X

ನನ್ನ ದೇಶ ನನ್ನ ಜನ -ತಿರುಪತಿ ಕ್ಷೌರ

“ಓಹ್ ಇವತ್ತು ಭಾನುವಾರ ” ನನಗೆ ನಾನೇ ಹೇಳಿಕೊಂಡೆ . ನಮ್ಮೂರಿಗೆ ಕ್ಷೌರಿಕ ಬರುವುದು ಕೇವಲ ಭಾನುವಾರದಂದು ಮಾತ್ರ . ಜಗಳೂರು , ಗೊಂದಲಗೇರಿ , ಕೆಸರೂರು ,ನಾರ್ವೆ ಇವೆಲ್ಲ ಊರುಗಳಿಗೆ ಕೇವಲ ಒಬ್ಬನೇ ಕ್ಷೌರಿಕ . ಒಂಥರಾ ಅವನು ರಾಷ್ಟ್ರಪತಿಗಿಂತಲೂ ಬ್ಯುಸಿ ಮನುಷ್ಯ . ಅವನ ಶಾಪಿನಲ್ಲಿ ಬಹಳ ಹೊತ್ತು ಕಾಯುವುದು ಅನಿವಾರ್ಯ . ಇನ್ನು ತಡ ಮಾಡುವುದು ಸರಿಯಲ್ಲ ಎಂದು ಅನಿಸಿ ತಕ್ಷಣವೇ ಕಾರು ತೆಗೆದುಕೊಂಡು ಹೊರಟೆ .

ಮಳೆಗಾಲ ಆಗಷ್ಟೇ ಮುಗಿದಿತ್ತು . ರಸ್ತೆಯಲ್ಲಿನ ಕೆಸರು ಹಾಗೂ ಕಾಲ ಮೇಲಿನ ಕೆಸರು ಹುಣ್ಣುಗಳು ಇನ್ನೂ ಆರಿರಲಿಲ್ಲ . ಕಳಪೆ ರಸ್ತೆ ಮಾಡಿದ ಗುತ್ತಿಗೆದಾರನಿಗೆ ಹಿಡಿ ಶಾಪ ಹಾಕುತ್ತಾ ‘ರೊಯ್ಯೋ’ ಎಂದು ಅಳುತ್ತಾ ಕಾರು ಮುಂದೆ ಸಾಗುತಿತ್ತು. ಭತ್ತದ ನಾಟಿ ಅದಾಗಲೇ ಮುಗಿದಿತ್ತು , ಗೊಬ್ಬರ ಹಾಕಲು ನಾರ್ವೆಯ ನಾಗನಿಗೆ ಹೇಳಿ ಕಳಿಸಿದ್ದೆ . ವಾರ ಕಳೆದರೂ ಅವನ ಸುಳಿವೇ ಇರಲಿಲ್ಲ . ನಾಗನ ಮನೆ ನಾನು ಹೋಗುವ ದಾರಿಯಲ್ಲೇ ಸಿಗುತ್ತದೆ . ಎಲ್ಲಾದರೂ ಅವನ ಮುಖ ನನಗೆ ಕಾಣಿಸುತ್ತದೆಯೇ ಎಂದು ಸುತ್ತಲೂ ಕಣ್ಣಾಡಿಸುತ್ತ ಕಾರು ಓಡಿಸುತ್ತಿದ್ದೆ .

ಬ್ರಿಟೀಷರು ಅಲಂಕಾರಕ್ಕಾಗಿ ತಂದು ನೆಟ್ಟ ಲಂಟಾನದ ಗಿಡಗಳು ಈಗ ನಮ್ಮ ಕಾಡಿನಲ್ಲಿ ಸರ್ವ ವ್ಯಾಪಿಯಾಗಿದೆ . ಇಡಿಯ ಕಾಡಿಗೆ ಕಾಡೇ ಲಂಟಾನದ ಪೊದೆಯೊಳಗೆ ಹುದುಗಿ ಹೋದಂತೆ ಗೋಚರಿಸುತ್ತದೆ . ಪೂರ್ತಿ ಕಾಡೇ ಲಂಟಾನ ಗಿಡಗಳಿಂದ ನಾಶವಾದ ಉದಾಹರಣೆಗಳಿವೆ . ನಾಗನ ಬಗ್ಗೆ ಶುರು ಮಾಡಿದ ಯೋಚನೆ ಜಾಗತೀಕರಣ ಪಡೆದುಕೊಳ್ಳುವ ಹೊತ್ತಿಗೆ ನಾನು ಮಂಜನ ‘ಮಾಡ್ರನ್ ಹೇರ್ ಸಲೂನ್ ‘ ಗೆ ತಲುಪಿದ್ದೆ .

