ಕರಿ ಪುಸ್ತಕ-೧
ಆ ಪುಸ್ತಕ ಒಂದು ಡೈರಿಯಂತಿತ್ತು .. ಒಳಗಿನ ಹಾಳೆಗಳೆಲ್ಲವೂ ಬಂಗಾರದ ಬಣ್ಣದ್ದು .. ಹೆಸರೇನೂ ಬರೆದಿಲ್ಲ … ಮಧ್ಯದಲ್ಲಿ ಅದೇನೋ ಒಂದು ಕಲೆ …! ರಕ್ತದ ಕಲೆಯಂತೆ … ಗಮನವಿಟ್ಟು ನೋಡಿದರೆ ಮಾತ್ರ ಕಾಣುತ್ತಿತ್ತು. ನಿಧಾನವಾಗಿ ಎರಡನೇ ಪುಟ ತೆಗೆದರು …ಯಾರೋ ಮುದ್ದಾದ ಅಕ್ಷರದಲ್ಲಿ ಬರೆದಿದ್ದರು.. “ಮಾನವಜನ್ಮ ದೊಡ್ದದು.. ಇದು ಹಾನಿಮಾಡಬೇಡಿ ಹುಚ್ಚಪ್ಪಗಳಿರ….”
ಒಂದುಕ್ಷಣ ಗೋಪಾಲರಾಯರಿಗೆ ಆಶ್ಚರ್ಯ ಹಾಗೂ ಭಯ ವಾಯಿತು …
“ಆಕ್ಷರ ಗಳು ಯಾರೋ ಪರಿಚಿತರದ್ದು … ಎಲ್ಲಿಯೋ ನೋಡಿದ ಅಕ್ಷರಗಳು… ನೆನಪಾಗುತ್ತಿಲ್ಲ…!”
“ಇದು ಯಾರದೋ ಡೈರಿ ಇರಬೇಕು … ಓದುವುದು ಸರಿಯಲ್ಲ …. “ಪ್ರಯತ್ನ ಪೂರ್ವಕವಾಗಿ ಮುಚ್ಚಿದರು. ಕುತೂಹಲದ ಮುಂದೆ ನೈತಿಕತೆಯ ಅಂತ್ಯವಾಯಿತು. ಅದ್ಯಾವಮಾಯದಲ್ಲಿ ಮತ್ತೆ ತೆಗೆದರೋ ಅವರಿಗೇ ತಿಳಿಯಲಿಲ್ಲ… ಪುಟ ತಿರುವಿದರು…ರಕ್ತವರ್ಣ ದಿಂದ ಮುದ್ದಾದ ಅಕ್ಷರಗಳಲ್ಲಿ ಬರೆಯಲಾಗಿತ್ತು…. ಬಹಳ ಚಿರಪರಿಚಿತ ಅಕ್ಷರ…!ಏನು ಬರೆದಿರಬಹುದು …? ಕುತೂಹಲ ತಡೆಯಲಾರದೆ ಓದತೊಡಗಿದರು….
ಅಂದುರಾತ್ರಿಯ ನೀರವತೆಯನ್ನು ಟೆಲಿಫೋನ್’ನ ಘಂಟೆ ಮುರಿದಿತ್ತು. ಛೀಫ಼್ ಇಂಜಿನಿಯರ್ ರಾಜಾರಾಂ ನಾಯಕ್ …. ಕರೆಮಾಡಿ ಬೆಳಗ್ಗೆ ಎಂಟುಘಂಟೆಗೆ ಹುಬ್ಬಳ್ಳಿಯಲ್ಲಿ ಬಂದು ಭೇಟಿ ಮಾಡಲು ಹೇಳಿ ತಟಕ್ಕನೆ ಪೋನ್ ಇಟ್ಟರು. ಮಾರನೇದಿನ ರತ್ನಮಾಲಾ ಹಾಗೂ ಅನಂತನ ವಿವಾಹದ ಪ್ರಥಮ ವಾರ್ಷಿಕೋತ್ಸವ… ಇಬ್ಬರೇ ಎಲ್ಲಿಯಾದರೂ ಹೋಗೋಣ ಎಂದು ಪ್ಲಾನ್ ಮಾಡಿದ್ದರು. ಅವರ ಎಲ್ಲಾ ಪ್ಲಾನ್ ತಳೆಕೆಳಗಾಗಿತ್ತು. ಅನಂತನಿಗೆ ಆ ಕಾಲ್ ಯಾಕೆ ಎಂದು ಗೊತ್ತಾಗಿತ್ತು. ಜಿಲ್ಲಾಪರಿಷತ್ ಇಂಜಿನಿಯರಿಂಗ್ ವಿಭಾಗದಲ್ಲಿದ್ದ ಅವನ ಆಫೀಸ್’ನಲ್ಲಿ ಗೋಲ್ಮಾಲ್ ನಡೆದಿದ್ದು ..ಅದರ ಎನ್’ಕ್ವಯರಿ’ಗೆ ರಾಜಾರಾಂ ಅವರನ್ನು ಸರ್ಕಾರ ನೇಮಿಸಿತ್ತು.
