X

ಮಹಾತಾಯಂದಿರ ದರ್ಶನ ಪಡೆದ ಕ್ಷಣ…

ಹೌದು, ನಾನು ತುಂಬಾ ಆತುರದಿಂದ ಅವರನ್ನೆಲ್ಲ ಕಾಯುತ್ತಿದ್ದೆ, ದೇವಸ್ಥಾನದಂತೆ ಕಂಗೊಳಿಸುತ್ತಿತ್ತು ಆ ಮನೆ. ಆ ಮನೆಯ ಮುಂದೆ ಕಾರೊಂದು ಬಂದು ಬಿಟ್ಟಿತು, ಅಷ್ಟು ಸಾಕಾಗಿತ್ತು ನನ್ನ ಕಣ್ಣುಗಳಿಗೆ, ಪಟಪಟನೆ ಕಣ್ಣೀರು ಸುರಿಸಲಾರಂಭಿಸಿದವು. ಇಷ್ಟಕ್ಕೂ ಆ ಮನೆ ಯಾರದ್ದು ಗೊತ್ತೇನು? ನವೆಂಬರ್ 26/11 ರಂದು ಇಡೀ ಭಾರತವನ್ನು ನಲುಗಿಸಿದ ಮುಂಬೈ ತಾಜ್ ಹೋಟೆಲ್ ಹಾಗೂ ನಾರಿಮನ್ ಹೌಸ್’ನ ದಾಳಿಯಲ್ಲಿ ಕ್ರೌರ್ಯ ಮೆರೆಯುತ್ತಿದ್ದ ಭಯೋತ್ಪಾದಕರ ಹುಟ್ಟಡಗಿಸಿ, ಭಾರತದ ಮಾನವನ್ನು ಕಾಪಾಡಿದ ವೀರ ಯೋಧ ಮೇಜರ್ ಸಂದೀಪ ಉನ್ನಿಕೃಷ್ಣನ್’ರವರ ಮನೆ. ಇನ್ನು ಕಾರಿನಿಂದ ಇಳಿದವರು ಯಾರು ಗೊತ್ತೇನು? ಸಿಯಾಚಿನ್ ಹೀರೋಗಳಾದ ಲಾನ್ಸ್’ನಾಯಕ್ ಹನುಮಂತಪ್ಪನವರ ಪತ್ನಿ ಹಾಗೂ ತಾಯಿ, ಹಾಸನದ ಯೋಧ ಲಾನ್ಸ್’ನಾಯಕ್ ನಾಗೇಶರವರ ಪತ್ನಿ , ಮಂಡ್ಯದ ಯೋಧ ಲಾನ್ಸ್’ನಾಯಕ್ ಮಹೇಶರವರ ತಾಯಿ, ಮೈಸೂರಿನ ಯೋಧ  ಚಾಂದಪಾಶಾರವರ ತಾಯಿ, ಪಟಾಣ್’ಕೋಟ್ ವಾಯುನೆಲೆ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಕರ್ನಲ್ ನಿರಂಜನ್ ಮಹಾದಿಕ್’ರವರ ತಂದೆ- ತಾಯಿ ಮತ್ತು ವಿಜಯಪುರದ ಯೋಧ ಸಹದೇವ ಮೊರೆ ಅವರ ಪತ್ನಿ ಹಾಗೂ ತಾಯಿ ಹೀಗೆ ಇನ್ನೂ ಕೆಲವು ಸೈನಿಕ ಕುಟುಂಬದವರು ಆಗಮಿಸಿದ್ದರು. ಎಲ್ಲರನ್ನೂ ಆತ್ಮೀಯವಾಗಿ, ಆದರದಿಂದ ಬರಮಾಡಿಕೂಂಡವರು ವೀರಯೋಧ ಮೇಜರ್ ಸಂದೀಪ ಉನ್ನಿಕೃಷ್ಣನ್’ರವರ ತಂದೆ ತಾಯಿ.

