಳಲೂ ಸಾಮಾನ್ಯದವನಿಂದ ಸಾಧ್ಯವಿಲ್ಲ. ಅಂತಹುದರಲ್ಲಿ ಈ ಬಗೆಯ ವೇದಿಕೆಯೊಂದನ್ನು ಸೃಷ್ಟಿಸಿ ಜಗತ್ತಿನ ಮುಂದೆ ಭಾರತವನ್ನು ಪ್ರದರ್ಶಿಸುವ ಎದೆಗಾರಿಕೆ ಶ್ರೀರವಿಶಂಕರ್ ಗುರೂಜಿಯಂತಹ ಕೆಲವರಿಗೆ ಮಾತ್ರ ಸಾಧ್ಯ. ಇಷ್ಟಕ್ಕೂ ಭಾರತ ಜಗತ್ತನ್ನು ಆಳಬೇಕಾಗಿರುವ ರೀತಿ ಇದೇ. ಯು.ಎ.ಇ’ಯಿಂದ ಬಂದಿದ್ದ ಗಣ್ಯರೊಬ್ಬರು ಮಾತನಾಡಿ ಈ ರೀತಿಯ ಆಧ್ಯಾತ್ಮಿಕ ಮೇಳಗಳು ಭಾರತಕ್ಕೆ ಹೊಸತಲ್ಲ ಎನ್ನುವಾಗ ಯಾಕೋ ಎದುಯುಬ್ಬಿ ಬಂದಿತ್ತು. ಅಶೋಕನ ಕಾಲದಲ್ಲಿ ನಡೆದ ಬೌದ್ಧ ಧರ್ಮ ಸಮ್ಮೇಳನಕ್ಕೆ ಜಗತ್ತಿನ ದಶ ದಿಕ್ಕುಗಳಿಂದಲೂ ಜನ ಧಾವಿಸಿ ಬಂದಿದ್ದರಂತೆ. ಆನಂತರ ನಡೆದಿರಬಹುದಾದ ಸರ್ವಶ್ರೇಷ್ಠ ಸಮಾರಂಭ ಇದೇ ಇರಬೇಕು! ಜಗತ್ತಿನ ೧೫೦ ರಾಷ್ಟ್ರಗಳ ಜನ ಪ್ರೀತಿಯ ಆಹ್ವಾನಕ್ಕೆ ಮಣಿದು ಧಾವಿಸಿ ಬರುವುದನ್ನು ನೀವು ಊಹಿಸುವುದೂ ಸಾಧ್ಯವಿಲ್ಲ ಬಿಡಿ. ನಮ್ಮ ಬದ್ಧವೈರಿ ಪಾಕಿಸ್ತಾನದಿಂದಲೂ ೮೦ ಜನ ಆಗಮಿಸಿ ಭಾರತದ ವೈಭವ ಪ್ರದರ್ಶಿತವಾಗುವ ಈ ಕಾರ್ಯಕ್ರಮದಲ್ಲಿ ತಮ್ಮ ದೇಶದ ಧ್ವಜ ಹಿಡಿದು ಪಾಲ್ಗೊಳ್ಳುವುದನ್ನು ಕಂಡು ನಾನಂತೂ ಪುಳಕಿತನಾಗಿದ್ದೆ.

ಬಗೆ-ಬಗೆಯ ಕದನಗಳಲ್ಲಿ ಮುಳುಗಿಹೋಗಿರುವ ಜಗತ್ತಿಗೆ ಮುಕ್ತಿಯ ಪರಿಹಾರ ಮಾರ್ಗ ಭಾರತವೊಂದೇ ಎಂಬುದನ್ನು ಸಾಬೀತು ಪಡಿಸುವಂತಿತ್ತು ಇಡಿಯ ಆಯೋಜನೆ.