ನಮ್ಮೂರಿನ ಎಲ್ಲಾ ಗಂಡಸರ ತಲೆಯ ಶಿಲ್ಪಗಳ ಶಿಲ್ಪಿ ಈ ಮಂಜ . ಕೆಲಸ ಕಲಿತ ಹೊಸದರಲ್ಲಿ ನಾವು ಹೇಳಿದ ಸ್ಟೈಲ್’ನಲ್ಲೆ ಕ್ಷೌರ ಮಾಡುತ್ತಿದ್ದ . ಕ್ರಮೇಣ ಅದೇ ತಲೆಯ ಬೋಡು ನೋಡಿ ಅವನಿಗೂ ಬೇಸರವಾಗಿರಬೇಕು , ನಾವು ಯಾವುದೇ ಸ್ಟೈಲ್ ಕೇಳಿದರೂ ಎಲ್ಲಾರಿಗೂ ಒಂದೇ ತರ ಬೋಳಿಸಿ ಕಳಿಸುತ್ತಿದ್ದ . ಅವನು ಕೆತ್ತಿದ ಸ್ಟೈಲ್’ಗೆ ನಾವು ಹೊಂದಿಕೊಳ್ಳಬೇಕಿತ್ತು . ಅದೇನೇ ಇರಲಿ ಮಂಜನ ಲೆಕ್ಕಾಚಾರದಲ್ಲಿ ಅವನು ಮಾಡುತ್ತಿರುವುದು ಸಮಾಜ ಸೇವೆ . ಅವನಿಲ್ಲದಿದ್ದರೆ ನಮ್ಮೂರಿನವರು ಜಡೆ ಬಿಟ್ಟು ಸನ್ಯಾಸಿಗಳಂತೆ ಕಾಣುತ್ತಿದ್ದೆವು ಎನ್ನುವುದು ಅವನ ಭಾವನೆ .

ಗಂಟೆ ಹತ್ತಾದರೂ ಸಲೂನ್ ಬಾಗಿಲು ಹಾಕಿಯೇ ಇತ್ತು . ನಾನು ಪಕ್ಕದ ಮೋರಿ ಕಟ್ಟೆಯ ಮೇಲೆ ಕುಳಿತು ಮೇಲೆ ಕೆಳಗೆ ನೋಡುತ್ತಿದ್ದೆ . ಗೋಪಾಲ ತನ್ನ ಹೆಂಡತಿಯನ್ನು ಬಸ್ಸಿಗೆ ಹತ್ತಿಸಲು ಹೊರಟಿದ್ದ .

” ಇದೇನೋ ಮೊನ್ನೆ ತಾನೇ ಮದ್ವೆ ಆಗಿ ಅದಾಗ್ಲೇ ಹೆಂಡತಿನ ತವರಿಗೆ ಕಳಿಸ್ತ ಇದೀಯ ” ಎಂದು ನಾನು ತಮಾಷೆ ಮಾಡಿದೆ .

” ಆಷಾಡ ಅಲ್ವ ಸೋಮಿ ” ಎಂದು ಅವನು ನಾಚಿಕೆ ಮಿಶ್ರಿತ ನಗುವನ್ನು ನನ್ನೆಡೆ ಬೀರಿದ , ಬಾಯನ್ನು ಕಿವಿಯ ತನಕ ತೆಗೆದು .

” ಈ ಆಷಾಡ ಎಲ್ಲಾ ಏನೂ ಇಲ್ಲ , ಒಂದ್ ಎರಡ್ ದಿನ ತವರಲ್ಲಿ ಇದ್ದು ಬೇಗ ಬಾ “ಎಂದಿದ್ದು ಬರೀ ಕಂಡಕ್ಟರ್ ಗೆ ಅಷ್ಟೇ ಕೇಳಿಸಿತಂತೆ .