ಇವೆಲ್ಲವೂ ನಡೆದಿದ್ದು ಮಾರ್ಚ್ 15, 2016 ರ ಮಂಗಳವಾರ ಸಂದೀಪ ಉನ್ನಿಕೃಷ್ಣನ್’ರವರ ಹುಟ್ಟುಹಬ್ಬದ ದಿನದಂದು. ಇದಕ್ಕಿಂತ ಒಂದು ದಿನದ ಮುಂಚೆ ಅಂದರೆ ಮಾರ್ಚ್ 14 ರಂದು ನನ್ನ ತಂದೆಯವರ 18 ನೇ ವರ್ಷದ ಪುಣ್ಯತಿಥಿ ದಿನವಾಗಿತ್ತು. ಈ ದಿನ ನನ್ನ ಪಾಲಿನ ಕೆಟ್ಟ ದಿನಗಳಲ್ಲೊಂದು ಎಂದು ಆತ್ಮೀಯ ಮಿತ್ರನೊಬ್ಬನಿಗೆ ಹೇಳಿದ್ದೆ. ಆದರೆ ಮರುದಿನವೇ ನನ್ನ ಬದುಕಿನಲ್ಲಿ ಮರೆಯಲಾಗದ ಪುಣ್ಯ ದಿನ ಬರುತ್ತದೆಂದು ಎಂದೂ ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ.

ನಾನು ಸಂದೀಪ ಉನ್ನಿಕೃಷ್ಣನ್’ರವರ ಮನೆ ತಲುಪಿದಾಗ ಸಮಯ ಬೆಳಿಗ್ಗೆ 8 ಗಂಟೆ. ಅದಾಗಲೇ ಕಾರ್ಯಕ್ರಮದ ತಯಾರಿಗಳು ಶುರುವಾಗಿದ್ದವು. ಕಾಯ೯ಕ್ರಮದ ಗಡಿಬಿಡಿಯಲ್ಲಿ ಸಂದೀಪರ ತಂದೆ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಧನ್ಯನಾದೆ. ಇನ್ನೂ ಗೌರವದಿಂದ ಹೇಳಬೇಕೆಂದರೆ ಸಂದೀಪರ ತಾಯಿ ಕೇವಲ ಸಂದೀಪರಿಗಷ್ಟೆ ತಾಯಿಯಲ್ಲ, ನನ್ನಂಥಹ ನೂರಾರು  ನವೋತ್ಸಾಹಿ ತರುಣ – ತರುಣಿಯರಿಗೆ ತಾಯಿಯೂ ಕೂಡ. ಈ ಮಹಾತಾಯಿ, ಭಾರತ ಮಾತೆಯ ಸ್ವರೂಪವೆಂಬಂತೆ ಅನೇಕ ಬಾರಿ ನನಗನ್ನಿಸಿದ್ದಂತೂ ಸತ್ಯ.