ತಾನು ಯಾವುದೇ ತಪ್ಪುಮಾಡಿಲ್ಲ ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಆ ಬಿಲ್’ಗಳನ್ನು ಪಾಸ್ ಮಾಡಿದ್ದೇನೆ … ಎಂದು ತಿಳಿಸಿ ಅದಕ್ಕೆ ಸೂಕ್ತ ದಾಖಲೆಗಳನ್ನು ಕೊಟ್ಟು ಬರುವುದು ಎಂದು ತೀರ್ಮಾನಿಸಿದ್ದ. ಆದರೆ ಇಷ್ಟುಬೇಗ ಬುಲಾವ್ ಬರುತ್ತೆ ಅಂತಾ ಎಣಿಸಿರಲಿಲ್ಲ.
ರತ್ನಮಾಲಾ ತಾನೂ ಬರುತ್ತೇನೆಂದು ಹಠ ಮಾಡಿ ಅನಂತನನ್ನು ಒಪ್ಪಿಸಿದಳು. ಹೊಸದಾಗಿಕೊಂಡಿದ್ದ ಕಾರ್ … ರಾತ್ರಿ ಪ್ರಯಾಣ.. ಸರಸಮಯವಾಗಿರುತ್ತದೆ ಎಂಬ ಅವಳ ಆಸೆಗೆ ಅನಂತನ ಟೆನ್ಷನ್ ಒಗಟಾಗತೊಡಗಿತು. ಮೀಟಿಂಗ್ ಮುಗಿದಮೇಲೆ ಎರಡುದಿನ ರಜೆ ಹಾಕಿ ಗೋವಾದಲ್ಲಿದ್ದು ಬರೋಣ ಎಂದು ಪ್ರಾಮಿಸ್ ಮಾಡಿದ್ದ.
ಬೆಳಗ್ಗೆ ಎಂಟರ ಸುಮಾರಿಗೆ … ಹೋಟೆಲ್’ಗೆ ರಾಜಾರಾಂ ಅವರ ಪಿ.ಎ ಫೋನ್ ಮಾಡಿ … ಎಂಟೂವರೆಗೆ ಐ.ಬಿ ಬಳಿಬರುವಂತೆ ತಿಳಿಸಿದ. ಬೇಡವೆಂದರೂ ರತ್ನಮಾಲಾ ಅವನಜೊತೆ ಬಂದಳು. ಭಯದಿಂದಲೇ ಬಂದ ಅನಂತನಿಗೆ ರಾಜಾರಾಂ ಕೂಲ್ ಆಗಿ ಕುಳಿತಿದ್ದು ಸ್ವಲ್ಪ ಸಮಾಧಾನ ವಾಯಿತು.
“ಸರ್ ಸಡನ್ ಆಗಿ ಬರಹೇಳಿದ್ದು…. ನನ್ನ ಡೇಟ್ ಇನ್ನೂ ಹದಿನೈದು ದಿನದ ನಂತರ ಅಲ್ಲವಾ….”
“ಅನಂತಾ… ಎಂಥಾ ಕೆಲಸಕ್ಕೆ ಕೈ ಹಾಕಿದ್ದೀಯ ಗೊತ್ತಾ… ನಿನ್ನ ಬಾಸ್ ಮೇಲೇ ಆರೋಪ ಹೊರಿಸಿದ್ದೀಯ… ಅವರೆಲ್ಲಾ ಬಚಾವಾಗುತ್ತಾರೆ.. ಮೇಲಿನವರನ್ನು ಹಿಡಿದು…. ಉಳಿದವನು ನೀನು…. ಏನುಮಾಡುತ್ತೀಯ ಹೇಳು..?”
