ಪರೀಕ್ಷೆಗೆಂದು ಓದಲು ಕುಳಿತಾಗ ಇಲ್ಲಸಲ್ಲದ್ದು ನೆನಪಾಗುವುದು ಹೆಚ್ಚು. ಚಿಂತನೆ ವಿಷಯದ ಆಳಕ್ಕಿಳಿಯುವ ಬದಲು ಮನಸ್ಸಿನ ಆಳಕ್ಕೆ ಇಳಿಯುತ್ತದೆ. ಎಲ್ಲೋ ಹುದುಗಿದ್ದ ನೆನಪನ್ನು,ಭವಿಷ್ಯದ ಕನಸನ್ನು ಹೆಕ್ಕಲು ಶುರುಮಾಡುತ್ತದೆ ಆಲಸಿ ಮನಸ್ಸು. ಹಾಗೆ ನೆನಪುಗಳ ಸರಮಾಲೆಯಿಂದ ಮೂಡಿ ಬಂದ ಮುತ್ತಿನಂತ ನೆನಪು ಆಲೆಮನೆ. ಈಗ ಮಲೆನಾಡಿನಲ್ಲಿ ಆಲೆಮನೆಯ ಸೀಸನ್ನು.ಸಿಹಿಕಬ್ಬಿನ ಹಾಲು ಹಿಂಡಿ, ಜೋನೆ ಬೆಲ್ಲ ತೆಗೆಯುವ ಆ ಸಂಭ್ರಮ ನೆನದರೆ ಬೆಲ್ಲದ ಪರಿಮಳ ಮನಸಿಗೆ ಸೋಕುವುದು.
ನಾನು ಚಿಕ್ಕವಳಿದ್ದಾಗಿನಿಂದಲೂ ಆಲೆಮನೆಯನ್ನು ಹತ್ತಿರದಿಂದ ನೋಡಿ, ಅದರ ರುಚಿ ಸವಿದಿದ್ದೇನೆ. ಈಗಲೇ ಓದುವ ಹುಚ್ಚಿನಲ್ಲಿ ಅದು ನನ್ನಿಂದ ದೂರಾಗಿದ್ದು. ಮನೆಯ ಹತ್ತಿರದಲ್ಲೇಆಲೆಮನೆಯ ಅಂಗಳ. ಚಪ್ಪರ ಹಾಕಿ, ಒಲೆ ಮೆತ್ತಿ, ಗಾಣ ಹೂಡುವ ಜಾಗ ಚೊಕ್ಕಗೊಳಿಸಿ, ಕಬ್ಬಿನ ಹಾಲು ತುಂಬಲು ದೊಡ್ಡ ದೊಡ್ಡ ಬಾನಿ (ಡ್ರಮ್) ಸಿದ್ಧಗೊಳಿಸಿ, ಹಾಲು ಬರುವ ಮಾರ್ಗಕ್ಕೆ ಪೈಪ್ಜೋಡಿಸಿ ಊರಿನವರೆಲ್ಲರು ಆಲೆಮನೆಯ ಶೃಂಗಾರ ಮಾಡುತ್ತಿದ್ದರೆ, ನಾವು ಮಕ್ಕಳು ಅವರ ಕಾಲು ಕಾಲಿಗೆ ಸಿಕ್ಕಿ, ಅವರಿಂದ ಬೈಸಿಕೊಳ್ಳುತ್ತಾ, ಎರಡೇಟು ತಿಂದಿದ್ದೂ ಉಂಟು! ಗುಡಿಸಿ, ಸಾರಿಸಿದಮನೆಯಲ್ಲಿ ಎರಡು ತೆಂಗಿನ ಕಾಯಿಯ ದೇವರ ಮುಡಿಗೆ ನಾಲ್ಕು ಹೂ ಮುಡಿಸಿ ಫೈನಲ್ ಟಚ್ ಕೊಡುತ್ತಿದ್ದರು.