ಆತ್ಮೀಯರೇ, ನಿಮ್ಮಲ್ಲಿ ನನ್ನದೊಂದು ಕಳಕಳಿಯ ವಿನಂತಿ. ನಿಮ್ಮ ಜೀವನದಲ್ಲಿ ಸಾಧ್ಯವಾದರೆ ಸಂದೀಪ ಉನ್ನಿಕೃಷ್ಣನ್’ರವರ ಮನೆಗೊಮ್ಮೆ ಭೇಟಿ ನೀಡಿ. ಸಂದೀಪರದ್ದು ಒಂದು ಪುಟ್ಟ ಮನೆ, ನೆಲಮಹಡಿಯಲ್ಲಿ ಸಂದೀಪ್’ರ ಕುಟುಂಬ ವಾಸವಾಗಿದೆ. ಮೊದನೆ ಅಂತಸ್ತಿನಲ್ಲಿ MAJOR SANDEEP UNNIKRISHNAN MEMORIAL TRUST ಇದೆ. ಸಂದೀಪರು ಉಪಯೋಗಿಸುತ್ತಿದ್ದ ಪ್ರತಿಯೊಂದು ವಸ್ತುಗಳು ಅಲ್ಲಿ ಸಂಗ್ರಹವಾಗಿವೆ. ಸಂದೀಪರು ಕೊನೆಯ ಬಾರಿ ಉಪಯೋಗಿಸಿದ್ದ ಬ್ರಶ್, ಪೇಸ್ಟ್, ಟೀ – ಶರ್ಟ್ , ಗಡಿಯಾರ ಮತ್ತು ಶೂಸ್ ಹೀಗೆ ಹಲವಾರು ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಸಂದೀಪರ ಬಾಲ್ಯದ ಫೋಟೋಗಳು , ಶಾಲಾ ಸಮವಸ್ತ್ರಗಳು, ಪ್ರಶಸ್ತಿ ಪ್ರಮಾಣ ಪತ್ರಗಳು, ಸೇನೆಯ BADGE’ಗಳು, ಸಂದೀಪ ಕೊನೆಯ ಬಾರಿ OPERATION TAJ ಗೆ ಹೊರಟ ಸಂದರ್ಭದಲ್ಲಿ ತೆಗೆದುಕೊoಡು ಹೋದ ಯುದ್ಧ ಸಾಮಗ್ರಿಗಳು,ಬ್ಯಾಗ್ ಹೀಗೆ ಎಲ್ಲವನ್ನೂ ತಮ್ಮ ಮಗುವಿನಂತೆ ಜೋಪಾನವಾಗಿ ಸಂಗ್ರಹಿಸಿಟ್ಟಿದ್ದಾರೆ, ಸಂದೀಪರಿಗೆ ಗುಂಡು ಬಿದ್ದು ಚಿದ್ರವಾಗಿರುವ ಅವರ ಮಿಲಿಟರಿ ಡ್ರೆಸ್, ಸಂದೀಪರ ದೇಹವನ್ನು ಸುತ್ತಿಕೊಂಡು ಬಂದ ತ್ರಿವರ್ಣ ಧ್ವಜ, ಇದಲ್ಲದೇ ಸಂದೀಪರು ಬಲಿದಾನ ಮಾಡಿದ ಜಾಗದಲ್ಲಿ ಅವರ ದೇಹದ ಸುತ್ತ ಅಥವ ಅವರ ದೇಹದ ಮೇಲೆ ಬಿದ್ದಿದ್ದ ಕಲ್ಲು ಮಣ್ಣುಗಳ ಪುಡಿಯನ್ನೂ ಸಹ ಆ ಮಹಾತಾಯಿ ಜೋಪಾನವಾಗಿಟ್ಟಿದ್ದಾಳೆ.

“ಒಬ್ಬ ತಾಯಿ ತಾನು ಮನಸ್ಸು ಮಾಡಿದರೆ ಹೇಗೆ ತನ್ನ ಮಗುವನ್ನು ಪ್ರತಿ ಕಣಕಣದಲ್ಲಿಯೂ ಮತ್ತೆ  ಜೀವಂತವಾಗಿಸಬಲ್ಲಳು ಎಂಬುದಕ್ಕೆ ಇದೇ ಸಾಕ್ಷಿ. ಈಗ ಹೇಳಿ , ಸಂದೀಪ್ ಉನ್ನಿಕೃಷ್ಣನ್’ರವರ ತಾಯಿ ಭಾರತಮಾತೆಯ ಸ್ವರೂಪವಲ್ಲವೇನು ?