ಮೋರಿಯ ನೀರಿನಲ್ಲಿ ಮೀನಿನ ಮರಿಗಳು ಈಜು ಕಲಿಯುತ್ತಿತ್ತು . ಮಂಜ ಪತ್ತೆಯೇ ಇರಲಿಲ್ಲ . ಅವ ಬರದಿದ್ದರೆ ನಾನು ಸಾಗರಕ್ಕೇ ಹೋಗಿ ಕ್ಷೌರ ಮಾಡಿಸಬೇಕಿತ್ತು . ಕ್ಷೌರದ ದಿನ ಮುಂದೂಡಿ ಮುಂದೂಡಿ ನನ್ನ ಕೂದಲು ಲಂಟಾನ ಪೊದೆಯಂತೆ ಆಗಿತ್ತು .

ಹನ್ನೊಂದು ಗಂಟೆಗೆ ಮಂಜನ ದರ್ಶನ ನನಗೆ ಸಿಕ್ಕಿತು .

” ಇವತ್ತು ಅಮಾವಾಸ್ಯೆ ಮಾರ್ರೆ , ನಿಮಗೆ ಮರ್ತ್ ಹೋತಾ ? , ನಾ ಇವತ್ತು ಕತ್ತರಿ ಮುಟ್ಟಾದಿಲ್ಲ ” . ಎಂದು ಅವನ ತಗಾದೆ ತೆಗೆದ .

“ಮಾರಾಯ ನನ್ನ ತಲೆ ಏನು ಚಂದ್ರ ಅಲ್ಲ , ನನಗೆ ಆ ಶಾಸ್ತ್ರ ಎಲ್ಲಾ ಬ್ಯಾಡ , ಸುಮ್ಮನೆ ಕತ್ತರ್ಸು ” . ಎಂದು ಗದರಿದೆ .

” ಎಲ್ಲಾರೂ ಆಗ್ತದ ಸೋಮಿ ನಮ್ ಸಂಘದವ್ರು ನನ್ನ ಸಾಯ್ಸೆ ಬಿಡ್ತಾರೆ ” ಎಂದು ಹೊಸ ರಾಗ ಶುರು ಮಾಡಿದ .

ಕೊನಿಗೂ ಇಪ್ಪತ್ತು ಹೆಚ್ಚಿಗೆ ಕೊಡ್ತೀನಿ ಎಂದ ಮೇಲೆ ನನ್ನ ಕೂದಲಿಗೆ ಮುಕ್ತಿ ಸಿಗಬಹುದೆಂಬ ಆಶಾವಾದ ನನಗೆ ಮೂಡಿತು .

” ಇದ್ಯಾಕೋ ಇಷ್ಟು ಕುಡಿತೀಯಾ , ಕಟಿಂಗ್ ಮಾಡೋವಾಗ್ಲಾದ್ರೂ ನೆಟ್ಟಗೆ ಬರೋಕೆ ಆಗಲ್ವ ನಿಂಗೆ ? “.

” ನಂಗೆ ಡಾಕ್ಟ್ರೆ ಹೇಳವ್ರೆ ಕುಡಿಯಕ್ಕೆ , ಒಂದ್ ಸ್ವಲ್ಪ ದಿನ ಚನಾಗಿ ಕುಡುದು ಆಮೇಲೆ ಬಿಟ್ ಬಿಡು ಅಂತ ” .

ನಾನು ಪ್ರತಿ ಸಲ ಕೇಳಿದಾಗಲು ಅವನ ಬಳಿ ಸಿಧ್ಧ ಉತ್ತರವಿರುತ್ತಿತ್ತು .

” ಅಲ್ಲ ಮಾರಾಯ ನೀನು ಕುಡ್ಕೊಂಡ್ ಬಂದು ಕಟಿಂಗ್ ಮಾಡೋಕೆ ಹೋಗಿ ಯಾರದ್ದಾರೂ ಕಿವಿ ಕತ್ತರಿಸಿ ಬಿಟ್ಟೀಯ ” ಎಂದೆ

” ಸೋಮಿ ಏನ್ ಹಿಂಗ್ ಅನ್ದ್ ಬಿಟ್ರಿ , ನಾ ಕೆಲ್ಸ ಕಲ್ತಿದ್ದು ಬಲೆಗಾರು ಹುಚ್ಚಪ್ಪನ ಹತ್ರ , ಬೇಕಾದ್ರೆ ಕಣ್ಣ್ ಕಟ್ಟ್ಕಂಡ್ ಕಟಿಂಗ್ ಮಾಡ್ತೀನಿ , ನೋಡ್ತೀರಾ ” ಎಂದು ನನಗೇ ಸವಾಲೆಸೆದ .