ದೊಡ್ಡದೊಂದು ಲಾರಿಯಲ್ಲಿ ಕೊಪ್ಪರಿಗೆ, ಗಾಣ, ಪಾಕದ ಮರಿಗೆ ಬಂದಿಳಿದಾಗ ಓಡಿ ಹೋಗಿ ಅದರ ಮುಂದೆ ನಿಂತು, ಎಷ್ಟು ದೊಡ್ಡದಾಗಿದೆ ಎಂಬ ಉದ್ಗಾರ! ಗಾಣದವನು ಕೋಣಗಳನ್ನುಹೊಡೆದುಕೊಂಡು ಬಂದಾಗ ಅದಕ್ಕೆ ಹುಲ್ಲು, ಅಕ್ಕೊಚ್ಚು ಕೊಟ್ಟು ಸತ್ಕರಿಸುವ ಕೆಲಸ ನಮ್ಮದು. ತಿನ್ನಲಿಕ್ಕೆ ಕಬ್ಬನ್ನು ಆಯ್ದಿಟ್ಟುಕೊಳ್ಳುವ ಅಬ್ಬರದಲ್ಲಿ ಅದೆಷ್ಟು ಬಾರಿ ಕಬ್ಬಿನ ಗದ್ದೆಯಲ್ಲಿ ಬಿದ್ದಿದ್ದೇವೆಯೊಲೆಕ್ಕಕ್ಕಿಲ್ಲ. ಕೋಣನಕುಂಟೆ ಕಬ್ಬು ತಿನ್ನಲಿಕ್ಕೆ ಗಟ್ಟಿ, ಅದರೂ ಅದೇ ಬೇಕು. ಅಜ್ಜ ಆರಿಸಿ ಕೊಡುತ್ತೇನೆಂದರೆ, ಅವನನ್ನು ಬದಿಸರಿಸಿ ನಾವೇ ಹೆಕ್ಕಿಟ್ಟುಕೊಳ್ಳುತ್ತಿದ್ದೆವು. ನಾನು ತೆಗೆದುಕೊಂಡ ಕಬ್ಬೇತಮ್ಮನಿಗೆ ಬೇಕು, ಅದಕ್ಕೆ ಜಗಳ, ಸಣ್ಣದೊಂದು ಫೈಟು! ಜೊತೆಗೆ ಕಬ್ಬಿನ ಗರಿಯಲ್ಲಿ ಮೈಕೈ ಬರೆ ಮಾಡಿಕೊಂಡು ಅಮ್ಮನ ಹತ್ರ ಬೈಸಿಕೊಳ್ಳುವುದು.
ಬೆಳಗಿನ ಜಾವ ನಾಲ್ಕು ಗಂಟೆಗೆ ಗಾಣ ಹೂಡಿ, ಕೋಣ ತಿರುಗಿಸಿ ಕಬ್ಬಿನ ಹಾಲು ತೆಗೆಯುತ್ತಿದ್ದರು. ಚಳಿಯಲ್ಲಿ ಮುದುರುತ್ತಾ, ಅಜ್ಜನ ಎಬ್ಬಿಸಿಕೊಂಡು ಐದು ಗಂಟೆಗೇ ಆಲೆಮನೆಗೆ ನಮ್ಮಸವಾರಿ ಸಾಗುತ್ತಿತ್ತು. ಅಪ್ಪ ಬೈಯದಂತೆ ತಡೆಯಲು ಅಜ್ಜನ ಜೊತೆ ನಮಗೆ!! ತಂಪಾದ ಕಬ್ಬಿನ ಹಾಲು ಕುಡಿದು, ಕೋಣದ ಹಿಂದೆ ಸುತ್ತುತ್ತ ನಾವೇ ಗಾಣದವರಂತೆ ಸ್ಕೋಪ್ ಕೊಡೋದ್ರಲ್ಲಿ ಮಜಇರ್ತಿತ್ತು. ಹಾಲಿನ ಬಾನಿ ಎಷ್ಟೊತ್ತಿಗೆ ತುಂಬತ್ತೆ ಅಂತ ಕಾಯುವುದು, ಕೊಪ್ಪರಿಗೆಯ ಬಿಸಿ ನೊರೆ ಬೆಲ್ಲಕ್ಕೆ ಹಾತೊರೆಯುವುದನ್ನು ನೆನಪಿಸಿಕೊಂಡ್ರೆ ಈಗ ನಗು ಬರುತ್ತೆ. ಬಾಳೆ ಎಲೆಯ ದೊನ್ನೆಯಲ್ಲಿಬಿಸಿ ಬಿಸಿ ಬೆಲ್ಲ ಹಾಕಿಕೊಂಡು, ಕಬ್ಬಿನ ಗರಿಯ ಪುಟ್ಟ ಚಮಚದಲ್ಲಿ ತಿನ್ನುವಾಗ ಅದೆಷ್ಟು ಬಾರಿ ನಾಲಿಗೆ ಚುರ್ ಅಂದಿದೆಯೋ ನೆನಪಿಲ್ಲ.