ಸ್ವಲ್ಪ ಹೊತ್ತಿನ ನಂತರ ಅತಿಥಿಗಳ ಆಗಮನವಾಯಿತು. ಸಂದೀಪ್ ಉನ್ನಿಕೃಷ್ಣನ್’ರವರ ಹುಟ್ಟುಹಬ್ಬದ ಅಂಗವಾಗಿ ಕೇಕನ್ನು ಕತ್ತರಿಸಲಾಯಿತು. ‘ಭಾರತ್ ಮಾತಾ ಕೀ ಜೈ’,’ಸಂದೀಪ್ ಉನ್ನಿಕೃಷ್ಣನ್ ಅಮರ್ ರಹೇ ‘ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಶುರುವಾಯಿತು. ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ, ಸ್ವಾಗತ, ಪ್ರಾಸ್ತಾವಿಕಗಳಾದವು. ತದನಂತರ ಗದಗ್ ಜಿಲ್ಲೆಯ ಶಿರಗುಪ್ಪಿ ಗ್ರಾಮದಿಂದ ಮಲ್ಲಕಂಬ ಸಾಹಸ ಪ್ರದರ್ಶಿಸಲು ಶಾಲಾ ಮಕ್ಕಳು ( ಹೆಣ್ಣು ಮಕ್ಕಳು) ಕಾರ್ಯಕ್ರಮಕ್ಕೆ ಬಂದಿದ್ದರು. ಮಧ್ಯಾಹ್ನದ ಬಿರುಬಿಸಿಲಿನಲ್ಲಿಯೂ ಸುಮಾರು ಒಂದೂವರೆ ತಾಸು ಆ ಮಕ್ಕಳು ಮಲ್ಲಕಂಬ ಸಾಹಸ ಪ್ರದರ್ಶಿಸಿದರು. ನಾನಾ ತರಹದ  ಭಂಗಿಗಳು, ವಿವಿಧ ಯೋಗಾಸನಗಳು ಮಲ್ಲಕಂಬದಲ್ಲಿ ಪ್ರದರ್ಶನಗೊಂಡವು. ಮಲ್ಲಕಂಬದಲ್ಲಿ ಮಕ್ಕಳ ಸಾಹಸವನ್ನು ಕಂಡು ನಾವೆಲ್ಲರೂ ಮೂಕವಿಸ್ಮಿತರಾಗಿದ್ದೆವು. ನಂತರ ಯೋಧರ ಕುಟುಂಬದವರನ್ನು ಕರೆದು ಸನ್ಮಾನಿಸಲಾಯಿತು. ಯೋಧರ ಕುಟುಂಬದವರು ಕೆಲ ಹೊತ್ತು ಮಾತನಾಡಿ ತಮ್ಮ ನೋವನ್ನು ಮರೆತು ದೇಶಕ್ಕಾಗಿ ನಾವೆಲ್ಲ ಹೋರಾಡೊಣ ಎಂದು ಹೇಳುತ್ತಾ ಸ್ಪೂರ್ತಿ ತುಂಬಿದರು. ಸಂದೀಪರ ತಂದೆ-ತಾಯಿ ನಮ್ಮನ್ನೆಲ್ಲ ಉದ್ದೇಶಿಸಿ ಮಾತನಾಡುತ್ತಾ, ”ನಮಗೆ ಸಂದೀಪನನ್ನು ಕಳೆದುಕೊಂಡು ಎಷ್ಟು ನೋವಾಗಿದೆಯೋ, ಈಗ ನಿಮ್ಮೆಲ್ಲರನ್ನು ನೋಡಿ ಸಾವಿರಾರು ಸಂದೀಪರನ್ನು ಕಂಡಷ್ಟೇ ಸಂತೋಷವಾಗಿದೆ. ನಾವು ಇನ್ಮುಂದೆ ಯಾವ ಕಾರಣಕ್ಕೂ ಕಣ್ಣೀರು ಸುರಿಸುವುದಿಲ್ಲ’ ‘ ಎಂದು ಹೇಳಿದಾಗ ನಾನು ತುಂಬಾ ಭಾವಪರವಶನಾಗಿದ್ದೆ.

ಕಾರ್ಗಿಲ್ ಯುದ್ಧ ಜಯದ ರೂವಾರಿ ಕ್ಯಾಪ್ಟನ್ ವಿಕ್ರಮ್ ಭಾತ್ರಾರವರ ಮಿತ್ರ ಹಾಗೂ ಯುದ್ಧ ತಂಡದ ಸದಸ್ಯರಾಗಿದ್ದ ಕ್ಯಾಪ್ಟನ್ ನವೀನರನ್ನು ಸನ್ಮಾನಿಸಲಾಯಿತು. ಕ್ಯಾಪ್ಟನ್ ನವೀನರ ಚಿಕ್ಕ ಪರಿಚಯ ಹೇಳುತ್ತೇನೆ. ಇವರು ಮೂಲತಃ ಹುಬ್ಬಳ್ಳಿಯವರು. ಕಾರ್ಗಿಲ್ ಯುದ್ಧದ ಸಂಧರ್ಭದಲ್ಲಿ ಗ್ರೆನೈಡ್ ಸ್ಫೋಟಗೊಂಡು ಇವರ ಎರಡೂ ಕಾಲುಗಳಿಗೆ ಗಂಭೀರ ಗಾಯವಾಗುತ್ತದೆ ಪರಿಣಾಮ ಆರು ತಿಂಗಳು ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಕೆಲ ದಿನಗಳ ನಂತರ ವಿಕ್ರಮ್ ಭಾತ್ರಾರ ಸಾವು ಇವರ ನಿದ್ದೆಗೆಡಿಸುತ್ತದೆ. ಒಂದೆಡೆ ಕಾಲುಗಳಿಗೆ ಗಂಭೀರ ಗಾಯ, ಇನ್ನೊಂದೆಡೆಗೆ ಮಿತ್ರನ ಅಗಲಿಕೆಯ ನೋವಿನಿಂದ ತುಂಬಾ ವೇದನೆ ಪಡುತ್ತಾರೆ. ಈ ಸಂದರ್ಭದಲ್ಲಿ ವಿಕ್ರಮ್ ಭಾತ್ರಾರ ತಾಯಿ ಇವರನ್ನು ಕಾಣಲು ಬರುತ್ತಾರೆ. ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಇವರು ಅಮ್ಮನನ್ನು ಹೇಗೆ ಮಾತಾಡಿಸಲಿ? ವಿಕ್ರಮ್ ಭಾತ್ರಾರ ಕುರಿತಾಗಿ ಕೇಳಿದರೆ ಏನು ಹೇಳಲಿ? ಎಂದು ತುಂಬಾ ಸಂಕಟ ಪಡುತ್ತಿರುತ್ತಾರೆ.