“ಸರ್ ನಿಮಗೆ ಗೊತ್ತು ನಾನು ಪ್ರಾಮಾಣಿಕ… ನಿಜ ಹೇಳಬೇಕೆಂದರೆ.. ನಾನೇ ಮೂಗರ್ಜಿ ಬರೆದು ಈ ವಿಚಾರಣೆಗೆ ಕಾರಣ ವಾಗಿದ್ದು..”
“ಅದೆಲ್ಲಾ ಸರಿ….. ಅತ್ತಕಡೆ ಇಡು… ದಾಖಲೆಗಳು ನಿನ್ನತ್ತ ಬೆಟ್ಟು ಮಾಡುತ್ತವೆ… ನೀನು ಖಂಡಿತಾ ಸಿಕ್ಕಿಹಾಕಿಕೊಳ್ಳುತ್ತೀಯ…”
“ಸರ್ ನಾನು ಅಂಥವನಲ್ಲ… ಬೇಕಾದರೆ ನನ್ನ ಪತ್ನಿ ಬಂದಿದ್ದಾಳೆ ಅವಳನ್ನೇ ಕೇಳಿ… ನಾನೆಂದೂ ಅತೀ ಆಸೆಗೆ ಅಥವಾ ಹಣಕ್ಕೆ ವ್ಯಾಮೋಹ ಪಟ್ಟವನಲ್ಲ…”
ರಾಜಾರಾಂ’ರ ಒಪ್ಪಿಗೆಯನ್ನೂ ಪಡೆಯದೇ ರತ್ನಮಾಲಾಳನ್ನು ಒಳಕರೆತಂದ. ಇಬ್ಬರ ಯಾವರೀತಿಯ ಮಾತುಗಳೂ ಅವರ ಮನಸ್ಸಿಗೆ ತಾಕಲೇಇಲ್ಲ…
“ನಿಮ್ಮ ಬಳಿ ಇರುವ ಕಾರ್ ಹಾಗೂ ಬೆಂಗಳೂರಿನಲ್ಲಿನ ಸೈಟ್ ಇವೆಲ್ಲಾ ನಿಮ್ಮತ್ತ ಬೆಟ್ಟುಮಾಡಿ ತೋರುತ್ತವೆ … ಇದನ್ನೆಲ್ಲಾ ಕಮಿಟಿ ಕುಳಿತಾಗ ಹೇಗೆ ಕನ್ವಿನ್ಸ್ ಮಾಡುತ್ತೀರಾ,,..”
“ನಿಮ್ಮನ್ನು ನಾನು ಮಾತ್ರ ಬಚಾವ್ ಮಾಡಬಲ್ಲೆ…” ಮೆಲ್ಲಗೆ ನುಡಿದರು…
ಮಾನ ಮರ್ಯಾದೆ ಮುಂದೆ ಹಣ ಬೇಡ ಅಂತಾ ಅನಂತ್ ತಲೆಯಾಡಿಸಿದ…ಮುಂದೆ ನಡೆದಿದ್ದು ಯಾವ ಮರ್ಯಾದಸ್ಥರ ಬಾಳಿನಲ್ಲೂ ನಡೆಯ ಬಾರದಂಥದ್ದು ..
ರಾಜಾರಾಂ ಅನಂತನ ಹೆಂಡತಿಯೊಂದಿಗೆ ಗೋವಾಪ್ರವಾಸಕ್ಕೆ ಹೋದರು… ಅನಂತನ ಬೆಂಗಳೂರಿನ ಸೈಟ್ ಅವರ ಸೋದರಳಿಯನಿಗೆ ಕಾಲುಬೆಲೆಯಲ್ಲಿ ಮಾರಾಟ ಮಾಡಿಸಿದರು. ದಿನೇ ದಿನೇ .. ಅನಂತ ಹಾಗೂ ರತ್ನಮಾಲಾಳಿಗೆ ಗಿಲ್ಟ್ ಕಾಡತೊಡಗಿತು. ರಾಜಾರಾಂ ತನ್ನ ಬಲೆಯನ್ನು ದೃಢವಾಗಿಯೇ ಹೆಣಿದಿದ್ದರು. ಓದು ನಿಲ್ಲಿಸಿದರು… ಗೋಪಾಲ್ ರಾವ್….