ಹೊತ್ತೇರಿದಂತೆ ಆಲೆಮನೆಯಲ್ಲಿ ಗಾಣಗಳು ಕೆಲಸ ನಿಲ್ಲಿಸುತ್ತಿದ್ದವು. ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ನಾವೇ ಆಲೆಮನೆಗೆ ಯಜಮಾನರು.. ನಾಯಿ, ದನಗಳಿಂದ ಆಲೆಮನೆ ರಕ್ಷಿಸುವ ಮಹತ್ತರಜವಾಬ್ದಾರಿ ನಮ್ಮ ಹೆಗಲಿಗೆ. ಆಗ ನಾವು ಮಾಡಿದ ಪುಂಡಾಟದಿಂದ ಅಪ್ಪನಿಂದ ಹುಣಸೆ ಬರಲಿ (ಕೋಲಿನ)ನ ಸೇವೆಯಾಗಿದ್ದು ಎಂದಿಗು ಮರೆಯದು. ನಾವೇ ಕೋಣವಾಗಿ ಗಿರಗಿರ ತಿರುಗಿದ್ದು, ಕೂತುಗಾಣಕ್ಕೆ ಕಬ್ಬು ಕೊಟ್ಟಿದ್ದು, ಅದರಿಂದ ಬರುವ ಒಂದು ಲೋಟ ಹಾಲನ್ನು ಕಿತ್ತಾಡಿಕೊಂಡು ಕುಡಿದಿದ್ದು, ಜರಡಿ ಹಿಡಿದು ಕೊಪ್ಪರಿಗೆಯ ಜಿಂಡು ತೆಗೆಯಲು ಹೋಗಿ ಕೈಸುಟ್ಟುಕೊಂಡಿದ್ದು, ಗ್ವಾರೆ ಹುಟ್ಟಿನಿಂದಪಾಕದ ಮರಿಗೆಯ ಬೆಲ್ಲ ಹದಗೊಳಿಸುತ್ತಾ ಸುತ್ತ-ಮುತ್ತೆಲ್ಲ ಬೆಲ್ಲ ಚೆಲ್ಲಿದ್ದು, ಚೆಲ್ಲಿದ ಬೆಲ್ಲ ಕಾಣಬಾರದೆಂದು ಸಗಣಿ ಮತ್ತು ಮಣ್ಣು ಹಾಕಿ ಸಾರಿಸಿದ್ದು.. ಒಂದೇ ಎರಡೇ ನಮ್ಮ ಕಿತಾಪತಿಗಳು. ಈಗಅವೆಲ್ಲವು ನೆನಪು ಮಾತ್ರ!!
ಕಬ್ಬಿನ ಹಾಲು ಕುಡಿಯುವುದು ಒಂದು ಕಲೆ ಎನ್ನುವ ಬಿಲ್ಡಪ್ ನಮ್ಮದು. ಉದ್ದನೆಯ ಲೋಟದಲ್ಲಿ ಹಾಲು ತುಂಬಿಕೊಂಡು ಎದುರಿಗೆ ಮಂಡಕ್ಕಿ ಚುರುಮುರಿ, ಬಾಳೆಕಾಯಿ ಸಂಡಿಗೆ, ಹೆಚ್ಚಿದಈರುಳ್ಳಿ, ಸವತೆಕಾಯಿ ಗಾಲಿಗಳು, ಮಾವಿನ ಮಿಡಿಯ ಉಪ್ಪಿನಕಾಯಿಯಲ್ಲಿ ಕಲೆಸಿದ ಅವಲಕ್ಕಿ ಇಟ್ಟುಕೊಂಡು ಕುಳಿತರೆ ಗಂಟೆಗಳು ಸರಿದು ಹೋಗುತ್ತಿದ್ದವು. ದೊಡ್ಡವರ ಗುಂಪಿನಲ್ಲಿ ನಾವು ನಿಮಗಿಂತಕಡಿಮೆ ಏನೂ ಇಲ್ಲ ಎಂಬಂತ ಪೈಪೋಟಿ! ಶುಂಟಿ ಹಾಕಿದ ಕಬ್ಬಿನ ಹಾಲನ್ನು, ಬಂಗಿ ಸೊಪ್ಪು ಬೆರೆಸಿದ ಹಾಲನ್ನು ಹಿರಿಯರ ಕಣ್ಣು ತಪ್ಪಿಸಿ ಗುಟುಕರಿಸುವ ಚಪಲ ನಮ್ಮದು.