ಆದರೆ ಆಶ್ಚರ್ಯ ನೋಡಿ…  ಭಾರತ ಅಂದರೆ ಹೀಗೇನೆ.. ||

ಭಾರತೀಯ ನಾರಿ ಅಶಕ್ತಳಲ್ಲ, ತಾಯಿಯನ್ನು ದೇವರೆಂದು ಪೂಜಿಸುವ ನಾಡಿನಲ್ಲಿ ವೀರ ಯೋಧನ ತಾಯಿ ಅಧೀರಳಾಗುವುದೆಂದರೆ ಏನು? ಆಸ್ಪತ್ರೆಯಲ್ಲಿ ಕ್ಯಾಪ್ಟನ್ ನವೀನರನ್ನು ಭೇಟಿಯಾಗಿ ಆ ತಾಯಿ ಹೇಳುತ್ತಾಳೆ,

” ಮಗು ಚಿಂತಿಸಬೇಡ. ವಿಕ್ರಮ್ ದೇಶಕ್ಕಾಗಿ ಹೋರಾಡಿ ಪ್ರಾಣವನ್ನು ಅಪಿ೯ಸಿದ್ದಾನೆ. ವಿಕ್ರಮನಂತಹ ಮಗನನ್ನು ಹೆತ್ತಿದ್ದಕ್ಕೆ ಹೆಮ್ಮೆ ಪಡುತ್ತೇನೆ ಹೊರತು ಅಳುವುದಿಲ್ಲ. ನೀನು ನಿನ್ನ ಆರೋಗ್ಯವನ್ನು ಸುಧಾರಿಸಿಕೋ, ಆದಷ್ಟು ಬೇಗ ಗುಣಮುಖನಾಗು ” ಎಂದು ಕ್ಯಾಪ್ಟನ್ ನವೀನರನ್ನು ಹರಸುತ್ತಾಳೆ. ನಮಗೆಲ್ಲಾ ಸ್ಪೂತಿ೯ ತುಂಬುತ್ತಾರೆ. ಇಂತಹ ಮಹಾತಾಯಂದಿರ ನಾಡಿನಲ್ಲಿ ನಾವೆಲ್ಲರೂ ಬದುಕುತ್ತಿರುವುದೇ ನಮ್ಮ ಭಾಗ್ಯ. ಕ್ಯಾಪ್ಟನ್ ನವೀನ್’ರು ಮಾತನಾಡುತ್ತಾ, ಈವತ್ತಿನವರೆಗೂ ಕೆಲ ಗ್ರೆನೈಡ್ ಚೂರುಗಳು ಕಾಲಿನಲ್ಲಿ ಇನ್ನು ಹಾಗೆ ಉಳಿದಿವೆ. ಒಂದು ಕಾಲoತು ಪ್ಯಾರಲೈಸಿಸ್ ಆಗಿ ಸ್ವಾಧೀನ ಕಳೆದುಕೊಂಡಿದೆ ಎಂದು ಹೇಳುವಾಗ ನನ್ನ ಕಣ್ಣುಗಳು ತುಂಬಿ ಬಂದಿದ್ದವು. ಕುಂಟುತ್ತಲೇ ವೇದಿಕೆಗೆ ಆಗಮಿಸಿದ ಕ್ಯಾಪ್ಟನ್ ನವೀನರು ನಮ್ಮನ್ನೆಲ್ಲಾ ಉದ್ದೇಶಿಸಿ ನಿಂತುಕೊಂಡೆ ಮಾತಾನಾಡಿದರು. ಭಾರತೀಯ ವೀರ ಸೈನಿಕನ ವಿರಾಟ ದಶ೯ನ  ಪಡೆದು ಧನ್ಯನಾದೆ. ಮತ್ತೊಬ್ಬ ವೀರಯೋಧನ ಯಶೋಗಾಥೆಗೆ ವೇದಿಕೆ ಸಿದ್ದವಾಗಿತ್ತು. ಆತ್ಮೀಯರೇ, ನೀವು ಪತ್ರಿಕೆಯಲ್ಲಿ ಅಥವಾ ಪುಸ್ತಕದಲ್ಲಿ ಓದಿರಬಹದು. ಸಂದೀಪ್ ಉನ್ನಿಕೃಷ್ಣನ್ರವರು OPERATION TAJ ಕಾಯಾ೯ಚರಣೆಯಲ್ಲಿದ್ದಾಗ ತನ್ನ ಸಂಗಡಿಗರಿಗೆ ಹೇಳಿದ ಕೊನೆಯ ಮಾತು, “DON’T COME UP. I WILL HANDLE THEM.” “ನೀವು ಮುಂದೆ ಬರಬೇಡಿ. ನಾನು ಅವರನ್ನು ನೋಡಿಕೊಳ್ಳುತ್ತೆನೆ.”