ಎಲ್ಲಕ್ಕೂ ಮಿಗಿಲಾದ ಆನಂದ ಯಾವುದು ಗೊತ್ತೇ? ನಾಲ್ಕಾರು ವಾರಗಳ ಹಿಂದೆ ಇದೇ ದಿಲ್ಲಿಯಲ್ಲಿ ಒಂದಷ್ಟು ವಿದ್ಯಾರ್ಥಿಗಳು ಭಾರತವನ್ನು ತುಂಡು-ತುಂಡು ಮಾಡುವ ಘೋಷಣೆ ಕೂಗಿದ್ದರು. ಇಂದು ಅದೇ ದೆಹಲಿಯಲ್ಲಿ ಭಾರತ ಅಖಂಡವಾಗಿ, ವಿಶ್ವವೇ ತಾನಾಗಿ ಮೈವೆತ್ತು ನಿಂತಿದೆ. ವಾರೆವ್ಹಾ!

ಕಾರ್ಯಕ್ರಮ ಮುಗಿದು ಮರಳಿ ಬರುವಾಗ ರಸ್ತೆಯೆಲ್ಲ ಕೆಸರುಮಯವಾಗಿತ್ತು. ವಿದೇಶದಿಂದ ಬಂದ ಭಕ್ತರು ಕೆಸರಿನಲ್ಲಿ ಕಷ್ಟ ಪಟ್ಟು ಕಾಲಿಟ್ಟು ನಡಕೊಂಡು ಹೋಗುವಾಗ ಅಯ್ಯೋ ಎನಿಸುತ್ತಿತ್ತು .ಈ ಜಾಗಕ್ಕೆ NGT ೫ ಕೋಟಿ ರೂಪಾಯಿ ಕೇಳಿತ್ತಾ ಅಂತ ಅನೇಕರಿಗೆ ಅಸಹ್ಯವಾಗಿರಲ್ಲಿಕ್ಕೂ ಸಾಕು. ಬಸ್ಸಿಗಾಗಿ ಆಟೋ-ಕಾರುಗಳಿಗಾಗಿ ಪರದಾಡುವ ಜನರನ್ನು ಕಂಡಾಗ ಸರ್ಕಾರಗಳು ನಾಯಕರು ಅದೆಷ್ಟು ಕೈಲಾಗದವರಾಗಿ ಬಿಟ್ಟಿದ್ದಾರೆಂದು ಅನುಕಂಪ ಹುಟ್ಟಿತ್ತು. ನಿಜ, ಆಧ್ಯಾತ್ಮ ಗುರು ಜಗತ್ತಿಗೆ ಶ್ರೇಷ್ಠ ಭಾರತದ ದರ್ಶನ ಮಾಡಿಸಿದ್ದರೆ. ರಾಜಕೀಯ ನಾಯಕರು ಕೊಳಕು ದೆಹಲಿ ಮತ್ತು ಅವ್ಯವಸ್ಥೆಯ ದೈನೇಸಿತನದ ಪ್ರದರ್ಶನ ಮಾಡಿದ್ದರು.

ಕೊನೆಗೂ ಗೆದ್ದದ್ದು ರಾಜಕೀಯದ, ಅಧಿಕಾರದ, ಮಾಧ್ಯಮದ ಶಕ್ತಿಯಲ್ಲ ಬದಲಿಗೆ ಸದ್ಗುರುವಿನ ಆಧ್ಯಾತ್ಮಿಕ ಶಕ್ತಿ ಮಾತ್ರ.!

ನಾಳೆ ನಿರೀಕ್ಷಿಸಿ: ಲೈವ್ ಫ್ರಾಮ್ ವರ್ಲ್ಡ್ ಕಲ್ಚರಲ್ ಫೆಸ್ಟಿವಲ್  -2

Facebook ಕಾಮೆಂಟ್ಸ್

Chakravarthy Sulibele: ನಾಡಿನ ಖ್ಯಾತ ಚಿಂತಕರೂ, ವಾಗ್ಮಿಗಳೂ, ಬರಹಗಾರರೂ ಆಗಿರುವ ಶ್ರೀ ಚಕ್ರವರ್ತಿ ಸೂಲಿಬೆಲೆಯವರು, ನಿತ್ಯ ನಿರಂತರವಾಗಿ ದೇಶದ ಜನರಲ್ಲಿ ರಾಷ್ಟ್ರ ಭಕ್ತಿಯನ್ನು ಉಕ್ಕಿಸುತ್ತಾ ದೇಶಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
Related Post