ಕಬ್ಬಿನ ಹಾಲು, ಅಕ್ಕಿ ಹಿಟ್ಟಿನಿಂದ ಮಾಡಿದ ಮಣ್ಣಿ ( ಸಿಹಿ ತಿಂಡಿ)ಯನ್ನು ಅಮ್ಮ ಬಟ್ಟಲಿನಲ್ಲಿ ಹೊಯ್ದಿಟ್ಟಿದ್ದರೆ, ಅದನ್ನು ಚಿತ್ರ-ವಿಚಿತ್ರ ಆಕಾರದಿಂದ ಕತ್ತರಿಸುವ ಕಲೆಗಾರಿಕೆ ನನ್ನದು. ಮಡಿಕೆಯಬೆನ್ನಿನ ಮೇಲೆ, ಅಮ್ಮ ಬೆನ್ನು ಬಗ್ಗಿಸಿಕೊಂಡು ಎರೆದ ಗರಿಗರಿ ತೊಡೆದೇವನ್ನು ಲೆಕ್ಕ ತಪ್ಪದಂತೆ ಡಬ್ಬಿ ತುಂಬಿಡುವ ಯಜಮಾನಿ ನಾನಾಗಿದ್ದೆ!!
ಊರಿನ ಮಕ್ಕಳೆಲ್ಲ ಶಾಲೆ ಮುಗಿಸಿ ಬಂದ ಮೇಲೆ ಸಂಜೆ ಒಂದೆಡೆ ಸೇರಿ, ಉದ್ದುದ್ದ ಕಬ್ಬನ್ನು ತಿನ್ನುತ್ತಿದ್ದ ಸಾಹಸ ಇನ್ನೂ ಕಣ್ಮುಂದಿದೆ. ನಾನು ಐದು ಗಣ್ಣು ತಿಂದೆ, ನಿಂದು ಎರಡು ಗಣ್ಣುಮಾತ್ರ.. ಎಂದು ರೇಗಿಸುತ್ತಾ ತಿನ್ನುವ ಬಯಕೆ ಈಗಲೂ ಕಾಡುತ್ತಿದೆ. ಗಣ್ಣು ತೆಗೆಯಲು ಕಷ್ಟವಾದಾಗ ಇನ್ನೊಬ್ಬರ ಹತ್ತಿರ ತೆಗೆಸಿಕೊಳ್ಳುವುದು, ಅವರು ಎಂಜಲು ಮಾಡಿದರೆಂದು ಅದನ್ನು ಸ್ಕರ್ಟಿನತುದಿಯಿಂದ ಒರೆಸಿಕೊಂಡು ತಿನ್ನುವುದು ನಮ್ಮ ವಾಡಿಕೆಯಾಗಿತ್ತು. ಸ್ವಲ್ಪ ಎಂಜಲಿನ ಶಾಸ್ತ್ರವಿದ್ದವರು, ಗಣ್ಣನ್ನು ಕಂಬಕ್ಕೆ ಅಥವಾ ಮರಕ್ಕೆ ಜಪ್ಪಿ ಮೆದು ಮಾಡಿಕೊಂಡು ತಿನ್ನುತ್ತಿದ್ದರು. ಎಷ್ಟೊಂದು ಚೆಂದಆ ನೆನಪು..
ತುಂಬಾ ಕಾಡುತ್ತಿದೆ ಆಲೆಮನೆಯ ನೆನಪು.. ಈಗಿನ ಆಲೆಮನೆಯಲ್ಲಿ ಆ ಸಂಭ್ರಮವಿಲ್ಲ, ಹುಡುಗಾಟವಿಲ್ಲ. ಕೋಣಗಳ ಜಾಗದಲ್ಲಿ ಪೋರ್ಟಿಲರ್ ಬಂದಿದೆ.. ಬೆಳಗಿನ ಜಾವದ ಬದಲು,ಸೂರ್ಯ ಹುಟ್ಟಿದ ಮೇಲೆ ಗಾಣ ತಿರುಗಲು ಆರಂಭ. ಲೋಟಗಟ್ಟಲೆ ಹಾಲು ಕುಡಿಯುವ ತಾಕತ್ತು ಕಡಿಮೆಯಾಗಿದೆ. ತೊಡೆದೇವು ಮಾಡಲು ಅಮ್ಮನಿಗೆ ಸೊಂಟನೋವು.. ಆದರೂ ಬೆಲ್ಲದ ಪರಿಮಳ,ಕಬ್ಬಿನ ಸಿಪ್ಪೆಯ ಅಂಟು ಹಾಗೆಯೇ ಇದೆ. ಐ ಮಿಸ್ ಯೂ ಆಲೆಮನೆ!!
– Sandhya Shastri
pic courtesy: Jagadeesh Balehadda
Facebook ಕಾಮೆಂಟ್ಸ್