ಭಯ ಅವರ ಇಡೀ ದೇಹ ಆವರಿಸಿತ್ತು. ಪುಸ್ತಕ ಮುಚ್ಚಿ ಎದೆಗೊತ್ತಿಕೊಂಡರು.
“ಸಾಧ್ಯ ವಿಲ್ಲ….”
“ಇನ್ನೊಂದು ಕ್ಷಣವೂ ಇಲ್ಲಿರಬಾರದು…”
ಸರ ಸರನೆ ಪಾರ್ಕಿನಿಂದ ಹೊರಟರು. ಕೈಯಲ್ಲಿ ಆ ಕರಿ ಪುಸ್ತಕ ಭದ್ರವಾಗಿ ಕುಳಿತಿತ್ತು. ಬೆಳಗಿನ ಸುಸ್ತು ಮಾಯ .. ಮನಸ್ಸಿನ ತುಂಬಾ… ಆ ಕರಿ ಪುಸ್ತಕ … ಅದರಲ್ಲಿ ಬರೆದಿರುವ ವಿವರಗಳು….ಮನಸ್ಸಿನಲ್ಲಿ ಒಂದೇ ಮಾತು..
“ಹೇಗೆ ಸಾಧ್ಯ…? ಹೇಗೆ ಸಾಧ್ಯ…?”
ಅದ್ಯಾವಾಗ ಮನೆ ಸೇರಿದರೋ ತಿಳಿಯದು…ಸ್ನಾನ , ತಿಂಡಿಗಳ ಗೋಜಿಗೇ ಹೋಗದೇ… ರೂಂ ಸೇರಿಕೊಂಡರು.. ಮನಸ್ಸಿನಲ್ಲಿದ್ದಿದ್ದು ಒಂದೇ ತವಕ ..
“ಮುಂದೇನಾಯಿತು..”
ಕೆಲವು ಪುಟಗಳು ಖಾಲಿ!
ನಂತರ ಅದೇ ಚಿರಪರಿಚಿತ ಬರವಣಿಗೆ… ರಕ್ತದ ಬಣ್ಣದಲ್ಲಿ!
ಅವರ ಆಸೆ ಒಂದು ಬಾರಿಗೆ ತೃಪ್ತಿಯಾಗದೇ ಮುಂದುವರೆಯಿತು… ಜಾರುವ ಬಂಡೆಯಲ್ಲಿ ಕುಳಿತ ಅನಂತ ಹಾಗೂ ಅವನ ಹೆಂಡತಿ ಜಾರುತ್ತಲೇ ಹೋದರು …ತಪ್ಪು ಒಮ್ಮೆ ಮಾಡುವಾಗ ಭಯ ಇರುತ್ತದೆ. ಆ ಭಯ ಮುಂದುವರೆದರೆ ಅಪಾಯ…ತಪ್ಪುಗಳು ನಡೆಯುತಲೇ ಇರುತ್ತದೆ ..ಭಯ ಗಿಲ್ಟ್ ಆಗಿ …ಸೆಲ್ಪ್ ಪಿಟಿಯಾಗಿ ತಿರುಗುತ್ತದೆ. ನಂತರ ಅದು ಏನಾದರೂ ಆಗಬಹುದು
ಒಂದುದಿನ .. ರಾಜಾರಾಂ ನಾಯಕ್’ಗೆ ಸಿಕ್ಕ ಸುದ್ದಿ .. ಅನಂತನ ಹಾಗೂ ರತ್ನಮಾಲಾಳ ಆತ್ಮಹತ್ಯೆಯದ್ದು…
ಇಬ್ಬರೂ ಬರೆದಿಟ್ಟು ಸತ್ತಿದ್ದರು. ಸತ್ತಾಗ ರತ್ನ ಮಾಲಾ ಗರ್ಭಿಣಿ..