ಈ ಮಾತನ್ನು ಸಾಕ್ಷಾತ್ ಸಂದೀಪ ಉನ್ನಿಕೃಷ್ಣನ್’ರವರ ಬಾಯಿಂದ ಕೇಳಿಸಿಕೊಂಡ ಅವರ NSG ತಂಡದ ಸಹ ಕಮಾಂಡೊ ಅಖಿಲೇಶ್ ವೇದಿಕೆಗೆ ಆಗಮಿಸಿಬಿಟ್ಟ. ಅಖಿಲೇಶ ವೇದಿಕೆಗೆ ಬರುತ್ತಿದ್ದಂತೆ ಚಪ್ಪಾಳೆ ಸ್ವಾಗತ ಯಾವ ಪರಿಯಿತ್ತೆಂದರೆ, ಅದನ್ನು ಕಂಡು ಸ್ವತಃ ಅಖಿಲೇಶರವರು ತಮ್ಮ ಕಣ್ಣಿರನ್ನು ತಡೆಯದಾದರು. ಅಖಿಲೇಶ್ ತಮ್ಮ ಕಾಯಾ೯ಚರಣೆಯ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡರು. ಸಂದೀಪರ ಸಮಯ ಪ್ರಜ್ಞ, ಬಲಿದಾನದಿಂದ ಸುಮಾರು 8-10 NSG ಕಮಾಂಡುಗಳು, ANTI TERRORIST SQUAD’ನ ಆಫಿಸರ್’ಗಳಿಬ್ಬರು ಬದುಕುಳಿದರು ಎಂದು ಹೇಳುತ್ತಾ ಸಂದೀಪರ ಧೈಯ೯ ಸಾಹಸವನ್ನು ವಿವರಿಸಿದರು. ಕಾಯ೯ಕ್ರಮ ಮುಗಿದ ನಂತರ ಅಖಿಲೇಶರನ್ನು ಮಾತನಾಡಿಸಿ, ಅತ್ಯಂತ ಗೌರವದಿಂದ ಒಮ್ಮೆ ಅವರನ್ನು ತಬ್ಬಿಕೊಂಡೆ. ಭಾರತದ ಮಾನವನ್ನು ಕಾಪಾಡಿದ ವೀರಯೋಧನನ್ನು ಕಂಡು ಜೀವನ ಸಾರ್ಥಕವೆನಿಸಿತು.