” ಅದೆಲ್ಲಾ ಬ್ಯಾಡ ಮಾರಾಯ ನಿನ್ನ ಪಾಡಿಗೆ ನೀನು ಕೆತ್ತು ” ಎಂದು ನಾನೇ ಸೋಲೋಪ್ಪಿಕೊಂಡೆ . ಅವನ ಕತ್ತರಿಗೆ ನನ್ನ ಕಿವಿ ಆಹುತಿಯಾಗುವುದು ನನಗೆ ಸುತಾರಾಂ ಇಷ್ಟವಿರಲಿಲ್ಲ .

” ಏಯ್ ಮಂಜ ಯಾದ್ಗಾರ್ ಹೋಟೆಲ್ ಅಲ್ಲಿ ಜಗಳ ಅಂತೆ ” , ಬಸ್ಸಿನ ಹತ್ತಿರ ಹೋಗಿದ್ದ ಗೋಪಾಲ ಬಿಬಿಸಿ ವರದಿ ನೀಡಿದ .

” ಹೌದಾ , ಈಗ್ಲೇ ಬಂದೇ ಇರು , ಸೋಮಿ ಒಂದ್ ಹತ್ತ್ ನಿಮಷ ಬಂದೆ ” ಎನ್ನುತ್ತಾ ನನ್ನ ಉತ್ತರಕ್ಕೂ ಕಾಯದೇ ಹೊರಟೇ ಹೋದ .

ಯಾದ್ಗಾರ್ ಎನ್ನುವ ಹೋಟೆಲ್ ಒಂದನ್ನು ಫಾತಿಮಾ ನಡೆಸುತ್ತಿದಳು . ಹೋಟೆಲ್ ಎಂದರೆ ಎರಡು ಟೇಬಲ್ ನಾಲ್ಕು ಕುರ್ಚಿ ಅಷ್ಟೇ . ಮಂಜನಂತಹ ಸೋಮಾರಿಗಳು ಅಲ್ಲಿ ಹೋಗಿ ಜೊಲ್ಲು ಸುರಿಸುವುದು ಸಾಮಾನ್ಯ .

ಅಲ್ಲಿ ಪದೇ ಪದೇ ಜಗಳವಾಗುತಿತ್ತು . ಫಾತಿಮಾ ಬುರ್ಕಾ ಹಾಕುತ್ತಿಲ್ಲ ಎಂದು ಮೌಲ್ವಿಗಳು ಜಗಳ ಮಾಡುತ್ತಿದರು .

” ಅಲ್ಲ ನಾನು ಬುರ್ಕಾ ಹಾಕಿ ನನ್ ಜಾತಿನೇ ಮುಂದೆ ಮಾಡುದ್ರೆ ನಂಗೆ ವ್ಯಾಪಾರ ಆಯ್ತದ ನೀವೇ ಹೇಳಿ ” ಎಂದು ಆಕೆ ಸರಿಯಾಗೇ ತಿರುಗಿ ಬೀಳುತ್ತಿದಳು . ಆಕೆಯೂ ಸಹ ಬಹಳ ಘಾಟಿ ಹೆಣ್ಣು . ಅವಳ ಹೋಟೆಲಿನ ಮೆಣಸಿನ ಕಾಯಿ ಬೋಂಡಕ್ಕೆ ಯಾವುದೇ ಶರಿಯತ್ ಕಾನೂನು ಇರಲಿಲ್ಲ .

ನಾನು ಅರ್ಧ ಕೆತ್ತಿದ ಕೂದಲು ಇಟ್ಟುಕೊಂಡು , ಮಂಜನಿಗೆ ಗಂಟೆಗಟ್ಟಲೆ ಕಾದು ವಾಪಾಸು ಮನೆ ಕಡೆ ತಿರುಗಿದೆ . ನನಗೆ ಅಂದು ಆತ ಮಾಡಿದ್ದು ತಿರುಪತಿ ಕ್ಷೌರ .

ಬಡ್ಡೀ ಮಗ ಸಿಗಲಿ ಇನ್ನೊಂದ್ ದಿನ ಎಂದು ಮನಸಿನಲ್ಲೇ ಬೈದುಕೊಳ್ಳುತ್ತಾ ಮನೆ ತಲುಪಿದೆ .

-Gurukiran

guru.sode@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post