“ಇದು ನನ್ನದೇ ಕಥೆ!…” ಅವರಿಗೆ ಅರಿವಿಲ್ಲದಂತೆಯೇ.. ಕೂಗಿದರು.
“ಇದು ನನ್ನ ಜೀವನದಲ್ಲಿ ನಡೆದ ಕಥೆಯೇ… ಕೇವಲ ಪಾತ್ರಗಳು ಅವುಗಳ ಹೆಸರು ಬೇರೆ ಬೇರೆ ಅಷ್ಟೆ!
ಈ ಅನಂತ್ ಹಾಗೂ ರತ್ನಮಾಲಾ ಯಾರು?
ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ಜೀವನದಲ್ಲಿ ಬಂದಿದ್ದ ರಂಗಾಚಾರಿ ಹಾಗೂ ಆಂಡಾಳ್’ಗೂ ಇವರಿಗೂ ಏನು ಸಂಬಂಧ..? ಇದು.. ಯಾರಿಗೂ ತಿಳಿಯದ ವಿಷಯ… ಈ ಡೈರಿ ಯಾರದ್ದು… ಇದನ್ನು ಬರೆದವರಾರು. ಈಗ ನೆನಪಾಗುತ್ತಿದೆ .. ಕೈಬರಹ ಆಂಡಾಳ್’ನ ಕೈಬರಹದಂತೆಯೇ ಇದೆ… ಆವರ್ ಸೂಯಿಸೈಡ್ ನೋಟ್’ನಲ್ಲಿದ್ದಂತೆಯೇ… ಈ ಕರೀ ಪುಸ್ತಕದ ಮೊದಲ ಹಾಳೆಯಲ್ಲಿಯೂ ರಕ್ತದ ಕಲೆ ಕಾಣಿಸುತ್ತಿದೆ..ಅಷ್ಟು ಹಿಂದೆ ನಡೆದ ಘಟನೆ… ಈಗ ಈ ಡೈರಿಯಲ್ಲಿ ಹೇಗೆ ಬಂದಿತು….”
ಬರೀ ಪ್ರಶ್ನೆಗಳೇ… ಉತ್ತರಗಳಿಲ್ಲ… ತಲೆ ಸಿಡಿದಂತಾಗುತ್ತಿದೆ … ಕೂಗೋಣ ಎಂದರೆ ಬಾಯಿಂದ ಶಬ್ದವೇ ಬರುತ್ತಿಲ್ಲ… ಯಾಕೋ ಬರೀ ಹಳೆಯ ನೆನಪುಗಳು…ಹೊರ ಜಗತ್ತಿನ ಗೋಪಾಲರಾಯನ ಮುಖವಾಡ ಕಳಚಿ ನಿಜವಾದ ಗೋಪಾಲನ ನೆನಪುಗಳು… ಬಾಳಿನಲ್ಲಿ ಬಂದು ಹೋದ ಹೆಣ್ಣುಗಳು… ಅಕ್ರಮವಾಗಿ ಸಂಪಾದಿಸಿದ್ದ ಆಸ್ತಿ!
ತಕ್ಷಣ ನೆನಪಾಗಿದ್ದು… ಆ ಕಥೆಯಲ್ಲಿ ಬಂದಿದ್ದ ಬೆಂಗಳೂರಿನ ಸೈಟ್ ಇದೇ… ಇದೇ ಮನೆಯಲ್ಲಿ ನಾನು ವಾಸವಾಗಿರುವುದು… ಇದೇ ಮನೆಯಲ್ಲಿ ನನ್ನ ಮಗ ನನ್ನ ಮೇಲೆ ಕಾರಣವಿಲ್ಲದೇ.. ಜಗಳ ಮಾಡಿ ನಮ್ಮನ್ನು ಒಂಟಿಯಾಗಿ ಬಿಟ್ಟು ಹೋಗಿದ್ದು… ಇದೇ ಮನೆಯಲ್ಲಿ ದೇವರ ವಿಗ್ರಹ ಕಳುವಾಗಿದ್ದು… ಇದೇ ಮನೆಯಲ್ಲಿ …ಮಗಳು … ತಾನು ಇಷ್ಟಪಟ್ಟವನೊಂದಿಗೆ ಮದುವೆ ಮಾಡಲಿಲ್ಲವೆಂದು ವಿಷ ಕುಡಿದದ್ದು…
ಬರೀ ನೆನಪುಗಳು… ಅಂದೆಂದೂ ಯಾವುದಕ್ಕೂ ಕೇರ್ ಮಾಡಿರಲಿಲ್ಲ… ಇಂದು ಅವೆಲ್ಲಾ ನೆನಪಾಗುತ್ತಿದೆ.. ಹಣ ಮದ, ದರ್ಪ,ಅಹಂಕಾರಗಳೇ ವ್ಯಕ್ತಿತ್ವ! ನಾನು, ನನ್ನಂತೆಯೇ… ಎಂಬುದೇ ಜೀವನ…ಎಲ್ಲಾ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದಾರೆ… ಆದರೆ ಅದು ಇಡೀ ಪ್ರಪಂಚಕ್ಕೇ ಕೇಳುವಂತೆ ಕೂಗುತ್ತಿದ್ದೇನೆ ಎಂಬಂಥಾ ಭಾವನೆ.