ಶಾಂತಿ ಮಂತ್ರದೊಂದಿಗೆ ಕಾಯ೯ಕ್ರಮ ಮುಗಿಯಿತು. ಮಧ್ಯಾಹ್ನದ ಊಟ ಮುಗಿದ ನಂತರ ಯೋಧರ ಕುಟುಂಬದವರ ಜೊತೆ ಒಂದು ಸುತ್ತಿನ photoshoot ಕೂಡ ಮುಗಿಯಿತು.’ವಂದೇ ಮಾತರಂ’ ‘ಭಾರತ್ ಮಾತಾ ಕೀ ಜೈ’ ಘೋಷಣೆಗಳಾದವು. ಮಗಳು ನೇತ್ರಾವತಿಯ ಧ್ವನಿಯಲ್ಲಿ ಲಾನ್ಸ್ ನಾಯಕ ಹನುಮಂತಪ್ಪ ಘೋಷಣೆ ಕೂಗಿಬಿಟ್ಟ. ನೆನಪಿನ ಸಂಚಿನಲ್ಲಿ ಸದಾ ಕಾಲ ಶಾಶ್ವತವಾಗಿ ಉಳಿಯಲಿರುವ ಕಾಯ೯ಕ್ರಮವನ್ನು ಮುನ್ನಡೆಸಿ ಸಾರಥ್ಯ ವಹಿಸಿದ್ದ ಶ್ರೀ ಚಕ್ರವತಿ೯ ಸೂಲಿಬೆಲೆಯವರಿಗೆ ನನ್ನ ಹೃದಯ ಪೂವ೯ಕ ನಮನಗಳು. ಅರಳುವ ಹೂವು ಯಾವಾಗಲು ಬಯಸುವುದು ಒಂದೇ ಎಂದು ಕವಿಯೊಬ್ಬ ಹೀಗೆ ವಿವರಿಸುತ್ತಾನೆ. ” ಹೂವಿಗೆ ತಾನು ದೇವರ ಪಾದದಡಿಯಾಗಲಿ, ಗುಡಿಗುಂಡಾರಗಳಲ್ಲಾಗಲಿ, ರಥಮಂಟಪಗಳಲ್ಲಾಗಲಿ, ಹೆಣ್ಣಿನ ಸೌಂದಯ೯ ಹೆಚ್ಚಿಸಲಾಗಲಿ ಸೇರುವುದು ಇಷ್ಟವಿಲ್ಲವಂತೆ. ಅದರ ಬದಲಿಗೆ ಗಡಿ ಕಾಯುವ ವೀರಯೋಧ ನಡೆದಾಡುವ ದಾರಿಯಲ್ಲಿ ನನ್ನ ಎಸೆದುಬಿಡಿ. ಆತನ ಪಾದದಡಿಯ ಧೂಳಿನಲ್ಲಿಯೇ ಉಳಿದುಬಿಡುತ್ತೇನೆ” ಎ೦ದು.

  ಅಕ್ಷರಶಃ ನನ್ನ ಸ್ಥಿತಿಯು ಹಾಗೆ ಆಗಿತ್ತು. ದೇಹ ಮಾತ್ರ ಅಲ್ಲಿಂದ ಹೊರಟು ಬಿಟ್ಟಿತ್ತು. ಮನಸ್ಸು-ಹೃದಯ ಎಲ್ಲವು ಹೂವಿನ ಹಾಗೆ ಸಂದೀಪರ ಭಾವಚಿತ್ರದಡಿ ಅತ್ತಿoದಿತ್ತ ಇತ್ತಿoದತ್ತ  ಹೊರಾಳಡುತ್ತಿತ್ತು. ಬಹುಶಃ ನನ್ನ ಜೀವನದ ಅತ್ಯಂತ ಭಾವುಕ ಕ್ಷಣ, ದಿನವನ್ನು ನಾನಂದು ಅನುಭವಿಸಿದ್ದೆ.

ಜೈ ಹಿಂದ್..ಜೈ ಭಾರತ ಮಾತೆ.

-ರಾಮಪ್ರಸಾದ್ ಎಸ್. ತೋಟದ್

ramtotad@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post