ಆ ಕ್ಷಣದಲ್ಲೊಂದು ಫೋನ್ ಕಾಲ್ !..
ಆ ಕಡೆಯಿಂದ … ಜಯಣ್ಣನ ಮಗ….. ಬಿಕ್ಕುತ್ತಾ ಹೇಳಿದ
“ಅಪ್ಪ ಹೋಗಿಬಿಟ್ಟ್ರು ಸಾರ್…. ನಿಮ್ಮ ಫೋನ್’ಗೆ ಬಹಳ ಪ್ರಯತ್ನ ಮಾಡಿದೆ .. ನೀವು ಪಾರ್ಕ್’ಗೆ ಕೂಡಾ ಬಂದಿಲ್ಲ ಅಂದ್ರು ಮಹಾವೀರ್ ಅಂಕಲ್… ಪಾರ್ಕ್’ಗೆ ಹೋಗಿ ಬರುವಾಗ ಬಹಳ ಚಿಂತೆಯಿಂದಲೇ ಬಂದರು, ಕೈಯ್ಯಲ್ಲೊಂದು ಕರೀಬೈಂಡಿನ ಪುಸ್ತಕ ಇತ್ತು ಅದನ್ನು ಓದುತ್ತಾ ಓದುತ್ತಾ.. ಹಾಗೇ ಕುಸಿದು ಬಿದ್ದು ಹೋಗಿಬಿಟ್ಟ್ರು….. ವಿಚಿತ್ರ ಅಂದರೆ ಆ ಪುಸ್ತಕ ಆಮೇಲೆ ಎಲ್ಲೂ ಕಾಣಲಿಲ್ಲ…”
ಮುಂದೇನೂ ಕೇಳಿಸಲಿಲ್ಲ… ಹೃದಯ ತಾನು ಕೆಲಸಮಾಡಲಾರೆ ಎಂದು ನಿಂತಿತು…
ಹಾಲ್’ನಲ್ಲಿದ್ದ ಟಿ.ವಿ’ಯಲ್ಲಿ ಗೋಪಾಲರಾಯರ ಹೆಂಡತಿ ನೋಡುತ್ತಿದ್ದ ಭಕ್ತಿ ಚಾನಲ್’ನಲ್ಲಿ ಯಾರೋ ಸಂತ ಪ್ರವಚನ ಹೇಳುತ್ತಿದ್ದರು…
“ನಮ್ಮ ಕರ್ಮ ಗಳು, ಪಾಪಗಳು ಎಲ್ಲಿಯೂ ಹೋಗದು ಎಲ್ಲಾ ನಮ್ಮೊಂದಿಗೇ ಇರುತ್ತವೆ. ಸಾಯುವ ಕಾಲದಲ್ಲಿ ನೆನಪು ಎಂಬ ಕಾಲುವೆಗಳ ಮುಖಾಂತರ ಬಂದು ನಮ್ಮ ಮುಂದೆ ನಿಲ್ಲುತ್ತವೆ.. ಈ ನೆನಪುಗಳೇ ನಮ್ಮ ಸಾವಿನ ರೂಪವನ್ನು ನಿರ್ಧರಿಸುತ್ತದೆ…..”
Vasudev Murthy
Facebook ಕಾಮೆಂಟ್ಸ್